ಗಿರೀಶ್ ಲಿಂಗಣ್ಣ
ಡ್ರೋನ್‌ಗಳು ಜಗತ್ತನ್ನು ಈಗ ಬಿರುಗಾಳಿಯಂತೆ ಆವರಿಸುತ್ತಿವೆ. ಡ್ರೋನ್‌ಗಳನ್ನು ಮಿಲಿಟರಿಗೆ (Drone Warfare) ಹಲವು ವರ್ಷಗಳಿಂದ ಬಳಕೆ ಮಾಡಲಾಗುತ್ತಿದ್ದರೂ, ಇತ್ತೀಚೆಗೆ ನಡೆಯುತ್ತಿರುವ ಚಕಮಕಿಗಳು ನಿಜಕ್ಕೂ ಡ್ರೋನ್‌ಗಳನ್ನು ಬಳಸಿ, ಯುದ್ಧದ ಆರ್ಥಿಕತೆಯನ್ನೇ ಬದಲಾಯಿಸುತ್ತಿವೆ. ಕಳೆದ ವಾರ ಉತ್ತರ ಕೊರಿಯಾ ತನ್ನ ಮೇಲೆ ಕಳುಹಿಸಿದ್ದ ಸಣ್ಣ ಗಾತ್ರದ ಡ್ರೋನ್‌ಗಳನ್ನು ಹೇಗೆ ಎದುರಿಸುವುದೆಂದು ತಿಳಿಯದೆ ದಕ್ಷಿಣ ಕೊರಿಯಾ ಕಂಗಾಲಾಗಿ ಹೋಗಿತ್ತು.
ಕ್ಷಿಪಣಿಗಳು ಅತ್ಯಂತ ಬೆಲೆಬಾಳುವ ಆಯುಧಗಳಾಗಿರುವುದರಿಂದ, ಇಂತಹ ಡ್ರೋನ್‌ಗಳನ್ನು ಎದುರಿಸಲು ಅವುಗಳನ್ನು ಬಳಸುವುದರಲ್ಲಿ ಅರ್ಥವಿರುವುದಿಲ್ಲ. ಆದರೆ ಹೆಲಿಕಾಪ್ಟರ್‌ಗಳು ಮತ್ತು ಮೆಷಿನ್ ಗನ್‌ಗಳು ಇಂತಹ ದಾಳಿಯನ್ನು ಎದುರಿಸಲು ಸುಸಜ್ಜಿತವಾಗಿಲ್ಲ. ಪ್ರಸ್ತುತ ಉಕ್ರೇನ್ ಸಹ ಡ್ರೋನ್‌ಗಳನ್ನು ಬಳಸಲು ಸಿದ್ಧವಾಗುತ್ತಿದ್ದು, ಆ ಮೂಲಕ ಯುದ್ಧವನ್ನು ತನ್ನ ಪರವಾಗಿ ತಿರುಗಿಸಲು ಸಾಧ್ಯವೇ ಎಂಬ ಆಶಾಭಾವನೆಯನ್ನು ಹೊಂದಿದೆ.
ಡ್ರೋನ್ ರಕ್ಷಣೆ: ರಷ್ಯಾದ ಡ್ರೋನ್‌ಗಳನ್ನು ಎದುರಿಸುವ ಮಾರ್ಗಗಳನ್ನು ಸಂಶೋಧಿಸುತ್ತಿರುವ ಉಕ್ರೇನ್
ರಷ್ಯಾ ಪ್ರಸ್ತುತ ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರಿಸುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ ಉಕ್ರೇನ್ ಸರ್ಕಾರ ತಾನೂ ಸಹ ಯುದ್ಧ ಡ್ರೋನ್‌ಗಳನ್ನು ಅಭಿವೃದ್ಧಿ ಪಡಿಸಿ, ಯುದ್ಧದಲ್ಲಿ ರಷ್ಯಾ ತನ್ನ ಮೇಲೆ ದಾಳಿ ನಡೆಸಲು ಕಳುಹಿಸುವ ಡ್ರೋನ್‌ಗಳನ್ನು ಸಿಡಿಸಲು ಯೋಜನೆ ಹಾಕಿಕೊಂಡಿರುವುದಾಗಿ ಹೇಳಿದೆ. ಉಕ್ರೇನಿನ ಡಿಜಿಟಲ್ ಟ್ರಾನ್ಸ್‌ಫರ್ಮೇಶನ್ ಸಚಿವರಾದ ಮಿಖಾಯಿಲೋ ಫೆಡೊರೊವ್ ಅವರ ಪ್ರಕಾರ, ಉಕ್ರೇನ್ ಈಗಾಗಲೇ ಅಂದಾಜು 1,400 ಡ್ರೋನ್‌ಗಳನ್ನು ಖರೀದಿಸಿದೆ. ಪ್ರಾಥಮಿಕವಾಗಿ ಅವುಗಳನ್ನು ವಿಚಕ್ಷಣಾ ಉದ್ದೇಶದಿಂದ ಖರೀದಿಸಲಾಗಿದ್ದರೂ, ಈಗ ಉಕ್ರೇನ್ ಅವುಗಳನ್ನು ದಾಳಿ ನಡೆಸುವ ಡ್ರೋನ್‌ಗಳಾಗಿ ಅಭಿವೃದ್ಧಿ ಪಡಿಸಿ, ಮೂರರಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ದಾಳಿ ನಡೆಸುವಂತೆ ಮಾಡಲು ಉದ್ದೇಶಿಸಿದೆ. ಫೆಡೊರೊವ್ ಅವರು ಮುಂದಿನ ದಿನಗಳಲ್ಲಿ ಈ ಡ್ರೋನ್‌ಗಳನ್ನು ಹೆಚ್ಚಿನ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಬಹುದು ಎಂದು ಹೇಳಿದ್ದರೂ, ಅದರ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಅವರು ಹಂಚಿಕೊಂಡಿಲ್ಲ.
ಇತ್ತೀಚಿನ ವಾರಗಳಲ್ಲಿ, ರಷ್ಯನ್ ಅಧಿಕಾರಿಗಳು ಉಕ್ರೇನ್ ಸೇನೆ ರಷ್ಯಾದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಆರೋಪ ಮಾಡಿದ್ದರು. ಸೋಮವಾರ ತನ್ನ ಮೇಲೆ ದಾಳಿ ನಡೆಸಲು ಬಂದ ಉಕ್ರೇನ್ ಡ್ರೋನನ್ನು ಎಂಜೆಲ್ಸ್ ವಾಯುನೆಲೆಯಲ್ಲಿ ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿದೆ. ಉಕ್ರೇನ್ ಇನ್ನೂ ತಾನು ಈ ಡ್ರೋನ್ ದಾಳಿ ನಡೆಸಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ರಷ್ಯಾದ ದಾಳಿಗೆ ಪ್ರತಿದಾಳಿ ನಡೆಸುವುದಾಗಿ ವಿಭಿನ್ನ ಬೆದರಿಕೆಗಳನ್ನು ಒಡ್ಡಿದೆ. ರಷ್ಯಾದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್ ದಾಳಿ ನಡೆಸಲು ಬರುವ ರಷ್ಯನ್ ಡ್ರೋನ್‌ಗಳನ್ನು ಹೊಡೆದುರುಳಿಸಬಲ್ಲ ಡ್ರೋನ್‌ಗಳ ನಿರ್ಮಾಣದ ಕುರಿತಾದ ಸಂಶೋಧನೆ ನಡೆಸುತ್ತಿದೆ.
ಡ್ರೋನ್‌ಗಳ ಜೊತೆಗೆ, ಉಕ್ರೇನ್ ಈಗ ಇಲಾನ್ ಮಸ್ಕ್ ಅವರ ನೇತೃತ್ವದ ಸ್ಟಾರ್ ಲಿಂಕ್‌ನಂತಹ ಸ್ಯಾಟಲೈಟ್ ಇಂಟರ್ನೆಟ್ ವ್ಯವಸ್ಥೆಗಳ ಮೇಲೂ ಅವಲಂಬಿತವಾಗಿದೆ. ಇದು ಯುದ್ಧದ ಸಂದರ್ಭದಲ್ಲಿ ಸಂವಹನ ನಡೆಸಲು ನೆರವಾಗುತ್ತದೆ. ಉಕ್ರೇನಿನ ಹಲವು ನಗರಗಳು ಮತ್ತು ಪಟ್ಟಣಗಳು ದಿನಕ್ಕೆ ಹತ್ತು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನೂ ಎದುರಿಸಿವೆ. ರಷ್ಯಾದ ವಾಯುದಾಳಿಯ ಪರಿಣಾಮವಾಗಿ ಮೊಬೈಲ್ ಟವರ್‌ಗಳೂ ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ. ಇದನ್ನು ಎದುರಿಸಲು, ಉಕ್ರೇನ್ ಸರ್ಕಾರ ತನ್ನ 30,000 ಮೊಬೈಲ್ ಟವರ್‌ಗಳನ್ನು ಜನರೇಟರ್‌ಗಳಿಗೆ ಸಂಪರ್ಕಿಸಲು ಉದ್ದೇಶಿಸಿದೆ. ಐರೋಪ್ಯ ಒಕ್ಕೂಟದೊಡನೆ ಕಾರ್ಯ ನಿರ್ವಹಿಸಿ, ಉಕ್ರೇನ್‌ಗೆ ಇನ್ನೂ 10,000 ಸ್ಟಾರ್ ಲಿಂಕ್ ಸ್ಟೇಷನ್‌ಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಈ ಸ್ಟೇಷನ್‌ಗಳು ‘ಪಾಯಿಂಟ್ಸ್ ಆಫ್ ಇನ್‌ವಿನ್ಸಿಬಿಲಿಟಿ’ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಲಿವೆ. ಈ ಪಾಯಿಂಟ್ಸ್ ಆಫ್ ಇನ್‌ವಿನ್ಸಿಬಿಲಿಟಿಗಳು ಯುದ್ಧದಿಂದ ನೆಲೆ ಕಳೆದುಕೊಂಡ, ವಿದ್ಯುತ್ ಸಂಪರ್ಕ ಕಳೆದುಕೊಂಡ ಜನರಿಗೆ ಆಸರೆ, ವಿದ್ಯುತ್ ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲಿವೆ.
ಯುದ್ಧದಿಂದ ಡ್ರೋನ್‌ಗಳನ್ನು ದೂರ ಮಾಡುವ ಯತ್ನ: ರಷ್ಯಾಗೆ ಇರಾನಿನ ಡ್ರೋನ್ ಪೂರೈಕೆ ತಡೆಯಲು ಯತ್ನಿಸುತ್ತಿದೆ ಅಮೆರಿಕಾ
ರಷ್ಯಾ ಇರಾನಿನಿಂದ ಡ್ರೋನ್‌ಗಳನ್ನು ಖರೀದಿಸಿ, ಅವುಗಳನ್ನು ಉಕ್ರೇನ್ ಮೇಲಿನ ದಾಳಿಯಲ್ಲಿ ಬಳಸಿಕೊಳ್ಳುತ್ತಿದೆ. ಪ್ರಸ್ತುತ ಅಮೆರಿಕಾದ ಜೋ ಬಿಡನ್ ಆಡಳಿತ ಇದನ್ನು ತಡೆಯಲು ಇರಾನಿನ ಡ್ರೋನ್ ಉತ್ಪಾದನೆ ಮತ್ತು ರಷ್ಯಾಗೆ ಪೂರೈಕೆಯನ್ನು ನಿಲ್ಲಿಸಲು ಗಂಭೀರವಾಗಿ ಪ್ರಯತ್ನ ನಡೆಸುತ್ತಿದೆ ಎಂದು ಗುಪ್ತಚರ, ಮಿಲಿಟರಿ, ಹಾಗೂ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕಾ ಇರಾನಿನ ಡ್ರೋನ್ ಉತ್ಪಾದನೆಯನ್ನೇ ತಡೆಯಬೇಕು ಎಂದು ಪ್ರಯತ್ನ ನಡೆಸುತ್ತಿರುವುದರಿಂದ, ಅದು ಯಶಸ್ವಿಯಾದರೆ ರಷ್ಯಾಗೆ ಉಕ್ರೇನ್ ಮೇಲೆ ಡ್ರೋನ್ ದಾಳಿ ನಡೆಸಲು ಕಷ್ಟಕರವಾಗಲಿದೆ. ಅದರೊಡನೆ ಉಕ್ರೇನ್‌ಗೆ ಡ್ರೋನ್‌ಗಳನ್ನು ಹೊಡೆದುರುಳಿಸುವ ರಕ್ಷಣಾ ವ್ಯವಸ್ಥೆಗಳನ್ನು ಒದಗಿಸಲಿದೆ. ಇದು ಒಂದು ರೀತಿ ಅಮೆರಿಕಾ ವರ್ಷಗಳ ಕಾಲ ಇರಾನಿನ ಪರಮಾಣು ತಂತ್ರಜ್ಞಾನ ಪಡೆಯುವುದರಿಂದ ತಡೆಯಲು ಪ್ರಯತ್ನ ನಡೆಸಿದ್ದನ್ನು ಮರಳಿ ನೆನಪಿಸುವಂತಿದೆ.
ಡ್ರೋನ್ ನಿರ್ಮಾಣಕ್ಕೆ ಅಗತ್ಯವಿರುವ ಪಾಶ್ಚಾತ್ಯ ನಿರ್ಮಾಣದ ಬಿಡಿಭಾಗಗಳು ಇರಾನ್‌ಗೆ ಲಭ್ಯವಾಗದಂತೆ ಮಾಡಲು ಅಮೆರಿಕಾದ ಆಡಳಿತ ಪ್ರಯತ್ನಗಳನ್ನು ನಡೆಸುತ್ತಿದೆ. ಅದರೊಡನೆ, ಡ್ರೋನ್‌ಗಳು ದಾಳಿ ನಡೆಸಲು ಬರುವ ಕುರಿತು ಮೊದಲೇ ಎಚ್ಚರಿಕೆ ನೀಡುವ ಮೂಲಕ, ಉಕ್ರೇನ್‌ಗೆ ಅವುಗಳನ್ನು ಹೊಡೆದುರುಳಿಸುವ ಅವಕಾಶ ನೀಡುವ ತಂತ್ರಜ್ಞಾನದ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಈ ಎಲ್ಲಾ ಪ್ರಯತ್ನಗಳೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಇರಾನ್ ನ್ಯೂಕ್ಲಿಯರ್ ಸೆಂಟ್ರಿಫ್ಯೂಜ್ ಉತ್ಪಾದನೆಯನ್ನು ದೇಶಾದ್ಯಂತ ವಿಸ್ತರಿಸಲು ತನ್ನ ಪರಿಣತಿಯನ್ನು ಬಳಸಿಕೊಳ್ಳುತ್ತಿದೆ. ಅದರೊಡನೆ ಆಮದು – ರಫ್ತು ನಿಯಂತ್ರಣವನ್ನು ಎದುರಿಸಲು ಬ್ಲ್ಯಾಕ್ ಮಾರ್ಕೆಟ್ ಮೂಲಕ ‘ಡ್ಯುಯಲ್ ಯೂಸ್’ ತಂತ್ರಜ್ಞಾನಗಳನ್ನು ಪಡೆದುಕೊಳ್ಳುತ್ತಿದೆ ಎಂದು ಅಮೆರಿಕಾದ ಗುಪ್ತಚರ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ರಷ್ಯಾ ಖರೀದಿ ಮಾಡುತ್ತಿರುವ ಇರಾನಿನ ಡ್ರೋನ್‌ಗಳ ಪ್ರಮುಖ ಉತ್ಪಾದಕ ಸಂಸ್ಥೆಯಾದ ಕೋಡ್ಸ್ ಏವಿಯೇಷನ್ ಹಲವು ಬಾರಿ ಇರಾನಿನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಪೂರೈಕೆ ನಡೆಸುವ ಸಂಸ್ಥೆಗಳ ಬಗ್ಗೆ ವಿಶ್ವಸಂಸ್ಥೆ ನೀಡಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಇದನ್ನೂ ಓದಿ | ಸಮರಾಂಕಣ | ವಿಮಾನವಾಹಕ ನೌಕೆಯ ಮೇಲಿಳಿಯುವ ಅವಕಾಶ ವಂಚಿತವಾದ ನೌಕಾಪಡೆಯ ಪೈಲಟ್‌ಗಳು