‘ಆಹಾರಶುದ್ಧೌ ಸತ್ತ್ವಶುದ್ಧಿಃ’ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಅಂದರೆ ನಾವು ಸ್ವೀಕರಿಸುವ ಆಹಾರವು ಶುದ್ಧವಾಗಿದ್ದಲ್ಲಿ ನಮ್ಮ ಬದುಕು ಕೂಡ ಅಷ್ಟೇ ಶುದ್ಧವಾಗಿರುತ್ತದೆ ಎಂಬುದು ಇದರ ತಾತ್ಪರ್ಯ. ನಿತ್ಯವೂ ನಾವು ಸ್ವೀಕರಿಸುವ ಉತ್ತಮ ಆಹಾರವೇ ಆರೋಗ್ಯಕ್ಕೆ ಮೂಲ.
ನಾವು ಆರೋಗ್ಯವಂತರಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆರೋಗ್ಯ ಪೂರ್ಣವಾದ ಶರೀರದಲ್ಲಿ ಆರೋಗ್ಯ ಪೂರ್ಣ ಮನಸ್ಸು ಇದ್ದು, ಅದು ಸದಾ ಚಟುವಟಿಕೆಯಿಂದ ಕೂಡಿರುತ್ತದೆ ಎಂದು ಹಿರಿಯರು ತಮ್ಮ ಅನುಭವನದ ಮಾತನ್ನು ಹೇಳಿದ್ದಾರೆ. ಆದರೆ, ಆಗಾಗ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಈ ಅನಾರೋಗ್ಯಕ್ಕೆ ಕಾರಣ, ನಾವು ಸ್ವೀಕರಿಸುವ ಆಹಾರವೇ ಆಗಿರುತ್ತದೆ ಎಂಬುದನ್ನು ಮರೆತು, ನಾವು ಬೇರೆ ಏನೇನೋ ಪ್ರಯೋಗಗಳನ್ನು ಮಾಡುತ್ತಾ, ಶರೀರಕ್ಕೆ ಇನ್ನಷ್ಟು ಬಾಧೆಯನ್ನುಂಟುಮಾಡುತ್ತಿರುತ್ತೇವೆ.
ಗೀತಾಚಾರ್ಯನಾದ ಶ್ರೀಕೃಷ್ಣ ಹೇಳಿದ ಹಾಗೆ, ಆಹಾರದಲ್ಲಿ ಮುಖ್ಯವಾಗಿ ಮೂರು ವಿಧ. ಸಾತ್ವಿಕಾಹಾರ, ರಾಜಸಾಹಾರ, ತಾಮಸಾಹಾರ. ನಾವು ಸ್ವೀಕರಿಸುತ್ತಿರುವ ಆಹಾರ ಪರಿಪೂರ್ಣವಾಗಿ ನಿಸರ್ಗದತ್ತವಾಗಿದ್ದರೆ, ಅದು ಅತ್ಯಂತ ಶ್ರೇಷ್ಠ ಹಾಗೂ ಸಾತ್ವಿಕವಾದ ಆಹಾರ. ಸಾತ್ವಿಕವಾದ ಆಹಾರವನ್ನು ಸೇವಿಸಿದ ವ್ಯಕ್ತಿಯ ಮನಸ್ಸು ಸದಾ ಸುಸ್ಥಿತಿಯಲ್ಲಿರುತ್ತದೆ ಅಷ್ಟೇ ಅಲ್ಲ, ಸದಾ ಧನಾತ್ಮಕವಾದ ಚಿಂತನೆಗಳನ್ನೇ ಮಾಡುತ್ತಿರುತ್ತದೆ, ಇತರರಿಗೆ ಒಳಿತನ್ನು ಬಯಸುತ್ತದೆ.
ನಾವೇ ತಯಾರಿಸಿಕೊಂಡ ಕೃತಕವಾದ ಆಹಾರವು ರಾಜಸ ಆಹಾರವಾಗಿರುತ್ತದೆ. ಇದನ್ನು ತಿನ್ನುವುದರಿಂದ ಮನಸ್ಸು ವಿಚಲಿತವಾಗುತ್ತದೆ. ದೃಢವಾದ ಬೌದ್ಧಿಕತೆಯನ್ನು ನಾವು ಕಳೆದುಕೊಳ್ಳುತ್ತೇವೆ. ಇನ್ನು ತಾಮಸಿಕ ಆಹಾರವಂತೂ ಯಾವುದೇ ರೀತಿಯಿಂದಲೂ ವರ್ಜ್ಯವೇ. ಇದರಿಂದ ಯಾವ ಒಳ್ಳೆಯತನವೂ ಬೆಳೆಯುವುದಿಲ್ಲ. ಕೇವಲ ನೇತ್ಯಾತ್ಮಕ ಚಿಂತನೆಗಳೇ ಹೆಚ್ಚಾಗುತ್ತವೆ. ಏಕೆಂದರೆ, ಮನಸ್ಸು ಸಂಪೂರ್ಣ ಚಂಚಲವಾಗುತ್ತದೆ.
ಹಾಗಾಗಿ ಇವನ್ನೆಲ್ಲ ಗಮನಿಸಿಕೊಂಡು ನಮ್ಮ ಆಹಾರವನ್ನು ನಾವೇ ನಿರ್ಧರಿಸಬೇಕು. ಏಕೆಂದರೆ ಶರೀರದ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ಮಾತ್ರವೇ ಸುದೃಢವಾದ ದೇಹ ನಮ್ಮದಾಗುತ್ತದೆ. ಪರಿಶುದ್ಧವಾದ ಮನಸ್ಸಿರಬೇಕಾದರೆ ಸುದೃಢವಾದ ಶರೀರವಿರಲೇಬೇಕು. ರೋಗರುಜಿನಗಳಿಂದ ಹೊರತಾಗಿರಬೇಕು. ‘ಶರೀರಮಾದ್ಯಂ ಖಲು ಧರ್ಮಸಾಧನಮ್’ ಅಂತ ಹೇಳಿದ್ದಾರಲ್ಲ. ಹಾಗೆ ಸಂಕಲ್ಪಿಸಿದ ಯಾವುದೇ ಕಾರ್ಯ ಸಿದ್ಧಿಯಾಗುವುದಾದರೂ ಶರೀರದ ಪ್ರಾಧಾನ್ಯವಿದೆ. ಶರೀರದಲ್ಲಿ ಸ್ವಲ್ಪವೇ ಏರುಪೇರಾದರೂ ಸರಾಗವಾಗಿ ನಡೆಯಬೇಕಾಗಿರುವ ದೈನಂದಿನ ಕ್ರಿಯಾಕರ್ಮಗಳಿಗೆ ತಡೆಯಾಗುತ್ತದೆ. ಆದ್ದರಿಂದ ನಮ್ಮ ಶರೀರಾರೋಗ್ಯದ ಬಗ್ಗೆ ಬಹಳವೇ ಜಾಗರೂಕತೆ ಬೇಕು.
ಇದನ್ನೂ ಓದಿ | ಸುವಿಚಾರ ಅಂಕಣ | ಚಿಂತೆಯಿಂದ ಚಿಂತನೆಯೆಡೆಗೆ ಪಯಣ
ಅಂತಹ ಆರೋಗ್ಯಪೂರ್ಣ ಶರೀರವನ್ನು ಪಡೆಯಬೇಕಾದರೆ ಆಹಾರದ ಬಗ್ಗೆ ಕಾಳಜಿ ವಹಿಸಲೇಬೇಕು. ಏಕೆಂದರೆ ಆಹಾರದ ವ್ಯತ್ಯಾಸದಿಂದಲೇ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜಡವಾಗಿರುವ ಈ ಶರೀರವು ಅನ್ನದಿಂದಲೇ ಬೆಳೆದು ಬಂದಿರುವುದು. ಅಂತಹ ಅನ್ನವೇ ಈ ಶರೀರದಲ್ಲಿರುವ ಚೈತನ್ಯಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡುತ್ತದೆ. ಆದ್ದರಿಂದ ಕಾಲಕಾಲಕ್ಕೆ ಸರಿಯಾಗಿ ಶರೀರಕ್ಕೆ ಅನ್ನ ಪಾನಾದಿಗಳನ್ನು ಕೊಟ್ಟು ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಶರೀರವು ಚೈತನ್ಯವನ್ನು ಕಳೆದುಕೊಂಡು ಬಿಡುತ್ತದೆ. ‘ಯಾದೃಶಂ ಭಕ್ಷಯೇದನ್ನಂ ಬುದ್ಧಿರ್ಭವತಿ ತಾದೃಶೀ’ ಯಾವ ರೀತಿಯ ಆಹಾರವನ್ನು ನಾವು ಸ್ವೀಕಾರ ಮಾಡುತ್ತೇವೆಯೋ ನಮ್ಮ ಬುದ್ಧಿ ಕೂಡ ಅದೇ ರೀತಿ ವರ್ತಿಸುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯವಾದದ್ದು.
‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಭಾಸ್ಕರ ಅಂದರೆ ಸೂರ್ಯನು ನಮ್ಮ ಆರೋಗ್ಯದ ಅಭಿವೃದ್ಧಿ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಸೂರ್ಯ ನಮಸ್ಕಾರಗಳನ್ನು ಮಾಡಬೇಕು. ಜೊತೆಗೆ ಇತರೆ ಚಟುವಟಿಕೆಗಳಾದಂತಹ ಕ್ರೀಡೆಯಿರಬಹುದು, ಬೆಳಗ್ಗೆ ಪ್ರಕೃತಿಯ ಮಡಿಲಲ್ಲಿ ಕೆಲಸಮಯ ಕಳೆಯುವುದಿರಬಹುದು, ನಿಯಮಿತವಾಗಿ ನಿತ್ಯವೂ ಭ್ರಮಣ ಮಾಡುವುದಿರಬಹುದು, ಹೀಗೆ ಅನೇಕ ಮಾರ್ಗಗಳ ಮೂಲಕ ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿಕೊಳ್ಳೋಣ. ಜೊತೆಗೆ ಆಹಾರವನ್ನು ಸ್ವೀಕಾರ ಮಾಡುತ್ತಾ, ಆ ಆಹಾರದಿಂದಲೂ ಕೂಡ ನಮ್ಮ ಆರೋಗ್ಯ ಅಭಿವೃದ್ಧಿಯಾಗುವುದರ ಕಡೆಗೆ ಗಮನ ಕೊಡಬಹುದು.
ಇದನ್ನೂ ಓದಿ | ಸುವಿಚಾರ ಅಂಕಣ | ಮೇಲು ಕೀಳು ಕಾಡದ ಗಾಢ ಗೆಳೆತನದ ರಹಸ್ಯ ಇಲ್ಲಿದೆ!