Site icon Vistara News

ಸವಿಸ್ತಾರ ಅಂಕಣ | ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್‌ ಕುರಿತೇ ಆಗಿರಬೇಕು ಎನ್ನಿಸುವಂತಿದೆ!

rahul gandhi

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ ನೆರೆ ಮೂರುಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ.

ಅತ್ಯಂತ ನೇರ, ನಿಷ್ಠುರವಾದಿ ಶಿವಶರಣನೆಂದೇ ಪ್ರಸಿದ್ಧವಾದ, 12ನೇ ಶತಮಾನದ ವಚನಕಾರ ಅಲ್ಲಮ ಪ್ರಭುಗಳ ಈ ಪ್ರಸಿದ್ಧ ವಚನವನ್ನು ನಾವು ಕೇಳಿರುತ್ತೇವೆ. ಕಡೆಯ ಪಕ್ಷ “ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ” ಎನ್ನುವುದನ್ನಾದರೂ ಕೇಳಿರಬಹುದು. ಅನೇಕ ಸಂದರ್ಭದಲ್ಲಿ ರಾಜಕೀಯ ಪಡಸಾಲೆಗಳಲ್ಲೂ ಈ ಮಾತು ಕೇಳಿಬರುತ್ತಿರುತ್ತದೆ.

ಇದೇ ವರ್ಷದ ಜನವರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮೇಕೆದಾಟು ಪಾದಯಾತ್ರೆ ನಡೆಸುವ ಸಮಯದಲ್ಲಿ, ಅವರನ್ನು ಟೀಕಿಸಲು ಬಿಜೆಪಿ ಈ ಸಾಲನ್ನು ಬಳಸಿಕೊಂಡಿತ್ತು. ಸ್ವತಃ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಸಮಸ್ಯೆ ಬಗೆಹರಿಸದೆ ಈಗ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುತ್ತ, “ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ” ಎಂದು ಟ್ವೀಟ್‌ ಮಾಡಿತ್ತು. ಇರಲಿ. ಇಂದಿನ ವಿಷಯ ಮೇಕೆದಾಟು ಅಲ್ಲ. ಆದರೆ ಈ ಸಾಲುಗಳು ಅಂದು ಬಿಜೆಪಿ ಹೇಳಿದ ಡಿ.ಕೆ. ಶಿವಕುಮಾರ್‌ ಅವರಿಗೆ ಹೊಂದುತ್ತದೆಯೋ ಇಲ್ಲವೊ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗಂತೂ ಸರಿಯಾಗಿಯೇ ಅನ್ವಯವಾಗುತ್ತದೆ.

ಈ ಕಾಂಗ್ರೆಸ್‌ ಪಕ್ಷಕ್ಕೆ ಜನರು ಇನ್ನೆಷ್ಟು ಅವಕಾಶ ನೀಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ಡಿಸೆಂಬರ್ 8ರ ಗುರುವಾರ ಹೊರಬಿದ್ದ ಗುಜರಾತ್‌ ಫಲಿತಾಂಶಗಳನ್ನೇ ನೋಡೋಣ. 1985ಲ್ಲಿ ಜನತಾ ದಳ ಹಾಗೂ ಬಿಜೆಪಿಯ ಚಿಮನ್‌ಭಾಯ್‌ ಪಟೇಲ್‌ ಹಾಗೂ ಕೇಶುಭಾಯ್‌ ಪಟೇಲ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆ ಆಗುವ ಮೂಲಕ ಕಾಂಗ್ರೆಸ್‌ನ ಸುದೀರ್ಘ ಆಡಳಿತ ಮುಕ್ತಾಯ ಕಂಡಿತ್ತು. ಇದ್ದಕ್ಕಿದ್ದಂತೆ 116 ಸೀಟುಗಳನ್ನು ಕಳೆದುಕೊಂಡ ಕಾಂಗ್ರೆಸ್, 33ಕ್ಕಿಳಿದು ಪ್ರತಿಪಕ್ಷದಲ್ಲಿ ಭದ್ರವಾಗಿ ಕುಳಿತುಬಿಟ್ಟಿತು. ಆನಂತರದಲ್ಲಿ 45(1990), 53(1998), 51(2002), 59(2007), 61(2012), 77(2017) ಸೀಟುಗಳನ್ನು ಪಡೆದು ಹೇಗೋ ಪ್ರತಿಪಕ್ಷ ಎನ್ನುವ ಗೌರವವನ್ನಾದರೂ ಉಳಿಸಿಕೊಂಡಿತ್ತು. ಈ ಎಲ್ಲಾ ಅವಧಿಯಲ್ಲಿಯೂ ಕನಿಷ್ಠ ಶೇ.30ರಷ್ಟು ಮತವನ್ನು ಕಾಂಗ್ರೆಸ್ ಪಡೆದಿತ್ತು.

ಆದರೆ, ಈ ಬಾರಿಯಂತೂ 17ಕ್ಕೆ ಕುಸಿದು ಅಧಿಕೃತ ಪ್ರತಿಪಕ್ಷವಾಗುವ ಅವಕಾಶಕ್ಕಾಗಿ ಹೆಣಗಾಡುವಂತಾಗಿದೆ.

ರಾಜಕೀಯದಲ್ಲಿ ಅಧಿಕಾರ ನಡೆಸುವವರಿಗೆ ಎದುರಾಗುವ ಮೊದಲ ಸಮಸ್ಯೆ ಎಂದರೆ ಆಡಳಿತ ವಿರೋಧಿ ಅಲೆ. ಅದರಲ್ಲೂ, ಆರ್ಥಿಕ ಬೆಳವಣಿಗೆ ಕಾಣುತ್ತಿರುವ ಭಾರತದಂತಹ ದೇಶದಲ್ಲಿ ಯಾವುದೇ ಸರ್ಕಾರ ಎಷ್ಟೇ ಸಾಧನೆ, ಸುಧಾರಣೆ ಮಾಡಿದರೂ, ಮಾಡಬೇಕಾದ್ದು ಇನ್ನೂ ಬೆಟ್ಟದಷ್ಟಿರುತ್ತದೆ. ಜನರ ಆಶೋತ್ತರಗಳೂ ಹೆಚ್ಚಳವಾಗಿ, ಸರ್ಕಾರ ಇನ್ನೂ ಕೆಲಸ ಮಾಡಬೇಕಿತ್ತು ಎಂಬ ಭಾವನೆ ಇದ್ದೇ ಇರುತ್ತದೆ. ಆದರೆ ಎದುರಾಳಿ ಪ್ರತಿಪಕ್ಷದಲ್ಲಿ ಈ ಆಡಳಿತ ವಿರೋಧಿ ಅಲೆಯನ್ನು ಹಿಡಿದಿಟ್ಟುಕೊಳ್ಳುವ ನಾಯಕತ್ವ, ತಂತ್ರಗಾರಿಕೆ ಬೇಕು. ಇದೇನು ಹೊಸ ರಾಜಕೀಯ ಸಿದ್ಧಾಂತ ಅಲ್ಲ. ಅತ್ಯಂತ ಪ್ರಾಥಮಿಕ ಪಾಠ.

ಗುಜರಾತ್‌ನಲ್ಲಿರುವ ಆಡಳಿತ ವಿರೋಧಿ ಮತಗಳು ಅಥವಾ ಬಿಜೆಪಿ ವಿರೋಧಿ ಮತದಾರರು ಸತತವಾಗಿ ಆರು ಚುನಾವಣೆಗಳವರೆಗೂ ಕಾಂಗ್ರೆಸ್‌ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸುತ್ತದೆ ಎಂದು ಕಾದು ಕುಳಿತರು. ಆದರೆ ಕಾಂಗ್ರೆಸ್‌ ಆ ಮಟ್ಟವನ್ನು ಮುಟ್ಟಲೇ ಇಲ್ಲ. ಈ ಬಾರಿ ಆಮ್‌ ಆದ್ಮಿ ರೂಪದಲ್ಲಿ ಒಂದು ಪರ್ಯಾಯವನ್ನು ಕಂಡುಕೊಳ್ಳುವ, ಸಣ್ಣಗೆ ದಿಕ್ಕು ಬದಲಿಸುವ ಯೋಚನೆ ಮಾಡಿದರು. ಅಲ್ಲಿಗೆ ಕಾಂಗ್ರೆಸ್‌ನ ಹಡಗು ಸಂಪೂರ್ಣ ಮುಳುಗಿ ಹೋಯಿತು.

ಗುರುವಾರ ದಿನಪೂರ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರವರೆಗೆ ಹೇಳಿದ್ದು ಒಂದೇ ಮಾತು. “Aam admi party eating Congress Votes, ಆಮ್‌ ಆದ್ಮಿ ಪಕ್ಷವು ಕಾಂಗ್ರೆಸ್‌ ಮತಗಳನ್ನು ವಿಭಜನೆ ಮಾಡಿದ್ದರಿಂದ ಸೋತೆವು, ಆಮ್‌ ಆದ್ಮಿ ಪಕ್ಷವು ಬಿಜೆಪಿಯ ಬಿ ಟೀಂ…”. ಎಲ್ಲಾದರೂ ಒಂದು ಕಡೆಯಾದರೂ ಆತ್ಮಾವಲೋಕನ ಮಾಡಿಕೊಳ್ಳುವ ಮಾತೇ ಇಲ್ಲ. ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಮೂಲ ಕಾರಣ ಇದೇ.

ಕಾಂಗ್ರೆಸ್‌ ಯಾವುದಾದರೂ ರಾಜ್ಯದಲ್ಲಿ ಗೆಲುವು ಸಾಧಿಸಿತು ಎಂದುಕೊಳ್ಳಿ. ಅದರ ನೇರ ಕ್ರೆಡಿಟ್‌ ಅನ್ನು ನೆಹರೂ ಕುಟುಂಬಕ್ಕೆ ನೀಡಲಾಗುತ್ತದೆ. ಆದರೆ ಸೋತರೆ ಅದರ ಹೊಣೆಯನ್ನು ಸ್ಥಳೀಯ ನಾಯಕತ್ವಕ್ಕೆ ಹೊರಿಸಲಾಗುತ್ತದೆ. ಅಥವಾ “ಮೋದಿಯಂತಹ ಕೋಮುವಾದಿ, ವಿಭಜನಕಾರಿ” ಶಕ್ತಿಗಳು ಮತದಾರರನ್ನು ವಂಚಿಸಿದವು ಎನ್ನಲಾಗುತ್ತದೆ. ಈಗ್ಗೆ ಕೆಲ ವರ್ಷಗಳ ಹಿಂದೆಯಂತೂ ನಿರ್ಜೀವ ಇವಿಎಂ ಯಂತ್ರಗಳ ಮೇಲೆಯೂ ಕಾಂಗ್ರೆಸ್‌ ನಾಯಕರು ಮುಗಿಬಿದ್ದಿದ್ದರು. ಸದ್ಯ, ನಡುವೆ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಸಹ ಗೆದ್ದಿದ್ದರಿಂದ ಈಗ ಈ ದೂರು ಕಡಿಮೆಯಾಗಿದೆ. ಇನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿರುವಂತೆ ಬಿಜೆಪಿ ಗೆದ್ದಿರುವುದು “ಮೋದಿ, ಮಸಲ್‌ ಹಾಗೂ ಮನಿ” ಎಂಬ ಮೂರು Mಗಳಿಂದ ಎಂಬ ಮನಮೋಹಕ ಪದಪುಂಜಗಳನ್ನು ಬಳಸುವುದು. ಇನ್ನೂ ಕೆಲವೊಮ್ಮೆ, ಸೀಟುಗಳನ್ನು ಕಳೆದುಕೊಂಡರೂ ಒಟ್ಟಾರೆ ಶೇಕಡಾವಾರು ಮತ ಗಳಿಕೆಯಲ್ಲಿ ಹೆಚ್ಚಳವಾಗಿದೆ ಎಂಬ “ನೈತಿಕ ಜಯ”ದ ಕೃತಕ ಖುಷಿ ಅನುಭವಿಸುವುದು-ಕಾಂಗ್ರೆಸ್ ಜಾಯಮಾನವೇ ಆಗಿಹೋಗಿದೆ.

ತಾವು ಮಾಡಬೇಕಾದ ಕೆಲಸವನ್ನು ಒಲವು ನಲಿವುಗಳಿಂದ ಸರಿಯಾಗಿ ಮಾಡದೆ, ಹತ್ತಾರು ಬಗೆಯ ನೆಪಗಳನ್ನೊಡ್ಡಿ, ಕಾಲ ಕಳೆಯುವಂತಹ ವ್ಯಕ್ತಿಗಳ ನಡೆನುಡಿಗಳನ್ನು ಈ ವಚನದಲ್ಲಿ ಅಲ್ಲಮನು ಟೀಕಿಸಿದ್ದಾನೆ.

ದೂರದ ಪಯಣಕ್ಕಾಗಿ ಇಲ್ಲವೇ ಕಾಳಗದ ಕಣಕ್ಕೆ ತೆರಳುವುದಕ್ಕಾಗಿ ಕೊಟ್ಟಿರುವ ಕುದುರೆಯನ್ನು ಹತ್ತಿ, ಅದನ್ನು ಹತೋಟಿಯಲ್ಲಿಟ್ಟುಕೊಂಡು ಸವಾರಿ ಮಾಡುತ್ತ ಮುನ್ನಡೆಸುವ ಕುಶಲತೆ ಹಾಗೂ ತಲುಪಬೇಕಾದ ಎಡೆಯತ್ತ ಹೋಗುವ ಹಂಬಲವಿಲ್ಲದ ವ್ಯಕ್ತಿಗಳು, ತಮ್ಮ ಕಣ್ಣಮುಂದಿರುವ ಕುದುರೆಯನ್ನು “ಸವಾರಿಗೆ ಲಾಯಕ್ಕಾಗಿಲ್ಲ” ಎಂದು ಆರೋಪಿಸಿ, ಕುದುರೆಯ ಮೊಗಕ್ಕೆ ಹಾಕುವ ಕಡಿವಾಣ ಮತ್ತು ಅದರ ಬೆನ್ನಿನ ಮೇಲೆ ಹಾಕಬೇಕಾದ ಜೀನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ಕುದುರೆಗಾಗಿ ಹುಡುಕಾಡುತ್ತ ಅಲೆಯುತ್ತಿರುವ ಸಂಗತಿಯೊಂದನ್ನು ಒಂದು ರೂಪಕವನ್ನಾಗಿ ಅಲ್ಲಮನು ಚಿತ್ರಿಸಿದ್ದಾನೆ. ಈ ಶಬ್ದಚಿತ್ರವು “ವ್ಯಕ್ತಿಗಳು ತಮ್ಮ ಮೇಲಿನ ಹೊಣೆಗಾರಿಕೆಯಿಂದ ಜಾರಿಕೊಂಡು ತಿಳಿಗೇಡಿತನದಿಂದ ನಡೆದುಕೊಳ್ಳುವುದನ್ನು” ಸೂಚಿಸುತ್ತದೆ.

ಕಾಂಗ್ರೆಸ್ ಮುಖ್ಯವಾಗಿ ಸೋಲುತ್ತಿರುವುದು ಆತ್ಮಾವಲೋಕನ ಇಲ್ಲದಿರುವಿಕೆಯಿಂದಾಗಿ. ತಾನು ಅನುಸರಿಸಿದ ತುಷ್ಟೀಕರಣ ನೀತಿಯಿಂದಾಗಿ ಈ ಸ್ಥಿತಿ ತಲುಪಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ. ತಾನು ನಡೆಸಿದ ಕುಟುಂಬ ರಾಜಕಾರಣದಿಂದ ಈ ಸ್ಥಿತಿ ಎಂಬ ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ. ತನ್ನ ಪಕ್ಷದವರು ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಳ್ಳುವಷ್ಟು ಭ್ರಷ್ಟಾಚಾರ ನಡೆಸಿದರೂ ಜಾತಿಯ ಕಾರಣಕ್ಕೆ, ಇನ್ನಾವುದೋ ಕಾರಣಕ್ಕೆ ಜಾಣಕುರುಡು ಪ್ರದರ್ಶಿಸಿದ್ದು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳದೇ ಇರುವುದರಿಂದ ಕಾಂಗ್ರೆಸ್ ಸೋಲುತ್ತಿದೆ. ಕಳೆದ ಚುನಾವಣೆಯಲ್ಲಿ 77 ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಗುಜರಾತ್ ಜನತೆಗೆ ಕೃತಜ್ಞತೆ ಸಲ್ಲಿಸಬೇಕಾದರೂ ಕಾಂಗ್ರೆಸ್ ಈ ಬಾರಿ ಗಂಭೀರವಾಗಿ ಚುನಾವಣೆ ಎದುರಿಸಬೇಕಾಗಿತ್ತು.

ಆದರೆ ಚುನಾವಣೆ ತಯಾರಿ ಸಂಪೂರ್ಣ ಮುಗಿದ ನಂತರ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದಾರೆ. ಇತ್ತ ಪಕ್ಷದ ಅನಭಿಷಕ್ತ ರಾಜಕುಮಾರ ರಾಹುಲ್ ಗಾಂಧಿಯವರು ಒಂದೆರಡು ಬಾರಿ ಗುಜರಾತ್‌ಗೆ ಆಗಮಿಸಿದಂತೆ ಮಾಡಿ ಭಾಷಣದ ಶಾಸ್ತ್ರ ಮುಗಿಸಿ ಮತ್ತೆ ಭಾರತ್ ಜೋಡೋ ಯಾತ್ರೆ ಮುಂದುವರಿಸಿದರು. ಇಷ್ಟು ದೊಡ್ಡ ಚುನಾವಣೆ ನಡೆಯುತ್ತಿರುವಾಗ ತಮ್ಮ ಪಾಡಿಗೆ ತಾವು ರನ್ನಿಂಗ್‌ ರೇಸ್‌ ಮಾಡುತ್ತ ಭಾರತ್‌ ಜೋಡೊ ಎಂಬ ವಾಕಿಂಗ್‌ ಮಾಡುತ್ತಿರುವ ರಾಹುಲ್‌ ಗಾಂಧಿ, ಈ ಸೋಲಿಗೆ ಜವಾಬ್ದಾರರಲ್ಲವೇ?

ಯಾರು ಒಪ್ಪಲಿ, ಬಿಡಲಿ, ಕಾಂಗ್ರೆಸ್‌ನಲ್ಲಿ ಮೊದಲ ಕುಟುಂಬಕ್ಕೆ ಈಗಲೂ ಗೌರವವಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಲ್ಲೂ ನೆಹರೂ ಕುಟುಂಬದ ಕುರಿತು ಅಭಿಮಾನವಿದೆ. ಇದಕ್ಕೆ ಹಿಮಾಚಲ ಪ್ರದೇಶವೇ ಸಾಕ್ಷಿ. ಅಲ್ಲಿ ಪ್ರಿಯಾಂಕಾ ಗಾಂಧಿ ಎಡೆಬಿಡದೇ ಪ್ರವಾಸ, ಕಾರ್ಯತಂತ್ರ ಮಾಡಿದ್ದರಿಂದ ಕಾಂಗ್ರೆಸ್ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಅಲೆ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇದೆ. ಜನರೇ ಮತ ನೀಡಲು ಸಿದ್ಧರಿದ್ದರೂ ಅದನ್ನು ಸ್ವೀಕರಿಸಲು ಅದರ ನಾಯಕರೇ ತಯಾರಿಲ್ಲ. ಹಾಗಾಗಿ ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್ ಪಕ್ಷಕ್ಕೆ ಸೂಕ್ತವಾಗಿ ಅನ್ವಯಿಸುತ್ತದೆ.

ತಮ್ಮ ಪಕ್ಷವನ್ನು ಶತಾಯ ಗತಾಯ ಗೆಲ್ಲಿಸಿಕೊಂಡೇ ಬರಬೇಕು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಗಲು ರಾತ್ರಿ ಬೆವರು ಹರಿಸಿದ್ದಾರೆ. ಅದಕ್ಕೆ ಪ್ರತಿಸ್ಪರ್ಧಿಯಾಗುವ ಬದಲು ರಾಹುಲ್ ಗಾಂಧಿಯವರು ಭಾರತ್ ಜೋಡೊದಲ್ಲಿ ಹೋಗುತ್ತಿರುವುದು ಯಾವ ಕೋನದಿಂದಲೂ ಜಾಣತನ ಅನಿಸಿಕೊಳ್ಳುವುದಿಲ್ಲ. ಹಿಮಾಚಲದ ಗೆಲುವು ಆ ಪಕ್ಷಕ್ಕೆ ದೊರಕಿದ ಟಾನಿಕ್. ಅದು ಬಹುಬೇಗ ಸದೃಢವಾಗಲಿ.

ಇದನ್ನೂ ಓದಿ | ಸವಿಸ್ತಾರ ಅಂಕಣ | ನೈತಿಕತೆ ಮೆರೆಯಲು ಅಂದು 6 ಶಾಸಕರನ್ನು ಉಚ್ಚಾಟಿಸಿದ ಪಕ್ಷಕ್ಕೆ ಇಂದು ರೌಡಿಗಳ ಅವಶ್ಯಕತೆ ಏಕೆ ಬಂತು?

ಮಧ್ಯಮ ಮಾರ್ಗಕ್ಕೆ ಬಲ

ಆಮ್ ಆದ್ಮಿ ಪಕ್ಷ ಗುಜರಾತಿನಲ್ಲಿ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಆದರೆ ಆ ರಾಜ್ಯದಲ್ಲಿ ಗಣನೀಯ ಸ್ಪಂದನೆಯನ್ನಂತೂ ಪಡೆದಿದೆ. ಇದೀಗ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುವ ಸಾಧ್ಯತೆಯೂ ಇದೆ. ಇದೇ ರೀತಿ ಸಾಗಿದರೆ ಬಿಜೆಪಿಗೆ ಎದುರಾಳಿಯಾಗಿ, ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯ ಪಕ್ಷವಾಗುವ ಮುನ್ಸೂಚನೆಯೂ ಇದೆ. ಆಮ್ ಆದ್ಮಿ ಪಕ್ಷವು ಆಂತರ್ಯದಲ್ಲಿ ಏನೇ ಇರಬಹುದು, ಬಹಿರಂಗದಲ್ಲಿ ತನ್ನನ್ನು ಅತ್ತ ತುಷ್ಟೀಕರಣ ಮಾಡುವ ಪಕ್ಷವೂ ಅಲ್ಲದೆ, ಇತ್ತ ಬಲ ಪಂಥೀಯವೂ ಅಲ್ಲದ ಮಧ್ಯಮ ಪಂಥದವರ ಪಕ್ಷ ಎಂದು ಬ್ರ್ಯಾಂಡ್ ಮಾಡಿಕೊಂಡಿದೆ. ಆರ್ಥಿಕವಾಗಿ ಸರಿ ಎಂದು ಒಪ್ಪಲಾಗದಿದ್ದರೂ ಉಚಿತ ವಿದ್ಯುತ್, ಉಚಿತ ನೀರು ಸೇರಿ ಅನೇಕ ಉಚಿತ ಕೊಡುಗೆಗಳ ಮೂಲಕ ಕೆಳ ಮಧ್ಯಮ, ಬಡ ವರ್ಗವನ್ನು ಸೆಳೆಯುವಲ್ಲಿ ಸಫಲವಾಗುತ್ತಿದೆ. ಹಾಗಾಗಿ, ರಾಜಕಾರಣ ಎನ್ನುವುದು ಜನ ಕೇಂದ್ರಿತವಾಗುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ.

ಹಾಗೆ ನೋಡಿದರೆ ಈ ಹಿಂದೆ ಕಾಂಗ್ರೆಸ್ ನಡೆಸಿದ “ರೋಟಿ-ಕಪಡಾ-ಮಕಾನ್” ಮಾದರಿಯ ಘೋಷಣೆಯೇ ಇದು. ಆದರೆ ಕಾಂಗ್ರೆಸ್ ಇಂದು ಯಾವ ಘೋಷಣೆಯೂ ಇಲ್ಲದೆ, ಯಾರನ್ನು ಹೊಗಳಬೇಕು, ಯಾರನ್ನು ತೆಗಳಬೇಕು ಎನ್ನುವುದನ್ನೂ ಅರಿಯದೆ ಬೌದ್ಧಿಕವಾಗಿ ಬಡವಾಗಿದೆ. ಜನರು ರಾಜಕಾರಣಿಗಳಿಂದ ಯಾವುದೇ ವಿಪರೀತಗಳನ್ನು ಬಯಸದೆ ವಾಸ್ತವವಾದದ್ದನ್ನು, ತಮ್ಮ ಜೀವನವನ್ನು ಸುಗಮವಾಗಿಸುವುದನ್ನು ಅಪೇಕ್ಷಿಸುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳು ಬಹಳ ಸರಳವಾಗಿರುತ್ತವೆ. ಇದೇ ನಮ್ಮ ಪಕ್ಷದ ತತ್ತ್ವ ಸಿದ್ಧಾಂತ ಎಂದು, ಆಪ್ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟರೆ ತಪ್ಪಲ್ಲ. ಗಾಂಧಿ ಶ್ರೀಸಾಮಾನ್ಯರು ಬಳಸುವ ಚರಕ, ಉಪ್ಪಿನ ಮೂಲಕವೇ ಒಂದು ರಾಷ್ಟ್ರೀಯ ಚಳವಳಿ ಕಟ್ಟಿದರು. ಆಪ್‌ಗೆ ಈ ಸ್ಪಷ್ಟತೆ ಬೇಕು. ಜನ ಕೇಂದ್ರಿತ ವೈಚಾರಿಕ ಒಲವು ನಿಲುವುಗಳನ್ನು ರೂಪಿಸಿಕೊಳ್ಳಬೇಕು.

ಇಲ್ಲದಿದ್ದರೆ, ತಾನೊಂದು ಜನ ಚಳವಳಿ ಎಂಬ ಭ್ರಮೆಯಲ್ಲಿ ಮುಳುಗಿ, ಗುಜರಾತ್ ಕಾಂಗ್ರೆಸ್ ಸ್ಥಿತಿಗೆ ಬರುವಂತಾಗಬಾರದು.

ಇದನ್ನೂ ಓದಿ | ಸವಿಸ್ತಾರ ಅಂಕಣ | ಮುಸ್ಲಿಂ ಪ್ರತ್ಯೇಕತೆ ಹೋಗಲಾಡಿಸಲು ಇದು ಪರಿಹಾರ ಆಗಬಲ್ಲದೇ?

ಬಿಜೆಪಿಗೂ ಎಚ್ಚರಿಕೆ ಗಂಟೆ

ಒಂದೆಡೆ ಗೆದ್ದು ಬೀಗುತ್ತಿರುವ ಬಿಜೆಪಿ ಇನ್ನೊಂದೆಡೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ. ಮುಖ್ಯವಾಗಿ ಸ್ಥಳೀಯ ನಾಯಕತ್ವವನ್ನು ಬೆಳೆಸದ ಕಾರಣಕ್ಕೆ ಅಲ್ಲಿ ಸೋಲಾಗಿದೆ. ನರೇಂದ್ರ ಮೋದಿ ನೇತೃತ್ವ ಪ್ರಶ್ನಾತೀತ. ಆದರೆ ಸ್ಥಳೀಯ ನಾಯಕತ್ವ ಬಹಳ ಮುಖ್ಯ. ಉದಾಹರಣೆಗೆ, ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನೇ ಆಗಿದ್ದರೂ ಕರ್ನಾಟಕದಲ್ಲಿ ಭದ್ರವಾಗಿರುವುದಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಂತಹ ಅನೇಕ ಸ್ಥಳೀಯ ನಾಯಕತ್ವ ಕಾರಣ. ಬಿಜೆಪಿಯಲ್ಲಿಯೂ ಸ್ಥಳೀಯ ಮಾಸ್ ಲೀಡರ್ ಆಗಿ ಯಡಿಯೂರಪ್ಪ ಇದ್ದದ್ದರಿಂದಲೇ ಪಕ್ಷ ಸಂಘಟನೆಯು ಮತವಾಗಿ ಪರಿವರ್ತನೆ ಆಗುತ್ತಿದ್ದವು. ಪಂಜಾಬ್‌ನಲ್ಲಿ ಈ ಹಿಂದೆ ಸ್ಥಳೀಯ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಒಬ್ಬರೇ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದರು. ಈಗಿನ ಬಿಜೆಪಿಯಲ್ಲಿ ಸ್ಥಳೀಯ ನಾಯಕತ್ವ ರೂಪುಗೊಳ್ಳುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳದಿದ್ದರೆ ಕಾಂಗ್ರೆಸ್ ಇಂದು ಎದುರಿಸುತ್ತಿರುವ ಸಮಸ್ಯೆಯನ್ನು ಕಾಂಗ್ರೆಸ್‌ಗಿಂತಲೂ ಬೇಗ ಬಿಜೆಪಿ ಎದುರಿಸುತ್ತದೆ.

ಪಂಚಾಯಿತಿ ಚುನಾವಣೆಯಿಂದ ಪಾರ್ಲಿಮೆಂಟ್ ಚುನಾವಣೆವರೆಗೂ ಮೋದಿ ಫೋಟೋ ತೋರಿಸಿ ಚುನಾವಣೆ ಗೆಲ್ಲುವುದು ಒಳ್ಳೆಯದಲ್ಲ. ತನ್ನ ಕಾರ್ಯಕ್ರಮಗಳಲ್ಲಿ ಸಂಸ್ಥಾಪಕರಾದ ಡಾಕ್ಟರ್ ಹೆಡ್ಗೆವಾರ್, ಗುರೂಜಿಯಂಥ ಮಹನೀಯರ ಫೋಟೋವನ್ನೂ ತೋರಿಸದೇ, ಭಾರತ ಮಾತೆಯ ಪಟದೊಂದಿಗೆ ಮುನ್ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ವ್ಯಕ್ತಿ ಆರಾಧನೆಯನ್ನು ಮರೆತಂತಿದೆ.

ಬಿಜೆಪಿಯ ವರಿಷ್ಠ

ಮೋದಿ ಅವರೇ ಇದನ್ನು ಅರ್ಥ ಮಾಡಿಕೊಂಡಿರುವಂತಿದೆ. ಗುಜರಾತಿನಲ್ಲಿ ಪಕ್ಷ ಗೆದ್ದ ಬಳಿಕ ಅವರು ಮಾಡಿರುವ ಭಾಷಣದಲ್ಲಿ, ನರೇಂದ್ರಗಿಂತ ಭೂಪೇಂದ್ರ ದಾಖಲೆ ದೊಡ್ಡದು ಎಂದಿದ್ದಾರೆ! ಇದು ನಿಜದ ಮಾತೇ ಆಗಿದ್ದರೆ, ಇಂಥಾ ಅರಿವು ಎಲ್ಲ ಪಕ್ಷಗಳಿಗೂ ಮುಖ್ಯವಾಗಲಿ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಆರ್‌ಎಸ್‌ಎಸ್ ಚಿಂತನೆಗಳೊಂದಿಗೆ ಬಿಜೆಪಿ ನಾಯಕರ ಆಲೋಚನೆಗಳೇಕೆ ತಾಳೆ ಆಗುತ್ತಿಲ್ಲ?

Exit mobile version