ಸಾಮಾನ್ಯವಾಗಿ ಮಾನವರು ಒಂದಲ್ಲಾ ಒಂದು ಚಿಂತೆಯಲ್ಲಿ ಇರುತ್ತಾರೆ. ಮಾನವರಾಗಿ ಬಂದ ಮೇಲೆ ನೋವು, ಕಷ್ಟ, ದುಃಖ ಸಹಜವಾದದ್ದು. ಇವುಗಳನ್ನು ಮೀರಿ ನಿಂತು ಸಾಧನೆಯನ್ನು ಮಾಡಿದವನು ಮಾತ್ರ ಸಾಧಕನೆನಿಸಿಕೊಳ್ಳುತ್ತಾನೆ. ಪ್ರಪಂಚದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಚಿಂತೆ ಇರುತ್ತದೆ. ಧನಕನಕದ ಚಿಂತೆ, ದೇಹಾಭಿಮಾನದ ಚಿಂತೆ, ಸಂಸಾರದ ಚಿಂತೆ ಹೀಗೆ ಇನ್ನೂ ಅನೇಕ ಚಿಂತೆಗಳು, ವ್ಯಥೆಗಳು. ಇವೆಲ್ಲಾ ಭೋಗದಿಂದ ಕೂಡಿರುವ ಅಜ್ಞಾನಿಯ ಬದುಕಿನ ಚಿಂತೆಗಳು. ಆದರೆ ಜ್ಞಾನಿಯದು ಚಿಂತೆಯಲ್ಲ, ಚಿಂತನೆ. ಅದು ತತ್ವಜ್ಞಾನವನ್ನು ಸಂಪಾದಿಸಿಕೊಂಡು ಮೋಕ್ಷವನ್ನು ಹೊಂದುವ ಚಿಂತನೆ. ಆತ್ಮಜ್ಞಾನವನ್ನು ಪಡೆದಂತಹ ಸಂತರು ಮಾತನಾಡಿದರೆ ಅದು ಸತ್ಯದ ಮಾತಾಗಿರುತ್ತದೆ.
ಸಂತ ಕನಕದಾಸರು “ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ” ಎಂಬ ಕೀರ್ತನೆಯನ್ನು ರಚಿಸಿ ಮಾನವರಿಗೆ ಲೋಕದ ಜಂಜಾಟಗಳಿಗೆ ತಲ್ಲಣಗೊಳ್ಳದೆ ಬದುಕಿನಲ್ಲಿ ಧೈರ್ಯವಾಗಿರಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ದೈವಶಕ್ತಿಯು ಸಕಲಜೀವರಾಶಿಗಳನ್ನು ಸಾಕಿ ಸಲಹುತ್ತದೆ. ಬೆಟ್ಟದ ಮೇಲೆ ಹುಟ್ಟಿರುವ ಮರಕ್ಕೆ ನೀರನ್ನು ಕೊಡುವವರು ಯಾರು? ಕಾಡಿನಲ್ಲಿ ವಾಸಿಸುವ ಮೃಗಪಕ್ಷಿಗಳಿಗೆ ಆಹಾರ ದೊರಕುವಂತೆ ಮಾಡುವವರು ಯಾರು? ನವಿಲಿಗೆ ಸುಂದರ ರೂಪವನ್ನು ನೀಡಿದವರು ಯಾರು? ಹವಳಕ್ಕೆ ಕೆಂಪು ಬಣ್ಣ ನೀಡಿದವರು ಯಾರು? ಕಲ್ಲಿನಲ್ಲಿರುವ ಕಪ್ಪೆಗೂ ಆಹಾರವನ್ನು ನೀಡಿದವರು ಯಾರು? ಹೀಗೆ ಉದಾಹರಣೆಗಳೊಂದಿಗೆ ಕನಕದಾಸರು ಭಗವಂತನಾದ ಕಾಗಿನೆಲೆ ಆದಿಕೇಶವ ಎಲ್ಲರನ್ನೂ ಸಲಹುತ್ತಾನೆ ಸಂಶಯಪಡದಿರು ಎಂದು ಬೋಧಿಸಿದ್ದಾರೆ.
ಕೈವಾರದ ತಾತಯ್ಯನವರು ಪೂರ್ವಜನ್ಮದ ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಹಲವಾರು ಸಂದೇಶಗಳನ್ನು ನೀಡಿದ್ದಾರೆ. ಅಮರನಾರೇಯಣ ಶತಕದ ಈ ಬೋಧನೆ ಹೀಗಿದೆ.
“ಪುಟ್ಟಿಂಚು ದೈವಂಬು ಪೋಷಿಂಪನೇರಡಾ
ವ್ಯಥಲು ಪಡುಟ ಶುದ್ಧ ವೆರ್ರಿತನಮು
ತನ ಪೂರ್ವ ಕರ್ಮಂಬು ತಪ್ಪಕ ತನವೆಂಟ
ತಗಲಿ ವ್ಯಾಪಿಂಚಕದಿ ಯಾಲ ವಿಡುಚು”
ಹುಟ್ಟಿಸಿದ ದೇವರು ಪೋಷಿಸಲಾರನೇ? ಪೋಷಿಸಿಯೇ ಪೋಷಿಸುತ್ತಾನೆ. ವ್ಯಥೆ, ಚಿಂತೆ ಪಡುವುದು ತೀರಾ ಹುಚ್ಚುತನವಾಗುತ್ತದೆ. ತನ್ನ ಪೂರ್ವಜನ್ಮದ ಕರ್ಮಗಳು ಮಾನವರನ್ನು ತಪ್ಪದೆ ಆಕ್ರಮಿಸುತ್ತದೆ. ಹೇಗೆಂದರೆ ಸಾವಿರ ಗೋವುಗಳ ನಡುವೆ ಇರುವ ತಾಯಿಹಸುವನ್ನು ಹುಡುಕಿಕೊಂಡು ಬರುವ ಕರುವಿನಂತೆ ನಮ್ಮ ಪೂರ್ವಕರ್ಮಗಳು ನಮ್ಮನು ಬಿಡದೆ ಹಿಂಬಾಲಿಸುತ್ತದೆ. ವಿಶ್ವದ ಸಕಲ ಜೀವರಾಶಿಗಳನ್ನು ಸೃಷಿಸಿರುವ ಪರಮಾತ್ಮನು ನಮ್ಮನ್ನು ಪೋಷಿಸುತ್ತಾನೆ ಎಂಬ ನಂಬಿಕೆಯಿಲ್ಲದೆ, ನಾನು-ನನ್ನದು ಎಂಬ ಭ್ರಾಂತಿಯಲ್ಲಿ ಬಿದ್ದು ವ್ಯಥೆಪಡುವಂತೆ ಆಗಿದೆಯಲ್ಲಾ ಎಂಬ ಕಳವಳವನ್ನು ತಾತಯ್ಯನವರು ವ್ಯಕ್ತಪಡಿಸುತ್ತಿದ್ದಾರೆ.
ತಾತಯ್ಯನವರ ತೀರ್ಪು
ಪ್ರಸ್ತುತ ಜಗತ್ತು ಎದುರಿಸುತ್ತಿರುವ ದು:ಖದ ಹಿನ್ನಲೆಯಲ್ಲಿ ತಾತಯ್ಯನವರ ಈ ಬೋಧನೆ ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಆಳವಾಗಿ ಆಲೋಚಿಸಿದಾಗ ರಹಸ್ಯದ ಮರ್ಮವು ಗೋಚರಿಸುತ್ತದೆ.
ತಲಪುಲನ್ನಿಯು ಕಲ್ಲ ತನುವು ಮರಿ ಕಲ್ಲ
ತಲ್ಲಿತಂಡ್ರುಲು ಕಲ್ಲ ತನವಾರು ಕಲ್ಲ
ವಿವರಿಂಚಿ ಚೂಚಿತೇ ವಿಶ್ವಮೇ ಕಲ್ಲರಾ
ನಾದಬ್ರಹ್ಮಾನಂದ ನಾರೇಯಣ ಕವಿ||
ಮಾನವನು ಆಸೆಪಟ್ಟು ನಂಬಿಕೊಂಡಿರುವ ಕಲ್ಪನೆಗಳೆಲ್ಲವೂ ಸುಳ್ಳು. ನಶ್ವರವಾದ ಶರೀರವೂ ಸುಳ್ಳು. ಈ ಶರೀರಕ್ಕೆ ಜನ್ಮದಾತರಾಗಿರುವ ತಾಯಿ ತಂದೆಯರು ಸುಳ್ಳು. ತನ್ನವರೆಂದುಕೊಂಡು ಪ್ರೀತಿಸುವ ಬಂಧು-ಬಳಗ, ಮಿತ್ರರೆಲ್ಲರೂ ಸುಳ್ಳು. ಈ ವಿಷಯವನ್ನು ಆಳವಾಗಿ ವಿಚಾರ ಮಾಡಿ ನೋಡಿದರೆ ಇಡೀ ವಿಶ್ವವೇ ಸುಳ್ಳಿನ ಭ್ರಮೆಯ ಕಲ್ಪನೆಯಾಗಿದೆ ಎನ್ನುತ್ತಿದ್ದಾರೆ ತಾತಯ್ಯನವರು.
ಇಲ್ಲಿ ಸುಳ್ಳೆಂದರೆ ನಾಶಗುಣವನ್ನು ಹೊಂದುವ, ಅದೃಶ್ಯವಾಗುವ ಭೌತಿಕ ಸೃಷ್ಠಿ ಎಂದು ಅರ್ಥ. ಈ ದೇಹದ ಸುಖವೇ ನನ್ನ ಸುಖ. ಪ್ರಪಂಚದಲ್ಲಿರುವ ಭೋಗವಸ್ತುಗಳಿಂದ ಸಂತೋಷ ಸಿಗುತ್ತದೆ ಎಂಬ ಭ್ರಾಂತಿಯೇ ಮೋಹ. ತಾಯಿ, ತಂದೆ, ಬಂಧು ಬಳಗ ಎಲ್ಲರೂ ನನ್ನನ್ನು ತುಂಬಾ ಪ್ರೀತಿಸುತ್ತಾರೆ, ನನ್ನ ಸುಖಕ್ಕಾಗಿ ಅವರುಗಳು ಎಲ್ಲಾ ಬಗೆಯ ತ್ಯಾಗಗಳಿಗೂ ಸಿದ್ಧರಿರುತ್ತಾರೆ ಎಂದು ನಂಬಿಕೊಳ್ಳುವುದು ಸುಳ್ಳು. ಧನಕನಕ ಮುಂತಾದ ಭೌತಿಕವಾದ ಸಂಪತ್ತುಗಳು ನನ್ನನ್ನು ಎಲ್ಲಾ ವಿಪತ್ತುಗಳಿಂದ ಪಾರುಮಾಡುವುದು ಹಾಗೂ ಎಂದೆಂದಿಗೂ ತನ್ನೊಡನೆ ಇರುತ್ತದೆ ಎಂಬ ಕಲ್ಪನೆಯೇ ಮಮತೆ. ಆದರೆ ಇದೆಲ್ಲವೂ ಸುಳ್ಳು ಎಂಬುದು ನಿತ್ಯದ ಅನುಭವದಲ್ಲಿ ನಿಧಾನವಾಗಿ ಗೋಚರವಾಗುತ್ತದೆ. ಈ ನಿಟ್ಟಿನಲ್ಲಿ ಆಳವಾಗಿ ದೀರ್ಘಾಲೋಚಿಸಿದರೆ ಇಡೀ ವಿಶ್ವವೇ ಭ್ರಮೆಯಾಗಿ ಕಾಣುತ್ತದೆ. ಯಾವ ಭೂಭಾಗ ಯಾವ ಕಾರಣದಿಂದ ಯಾವಾಗ ಹಾಳಾಗಿಹೋಗುವುದೋ ಗೊತ್ತಿಲ್ಲ. ಸೃಷ್ಠಿ, ಸ್ಥಿತಿಗಳು ಹೇಗಿದೆಯೋ ಹಾಗೆಯೇ ಲಯವೂ ಇದೆ. ಆದುದರಿಂದ ಪ್ರಾಪಂಚಿಕ ಭೋಗಗಳಲ್ಲಿ ಮೈಮರೆಯಬೇಡ. ನನ್ನನ್ನು ಪೋಷಿಸುವ ಸೃಷ್ಠಿಕರ್ತನ ಚಿಂತನೆಯನ್ನು ಮಾಡಿ ಜನ್ಮ ಸಾರ್ಥಕ ಮಾಡಿಕೋ ಎನ್ನುತ್ತಿದ್ದಾರೆ ತಾತಯ್ಯನವರು.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಚಿಂತೆಗಳಿಂದ ಮುಕ್ತರಾಗಲು ಉಪಾಯ
ತಾತಯ್ಯನವರು ಪ್ರಶ್ನೆಗಳನ್ನು ನಮ್ಮ ಮುಂದೆ ಹರಡಿ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಆ ಪ್ರಶ್ನೆಗಳಿಗೆ ಉತ್ತರವನ್ನು ಸಮರ್ಪಕವಾಗಿ ಅನುಭವದಿಂದ ಹೇಳುತ್ತಾರೆ. ತಾತಯ್ಯನವರು ಚಿಂತೆಗಳಿಂದ ಮುಕ್ತರಾಗಲು ಒಂದು ಸರಳ ಉಪಾಯವನ್ನು ಹೇಳುತ್ತಿದ್ದಾರೆ. ಅದೇನೆಂದರೆ..
ರಾಮನಾಮಾಮೃತ ಸ್ಮರಣಲೋಲುಂಡೈತೆ
ಅತಿಘೋರ ದುರಿತಮುಲ್ ಅಂಟವತನಿ
ದೈವಮಾ ನಮ್ಮಿತಿನಿ ದರಿ ಚೇರ್ಚುಮನುಕೊನ್ನ
ಶರಣುಲ ರಕ್ಷಿಂಚು ಚಕ್ರಧರುಡು
ರಾಮಾನಾಮಮು ಜೀವನಂಬನಿ ನಮ್ಮಿವುನ್ನ
ಭಾಗವತುಲಕು ಭವಬಂಧ ಭಯಮು ಲೇದು||
ಇದರ ಅರ್ಥವಿಷ್ಟೆ. ರಾಮನಾಮವೆಂಬ ಅಮೃತದ ಸ್ಮರಣೆಯಲ್ಲಿ ಮಗ್ನನಾದರೆ ಅತಿಘೋರವಾದ ಪಾಪಗಳು ಮುಟ್ಟುವುದಿಲ್ಲ. ದೇವರೇ, ನಿನ್ನನ್ನು ನಂಬಿದ್ದೇನೆ, ಈ ಕಾರಣದಿಂದ ನಿನ್ನ ಬಳಿಗೆ ಸೇರಿಸಿಕೊಂಡು ರಕ್ಷಿಸು ಎಂದು ಬೇಡುತ್ತಾ ಶರಣಾದವರನ್ನು ಚಕ್ರಧರನಾದ ಪರಮಾತ್ಮನು ರಕ್ಷಿಸುತ್ತಾನೆ. ರಾಮನಾಮವೇ ಜೀವನವೆಂದು ನಂಬಿಕೊಂಡಿರುವ ಭಾಗವತರಿಗೆ ಭವಬಂಧದ ಭಯವಿಲ್ಲ. ರಾಮನಾಮವೇ ಬದುಕೆಂದು ನಂಬಿದ ಭಕ್ತರಿಗೆ ಕರ್ಮಬಂಧದ ಭಯವಾಗಲಿ, ಪಾಪಗಳ ಆಕ್ರಮಣವಾಗಲಿ, ಭವಬಂಧನದ ಭೀತಿಯಾಗಲಿ ಇಲ್ಲವೆಂಬ ದಿವ್ಯವಾದ ಸಂದೇಶವನ್ನು ತಾತಯ್ಯನವರು ಜಗತ್ತಿಗೆ ಸಾರುತ್ತಿದ್ದಾರೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ರಾಮನ ಭಜಿಸು ಸದಾ ಮನಸೇ…