Site icon Vistara News

ಸುವಿಚಾರ ಅಂಕಣ | ಸಂಗೀತದಿಂದ ಸಂಸ್ಕಾರ

music 1

‘ಸಂಸ್ಕಾರಹೀನಃ ಪಶುಭಿಃ ಸಮಾನಃ’ ಎಂಬುದಾಗಿ ಸಂಸ್ಕೃತದಲ್ಲೊಂದು ನುಡಿಯಿದೆ. ಅಂದರೆ ಸಂಸ್ಕಾರವಿಲ್ಲದಿದ್ದರೆ, ಸುಸಂಸ್ಕೃತನಲ್ಲದಿದ್ದರೆ ನಮ್ಮ ಬಾಳಿಗೆ ಬೆಲೆಯಿಲ್ಲ, ನಾವು ಪ್ರಾಣಿಗಳಗೆ ಸಮಾನರು ಎಂದರ್ಥ. ಅಲ್ಲಿಗೆ ನಮ್ಮ ಜೀವನದಲ್ಲಿ ಸಂಸ್ಕಾರದ ಮಹತ್ವ ಬಹಳವಿದೆ ಎಂಬುದು ಸುವಿದಿತ.

ಸಕಲ ಪ್ರಾಣಿಗಳಂತೆಯೇ ಜನ್ಮತಾಳುವ ನಾವು ಕ್ರಮೇಣ ಪಡೆಯುವ ಸಂಸ್ಕಾರಗಳ ಮೂಲಕ ಮನುಷ್ಯರಾಗುತ್ತೇವೆ. ಸಂಸ್ಕಾರವಿಲ್ಲದವನ ಬದುಕು ಅರ್ಥಹೀನವಾಗುತ್ತದೆ. ಪ್ರತಿಯೊಬ್ಬನಿಗೂ ಆರಂಭಿಕ ಬದುಕಿನ ಸಂಸ್ಕಾರವು ಬಹುಮುಖ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಬಾಳು ಸಂಸ್ಕಾರ ಪೂರ್ಣವಾಗಿರಬೇಕು ಅಂದರೆ ನಾವು ಸಂಸ್ಕಾರಪೂರ್ಣವಾದ ಬದುಕನ್ನು ನಡೆಸಬೇಕು ಎಂಬುದಿದರ ತಾತ್ಪರ್ಯ. ಅಂತಹ ಸಂಸ್ಕಾರವು ನಮಗೆ ಆಚರಣೆಗಳ ಮೂಲಕವೋ, ಅನುಭವಗಳ ಮೂಲಕವೋ, ಸಂಗೀತ-ಸಾಹಿತ್ಯವೇ ಮೊದಲಾದ ಕಲಾಪ್ರಕಾರಗಳ ಮೂಲಕವೋ ಬಂದು ಸೇರುತ್ತದೆ.

ʼಸಾಹಿತ್ಯ-ಸಂಗೀತಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ’ ಎಂಬುದಾಗಿ ಒಂದು ಮಾತಿದೆ. ಸಾಹಿತ್ಯದ ಸಂಗೀತದ ಕಲೆಗಳ ಪರಿಚಯವಿಲ್ಲದವನು ಬಾಲ-ಕೋಡುಗಳಿರದ ಪಶುವಿನ ಹಾಗೆ ಜೀವನವನ್ನು ಕಳೆಯುತ್ತಾನೆ. ಎಂಬುದು ಇದರ ತಾತ್ಪರ್ಯ. ಯಾವ ಸಂಪತ್ತುಗಳಿಲ್ಲದಿದ್ದರೂ ಸಂಗೀತವೇ ಮೊದಲಾದ ಕಲಾಸಂಪತ್ತೊಂದಿದ್ದರೆ ಸಮೃದ್ಧವಾದ ಜೀವನವನ್ನು ನಡೆಸಬಹುದು ಎಂಬುದು ನಿಶ್ಶಂಶಯ.

‘ಬೆಳೆವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆಯಿದೆ. ಬದುಕಿನ ಬಾಲ್ಯದ ಬೇರಿಗೆ ಕೊಡುವ ಸಾಂಸ್ಕೃತಿಕ ಪುಷ್ಟಿ ಜೀವನ ಪರ್ಯಂತ ಅವರನ್ನು ಸುಸಂಸ್ಕೃತರನ್ನಾಗಿಸುತ್ತದೆ. ನಮ್ಮ ಹಿರಿಯರು ಸಮೃದ್ಧ, ಪರಿಪೂರ್ಣವಾದ, ಸಂಸ್ಕಾರಪೂರ್ಣವಾದ ಹಾಗೂ ಅರ್ಥಪೂರ್ಣವಾದ ಬದುಕನ್ನು ಕಳೆದರೋ ಅವರಂತೆ, ಅವರು ಬದುಕಿದಂತೆ ಅವರು ನುಡಿದಂತೆ, ಅವರ ಆಚರಣೆಯಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡುವಲ್ಲಿ ಸಂಗೀತವು ಸಹಕರಿಸುತ್ತದೆ. ಸಂಗೀತಕಲೆಯನ್ನು ನಮ್ಮದಾಗಿಸಿಕೊಂಡರೆ ಎಂತಹ ಸುಂದರ ಬದುಕು ನಮ್ಮದಾಗಬಹುದು ಎಂಬುದನ್ನು ನಮ್ಮ ಹಿರಿಯರು ಮಾರ್ಗದರ್ಶನ ಮಾಡಿಹೋಗಿದ್ದಾರೆ.

ಇಂದು ಸಮಾಜ ಸುಸಂಸ್ಕೃತಿಯಿಂದ ಅಸಂಸ್ಕೃತಿಯತ್ತ ವಾಲುತ್ತಿದೆ. ಮುಂದೊಂದು ದಿನ ಕುಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಸಂಸ್ಕಾರ ಹಾಗೂ ಸಂಸ್ಕೃತಿಯ ವಿಷಯದಲ್ಲೂ ಬೃಹತ್ಪ್ರಮಾಣದ ಪರಿವರ್ತನೆಗಳಾಗಿವೆ, ಹಾಗೂ ಆಗುತ್ತಿವೆ. ಈ ಸಮಾಜಕ್ಕೆ ಇದರಿಂದ ಇನ್ನೊಂದಿಷ್ಟು ತೊಂದರೆಗಳಾಗಿವೆಯೇ ಹೊರತು ಒಳಿತಂತೂ ಸ್ವಲ್ಪವೂ ಇಲ್ಲ. ಹೀಗಾಗಿ ಮಕ್ಕಳಿಗೆ, ವಿಶೇಷವಾಗಿ ವಯೋಮಾನಕ್ಕನುಗುಣವಾಗಿ ಆಯಾ ಕಾಲಕ್ಕೆ ಬೇಕಾದ ಸಂಸ್ಕಾರ ಶಿಕ್ಷಣವನ್ನು ಕೊಡಬೇಕಾದ್ದು ಪಾಲಕರ ಹೊಣೆ. ಆದರೆ ಪಾಲಕರು, ಇಂದಿನ ಮಕ್ಕಳಿಗೆ ಅವಶ್ಯವಾದ ಸಂಸ್ಕಾರವನ್ನು ಕೊಡಲು ಸಾಧ್ಯವಾಗುತ್ತಿಲ್ಲ ಎಂಬುದು ವಿಷಾದನೀಯ.

ಇದನ್ನೂ ಓದಿ | ಸುವಿಚಾರ ಅಂಕಣ | ಅನ್ನವೇ ಆರೋಗ್ಯ, ಆರೋಗ್ಯವೇ ಸೌಭಾಗ್ಯ

ನಮ್ಮ ಹಿರಿಯರು ಕಳೆದ ಸರಳ ಸುಂದರ ಸುಸಂಸ್ಕೃತ ಜೀವನ ನಮಗೆ ಆದರ್ಶವಾಗಬೇಕು. ಅದು ಕೇವಲ ಕಥೆಯಾಗಿಯೇ ಉಳಿಯಬಾರದು, ಅವರ ಜೀವನದ ಅನುಭವಗಳ ಸಾರಾಂಶವನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಹಾಗೂ ನಮ್ಮ ಮುಂದಿನ ಪೀಳಿಗೆಗೆ ಅದನ್ನು ಕಟ್ಟಿಕೊಡಬೇಕು. ಆಗ ಮಾತ್ರವೇ ಹಿರಿಯರ ಬಾಳಿನ ಆದರ್ಶಗಳು ಅನುಭವಗಳು, ಮಾರ್ಗದರ್ಶಕ ಮಾತುಗಳು, ಅವರ ವ್ಯವಹಾರ, ನಡೆವಳಿಕೆಗಳು ಎಲ್ಲವೂ ಸಾರ್ಥಕವಾಗುತ್ತವೆ. ಅವರ ಅನುಭವಜನ್ಯ ನುಡಿಗಳು ನಮಗೆ ಮಾರ್ಗದರ್ಶಕ ದಾರಿದೀಪಗಳಾಗುತ್ತವೆ. ಆ ಬೆಳಕನ್ನು ಬಳಸಿಕೊಂಡು ನಡೆದರೆ ನಮ್ಮ ಬದುಕಿಗೂ ಸಾರ್ಥಕತೆ ಬಂದೇ ಬರುತ್ತದೆ.

ಭಾರತೀಯ ಸನಾತನ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಂಗೀತದ್ದು ಮಹತ್ತರವಾದ ಪಾತ್ರವಿದೆ. ಈ ಅಂಶಗಳನ್ನು ಗಮನಿಸಿದಾಗ ನಮ್ಮ ಜೀವನದಲ್ಲಿ ಸಂಗೀತದ ಮಹತ್ವ ಏನು ಎಂಬುದನ್ನು ನಾವು ಅರಿಯಬಹುದು.

ಬಾಲ್ಯದಿಂದಲೇ ಸಂಗೀತ ಶಿಕ್ಷಣವನ್ನು ಕೊಟ್ಟರೆ ಭವಿಷ್ಯದಲ್ಲಿ ಸಮಾಜಕ್ಕೊಬ್ಬ ಉತ್ತಮ ವ್ಯಕ್ತಿಯನ್ನು ಕೊಟ್ಟಂತಾಗುವುದು. ಬಾಲ್ಯವು ಮುಗಿದು ಹೋದರೆ, “ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್” ಎಂಬ ಮಾತಿನಂತೆ ‘ವಯಸ್ಸು ಹದಿನಾರು ಕಳೆದರೆ ಪುತ್ರನನ್ನು ಮಿತ್ರನಂತೆ ನೋಡು’ ಎಂಬ ಪ್ರಾಜ್ಞೋಕ್ತಿಯಂತೆ ನಾವು ಬಾಲ್ಯದಲ್ಲಿಯೇ ಕೊಡಬೇಕಾದ ಶಿಕ್ಷಣವನ್ನು ಹದಿನಾರನೇ ವಯಸ್ಸಿನ ಅನಂತರ ಕೊಡಲಾಗದು. ಆದ್ದರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಬಹುಮುಖ್ಯವಾಗಿ ಜೀವನದ ವಿಕಾಸಕ್ಕಾಗಿ ಸಿಗಬೇಕಾದ ಸಂಗೀತವೇ ಮೊದಲಾದ ಕಲಾಶಿಕ್ಷಣವನ್ನು ಹಿರಿಯರು ಕೊಡುವ, ಕೊಡಿಸುವ ಪ್ರಯತ್ನ ಮಾಡಬೇಕು.

ಈ ಸಂಸ್ಕಾರಗಳಿಂದ ಮಕ್ಕಳಲ್ಲಿ ನಮ್ಮ ದೇಶದ ಭಾಷೆಯ ಮಹತ್ವ, ಭಾರತೀಯತೆಯ ಗರಿಮೆ, ತಂದೆ ತಾಯಿ ಗುರುಹಿರಿಯರ ಬಗ್ಗೆ ಗೌರವ, ದೀನ ದುಃಖಿತರ ಬಗ್ಗೆ ಅನುಕಂಪ ಹಾಗೂ ದಯಾಗುಣ, ಬದುಕಿನ ಬಗ್ಗೆ ಪ್ರೀತಿ, ಆತ್ಮಸ್ಥೈರ್ಯ, ಪರಸ್ಪರ ಸೌಹಾರ್ದಗುಣ, ಧೈರ್ಯ, ಶಿಸ್ತು, ಬದ್ಧತೆ, ಸಂಯಮ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮಾತೃಭೂಮಿಯ ಬಗ್ಗೆ ಅಭಿಮಾನ, ದೇಶಭಕ್ತಿ, ಮುಂತಾದ ಉದಾತ್ತಭಾವನೆಗಳನ್ನು ಬೆಳೆಸಬಹುದು. ಇಂತಹ ಉತ್ತಮಸಂಸ್ಕಾರಗಳಿಂದ ವಂಚಿತರಾದ ಕೆಲವು ವ್ಯಕ್ತಿಗಳಿಂದ ಇಂದು ಸಮಾಜದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಗಮನಿಸಿದಾಗ ಸಂಸ್ಕಾರಶಿಕ್ಷಣದ ಮಹತ್ವದ ಅರಿವಾಗುತ್ತದೆ.

ಇದನ್ನೂ ಓದಿ | ಸುವಿಚಾರ ಅಂಕಣ | ಚಿಂತೆಯಿಂದ ಚಿಂತನೆಯೆಡೆಗೆ ಪಯಣ

Exit mobile version