- ತಪಸ್ವಿ
ಹರೇ ರಾಮ, ‘ಶಂಕರಂ ಲೋಕ ಶಂಕರಂ. ಆದಿ ಶಂಕರಾಚಾರ್ಯರು (Adi Shankaracharya) ಆಚಾರ್ಯತ್ರಯರಲ್ಲಿ ಮೇರು ಎಂದೆನಿಸಿದ ವೇದಾಂತ ಸಾಮ್ರಾಜ್ಯದ ತಾರೆಯಂತೆ ಪ್ರಕಾಶಿಸಿದವರು. ಆಚಾರ್ಯರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಧರ್ಮದ ಉದ್ಧಾರವನ್ನು ಮಾಡಿ ಲೋಕಕ್ಕೆ ಒಳಿತು ಮಾಡಿದರು. ಅಳಿಸಿದ ಆಚರಣೆಗಳನ್ನು, ತಿರುಗಿದ ಧರ್ಮದ ನಿಲುವನ್ನು ಪುನಃ ಸದ್ದಿಶೆಯ ಕಡೆ ತಿರುಗಿಸಿದರು. ಸಾವಿರಾರು ಗ್ರಂಥಗಳ ಮೂಲಕ ಧರ್ಮದ ಮೂಲಭೂತ ಸಂಪತ್ತನ್ನು ಧರ್ಮದ ಸಾರವನ್ನು ಮುಂದಿನವರವರೆಗೂ ತಲುಪಿಸುವ ಮಹತ್ಕಾರ್ಯ ಮಾಡಿದರು. ಮಠಗಳನ್ನು ಸ್ಥಾಪಿಸಿ ವೇದಗಳ ಪರಂಪರೆ, ನಮ್ಮ ದೇಶದ ಹಿರಿಮೆಯನ್ನು ಕಾಪಾಡುವಲ್ಲಿ ಅವರು ಶ್ರಮಿಸಿದರು. ಅದ್ವೈತ ವೇದಾಂತವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸುವ ಮೂಲಕ ಮೋಕ್ಷದ ಮಾರ್ಗ, ಆತ್ಮ ಸಾಕ್ಷಾತ್ಕಾರಗಳ ಮಾರ್ಗದ ಸಾಧನೆಯನ್ನು ಲೋಕಕ್ಕೆ ತೆರೆದಿಟ್ಟರು.
ಬದುಕಿದ್ದು ಅಲ್ಪವಾದರೂ ಅಲ್ಪರಿಗೆ ಬದುಕನ್ನು ನೀಡಿದವರು ಆಚಾರ್ಯರು. ಭಕ್ತಿ ಮಾರ್ಗದಿಂದ ಆರಂಭಿಸಿ ಅತ್ಯುನ್ನತ ಜ್ಞಾನ ಮಾರ್ಗದವರೆಗೂ ತಮ್ಮ ಕೃತಿಗಳನ್ನು ರಚಿಸಿ ನಮ್ಮಲ್ಲಿರುವ ಅಜ್ಞಾನವನ್ನು ತೊಲಗಿಸುವ ಕಾರ್ಯ ಮಾಡಿದರು. ನಾವೆಲ್ಲರೂ ನೂರು ವರ್ಷ ಬದುಕಿದರೂ ನಮ್ಮದು ಪೂರ್ಣ ಜೀವನ ಆಗಲಾರದು. ಆದರೆ ಆಚಾರ್ಯರು 32 ಸಂವತ್ಸರಗಳಿಗೆ ಪೂರ್ಣತೆಯ ಶಿಖರವನ್ನು ಏರಿದ ಮಹಾಯೋಗಿ. ಸಾಕ್ಷಾತ್ ಶಂಕರನ ಅವತಾರವಾದ ಶಂಕರರು ಲೋಕಕ್ಕೆ ಜ್ಞಾನದ ಮಹತಿಯನ್ನು ಹೊತ್ತಿಸಿದ ಮಹಾತ್ಮರು. ಧರ್ಮದ ಕಿಡಿಯನ್ನು ಹಚ್ಚಿ ಅದು ಮುಂದಿನ ಸಾವಿರಾರು ವರ್ಷಗಳ ಕಾಲ ಉರಿಯುವಂತೆ ಮಾಡಿದವರು. ದ್ವೈತದಿಂತ ಅದ್ವೈತ ಸಿದ್ಧಿಯ ಪ್ರಾಪ್ತಿಯ ಮಾರ್ಗವನ್ನು ಹಾಕಿದವರು. ನಮ್ಮ ಪರಂಪರೆಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ. ಅದನ್ನು ನಾವು ಶಂಕರರ ಜೀವನದಲ್ಲಿ ಕಾಣಬಹುದಾಗಿದೆ. ಎಂತಹ ಅಜ್ಞಾನಿಗಳಿಗೂ ಅರ್ಥವಾಗುವ ಹಾಗೆ ಸಂಸ್ಕೃತ ಭಾಷೆಯಲ್ಲಿ ತಮ್ಮ ಕೃತಿಗಳನ್ನು ರಚಿಸಿ ಲೋಕ್ಕೆ ಅನುಗ್ರಹ ಮಾಡಿದ್ದಾರೆ. ಸಾಮಾನ್ಯರಿಗೆ ಸಾಮಾನ್ಯರಂತೆ, ಜ್ಞಾನಿಗಳಿಗೆ ಮೇರು ಜ್ಞಾನಿಗಳಂತೆ ಸಾಧನೆಯ ಮಾರ್ಗ ತೋರಿದ ಮಹಾನ್ ಯತಿಗಳು ಆಚಾರ್ಯರು. ಅವರು ಸ್ಥಾಪಿಸಿದ ಮಠಗಳು ಇಂದಿಗೂ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದು ಲೋಕಕ್ಕೆ ಮಾರ್ಗದರ್ಶನ ಮಾಡುತ್ತಿವೆ.
ನಮ್ಮ ಸಾಧನೆ ಎಂದರೆ ಇಂತೆಯೇ ಇರಬೇಕು. ನಮ್ಮ ಕಾರ್ಯದಿಂದ ನಮ್ಮನ್ನು ಗುರುತಿಸುವಂತೆ ಆಗಬೇಕು ಹೊರತು ಹೆಸರಿನಿಂದ ಅಲ್ಲ. ಇಂದಿನ ಕಾಲದಲ್ಲಿ ವಿಷಯ ಸುಖದ ಹಿಂದೆ ಓಡುತ್ತಿರುವ ಎಲ್ಲರಿಗೂ ಆಚಾರ್ಯರ ಜೀವನವು ಮಾದರಿಯಾಗಬೇಕು. ಹಣವೇ ಎಲ್ಲಾ, ಅದರಿಂದಲೇ ಎಲ್ಲಾ ಸುಖವನ್ನು ಪಡೆಯಬಹುದು ಎಂದು ಇಂದಿನ ಶಿಕ್ಷಣವೂ ಕೂಡ ಹಣದ ಹಿಂದೆಯೇ ಓಡುವಂತೆ ಯುವಜನರ ಬುದ್ಧಿಯನ್ನು ತಿರುಗಿಸುತ್ತಿದೆ. ಆದ್ದರಿಂದ ನಮ್ಮ ದೇಶದಲ್ಲಿ ಇಂದಿಗೂ ಇಂತಹ ಮೌಢ್ಯ ಜೀವನವನ್ನು ಕಾಣುತ್ತಿದ್ದೇವೆ.
ಇದನ್ನೂ ಓದಿ : Sirsi News : ದೇವಸ್ಥಾನದ ಬಾಗಿಲು ಮುರಿದರು; ಚಾಕ್‌ಪೀಸ್‌ನಿಂದ ಶಿವಲಿಂಗದ ಮೇಲೆ ಬರೆದು ವಿಕೃತಿ
ಭಜ ಗೋವಿಂದಂ ಆಚಾರ್ಯರ ಕೃತಿಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡರೆ ಅದರಂತಹಾ ಸಜ್ಜೀವನ ಇನ್ನೊಬ್ಬರದಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಸರಿಯಾದ ಭಾರತೀಯ ಶಿಕ್ಷಣವನ್ನೊಳಗೊಂಡ ಶಿಕ್ಷಣವಾಗಬೇಕು. ಇಂದು ನಾವು ಬೇರೆ ಯಾರೋ ಬರೆದ ವಿಷಯಗಳನ್ನು ತರಗತಿಗಳಲ್ಲಿ ಓದುತ್ತಿದ್ದೇವೆ. ಆದರೆ ಆ ಎಲ್ಲಾ ವಿಚಾರಗಳನ್ನು ಎಷ್ಟೋ ಹಿಂದೆ ನಮ್ಮ ಪೂರ್ವಜರಾದ ಋಷಿ ಮುನಿಗಳು ವೇದ ಉಪನಿಷತ್ ಸಾಹಿತ್ಯಗಳಲ್ಲಿ ಹೇಳಿದ್ದಾರೆ. ಭಾಷಾ ಜ್ಞಾನದ ಲೋಪದಿಂದ ಈ ಸಾಹಿತ್ಯಗಳಲ್ಲಿ ಅಡಗಿರುವ ಸತ್ಯಗಳನ್ನು ತಿಳಿಯಲು ನಮಗೆ ಅಸಾಧ್ಯವಾಯಿತು. ನಂತರ ನಮ್ಮ ಒಳಗಿನ ಭಿನ್ನಾಭಿಪ್ರಾಯಗಳಿಂದ ನಮ್ಮನ್ನು ಬೇರೆಯವರು ವಸಾಹತು ನಡೆಸಿದರು. ನಾವು ನಮ್ಮತನದಿಂದ ದೂರವಾಗುತ್ತಾ ಬಂದೆವು. ಆದರೆ ಕಾಲವು ಇನ್ನೂ ಮುಗಿಯಲಿಲ್ಲ. ಕಳೆದು ಹೋಗುತ್ತಿರುವ ಧಾರ್ಮಿಕತೆಯನ್ನು ಪುನರ್ ಸ್ಥಾಪಿಸುವಲ್ಲಿ ನಮ್ಮ ಪ್ರಯತ್ನವು ಸಾಗಬೇಕು. ಎಷ್ಟೇ ಧರ್ಮವು ನಾಶವಾದರೂ ವಿನಾಶ ಎಂಬುವುದು ಈ ನಮ್ಮ ಸನಾತನ ಹಿಂದೂ ವೈದಿಕ ಧರ್ಮಕ್ಕೆ ಇಲ್ಲ. ನಮ್ಮ ಸನಾತನ ಧರ್ಮ ಎಂದರೆ ಪ್ರಕೃತಿ. ಸೂರ್ಯ ಚಂದ್ರರು ಇರುವವರೆಗೂ ಈ ಧರ್ಮವು ಶಾಶ್ವತ. ಇದು ಆಚಾರ್ಯರ ತತ್ತ್ವ ಸಂದೇಶದ ಸಂಕ್ಷಿಪ್ತ ನೋಟವಾಗಿದೆ.
ಆಚಾರ್ಯರ ತತ್ತ್ವ ಸಂದೇಶವನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ…