ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ಚಾರಿಟಿ ಮಾಡುವ, ನೊಂದವರಿಗೆ ಪರಿಹಾರವನ್ನು ಕೊಡುವ, ಅಸಹಾಯಕರಿಗಾಗಿ ದುಡ್ಡು ಸಂಗ್ರಹ ಮಾಡುವ, ವೈದ್ಯಕೀಯ ನೆರವು ಕೇಳುವ ನೂರಾರು ವಿನಂತಿಗಳು ಬರುತ್ತಿವೆ.
ಅವುಗಳಲ್ಲಿ 70% ಒಳ್ಳೆಯ ಉದ್ದೇಶವನ್ನು ಹೊಂದಿರುತ್ತವೆ ಮತ್ತು ನಿಜವಾದ ಅಗತ್ಯ ಇರುವ ಮಂದಿಗೇ ದೊರೆಯುತ್ತಿವೆ. ದೂರದಲ್ಲಿ ಇರುವ ಯಾರಿಗೋ ಒಂದಿಷ್ಟು ಪ್ರಚಾರವನ್ನು ಬಯಸದೆ ಸಹಾಯಕ್ಕೆ ಧಾವಿಸುವ ಸಜ್ಜನ ದಾನಿಗಳ ಕಾಳಜಿಯು ನಿಜಕ್ಕೂ ಅದ್ಭುತವೇ ಆಗಿದೆ. ಅಂತಹ ದಾನಿಗಳಿಗೆ ಖಂಡಿತ ಅಭಿನಂದನೆಗಳು ಸಲ್ಲುತ್ತವೆ.
ಆದರೆ ಒಂದು ಕ್ಷಣ ಯೋಚನೆ ಮಾಡಿ ಮತ್ತು ಸಹಾಯಕ್ಕೆ ಹೊರಡಿ
ಈ ಕೆಳಗಿನ ಘಟನೆಗಳನ್ನು ಸ್ವಲ್ಪ ಗಮನಿಸಿ. ಇವು ನಿಜವಾಗಿ ನಡೆದ ಘಟನೆಗಳು.
ಇತ್ತೀಚೆಗೆ ಚಲಿಸುತ್ತಿರುವ ರೈಲಿನ ಟಾಪ್ ಮೇಲೆ ನಿಂತು ಶೋಕಿಗಾಗಿ ಸೆಲ್ಫಿ ತೆಗೆಯುತ್ತಿದ್ದ ಒಬ್ಬ ಯುವಕನು ಹೈಟೆನ್ಶನ್ ತಂತಿಗೆ ತಾಗಿ ಕೆಳಗೆ ಬಿದ್ದ. ಅವನ ದೇಹವು ಅರ್ಧ ಸುಟ್ಟು ಹೋಗಿತ್ತು! ನಿಜಕ್ಕೂ ಶೋಚನೀಯವೇ ಸರಿ! ಯಾರೋ ಪುಣ್ಯಾತ್ಮರು ಸೋಷಿಯಲ್ ಮೀಡಿಯಾದಲ್ಲಿ ಚಂದವಾಗಿ ಬರೆದು ಸಹಾಯವನ್ನು ಕೇಳಿದರು. ಶೋಕಿ ಮಾಡಿದ್ದನ್ನು ನಮೂದಿಸದೇ ರೈಲಿನಿಂದ ಕೆಳಗೆ ಬಿದ್ದ ಎಂಬ ಕಥೆಯನ್ನು ಕಟ್ಟಿದರು! ಬ್ಯಾಂಕ್ ಖಾತೆಯ ವಿವರ ನೀಡಿದರು. ಒಂದೇ ವಾರದಲ್ಲಿ 32 ಲಕ್ಷ ರೂ. ಒಟ್ಟಾಯಿತು! ಆ ದುಡ್ಡು ಮುಂದೆ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ!
ಇಲ್ಲೊಂದು ಬೈಕ್ ಅಪಘಾತ!
ಮತ್ತೊಬ್ಬ ಹುಡುಗ ಬೈಕ್ ಅಪಘಾತವಾಗಿ ತಲೆಗೆ ಪೆಟ್ಟಾಗಿ ಆಸ್ಪತ್ರಗೆ ದಾಖಲಾಗಿದ್ದ. ಯಾರೋ ಒಬ್ಬ ಪುಣ್ಯಾತ್ಮರು ಸೋಷಿಯಲ್ ಮೀಡಿಯಾ ಮೂಲಕ ಚಂದ ಲೇಖನವನ್ನು ಬರೆದು ಚಾರಿಟಿಗೆ ಕರೆಕೊಟ್ಟರು. ಆರೇಳು ಲಕ್ಷ ರೂಪಾಯಿ ಸಂಗ್ರಹ ಆಯಿತು.
ಆದರೆ ಮುಂದೆ ಯಾರೋ ದಾನಿಗಳು ಕುತೂಹಲದಿಂದ ಫ್ಯಾಕ್ಟ್ ಚೆಕ್ ಮಾಡಿದಾಗ ಗೊತ್ತಾದ ವಿಷಯ ಏನೆಂದರೆ ಆ ಹುಡುಗನಿಗೆ 18 ವರ್ಷ ಆಗಿರಲಿಲ್ಲ! ಆ ಬೈಕ್ ಅವನದ್ದು ಅಲ್ಲ. ಅವನ ಹತ್ತಿರ ಡ್ರೈವಿಂಗ್ ಲೈಸನ್ಸ್ ಇರಲಿಲ್ಲ. ಹೆಲ್ಮೆಟ್ ಹಾಕಿರಲಿಲ್ಲ. ಹುಡುಗ ರಾಂಗ್ ಸೈಡಿಗೆ ಹೋಗಿ ಅಪಘಾತ ಮಾಡಿದ್ದ. ಶಾಕಿಂಗ್ ಏನೆಂದರೆ ಹುಡುಗನು ಬೈಕ್ ಓಡಿಸುವಾಗ ಕುಡಿದಿದ್ದ! ಇನ್ನೂ ಶಾಕಿಂಗ್ ಏನೆಂದರೆ ಕೊಟ್ಟ ಬ್ಯಾಂಕ್ ಖಾತೆಯು ಆ ಹುಡುಗನ ಕುಟುಂಬಕ್ಕೆ ಸಂಬಂಧ ಪಟ್ಟಿರಲೇ ಇಲ್ಲ! ಇದು ಕೂಡ ನಿಜವಾಗಿ ನಡೆದ ಘಟನೆ!
ಮುಂದೇನಾಯಿತು? ಆ ಅಪಘಾತ ಆದ ಹುಡುಗ ಏನಾದ? ಆ ದುಡ್ಡು ಸದ್ವಿನಿಯೋಗ ಆಯಿತಾ? ಇದನ್ನು ದುಡ್ಡು ಕೊಟ್ಟ ದಾನಿಗಳು ಯಾರೂ ವಿಚಾರಣೆ ಮಾಡಲೇ ಇಲ್ಲ!
ಒಂದು ಬಡ ಕುಟುಂಬ ಮತ್ತು ಮೂರು ತೆವಳುವ ಮಕ್ಕಳು!
ಒಂದು ಗ್ರಾಮದಲ್ಲಿ ಒಂದು ಬಡ ಕುಟುಂಬ ಇತ್ತು. ಗಂಡ ಕೂಲಿ ಕಾರ್ಮಿಕ. ಹೆಂಡತಿಯು ಬೀಡಿ ಕಟ್ಟುತ್ತಿದ್ದರು. ದುರದೃಷ್ಟ ಅಂದರೆ ಅವರಿಗೆ ಹುಟ್ಟಿದ ಮೂರೂ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಕಲತೆ ಹೊಂದಿದ ಮಕ್ಕಳು. ನೆಲದ ಮೇಲೆ ತೆವಳುವ ಮಕ್ಕಳು. ಇದು ನಿಜವಾಗಿಯು ದುರಂತ! ಯಾರೋ ಪುಣ್ಯಾತ್ಮರು ಸೋಷಿಯಲ್ ಮೀಡಿಯಾ ಮತ್ತು ಪತ್ರಿಕೆಗಳ ಮೂಲಕ ಲೇಖನ ಬರೆದು ಅಪೀಲ್ ಮಾಡಿದರು. ಅವರ ಖಾತೆಗೆ ಹಲವು ಲಕ್ಷ ದುಡ್ಡು ಬಂತು. ವಿದೇಶದಿಂದ ಕೂಡ ದಾನಿಗಳು ದೊಡ್ಡ ಮೊತ್ತವನ್ನು ಸಂಗ್ರಹ ಮಾಡಿ ಕಳುಹಿಸಿದರು.
ಆದರೆ ಮುಂದೆ ಏನಾಯಿತು?
ಅವರ ಮನೆಯ ಚಿತ್ರಣವು ಬದಲಾಯಿತು. ಹಂಚಿನ ಮನೆ ಹೋಗಿ ಆರ್ ಸಿ ಸಿ ಮನೆಯಾಯಿತು. ಮನೆಗೆ ಟಿವಿ, ಫ್ರಿಜ್, ವಾಷಿಂಗ್ ಮೆಶಿನ್ ಎಲ್ಲವೂ ಬಂತು. ಗಂಡ ಕೂಲಿ ಕೆಲಸವನ್ನು ಬಿಟ್ಟುಬಿಟ್ಟರು. ಹೆಂಡತಿ ಬೀಡಿ ಕಟ್ಟುವ ಕೆಲಸ ನಿಲ್ಲಿಸಿದರು. ಗಂಡ ಹೆಂಡತಿ ಇಬ್ಬರೂ ರಿಮೋಟ್ ಹಿಡಿದು ಟಿವಿ ಮುಂದೆ ಕೂರಲು ತೊಡಗಿದರು. ಆದರೆ ನೆಲದ ಮೇಲೆ ತೆವಳುವ ಆ ಮೂರು ಮಕ್ಕಳು ಇವತ್ತಿಗೂ ತೆವಳುತ್ತಾ ಇದ್ದಾರೆ! ಇದು ಕೂಡ ನಿಜವಾಗಿ ನಡೆದ ಘಟನೆ.
ಇನ್ಷ್ಯುರೆನ್ಸ್ ದೊಡ್ಡ ಮೊತ್ತ ದೊರೆತರೂ ಭಿಕ್ಷಾಪಾತ್ರೆ ಹಿಡಿದರು!
ಮತ್ತೊಂದು ರಸ್ತೆ ಅಪಘಾತ ಆಗಿತ್ತು. ದೊಡ್ಡ ಮೊತ್ತದ ಅಪಘಾತ ವಿಮೆ ಕ್ಲೈಮ್ ಆಗಿತ್ತು. ಶಾಸಕರ ಕಾಳಜಿಯಿಂದ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ದೊಡ್ಡ ಮೊತ್ತ ಕೂಡ ದೊರಕಿತ್ತು. ಆದರೂ ದುರಾಸೆಯಿಂದ ಅಪಘಾತ ನಡೆದು ಆರೇಳು ತಿಂಗಳ ನಂತರ ಸೋಷಿಯಲ್ ಮೀಡಿಯಾ ಚಾರಿಟಿಯ ಮೊರೆ ಹೋದರು! ತುಂಬಾ ದುಡ್ಡು ಸಂಗ್ರಹ ಆಯಿತು. ಅದು ಮುಂದೆ ಏನಾಯಿತು ಎಂದು ಯಾರಿಗೂ ಗೊತ್ತಾಗಲೆ ಇಲ್ಲ! ಇದು ಕೂಡ ನಿಜವಾಗಿ ನಡೆದ ಘಟನೆ.
ಖಂಡಿತ ಚಾರಿಟಿ ಮಾಡಿ. ಆದರೆ ಒಮ್ಮೆ ಫ್ಯಾಕ್ಟ್ ಚೆಕ್ ಮಾಡಿ!
ಇಂತಹ ನೂರಾರು ಘಟನೆಗಳು ನನ್ನ ಗಮನಕ್ಕೆ ಬಂದಿವೆ. ನಿಮ್ಮ ಗಮನಕ್ಕೂ ಬಂದಿರಬಹುದು! ನನ್ನ ಈ ಲೇಖನದ ಉದ್ದೇಶ ನಿಜವಾದ ಅರ್ಹತೆ ಇರುವವರಿಗೆ, ಪಾತ್ರರಿಗೆ ಸಹಾಯವನ್ನು ತಪ್ಪಿಸುವುದು ಅಲ್ಲವೇ ಅಲ್ಲ!
ಯಾವ ಪ್ರತಿಫಲ, ಹೆಸರು, ಕೀರ್ತಿ ಬಯಸದೆ ಚಾರಿಟಿ ಮಾಡುವ ದೇವತಾ ಮನುಷ್ಯರನ್ನು ನಿರಾಸೆ ಮಾಡುವುದೂ ಅಲ್ಲ. ನಿಜವಾದ ಕಾಳಜಿಯಿಂದ ಚಾರಿಟಿಗೆ ಕರೆ ಕೊಡುವ ಸಮಾಜಸೇವಕರು ಕೂಡ ಅಭಿನಂದನೀಯರು. ಈ ಮಾನವೀಯ ಸೇವೆಯು ಖಂಡಿತ ಮುಂದುವರೆಯಬೇಕು.
ಆದರೆ ನನ್ನ ವಿನಂತಿ ಏನೆಂದರೆ ಯಾರಿಗೂ ಚಾರಿಟಿಯನ್ನು ಮಾಡುವ ಮೊದಲು ಒಮ್ಮೆ ಕ್ರಾಸ್ ಚೆಕ್ ಮಾಡಿ! ಚಾರಿಟಿಯ ಕರೆ ಕೊಡುವವರು ಕೂಡ ಚೆಕ್ ಮಾಡಿ. ಇಂದು ಫ್ಯಾಕ್ಟ್ ಚೆಕ್ ಮಾಡಲು ಹತ್ತಾರು ದಾರಿಗಳು ಇವೆ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಾಳ ಸರಕಾರದ ದುರಾಸೆಗೆ ಬಲಿ ಆಗುತ್ತಿದೆ ದೇವ ಶಿಖರ
ಭರತ ವಾಕ್ಯ
ನೀವಿದನ್ನು ಮಾಡಲೇ ಬೇಕು ಎರಡು ಕಾರಣಕ್ಕೆ! ಒಂದು ನಿಜವಾಗಿ ಚಾರಿಟಿಯ ಅಗತ್ಯ ಇರುವ ಮಂದಿಗೆ ಮಾತ್ರ ಚಾರಿಟಿ ದೊರೆಯಬೇಕು. ಇನ್ನೊಂದು ಕಾರಣ ನಿಮ್ಮದು, ನಮ್ಮದು ಎಲ್ಲವೂ ಬೆವರು ಹರಿಸಿ ಸಂಪಾದನೆ ಮಾಡಿರುವ ದುಡ್ಡು ಅಲ್ಲವೇ?