Site icon Vistara News

ದಶಮುಖ ಅಂಕಣ : ತಾಳ್ಮೆಯೆಂಬ ಪರಿಪಾಕ

patience
https://vistaranews.com/wp-content/uploads/2023/08/WhatsApp-Audio-2023-08-15-at-12.52.41-PM.mp3

ಸ್ವಾತಂತ್ರ್ಯ ದಿನದ ಸಹಜ ಸಂಭ್ರಮದಲ್ಲಿದ್ದೇವೆ ಎಲ್ಲರೂ. ವರ್ಷದ ಉಳಿದೆಲ್ಲಾ ಹಬ್ಬಗಳಂತೆ ಇದನ್ನೂ ಒಂದು ಹಬ್ಬವನ್ನಾಗಿಸಿ ಆಚರಿಸುವುದರಲ್ಲಿ ವ್ಯಸ್ತರಾಗಿದ್ದೇವೆ. ಮುಕ್ಕಾಲು ಶತಮಾನದ ಕಾಲಾವಧಿ ಸಿಕ್ಕಾಪಟ್ಟೆ ಹೆಚ್ಚಾಯಿತು ಸ್ವಾತಂತ್ರ್ಯ ಮೈಗೊಂಡು ಹೋಗುವುದಕ್ಕೆ. ಎಂದೋ, ಏನೋ ನಡೆದಿದ್ದರ ಬಿಸಿ ಇಂದಿನವರಿಗೆ ಹೇಗೆ ತಟ್ಟಬೇಕು? ಅದಕ್ಕಾಗಿಯೇ ಈ ಆಚರಣೆ, ಆಡಂಬರ ಎಲ್ಲವೂ. ಕ್ರಮೇಣ ಹೆಚ್ಚಾಗುತ್ತಿದ್ದ ಪರಕೀಯರ ಪ್ರಭಾವವನ್ನು ವಿರೋಧಿಸಿದ ಮತ್ತು ವಸಾಹತುಶಾಹಿಯ ಮೊದಲ ಗಟ್ಟಿ ಹೆಜ್ಜೆ ಎಂದು ಪರಿಗಣಿತವಾದ ಬಂಗಾಳದ ಪ್ಲಾಸಿ ಕದನ ನಡೆದು, ಅಜಮಾಸು ೧೯೦ ವರ್ಷಗಳ ನಂತರ ದೇಶ ಸ್ವತಂತ್ರವಾಯಿತು. ಅಂದರೆ ಎರಡು ಶತಮಾನಗಳಿಗೆ ಸ್ವಲ್ಪ ಕಡಿಮೆ! ದೇಶವೊಂದು ದಾಸ್ಯದಿಂದ ಬಿಡುಗಡೆ ಹೊಂದಬೇಕೆಂಬ ಹಂಬಲದಿಂದ ಇಷ್ಟು ಸುದೀರ್ಘಕಾಲ ಹೋರಾಡಿತೆಂದರೆ, ಅಲ್ಲಿನ ಜನರ ತಾಳ್ಮೆ ಎಷ್ಟಿರಬೇಡ! ಇದನ್ನೇ ಗುರಿಯಾಗಿಸಿಕೊಂಡು ಎಷ್ಟೋ ತಲೆಮಾರುಗಳು ಹುಟ್ಟಿ-ಅಳಿಯಬೇಕೆಂದರೆ ಆ ಸೈರಣೆ ಎಂಥದ್ದಿರಬೇಡ! ಕಣ್ಣೆದುರೇ ಆಪ್ತರು, ಬಂಧುಗಳು ಅಳಿದಿದ್ದನ್ನು ಕಂಡೂ ಹೋರಾಟ ಬಿಡಲಿಲ್ಲವೆಂದರೆ, ಅವರ ಸಹಿಷ್ಣುತೆ ಹೇಗಿರಬೇಡ! ಆದರೆ ಇವತ್ತಿನ ಮನಸ್ಥಿತಿಗಳಿಗೆ ಆ ವಿಷಯಗಳನ್ನೆಲ್ಲಾ ಎತ್ತುವುದೇ ಬೇಡ! ಹಿಂದೊಮ್ಮೆ ತಾಳ್ಮೆ, ಸಹನೆಯ ಮೂರ್ತರೂಪದಂತೆ ಕಾಣುತ್ತಿದ್ದ ಭಾರತದಲ್ಲೀಗ, ಸ್ವಿಗ್ಗಿಯಲ್ಲಿ ಹಾಕಿದ ಆರ್ಡರ್‌ ಮನೆ ಬಾಗಿಲಿಗೆ ಬರುವುದು ೧೮ರ ಬದಲು ೨೦ ನಿಮಿಷವಾದರೆ- ಕಾಯುವುದು ಅಸಾಧ್ಯ. ತಪ್ಪು ನಮ್ಮದಲ್ಲಪ್ಪ; ಬದಲಾಗದೆ ಉಳಿಯುವಷ್ಟು ತಾಳ್ಮೆ ಸ್ವತಃ ಕಾಲನಿಗೇ ಇಲ್ಲ, ಮತ್ತೆ ನಾವೇನು!

ಇರಲಿ, ಇದೇ ನೆವದಲ್ಲಿ ತಾಳ್ಮೆಯ ಬಗೆಗೇ ತಾಳ್ಮೆಗೆಟ್ಟು ಯೋಚಿಸುವಂತಾಗುತ್ತಿದೆ. ಏನು ಹಾಗೆಂದರೆ? ನಿಧಾನಕ್ಕೆ ಡೌನ್‌ಲೋಡ್‌ ಆಗುವ ಮೆಸೇಜಿಗೆ ಕಾಯುವುದನ್ನು ತಾಳ್ಮೆ ಎನ್ನಬಹುದೇ? ಉಳಿದೆಲ್ಲಾ ಗುಣಗಳಂತೆ ಇದೂ ಒಂದು ಗುಣ ಹೌದಾದರೂ, ಇದಕ್ಕೆ ಏಕಿಷ್ಟು ಮಹತ್ವ ನೀಡುತ್ತೇವೆ? ಸಹನೆ ಎಂಬುದು ಸದ್ಗುಣವೇ? ಅದು ಹೌದಾದರೆ, ಅತಿಯಾದ ಸಹನೆಯು ಹೇಡಿತನ ಎನಿಸುವುದಿಲ್ಲವೇ? ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ನಡೆಯುವ ಇಂದಿನ ವಿಶ್ವದಲ್ಲಿ ಸಹನೆಯಿಂದ ಕಾಯುವ ತಾಳ್ಮೆ ಯಾಕೆ ಬೇಕು? ಯಾರಿಗೆ ಬೇಕು? ಎಲ್ಲಿಂದ ಬರಬೇಕು? ಮನೋವೇಗವನ್ನು ಸಾಧಿಸುವತ್ತ ವಿಜ್ಞಾನದ ಕಣ್ಣಿರುವಾಗ ೧೯೦ ವರ್ಷಗಳ ತಾಳ್ಮೆಯ ಹೋರಾಟ ಎಂದರೆ ಯಾರಿಗೆ, ಎಷ್ಟು ಅರ್ಥವಾಗುತ್ತದೆ ಈಗ?‘

ಮನೋವೇಗ ಎನ್ನುತ್ತಿದ್ದಂತೆ ನೆನಪಾಯಿತು- ಪುರುಷಾಮೃಗದ ಕಥೆ. ಮಹಾಭಾರತದ ನೂರಾರು ಉಪಕಥೆಗಳಲ್ಲಿ ಇದೂ ಒಂದು. ಮನೋವೇಗದಲ್ಲಿ ಚಲಿಸುವ ಆ ಮೃಗವನ್ನು ರಾಜಸೂಯ ಯಾಗ ನಡೆಯುವಲ್ಲಿ ಕರೆತರಲು ಭೀಮಸೇನ ಹೋಗುತ್ತಾನೆ. ಮಾನಸ ಸರೋವರದ ಬಳಿ ಇರುವ ಆ ಶಿವಭಕ್ತ ಮೃಗ ಭೀಮನೊಂದಿಗೆ ಬರಲು ಒಪ್ಪುತ್ತದಾದರೂ, ಆ ಮೃಗಕ್ಕಿಂತ ವೇಗವಾಗಿ ಭೀಮ ಮಾರ್ಗವನ್ನು ಕ್ರಮಿಸಬೇಕು. ಅದರ ಕೈಗೇನಾದರೂ ಸಿಕ್ಕಿದಲ್ಲಿ ಭೀಮನ ಕಥೆ ಮುಗಿಯುತ್ತದೆ. ಇಂಥ ಸಂದರ್ಭದಲ್ಲಿ ಭೀಮನಿಗೆ ಹನುಮಂತ ನೀಡಿದ ರೋಮಗಳು ನೆರವಾಗುತ್ತವೆ. ಜೀವ ಅಂಗೈಯಲ್ಲಿ ಹಿಡಿದು ಓಡುತ್ತಿರುವ ಭೀಮನನ್ನು ಪುರುಷಾಮೃಗ ಇನ್ನೇನು ಬೆಂಬತ್ತಿ ಹಿಡಿಯುತ್ತದೆ ಎನ್ನುವಾಗ ಒಂದು ರೋಮವನ್ನು ಭೀಮ ನೆಲಕ್ಕಿಡುತ್ತಾನೆ. ಅಲ್ಲೊಂದು ಲಿಂಗೋದ್ಭವವಾಗುತ್ತದೆ! ತನ್ನ ಇಷ್ಟದೈವಕ್ಕೆ ಪೂಜಿಸಿ, ಅರ್ಚಿಸಿ, ತನ್ನ ಸೇವಾ ಕೈಂಕರ್ಯಗಳನ್ನೆಲ್ಲಾ ಪುರುಷಾಮೃಗ ಮುಗಿಸುವಷ್ಟರಲ್ಲಿ ಭೀಮ ಬಹುದೂರ ಓಡಿರುತ್ತಾನೆ. ಆತುರಗಾರನಿಗೆ ಬುದ್ಧಿ ಮಟ್ಟ ಎನ್ನುವಂತೆ ಎಲ್ಲಿಯಾದರೂ ಭೀಮ ಸಹನೆಗೆಟ್ಟಿದ್ದರೆ ಕೆಲಸವೂ ಕೆಡುತ್ತಿತ್ತು. ಆದರೆ ಆತ ತಾಳ್ಮೆಯಿಂದ ಪ್ರತಿ ಬಾರಿಯೂ ಹೀಗೆಯೇ ಒಂದೊಂದೇ ರೋಮವನ್ನು ಕೆಳಗಿಡುತ್ತಾ, ಅಂತೂಇಂತೂ ಯಾಗ ಮಂಟಪವನ್ನವರು ತಲುಪುತ್ತಾರೆ. ಹಾಗಾದರೆ ಮನೋವೇಗವನ್ನು ಸಿದ್ಧಿಸಿಕೊಂಡರೂ, ಸೈರಣೆ ಕೆಟ್ಟರೆ ಅದೇ ವೇಗದಲ್ಲಿ ಸಮಸ್ಯೆಯೂ ಬೆಂಬತ್ತುತ್ತದೆ ಎಂದಾಯಿತು.

ಅಂದಹಾಗೆ, ತಾಳ್ಮೆಗೆ ಕಟ್ಟೆ ಕಟ್ಟಬಹುದೇ? ಅದಿಲ್ಲದಿದ್ದರೆ ತಾಳ್ಮೆಯ ಕಟ್ಟೆಯೊಡೆಯಿತು ಎಂಬ ಮಾತು ಬಳಕೆಯಲ್ಲಿದೆಯಲ್ಲ! ಹೀಗೆ ಮನಸ್ಸಿನ ಭಾವಗಳಿಗೆ ಕಟ್ಟೆ ಕಟ್ಟಬಹುದೇನೊ ಗೊತ್ತಿಲ್ಲ, ಆದರೆ ಅವುಗಳ ವೇಗವನ್ನು ಅಳೆಯಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೌದು, ಭಾವವೊಂದು ಮನಸ್ಸಿಗೆ ಬಂತು ಎಂದಾದರೆ ಅದು ಕ್ರಿಯೆಯಾಗಿಯೇ ತಾನೇ ಅಭಿವ್ಯಕ್ತಿಗೊಳ್ಳಬೇಕು. ಉದಾ, ಯಾರದ್ದೋ ಮಾತಿಗೆ ತಾಳ್ಮೆಯ ಕಟ್ಟೆಯೊಡೆಯಿತು ಎಂದಾಕ್ಷಣ ಕೂಗುವುದೋ, ಕಿರುಚುವುದೋ, ಕೈಗೆ ಸಿಕ್ಕಿದ್ದನ್ನು ಬಿಸಾಡುವುದೊ ಅಥವಾ ಇನ್ನೇನನ್ನೋ ಮಾಡುತ್ತೇವಲ್ಲ- ಇಂಥ ಪ್ರತಿಕ್ರಿಯೆಗೆ, ಅಂದರೆ ಮೆದುಳಿಗೆ ಬಂದ ಭಾವವೊಂದು ಕ್ರಿಯೆಯಾಗಿ ಬದಲಾಗುವಲ್ಲಿನ ಸಮಯ- ಸಾಮಾನ್ಯ ಅಂದಾಜಿನ ಪ್ರಕಾರ ಅರ್ಧ ಸೆಕೆಂಡ್.‌ ಆದರದು ೧೫೦ ಮಿಲಿ ಸೆಕೆಂಡ್‌ನಷ್ಟು ತ್ವರಿತವಾಗಿದ್ದ ಉದಾಹರಣೆಗಳೂ ಇವೆಯಂತೆ. ಅಂದರೆ ಕಣ್ಣೆವೆ ಇಕ್ಕುವುದಕ್ಕಿಂತ ಕಡಿಮೆ ಸಮಯ. ಇಷ್ಟು ಕಡಿಮೆ ಸಮಯವೂ ಸಾಕು ನಮ್ಮ ಸಹನೆಯ ಕಟ್ಟೆಯೊಡೆಯಲು ಎಂದಾದರೆ- ೧೯೦ ವರ್ಷಗಳು… ಅಲ್ಲ, ಕಥೆಯಲ್ಲ! ನಿಜಕ್ಕೂ ನಡೆದಿದ್ದು, ಅದೂ ನಮ್ಮದೇ ನೆಲದಲ್ಲಿ.

ಚಂಚಲ ಮನಸ್ಸನ್ನು ಸ್ಥಿರಗೊಳಿಸುವ ಬಗ್ಗೆ ವಿಜಯದಾಸರ ಕೀರ್ತನೆಯೊಂದು ನೆನಪಿಗೆ ಬರುತ್ತಿದೆ- “ಶರಧಿಗಳ ಭೋರ್ಗರೆವ ಧ್ವನಿಯ ನಿಲ್ಲಿಸಬಹುದು/ ಸುರಿವ ಬಿರು ಮಳೆಯನ್ನು ನಿಲ್ಲಿಸಲುಬಹುದು/ ಹರಿದೋಡುವ ಮನಸು ನಿಲ್ಲಿಸಲು ಅಳವಲ್ಲ/ ಸಿರಿಯರಸ ವಿಜಯವಿಠ್ಠಲ ತಾನೆ ಬಲ್ಲ” ಎನ್ನುವ ಸಾಲುಗಳನ್ನು ನೋಡಿ. ಮನಸ್ಸನ್ನು ಒಂದೆಡೆ ನಿಲ್ಲಿಸುವುದು ಬಲುಕಷ್ಟ ಎಂಬುದು ಲೌಕಿಕವನ್ನೆಲ್ಲಾ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದಂಥ ದಾಸರಿಗೇ ಅನಿಸಿತಂತೆ. ಆದರೆ ದಾಸ್ಯದಿಂದ ಬಿಡಿಸಿಕೊಳ್ಳಬೇಕೆಂಬ ಹಂಬಲಕ್ಕೇ ಮನಸ್ಸನ್ನು ನಿಲ್ಲಿಸಿಕೊಂಡಿದ್ದರಲ್ಲ ಅಷ್ಟೊಂದು ವರ್ಷಗಳ ಕಾಲ- ಆ ಸಂಯಮಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವೇ? ಅವರು ತೆತ್ತ ಬೆಲೆಯನ್ನು ಮರೆಯುವುದು ಸಾಧುವೇ?

ಆಗಸ್ಟ್‌ ತಿಂಗಳಲ್ಲವೇ, ಹಾಗಾಗಿ ಮೊನಾರ್ಕ್‌ ಚಿಟ್ಟೆಗಳ ನೆನಪಾಗುತ್ತಿದೆ. ಸಾಮಾನ್ಯವಾಗಿ ಉತ್ತರ ಅಮೆರಿಕ ಖಂಡದಲ್ಲಿ ಕಂಡು ಬರುವ ಜೀವಿಗಳಿವು. ಸುದೀರ್ಘವಾದ ವಾರ್ಷಿಕ ವಲಸೆಗಾಗಿ ಇವು ಪ್ರಸಿದ್ಧ. ಉತ್ತರ ಅಮೆರಿಕದಿಂದ ದಕ್ಷಿಣದೆಡೆಗೆ ಸಾಮಾನ್ಯವಾಗಿ ಈಗ, ಅಂದರೆ ಆಗಸ್ಟ್‌ ತಿಂಗಳಲ್ಲೇ ಹೊರಡುತ್ತವೆ ಇವು. ಹಾಗೆಯೇ ವಸಂತ ಕಾಲದಲ್ಲಿ ಉತ್ತರಕ್ಕೆ ಹೊರಟು ತಮ್ಮ ಸ್ವಸ್ಥಾನಕ್ಕೆ ಬರುತ್ತವೆ. ಆದರವು ಚಿಟ್ಟೆಗಳು, ಹಕ್ಕಿಗಳಲ್ಲ. ಎಷ್ಟಿದ್ದೀತು ಅವುಗಳ ಜೀವಿತಾವಧಿ? ಅಬ್ಬಬ್ಬಾ ಎಂದರೆ ಎರಡು ತಿಂಗಳು. ಇಷ್ಟು ಕಡಿಮೆ ಅವಧಿಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹೋಗಿ ಬರಲಂತೂ ಈ ಪುಟ್ಟ ಜೀವಿಗಳಿಗೆ ಸಾಧ್ಯವಿಲ್ಲ. ಈಗ ಹೊರಟಂಥ ಚಿಟ್ಟೆಗಳ ನಾಲ್ಕನೇ ಅಥವಾ ಐದನೇ ತಲೆಮಾರು ವಲಸೆಯ ಒಂದು ಚಕ್ರವನ್ನು ಪೂರ್ಣಗೊಳಿಸುತ್ತದೆ. ಅಂದರೆ ವಸಂತದಲ್ಲಿ ತಮ್ಮ ಮೂಲಸ್ಥಾನ ಸೇರುವುದು ಈಗ ಹೊರಟ ಚಿಟ್ಟೆಯ ನಾಲ್ಕೈದನೇ ತಲೆಮಾರಿನವು. ಹಾಗಾದರೆ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು, ಮುಂದಿನ ಗುರಿ ಯಾವುದು ಎಂಬುದು ಅವರ ಮುಂದಿನ ತಲೆಮಾರಿಗೆ ಹೇಗೆ ತಿಳಿಯುತ್ತದೆ? ಈ ಬಗ್ಗೆ ವಿಜ್ಞಾನಿಗಳೂ ಉತ್ತರ ಹುಡುಕುತ್ತಿದ್ದಾರೆ. ಹಿಂದೆ ಸ್ವಾತಂತ್ರವನ್ನೇ ಗುರಿಯಾಗಿಸಿಕೊಂಡ ಅದೆಷ್ಟೋ ತಲೆಮಾರುಗಳಿಗೂ ತಮ್ಮ ಗುರಿ ಯಾವುದು, ಏನು ಮಾಡಬೇಕು ಎಂಬುದೆಲ್ಲಾ ತಿಳಿದಿತ್ತೇ? ಅವರು ಉಳಿಸಿದ ಪ್ರಶ್ನೆಗಳಿಗೆ ನಾವು ಉತ್ತರ ಹುಡುಕಬೇಕಲ್ಲವೇ?

ತಾಳಿದವನು ಬಾಳಿಯಾನು ಎಂಬ ಹಳೆಯ ಕಾಲದ ಗಾದೆಯ ಬೆನ್ನಿಗೆ ವಾದಿರಾಜರ ಸಾಲುಗಳು ಸ್ಮರಣೆಗೆ ಬರುತ್ತಿವೆ. “ತಾಳುವಿಕೆಗಿಂತನ್ಯ ತಪವು ಇಲ್ಲ” ಎಂಬ ಕೀರ್ತನೆಯಲ್ಲಿ- “ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು/ ಕಷ್ಟ ಬಂದರೆ ತಾಳು ಕಂಗೆಡದೆ ತಾಳು/ ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು/ ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು” ಎನ್ನುತ್ತಾ ತಾಳ್ಮೆಯೆಂಬ ಇರಲೇಬೇಕಾದ ಗುಣದ ಬಗ್ಗೆಯೇ ದಾಸರು ಹೇಳುತ್ತಾ ಹೋಗುತ್ತಾರೆ. ಹಾಗೆಯೇ “ಉಕ್ಕೋ ಹಾಲಿಗೆ ನೀರು ಇಕ್ಕುವಂದದಿ ತಾಳು” ಎಂದೂ ಹೇಳುತ್ತಾರೆ. ನಿಜಕ್ಕೂ ಹಾಗೆಯೇ ಬದುಕಿದ್ದರಲ್ಲ ನಮ್ಮವರು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಕೇಳಿದರೆ ಕೋಪ ಉಕ್ಕಿ ಬರುವಂಥ ಸಂದರ್ಭಗಳು ಸೃಷ್ಟಿಯಾಗುವುದು ಎಷ್ಟು ಬಾರಿಯೊ. ಆದರೆ ಹೆಚ್ಚಿನ ಸಾರಿ ಉಕ್ಕುತ್ತಿದ್ದ ಕೋಪಕ್ಕೆ ನೀರಿಕ್ಕಿಕೊಂಡೇ ಶಾಂತಿ, ಸಹನೆಯ ದಾರಿಯನ್ನು ತುಳಿದಿದ್ದರು ಆ ಜನ. ಲೌಕಿಕದಲ್ಲಿದ್ದೂ ಪಾರಲೌಕಿಕ ಮನಸ್ಥಿತಿಯಲ್ಲಿ ಬದುಕಿದವರು ಎನ್ನೋಣವೇ? ಹಾಗಿಲ್ಲದಿದ್ದರೆ ಎಲ್ಲಿಂದ ಬಂತು ಅಂಥಾ ತಾಳ್ಮೆ ಅವರಿಗೆ?

ತಾಳ್ಮೆಗೆಷ್ಟು ಅಭಿವ್ಯಕ್ತಿಗಳು ಎಂಬುದನ್ನು ತಿಳಿಯಬೇಕಾದರೆ ಭಾಷೆಯ ಜಾಯಮಾನ ನಮಗೆ ದಿಕ್ಕಾದೀತು. ʻಬುಟ್ಟಿಯಷ್ಟು ಬುದ್ಧಿಗಿಂತ ಮುಷ್ಟಿಯಷ್ಟು ತಾಳ್ಮೆ ಲೇಸುʼ ಎಂಬ ಗಾದೆಯೊಂದೇ ಸಾಕು ಈ ಗುಣದ ಮಹತ್ವ ಸಾರುವುದಕ್ಕೆ. ಸಹನಾಮಯಿ, ಸಹನಶೀಲೆ ಮುಂತಾದ ಬಳಕೆಗಳು ಈ ಗುಣವುಳ್ಳ ವ್ಯಕ್ತಿಯ ಘನತೆ ಹೆಚ್ಚಿಸಿದರೆ, ತಾಳ್ಮೆಗೇಡಿ, ಆತುರಗಾರ, ಸಹನೆಗೆಟ್ಟು ಎಂಬಂಥ ಪ್ರಯೋಗಗಳು ಎಡವಟ್ಟಾಗುವ ಮುನ್ಸೂಚನೆ ನೀಡುತ್ತವೆ. ಮಾತ್ರವಲ್ಲ, “ಬಾಳಿನಲ್ಲಿ ತಾಳ್ಮೆ ಬೇಕು ಬದುಕಬೇಕು ಎಂದರೆ/ ಜೀವವೆ ಸಾವಾಗಬಹುದು ಬಚ್ಚಬರಿಯ ನೊಂದರೆ” ಎಂಬ ಬೇಂದ್ರೆಯವರ ಸಾಲುಗಳು ಸಹನಾ ಗುಣಕ್ಕೆ ಭೂಮಿ ತೂಕವನ್ನೇ ನೀಡುತ್ತವೆ.

ಇದನ್ನೂ ಓದಿ : ದಶಮುಖ ಅಂಕಣ: ಮನದ ಸಿಕ್ಕು ಬಿಡಿಸುವ ಬಿಕ್ಕುಗಳು

ಹಾಗಾದರೆ ತಾಳ್ಮೆಯೆಂದರೆ ಕೇವಲ ಕಾಯುವ ಸಾಮರ್ಥ್ಯವಲ್ಲ, ಸರಿಯಾದ ಮನೋಭಾವದಿಂದ ಕಾಯುವ ಸಾಮರ್ಥ್ಯ. ಅತಿಯಾದ ಸಹನೆಯು ಹೇಡಿತನವಾದೀತೆ ಎಂಬ ಪ್ರಶ್ನೆಗೂ ಭಾರತದ ಚರಿತ್ರೆಯೇ ಉತ್ತರ ಕೊಡಬಲ್ಲದು. ಸ್ವಾತಂತ್ರ್ಯ ಚಳುವಳಿಯ ಕಾವು ಕಡಿಮೆಯಾಗದಂತೆ ನೋಡಿಕೊಳ್ಳುವುದಕ್ಕೆ ಬಹಳಷ್ಟು ನಾಯಕರು, ಬಹಳಷ್ಟು ಘಟನೆಗಳು ಬೇಕಾಗಿದ್ದು ನಿಜವಾದರೂ, ಸ್ವರಾಜ್ಯವೆಂಬ ಮೊಟ್ಟೆಯೊಡೆದು ಮರಿಯಾಗುವುದಕ್ಕೆ ಅಷ್ಟು ಕಾವು ಮತ್ತು ಕಾಲ ಬೇಕಾಗಿತ್ತೇನೊ. ಕಡೆದೂಕಡೆದು ಮಜ್ಜಿಗೆಯೊಳಗೆ ಬಂದ ಬೆಣ್ಣೆಯಂತೆ ಇದು. ಕಾಲ ಬರುವವರೆಗೆ ತಾಳ್ಮೆಬೇಕು ಎಂಬ ಬಗ್ಗೆ ಕಗ್ಗವೊಂದು ಹೀಗೆನ್ನುತ್ತದೆ- “ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?/ ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ/ ವೇಳೆ ಗಡು ಮರೆತಾತುರದಿ ಅಡುಗೆ ಪಕ್ಕಹುದೆ? ತಾಳುಮೆಯೆ ಪರಿಪಾಕ ಮಂಕುತಿಮ್ಮ” ಅವರ ತಾಳ್ಮೆಯೆಂಬ ಪರಿಪಾಕದ ಫಲವನ್ನು ನಾವುಣ್ಣುತ್ತಿದ್ದೇವೆ- ಅಷ್ಟಾದರೂ ನೆನಪಿರಲಿ ನಮಗೆ.

Exit mobile version