ಇಂದು (ಜನವರಿ 12) ವಿವೇಕ ಜಯಂತಿ. ಭಾರತದ ಕೇಸರಿಯ ಕೀರ್ತಿಪತಾಕೆಯನ್ನು ನವದಿಗಂತದಲ್ಲಿ ವಿಸ್ತರಿಸಿದ ಸ್ವಾಮಿ ವಿವೇಕಾನಂದರ ಹುಟ್ಟಿದ ಹಬ್ಬ. ಅದರ ಪ್ರಯುಕ್ತ ಜನವರಿ 12 ರಾಷ್ಟ್ರೀಯ ಯುವ ದಿನ. ದೇಶದ ಮಹಾನ್ ಶಕ್ತಿಯಾಗಿರುವ ಯುವ ಜನತೆ ಹಾಗೂ ಯುವ ಸಮುದಾಯಕ್ಕೆ ಭಾರಿ ಘನತೆಯನ್ನು ತಂದುಕೊಟ್ಟ ದಿನವಿದು. ವಿವೇಕಾನಂದರ ಮೇಲೆ ದಟ್ಟವಾದ ಪ್ರಭಾವ ಬೀರಿದ ಮೂರು ವಿಶೇಷ ಚೇತನಗಳ ಪರಿಚಯ ಮಾಡುವ ಉದ್ದೇಶದಿಂದ ಈ ಸಂಕ್ಷಿಪ್ತವಾದ ಲೇಖನವನ್ನು ತಮ್ಮ ಮುಂದೆ ಇಡುತ್ತಿರುವೆ.
1. ಅಮ್ಮ ಭುವನೇಶ್ವರಿ ದೇವಿ
ವಿವೇಕಾನಂದರ ಅಮ್ಮ ಭುವನೇಶ್ವರಿ ದೇವಿಯು ಸದ್ಗೃಹಿಣಿ. ಸದಾಚಾರ ಸಂಪನ್ನೆ. ಮಗನಿಗೆ ಉತ್ತಮ ಸಂಸ್ಕಾರಗಳನ್ನು ಎದೆಹಾಲಿನ ಜೊತೆ ಧಾರೆ ಎರೆದ ಮಹಾಮಾತೆ. ಪ್ರತೀ ದಿನ ಸಂಜೆ ಮಗನನ್ನು ಹತ್ತಿರ ಕೂರಿಸಿಕೊಂಡು ರಾಮಾಯಣ, ಮಹಾಭಾರತಗಳ ಕತೆಯನ್ನು ರಸವತ್ತಾಗಿ ಹೇಳಿದವರು ಆಕೆ. ತುಂಟ ಮಗನ ನೂರಾರು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕೊಡುವ ತಾಳ್ಮೆ ಅವರಿಗೆ ಇತ್ತು.
ರಾಮಾಯಣದ ಕತೆಗಳನ್ನು ಕೇಳುತ್ತಾ ನರೇಂದ್ರನಿಗೆ ಹನುಮಂತನ ಪಾತ್ರದ ಮೇಲೆ ಕುತೂಹಲ ಮೂಡಿತ್ತು. ತನಗೆ ಹನುಮಂತನನ್ನು ತೋರಿಸು ಎಂದು ಮಗ ಅಮ್ಮನಿಗೆ ದುಂಬಾಲು ಬಿದ್ದ. ಅಮ್ಮ ಅಷ್ಟೇ ತಾಳ್ಮೆಯಿಂದ “ನಮ್ಮ ಮನೆ ಹಿಂದೆ ಬಾಳೆ ತೋಟ ಇದೆ, ಅಲ್ಲಿಗೆ ರಾತ್ರಿ ಹನುಮಂತ ಹಣ್ಣು ತಿನ್ನಲು ದಿನವೂ ಬರುತ್ತಾನೆ. ಹೋಗಿ ಕಾದು ಕುಳಿತುಕೋ” ಎಂದರು.
ಮಗ ನಡುಗುವ ಚಳಿಗೆ ಹೋಗಿ ರಾತ್ರಿ ಇಡೀ ಕಾದು ಕೂತ. ಇಡೀ ರಾತ್ರಿ ಹನುಮಂತ ಬರಲೆ ಇಲ್ಲ. ಬೆಳಿಗ್ಗೆ ಹಿಂದೆ ಬಂದು “ಅಮ್ಮಾ, ಇಡೀ ರಾತ್ರಿ ಹನುಮಂತ ಬರಲೆ ಇಲ್ಲ ಅಮ್ಮ” ಎಂದು ಆಕ್ಷೇಪಣೆ ಮಾಡಿದ. ಅಮ್ಮ ನಗು ನಗುತ್ತಾ ‘” ನರೇಂದ್ರ, ಇಂದು ಹನುಮಂತ ಲಂಕೆಗೆ ಸೀತಾ ಮಾತೆಯನ್ನು ಭೇಟಿ ಮಾಡಲು ಅಂತ ಹೋಗಿರಬಹುದು. ನಾಳೆ ಮತ್ತೆ ಕಾದು ನೋಡು” ಅಂದರು.
ಮರುದಿನವೂ ಹಾಗೆಯೇ ಆಯಿತು. ಹುಡುಗ ಮತ್ತೆ ಇಡೀ ರಾತ್ರಿ ಕಣ್ಣು ತೆರೆದು ಕಾದು ಕೂತ. ಹನುಮಂತ ಬರಲೆ ಇಲ್ಲ. ಆಗಲೂ ಅಮ್ಮ ” ಹನುಮಂತ ಸೇತುವೆ ಕಟ್ಟಲು ಹೋಗಿರಬಹುದು” ಅಂದರು. ಹೀಗೆ ಸುಮಾರು ದಿನಗಳ ಕಾಲ ಅಮ್ಮ ಮಗನಿಗೆ ದಿನಕ್ಕೊಂದು ನೆಪ ಹೇಳುತ್ತಾ ಮಗನನ್ನು ಸಮಾಧಾನ ಪಡಿಸಲು ಪ್ರಯತ್ನ ಪಡುತ್ತಿದ್ದರು. ಮಗನೂ ಅಮ್ಮನ ಮಾತಿನ ಮೇಲೆ ಭರವಸೆಯನ್ನು ಇಟ್ಟು ಇಡೀ ರಾತ್ರಿ ಹನುಮಂತನಿಗೆ ಕಾಯುತ್ತಾ ಕಳೆದನು.
ಯಾಕೆ ಅಮ್ಮ ಹೀಗೆಲ್ಲಾ ಮಾಡಿದರು? ಯಾಕಾಗಿ ದಿನಕ್ಕೊಂದು ಸುಳ್ಳು ಪೋಣಿಸಿದರು? ನಾವು ಸೂಕ್ಷ್ಮ ಆಗಿ ಯೋಚನೆ ಮಾಡಿದಾಗ ಉತ್ತರ ಗೊತ್ತಾಗುತ್ತದೆ.
ಪ್ರತೀ ದಿನವೂ ರಾಮಾಯಣದ ಕತೆಯನ್ನು ಕೇಳುತ್ತಾ ಹೋದಂತೆ ಮಗನಿಗೆ ರಾಮಾಯಣದ ಮೇಲೆ ನಂಬಿಕೆ ಬಂದಿತ್ತು. ಹನುಮಂತ ಬರುವುದಿಲ್ಲ ಎಂದು ಅಮ್ಮ ಒಮ್ಮೆ ಹೇಳಿದರೆ ಅವನು ರಾಮಾಯಣದ ಮೇಲೆ ಇದ್ದ ನಂಬಿಕೆ ಕಳೆದುಕೊಳ್ಳುತ್ತಾನೆ. ಹಾಗಾಗಬಾರದು ಎಂದು ಅಮ್ಮ ಮಗನಿಗೆ ದಿನಕ್ಕೊಂದು ಸುಳ್ಳು ನೆವನ ಹೇಳುತ್ತಾ ಹೋದರು. ಮಗನ ನಂಬಿಕೆಯನ್ನು ತಾಯಿಯು ಗಟ್ಟಿ ಮಾಡುತ್ತಾ ಹೋದರು. ಭುವನೇಶ್ವರಿ ದೇವಿಯ ಈ ರೀತಿಯ ಯೋಚನೆಗಳು ಮಗ ನರೇಂದ್ರನ ಮೇಲೆ ಭಾರೀ ಪ್ರಭಾವ ಬೀರಿದ್ದು ಹೌದು.
2. ತಂದೆ ವಿಶ್ವನಾಥ ದತ್ತ
ನರೇಂದ್ರನ ಮೇಲೆ ಬೀರಿದ ಇನ್ನೊಂದು ದಟ್ಟವಾದ ಪ್ರಭಾವ ಅಂದರೆ ಅದು ಅವರ ಅಪ್ಪನದು! ಅವರು ಕೋಲ್ಕತ್ತಾದಲ್ಲಿ ಪ್ರಸಿದ್ದ ವಕೀಲರಾಗಿದ್ದರು. ಪ್ರತೀ ದಿನವೂ ಮನೆ ತುಂಬಾ ಜನ. ಕೈ ತುಂಬಾ ಸಂಪಾದನೆ. ಆದರೆ ಮನೆಗೆ ಬಂದವರಿಗೆಲ್ಲ ಊಟ ತಿಂಡಿ ಎಂದು ಅವರ ಸಂಪಾದನೆ ಎಲ್ಲಾ ಖಾಲಿ ಆಗ್ತಿತ್ತು. ದುಡ್ಡಿನ ಸಹಾಯ ಕೇಳಿಕೊಂಡು ನೂರಾರು ಜನ ಬರ್ತಿದ್ರು. ಎಲ್ಲರಿಗೂ ದುಡ್ಡು ಕೊಟ್ಟು ವಿಶ್ವನಾಥದತ್ತರು ಕೈ ಖಾಲಿ ಮಾಡಿಕೊಂಡು ಕಷ್ಟ ಪಡುತ್ತಿದ್ದರು.
ಇದನ್ನು ಪ್ರತೀ ದಿನ ನೋಡುತ್ತಿದ್ದ 12 ವರ್ಷದ ಮಗ ನರೇಂದ್ರ ಅಪ್ಪನ ಮೇಲೆ ಒಮ್ಮೆ ಸಿಟ್ಟು ಮಾಡಿಕೊಂಡ. ನೇರವಾಗಿ ಅಪ್ಪನ ಮುಂದೆ ಹೋಗಿ ನಿಂತು “ಅಪ್ಪಾ, ಎಲ್ಲಾ ಸಂಪಾದನೆ ಖಾಲಿ ಮಾಡ್ತಾ ಇದ್ದೀಯಾ. ನನಗೆ ಏನಾದರೂ ಉಳಿಸುತ್ತಿದ್ದೀಯ?” ಎಂದು ಕೇಳಿದ. ಅಪ್ಪ ಮಾತಾಡಲಿಲ್ಲ. ಮಗ ಮತ್ತೆ ಅದೇ ಪ್ರಶ್ನೆ ಕೇಳಿದ.
ಈಗ ಅಪ್ಪ ತಲೆ ಎತ್ತಿ ನೋಡಿದರು. ತನ್ನ ಮಗನನ್ನು ದರದರ ಎಳೆದುಕೊಂಡು ಹೋಗಿ ದೊಡ್ಡದಾದ ಒಂದು ನಿಲುವು ಕನ್ನಡಿ ಮುಂದೆ ನಿಲ್ಲಿಸಿ ಅಪ್ಪ ಹೀಗೆ ಕೇಳಿದರು.
“ನೋಡು ನರೇಂದ್ರ, ನಿನಗೆ ಇಷ್ಟೊಂದು ಅದ್ಭುತವಾದ ವ್ಯಕ್ತಿತ್ವ ಕೊಟ್ಟಿದ್ದೇನೆ. ನಾನು ಅಪ್ಪನಾಗಿ ನಿನಗೆ ಇನ್ನೇನು ಕೊಡಬೇಕು?” ಮಗನಿಗೆ ಎಲ್ಲವೂ ಅರ್ಥವಾಗಿತ್ತು. ಮತ್ತೆ ಆ ಪ್ರಶ್ನೆಯನ್ನು ಮಗ ಯಾವತ್ತೂ ಕೇಳಲಿಲ್ಲ!
3. ಗುರು ರಾಮಕೃಷ್ಣ ಪರಮಹಂಸ
ವಿವೇಕಾನಂದರ ಮೇಲೆ ಶ್ರೇಷ್ಟ ಗುರು ರಾಮಕೃಷ್ಣ ಪರಮಹಂಸರ ಪ್ರಭಾವ ಅದು ಅದ್ಭುತ. ಎಷ್ಟು ಬರೆದರೂ ಮುಗಿಯುವುದೇ ಇಲ್ಲ. ವಿವೇಕಾನಂದರು ಬರೆದ ಅಷ್ಟೂ ಪುಸ್ತಕಗಳಲ್ಲಿ ಕೂಡ ಅಸಾಮಾನ್ಯ ಗುರು ಶಿಷ್ಯರ ದೈವಿಕವಾದ ಸಂಬಂಧದ ಬಗ್ಗೆ ನೂರಾರು ಉಲ್ಲೇಖಗಳು ಸಿಗುತ್ತವೆ. ಅವರ ಮೊದಲ ಭೇಟಿಯ ಬಗ್ಗೆಯೇ ತುಂಬಾ ರೋಮಾಂಚಕಾರಿ ಕಥನ ಇದೆ.
ದೇವರನ್ನು ಕಾಣುವ ಅತೀವವಾದ ಹಂಬಲದಿಂದ ನರೇಂದ್ರ ಹಲವು ಬಾರಿ ಕೋಲ್ಕತ್ತಾದ ಪ್ರಸಿದ್ದ ಕಾಳಿಕಾ ಮಂದಿರಕ್ಕೆ ಭೇಟಿ ಕೊಟ್ಟು ಅಲ್ಲಿ ಪರಮ ಹಂಸರನ್ನು ದೂರದಿಂದ ನೋಡಿ ನಿರಾಸೆಯಾಗಿ ಹಿಂದೆ ಬಂದಿದ್ದ. ಪ್ರತೀ ಬಾರಿಯೂ ಪರಮಹಂಸರು ನರೇಂದ್ರರಿಗೆ ಒಬ್ಬ ರೋಗಿಯ ಹಾಗೆ ಕಂಡಿದ್ದರು! ಇನ್ನೊಮ್ಮೆ ಹೋದಾಗ ಮಂಚದ ಮೇಲೆ ಅಂಗಾತ ಮಲಗಿದ್ದ ಪರಮ ಹಂಸರು ಜೀವಂತ ಶವದ ಹಾಗೆ ಕಂಡಿದ್ದರು! ಇಂಥವರು ನನಗೆ ದೇವರನ್ನು ತೋರಿಸಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ನರೇಂದ್ರನು ಬಂದಾಗಿತ್ತು!
ಆದರೆ ಮುಂದೆ ಒಂದು ದಿನ ಗಾಢವಾಗಿ ಮಲಗಿದ್ದ ಪರಮಹಂಸರು ನರೇಂದ್ರನ ಸ್ಪರ್ಶಕ್ಕೆ ಕಣ್ಣು ತೆರೆದು ದಿಗ್ಗನೆ ಎದ್ದು ಕೂತರು. ಬಾಲಕನಾದ ನರೇಂದ್ರನನ್ನು ಕಣ್ತುಂಬ ನೋಡಿ ಭಾವುಕರಾದರು. ಅವರ ಕಣ್ಣಿಂದ ಧಾರೆಯಾಗಿ ನೀರು ಹರಿದು ಕೆನ್ನೆಯನ್ನು ತೋಯಿಸಿತು.
ನರೇಂದ್ರನನ್ನು ಪ್ರೀತಿಯಿಂದ ಗಾಢವಾಗಿ ತಬ್ಬಿಕೊಂಡು “ಇದುವರೆಗೂ ಎಲ್ಲಿ ಹೋಗಿದ್ದೀಯ ಹುಡುಗಾ? ನಿನಗಾಗಿ ಎಷ್ಟು ವರ್ಷಗಳಿಂದ ಕಾಯುತ್ತಿದ್ದೆ!”ಎಂದರು.
ಅವರ ಆಲಿಂಗನದಲ್ಲಿ ನರೇಂದ್ರನಿಗೆ ಎಲ್ಲವೂ ಮರೆತು ಹೋಯಿತು. ಆ ಕ್ಷಣದಲ್ಲಿ ಕಿವಿಯಲ್ಲಿ ಸಾವಿರ ಸಾವಿರ ವೀಣೆಗಳ ಝೇಂಕಾರ ಕೇಳಿಸಿತ್ತು! ಪ್ರಣವದ ಓಂಕಾರ ಕಿವಿಯಲ್ಲಿ ಪ್ರತಿಧ್ವನಿ ಆಗಿತ್ತು!
ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇವರಾಜ್ ಅರಸ್ ರಾಜ್ಯದಲ್ಲಿ ಮಾಡಿದ್ದು ‘ಮೌನ ಸಾಮಾಜಿಕ ಕ್ರಾಂತಿ’
ಆ ಕ್ಷಣದಲ್ಲಿ ನರೇಂದ್ರ ಹೋಗಿ ಆ ಜಾಗದಲ್ಲಿ ಸ್ವಾಮಿ ವಿವೇಕಾನಂದರು ಹುಟ್ಟಿದ್ದರು! ಮುಂದೆ ನಡೆದದ್ದು ಭವ್ಯವಾದ ಇತಿಹಾಸ! ವಿವೇಕಾನಂದರು ವಿಶ್ವವನ್ನು ಗೆದ್ದದ್ದು, ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡಿದ್ದು…ಇವೆಲ್ಲಕ್ಕೂ ಆ ಭೇಟಿ ನಾಂದಿ ಹಾಡಿತ್ತು. ಹೀಗೆ ಶ್ರೇಷ್ಠ ತಾಯಿಯ, ತಂದೆಯ ಮತ್ತು ಗುರುವಿನ ಪ್ರಭಾವವನ್ನು ಪಡೆದ ಪ್ರತೀ ಶಿಲೆಯು ಕೂಡ ಅದ್ಭುತ ಶಿಲ್ಪವಾಗಿ ಮೂಡಿ ಬರುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ. ನಮಗೆ ಆ ಮೂರು ಭವ್ಯ ಸ್ಪರ್ಶಗಳು ದೊರೆಯಲಿ ಅನ್ನುವುದು ಹಾರೈಕೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ