ಗಮಕ ವಿದ್ವಾನ್ ಡಾ. ಎಂ.ಆರ್. ಸತ್ಯನಾರಾಯಣ
ಬಣಗು ಕವಿಗಳ ಲೆಕ್ಕಿಸದ ಕುಮಾರವ್ಯಾಸ ಕನ್ನಡ ಕಾವ್ಯ ಲೋಕದ ಚಕ್ರವರ್ತಿ. ಇವನ ಭಾರತ ಕಥಾ ಮಂಜರಿ ಹಾಡುಗರಿಗೆ ಭಾವರಸಾಯನ, ಕೇಳುಗರಿಗೆ ಕರ್ಣರಸಾಯನ, ಹಾಡದೇ, ಕೇಳದೇ ಓದುವವರಿಗೆ ಒಂದು ಅದ್ಬುತ ಕಥಾನಕ. ಬಹುಶಃ ಈ ಮಹಾಕವಿಯ ಹಾಗೂ ಅವನ ಕಾವ್ಯ ಕುರಿತ ವಿಮರ್ಶೆಗಳು, ಲೇಖನಗಳು, ಅನೇಕ ಬಗೆ ಬಗೆಯ ಕಾವ್ಯ ಕೃತಿಗಳು ಅಗಣಿತ. ಹೀಗಾಗಿ ಕುಮಾರವ್ಯಾಸ ಜನಜನಿತ.
ಕಥಾ ನಾಯಕನಿಗೇ ಕಥೆಯನ್ನು ತಿಳಿಯಾಗಿ ತಿಳಿಯಪಡಿಸುವ ಜಾಣ್ಮೆ ಈತನದು. ಕಥೆ ದ್ವಾಪರದ್ದಾದರೂ ಯಾವ ಕಾಲಕ್ಕೂ ಅದು ಜನಪರವೆ. ರಾಮಯಣವನ್ನು ಕಥಾ ವಸ್ತುವಾಗಿ ಆಯ್ಕೆ ಮಾಡದೆ. ಮಹಾಭಾರತವನ್ನೇ ಕಥಿಸಲು ಹೊರಟ ಈ ಕವಿ ವೀರನಾರಾಯಣನ ಕೃಪೆಯಿಂದ ಗೆದ್ದುಬೀಗಿದ್ದಾನೆ. ಒಂದೊಂದು ಪದ್ಯವು ವಿಶೇಷವಾಗಿ ಭಾವಗೀತಾತ್ಮಕವೆ; ಕರ್ನಾಟಕದ ಗಮಕಿಗಳ ಆರಾಧ್ಯದೈವ ಈ ಕವಿ. ಹೀಗಾಗಿ ಇಂದೂ ಸಹ ಎಲ್ಲಾದರು ಒಂದೆಡೆ ಕಾವ್ಯ ವಾಚನ, ವ್ಯಾಖ್ಯಾನಗಳು ನಡೆಯುತ್ತಲೇ ಇರುತ್ತವೆ. ಪ್ರಸ್ತುತ ನಾನು ಇಲ್ಲಿ ವ್ಯಕ್ತಪಡಿಸಬೇಕೆಂದಿರುವ ವಿಷಯ, ಇಂದಿನ ಕಾಲಕ್ರಮಕ್ಕನುಗುಣವಾಗಿ ಕವಿಯೇ ಹೆಣೆದಿರುವ ರಾಜಧರ್ಮವನ್ನು ಭಾರತ ಕಥೆಯ ಪಾತ್ರಗಳು ನಾವು ನೀವೆ ನೀವು ನಾವೇ ಪ್ರತಿಯೊಬ್ಬರಲ್ಲೂ ಕಾವ್ಯದ ಪಾತ್ರಗಳು ತಮಗೆ ಅರಿವಿಲ್ಲದೆಯೇ ತಾನಾಗಿಯೇ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಳ್ಳುತ್ತವೆ.
ದ್ರೌಪದಿಯ-ಉತ್ಕಟಪ್ರೇಮ/ಭಕ್ತಿ, ಧರ್ಮರಾಯನ-ಸತ್ಯಧರ್ಮ, ಬೀಮನ-ಶೌರ್ಯ, ಅರ್ಜುನನ-ಪರಾಕ್ರಮ, ನಕುಲ, ಸಹದೇವರ-ಔಚಿತ್ಯ ಸಾಂಗತ್ಯ, ದುರ್ಯೋದನನ-ಛಲ, ಭೀಷ್ಮರ-ಮುದ್ಸದ್ಧಿತನ, ದ್ರೋಣರ-ಶರಗುರುತ್ವ, ಶಕುನಿಯ-ಕಿವಿಕಚ್ಚು, ಧೃತರಾಷ್ಟ್ರನ-ಪುತ್ರವ್ಯಾಮೋಹ, ವಿದುರನ-ನೀತಿ, ಸನತ್ ಸುಜಾತ ಮುನಿಗಳ-ಧರ್ಮೋಪದೇಶ, ನಾರದರ-ರಾಜಧರ್ಮ ಭೋದನೆ, ಅಶ್ವತ್ಥಾಮನ-ಮುಂಗೋಪ, ಕರ್ಣನ-ಅಸಹಾಯಕತೆ, ದೃಪದನ-ದ್ವೇಷ, ದೃಶ್ಯಾಸನನ-ಅಮಾನವೀಯತೆ, ಶಲ್ಯ ಸಾಹಸದ ವಿಫಲತೆ ಹೀಗೆ ಎಲ್ಲಾ ಪಾತ್ರಗಳು ಒಂದೆಡೆಯಾದರೆ ಕಥಾ ನಾಯಕನಾದ ಶ್ರೀಕೃಷ್ಣನ ಪಾತ್ರ ಮಾತ್ರ ಇನ್ನೊಂದೆಡೆ. ಇಲ್ಲಿ ಬೇರೆ ಯಾರೂ ಸಹ ಕೃಷ್ಣ ಸಮರಲ್ಲ. ಅಷ್ಟೇ ಏನು ಎಳ್ಳುಕಾಳಿನಷ್ಟೂ ಸಹ ನಿಲ್ಲಲಾರರು. ಕವಿಗೆ ಕೃಷ್ಣ ಪರದೇವ, ಪರಮದೈವ, ಇಷ್ಟದೇವರು. ಬೃಹತ್ ಕಥಾರಸಾಗರದಲ್ಲಿ ಅಲ್ಲಲ್ಲಿ ಕೃಷ್ಣ ಇಣುಕಿದರೂ ಅವನನ್ನು ಅಣುರೇಣು, ತೃಣಕಾಷ್ಟ ಪರಿಪೂರ್ಣನಾಗಿ ಕವಿ ಚಿತ್ರಿಸಿಬಿಡುತ್ತಾನೆ. ಹೀಗಾಗಿಯೇ ಇಲ್ಲಿ ಮಹಾಭಾರತದ ಕಥೆ ಎಂದು ಪ್ರಸಿದ್ಧಿ ಪಡೆದಿದ್ದರೂ ವಾಸ್ತವವಾಗಿ ಕವಿಯ ಪ್ರಕಾರ ಇದು ಕೃಷ್ಣನ ಕಥೆಯೇ! ಇಲ್ಲಿ ನಾನು ಸುಮ್ಮನೆ ಹಾಗೆ ನನ್ನ ಓದಿನ ಹಿನ್ನೆಲೆಯಲ್ಲಿ ಪ್ರಸ್ತುತ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಕವಿ ಚಿತ್ರಿಸಿರುವ ರಾಜಧರ್ಮವನ್ನು ವಿಶೇಷವಾಗಿ ಇಲ್ಲಿ ಪ್ರಸ್ತಾಪಿಸಲು ಮುಂದಾದೆ. ಆದರೆ, ವಾಸ್ತವವಾಗಿ ಅವನ ಕಾವ್ಯ ನನ್ನನ್ನು ಕಾಡಿನ ಎಲ್ಲೋ ಒಂದೆಡೆ ಕಳೆದುಹೋಗುವಂತೆ ಮಾಡಿರುವುದೇ ಅವನ ಕಾವ್ಯಶಕ್ತಿ.
ಇದಮಿತ್ಥಂ ಎಂದು ಮನಸ್ಸು ಮಾಡಿ ಹೇಳಲು ಹೊರಟಾಗಲು ಹಾದಿ ತಪ್ಪಿಸ್ಸುವ ಕಾವ್ಯ ಕುಮಾರವ್ಯಾಸನದು. ಹೇಗೆಂದರೆ, ಅನೇಕ ಸಂದರ್ಭಗಳಲ್ಲಿ ಈ ಕೆಲಸವನ್ನು ಕವಿಯೇ ಮಾಡಿದ್ದಾನೆ. ಉದಾಹರಣೆಗೆ ಕಥೆಗೆ ಪೂರಕವಾಗಿ ಕೃಷ್ಣ ಕಾಣಿಸಿಕೊಂಡರೂ ಅವನನ್ನು ಗಂಟೆಗಟ್ಟಲೆ ನಿಲ್ಲಿಸಿ, ಅವನ ದೈವತ್ವವನ್ನು ಹೊಗಳುವ ಭರದಲ್ಲಿ ಆ ಕಥೆಯ ಓಟವನ್ನೇ ಕೃಷ್ಣನಿಂದಾಗಿ ಮರೆತಿರುವನೆ ಎನಿಸಿಬಿಡುತ್ತದೆ. ಕಾವ್ಯ ಪ್ರವೇಶ ಮಾಡಿದೊಡನೆ, ಕವಿ ಕೃಷ್ಣನನ್ನು ಕಂಡೊಡನೆ ಹೇಗೆ ಹೊಲಬುತಪ್ಪುತ್ತಾನೊ ನನ್ನಂಥವನದೂ ಅದೇಸ್ಥಿತಿ. ಈ ಹೇಳಿಕೆಗೆ ಅನೇಕ ಪ್ರಸಂಗಗಳನ್ನು ಉದಾಹರಣೆಯಾಗಿ ಕೊಡಬಹುದು. ಆದರೆ ಅದೇ ಒಂದು ದೀರ್ಘ ಪ್ರಬಂಧವಾಗುತ್ತದೆ. ಕುಮಾರವ್ಯಾಸನನ್ನು ತುಂಬಾ ಹಚ್ಚಿಕೊಂಡಿರುವ ನನಗೆ ಈ ಲೇಖನ ಬರೆಯುವಾಗ ಅನೇಕ ಅನುಭವವಾಗುತ್ತಿದೆ. ಹೇಳಬೇಕೆಂದಿದ್ದು ಕಾವ್ಯದಲ್ಲಿ ಬರುವ ರಾಜಧರ್ಮವನ್ನು, ಹೇಳಹೊರಟಿದ್ದು ಮತ್ತೇನನ್ನೋ. ಇರಲಿ, ಇವೆಲ್ಲ ಕಾವ್ಯ ಮರಳು ಮಾಡುವ ಹುನ್ನಾರ.
ರಾಜಧರ್ಮ
ಮೊದಲು ನಾರದ ಆಮೇಲೆ ವಿದುರ ಇವರಿಬ್ಬರ ಉಪದೇಶವಾದ ಮೇಲೆ ಸಂದೇಹವೇನಾದರು ಉಳಿದಿದ್ದರೆ, ಸನತ್ಸುಜಾತರನ್ನು ಸ್ಮರಣೆ ಮಾಡಿ ಪರಿಹರಿಸಿಕೋ ಎಂದು ವಿದುರ ಧೃತರಾಷ್ಟ್ರನಿಗೆ ಹೇಳುತ್ತಾನೆ. ನಾರದ ವಿದುರರ ಭೋದನೆಯ ನಂತರ ಬರುವುದೇ ಸನತ್ಸುಜಾತ ನೀತಿ. ವಿದುರನ ಮಾತಿನಂತೆ ಧೃತರಾಷ್ಟ್ರ ಸನತ್ಸುಜಾತನನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಆ ಋಷಿ ಪ್ರತ್ಯಕ್ಷವಾಗುತ್ತಾನೆ. ಅರಸ ತನ್ನ ಮನದ ಇಂಗಿತವನ್ನು ಮುನಿಯ ಮುಂದೆ ಅರುಹಿ ತನಗೆ ಬ್ರಹ್ಮೋಪದೇಶವಾಗಬೇಕೆಂದು ಬಿನ್ನಹಿಸುತ್ತಾನೆ. ಮಹಾ ಕರುಣಿಯಾದ ಆ ಮುನಿ ಮುಕ್ತಿ ಸಾಧನವೆನಿಸುವಂತಹ ಪರತತ್ವ ಬೋಧನೆ ಮಾಡುತ್ತಾನೆ.
“ಚಿತ್ತವಿಸು ಧೃತರಾಷ್ಟ್ರ ದೃಪ ಪರ
ತತ್ವ ವಿದ್ಯಾ ವಿಷಯ ಭೇದವ
ಬಿತ್ತರಿಸುವೆನು ಸಕಲ ಚರಾಚರರೊಳಗೆ ನೀನು
ಉತ್ತಮಾಧಮವೆನ್ನದೆ ಕಾ
ಣುತ್ತ ಹರುಷ ವಿಷಾದದಲ್ಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆ.”
ಎಲೈ ಮಹಾರಾಜ ಜಗತ್ತಿನ ಸಕಲ ಚರಾಚರಗಳಲ್ಲಿ ಸಮಚಿತ್ತವಿಡು, ಮೇಲು-ಕೀಳು ಎಂಬ ಭೇದ-ಭಾವಕ್ಕೆ ಅವಕಾಶ ಮಾಡಿಕೊಡದೆ ಎಲ್ಲವನ್ನು ಸಮನಾಗಿ ಕಾಣು. ಹರುಷ ವಿಷಾದದಲ್ಲಿ ಮುಳುಗಬೇಡ.
“ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಭಜಿಸದಿರು ಅಹೋರಾತ್ರಿಯಲಿ ಧರ್ಮವನೇ ಸಂಗ್ರಹಿಸು”
ಈ ಮಾತು ಕಿವಿಗೆ ಬಿದ್ದೊಡನೆ ದಾಸರ ಪದ “ದುಷ್ಟರ ಸಂಗವ ಬಿಡಿಸದಿದ್ದೊಡೆ ನಿನಗೆ ಆಣೆ ರಂಗ”. ಎಂಬ ಪದ ನೆನಪಿಗೆ ಬರುತ್ತದೆ. ಇಲ್ಲಿಯ ನೀತಿ ಏನೆಂದರೆ ದುಷ್ಟನಿಂದ ದೂರವಿರು ಸತ್ಸಂಗವನ್ನು ವೃದ್ಧಿಸಿಕೋ ವೃಥಾ ಗಜಭಜಿಸದೆ ಧರ್ಮರಕ್ಷಣೆಯಲ್ಲಿ ನಿರತನಾಗು ಈ ದೇಹ ಶಾಶ್ವತವಲ್ಲ. ಐಶ್ವರ್ಯ, ಅಧಿಕಾರ, ದರ್ಪ, ದೌಲತ್ತು ಇವೆಲ್ಲ ಮಾಯಾ ರೂಪದ ವಿವಿಧ ಮುಖಗಳು. ಅವುಗಳೆಲ್ಲವನ್ನು ನೀನು ಮೃತ್ಯುವೆಂದೇ ಭಾವಿಸು. ಇಂತಹ ಧರ್ಮ ಸೂಕ್ಷ್ಮಗಳನ್ನು ಅರಿತು ಹಿಂದೆ ನಡೆದುಕೊಂಡ ಮಹಾತ್ಮರ ನುಡಿಯಂತೆ ಮುಕ್ತಿ ಸಾಮ್ರಾಜ್ಯದ ವಿಜಯಕ್ಕಾಗಿ ಜಪಿಸು. ಅಧಿಕಾರ ಇದ್ದಾಗ ವೃಥಾ ಕಾಲಹರಣ ಸಲ್ಲದು. ಅಧಿಕಾರ ಚುಕ್ಕಾಣಿ ಹಿಡಿದವನಿಗೆ ಕೆಡಕುಗಳೆ ಜಾಸ್ತಿ. ಯಾವ ತಪ್ಪು ಮಾಡದಿದ್ದರೂ ಅವು ತಾನಾಗಿಯೇ ಅಂಟಿಕೊಳ್ಳುತ್ತವೆ. ಹೇಗೆಂದರೆ, ಶಿಷ್ಯನ ದೋಷ ಗುರುವಿಗೆ ತಟ್ಟುವಂತೆ, ಲೋಕದ ಜನರ ಡೊಂಕನ್ನು ತಿದ್ದಲು ಆಗುವುದೇ? ಜನ ಇರುವುದೇ ಹಾಗೆ. ಅವರ ಸ್ವಭಾವವು ವಿಚಿತ್ರ. ಸೋಜಿಗ ಎಂದರೆ ದುರ್ಜನರಿಗೆ ಹೆದರುವುದು. ಉದಾಹರಣೆಗೆ ಗರುಡನನ್ನು ಪೂಜಿಸುವ ಜನ, ಅವನ ಚರಣದಲ್ಲಿರುವ ಹಾವನ್ನು ಪೂಜಿಸುವಂತೆ; ಭಕ್ತಿ ಎಷ್ಟೇ ಇದ್ದರು ಭಯ ಮನೆಮಾಡಿರುವುದರಿಂದ ಮೂಢರು ಅನ್ಯ ಮಾರ್ಗ ಹಿಡಿಯುತ್ತಾರೆ. ದುರ್ಜನರಿಗೆ ಹೆದರುವ ಲೋಕ ಸಜ್ಜನರನ್ನು ಲೆಕ್ಕಿಸದು.
“ಜ್ಞಾನಿಗಳನ್ನು ಒಡಬಡಿಸಬಹುದು
ಅಜ್ಞಾನಿಗಳನ್ನು ಹೌದು ಎನಿಸಬಹುದು
ಅರ್ಧಂಬರ್ಧ ತಿಳುವಳಿಕೆಯ ಕೆಟ್ಟ ವಿದ್ವಾಂಸರಿಗೆ
ಬುದ್ಧಿ ಹೇಳುವುದು ಕಷ್ಟ”.
ನಾನು ಒಡೆಯ, ದಂಡಾಧೀಶ, ಸ್ವತಃ ಗುರು, ಎಲ್ಲರಿಗಿಂತ ಮೇಲು, ಎಲ್ಲರಿಗಿಂತ ನಾನೇ ಸತ್ಯವಂತ ಎಂದು ತಾನಿರುವ ತನಕ ಕೊಚ್ಚಿಕೊಳ್ಳುವ ಜಂಬಿಸುವ ಅವನು ಸತ್ತಮೇಲೆ “ಹೆಣವಷ್ಟೆ”.
ಹಾಗೆಯೇ ವಿವೇಕ, ಅಜ್ಞಾನ ಇವೆರಡರ ಸೂಕ್ಷ್ಮ ಅರಿತದ್ದು ದಾನ ಧರ್ಮ ಪರೋಪಕಾರ ಇವುಗಳಿಗೆ ಪ್ರಾಶಸ್ತ್ಯ ಕೊಡುವವನು ಮನುಷ್ಯ ಎನಿಸಿಕೊಳ್ಳುತ್ತಾನೆ. ಎಲೈ ದೊರೆಯೆ ಈಗ ಹೇಳುವುದನ್ನು ಗಮನವಿಟ್ಟು ಕೇಳು.
“ವೇದ ನಾಲ್ಕು ಆಶ್ರಮವು ನಾಲ್ಕು
ಆದಿ ಮೂರುತಿ ನಾಲ್ಕು ವರ್ಣ ವಿಭೇದ ನಾಲ್ಕು
ಕರಣ ನಾಲ್ಕು ಉಪಾಯ ನಾಲ್ಕರ ಹಾದಿಯರಿದು ವಿಮುಕ್ತ
ನಾಲುಕನೈದುವನು ಸಂದೇಹವೇ ಹೇಳು.”
ಹೀಗೆ ಭೋದನೆ ಒಂದೇ ಸಮನೆ ಸಾಗುತ್ತದೆ. ಓದುಗನಿಗೆ ಕುತೂಹಲ, ಇದೇನು ಒಬ್ಬ ರಾಜನಾದ ಮಾತ್ರಕ್ಕೆ ಇಷ್ಟೆಲ್ಲ ತಿಳಿಯುವುದಕ್ಕೆ ಸಾಧ್ಯವೇ. ತಿಳಿದರೂ ಅನುಷ್ಠಾನಗೊಳಿಸುವ ಬಗೆ ಹೇಗೆ? ಸದ್ಗುಣಗಳ ಧಣಿ ಹೊಸ ಸಹಸ್ರ ಮಾನದಲ್ಲಿ ಕಾಣಲು ಸಾಧ್ಯವೆ ಎಂಬ ಅನುಮಾನಗಳು ಕಾಡದೆ ಇರುವುದಿಲ್ಲ. ಕುಮಾರವ್ಯಾಸನ ಮೂಲ ವಾಣಿಯನ್ನು ಕೇಳಿದಾಗ, ಓದಿದಾಗ, ಹಾಡಿದಾಗ ಆಗುವ ಆನಂದವೇ ಬೇರೆ. ಎಲ್ಲಾ ಪದ್ಯಗಳು ವಿವರಣೆ ಬಯಸುವುದಿಲ್ಲ. ಪದ್ಯಗಳು ಓದ ಹೋದಂತೆ ಅರ್ಥವಾಗಲು ಸಾಧ್ಯ. ನೀನೂ ಅಷ್ಟೇ.
ಈ ಹೊತ್ತಿಗಾಗಲೇ ಸನತ್ಸುಜಾತನ ನೀತಿ ರಾಜನ ಮನಸ್ಸಿಗೆ ನಾಟಿದೆ. ಅವನ ಬುದ್ಧಿ ಮೊದಲಿಗಿಂತ ಚುರುಕಾಗಿದೆ. ಹೇಗೆಂದರೆ, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಅರಸ ಕೇಳುತ್ತಾನೆ. ಅವನೆಲ್ಲ ಅನುಮಾನಗಳಿಗೆ ಮುನಿಯ ಉತ್ತರ ಸಮರ್ಪಕವಾಗಿರುತ್ತದೆ. ಲೇಖನ ಮುಗಿಸುವ ಮುನ್ನ ಮತ್ತೊಂದು ಪದ್ಯ.
“ಚೋರನನ್ನು ಕಂಟಕನ ಹಿಸುಣನ
ಜಾರನನು ಷಂಡನನು ಸಮಯ ವಿ
ಕಾರ ಭೇದಿಯನಿಂತಿರುವರನು ಕಂಡು ಮನ್ನಿಸದೆ
ದೂರದಲಿ ವರ್ಜಿಸುವುದು ಬಹಿ
ಷ್ಕಾರಗಳು ಸರ್ವಕ್ಕೆ ಇವರುಗಳು
ಸಾರಿದುದು ಸರ್ವೇಶ್ವರನ ಮತ ಅರಸ.
ರಾಜನಾದವನು ಆರು ಜನರಿಂದ ದೂರವಿರಬೇಕು. ಚೋರ, ಕಂಟಕ, ಚಾಡಿಕೋರ, ಜಾರ, ಷಂಡಸ್ವಭಾವ, ಜಾತಿಭೇದ ಮಾಡುವವ ಇವರನ್ನು ಹತ್ತಿರ ಸುಳಿಯದಂತೆ ಎಚ್ಚರವಹಿಸಿ ಸಮಾಜದಿಂದ ಬಹಿಷ್ಕರಿಸಬೇಕು. ಅಲ್ಲದೆ, ವ್ಯರ್ಥರೊಡನೆ ಒಡನಾಟ, ಸ್ವಾರ್ಥಿಗಳ ಸಹವಾಸ, ಬೇರೊಬ್ಬರಿಂದ ಬದುಕು ಇವೆಲ್ಲ ಅನರ್ಥಕಾರಿ, ಪ್ರಯೋಜನಕ್ಕೆ ಬಾರದ ಸಂತತಿ ಎಷ್ಟಿದ್ದರೇನು, ದಾನ ಶೀಲನಾದವನು ಅನರ್ಥ ಪರಂಪರೆಗೆ ಕಾರಣನಾಗುತ್ತಾನೆ. ತ್ರಿಕರ್ಣ ಶುದ್ಧಿ ಬಹುಮುಖ್ಯ. ಮನುಷ್ಯನಿಗೆ ನಿಜವಾದ ಆಶ್ರಯ ಎಂದರೆ “ಧರ್ಮ”ವೊಂದೆ, ಧರ್ಮ ಬಿಟ್ಟು ಬದುಕು ಶೂನ್ಯ. ಅನೀತಿವಂತನಾದ ಮಂತ್ರಿ, ನೀತಿ ಬಾಹೀರನಾದ ಪುರೋಹಿತ ಇಂತಹವರಿಂದ ರಾಜಾ ನಿನಗೆ ಕೇಡು ಕಟ್ಟಿಟ್ಟ ಬುತ್ತಿ.
ಓದುಗ ಮಿತ್ರರೆ, ವಿದುರನೀತಿ, ನಾರದರ ಉಪದೇಶ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ. ಆದರೆ ಸನತ್ಸುಜಾತ ಧೃತರಾಷ್ಟ್ರನಿಗೆ ಮಾಡುವ ‘ಬೋಧ’ ಸ್ವಲ್ಪ ಅಪರೂಪದ ಕಥಾ ಸಂದರ್ಭವೆಂದು ತಿಳಿದು ಅದನ್ನೇ ಸಂಕ್ಷಿಪ್ತ ಹೇಳುವ ಪ್ರಯತ್ನ ಮಾಡಿದ್ದೇನೆ. ‘122’ ಪದ್ಯಗಳಲ್ಲಿ ಸುಧೀರ್ಘವಾಗಿ ಬರುವ ಧರ್ಮೋಪದೇಶದ ಕೆಲವೇ ಅಂಶಗಳನ್ನು ಸಾರಸಂಗ್ರಹ ರೂಪದಲ್ಲಷ್ಟೇ ಲೇಖನಿಸಲು ಸಾಧ್ಯವಾಗಿದೆ.
ನಮೋ ಕುಮಾರವ್ಯಾಸ ಕವಿವರ ಸಮೂಹ ತಾರಾ ಚಂದ್ರ ಯೋಗೀಂದ್ರ ನಮೋ.
(ಲೇಖಕರು: ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಗಮಕ ಕಲಾ ಪರಿಷತ್ತು)