Site icon Vistara News

ಸವಿಸ್ತಾರ ಅಂಕಣ | ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್

Veer Savarkar Chapter In Uttar Pradesh Textbooks

Uttar Pradesh Board Revamps Classes 9-12 Syllabus; Adds Veer Savarkar, Shivaji

“ಬ್ರಿಟಿಷರು, ಈಸ್ಟ್ ಇಂಡಿಯಾ ಕಂಪನಿ ಸೋಗಿನಲ್ಲಿ ಭಾರತಕ್ಕೆ ವ್ಯಾಪಾರಕ್ಕೆಂದು ಬಂದ್ರು. ಬಳಿಕ ಒಂದಿಷ್ಟು ಕಾಲ ಇಲ್ಲಿ ಆಡಳಿತ ನಡೆಸಿದರು ಕಣ್ರೀ. ಅವರಿಂದ ಸ್ವಲ್ಪ ಅನುಕೂಲನೂ ಆಯ್ತು!”

ಇತಿಹಾಸವನ್ನು ಹೀಗೆ ಸರಳೀಕರಿಸಿ ಉಡಾಫೆಯಿಂದ ಹೇಳುವವರೂ ನಮ್ಮ ನಡುವೆ ಇದ್ದಾರೆ. ಆದರೆ ಇತಿಹಾಸ ಅಷ್ಟು ಸರಳವೂ, ಸುಲಭವೂ ಅಗಿಲ್ಲ. ಬ್ರಿಟಿಷರಿಗಿಂತ ಮುಂಚೆಯೂ, ಭಾರತದ ಮೇಲೆ ಅನೇಕ ದಾಳಿಗಳು ನಡೆದಿವೆ. ಆದರೆ ಅವರ್ಯಾರಿಗೂ ಇಲ್ಲಿ ಶಾಶ್ವತವಾಗಿ ನೆಲೆಯೂರಲು ಈ ನೆಲ ಅವಕಾಶ ನೀಡಿಲ್ಲ. ಇಲ್ಲಿನ ರಾಜ ಮಹಾರಾಜರು, ಪಾಳೇಗಾರರು, ಸಾಮಂತರು, ದಳವಾಯಿಗಳು.. ಅಷ್ಟೇ ಏಕೆ ದೇಶದ ಶ್ರೀ ಸಾಮಾನ್ಯರು ಕೂಡ ದಾಳಿಕೋರರ ವಿರುದ್ಧ ಸೆಟೆದು ನಿಂತಿದ್ದಾರೆ. ಬಂದವರನ್ನು ಓಡಿಸಿದ್ದಾರೆ.

ಡಚ್ಚರು, ಫ್ರೆಂಚರಿಂದ ಮೊಘಲರವರೆಗೆ ಯಾರೂ ತಮ್ಮ ಸಾಮ್ರಾಜ್ಯದಲ್ಲಿ ನೆಮ್ಮದಿಯಿಂದ ಇದ್ದರು ಎಂಬ ಸ್ಥಿತಿಯೇ ಇತಿಹಾಸದಲ್ಲಿ ಇಲ್ಲ. ರಾಮಾಯಣ, ಮಹಾಭಾರತದ ಮೂಲಕ ಭಾವನಾತ್ಮಕವಾಗಿ ಮೊದಲಿನಿಂದಲೂ ಭರತ ದೇಶವಾಗಿಯೇ ಈ ನೆಲ ರೂಪುಗೊಂಡಿದೆ ಮತ್ತು ಎಲ್ಲ ಕಾಲದಲ್ಲೂ ದೇಶದ ಯಾವುದಾದರೊಂದು ಭಾಗ ದಬ್ಬಾಳಿಕೆಗೆ ಗುರಿಯಾಗಿದೆ. ಮಾತ್ರವಲ್ಲ, ಅದರ ವಿರುದ್ಧ ಪ್ರತಿರೋಧವನ್ನೂ ದಾಖಲಿಸಿದೆ !

ಹಾಗಾಗಿಯೇ ಇರಬೇಕು, ಭಾರತೀಯರ ಮನಸ್ಸಿನಲ್ಲಿ ಸುಮಾರು ಏಳು ಶತಮಾನ ಕಳೆದರೂ ಗುಲಾಮಿ ಮಾನಸಿಕತೆ ನೆಲೆಯೂರಲೇ ಇಲ್ಲ. ಜತೆಗೆ ಹೇಗಾದರೂ ಮಾಡಿ ಈ ಆಕ್ರಮಣಕಾರರನ್ನು ಹೊರದಬ್ಬಲೇಬೇಕು ಎಂಬ ಉತ್ಕಟ ಬಯಕೆ ತಲೆಮಾರುಗಳಿಂದ ತಲೆಮಾರುಗಳಿಗೆ ಹಸಿರಾಗಿ ಹರಿದು ಬಂದಿದೆ.

ಇದನ್ನು ಸೂಕ್ಷ್ಮವಾಗಿ ಮೊದಲು ಗ್ರಹಿಸಿದವರು ಬ್ರಿಟಿಷರೇ ಇರಬೇಕು. ನಾವೆಲ್ಲರೂ ಒಂದೇ ದೇಶದವರೆಂಬ ಭಾರತೀಯರ ಮನೋಬಲವನ್ನು ಹೊಡೆದುಹಾಕಲು ಅವರು ನಿರ್ಧರಿಸಿದರು. ತೋಳ್ಬಲ, ಸೈನ್ಯ ಬಲದ ಜತೆಗೆ ಭಾರತೀಯರೆಂಬ ಮನೋಬಲವನ್ನು ಸೋಲಿಸಲು ಹೊಸ ಅಸ್ತ್ರಕ್ಕಾಗಿ ಹುಡುಕಾಟ ನಡೆಸಿದರು. ಈ ನಿಟ್ಟಿನಲ್ಲಿ ಅವರು‌ ಮಾಡಿದ ಮೊದಲ ಕೆಲಸ- ಇಲ್ಲಿನ ನಾಗರಿಕತೆಯ ವಿವಿಧ ಆಯಾಮಗಳ ಆಳ ಅಗಲದ ಅಧ್ಯಯನ.

ಅಂದಹಾಗೆ, ಭಾರತದ ಅಂದಿನ ಜನಮಾನಸ ಹೇಗಿತ್ತು ಎನ್ನುವುದನ್ನು ನಾವೂ ಅಧ್ಯಯನ ಮಾಡಬಹುದು. ಖ್ಯಾತ ಗಾಂಧಿವಾದಿ ಧರ್ಮಪಾಲ್ ಅವರ ʼದಿ ಬ್ಯೂಟಿಫುಲ್ ಟ್ರೀʼ ಎಂಬ ಕೃತಿ ಒಂದರ್ಥದಲ್ಲಿ ಭಾರತೀಯರ ಜನಮಾನಸದ ಆತ್ಮಚರಿತ್ರೆ. ಭಾರತದ ಕುರಿತು ಬ್ರಿಟಿಷ್ ಮಾನಸಿಕತೆಯ ಇತಿಹಾಸಕಾರರು ಸೃಷ್ಟಿಸಿರುವ ಸುಳ್ಳುಗಳನ್ನೇ ಸುಳ್ಳಾಗಿಸಲು ಧರ್ಮಪಾಲ್ ಅವರು ತಮ್ಮ ಜೀವಮಾನದ ಅತ್ಯಮೂಲ್ಯ ಸಮಯವನ್ನು ವ್ಯಯಿಸಿದ್ದಾರೆ. ಬ್ರಿಟಿಷ್ ದಾಖಲೆಗಳ ಮೂಲಕವೇ ನಿರೂಪಿಸಿರುವ ಬ್ಯೂಟಿಫುಲ್ ಟ್ರೀ ಪುಸ್ತಕದ ಕನ್ನಡ ಅವತರಣಿಕೆ “ಚೆಲುವ ತರು” ಕೂಡ ಈಗ ಲಭ್ಯವಿದೆ.

ಭಾರತದ ನಾಗರಿಕತೆಯಲ್ಲಿ ಶ್ರೇಷ್ಠ ಎನ್ನಬಹುದಾದ ಅನೇಕ ವಿಚಾರಗಳಿವೆ. ಇದರಲ್ಲಿ ಶಿಕ್ಷಣವೂ ಒಂದು. ಆದರೆ, ಸಾಮಾನ್ಯವಾಗಿ ಇದುವರೆಗೂ ನಾವು‌ ಕೇಳುತ್ತಾ ಬಂದಿರುವುದು ಏನೆಂದರೆ- “ಭಾರತದಲ್ಲಿ ಶಿಕ್ಷಣವನ್ನು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿದ್ದರು. ತಳ ಸಮುದಾಯದವರಿಗೆ, ಅದರಲ್ಲೂ ವಿಶೇಷವಾಗಿ ಶೂದ್ರರಿಗೆ ಶಿಕ್ಷಣವೇ ಲಭಿಸುತ್ತಿರಲಿಲ್ಲ.”!

ಚೆಲುವ ತರು ಪುಸ್ತಕದಲ್ಲಿರುವ ದಾಖಲೆಯ ಪ್ರಕಾರ, 18ನೇ ಶತಮಾನದಲ್ಲಿ ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್‌ನಲ್ಲಿ, ಭಾರತದ ಶಿಕ್ಷಣ ವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಶಿಕ್ಷಣ ವ್ಯವಸ್ಥೆಯ ಸ್ವರೂಪ, ಅದರ‌ ಲಾಭ ನಷ್ಟಗಳ ಕುರಿತು ಬ್ರಿಟಿಷರು ತಮ್ಮ ಅಧಿಕಾರಿಗಳಿಂದ ಅಧ್ಯಯನ ವರದಿಗಳನ್ನು ತರಿಸಿಕೊಳ್ಳುತ್ತಿದ್ದರು. ಹೀಗೆ ಸಿದ್ಧಗೊಂಡಿರುವ ವರದಿಗಳು, ಭಾರತದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಮಾತ್ರವೇ ಶಿಕ್ಷಣ ಲಭಿಸುತ್ತಿತ್ತು, ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು ಎನ್ನುವುದಕ್ಕೆ ವ್ಯತಿರಿಕ್ತವಾದ ರಿಪೋರ್ಟ್ ನೀಡಿವೆ. ಇದಕ್ಕೆ ಧರ್ಮಪಾಲ್ ಬ್ರಿಟಿಷ್ ದಾಖಲೆಗಳನ್ನೇ ಮುಂದಿಟ್ಟಿದ್ದಾರೆ !

ಇಂತಹ ಶಿಕ್ಷಣ ಪಡೆದಿರುವ ಭಾರತೀಯರನ್ನು ಗೆಲ್ಲಬೇಕೆಂದರೆ, ಕೇವಲ ವ್ಯಾಪಾರಿ ಬಲ, ತೋಳ್ಬಲ ಇಲ್ಲವೇ ಸೈನ್ಯಬಲ ಸಾಕಾಗುವುದಿಲ್ಲ ಎಂಬ ನಿಕಷಕ್ಕೆ ಬ್ರಿಟಿಷರು ಬರುತ್ತಾರೆ. ಮೊದಲೇ ಹೇಳಿದಂತೆ, ಭಾರತದ‌ ನಾಗರಿಕತೆ, ಇಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅಧ್ಯಯನಕ್ಕೆ ಇಳಿಯುತ್ತಾರೆ. ಬಳಿಕ ಸುದೀರ್ಘ ಚರ್ಚೆ ನಡೆಸಿ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುತ್ತಾರೆ ! ಈ ಸಂಗತಿಯನ್ನು ನಾವೆಲ್ಲರೂ ಓದಿದ್ದೇವೆ, ಕೇಳಿದ್ದೇವೆ‌.

ಮೆಕಾಲೆ ಶಿಕ್ಷಣ ಎಂದರೆ ಇನ್ನೇನೋ ಅಲ್ಲ. ತಾವೂ ಬ್ರಿಟಿಷರಂತೆ ಆಗಬೇಕು ಎಂಬ ಪ್ರಯತ್ನದಲ್ಲಿ ಭಾರತೀಯರು ತಮ್ಮತನವನ್ನು ಮರೆತು, ಸಂಬಳಕ್ಕೆ ದುಡಿಯುವ ಯಂತ್ರಗಳಂತೆ ಮಾಡುವುದೇ ಈ ಶಿಕ್ಷಣ ವ್ಯವಸ್ಥೆಯ ಉದ್ದೇಶ. ಇದರಿಂದ ಎರಡು ಕಾರ್ಯ ಈಡೇರುತ್ತದೆ. ಮೊದಲನೆಯದಾಗಿ ಭಾರತೀಯರು ತಮ್ಮತನವನ್ನು ಮರೆತು, ಬ್ರಿಟಿಷರ ವಿರುದ್ಧ ಯುದ್ಧ ಮಾಡುವ ಆಲೋಚನೆಯನ್ನು ಕೈಬಿಡುತ್ತಾರೆ. ಎರಡನೆಯದು, ಇಷ್ಟು ಬೃಹತ್ ದೇಶವನ್ನು ಆಳಲು ಅಧಿಕಾರಿಗಳಾಗಿ, ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಕೆಲಸದವರು ಸಿಗುತ್ತಾರೆ.

ಈ ಕಾರ್ಯಕ್ಕೆ ಮೊದಲಿಗೆ ಶಿಕ್ಷಣ ವ್ಯವಸ್ಥೆಗೇ ಬ್ರಿಟಿಷರು ಕೈಹಾಕಿದರು. ಅದರ ಪರಿಣಾಮವಾಗಿ ಮೊದಲಿಗೆ, ಭಾರತೀಯರು ತಮ್ಮ ಇತಿಹಾಸವನ್ನು ನೋಡುವ ಮಾನಸಿಕತೆಯನ್ನು ಬದಲಾಯಿಸಲಾಯಿತು. ಎಲ್ಲವನ್ನೂ ಪಾಶ್ಚಾತ್ಯ ಆಲೋಚನೆಯ ಬೂದುಗನ್ನಡಿಯಲ್ಲೇ ನೋಡುವುದನ್ನು ಕಲಿಸಲಾಯಿತು. ಉದಾಹರಣೆಗೆ, ನಾವೆಲ್ಲರೂ ಭೌಗೋಳಿಕವಾಗಿ ಮಾತನಾಡುವಾಗ ಮಧ್ಯಪ್ರಾಚ್ಯ ದೇಶಗಳು ಎಂದು ಕರೆಯುತ್ತೇವೆ. ನಾವು ಭೂಪಟದಲ್ಲಿ ನೋಡಿದರೆ ಮಧ್ಯಪ್ರಾಚ್ಯ ಎಂದು ಕರೆಯುವ ಈ ದೇಶಗಳು (ಸುಡಾನ್, ಸೌದಿ ಅರೇಬಿಯಾ, ಯೆಮನ್, ಮುಂತಾದವು) ಭಾರತದಿಂದ ಪಶ್ಚಿಮ ಭಾಗಕ್ಕಿವೆ. ನಮಗೆ ಪೂರ್ವ ಭಾಗದಲ್ಲಿರುವ ದೇಶಗಳೆಂದರೆ ಚೀನಾ, ತೈವಾನ್, ವಿಯೆಟ್ನಾಮ್ ಮುಂತಾದವು. ಮಧ್ಯ ಪ್ರಾಚ್ಯ ಎನ್ನುವುದು ಯುರೋಪಿಯನ್ನರ ದೃಷ್ಟಿಕೋನದಲ್ಲಿ ಮಿಡಲ್ ಈಸ್ಟ್ ಎಂದಾಗುತ್ತವೆ. ಅಂದರೆ ನಾವು ಎದುರಿಗೆ ಕಾಣುವ ಭೂಗೋಳದಲ್ಲಿರುವ ಸತ್ಯವನ್ನೂ ಮರೆಮಾಚಿ, ನಮ್ಮ ಪಶ್ಚಿಮಕ್ಕಿರುವ ದೇಶಗಳನ್ನು ಪೂರ್ವ ದೇಶಗಳು ಎಂದು ಸಂಬೋಧಿಸುತ್ತಿದ್ದೇವೆ !

ಅಂದ ಮೇಲೆ ಇತಿಹಾಸದಲ್ಲಿ ಘಟಿಸಿಹೋದ ಘಟನೆಗಳ ಕುರಿತು ನಾವು ಎಷ್ಟು ಅಜ್ಞಾನಿಗಳಾಗಿರಬಹುದು? ಅಥವಾ ನಮ್ಮ ಕಣ್ಣುಗಳನ್ನು ಬ್ರಿಟಿಷರು ಹಾಗೂ ಅವರು ಸಾಕಿ ಸಲುಹಿದ ಕಪ್ಪು ತೊಗಲಿನ ಬ್ರಿಟಿಷರು ಹೇಗೆ ಅದಕ್ಕೆ ಸಹಕರಿಸಿರಬಹುದು ಎಂದು ಊಹಿಸಬಹುದು. ಇಷ್ಟೊಂದು ಪೀಠಿಕೆ ಏಕೆ ನೀಡಬೇಕಾಯಿತು ಎಂದರೆ, ಭಾರತೀಯರ ಕಣ್ಣಿಗೆ ಅಂಟಿದ್ದ ಈ ಪೊರೆಯನ್ನು ಕಳಚುವ ಮಹಾನ್ ಕಾರ್ಯವನ್ನು ಮೊದಲು ಮಾಡಿದವರು ಸ್ವಾತಂತ್ರ್ಯ ವೀರ ಸಾವರ್ಕರ್ ಎಂದು ತಿಳಿಸಲು.

ದೇಶವನ್ನು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೆ ಸಿದ್ಧಪಡಿಸಬೇಕೆಂದರೆ ಮೊದಲು ಭಾರತೀಯರಲ್ಲಿರುವ ಇಂಥಾ ಗೊಂದಲಗಳನ್ನು ಬಗೆಹರಿಸಿ, ಮಾನಸಿಕವಾಗಿ ಅವರನ್ನು ಸಜ್ಜುಗೊಳಿಸಬೇಕಿತ್ತು. ಹೋರಾಟಕ್ಕೆ ಧುಮುಕುವ ನಾಯಕನಿಗೆ ಮಾತ್ರವಲ್ಲ, ಆತನನ್ನು ಹಿಂಬಾಲಿಸುವ ಜನ ಸಮುದಾಯಕ್ಕೂ ನಾವೇನು ಮಾಡುತ್ತಿದ್ದೇವೆ ಮತ್ತು ಯಾಕೆ ಮಾಡುತ್ತಿದ್ದೇವೆ ಎಂಬುದರ ಕುರಿತು ಒಂದು ಸ್ಪಷ್ಟತೆ(ಕ್ಲಾರಿಟಿ) ಬೇಕು. ಸಾವರ್ಕರ್ ಅವರಿಗೆ ಈ ಖಚಿತತೆ ಇತ್ತು.

ನೈಜ ಇತಿಹಾಸವನ್ನು ತಿಳಿಸುವ ಸಾವರ್ಕರ್ ಅವರ ಪ್ರಯತ್ನದಲ್ಲಿ ಪ್ರಮುಖ ಮೂರು ಅಂಶಗಳನ್ನು ನೋಡೋಣ.

೧. ಖಿಲಾಫತ್ ಚಳವಳಿ

ಖಿಲಾಫತ್‌ ಚಳವಳಿ

ಇಡೀ ದೇಶದ ಎಲ್ಲ ಜನರೂ ಒಟ್ಟಾಗಿ ಹೋರಾಟ ನಡೆಸದೆ ಇದ್ದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದಿಲ್ಲ ಎನ್ನುವುದು ಮಹಾತ್ಮಾ ಗಾಂಧೀಜಿಯವರ ಗಾಢ ನಂಬಿಕೆ. ಅಂದರೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು, ಹಳ್ಳಿಗರು, ನಗರವಾಸಿಗಳು, ಮಹಿಳೆಯರು, ಮಕ್ಕಳು… ಹೀಗೆ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು ಎಂಬುದು ಗಾಂಧಿ ಚಿಂತನೆ.

ಅಂತೆಯೇ, ದೇಶದ ಹಳ್ಳಿಹಳ್ಳಿಗಳಲ್ಲಿ, ನಗರ ಪಟ್ಟಣಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಪಸರಿಸಲು ಗಾಂಧೀಜಿ ಕಾರಣರಾದರು. ದಂಡಿ ಸತ್ಯಾಗ್ರಹ, ಸ್ವದೇಶಿ ಚಳವಳಿ, ಅಸಹಕಾರ ಚಳವಳಿಯಂತಹ ಅನೇಕ ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸಿದರು. ಆದರೆ ಈ ಚಳವಳಿಗಳು ನಡೆದ ಕೂಡಲೆ ಬ್ರಿಟಿಷ್ ಸರ್ಕಾರದಲ್ಲಾಗಲಿ, ಅವರ ಆಡಳಿತದಲ್ಲಾಗಲಿ ಬದಲಾವಣೆ ಆಗುತ್ತಿರಲಿಲ್ಲ. ಗಾಂಧೀಜಿಯವರಿಗೆ ಅದು ಮುಖ್ಯವೂ ಆಗಿರಲಿಲ್ಲ. ಮುಖ್ಯವಾಗಿ ದೇಶದ ಜನರಲ್ಲಿ ಸ್ವಾತಂತ್ರ್ಯದ ಅರಿವು ಮೂಡಲಿ ಎಂದೇ ಬಾಪೂಜಿ ಭಾವಿಸಿದ್ದರು.‌

ಈ ಎಲ್ಲರೂ ಎನ್ನುವುದರಲ್ಲಿ, ಮುಸ್ಲಿಮರೂ ಇದ್ದರು. ಅವರನ್ನೂ ತಮ್ಮ ಜತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಕೊಂಡೊಯ್ಯಬೇಕೆನ್ನುವುದು ಗಾಂಧೀಜಿಯವರ ದೃಢನಿಶ್ಚಯವಾಗಿತ್ತು. ಪ್ರಾರಂಭದಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಸಮುದಾಯದವರೂ ಭಾಗವಹಿಸುತ್ತಿದ್ದರು, ಗಾಂಧೀಜಿಯವರ ಕರೆಗೆ ಓಗೊಟ್ಟು ಅನೇಕರು ಹೋರಾಟಕ್ಕೆ ಧುಮುಕಿದರು. ಬ್ರಿಟಿಷರು ಹಿಂದು-ಮುಸ್ಲಿಮರನ್ನು ಒಡೆಯಲು ಪ್ರಯತ್ನ ನಡೆಸುತ್ತಿದ್ದು, ಈ ಸಮಸ್ಯೆಗೆ ಪರಿಹಾರವೂ ಹಿಂದು-ಮುಸ್ಲಿಂ ಐಕ್ಯತೆಯೇ ಎಂದು ನಂಬಿದ್ದರು ಗಾಂಧೀಜಿ.

ಗಾಂಧೀಜಿಯವರ ಈ ನಿರ್ಧಾರವನ್ನೇ ಮೊಹಮ್ಮದ್ ಆಲಿ ಹಾಗೂ ಶೌಕತ್ ಆಲಿ ಸಹೋದರರು ದುರುಪಯೋಗಪಡಿಸಿಕೊಳ್ಳಲು ಮುಂದಾದರು.

ರೌಲತ್ ಕಾಯಿದೆ ಮೂಲಕ ಬ್ರಿಟಿಷರು ಭಾರತೀಯರ ಮೇಲೆ ಮತ್ತಷ್ಟು ಹಿಡಿತ ಸಾಧಿಸಿದರು ಎನ್ನುವುದನ್ನು ಪ್ರಧಾನವಾಗಿಸಿಕೊಂಡು ಗಾಂಧೀಜಿ ಅಸಹಕಾರ ಚಳವಳಿ ರೂಪಿಸಲು ಮುಂದಾದರು. ಬ್ರಿಟಿಷರ ಎಲ್ಲ ಆಫೀಸುಗಳು ಮತ್ತು ಫ್ಯಾಕ್ಟರಿಗಳನ್ನು ಮುಚ್ಚಬೇಕು, ಬ್ರಿಟಿಷ್ ಪೊಲೀಸ್ ಇಲಾಖೆ, ಸೇನೆ ಮತ್ತು ನಾಗರಿಕ ಸೇವೆಗಳಿಂದ ಮತ್ತು ಮಕ್ಕಳನ್ನು ಶಾಲೆಗಳಿಂದ ಹಿಂತೆಗೆಯಬೇಕು ಎಂದು ಕರೆ ನೀಡಿದರು. ಎಲ್ಲ ಪ್ರತಿಭಟನಕಾರರೂ ಬಂಧಿತನಾಗಬೇಕು ಹಾಗೂ ಪೊಲೀಸರು ಹೊಡೆದರೆ ಹೊಡೆತ ಸಹಿಸಬೇಕೆ ಹೊರತು ತಿರುಗಿ ಹೊಡೆಯಬಾರದೆಂದರು. ಗಾಂಧೀಜಿಯವರ ಸಲಹೆಗೆ ಕಾಂಗ್ರೆಸ್‌ನಲ್ಲೇ ವಿರೋಧವಿದ್ದರೂ ದೇಶದ ಜನರು ಈ ಭಾವನೆಯನ್ನು ಬೆಂಬಲಿಸಿದ್ದರಿಂದ ಕಾಂಗ್ರೆಸ್ ನಾಯಕರೂ ಮರುಮಾತಿಲ್ಲದೆ ಒಪ್ಪಿಕೊಂಡರು.

ಇದೇ ಅವಕಾಶವನ್ನು ಕಾಯುತ್ತಿದ್ದ ಆಲಿ ಸಹೋದರರು, ದೂರದ ಟರ್ಕಿಯಲ್ಲಿ ತಮ್ಮ ಖಲೀಫನನ್ನು ಪದಚ್ಯುತಗೊಳಿಸಲಾಗಿದ್ದು, ಅದನ್ನು ವಿರೋಧಿಸಲು ನಮಗೆ ಬೆಂಬಲ ನೀಡಿದರೆ ನಾವು ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುತ್ತೇವೆ ಎಂದರು. ಟರ್ಕಿಯಲ್ಲಿ ಖಲೀಫನನ್ನು ಪದಚ್ಯುತಗೊಳಿಸಲು ಅಲ್ಲಿನ ಜನರೇ ನಿರ್ಧರಿಸಿದ್ದರು. ಮತ್ತು ಯಾವುದೇ ರೀತಿಯಲ್ಲಿ ಇದು ಭಾರತಕ್ಕೆ ಸಂಬಂಧಿಸಿದ ವಿಷಯವೇ ಆಗಿರಲಿಲ್ಲ. ಆದರೆ ಆಲಿ ಸಹೋದರರ ಷರತ್ತಿಗೆ ಒಪ್ಪದಿದ್ದರೆ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿಯುತ್ತಾರೆ ಎಂಬ ಆತಂಕದಲ್ಲಿ ಗಾಂಧೀಜಿ ಒಪ್ಪಿಕೊಂಡರು. ಅಸಹಕಾರ ಹಾಗೂ ಖಿಲಾಫತ್ ಚಳವಳಿಯ ನಂತರ ಕೇವಲ ಒಂದೇ ವರ್ಷದಲ್ಲಿ ಸ್ವಾತಂತ್ರ್ಯ ಸಿಗುತ್ತದೆ ಎಂಬುದು ಗಾಂಧೀಜಿ ನಂಬಿಕೆಯಾಗಿತ್ತು.

ಇದನ್ನೂ ಓದಿ | ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್‌ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?

ಈ ಸಮಯದಲ್ಲಿ ಗಾಂಧೀಜಿಯವರ ಮಾತಿಗೆ ವಿರುದ್ಧವಾಗಿ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ, ಸಾವರ್ಕರ್ ಇದೆಲ್ಲವೂ ಸಲ್ಲದು ಎಂದು ಎಚ್ಚರಿಕೆ ನೀಡಿದರು. ಈ ಚಳವಳಿಯು ಭೀಕರವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳೂ ಇವೆ ಎಂದು ಕಿವಿಮಾತು ಹೇಳಿದರು. ಯಾವುದೇ ಸಮುದಾಯದ ಜನರನ್ನು ವಿರೋಧಿಸದ ಸಾವರ್ಕರರು, ಇತಿಹಾಸವನ್ನು ಬಲ್ಲವರಾಗಿದ್ದರು. ಇತಿಹಾಸವನ್ನು ಸರಿಯಾಗಿ ತಿಳಿದವರು ಮಾತ್ರ ಭವಿಷ್ಯವನ್ನು ಕಲ್ಪಿಸಿಕೊಳ್ಳಬಲ್ಲರು ಎಂಬಂತೆ, ಮುಂದೆ ಆಗಬಹುದಾದ ಅನಾಹುತವನ್ನು ಎಲ್ಲರ ಮುಂದೆ ಇಟ್ಟರು. ಆದರೆ ಈ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

೨. ಮೋಪ್ಲಾ ಕಾಂಡ

ಮೋಪ್ಲಾ ದಂಗೆಯ ಬಂದಿಗಳು

ಅಸಹಕಾರದ ಜತೆಜತೆಗೇ ಆರಂಭವಾದ ಖಿಲಾಫತ್ ಚಳವಳಿ ನಂತರ ಬಣ್ಣ ಬದಲಾಯಿಸಿತು. ಅಸಹಕಾರ ಚಳವಳಿಯನ್ನೇ ನುಂಗಿಕೊಂಡು, ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿತು. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಾಪಿಳ್ಳೆಗಳ ಪ್ರದೇಶ ಸೇರಿ ಎಲ್ಲ ಕಡೆಯೂ ಕಾಂಗ್ರೆಸ್ ಹಾಗೂ ಖಿಲಾಫತ್ ಧ್ವಜಗಳನ್ನು ಹಾರಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರೆಲ್ಲ ಖಿಲಾಫತ್ ಸ್ವಯಂ ಸೇವಕರಾಗಿಬಿಟ್ಟರು. ನಿಜವಾಗಿ ಬ್ರಿಟಿಷರ ವಿರುದ್ಧ ನಡೆಯಬೇಕಿದ್ದ ಚಳವಳಿ, ಸ್ಥಳೀಯರ ಮೇಲೆ, ವಿಶೇಷವಾಗಿ ಹಿಂದುಗಳ ಮೇಲೆ ನಡೆಯಲಾರಂಭಿಸಿತು. ಕಂಡಕಂಡಲ್ಲಿ ಕತ್ತಿ ಝಳಪಿಸಿದ ಮಾಪಿಳ್ಳೆಗಳು (ಮೋಪ್ಲಾ) ಅನೇಕರನ್ನು ಕೊಚ್ಚಿಹಾಕಿದರು. ಸರ್ವೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ ವರದಿಯ ಪ್ರಕಾರ ಒಂದು ಸಾವಿರ ಹಿಂದುಗಳು ಕೊಲೆಯಾದರು, ಇಪ್ಪತ್ತು ಸಾವಿರ ಜನರು ಮತಾಂತರಗೊಂಡರು, ಸಾವಿರಾರು ಮಹಿಳೆಯರು ಅತ್ಯಾಚಾರಕ್ಕೊಳಗಾದರು, ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿಯಾಯಿತು. ಮೋಪ್ಲಾ ಕಾಂಡವನ್ನು ಸ್ವಾತಂತ್ರ್ಯ ಹೋರಾಟ ಎಂದು ಬಣ್ಣಿಸುವ ಕಮ್ಯುನಿಸ್ಟ್ ಇತಿಹಾಸಕಾರರ ಲೆಕ್ಕದಲ್ಲಿಯೂ ಮೋಪ್ಲಾಗಳು ನೂರು ದೇವಸ್ಥಾನಗಳನ್ನು ಒಡೆದರು, ಐನೂರು ಜನರು ಕೊಲೆಯಾದರು, ಎರಡೂವರೆ ಸಾವಿರ ಜನರು ಮತಾಂತರವಾದರು.

ಈ ಹತ್ಯಾಕಾಂಡದ ಕುರಿತು ಭಾರತವೇ ಮೌನವಾಗಿತ್ತು. ಆದರೆ ಸಾವರ್ಕರರು ಮೋಪ್ಲಾ ಕಾಂಡದ ಕೃತಿಯನ್ನು ಕಾದಂಬರಿ ರೂಪದಲ್ಲಿ ಬರೆದರು. ಅದರ ಸ್ವರೂಪ ಕಾದಂಬರಿ ರೂಪದಲ್ಲಿದೆ. ಸಾವರ್ಕರ್ ಹಾಗೇಕೆ ಬರೆದರು? ಅವರ ಉದ್ದೇಶ ಓದುಗರಿಗೆ ಸತ್ಯ ಮುಟ್ಟಿಸುವುದು ಮತ್ತು ಎಚ್ಚರಿಸುವುದು ಆಗಿತ್ತಷ್ಟೆ.

ಇಂತಹ ಧೈರ್ಯ ತೋರಿ ಮೊದಲಿಗೆ, ಭಾರತದ ನಿಜವಾದ ದುರಂತವೊಂದನ್ನು ಹೊರತಂದವರು ಸಾವರ್ಕರ್. ಇಂತಹ ಇತಿಹಾಸಗಳನ್ನು ನಾವು ತಿಳಿಯದಿದ್ದರೆ ಭವಿಷ್ಯದಲ್ಲೂ ಇದೇ ತಪ್ಪನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

೩. ಮೊದಲ ಸ್ವಾತಂತ್ರ್ಯ ಸಂಗ್ರಾಮ

ಬ್ರಿಟಿಷರ ವಿರುದ್ಧ ಸಂಗ್ರಾಮ ನಡೆಯುತ್ತಿದ್ದಾಗ, ಈ ಹೋರಾಟಕ್ಕೆ ಅತ್ಯಂತ ನಿರ್ಣಾಯಕ ನೇತೃತ್ವ ನೀಡಿದ್ದು 1857ರ ಸಂಗ್ರಾಮ. ಇಂದು ಈ ವಾಕ್ಯವನ್ನು ಅತ್ಯಂತ ಸಲೀಸಾಗಿ ಹೇಳಿಬಿಡುತ್ತೇವೆ. ಆದರೆ ಈ ಸ್ವಾತಂತ್ರ್ಯ ಸಂಗ್ರಾಮ ನಡೆದು ಐವತ್ತು ವರ್ಷ ಕಳೆಯುವವರೆಗೂ ಅದನ್ನು ಎಲ್ಲರೂ ಕರೆಯುತ್ತಿದ್ದದ್ದು ಸಿಪಾಯಿ ದಂಗೆ ಎಂಬ ಹೆಸರಿನಿಂದಲೆ. ಬ್ರಿಟಿಷರಿಗೆ ಇದು ಸಿಪಾಯಿ ದಂಗೆಯಾಗಿತ್ತು, ಅದನ್ನೇ ಭಾರತೀಯರಲ್ಲೂ ನಂಬಿಸಿದ್ದರು. ಉನ್ನತ ವ್ಯಾಸಂಗದ ನೆಪದಲ್ಲಿ ಲಂಡನ್ನಿಗೆ ತೆರಳಿದ ಸಾವರ್ಕರರು ಅಲ್ಲಿನ ಬ್ರಿಟಿಷ್ ಲೈಬ್ರರಿಯನ್ನು ತಡಕಾಡಿದರು. ಇದರಿಂದ ಅವರಿಗೆ ತಿಳಿದಿದ್ದು ಏನೆಂದರೆ, 1857ರಲ್ಲಿ ನಡೆದದ್ದು ಸಿಪಾಯಿ ದಂಗೆಯಲ್ಲ, ಅದು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟವೇ ಆಗಿತ್ತು ಎನ್ನುವ ಸಂಗತಿ !

ಇದರಲ್ಲಿ ಭಾರತೀಯರು ಹೀನಾಯವಾಗಿ ಸೋಲಲಿಲ್ಲ, ವೀರೋಚಿತವಾಗಿ ಸೆಣೆಸಿದರು. ಹಾಗೆ ನೋಡಿದರೆ ಹೋರಾಟದಲ್ಲಿ ಬ್ರಿಟಿಷರ ಕೈ ಮೇಲಾಗಲಿಲ್ಲ, ಭಾರತೀಯರಲ್ಲಿ ಸ್ವಾತಂತ್ರ್ಯ ಪಡೆಯುವ ಕಿಚ್ಚು ಜಾಗೃತವಾಗಿದೆ ಎನ್ನುವುದು ಆ ಹೋರಾಟದಲ್ಲಿ ವೇದ್ಯವಾಗಿತ್ತು.

ಅಲ್ಲಿಯವರೆಗೆ ಬ್ರಿಟಿಷರು ಮುಚ್ಚಿಟ್ಟಿದ್ದ ಎಲ್ಲ ದಾಖಲೆಗಳನ್ನೂ ಸಂಗ್ರಹಿಸಿದ ಸಾವರ್ಕರ್, 1857ರ ಸ್ವಾತಂತ್ರ್ಯ ಸಂಗ್ರಾಮ ಕೃತಿಯನ್ನು ರಚಿಸಿದರು. ಅದು ಹೇಗೊ ಪೊಲೀಸರಿಗೆ ಗೊತ್ತಾಗಿ, ಪುಸ್ತಕ ಮುದ್ರಣವಾಗುವ ಮೊದಲೇ ನಿಷೇಧಿಸಿಬಿಟ್ಟರು. ಆದರೇನಂತೆ, ಸಾವರ್ಕರರು ತಮ್ಮ ಚಾಕಚಕ್ಯತೆಯಿಂದ ಇಂಗ್ಲಿಷ್ ಪುಸ್ತಕವನ್ನು ಹಾಲೆಂಡಿನಲ್ಲಿ ಮುದ್ರಣವಾಗುವಂತೆ ನೋಡಿಕೊಂಡರು. ಬಳಿಕ ಅದಕ್ಕೆ ಭಿನ್ನ ಭಿನ್ನ ಕಾದಂಬರಿಗಳ ಮುಖಪುಟವನ್ನು ಹೊದಿಸಿ ಭಾರತಕ್ಕೆ ಕಳುಹಿಸಿದರು. ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ಇಲ್ಲೆಲ್ಲವೂ ಅಪಾರ ಸಂಖ್ಯೆಯ ಭಾರತೀಯರು ಈ ಪುಸ್ತಕವನ್ನು ಕೊಂಡುಕೊಂಡರು. ಭಾರತದಲ್ಲಂತೂ ಇದರ ಅಧ್ಯಯನ ರಾಷ್ಟ್ರೀಯ ಕಾರ್ಯ ಎಂಬಂತೆ ಆಯಿತು. ಬ್ರಿಟಿಷರು ಸದಾ ಗೆಲ್ಲುವ ಕುದುರೆಗಳೇನೂ ಅಲ್ಲ. ಭಾರತೀಯರು ಅವರನ್ನು ಸೋಲಿಸಿದ್ದರು ಎನ್ನುವ ಸಂಗತಿ ತರುಣರಿಗೆ ಅರಿವಾಗುತ್ತಿದ್ದಂತೆ ಅವರ ಆತ್ಮವಿಶ್ವಾಸ ಹೆಚ್ಚಾಯಿತು.

ಇದನ್ನೂ ಓದಿ | ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ

ಈ ಕೃತಿಯ ಮೂರನೇ ಮುದ್ರಣ ಪ್ರಕಾಶನಗೊಂಡಿದ್ದು ಗದರ್ ಕ್ರಾಂತಿಕಾರಿಗಳ ಮೂಲಕ. ನಾಲ್ಕನೇ ಮುದ್ರಣವನ್ನು ಭಗತ್‌ಸಿಂಗ್ ಮತ್ತವರ ಮಿತ್ರರು ಸೇರಿ ಮಾಡಿಸಿದರು. 1940ರ ಆಸುಪಾಸಿನಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸರು ಐದನೇ ಮುದ್ರಣಕ್ಕೆ ಕಾರಣವಾದರು. ಅಪಾರ ಸಂಖ್ಯೆಯಲ್ಲಿರುವ ತಮಿಳು ಸೈನಿಕರಿಗೆ ಪ್ರೇರಣೆ ಸಿಗಲೆಂದು ಕೃತಿಯನ್ನು ತಮಿಳು ಭಾಷೆಗೂ ಅನುವಾದ ಮಾಡಿಸಿದರು. ಸಾವರ್ಕರ್ ಪುಸ್ತಕ ಮೊದಲು ಪ್ರಕಟಗೊಂಡಿದ್ದು 1909ರಲ್ಲಿ. ಇದು ಐದನೇ ಮುದ್ರಣ ಕಂಡಿದ್ದು ಸುಮಾರು 1942ರಲ್ಲಿ. ಹೆಚ್ಚು ಕಡಿಮೆ ಮೂರೂವರೆ ದಶಕಗಳ ಕಾಲ ಈ ಕೃತಿ ಭಾರತದಲ್ಲಿನ ಕ್ರಾಂತಿ ಕಾರ್ಯಕ್ಕೆ ಭೂಮಿಕೆ ಒದಗಿಸಿತು.

ಮೇಲಿನ ಮೂರು ಘಟನಾವಳಿಗಳಲ್ಲಿ ಕಾಣಸಿಗುವ ಸಾವರ್ಕರ್ ಎಂಥವರಾಗಿದ್ದರು ? ಎದುರಾಗುವ ಸವಾಲಿನ ಕುರಿತು ಅವರಿಗಿದ್ದ ತಿಳಿವಳಿಕೆ, ಅದನ್ನು ಬುದ್ಧಿವಂತಿಕೆಯಿಂದ ಎದುರಿಸುವ ಬಗೆ, ಚಾಕಚಕ್ಯತೆಯ ಪ್ರಯೋಗ, ಅಂತಾರಾಷ್ಟ್ರೀಯವಾಗಿಯೂ ನೆರವು ಪಡೆಯುವ ಕುಶಲತೆ- ಹೀಗೆ ಹತ್ತಾರು ಸ್ಫೂರ್ತಿ ಪ್ರೇರಣೆಗಳನ್ನು ಪಟ್ಟಿ ಮಾಡಬಹುದಲ್ಲವೇ ?

ಅವರು‌ ಗಾಂಧಿ, ಗೋಖಲೆ ಅವರಂತೆ ಅಹಿಂಸೆಯ ಮಾರ್ಗ ತುಳಿಯಲಿಲ್ಲ. ಆದರೆ, ಅವರಿಬ್ಬರಂತೆ ಹಿಂದೂ ಸಮಾಜದ ಅನಿಷ್ಟ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಮಾತ್ರವಲ್ಲ, ಅದರ ನಿವಾರಣೆಗಾಗಿ ರತ್ನಗಿರಿ ಜಿಲ್ಲೆಯಲ್ಲಿ ರಚನಾತ್ಮಕ ಕಾರ್ಯ ಕೈಗೊಂಡಿದ್ದರು. ಅವರ ಪ್ರೇರಣೆ ದೊಡ್ಡದು.

ಆದರೆ, ಇಂಥ ಸಾವರ್ಕರ್ ಜೀವಮಾನವಿಡಿ ದೈಹಿಕವಾಗಿ, ಮಾನಸಿಕವಾಗಿ ಅಪಮಾನಗಳನ್ನು ಅನುಭವಿಸಿದರು. ಅಂಡಮಾನಿನ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದರು. ಯಾವ ಭಾರತೀಯರಿಗಾಗಿ ತಮ್ಮ ಕುಟುಂಬವೆಲ್ಲವನ್ನೂ ತ್ಯಾಗ ಮಾಡಿ ಶ್ರಮಿಸಿದರೊ ಅದೇ ಭಾರತೀಯರಿಂದ ತೆಗಳಲ್ಪಟ್ಟರು. ಇದೆಲ್ಲವೂ ಅವರು ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕವಾಗಿ ನಡೆಸಿದ ಹೋರಾಟಗಳು. ಆದರೆ ಅವರು ತಮ್ಮ ಬರವಣಿಗೆ ಮೂಲಕ ಲಕ್ಷಾಂತರ ಜನರಿಗೆ ಸ್ಪೂರ್ತಿಯಾದರು.

ಸಾವರ್ಕರರ ಸಂಪರ್ಕಕ್ಕೆ ಬಂದ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಧುಮುಕಿದರು, ಯಾವ ರೀತಿ ಪ್ರೇರಣೆ ಪಡೆದರು ಎನ್ನುವುದನ್ನು ಮುಂದಿನ ಭಾಗದಲ್ಲಿ ನೋಡೋಣ.

(ಗ್ರಂಥ ಋಣ: ಆತ್ಮಾಹುತಿ- ಶಿವರಾಮು, ಚೆಲುವ ತರು- ಧರ್ಮಪಾಲ್‌, 1857ರ ನಿಂದಕರು- ನೀ.ರ. ವರ್ಹಾಡಪಾಂಡೆ, ಮೋಪ್ಲಾ ಕಾಂಡ- ಸಾವರ್ಕರ್, 1857ರ ಸಂಗ್ರಾಮ-ಚಕ್ರವರ್ತಿ ಸೂಲಿಬೆಲೆ)

Exit mobile version