Site icon Vistara News

ಸುವಿಚಾರ ಅಂಕಣ | ವಾಣಿಯ ವೀಣೆಯ ಸ್ವರಮಾಧುರ್ಯವೋ!

conversation

ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೇ|
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಮ್||

ವ್ಯಕ್ತಿಯ ನಿಜವಾದ ಆಭರಣ ಯಾವುದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಮ್ಮ ಶರೀರವನ್ನಲಂಕರಿಸುವ ಬೇರೆಲ್ಲ ಆಭರಣಗಳು ಶಾಶ್ವತವಲ್ಲ, ಎಂದಾದರೊಂದು ದಿನ ನಾಶವಾಗುತ್ತವೆ. ಆದರೆ ಸಂಸ್ಕಾರಪೂರ್ಣವಾದ ಮಾತು ಮಾತ್ರವೇ ಮನುಷ್ಯನಿಗೆ ಸಹಜವಾಗಿ ದೊರೆಯುವ ಸುಂದರ ಮತ್ತು ಶಾಶ್ವತವಾದ ಆಭರಣ ಎಂದಿದ್ದಾನೆ ಒಬ್ಬ ಸುಭಾಷಿತಕಾರ. ನುಡಿ ಶುದ್ಧವಾಗಿರಬೇಕು ನಡೆ ಶುದ್ಧವಾಗಿರಬೇಕು. ನುಡಿದಂತೆ ನಡೆದವನ ಅಡಿಗೆನ್ನ ನಮನ ಎಂದಿದ್ದಾರೆ ಹಿರಿಯರು.

‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಗಾದೆಯಂತೆಯೇ ನಾವಾಡುವ ಮಾತಿಗೆ ಮಹತ್ವವಿದೆ. ಅದಕ್ಕೆ ಆಡಿದ ಮಾತನ್ನು ತಪ್ಪಬಾರದು ಎಂದಿದ್ದಾರೆ. ಒಮ್ಮೆ ಮಾತಾಡಿದರೆ ಅದರಂತೆಯೇ ನಡೆಯಬೇಕು, ಯಾಕೆಂದರೆ ಅದನ್ನು ನಾವು ‘ವಾಗ್ದಾನ’ ಎಂದಿದ್ದೇವೆ. ನುಡಿದಂತೆ ನಡೆಯದೇ ಇದ್ದರೆ ಮಾತ್ರ ಮನುಷ್ಯ ಸಮಾಜದಲ್ಲಿ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಾನೆ.

‘ಹುಟ್ಟಿದ ಎರಡೇ ವರ್ಷಗಳಲ್ಲಿ ಹೇಗೆ ಮಾತಾಡುವುದೆಂದು ತಿಳಿದೆವು. ಆದರೆ ಹುಟ್ಟಿ 50 ವರ್ಷಗಳಾದರೂ ಏನು ಮಾತಾಡಬೇಕೆಂಬುದನ್ನು ಕಲಿಯಲಿಲ್ಲ’ ಎಂಬುದಾಗಿ ತತ್ವಜ್ಞರೊಬ್ಬರು ಹೇಳುತ್ತಾರೆ. ಪರರ ಇಂಗಿತವನ್ನು ಅರಿತು ಮಾತಾಡುವುದು ಬಹಳ ಕಷ್ಟದ ಕೆಲಸ. ಆದರೆ ಇದನ್ನು ಸಾಧಿಸುವವನು ಒಬ್ಬ ಉತ್ತಮ ವಾಗ್ಮಿಯಾಗಲು ಯೋಗ್ಯ.

ಈ ಪ್ರಪಂಚವು ವ್ಯವಹಾರಗಳ ಆಗರ. ವ್ಯವಹಾರಗಳಿಗೆ ಮಾತೇ ಮೂಲಧನ. ಇಲ್ಲಿ ಮಾತು ಬಲ್ಲವನೇ ಗೆಲ್ಲುತ್ತಾನೆ. ಮಾತರಿಯದವನು ಸೋಲುತ್ತಾನೆ. ಅದಕ್ಕೇ ಹೇಳಿದ್ದಾರೆ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬುದಾಗಿ.

ಸಂಸ್ಕೃತ ಕವಿಗಳಂತೂ ಮಾತಿಗೆ ಬಹಳ ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ. ಅದಕ್ಕೆ ಅವರು ‘ವಾಕ್‍ಸರಸ್ವತೀ’ ಎಂದಿದ್ದಾರೆ. ಅಂದರೆ ನಮ್ಮ ಮಾತಿಗೆ ದೇವಿ ಸರಸ್ವತಿಯ ರೂಪವನ್ನು ಕೊಟ್ಟಿದ್ದಾರೆ. ಮಾತಿಗೆ ದೈವತ್ವವನ್ನು ಕೊಟ್ಟು ಅಷ್ಟೇ ಭಕ್ತಿಯಿಂದ ವಾಣಿಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಉತ್ತಮ ಮಾತುಗಾರಿಕೆಯನ್ನು ‘ವಾಗ್ದೇವಿಯ ವಾಗ್ವಿಲಾಸ’ ಎಂದು ಕರೆದಿದ್ದಾರೆ.

ಜಗತ್ತಿನ ಆದಿಕಾವ್ಯವಾದ ಶ್ರೀ ರಾಮಾಯಣದಲ್ಲಿ ಆದಿಕವಿ ವಾಲ್ಮೀಕಿಗಳು ಮಾತಿನ ಪ್ರಶಂಸೆಯನ್ನು ಅನೇಕ ಕಡೆಗಳಲ್ಲಿ ಅಮೋಘವಾಗಿ ಮಾಡಿದ್ದಾರೆ. ಪಂಪಾ ಸರೋವರದ ಸಮೀಪ ರಾಮಲಕ್ಷ್ಮಣರನ್ನು ಭೇಟಿಯಾದ ಬ್ರಹ್ಮಚಾರಿಯ ರೂಪಧಾರಣೆ ಮಾಡಿದ ಹನುಮಂತನು ಸ್ಪಷ್ಟವಾದ ಸುಸಂಸ್ಕೃತವಾದ ಸಂಸ್ಕೃತ ಭಾಷೆಯಲ್ಲಿ ಮಾತಾಡುತ್ತಾನೆ. ಅದನ್ನು ವಾಲ್ಮೀಕಿಗಳು ‘ಉಚ್ಚಾರಯತಿ ಕಲ್ಯಾಣೀಂ ವಾಚೋ ಹೃದಯಹಾರಿಣೀಂ|’ ಅಂದರೆ ಹೃದಯವನ್ನು ಗೆಲ್ಲುವಂತಹ ಆಕರ್ಷಣೀಯವಾದ ಮಾತನ್ನು ಆಂಜನೇಯನು ಆಡುತ್ತಿದ್ದಾನೆ ಎಂದು ವರ್ಣಿಸಿದ್ದಾರೆ.

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ|
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ||

ಇದನ್ನೂ ಓದಿ | ಸುವಿಚಾರ ಅಂಕಣ | ಅನ್ನವೇ ಆರೋಗ್ಯ, ಆರೋಗ್ಯವೇ ಸೌಭಾಗ್ಯ

ಸತ್ಯವಾದ, ಪ್ರಿಯವಾದ ಮಾತುಗಳನ್ನೇ ನುಡಿಯಬೇಕು, ಅಪ್ರಿಯವಾದ ಸತ್ಯವನ್ನು ಎಂದಿಗೂ ನುಡಿಯಕೂಡದು, ಪ್ರಿಯವಾಗಿದೆ ಎಂದು ಅಸತ್ಯವನ್ನು ನುಡಿಯಬಾರದು. ಇದೇ ನಿಜವಾದ ಭಾಷಾ ಸಂಸ್ಕಾರ, ಇದೇ ಸನಾತನ ಧರ್ಮ ಎನ್ನುತ್ತಾನೆ ಈ ಸುಭಾಷಿತಕಾರ. ಹೀಗೆ ಮಾತನಾಡುವವನ ಶೈಲಿ ಉತ್ತಮವಾಗಿದ್ದರೆ ವ್ಯಕ್ತಿಯು ತನ್ನ ಜೀವನದಲ್ಲಿ ಸಾಧಿಸಬೇಕಾದ ಎಲ್ಲವನ್ನೂ ಸಾಧಿಸುತ್ತಾನೆ. ರಾಜನೊಡನೆಯೋ, ಅಧಿಕಾರಿಯೊಡನೆಯೋ, ಗುರುಹಿರಿಯರೊಡನೆಯೋ ಹೇಗೆ ಮಾತಾಡಬೇಕು ಎಂಬುದನ್ನು ರಾಮಾಯಣದ ಈ ಶ್ಲೋಕದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ವಾಕ್ಯಮಪ್ರತಿಕೂಲಂತು ಮೃದು ಪೂರ್ವಂ ಹಿತಂ ಶುಭಂ|
ಉಪಚಾರೇಣ ಯುಕ್ತಂ ಚ ವಕ್ತವ್ಯೋ ವಸುಧಾಧಿಪ|

ಕೇಳುವವನಿಗೆ ವಿರುದ್ಧವಾಗಿರಬಾರದು, ಹಿತವೂ ಶುಭವೂ ಆದ ನುಡಿಗಳನ್ನು ಮೃದುವಾಗಿ, ವಿನಯಪೂರ್ವಕವಾಗಿ ಉಪಚಾರಗಳ ಮೂಲಕ ಗೌರವಪೂರ್ವಕವಾಗಿ ನಿವೇದಿಸಬೇಕು. ಇದೇ ವಿಚಾರವನ್ನು ಸುಭಾಷಿತವೊಂದು ಹೀಗೆ ಹೇಳುತ್ತದೆ.

ಲಲಿತಂ ಸತ್ಯಸಂಯುಕ್ತಂ ಸುವ್ಯಕ್ತಂ ಸತತಂ ಮಿತಂ|
ಯೇ ವದಂತಿ ಸದಾ ತೇಷಾಂ ಸ್ವಯಂ ಸಿದ್ದೈವ ಭಾರತೀ|

ನಮ್ಮ ಮಾತು ಸುಲಲಿತವಾಗಿರಬೇಕು, ಶಬ್ದಾಡಂಬರಗಳಿರಬಾರದು, ಮಾತಿನಲ್ಲಿ ಸತ್ಯವೇ ತುಂಬಿರಬೇಕು, ಸುಳ್ಳು ಹೇಳಬಾರದು, ಆಡಿದ ಮಾತಿನಲ್ಲಿ ಸ್ಪಷ್ಟತೆಯಿರಬೇಕು, ಕೇಳಿದವರಿಗೆ ಸಂದೇಹವಿರಬಾರದು, ಮಾತು ಮಿತವಾಗಿರಬೇಕು, ಬಹಳ ವಿಸ್ತಾರವಾಗಬಾರದು. ಇಷ್ಟೆಲ್ಲ ಒಳ್ಳೆಯ ಗುಣಗಳನ್ನು ಹೊಂದಿರುವ ಮಾತಿಗೆ ಖಂಡಿತವಾಗಿಯೂ ಸಮಾಜ ಗೌರವವನ್ನು ಕೊಡುತ್ತದೆ. ಮತ್ತು ಹೀಗೆ ಮಾತಾಡುವವನಿಗೆ ಭಾಷಾ ಸರಸ್ವತಿಯು ಒಲಿಯುತ್ತಾಳೆ, ಅವನಿಗೆ ವಾಕ್ಸಿದ್ಧಿಯಾಗುತ್ತದೆ, ಮತ್ತು ಅವನ ಮಾತನ್ನು ಎಲ್ಲರೂ ನಂಬುತ್ತಾರೆ, ವಿಶ್ವಾಸವಿಡುತ್ತಾರೆ, ಅವನ ಮಾತಿನೆಡೆಗೆ ಆಕರ್ಷಿತರಾಗುತ್ತಾರೆ.

ಇದನ್ನೂ ಓದಿ | ಸುವಿಚಾರ ಅಂಕಣ | ಸಂಗೀತದಿಂದ ಸಂಸ್ಕಾರ

Exit mobile version