Site icon Vistara News

ಅನಿಸಿಕೆ: Indian Democracy: ಪರಮಾಧಿಕಾರ ಮತ್ತು ಸಮಾನತೆ ಎಂಬ ಸವಕಲು ನಾಣ್ಯಗಳು

equality

| ಮೋಹನದಾಸ ಕಿಣಿ, ಕಾಪು

ಪ್ರಜಾಪ್ರಭುತ್ವದಲ್ಲಿ ಜನಾದೇಶವೇ ಅಂತಿಮ, ಜನರು ಆರಿಸಿದ ಜನಪ್ರತಿನಿಧಿಗಳು ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೆ, ಹಾಗೆ ಆಯ್ಕೆಯಾದವರು ಆಡಳಿತದ ಮುಖ್ಯಸ್ಥ ಅಂದರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಹಾಗೆ ಆಯ್ಕೆಯಾದ ಮುಖ್ಯಮಂತ್ರಿ ಸಂಪುಟ ರಚಿಸುತ್ತಾರೆ. ಸಂಪುಟ ಸದಸ್ಯರ ಆಯ್ಕೆ ಮತ್ತು ಖಾತೆಗಳ ವಿಂಗಡಣೆ ಇವೆಲ್ಲವೂ ಮುಖ್ಯಮಂತ್ರಿಯ ಪರಮಾಧಿಕಾರ. ಎಷ್ಟೊಂದು ಗಂಭೀರ ಮತ್ತು ಕಿವಿಗೆ ಇಂಪಾಗಿ ಕೇಳಿಸುವ ಮಾತುಗಳು ಅಲ್ಲವೇ? ಆದರೆ ವಾಸ್ತವವಾಗಿ ಹಾಗಿದೆಯೇ?

ಖಂಡಿತಾ ಇಲ್ಲ. ಇದು ಇಂದು ನಿನ್ನೆಯ ಮಾತಲ್ಲ. ದೇಶದ ಮೊದಲ ಪ್ರಧಾನಿಯಾಗಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ, 13 ಪದಾಧಿಕಾರಿಗಳು ಆರಿಸಿದ್ದ ಸರ್ದಾರ್ ಪಟೇಲ್ ಅವರನ್ನು ಬದಿಗಿರಿಸಿ, ಕೇವಲ ಇಬ್ಬರು ಆಯ್ಕೆ ಮಾಡಿದ ಜವಾಹರಲಾಲ್ ನೆಹರೂ ಅವರನ್ನು ಗಾಂಧೀಜಿಯವರು ಪ್ರಧಾನಿ ಪಟ್ಟಕ್ಕೆ ಕುಳ್ಳಿರಿಸಿದಲ್ಲಿಂದ ಈ ವಿಡಂಬನೆ ಆರಂಭವಾಗುತ್ತದೆ. ಮೈಸೂರು ರಾಜ್ಯದ ರಚನೆಯ ನಂತರ ಕೆ.ಸಿ.ರೆಡ್ಡಿ ಮೊದಲನೇ ಮುಖ್ಯಮಂತ್ರಿ. ಆದರೆ ಮೊದಲನೇ ಚುನಾವಣೆಯ ನಂತರ ವಿಧಾನಸಭೆ ರಚನೆಯಾದಾಗ ಕೆ.ಸಿ.ರೆಡ್ಡಿಯವರ ಬದಲು ಆಗ ಪ್ರಧಾನಿಯೂ ಪಕ್ಷದ ಅಧ್ಯಕ್ಷರೂ ಆಗಿದ್ದ ನೆಹರೂ ಅವರ ಸೂಚನೆಯಂತೆ ಕೆಂಗಲ್ ಹನುಮಂತಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಸ್ಥಾಪಿಸಲಾಯಿತು.

ಬಹುಶಃ ರಾಮಕೃಷ್ಣ ಹೆಗಡೆ ಹೊರತುಪಡಿಸಿ ಬೇರೆ ಎಲ್ಲರೂ “ಮೇಲಿನಿಂದ” ಬಂದವರೇ ಹೊರತು ಯಾರೊಬ್ಬರೂ ಶಾಸಕರು ಆಯ್ಕೆ ಮಾಡಿದವರಲ್ಲ. ಹಾಗಿರುವಾಗ ಜನಾದೇಶವೇ ಅಂತಿಮ, ಆಡಳಿತದ ಮುಖ್ಯಸ್ಥರಾಗಿ ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಆರಿಸುವವರೇ ಆಗುತ್ತಾರೆಂಬುದು ಸುಳ್ಳು ತಾನೇ? ಹಾಗೆಯೇ ಇದು ಕೇವಲ ನೆಹರು ಕುಟುಂಬದ ವಿಷಯವಾಗಿರಲಿಲ್ಲ. ಪಿ.ವಿ.ನರಸಿಂಹ ರಾವ್ ಅಧಿಕಾರದಲ್ಲಿ ಇರುವಾಗಲೂ ರಾಜ್ಯದ ಮುಖ್ಯಮಂತ್ರಿಗಳ ಆಯ್ಕೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡುವ ಒಂದು ಸಾಲಿನ ನಿರ್ಣಯವನ್ನು ರಾಜ್ಯಗಳ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ. ನಂತರ ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಮುಚ್ಚಿದ ಲಕೋಟೆಯಲ್ಲಿ ತಿಳಿಸಲಾಗುತ್ತಿತ್ತು. ಬಳಿಕ ಔಪಚಾರಿಕವಾಗಿ ಅವರ ಹೆಸರನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ.

ಇಲ್ಲಿಗೇ ಮುಗಿಯುವುದಿಲ್ಲ. ಸಂಪುಟ ರಚನೆ, ಖಾತೆಗಳ ವಿತರಣೆ ಇವು ಕೂಡಾ ಮುಖ್ಯಮಂತ್ರಿಯವರ ಪರಮಾಧಿಕಾರವೆಂಬ ಎರಡನೇ ಇಂಪಾದ ಪದಪುಂಜವಾಡಿ ಉಳಿಯುವುದೇ ಹೊರತು ಬೇರೇನಿಲ್ಲ. ಇಲ್ಲೂ ಅದೇ ರಾಗ, ಅದೇ ಹಾಡು! ಸಂಪುಟ ಸದಸ್ಯರ ಆಯ್ಕೆ, ಖಾತೆ ಹಂಚಿಕೆ ಎಲ್ಲವೂ ಹೈಕಮಾಂಡ್ ನಿರ್ದೇಶನದಂತೆ ನಡೆಯುತ್ತದೆ. ಇದಿಷ್ಟು ಸರ್ಕಾರ ರಚನೆಗೆ ಸಂಬಂಧಿಸಿದ ವಿಷಯವಾದರೆ, ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ಅವಧಿಯಲ್ಲಿ ನೋಂದಾಯಿತ ಪಕ್ಷಗಳು ಆಂತರಿಕ ಚುನಾವಣೆ ನಡೆಸಿ ತಮ್ಮ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು. ಆದರೆ ಇಂದು ಯಾವ ಪಕ್ಷವೂ ಹೀಗೆ ಮಾಡಿದ್ದಿಲ್ಲ. ಕೆಲವರು ಮಾಡಿದ್ದರೂ ಅದೆಲ್ಲವೂ ಕಾಟಾಚಾರಕ್ಕೆ ಮಾತ್ರ. ಪಕ್ಷದ ಪ್ರಾಥಮಿಕ ಸದಸ್ಯರಿಂದ ಚುನಾವಣೆ ಮೂಲಕ ಕ್ರಮಬದ್ಧವಾಗಿ ಆಯ್ಕೆ ಆದವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಇನ್ನು ಸಂವಿಧಾನದ 14ನೇ ಅನುಚ್ಛೇದ, ಕಾನೂನಿನೆದುರು ಎಲ್ಲರೂ ಸಮಾನ ಎಂದು ಸ್ಪಷ್ಟಪಡಿಸುತ್ತದೆ. ಆದರೆ ಈ ಮುಂದೆ ಹೇಳುವ ಒಂದೆರಡು ಉದಾಹರಣೆಗಳು ಇದು ಎಷ್ಟರಮಟ್ಟಿಗೆ ಪಾಲನೆ ಆಗುತ್ತಿದೆ ನೋಡಿ.

ಇದನ್ನೂ ಓದಿ: ಇಂದು ಕುಮಾರವ್ಯಾಸ ಜಯಂತಿ | ವಿಶೇಷ ಲೇಖನ | ಕುಮಾರವ್ಯಾಸನ ರಾಜಧರ್ಮ

ಒಂದೆರಡು ನಿಯಮಗಳನ್ನು ಹೊರತುಪಡಿಸಿ, ಸರ್ಕಾರಿ ಉದ್ಯೋಗಿ ಮತ್ತು ಜನಪ್ರತಿನಿಧಿಗಳಿಬ್ಬರೂ ನಾಗರಿಕ ಸೇವಾ ನಿಯಮಗಳಿಗೆ ಬದ್ಧರಾಗಿರಬೇಕು. ಪ್ರತಿ ವರ್ಷ ಏಪ್ರಿಲ್ ಅಂತ್ಯಕ್ಕೆ ಅನ್ವಯಿಸಿ ಸರ್ಕಾರಿ ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ತಾವು ಹೊಂದಿರುವ ಆಸ್ತಿ ಮತ್ತು ಸಾಲದ ವಿವರಗಳನ್ನು ಸಲ್ಲಿಸಬೇಕು. ಉದ್ಯೋಗಿಗಳು ಹಾಗೆ ವಿವರಗಳನ್ನು ಸಲ್ಲಿಸಲು ತಪ್ಪಿದರೆ, ಅವರಿಗೆ ವಾರ್ಷಿಕ ವೇತನ ಬಡ್ತಿ ತಡೆಹಿಡಿದು, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಆದರೆ ಪ್ರತೀ ವರ್ಷ ಶಾಸಕರಲ್ಲಿ ಮತ್ತು ಸಚಿವರಲ್ಲಿ ಕೆಲವರಾದರೂ ವಿವರಗಳನ್ನು ಸಲ್ಲಿಸದಿರುವುದು ವರದಿಯಾಗುತ್ತದೆ, ಅಂತವರ ವಿವರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ. ಆದರೆ ಅವರ ಸೌಲಭ್ಯಗಳನ್ನು ತಡೆದು ಶಿಸ್ತು ಕ್ರಮ ಕೈಕೊಂಡ ಬಗ್ಗೆ ವರದಿಯಾದದ್ದಿದೆಯೇ?

ಸರಕಾರಿ ಸಿಬ್ಬಂದಿ ಯಾವುದಾದರೂ ಪ್ರಕರಣದಲ್ಲಿ ದಸ್ತಗಿರಿಯಾಗಿ 48 ಗಂಟೆ ಪೊಲೀಸ್ ವಶದಲ್ಲಿದ್ದರೆ ಸಾಕು, ಮೊಕದ್ದಮೆ ದಾಖಲಾಗಬೇಕೆಂದೂ ಇಲ್ಲ, ಸೇವೆಯಿಂದ ಅಮಾನತುಗೊಳಿಸಲಾಗುತ್ತದೆ. ಆದರೆ ಜನಪ್ರತಿನಿಧಿಗಳ ಅಥವಾ ಯಾವುದೇ ರಾಜಕಾರಣಿಯ ವಿರುದ್ಧವಾದರೂ ಮೊಕದ್ದಮೆ ದಾಖಲಾದರೆ ತಕ್ಷಣ ಯಾವುದೇ ಕ್ರಮವಿಲ್ಲ. ಹೆಚ್ಚೆಂದರೆ ಹುದ್ದೆಗೆ ರಾಜೀನಾಮೆ ನೀಡಬಹುದು. ರಾಜೀನಾಮೆ ನೀಡಿದ ನಂತರ ಶರವೇಗದಲ್ಲಿ ಪ್ರಕರಣದ ತನಿಖೆ ನಡೆಯುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತದೆ, ಹಾಗೂ ಅವರನ್ನು ಅಧಿಕಾರಕ್ಕೆ ಮರು ಸ್ಥಾಪನೆ ಮಾಡಲಾಗುತ್ತದೆ! ಯಾವುದಾದರೂ ಕಾರಣದಿಂದ ತನಿಖೆ, ವಿಚಾರಣೆ ಮುಂದುವರಿದರೆ, ಅಧಿಕಾರ ಅಬಾಧಿತವಾಗಿ ಮುಂದುವರಿಯುತ್ತದೆ. ಎಲ್ಲೋ ಅಪರೂಪಕ್ಕೆ ಕನಿಷ್ಠ ಎರಡು ವರ್ಷಕ್ಕೆ ಮೇಲ್ಪಟ್ಟ ಅವಧಿಯ ಶಿಕ್ಷೆಯಾದರೆ ಆಗ ಮಾತ್ರ ಆರು ವರ್ಷ ಸ್ಪರ್ಧೆಗೆ ಅನರ್ಹರಾಗುತ್ತಾರೆ. ಆದರೂ ಕಾರಾಗೃಹದ ವಾಸವೆಂಬುದು ಕೇವಲ ತೋರಿಕೆಗೆ ಮಾತ್ರ. ಅವರಿಗೆ, ಕಾರಾಗೃಹಕ್ಕೆ ಬಂದೊಡನೆ ಎಲ್ಲಿಲ್ಲದ ರೋಗಗಳು ವಕ್ಕರಿಸುತ್ತವೆ. ಆಸ್ಪತ್ರೆಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಮನೆಗಿಂತ ಹೆಚ್ಚಿನ ರಾಜಭೋಗ ಸಿಗುತ್ತದೆ.ಅದಕ್ಕೂ ಮಿಗಿಲಾಗಿ, ಕೆಲವು ಸಿನಿಮಾ ನಟರು, ರಾಜಕೀಯ ನಾಯಕರಿಗೆ ದೀರ್ಘಾವಧಿ ಶಿಕ್ಷೆ ವಿಧಿಸಲಾಗಿದ್ದರೂ, ಅರ್ಧಕ್ಕೂ ಹೆಚ್ಚಿನ ಅವಧಿಗೆ ಒಂದಲ್ಲ ಒಂದು ಕಾರಣಕ್ಕೆ ಪೆರೋಲ್ ಮೇಲೆ ಹೊರಗಿದ್ದರು.

ಇದನ್ನೂ ಓದಿ: ವಿಶೇಷ ಲೇಖನ | ಮೋಹನ್‌ ಭಾಗವತ್‌ ಅವರ ಮಾತುಗಳ ಅರ್ಥವೇನು?

ಅದೇ ಸಾಮಾನ್ಯ ಜನರಿಗೆ? ದಸ್ತಗಿರಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸದೇ ಕಾಲಹರಣ ಒಂದೆಡೆಯಾದರೆ, ವಿಚಾರಣೆ ವರ್ಷಗಟ್ಟಲೆ ಕಳೆದು, ವಿಚಾರಣಾಧೀನ ಕೈದಿಯಾಗಿ ಕಾರಾಗೃಹದಲ್ಲಿ ಕೊಳೆದ ಪ್ರಸಂಗಗಳು ಬಹಳಷ್ಟಿವೆ. ಒಂದು ಪ್ರಕರಣದಲ್ಲಂತೂ ಸುಮಾರು ಇಪ್ಪತ್ತು ವರ್ಷಕ್ಕೂ ಹೆಚ್ಚು ಎಳೆದಾಡಿ ಕೊನೆಗೆ ನಿರಪರಾಧಿ ಎಂದು ಘೋಷಿಸಲ್ಪಟ್ಟದ್ದು ವರದಿಯಾಗಿತ್ತು. ಇಷ್ಟು ವರ್ಷಗಳ ಕಾಲ ಬದುಕಿನ ಅಮೂಲ್ಯ ಯೌವ್ವನದ ದಿನಗಳನ್ನು ವ್ಯರ್ಥ ಮಾಡಿದ್ದಕ್ಕೆ ಯಾರು ಹೊಣೆ? ರಾಜಕಾರಣಿಗಳು ಸರಿಯಾಗಿ ಎದ್ದು ನಿಲ್ಲಲು ಸಾಧ್ಯವಿಲ್ಲದಷ್ಟು ವಯಸ್ಸು, ಅನಾರೋಗ್ಯದಿಂದ ಬಳಲುತ್ತಿದ್ದರೂ ಅಧಿಕಾರ ಬೇಕು. ಹಾಗಾದರೆ ಎಲ್ಲಿದೆ ಸಮಾನತೆ?

ಒಟ್ಟರ್ಥ ಇಷ್ಟೇ: ಪ್ರಭಾವಿಗಳು ಏನು ಮಾಡಿದರೂ ದಕ್ಕಿಸಿಕೊಳ್ಳುತ್ತಾರೆ, ಇಲ್ಲದವರು ಮಾತ್ರ ಸದಾಕಾಲ “ಇಕ್ಕಿಸಿಕೊಳ್ಳುತ್ತಾರೆ”! ಹಾಗಾದರೆ ಕೆಟ್ಟಿರುವುದು ವ್ಯವಸ್ಥೆಯೋ, ಕಾನೂನೋ ಅಥವಾ ನಾವೋ?

(ಲೇಖಕರು ಆರೋಗ್ಯ ಇಲಾಖೆ ನಿವೃತ್ತ ಕಚೇರಿ ಅಧೀಕ್ಷಕ, ಹವ್ಯಾಸಿ ಬರಹಗಾರ)

Exit mobile version