ಸುಮಾರು ಮೂರು ದಶಕಗಳ ಹಿಂದೆ ನಗರದ ಸೌಕರ್ಯಗಳಿಗೆ ಹೋಲಿಸಿದಾಗ ಹಳ್ಳಿಯ ಮಕ್ಕಳಿಗೆ ಕಲಿಕೆ ಕಷ್ಟದಾಯಕವಾಗಿತ್ತು. ಪಾಲಕರ ನಿರ್ಲಕ್ಷ್ಯ ಮತ್ತು ಮನೆಯ ಸ್ವಚ್ಛಂದ ಆಕರ್ಷಣೆಯಿಂದಾಗಿ ಊರು ಬಿಟ್ಟು ದೂರದ ನೆಂಟರ ಅಥವ ಪರಿಚಿತರ ಅವಿಭಕ್ತ ಕುಟುಂಬದಲ್ಲುಳಿದು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಮಕ್ಕಳು ಹಲವು ಅಡಚಣೆಗಳನ್ನು ದಾಟಬೇಕಿತ್ತು. ಊಟಕ್ಕುಳಿಯುತ್ತಿದ್ದ ಮನೆಗಳಲ್ಲಿ ನಿತ್ಯ ಪಡಿಚಾಕರಿಗೆ ಮಕ್ಕಳು ಓದಿನ ನಡುವೆ ಒದಗಬೇಕಿತ್ತು. ಬಿಡಾರವಿಲ್ಲದ ಮಾಸ್ತರ ಅನ್ನ-ವಸತಿಗೂ ಮುಂದಾಗುತ್ತಿದ್ದ ಉದಾರ ಹೃದಯದ ಹಿರಿಯರ ಕಾಲ ಅದು. ಶಾಲೆಯಲ್ಲಿ ಶಿಸ್ತಿನ ಕಟ್ಟುಪಾಡುಗಳಿಂದ ಭೀತಿಯ ವಾತಾವರಣವಿರುತ್ತಿತ್ತು. ದಡ ಸೇರಿದ ಕೆಲ ಪ್ರತಿಭಾವಂತ ಮಕ್ಕಳಿಗೆ ಮತ್ತು ಹಳ್ಳಿಯ ಬಿಡಾರದಲ್ಲಿ ಹೇಗೋ ಸಂಸಾರ ತೂಗಿದ ಶಿಕ್ಷಕರಿಗೆ ಈ ಕಷ್ಟಸಹಿಷ್ಣುತೆಯೇ ಅವರ ಜೀವನದ ಮಹತ್ತರ ಸಾಧನೆಯಾಗಿ ಕಾಣುತ್ತದೆ. ಆದರೆ ಕುರುಡು, ಕಿವುಡು ಮತ್ತು ಮೂಕನಾಗಿರುವ ಅಸಹಜ ಮನುಷ್ಯನೊಬ್ಬ ಜಗತ್ತನ್ನು ಅರಿಯುವಾಗ ಅನುಭವಿಸಿದ ಸಂಕಟ ಮತ್ತು ಸಂವಹನ ಅಭಿವ್ಯಕ್ತಿಗಾಗಿ ನಡೆಸಿದ ಹೋರಾಟ ಅಸಾಧಾರಣವಾದದ್ದು.
ಸಾಮಾನ್ಯ ಅಡಚಣೆಗಳನ್ನು ಸಹಿಸುತ್ತ ಕಲಿಯುವ ಮಕ್ಕಳೂ ಅವರಿಗೆ ಕಲಿಯಲು ಸಹಾಯ ಮಾಡುತ್ತಿರುವ ಶಿಕ್ಷಕರೂ ದೃಷ್ಟಿ, ಶ್ರವಣ ಮತ್ತು ಮಾತು ಕಳೆದುಕೊಂಡ ಮಕ್ಕಳು ಅನುಭವವನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುವ ಸಾಹಸ ಜೀವನಗಾಥೆಯನ್ನು ತಿಳಿದುಕೊಂಡಾಗ ಮಾತ್ರ ಪಂಚೇಂದ್ರಿಯಗಳ ಮಹತ್ವ ಅರ್ಥವಾಗುತ್ತದೆ. ದೇಹದ ದೋಷಗಳಿಂದ ಮನಸು ನರಕವಾದಾಗ ಬಾಹ್ಯ ತೊಂದರೆಗಳು ನಿಕೃಷ್ಟವೆನಿಸುತ್ತವೆ. ಓದನ್ನು ಅರ್ಧಕ್ಕೆ ನಿಲ್ಲಿಸಿದ ಮಕ್ಕಳು ಮತ್ತು ಅಂಥ ಮಕ್ಕಳ ಪ್ರತಿಭೆಯನ್ನು ಗುರುತಿಸಲಾರದ ಶಿಕ್ಷಕರು ಸ್ಪರ್ಶ ಮಾತ್ರದಿಂದ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿದ ಅಸಮಾನ್ಯ ಮಹಿಳೆ ಹೆಲನ್ ಕೆಲ್ಲರ್ ಮತ್ತು ಅವಳ ಜೀವಮಾನದ ಶಿಕ್ಷಕಿ ಅನ್ನೆ ಸಲಿವನ್ ಅವರ ಸಾಹಸದ ಕತೆಯನ್ನು ಕೇಳಬೇಕು.
ಹೆಲೆನ್ ಹತ್ತೊಂಬತ್ತನೇ ತಿಂಗಳಿನಲ್ಲಿದ್ದಾಗ ವಿಚಿತ್ರ ಜ್ವರದಿಂದ ಕಿವುಡಿಯೂ ಮೂಕಿಯೂ ಕುರುಡಿಯೂ ಆದಳು. ಸ್ಫುರದ್ರೂಪಿಯಾದ ಅವಳು ಹೊರ ನೋಟಕ್ಕೆ ಎಲ್ಲ ಬಾಲಕಿಯರಂತೆ ಸಹಜವಾಗಿಯೇ ಇದ್ದಳು. ಸ್ಪರ್ಶ ಮಾತ್ರದಿಂದ ಜಗತ್ತಿನ ಇರುವಿಕೆಯ ಅನುಭವವನ್ನು ಪಡೆಯಬೇಕಿತ್ತು. ಚಿತ್ರ ಮತ್ತು ದನಿಯ ಸಾರವನ್ನು ಹೊಂದಿರುವ ಶಾಬ್ದಿಕ ಭಾಷೆಯ ಸಂಪೂರ್ಣ ಅನುಪಸ್ಥಿತಿಯಲ್ಲಿ ನಾಮ-ರೂಪ-ಗುಣವಿಶೇಷಗಳ ಪ್ರತಿ ಸೃಷ್ಟಿಯಲ್ಲಿ ಪದಾರ್ಥ ಜಗತ್ತನ್ನು ಅರಿಯುವುದು ಅತ್ಯಂತ ಕಷ್ಟ. ಸಂಪೂರ್ಣ ನಿಃಶ್ಯಬ್ದ ಮತ್ತು ಕತ್ತಲು ಕವಿದ ಮನಸಿನ ಅಸ್ತಿತ್ವದ ಸ್ವರೂಪ ಊಹೆಗೂ ಮೀರಿದ್ದು. ನಿರಂತರ ಸಂಕಟವನ್ನು ಹೇಳಲಾರದ ಹೆಲೆನ್‌ಳ ಅಸಹಾಯಕತೆ ಹಟ, ಆವೇಶ, ಆಕ್ರೋಶದ ಮೂಲಕ ವ್ಯಕ್ತವಾಗುತ್ತಿತ್ತು. ಒಮ್ಮೆ ಹೆಲೆನ್ ತಂದೆ, ತಾಯಿಯಿದ್ದ ಕೋಣೆಗೆ ಬೀಗ ಜಡಿದು ಚಾವಿಯನ್ನು ಎಲ್ಲೊ ಇಟ್ಟು ಅದನ್ನು ಹುಡುಕಲು ಪ್ರಯಾಸ ಪಡಬೇಕಾಯಿತು. ಅವಳಿಗೆ ವಿಶೇಷ ಶಾಲೆಯ ಅಗತ್ಯವನ್ನು ಮನಗಂಡ ಅವಳ ತಂದೆ, ತಾಯಿ ಪರ್ಕಿನ್ಸ್ ಶಾಲೆಗೆ ಸೇರಿಸಿದರು. ಅಲ್ಲಿ ಭೇಟಿಯಾದ ಶಿಕ್ಷಕಿ ಅನ್ನೆ ಸಲಿವಿನ್‌ಳಿಂದ ಹೆಲನ್‌ಳ ಬಾಳಿನಲ್ಲಿ ಹೊಸ ತಿರುವು ಉಂಟಾಯಿತು. ಜಗತ್ತಿನ ಸಂಪರ್ಕ ಸಾಧಿಸಲು ಸ್ಪರ್ಶ ಮಾತ್ರ ಹೆಲನ್‌ಳಿಗಿರುವ ಏಕೈಕ ಕಣ್ಣು. ಸ್ಪರ್ಶದಿಂದ ಪಡೆದ ಅನುಭವಕ್ಕೆ ಆಕಾರವಿಲ್ಲದಿರುವುದರಿಂದ ಅರ್ಥವೂ ಇಲ್ಲ. ಸ್ಪರ್ಶದಲ್ಲಿ ಶಬ್ದ ಮೂಡಿಸಲು ಸಲಿವಿನ್ ಹೊಸ ಸಂಜ್ಞಾ ಭಾಷೆಯನ್ನು ಅಂಗೈ ಬೆರಳುಗಳ ನರ್ತನದ ಮೂಲಕ ರವಾನಿಸಲು ಯತ್ನಿಸಿದಳು. ಒಂದು ದಿನ ಆಕಸ್ಮಿಕವಾಗಿ ಪವಾಡವೊಂದು ಜರುಗಿಹೋಯಿತು.
ಇದನ್ನೂ ಓದಿ: ಸೈನ್ಸ್ ಸೆನ್ಸ್ ಅಂಕಣ: ʼಲಿಡಾರ್ʼ ಶೋಧ ಬೆಳಕಿಗೆ ತಂದ ಕಾಡಾದ ನಾಡಿನ ಕಥೆ
ಸಲಿವಿನ್ ಬೋರ್‌ವೆಲ್‌ನಲ್ಲಿ ನೀರು ಪಂಪ್ ಮಾಡುತ್ತಿದ್ದಾಗ ಹೆಲೆನ್ ಸುರಿಯುತ್ತಿದ್ದ ನೀರಿಗೆ ಅಂಗೈ ಒಡ್ಡಿ ತಣ್ಣಗೆ ಹರಿಯುತ್ತಿದ್ದ ಸ್ಪರ್ಶಾನುಭವಕ್ಕೆ ಪುಳಕಿತಳಾದಳು. ಸಲಿವಿನ್ ನೀರು ಸುರಿಯುತ್ತಿದ್ದ ಅವಳ ಅಂಗೈ ಮೇಲೆ ವಾಟರ್ ಎಂದು ಇಂಗ್ಲಿಶ್ ಅಕ್ಷರಗಳನ್ನು ಬರೆದಳು. ಹರಿಯುತ್ತಿದ್ದ ತಣ್ಣನೆಯ ನೀರು ಮತ್ತು ಅದರೊಟ್ಟಿಗೇ ಬರೆದ ಅಕ್ಷರಗಳು ಹೆಲೆನ್‌ಳ ಮನಸಿನಲ್ಲಿ ಸಂಯೋಗ ಹೊಂದಿ ಜಗತ್ತಿನ ವಸ್ತುಗಳಿಗೆ ಹೆಸರಿರುತ್ತದೆ ಎಂದು ಮೊದಲ ಸಲ ಅವಳಿಗೆ ಜ್ಞಾನೋದಯವಾಯಿತು. ದಿನವೊಂದಕ್ಕೆ ಐವತ್ತಕ್ಕೂ ಹೆಚ್ಚು ಶಬ್ದಗಳನ್ನು ಕಲಿಯಬಲ್ಲ ಪ್ರತಿಭೆ ಅವಳಿಗಿತ್ತು. ಸಲಿವಿನ್ ಮಾತಾಡುತ್ತಿದ್ದಾಗ ಹೆಲೆನ್ ತನ್ನ ಬೆರಳುಗಳನ್ನು ಶಬ್ದಗಳನ್ನು ಉಚ್ಚರಿಸುತ್ತಿದ್ದ ಅವಳ ತುಟಿಗಳ ಚಲನೆಯ ಮೇಲಿಟ್ಟು ಅಕ್ಷರಗಳ ಭಿನ್ನ ವಿನ್ಯಾಸಗಳ ಆಕಾರಗಳನ್ನು ಸ್ಪರ್ಶದಲ್ಲೇ ಗ್ರಹಿಸುತ್ತ ಅದೇ ಕ್ಷಣದಲ್ಲಿ ಹೆಬ್ಬೆರಳನ್ನು ಕಂಪಿಸುತ್ತಿದ್ದ ಕೊರಳ ಭಾಗದಲ್ಲಿಟ್ಟು ಶಬ್ದೋತ್ಪತ್ತಿಯನ್ನು ತಿಳಿದುಕೊಳ್ಳುತ್ತಿದ್ದಳು.
ಭೇಟಿಯಾಗುತ್ತಿದ್ದವರು ಆಡುತ್ತಿದ್ದ ಮಾತುಗಳನ್ನು ವಿಧ ವಿಧವಾಗಿ ಹೆಲೆನ್‌ಳ ಬೆರಳುಗಳನ್ನು ಮಡಚಿ ಸಂವಹನ ಮಾಡುತ್ತಿದ್ದಳು. ಹೆಜ್ಜೆಯ ಕಂಪನದಿಂದ ವ್ಯಕ್ತಿಗಳನ್ನು ಗುರುತಿಸುವ ಸೂಕ್ಷ್ಮ್ಮ ನೆನಪು ಮತ್ತು ಗ್ರಹಣ ಸಾಮರ್ಥ್ಯ ಅವಳಿಗಿತ್ತು. ಹೂವು ಮತ್ತು ಅನೇಕ ವಸ್ತುಗಳನ್ನು ವಾಸನೆಯನ್ನು ಆಘ್ರಾಣಿಸಿ ಗುರುತಿಸುತ್ತಿದ್ದಳು. ಸ್ವೀಡನ್‌ಬರ್ಗ್ ಅಂಧ ಮತ್ತು ಮೂಕರಿಗಾಗಿ ಬರೆದ ವಿಶೇಷ ಪುಸ್ತಕದ ಸಹಾಯದಿಂದ ಸಲಿವಿನ್ ಹೆಲನ್ನಳ ಅಂತಃಕರಣದಲ್ಲಿ ದೀಪ ಹಚ್ಚಿದಳು. ಟೆಲಿಫೋನ್ ಶೋಧಿಸಿದ ಗ್ರಹಾಂ ಬೆಲ್ ಮತ್ತು ಕಾದಂಬರಿಕಾರ ಮಾರ್ಕ್ ಟ್ವೇನ್ ಅವಳ ಪ್ರತಿಭೆಯನ್ನು ಗುರುತಿಸಿ ಅವಳಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಸಹಕರಿಸಿದರು. ಹಲವಾರು ಪುಸ್ತಕಗಳನ್ನು ಬರೆದು, ಹಲವು ದೇಶಗಳನ್ನು ಸುತ್ತಾಡಿದ ಅವಳೊಬ್ಬ ಸೋಶಿಯಲ್ ಆಕ್ಟಿವಿಸ್ಟ್. ದೌರ್ಬಲ್ಯವನ್ನು ದಾಟಿದ ಅವಳಿಗೆ ದೇವರ ಮೇಲೆ ಆಕ್ರೋಶವಿರಲಿಲ್ಲ. ಜೀವಜಗತ್ತನ್ನು ತನ್ನೊಳಗೆ ಸ್ಪರ್ಶದ ಸಂವೇದನೆಯ ಮೂಲಕ ಅನುಭವಿಸುತ್ತ ಮಾಗಿದ ಹೆಲನ್ ಆಧ್ಯಾತ್ಮದ ದಾರಿ ಹಿಡಿದಳು.
ಸಾವು ಅವಳಿಗೆ ಭಯವೆನಿಸಲಿಲ್ಲ; ದುರ್ಬಲರ ಸೇವೆಗೆ ಮುಂದಾಗದ ಲೋಕ ಅವಳಿಗೆ ಹೆಚ್ಚು ಕ್ರೂರವೆನಿಸಿತ್ತು. ದಯೆ ಇಲ್ಲದವರೇ ಕುರುಡರು ಎಂದು ಕೊನೆವರೆಗೂ ಪ್ರತಿಪಾದಿಸಿದಳು. ಮಾತು ಸಾವಿನೊಂದಿಗೆ ಮುಗಿಯುತ್ತದೆ; ಮೌನ ಸಾವಿನಾಚೆ ಚಾಚಿದ ಅನಂತ ಸತ್ಯ; ಬದುಕನ್ನು ಮೌನ ಕತ್ತಲ ಶೂನ್ಯದಲ್ಲಿ ಲೀನವಾಗಿಸುವ ಸಾವಿನ ಸಾಧ್ಯತೆ ನಿತ್ಯ ಸತ್ಯವಾದದ್ದರಿಂದ ಅದೇನೂ ಅವಳಿಗೆ ಅಪರಿಚಿತವೆನಿಸಲೇ ಇಲ್ಲ. ಅಂಗೈಯಲ್ಲಿ ಸೃಷ್ಟಿಯಾಗುವ ರೇಖೆಗಳ ಸ್ಪರ್ಶ ಹೃದಯದ ಭಾಷೆಯಲ್ಲಿ ಅರಿವಾಗಿ ಅಚ್ಚಾಗುವ ಅಚ್ಚರಿಯ ಅವಳು ಹಲವರ ಬಾಳಿಗೆ ಬೆಳಕಾದಳು. ಒಂದೇ ಆತ್ಮ ಎರಡು ದೇಹದಂತಿದ್ದ ಸಲಿವಿನ್ ಮತ್ತು ಹೆಲೆನ್ ಕೆಲ್ಲರ್ ಹೋರಾಟ ಇಂದ್ರಿಯ ದೌರ್ಬಲ್ಯವನ್ನು ದಾಟಲು ಯತ್ನಿಸುವ ಯಾರಿಗಾದರೂ ಉಪಯುಕ್ತ ಪ್ರಾಯೋಗಿಕ ಮಾದರಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಅಂಕಣಕಾರರ ಪರಿಚಯ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರಿನಲ್ಲಿ ಜನಿಸಿದ ಶ್ರೀಧರ ಬಳಗಾರ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಟೀಚರ್ ಎಜ್ಯುಕೇಟರ್ ಆಗಿ ಪಾಠ ಮಾಡುತ್ತ ಸದ್ಯ ಕುಮಟಾದಲ್ಲಿ ನೆಲೆಸಿದ್ದಾರೆ. ಅಧೋಮುಖ (೧೯೯೫), ಮುಖಾಂತರ (೧೯೯೮), ಇಳೆ ಎಂಬ ಕನಸು (೨೦೦೩೦), ಒಂದು ಫೋಟೋದ ನೆಗೆಟೀವ್ (೨೦೦೮), ಈಸಾಡತಾವ ಜೀವ (೨೦೧೫)- ಕಥಾ ಸಂಕಲನಗಳು. ಕೇತಕಿಯ ಬನ (೨೦೦೩), ಆಡುಕಳ (೨೦೧೪), ಮೃಗಶಿರ (೨೦೧೯) ಕಾದಂಬರಿಗಳು. ರಥಬೀದಿ (೨೦೦೯), ಕಾಲಪಲ್ಲಟ (೨೦೧೧)- ಅಂಕಣ ಬರೆಹಗಳು. ಮೊಳದಷ್ಟು ಹೂವು (೨೦೧೯೦) ಲೇಖನ ಸಂಗ್ರಹ. ಕುವೆಂಪು ಭಾಷಾ ಭಾರತಿಗೆ ಪೀಟರ್ ವ್ಯಾಟ್ಸನ್ ಮತ್ತು ನಿರ್ಮಲ್ ವರ್ಮಾರವರ ಆಯ್ದ ಬರೆಹಗಳ ಅನುವಾದ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸ್ವಾತಂತ್ರ್ಯೋತ್ತರ ಕನ್ನಡ ಚಿಂತನಾತ್ಮಕ ಲೇಖನಗಳನ್ನು ಸಂಪಾದಿಸಿದ್ದಾರೆ. ಕೆಲವು ಕಥೆಗಳು ಇಂಗ್ಲಿಶ್, ತಮಿಳು, ಉರ್ದುಗೆ ಭಾಷಾಂತರಗೊಂಡಿವೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪದವಿ ಪಠ್ಯಕ್ಕೆ ಸೇರ್ಪಡೆಯಾಗಿವೆ. ಕೆಲವು ಕಥೆಗಳನ್ನು ರಂಗ ರೂಪಕ್ಕೆ ಅಳವಡಿಸಲಾಗಿದೆ. ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಮಾಸ್ತಿ ಪುರಸ್ಕಾರ, ನಿರಂಜನ ಸಾಹಿತ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು. ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ. ರಾ. ಬೇಂದ್ರೆ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಮರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ, ‘ಅಮ್ಮ’ ಪ್ರಶಸ್ತಿ ಮತ್ತು ಬರಗೂರು ಪುಸ್ತಕ ಪ್ರಶಸ್ತಿ ಪುರಸ್ಕೃತರು.
ಇದನ್ನೂ ಓದಿ: ಪುರಾಣ ಕತೆ: ದ್ರೌಪದಿಗೆ ಯಾಕೆ ಐವರು ಗಂಡಂದಿರು?