Site icon Vistara News

ತಾತಯ್ಯ ತತ್ವಾಮೃತಂ: ಪರಮಪದವಿ ಸಾಧನೆಯ ಹಂತಗಳು

kaivara tatayya

ಕೈವಾರ ತಾತಯ್ಯನವರು ರಚಿಸಿರುವ ಶ್ರೀ ಅಮರನಾರೇಯಣ ಶತಕ ಭಕ್ತಿಪ್ರಧಾನವಾದ ಕೃತಿ. ಭಕ್ತ, ಭಕ್ತಿ, ಭಗವಂತನ ಬಗ್ಗೆ ಬೋಧಿಸುವುದೇ ಶ್ರೀ ಅಮರನಾರೇಯಣ ಶತಕ ಗ್ರಂಥದ ಮೂಲ ಉದ್ದೇಶವಾಗಿದೆ. ತಾತಯ್ಯನವರ ಈ ಬೋಧನೆಗಳು ಮುಕ್ತಿಗೆ ಸೋಪಾನವಾಗಿದೆ.

ಸಾಮಾನ್ಯವಾಗಿ ಪದವಿ ಎಂದರೆ ಲೌಕಿಕವಾದ ಅರ್ಥದಲ್ಲಿ ಹುದ್ದೆ, ಅಧಿಕಾರ ಎಂದಾಗುತ್ತದೆ. ಆದರೆ ತಾತಯ್ಯನವರು ತಮ್ಮ ಬೋಧನೆಯಲ್ಲಿ ಪರಮಪದವಿ ಎಂದಿದ್ದಾರೆ. ಪರಮ ಪದವಿ ಎಂದರೇನು? ಪರಮ ಎಂದರೆ ಯಾವುದೇ ಪದವಿಯ ಮೇಲೆ ಬೇರೊಂದು ಇಲ್ಲದಂತಹ ಕಟ್ಟಕಡೆಯ ಅಗ್ರಮಾನ್ಯ ಸ್ಥಿತಿ ಎಂದರ್ಥ. ಇಂತಹ ಅಗ್ರಮಾನ್ಯವಾದ ಪರಮಪದವಿ ಮಾನವರ ಲೋಕದಲ್ಲಿ ಇಲ್ಲ. ಏಕೆಂದರೆ ಇಲ್ಲಿ ಒಂದಕ್ಕಿಂತ ಒಂದು ದೊಡ್ಡ ಸ್ಥಾನಗಳು ಇದೆ. ಎಷ್ಟೇ ಶೋಧಿಸಿದರೂ ಪರಮ ಪದವಿ ಮಾನವರ ಲೋಕದಲ್ಲಿ ಇಲ್ಲ. ಆದರೆ ಪರಮಾತ್ಮನು ಆಳುವ ಲೋಕದಲ್ಲಿ ಪರಮಪದವಿ ಇದೆ. ಅದು ಮುಕ್ತಿಯ ಸಾಮ್ರಾಜ್ಯ. ಪರಮ ಪದವಿ ಎಂದರೆ ಮುಕ್ತಿ, ಮೋಕ್ಷ. ಈ ಪರಮ ಪದವಿಯು ಪರಮಾತ್ಮನ ಸಮಕ್ಷಮದಲ್ಲಿರುವ ಸಾನ್ನಿಧ್ಯ. ಇಂತಹ ಪರಮಪದವಿಯನ್ನು ಪಡೆಯಬೇಕಾದರೆ ಏನು ಮಾಡಬೇಕು? ಈ ಪರಮಪದವಿಯನ್ನು ಪಡೆಯಲು ಇರುವ ಅರ್ಹತೆಗಳೇನು? ತಾತಯ್ಯನವರು ಹೀಗೆ ಉತ್ತರಿಸಿದ್ದಾರೆ.

ಅಹಂಕಾರ ತ್ಯಾಗ:

ಪರಮಪದವಿಯನ್ನು ಪಡೆಯುವ ಸಾಧಕನಿಗೆ ತಾತಯ್ಯನವರು ಸಾಧನೆಯ ಹಂತಗಳನ್ನು ಬೋಧಿಸಿದ್ದಾರೆ. ಅಮರನಾರೇಯಣ ಶತಕದ ಪದ್ಯವು ಈ ರೀತಿಯಾಗಿದೆ.

ತಾನನುಯಹಂಕಾರ ತಲಪು ದಗ್ಧಮು ಜೇಸಿ
ಮಾಯಕಾಯಮು ಮೀದ ಮಮತ ವಿಡಚಿ
ಸಂಸಾರವ್ಯಸನಮನು ಚಲಿಜ್ವರಾದುಲನೆಲ್ಲ
ಅಂಟಿಯಂಟಕ ಜಾರು ವಂಟು ದೆಲಿಸಿ||

ಯಾರಾದರೆ ಪರಮಪದವಿಯನ್ನು ಪಡೆಯಲೇ ಬೇಕು ಎಂದುಕೊಂಡು ಸಾಧನೆಯಲ್ಲಿರುವರೋ ಅವರು ಮೊದಲನೆಯದಾಗಿ ನಾನು ಎನ್ನುವ ಅಹಂಕಾರವನ್ನು ಬಿಡಬೇಕು, ತ್ಯಾಗಮಾಡಬೇಕು. ಅಷ್ಟೇ ಅಲ್ಲ, ಅಹಂಕಾರವೆಂಬ ಭಾವನೆಯನ್ನು ಸುಟ್ಟು ಬೂದಿ ಮಾಡು ಎನ್ನುತ್ತಿದ್ದಾರೆ ತಾತಯ್ಯನವರು. ನಾನು ಎನ್ನುವ ಅಹಂಕಾರದ ಒಂದು ಸ್ವಲ್ಪ ಅವಶೇಷವಿದ್ದರೂ ಅದು ಸಮಯವನ್ನು ನೋಡಿ ಭಾವನೆಯೊಳಗೆ ಬಂದು ಸೇರಿಬಿಡುತ್ತದೆ. ಈ ಕಾರಣದಿಂದ ತಾತಯ್ಯನವರು ಅಹಂಕಾರವನ್ನು ಸುಟ್ಟು ಬೂದಿ ಮಾಡಬೇಕು ಎನ್ನುತ್ತಿದ್ದಾರೆ.

ಇನ್ನು ಎರಡನೇಯ ಸಾಧನೆಯೆಂದರೆ “ಮಾಯಕಾಯಮು ಮೀದ ಮಮತ ವಿಡಚಿ” ಎಂದಿದ್ದಾರೆ. ಪರಮಪದವಿ ಬೇಕೆನ್ನುವ ಸಾಧಕ ಭಕ್ತನು ಮಣ್ಣುಗೂಡಿ ಮಾಯವಾಗುವ ದೇಹದ ಮೇಲೆ “ನನ್ನದು”ಎಂಬ ಮಮತೆಯನ್ನು ಬಿಡಬೇಕು ಎನ್ನುತ್ತಿದ್ದಾರೆ ತಾತಯ್ಯನವರು.

ಮೂರನೇಯ ಸಾಧನೆಯೆಂದರೆ ಸಂಸಾರದ ವ್ಯಸನಗಳೆಂಬ ಚಳಿ-ಜ್ವರಗಳೆಲ್ಲವನ್ನೂ ಅವುಗಳು ತಾವಾಗಿ ಬಂದು ಮುತ್ತಿಕೊಂಡಾಗ, ಅಂಟಿಕೊಂಡಂತೆ ತೋರ್ಪಡಿಸಿಕೊಂಡರೂ, ಅಂಟದೆ ಜಾರಿಕೊಳ್ಳುವ ಜೀವನ ವಿಧಾನವನ್ನು ಅರಿತುಕೊಳ್ಳಬೇಕು ಎನ್ನುತ್ತಿದ್ದಾರೆ. ವ್ಯಸನವೆಂದರೆ ಎಷ್ಟೇ ಪ್ರಯತ್ನಿಸಿದರೂ ಬಿಟ್ಟು ಹೋಗದ ವ್ಯಾಮೋಹ. ಈ ವ್ಯಾಮೋಹವೇ ಮಾನವರ ಶೋಕಕ್ಕೆ ಕಾರಣವಾಗಿರುತ್ತದೆ. ಇದನ್ನೇ ತಾತಯ್ಯನವರು ಚಳಿಜ್ವರ ಎಂದಿದ್ದಾರೆ.

ಸುಬುದ್ಧಿ:

ತಾತಯ್ಯನವರು ಪರಮಪದವಿ ಪಡೆಯುವ ಸಾಧನೆಯ ವಿಧಾನಗಳನ್ನು ತಿಳಿಸುತ್ತಾ ಸುಬುದ್ಧಿಯ ಬಗ್ಗೆ ಹೀಗೆ ಪ್ರಸ್ತಾಪಿಸಿದ್ದಾರೆ.

ಪರಧನ-ಪರದಾರ-ಪರನಿಂದಲಕು ಚೊರಕ
ಪರತಂತ್ರುಡೈಯುಂಡುಟದಿ ಸುಬುದ್ಧಿ||

ಪರಧನ, ಪರಸ್ತ್ರೀ, ಪರನಿಂದೆಗಳಿಗೆ ಹೋಗದೆ ನಿರ್ಲಿಪ್ತವಾಗಿರುವುದೇ ಸುಬುದ್ಧಿ ಎನ್ನುತ್ತಿದ್ದಾರೆ. ಪರಧನ-ಪರಸ್ತ್ರೀ ಮೋಹಗಳು ಬದುಕಿನಲ್ಲಿ ದು:ಖಕರವಾಗಿರುತ್ತದೆ ಎಂಬುದನ್ನು ಮರೆತು ಕ್ಷಣಿಕದ ಸುಖಕ್ಕೆ ಆಸೆಪಡುತ್ತಾನೆ. ತನ್ನ ಸ್ವಾರ್ಥಕ್ಕೆ ಅಡ್ಡಿಪಡಿಸಿದರೆ ಅವರ ಮೇಲೆ ದೋಷಾರೋಪಣೆ ಮಾಡುತ್ತಾನೆ. ತನಗಿಂತ ಅನುಕೂಲ ಸ್ಥಿತಿಯುಳ್ಳವರನ್ನು ಕಂಡು ಅಸೂಯೆಯಿಂದ ಪರನಿಂದೆಗೆ ಇಳಿಯುತ್ತಾನೆ. ಹೀಗಿರುವಾಗ ಪರಮಪದವಿ ಹೇಗೆ ಸಿಗುತ್ತದೆ? ಇವರು ಮನಸ್ಸಿನ ಮಾಲಿನ್ಯವನ್ನು ಬೆಳೆಸಿಕೊಂಡು ಪಾಪದ ರಾಶಿ ಬೆಳೆಯುತ್ತಾ ಸಾಗಿತೇ ಹೊರತು ಪುಣ್ಯ ಸಂಪಾದನೆಯಾಗಲಿಲ್ಲ. ಒಂದು ವೇಳೆ ಪುಣ್ಯವೇ ಬಂದರೂ ಅದರಿಂದ ಭೋಗದ ಜೀವನ ಲಭಿಸಿತೇ ಹೊರತು ಹುಟ್ಟು ಸಾವುಗಳಿಂದ ಮುಕ್ತವಾಗುವ ಪರಮಪದವಿ ಲಭಿಸುವುದಿಲ್ಲ.

ತಾತಯ್ಯನವರು ಪರಧನದಿಂದ ಪ್ರಾಣಹಾನಿಯಾಗುತ್ತದೆ, ಈ ಕಾರಣದಿಂದ ಪರರ ಸ್ವತ್ತನ್ನು ವಿಷ ಸಮಾನವೆಂದು ಭಾವಿಸಿದವನಿಗೆ ತೊಂದರೆಯಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಪರಸ್ತ್ರೀಯರನ್ನು ಕಂಡಾಗ ಪಾಪಬುದ್ಧಿ ಹುಟ್ಟುವ ಮೊದಲೇ ತಾಯಿಗೆ ಸಮಾನವೆಂದು ಭಾವಿಸಿದವನನ್ನು ತತ್ವನಿಷ್ಠನಾದ ಯೋಗಿಯಂದೂ ಹೇಳಿದ್ದಾರೆ. ಹೀಗಾಗಿ ಪರಮ ಪದವಿಯನ್ನು ಪಡೆಯಬೇಕಾದರೆ ಕುಬುದ್ಧಿಯು ನಾಶವಾಗಿ ಸುಬುದ್ಧಿಯು ಬರಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: Ganesh Chaturthi: ಶರಣು ಶರಣು ಕುಂಡಾಲಿಭೂಷಣ…

ಗುರುಧ್ಯಾನ ಧುರೀಣನಾಗು:

ಅಹಂಕಾರ ಹಾಗೂ ದೇಹದ ವ್ಯಾಮೋಹವನ್ನು ಬಿಟ್ಟು, ಅಂಟಿ ಅಂಟದಂತೆ ಸಂಸಾರವನ್ನು ಮಾಡುತ್ತಾ, ಪರಧನ-ಪರಸ್ತ್ರೀಯನ್ನು ಬಯಸದೇ, ಪರರ ದೂಷಣೆಯನ್ನು ಮಾಡದೆ, ಚಿಂತಾಕ್ರಾಂತನಾಗದೆ ಲೌಕಿಕ ಸುಖಗಳ ಎಲ್ಲಾ ಬಂಧಗಳನ್ನು ಕಡಿದುಕೊಳ್ಳಲು ಏನು ಮಾಡಬೇಕು? ಇದಕ್ಕೆ ತಾತಯ್ಯನವರು ಪದ್ಯದ ಕೊನೆಯಲ್ಲಿ ಹೀಗೆ ಹೇಳಿದ್ದಾರೆ.

ಜಾಲಿ ಬೊಂದಕ ಯಿಹಜಾಲಮುಲ್ ಖಂಡ್ರಿಂಚಿ
ಶ್ರೀಗುರು ಧ್ಯಾನಧುರೀಣುಡೈನ
ಸಜ್ಜನುಡು ಚೇರು ಸರ್ವೇಶು ಸಮುಖಮುನಕು
ಪಾಮುರುಲಕೇಲ ಕಲುಗುನು ಪರಮ ಪದವಿ||

ಲೌಕಿಕದ ಎಲ್ಲಾ ಬಂಧನಗಳಲ್ಲಿ ಆಸೆ ಪಡದೆ, ಅವುಗಳ ಕಡೆ ಗಮನ ಕೊಡದೆ ಶ್ರೀಗುರುಧ್ಯಾನದಲ್ಲಿ ನಿರಂತರವಾಗಿ ಮಗ್ನನಾದರೆ, ಇಂತಹ ಭಕ್ತಿಸಾಧಕನಾದ ಸಜ್ಜನನು ಸರ್ವೇಶ್ವರನ ಸಾನ್ನಿಧ್ಯ ಮುಕ್ತಿಗೆ ಸೇರುತ್ತಾನೆ. ಇದರ ಹೆಸರೇ ಪರಮ ಪದವಿ. ಈ ಹೇಳಿದ ಸಾಧನೆಗಳಿಲ್ಲದ ಪಾಮರರಿಗೆ ಪರಮ ಪದವಿ ಏಕಾದರೂ ಸಿಕ್ಕೀತು? ಎಂದು ತಾತಯ್ಯನವರು ಪ್ರಶ್ನಿಸುತ್ತಿದ್ದಾರೆ. ಅಹಂಕಾರವನ್ನು ಕೇಂದ್ರವಾಗಿಟ್ಟುಕೊಂಡು ಮಾನವರನ್ನು ಸಜ್ಜನ-ಪಾಮರ ಎಂದು ಎರಡು ವರ್ಗಗಳಾಗಿ ವಿಂಗಡಿಸಿದ್ದಾರೆ. ಲೌಕಿಕ ಭೋಗಗಳಲ್ಲಿ ಆಸಕ್ತಿಹೊಂದಿ, ದೇಹದ ಬಗ್ಗೆ ಅಭಿಮಾನವನ್ನು ಹೊಂದಿರುವವರನ್ನು ತಾತಯ್ಯನವರು ಪಾಮರರೆಂದು ಕರೆದಿದ್ದಾರೆ. ಅವರು ಅಶಾಶ್ವತವಾದ ಪ್ರಾಪಂಚಿಕ ಸುಖ-ಭೋಗಗಳನ್ನೇ ಆನಂದವೆಂದು ನಂಬಿರುತ್ತಾರೆ. ಇವರಿಗೆ ಗುರುಧ್ಯಾನದ ಮೇಲೆ ನಂಬಿಕೆ ಇರಲಾರದು. ಇಂಥವರಿಗೆ ಹೇಗೆ ಪರಮಪದವಿ ಸಿಗುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು.

“ಚಿಂತಲನ್ನಿಯು ವಿಡಿಚಿ ಶ್ರೀಗುರುನಿ ಯೇವೇಳ ಚಿಂತ ಶಾಯವೆ ನೀವು ಮನಸಾ, ಚಿಂತ ಚೇಸಿನಯಪುಡೇ ಸಿದ್ದಿಂಚು ಪರಮಪದವಿ ಶೀಘ್ರಮುನ ತೆಲಿಯವೇ ಮನಸಾ” ಪರಮ ಪದವಿ ಸಿದ್ಧಿಸಬೇಕಾದರೆ ಲೌಕಿಕವಾದ ಚಿಂತೆಗಳೆಲ್ಲವನ್ನೂ ಬಿಟ್ಟು ಶ್ರೀಗುರುವನ್ನು ಸದಾಕಾಲ ಚಿಂತನೆ ಮಾಡುತ್ತಾ ಗುರುಧ್ಯಾನ ಧುರೀಣನಾಗು ಎಂಬ ಸರಳ ಬೋಧನೆಯಿಂದ ತಾತಯ್ಯನವರು ಮಾನವರನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಶಿಷ್ಯನನ್ನು ಉದ್ಧರಿಸುವ ಕಾರುಣ್ಯಗುರು

Exit mobile version