Site icon Vistara News

ಶಬ್ದಸ್ವಪ್ನ ಅಂಕಣ | ಗೋಕರ್ಣವೆಂಬ ಸ್ಮೃತಿ ಸಮುದ್ರ

gokarna

ಭಾಗ 2

ದೇವರೊಂದಿಗೆ ಜನರ ಸಂಸಾರ

ಈಗ ನಾವು ಕೋಟಿತೀರ್ಥವನ್ನು ಎಡಕ್ಕೆ ಬಿಟ್ಟು ಪಶ್ಚಿಮದ ಮೂಲೆಯಲ್ಲಿ ಹೊರಳಿ ಇಕ್ಕಟ್ಟಾದ ಕೇರಿಯ ಓಣಿಯಲ್ಲಿ ನಡೆದೆವು. ಶತಶೃಂಗ ಪರ್ವತಗಳಿಂದ ಹರಿದ ಅಸಂಖ್ಯ ಗುಪ್ತಗಾಮಿನಿ ತೊರೆಗಳ ಪವಿತ್ರ ನೀರು ಕೋಟಿತೀರ್ಥವಾಗಿದೆ ಎಂದು ‘ಗೋಕರ್ಣ ಪುರಾಣ ಮಹಿಮೆ’ ಪುಸ್ತಕ ಓದಿದ್ದ ಅಬ್ಬೆ ವಿವರಿಸಿದಳು. ಜಾನಪದ ಶೈಲಿಯ ರಂಗೋಲಿ ಚಿತ್ರ ಬರೆದ, ವಿವಿಧ ರೀತಿಯ ಎಲ್ಲೆಲ್ಲಿಂದಲೊ ವಲಸೆ ಬಂದು ಸ್ಥಳೀಯರಾದವರ ಶಾಸ್ತ್ರಾಚಾರಕ್ಕೆ ಅನುರೂಪವಾದ ವಿಲಕ್ಷಣ ಅಡ್ಡ ಹೆಸರಿನ ಮನೆಗಳ ಕೇರಿ ನಾಗಬೀದಿಯಂತೆ. ಸರ್ಪಯಾಗ ಮಾಡುವ ಸ್ಥಳ ಅದು; ಅಶ್ವತ್ಥ ಮರವೊಂದರ ಕೆಳಗೆ ಹೆಣೆದುಕೊಂಡ ಜೋಡಿ ನಾಗರಗಳ ಚಿತ್ರವಿರುವ ಕಲ್ಲುಗಳಿವೆ. ಕೇರಿಯ ಎಡ-ಬಲ ಹಲವು ಪೌರಾಣಿಕ ದೇವರ ಹೆಸರಿನ ಕವಲುಗಳಿವೆ; ಮಕ್ಕಳು ಈ ದೇವರೊಂದಿಗೆ ಆಟವಾಡುತ್ತ ಬೆಳದವರು. ಹಿರಿಯರ ಊಟದ ಪಂಕ್ತಿಯಲ್ಲಿ ಅವರು ಕೂತಿರಬಹುದು; ಗಣಪತಿಗೆ ಕಲ್ಲಿನ ಪ್ರಾಚೀನ ಗುಡಿಯಿದೆ; ಹೊರ ಮೆಟ್ಟಿಲ ಬಳಿ ಧೂರ್ವೆಯ ಕಟ್ಟು, ಬಳಕುವ ತಾವರೆಯ ಹೂವಿನ ಗೊಂಚಲು ಮಾರುವ ಕರಿಮಣಿ ವನಿತೆಯರು; ಹಿಂದಿನ ಸಾಲಿನಲ್ಲಿ ತೆಂಗಿನ ಕಾಯಿ, ಕರ್ಪೂರ, ಊದುಬತ್ತಿಯ ಕಟ್ಟು, ಮೊಳದಷ್ಟು ಹೂ ಮಾಲೆ ಮಾರುವ ಅಂಗಡಿಯವರು; ಅಲ್ಲಿ ವ್ಯಾಪಾರ ಮಾಡಿದರೆ ತಿರುಗಿ ಬರುವ ತನಕ ಪುಗ್ಸಟೆ ಚಪ್ಪಲಿ ಕಾಯುವ ರಿಯಾಯತಿ ಕೆಲಸ ಅವರದ್ದು.

ಅದೇ ಮೊದಲ ಸಲ ನೇರವಾಗಿ ದೇವರನ್ನು ನಾನು ಮುಟ್ಟಿದ್ದೆ. ಗಣಪತಿಯ ತಲೆಯ ಹಿಂಭಾಗ ನಪ್ಪಿ ತಗ್ಗು ಬಿದ್ದಿತ್ತು; ಅದು ಬಾಲವಟು ಗಣಪ ಪ್ರಾಣಲಿಂಗವನ್ನು ಭೂಮಿಗಿಟ್ಟಾಗ ಕೋಪಗೊಂಡ ರಾವಣೇಶ್ವರ ಗುದ್ದಿ ಉಂಟಾದ ಗಾಯದ ಕಲೆ ಎಂದು ಅಬ್ಬೆ ಪಿಸುಗುಟ್ಟಿದಳು; ಅದಕ್ಕಾಗಿ ಅವನು ಮೊದಲು ಪೂಜಿತ ದೇವರು; ಯುಗಯುಗಗಳಿಂದ ನೋವನ್ನು ಸಹಿಸಿದ ಅವನ ಬಗ್ಗೆ ಖೇದವಾಯಿತು. ಭಕ್ತರು ಐಹಿಕ ಸುಖವನ್ನು ಬೇಡುವದನ್ನು ಮರೆತು ಮೃದುವಾಗಿ ತಲೆ ಸವರಿ ಸಂತೈಯಿಸುವಂತಿತ್ತು. ಪಕ್ಕದಲ್ಲೆ ತಂದೆ ಮಹಾಬಲನ ಗುಡಿ; ದೇವಶಿಲ್ಪಿ ಜಕ್ಕಣಾಚಾರಿ ಒಂದೇ ರಾತ್ರಿಯಲ್ಲಿ ಕೋಳಿ ಕೂಗುವ ಮುನ್ನ ಕಟ್ಟಿದ ಗುಡಿ ಎಂದು ಪ್ರತೀತಿ; ಶತಶೃಂಗಕ್ಕೆ ಯಾತ್ರೆಗೆ ಬಂದಿದ್ದ ದೇವಪರಿವಾರವನ್ನು ಜಕ್ಕಣ ಶಿಲ್ಪಕಲೆಯಲ್ಲಿ ಕಟ್ಟಿ ಹಾಕಿದನೊ! ಕಲ್ಲೆ ಮನೆಯಾಗಿ ಕತ್ತಲಲ್ಲಿ ಎದ್ದು ಬಂದು ಸಮುದ್ರ ಸ್ನಾನ ಮಾಡುತ್ತಿರಬಹುದೆ? ಮಹಾಬಲನೂ ಸಲಿಗೆಯ ದೇವರೇ; ಎಲ್ಲರಿಗೂ ಸಮಾನವಾಗಿ ಮುಕ್ತವಾಗಿ ಸಿಗುವವ; ಅಭಿಶೇಕ ಮಾಡಿದ ಪಂಚಾಮೃತದ ವಾಸನೆ; ಉಸಿರು ಕಟ್ಟುವ ಬಿಸಿ ಹಬೆ; ಸಮುದ್ರ ಸ್ನಾನದ ಒದ್ದೆವಸ್ತ್ರದ ಪರಿವಾರಗಳ ಸಾಲು; ಪಾಣಿಪೀಠದೊಳಗೆ ನಿಂತ ನೀರಿನೊಳಗೆ ಬೆರಳು ತೂರಿದರೆ ತಿರುಪಿದ ಬೀಟೆಯ ಬೇರಿನಂಥ ಪ್ರಾಣಲಿಂಗ ಸ್ಪರ್ಶಕ್ಕೆ ಸಿಗುತ್ತದೆ; ರಾವಣ ಭೂಮಿಗೆ ಬೇರುಬಿಟ್ಟ ಲಿಂಗವನ್ನು ಕೀಳಲು ಪ್ರಯೋಗಿಸಿದ ಬಲದಿಂದಾಗಿ ಲಿಂಗ ತಿರುಪಿಕೊಂಡಿದೆಯಂತೆ; ಕಿತ್ತುಬಂದ ತುಂಡನ್ನು ಐದು ಕಡೆ ಎಸೆದು ಅವು ಪುಣ್ಯಕ್ಷೇತ್ರಗಳಾಗಿವೆ. ಲಂಕೇಶ ಮಂಡಿಯೂರಿದ ಭಂಗಿಯಲ್ಲಿ ಹೇಗೆ ಸೆಣಸಾಡಿರಬಹುದೆಂದು ಕಲ್ಪಿಸುತ್ತ ಆ ಚಿತ್ರ ಸಜೀವವಾಯಿತು. ಚಂದ್ರಶಾಲೆಯಲ್ಲಿ ಪೂಜೆಯ ಕೌಂಟರ್; ಮುಚ್ಚಿಟ್ಟ ಪಲ್ಲಕ್ಕಿ; ಉತ್ಸವಗಳಲ್ಲಿ ಬಾರಿಸಲು ನಗಾರಿ; ಹಿಂಭಾಗದಲ್ಲಿ ತಾಮ್ರಪರ್ಣಿ; ಅಸ್ಥಿ ವಿಸರ್ಜಿಸುವ ನೊರೆ ನೊರೆ ಕೆರೆಯ ಸನಿಹ ತಕ್ಕಡಿ ಹಿಡಿದು ನಿಂತ ಗೌರಿ; ಸಿದ್ಧಿಕ್ಷೇತ್ರವಾದ ಸಮುದ್ರದ ಗೋಕರ್ಣ ಕಾಶಿಗಿಂಥ ಹೆಚ್ಚು ತೂಕ್ಕದ್ದಂತೆ! ಗುಡಿಯ ಬಾಗಿಲಿಂದ ಭೋರ್ಗೆರೆಯುತ್ತಿದ್ದ ಸಮುದ್ರ ದರ್ಶನವಾಯಿತು; ಅಗಾಧ ಜಲರಾಶಿಯನ್ನು ಕಂಡು ನಾನು ಬೆರಗಾಗಿ ಹೋದೆ; ತೆರೆಗಳ ಜೋಕಾಲಿಗೆ ಲೋಕ ಸುತ್ತಿ ಪಾದಗಳಡಿಯ ಹೊಂಯ್ಗೆ ಕುಸಿದು ಜಾರಿದ ಅನುಭವ; ಸಮುದ್ರದಾಚೆ ಏನಿರಬಹುದು ದಡವೇ ಇರದಿದ್ದರೆ ಅದರ ಅಂತ್ಯ ಹೇಗೆ ಎಂಬ ವಿಸ್ಮಯ.

ಓಂ ಬೀಚ್

ಮನೆಗೆ ಬಂದು ಬಾಲ್ಯದಲ್ಲಿ ಮಾರಿದ ಫೋಟೊದ ಚಿತ್ರದಲ್ಲಿ ಕಂಡದ್ದೆಲ್ಲ ಇಲ್ಲಿಯೇ ನಿಜವಾಗಿ ನಡೆದ ಘಟನಾ ಸ್ಥಳವೆಂದು ರೋಮಾಂಚನವಾಯಿತು. ಭಕ್ತರಿಗೆ ರಾವಣನ ಕಥೆ ಎಂದೋ ನಡೆದು ಹೋದ ಇತಿಹಾಸವೊ ಪುರಾಣವೊ ಅಲ್ಲ; ಪ್ರತಿ ಸಲ ನೋಡಿದಾಗಲೂ ನಡೆಯುವ ವರ್ತಮಾನದ ನಾಟಕೀಯ ಘಟನೆ. ಶತಶೃಂಗ ಪರ್ವತದ ಪಾತಳಿಯಲ್ಲಿ ರಾಮತೀರ್ಥ ಮತ್ತು ರಾಮ,ಸೀತೆ,ಲಕ್ಷ್ಮಣ ಬಂದು ಹೋದ ನೆನಪಿಗೆ ಕಟ್ಟಿದ ಮೋಹಕ ಗುಡಿಯಿದೆ; ಸಾಧುಗಳೇ ನೆಲಸಿರುವ ಅಲ್ಲಿ ತಣ್ಣನೆಯ ಝರಿಯ ವಿಚಿತ್ರ ಮೌನ; ಗಾಳಿಯ ಸವಾರಿ ಮೇಲೆ ಅಲೆಗಳ ಘೋಷ; ರಾವಣನನ್ನು ವಧಿಸಿದಾಗ ತಟ್ಟಿದ ಬ್ರಹ್ಮಹತ್ಯಾ ದೋಷ ಪರಿಹಾರವನ್ನು ರಾಮ ಇಲ್ಲಿಯೇ ಮಾಡಿಕೊಂಡ ಕಥೆಯಿದೆ; ಮೆಟ್ಟಿಲೇರಿದರೆ ಜಟಾಯು ತೀರ್ಥ; ಮುಂದೆ ಸಾಗಿದರೆ ಶಿವ ಭೂದೇವಿಯ ನಾಭಿ ಪ್ರವೇಶಿಸಿ ಅವಳ ಕಿವಿಯಿಂದ ಹೊರ ಬಂದು ‘ಗೋಕರ್ಣ’ವಾದ ಕಥೆಯ ಪುಟ್ಟ ನೆಲಮಾಳಿಗೆಯಂಥ ಗವಿ. ಹೀಗೆ ಹೆಜ್ಜೆ ಹೆಜ್ಜೆಗೂ ಪ್ರತ್ಯಕ್ಷವಾಗುವ ದೇವಾನುದೇವತೆಗಳು ಮತ್ತು ಅವರ ಕಥೆಗಳು.

ಶಿವ-ಪಾರ್ವತಿಯರ ಸಂವಾದ

ಶಿವರಾತ್ರಿಗೆ ಸಂಬಂಧಿಸಿದ ಸೊಗಸಾದ ಕಥಾಪ್ರಸಂಗವೊಂದಿದೆ: ರಥೋತ್ಸವದ ದಿವಸ ರಾತ್ರೆ ಶಿವ ಮೃಗಬೇಟೆಗೆ ಹೋಗಿ ಬರುವ ಉತ್ಸವವಿದೆ. ಮೃಗರೂಪ ಧರಿಸಿ ಲೋಕಕಂಟಕರಾಗಿ ಪೀಡಿಸುತ್ತಿದ್ದ ರಾಕ್ಷಸರನ್ನು ಸಂಹರಿಸಲು ಶಿವ ಮೃಗಬೇಟೆಗೆ ಹೋಗುವ ಹಿನ್ನೆಲೆ ಈ ಉತ್ಸವಕ್ಕಿದೆ. ಬೇಟೆಗೆ ಹೋಗಿದ್ದ ಶಿವ ಅಂಬಿಗರ ಸುಂದರಿ ಗಂಗೆಯನ್ನು ವರಿಸಿ, ಅವಳನ್ನು ಜಟಾಧಾರೆಯಲ್ಲಿ ಅಡಗಿಸಿಕೊಂಡು ಪಾರ್ವತಿಯ ಮಂದಿರಕ್ಕೆ ಮರಳುತ್ತಾನೆ. ಮುನಿದ ಪಾರ್ವತಿ ಗಂಡನಿಗೆ ಬಾಗಿಲು ತೆರೆಯದೆ ಹೊರಗೆ ನಿಲ್ಲಿಸಿ ಪ್ರಶ್ನಿಸುತ್ತಾಳೆ. ಅವರಿಬ್ಬರ ನಡುವಿನ ಸಂವಾದ ಕುತೂಹಲಕರವಾಗಿದೆ: ಹೊರಗಿನಿಂದ ಕದ ಬಡಿಯುವವನು ಚೋರನಿರಬಹುದೆ ಎಂಬ ಪಾರ್ವತಿಯ ಅನುಮಾನಕ್ಕೆ ಶಿವ ತಾನು ಶೂಲಿ, ನೀಲಕಂಠ, ಪಶುಪತಿ, ಭೂಪತಿ, ಭೂತಪತಿ, ಗಿರೀಶ, ಗಜರಿಪು, ವಾಮದೇವ ಎಂಬೆಲ್ಲ ಹೆಸರುಗಳಿಂದ ಪರಿಚಯಿಸಿಕೊಳ್ಳಲು ಯತ್ನಿಸಿ ಸೋಲುತ್ತಾನೆ. ಕೊನೆಗೆ ತಾನು ನಿನ್ನ ಪ್ರಾಣಪ್ರಿಯ ಪತಿ ಎಂದಾಗ ಸಂತುಷ್ಟಳಾಗಿ ಬಾಗಿಲು ತೆರೆಯುತ್ತಾಳೆ. ಜಟಾಧಾರೆಯಲ್ಲಿ ಅಡಗಿಸಿದ ಗಂಗೆಯಿಂದಾಗಿ ಮುಖದ ಮೇಲೆ ಹರಿಯುತ್ತಿರುವ ನೀರಿನ ಧಾರೆ ನೋಡಿ ವಿಚಾರಣೆಯನ್ನು ಮುಂದೊರೆಸುತ್ತಾಳೆ: ಜಟೆಯೊಳಗಿನ ಸ್ತ್ರೀಯ ಮುಖ, ಹುಬ್ಬುಗಳು, ಕಣ್ಣುಗಳು, ಸ್ತನಗಳು, ಎದೆಯ ಮೇಲಿನ ಉಗುರಿನ ಗೀರು, ತುಟಿಯ ಕೆಂಪು ಯಾರದ್ದೆಂಬ ಪ್ರಶ್ನೆಗಳಿಗೆ ಕ್ರಮವಾಗಿ ಶಿವ ಅವು ಕಮಲದ ಹೂವು, ಜಲದೊಳಗಿನ ಮೀನುಗಳು, ಭ್ರಮರಗಳು, ಚಕ್ರವಾಕ ಪಕ್ಷಿಗಳು, ಕೂದಲಿಂದ ಜಾರಿದ ಚಂದ್ರ ಎಂದು ಉತ್ತರಿಸುತ್ತಾನೆ. ಅವನ ಪ್ರೀತಿಯ ನಿಷ್ಟೆಯನ್ನು ಪರೀಕ್ಷಿಸುತ್ತ ಕೊನೆಗೆ ಉಡುಗರೆಯಾಗಿ ತಂದ ಅಮೂಲ್ಯ ವಸ್ತ್ರ ಮತ್ತು ಆಭರಣಗಳಿಗೆ ಮನಸೋತು ಅವನನ್ನು ಸ್ವೀಕರಿಸುತ್ತಾಳೆ. ಸಂಸ್ಕøತದಲ್ಲಿ ನಡೆಯುವ ಸಂಭಾಷಣೆ ಕಾವ್ಯಮಯವಾಗಿದೆ; ಸಾಂಕೇತಿಕವಾಗಿದೆ.

ಮತ್ತೊಂದು ಕಥಾವೃತ್ತಿಯ ಪ್ರಕಾರ ಗಂಗಾಷ್ಟಮಿಯ ನಸುಕಿನಲ್ಲಿ ಗಂಗಾವಳಿಯ ತೀರದಲ್ಲಿ ಶಿವ-ಗಂಗೆಯರ ನಿಶ್ಚಿತಾರ್ಥ ಜರುಗುತ್ತದೆ; ದೀಪಾವಳಿ ಅಮವಾಸ್ಯೆಯ ದಿನ ವಧೂವರರ ಕಡೆಯ ಅಂಬಿಗ ಮತ್ತು ಹಾಲಕ್ಕಿ ದಿಬ್ಬಣಿಗರ ಸಮ್ಮುಖದಲ್ಲಿ ವಿವಾಹ ನಡೆಯುತ್ತದೆ; ಅಂಬಿಗರ ಹೆಣ್ಣನ್ನು ವಿವಾಹವಾಗುವುದರ ಮೂಲಕ ಶಿವ ಜಾತಿಸಂಕರಕ್ಕೆ ಮುನ್ನುಡಿ ಬರೆಯುತ್ತಾನೆ. ಗಂಗೆ ಮಳೆಯಾಗಿ ಸುರಿದು ಯಾತ್ರಿಗಳ ಪಾಪವನ್ನು ತೊಳೆವ ಗೋಕರ್ಣದ ಸೊಸೆಯಾಗಿ ನಿಂತಿದ್ದಾಳೆ.

ಮಹಾಲಿಂಗೇಶ್ವರ ದೇವಾಲಯ

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಗೋಕರ್ಣವೆಂಬ ಸ್ಮೃತಿ ಸಮುದ್ರ

ಕಾಯಕವೇ ಕೈಲಾಸ

ಹಗಲಿರುಳು ಕಣ್ಣುರೆಪ್ಪೆ ಮುಚ್ಚದೇ ಜಾಗರಣೆಯಲ್ಲಿ ಪಹರೆ ಕಾಯುವ ದೇವ ಪರಿವಾರ ಮಡಿಯುಟ್ಟ ಪೇಟೆಯ ಬೀದಿಯನ್ನು ಗಮನಿಸುವಂತೆ ಸುತ್ತಲಿನ ದುಡಿಮೆಯ ಊರುಗಳತ್ತ ನೋಟ ಬೀರುತ್ತದೆ. ಗೋಕರ್ಣದ ಕೋಟೆಯಂತ ಓಣಿಗಳನ್ನು ದಾಟಿದರೆ ಮಣ್ಣಿನ ಜನಪದ ಕಾಣಿಸುತ್ತದೆ. ನೀರಿಂಗಿ ಒದ್ದೆಯಾದ ಕೊಯ್ಲು ಮುಗಿದ ಗದ್ದೆಗಳು; ಅಲ್ಲಲ್ಲಿ ಚೌಕು ಬೇಲಿಯ ನಡುವೆ ಭತ್ತದ ಕುತ್ರಿಯ ಬುಗುರಿಗಳು; ಮೇಯುತ್ತಿರುವ ದನಗಳು; ಮಾಲೆಯಾಗಿ ಅಂತರಿಕ್ಷದಿಂದಿಳಿಯುವ ಬೆಳ್ಳಕ್ಕಿಗಳ ಬೆಳ್ಳಿ ಮಿಂಚಿನ ಸಾಲು; ತರಕಾರಿ ಓಳಿಗಳು; ಜೊಟ್ಟೆ ಬಾವಿಗಳು; ಅತ್ತಿಮರದ ಕೆಳಗೆ ಒಣಗಿದ ಹೂವು ಮತ್ತು ಕುಂಕುಮ ಧರಿಸಿದ ಜಟಕನ ಕಲ್ಲು; ಚಪ್ಪರ ಹಾಕಿದ ಅಂಗಳದ ಹಂಚಿನ ಮನೆಗಳು; ರೆಕ್ಕೆ ಬಿಚ್ಚಿ ಕೊರಳುಬ್ಬಿಸಿ ಕೂಗುವ ಕೋಳಿ ಅಂಕದ ಹುಂಜ; ಎಲ್ಲೊ ಬೊಗಳುವ ನಾಯಿಗಳು; ಆಲೆಮನೆಯ ಒಲೆಯ ಕೊಪ್ಪರಿಗೆಯ ನೊರೆ ಬೆಲ್ಲದಿಂದ ಹೊಮ್ಮಿದ ಸಿಹಿ ಪರಿಮಳಕ್ಕೆ ನೀರೂರಿದ ಬಯಲು; ಬಸಳೆ ಕಟ್ಟುಗಳ ಬುಟ್ಟಿ ಹೊತ್ತು ರಥಬೀದಿಯ ಸಂತೆಗೆ ಹೊರಟ ಕರಿಮಣಿ ಹೆಂಗಸು; ಗದ್ದೆಯ ನಡುವಿನ ಡೊಂಕು ದಾರಿಯ ಗುಂಟ ಯಕ್ಷಗಾನದ ವೇಷ ಹಾಕಿ ಹಿರಿ ಸುಗ್ಗಿಯ ಕುಣಿತಕ್ಕೆ ಗೋಕರ್ಣದ ಒಡಿದೀರ ಮನೆಯತ್ತ ಗುಮಟೆಯ ತಾಳಕ್ಕೆ ಗೆಜ್ಜೆ ಹೆಜ್ಜೆ ಹಾಕುತ್ತ ನಡೆಯುತ್ತಿರುವ ಹಾಲಕ್ಕಿ ಮೇಳ; ಮಹಾಬಲೇಶ್ವರ ದೇವಳದ ಕಳಸವನ್ನು ನೋಡುತ್ತ ಬೆಳೆದವರು ಇವರು; ರಥಬೀದಿ ಸೇರುವ ಅವಸರ ಇವರಿಗೆ. ಕೊಟ್ಟಿಗೆಯಲ್ಲಿ ಕಟ್ಟಿಯೇ ಹೊಟ್ಟೆ ಹೊರೆಯುವ ಭಡ್ತಿಯವರ ಹಸುವಿಗೆ ಹಸಿ ಹುಲ್ಲು ಹೊರೆ ಹೊತ್ತು ಅವಳು ಧಾವಿಸುತ್ತಿದ್ದಾಳೆ; ಕೇರಿ-ಬೀದಿಯ ತುಂಬ ಸಗಣಿಯ ಪರಿಮಳ; ಇಕ್ಕಟ್ಟಾದ ಓಣಿಯ ಸಂಧಿಯಿಂದ ದೊಡ್ಡ ಕೋಡಿನ ಎಮ್ಮೆ ಸಲೀಸಾಗಿ ಬರುತ್ತಿದೆ; ರಥಬೀದಿಯಲ್ಲಿ ಮಾರುವ ದಿನಪತ್ರಿಕೆಯ ಕಟ್ಟನ್ನು ಬಿಚ್ಚಿ ಹೆಸರು ನೋಡಿ ನೋಡಿ ಸೈಕಲ್ ಸವಾರಿಯಲ್ಲಿ ಪೇಪರ್ ಹಂಚಿ ಶಾಲೆಗೆ ಹೋಗುವ ಕ್ವಾಸನೂ ಅವಸರದಲ್ಲಿದ್ದಾನೆ; ಕಲ್ಲಂಗಡಿ, ಮೊಗೆಕಾಯಿ ಚೀಲಗಳನ್ನು ರಿಕ್ಷಾದಿಂದ ಇಳಿಸುತ್ತಿದ್ದಾರೆ; ತಾಜಾ ಮೀನು ಬಂದ ಸುದ್ದಿಗೆ ಮಾಸ್ತರು ತದಡಿಗೆ ಸೈಕಲ್ ಓಡಿಸುತ್ತಿದ್ದಾರೆ; ದರ್ಜಿ ಪಾಚಾ ಹೊಲಿಗೆ ಯಂತ್ರದಿಂದ ತಲೆಯೇ ಎತ್ತಿಲ್ಲ; ಬಾಂಬೈ ಸಲೂನಿನಲ್ಲಿ ಪೇಪರ್ ಓದುತ್ತ ಕತ್ತರಿಸಿದ ಕೂದಲು ಕಿವಿಯಲ್ಲಿ ತುರಿಕೆಯಾಗಿ ಕಾಡುವುದನ್ನು ನೋಡುತ್ತ ಪಾಳಿಯಲ್ಲಿ ಹಜಾಮತಿಗೆ ಕಾಯುತ್ತಿದ್ದಾರೆ; ಪರಿಷೆಯವರಿಗೆ ಸಂತರ್ಪಣೆ ತಯಾರಿಸಲು ಸಂಬಂಧಿಸಿದವರಿಗೆ ತಿಳಿಸಿಯಾಗಿದೆ; ಕೋಟಿತೀರ್ಥದಲ್ಲಿ ಮಿಂದು ದೇವಳಕ್ಕೆ ಹೊರಟವರ ಮೈಯಿಂದ ನೀರು ತೊಟ್ಟಿಕ್ಕುತ್ತಿದೆ. ಕಾರಿನ ಹಾರ್ನಿಗೆ ಹಾದಿ ಬಿಡದೆ ಜಗಳ ಶುರುವಾಗಿದೆ; ಮಳ್ಳ ಸುಂಟರ ಗಾಳಿಯೊಂದು ಯಾವುದೊ ಓಣಿಯಿಂದ ಕುಂಟುತ್ತ ಬಂದು ತೇರಿನೆದುರು ನರ್ತಿಸುತ್ತ ಕಾಯಕವೇ ಕೈಲಾಸ ಎನ್ನುತ್ತಿದೆ.

ಕುಡ್ಲೆ ಬೀಚ್

ಶಿವನ ಹೆಣ್ಣು-ಮಣ್ಣಿನ ಸಂಬಂಧ

ಹೆಣ್ಣಿನ ಸಂಗದೊಂದಿಗೆ ಶಿವನಿಗಿರುವ ಮಣ್ಣಿನ ಸಂಬಂಧವೂ ವಿಶಿಷ್ಟವಾಗಿದೆ. ಹೊಸ್ತಿನ ಹಬ್ಬದ ದಿನರಾತ್ರಿ ಶಿವನ ಪಾದುಕೆ ಮತ್ತು ಉತ್ಸವಮೂರ್ತಿ ನಾಡಕರ್ಣಿಯವರ ಮನೆಯಲ್ಲಿ ತಂಗುತ್ತದೆ; ಮೊದಲ ಸಲ ಶಿವ ಗಂಗೆಯನ್ನು ನೋಡಿ ಅನುರಕ್ತನಾದ ಸಂದರ್ಭವಂತೆ ಅದು; ಭತ್ತದ ಕದಿರು ಕೊಯ್ಯುವ ಮುಹೂರ್ತ ಅದು; ಕೊಯ್ದ ಕದಿರನ್ನು ರೈತರು ತಮ್ಮ ಮನೆಯ ಹೊಸ್ತಿಲಿಗೆ ಸಿಕ್ಕಿಸಿ ವರ್ಷದ ಸುಗ್ಗಿ ಸಮೃದ್ಧವಾಗಿರಲೆಂದು ಪ್ರಾರ್ಥಿಸುತ್ತಾರೆ. ನಿತ್ಯದ ಅಮೃತಪಡಿ ಮತ್ತು ವಾದ್ಯಸೇವೆಗೆಂದು ಮಹಾಬಲನಿಗೆ ನಾಡಕರ್ಣಿ ಕುಟುಂಬದವರು ಉಪ್ಪಿನ ಆಗರವನ್ನು ದಾನ ನೀಡಿದ್ದಾರೆ. ಮೈಸೂರಿನ ಅರಸರು, ಶ್ರಂಗೇರಿ ಪೀಠದವರು ಮತ್ತು ಟಿಪ್ಪೂ ಸುಲ್ತಾನ ದೇವಳಕ್ಕೆ ಬೇರೆ ಬೇರೆ ರೂಪದಲ್ಲಿ ದಾನ ಮಾಡಿದ್ದನ್ನು ಸ್ಥಳೀಯರು ಉಲ್ಲೇಖಿಸುತ್ತಾರೆ; ಪ್ರತಿ ರಾತ್ರಿ ಎಂಟಕ್ಕೆ ಈಶ್ವರನಿಗೆ ಸಲಾಂ ಸೇವೆ ಇದೆಯಂತೆ.

ಇದನ್ನೂ ಓದಿ | ಶಬ್ದಸ್ವಪ್ನ | ದೇವರನ್ನು ಕಾಣಿಸಿದ ಕಲಾವಿದ ರಾಜಾ ರವಿವರ್ಮ

ಕಥೆ ಕಟ್ಟಿದ ಊರು

ಗೋಕರ್ಣ ಕಥೆಗಳಲ್ಲಿ ಹುಟ್ಟಿದ ಊರು; ಇಲ್ಲಿಯ ನಾಗರಿಕರಿಗಿರುವಂತೆ ದೇವರುಗಳಿಗೂ ವಿಳಾಸವಿದೆ; ಎಲ್ಲಿಂದಲೊ ಎಂದೊ ಪ್ರವಾಸಕ್ಕೆ ಬಂದ ದೇವತೆಗಳು ಇಲ್ಲಿಯ ಏಕಾಂತಕ್ಕೆ ಮನಸೋತು ಸಂಸಾರಸ್ಥರಾಗಿದ್ದಾರೆ. ಕಥೆಗಳ ಮಹಿಮೆಯಿಂದಲೆ ಅದು ಪುಣ್ಯಕ್ಷೇತ್ರವಾಗಿದೆ; ಸ್ಥಳೀಯರಿಗೆ ಇರುವಂತೆ ದೇವತೆಗಳಿಗೂ ಸುಖ-ದು:ಖದ ಕಥೆಗಳಿವೆ; ಮುಗ್ಧತೆ ಮತ್ತು ದೈವಿಕ ಭಕ್ತಿ ಇದ್ದವರಿಗೆ ಇಲ್ಲಿಯ ದೇವರ ಹಾಜರತಿ ಅನುಭವಕ್ಕೆ ಬಾರದಿರದು; ಮುಸ್ಸಂಜೆಯಲ್ಲಿ ಕೇರಿಯ ಮುರ್ಕಿಯಲ್ಲಿ ವಾಕಿಂಗ್ ಮಾಡುತ್ತಿದ್ದ ದೇವರಿಗೆ ಡಿಕ್ಕಿ ಹೊಡೆದು ಹಣೆಗೆ ಪೋಟ್ಲು ಮೂಡುತ್ತದೆ; ಬೀದಿ ಬೀದಿಯಲ್ಲಿ ದೇವರೊಂದಿಗೆ ಆಟವಾಡುತ್ತ ಸಮುದ್ರ ತಾಯಿಯ ಉಸುಕಿನ ಮಡಿಲಲ್ಲಿ ರಾತ್ರಿ ಮಲಗುತ್ತ ಯಾತ್ರೆಯ ಲಹರಿಯಲ್ಲಿ ಚಲಿಸುವ ಜೀವ ಸಮುದಾಯ ಪಂಜಿ-ಗಂಜಿಯ ಸರಳತೆಯಲ್ಲೆ ಸಂತೃಪ್ತ ಜೀವನ ನಡೆಸಿದ್ದಿದೆ. ಎಲ್ಲ ಜಾತಿ-ವರ್ಗದವರು ಸೇರಿ ಶಿವರಾತ್ರಿಯ ತೇರು ಕಟ್ಟುವಂತೆ, ದೀಪೋತ್ಸವದಲ್ಲಿ ಕೂಡಿ ಹಣತೆ ಹಚ್ಚುವಂತೆ, ಗರ್ಭಗುಡಿಯಲ್ಲಿ ಒಬ್ಬರು ಮತ್ತೊಬ್ಬರ ಶ್ವಾಸವನ್ನು ಉಸಿರಾಡುವಂತೆ ಸಂಯುಕ್ತ ಸಂಸ್ಕøತಿಯ ವಿಶ್ವದ ಜೀವತರಂಗವನ್ನು ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹಂಚಿ ಸಂಚಯಸಿಕೊಂಡು ಹೋಗುತ್ತಾರೆ. ಪುರಾಣ ದೇವತೆಗಳು, ಋಷಿಗಳು, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು, ಕರ್ನಾಟಕದ ರಾಜ ಮಹಾರಾಜರು ಗೋಕರ್ಣವನ್ನು ಸಂದರ್ಶಿಸಿದ್ದಾರೆ. ನಾಸ್ತಿಕರ, ಆಸ್ತಿಕರ, ಅನುಭಾವಿಗಳ ಯೋಗ ನಿದ್ರೆಯಲ್ಲಿ ಮೂಡುವ ಕನಸು ಇಲ್ಲಿಯ ಬೆಳದಿಂಗಳ ಹಿತವನ್ನು, ಉಪ್ಪಿನ ರುಚಿಯನ್ನು, ಗಂಟೆಗಳ ಓಂಕಾರವನ್ನು ಕಾಪಾಡುತ್ತ ನಡೆದಾಡಿದೆ. ಹೂವು, ನೀರು, ದೀಪ ಎಲ್ಲವೂ ಇಲ್ಲಿ ಹಬ್ಬವೇ.

ಕಾಲದ ಒತ್ತಡದಿಂದ ಗೋಕರ್ಣವೂ ಬದಲಾಗಿದೆ; ಶಿವ-ಪಾರ್ವತಿಯರು ಕೂಡಿದ ಕುಡ್ಲೆ ಬೀಚು ಭಂಗವಾದ ತನ್ನ ಮೌನದಿಂದ ವಿದೇಶಿಯರ ಬೆತ್ತಲನ್ನು ಮುಚ್ಚಲಾಗದೆ ಬೆಚ್ಚಿದೆ; ಪರಿಷೆಗೆ ಬರುವವವರಿಗೆ ತೀರ್ಥಯಾತ್ರೆ ಮಾಡಿಸುವುದಕ್ಕಿಂತ ಹೋಂಸ್ಟೇ ರೆಸಾರ್ಟುಗಳೇ ಹೆಚ್ಚು ಲಾಭದಾಯಕ ಎಂಬುದನ್ನು ಯುವಕರು ಮನಗಂಡಿದ್ದಾರೆ. ಕಾಸೇ ಕೈಲಾಸವಾಗಿದೆ; ದೇವರು ಇಂಗ್ಲಿಶ್‍ನಲ್ಲಿ ಮಾತಾಡುತ್ತ ಚಾ ಕುಡಿದು ಬಸ್ ಏರಿದ ವಿಚಿತ್ರ ಕನಸು ಇತ್ತೀಚೆಗೆ ಕೆಲವರಿಗೆ ಬಿದ್ದಿದೆಯಂತೆ. ದೇವಳದ ಚಂದ್ರಶಾಲೆಯಲ್ಲಿ ದೀನರಾಗಿ ಕುಳಿತ ವೃದ್ಧರೊಬ್ಬರು ಪ್ರದಕ್ಷಿಣೆ ಹಾಕುವವರತ್ತ ದಕ್ಷಿಣಿಗೆ ಕೈ ಚಾಚುತ್ತಿದ್ದಾರೆ; ಏಕಾಂತವನ್ನು ಕಳೆದುಕೊಂಡ ಬೀದಿ, ಓಣಿ, ತೀರ್ಥಗಳು ದೇವವಾಣಿಯ ವ್ಯಾಪ್ತಿಯಿಂದ ಹೊರಗಿವೆ; ಮನೆಯಲ್ಲಿ ವ್ಯಕ್ತಿಗಳ ಸ್ಥಳವನ್ನು ವಸ್ತುಗಳು ಆಕ್ರಮಿಸಿವೆ; ಮಾತಿಲ್ಲದ ಮನೆಗಳಲ್ಲಿ ಸೂತಕದ ವಾಸನೆಯ ಐಸಿಯುನ ಪ್ರೇತ ಸದ್ದು; ಹೊರಗೆ ಅಸಾಧ್ಯ ಗದ್ದಲ! ಕಥೆ ಹೇಳುತ್ತಿದ್ದ ದೇವತೆಗಳು ಮುದುಕರಾದಂತಿವೆ. ನಾದಪ್ರಿಯ ಶಿವನನ್ನು ವಾದಪ್ರಿಯನನ್ನಾಗಿಸಲಾಗಿದೆ. ಪಂಚಾಂಗದಲ್ಲಿ ರಾಹುಕಾಲ ಮಾತ್ರ ಕಾಣುತ್ತಿದೆ; ದಣಿದ ಬೀದಿಗಳು, ಆಕಳಿಸುವ ಮನೆಯ ಒಳಗಳು ಭಗ್ನಾವಶೇಷ ಇತಿಹಾಸದತ್ತ ಮುಖಮಾಡಿದಂತಿವೆ. ಲೈಬ್ರರಿಯ ಕಪಾಟಿನ ಅಸ್ಪೃಶ್ಯ ಪುಸ್ತಕಗಳ ಅಕ್ಷರಗಳು ರೆಕ್ಕೆ ಬಂದ ಗೆದ್ದಲು ಹುಳುಗಳಾಗಿ ಹಾರುತ್ತಿವೆ; ಮಂತ್ರದ ಸಾಲೊಂದನ್ನು ರಿಂಗ್ ಟೋನಾಗಿ ಪಠಿಸುವ ಮೊಬೈಲ್ಲೊಂದು ನಾರುತ್ತಿರುವ ಗಟಾರದಂಚಿಗೆ ಅನಾಥವಾಗಿ ಬಿದ್ದಿದೆ. ಪಕ್ಕದ ಗೋಡೆಗಂಟಿಸಿದ ಸಿನೆಮಾ ಪೋಸ್ಟರಿನ ಬಣ್ಣದ ನಟಿ ಅದ ನೋಡಿ ನಗುತ್ತಿದ್ದಾಳೆ.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಕನಸು ಎಚ್ಚರಗಳ ನಡುವೆ ಮಾರ್ಕ್ವೇಜ್‌ನ ಮಾಯಾದರ್ಪಣ

Exit mobile version