Site icon Vistara News

ವಿಸ್ತಾರ ಅಂಕಣ | ಈ ಇಬ್ಬರು ಭಾರತದ ಸಾಮಾಜಿಕ ಬದುಕಿನ ರಾಯಭಾರಿಗಳು!

Siddheshwar Swamiji

ಕಳೆದ ವಾರ ಸಂಭವಿಸಿದ ಎರಡು ಮಹಾನ್ ವ್ಯಕ್ತಿತ್ವಗಳ ಸಾವು, ಶರಣರ ಗುಣ ಮರಣದಲ್ಲಿ ಕಾಣಾ ಎಂಬ ಮಾತನ್ನು ನೆನಪಿಗೆ ತಂದವು.
ಮೊದಲನೆಯದು ಪ್ರಧಾನಿ ನರೇಂದ್ರ ಮೋದಿಯವರ ತಾಯಿ, ಶತಾಯುಷಿ ತಾಯಿ ಹೀರಾಬೆನ್ ಮೋದಿಯವರ ನಿಧನ. ಎರಡನೆಯದು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯ.

ಹೀರಾಬೆನ್ ಅವರು ಮೃತಪಟ್ಟು ಕೆಲವೇ ಗಂಟೆಗಳಲ್ಲಿ, ಭಾರತದ ಅನೇಕರು ಹಾಸಿಗೆಯಿಂದ ಮೇಲೆಳುವಷ್ಟರಲ್ಲಿ ಪಂಚಭೂತಗಳಲ್ಲಿ ಲೀನವಾಗಿದ್ದರು. ತಮ್ಮ ತಾಯಿ ಹೇಗೆ ಸರಳವಾಗಿ, ಸುಂದರವಾಗಿ, ಸತ್ಯದಿಂದ ಬದುಕಿದರೋ, ಅಷ್ಟೇ ಸರಳವಾಗಿ, ಸುಂದರವಾಗಿ ಘನತೆಯಿಂದ ಅವರನ್ನು ಬೀಳ್ಕೊಟ್ಟರು ಪ್ರಧಾನಿ ಮೋದಿ. ತಾಯಿಯ
ಅಂತ್ಯಕ್ರಿಯೆ ಮುಗಿದ ಕೆಲ ಹೊತ್ತಿಗೆ ಪ್ರಧಾನಿ ಮೋದಿ ತಮ್ಮ ಕಾರ್ಯದತ್ತ ತೆರಳಿದರು. “ಮಗನೇ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಕಾಯಕ ಮಾಡು,” ಎಂದು ಹೀರಾಬೆನ್ ಬದುಕಿದ್ದಾಗ ತಮ್ಮ ಮಗನಿಗೆ ಹೇಳುತ್ತಲೇ ಇದ್ದರಂತೆ. ಅದು ಸಾಕ್ಷಾತ್ಕಾರವಾಗುತ್ತಲೇ ಇತ್ತು, ತಾಯಿ ನಿರ್ಗಮಿಸಿದ ಹೊತ್ತಲ್ಲೂ…

ಅಂತೂ, 100 ವರ್ಷಗಳ ಹಿಂದೆ ಭೂಮಿಗೆ ಬಂದಿದ್ದ ಜೀವವೊಂದು ಭೂಮಿಯ ಯಾತ್ರೆಯನ್ನು ಮುಗಿಸಿತು. ಮರುಜನ್ಮಕ್ಕೋ ಅಥವಾ ಸದ್ಗತಿಗೋ ಅಣಿಯಾಯಿತು.

ಎಷ್ಟು ವರ್ಷ ಬದುಕಿದರೂ ಸಾಲದು ಎನ್ನುವಂತೆ ಚಿರಂಜೀವಿಗಳಾಗುವ ಇಚ್ಛೆ ಯಾರಿಗಿಲ್ಲ? ಆದರೆ ಇಲ್ಲೊಬ್ಬ ಸಂತರು, ತಮ್ಮ ಜೀವನ ಪಯಣವನ್ನು 81ನೇ ವರ್ಷಕ್ಕೆ ಮುಗಿಸೋಣ ಎಂದು ನಿರ್ಧರಿಸಿದ್ದರು. ಎಂಟು ವರ್ಷದ ಹಿಂದೆ ಗುರುಪೂರ್ಣಿಮೆಯ ದಿನದಂದು ವಿಲ್ ಬರೆದಿಟ್ಟ ಸಿದ್ದೇಶ್ವರ ಸ್ವಾಮೀಜಿ, ವೈಕುಂಠ ಏಕಾದಶಿಯ ದಿನ ತಮ್ಮ ದೇಹವನ್ನು ತ್ಯಜಿಸಿದರು. ಅವರು ಬದುಕಿದ್ದಾಗ ಯಾವ ಸ್ಥಿತಪ್ರಜ್ಞತೆ, ಸರಳತೆ, ಮುಗ್ಧತೆ, ತೇಜಸ್ಸು ಅವರಲ್ಲಿ ಗೋಚರಿಸುತ್ತಿತ್ತೋ, ಆ ಎಲ್ಲವೂ ಅವರ ಆತ್ಮವಿಲ್ಲದ ದೇಹದಲ್ಲೂ ಕಂಡವು. ಅಷ್ಟೇ ಸಹಜವಾಗಿ ಅವರು ಜಗತ್ತನ್ನು ತ್ಯಜಿಸಿದರು.
ಎಲ್ಲೊ ಕೇಳಿದ ಒಂದು ಕಥೆ. ಯಾರು ಹೇಳಿದ್ದು, ಯಾರ ಬಗ್ಗೆ ಎಂಬುದರ ವಿವರ ಗೊತ್ತಿಲ್ಲ. ಅದರ ಸಾರ ಮಾತ್ರ ನೆನಪಿದೆ. ಒಮ್ಮೆ ಗೃಹಿಣಿಯೊಬ್ಬರು ಸ್ವಾಮೀಜಿಯ ಬಳಿ ತೆರಳಿ, ಸ್ವಾಮೀಜಿ ಬರೆದ ಪುಸ್ತಕವನ್ನು ಮುಂದಿಟ್ಟು ಅದಕ್ಕೆ ತಮ್ಮ ಹಸ್ತಾಕ್ಷರ ಸಹಿತ ಶುಭ ಹಾರೈಸಿ ಎಂದು ಅಭಿಮಾನದಿಂದ ಕೇಳಿದರು. ಸ್ವಾಮೀಜಿ ಕೂಡ ಅಷ್ಟೇ ಪ್ರೀತಿಯಿಂದ ಕೆಲವು ಸಾಲುಗಳನ್ನು ಗೀಚಿದರು. ಸಂತಸಭರಿತ ಗೃಹಿಣಿ, ಆ ಪುಸ್ತಕದಲ್ಲಿ ಶ್ರೀಗಳು ಅದೇನು ಗೀಚಿದರು ಎಂಬುದನ್ನು ಓದದೆ, ಸಂತೋಷದಿಂದ ನಮಸ್ಕರಿಸಿ ಅಲ್ಲಿಂದ ಹೊರಟರು. ಬಳಿಕ ನಿಧಾನವಾಗಿ, ಮನೆಗೆ ತೆರಳಿ ಅದನ್ನು ಓದಿದರೆ ಗೃಹಿಣಿಗೆ ಗಾಬರಿಯಾಯಿತು. ಸ್ವಾಮೀಜಿ ಏನು ಬರೆದಿದ್ದರು? “ಅಜ್ಜ ಸಾಯಲಿ, ತಂದೆ ಸಾಯಲಿ, ಮಗ ಸಾಯಲಿ, ಮೊಮ್ಮಗ ಸಾಯಲಿ” ಎಂದು ಬರೆದಿದ್ದರು. ಇವರಿಗೆ ನಿಜಕ್ಕೂ ಬೇಸರವಾಯಿತು.

ಶುಭವನ್ನು ಹಾರೈಸಿ ಎಂದು ಕೇಳಿಕೊಂಡರೆ, ಮನೆಯವರೆಲ್ಲ ಸಾಯಲಿ ಎಂದು ಬರೆದಿದ್ದಾರಲ್ಲ ಎಂದು ಮತ್ತೆ ಸ್ವಾಮೀಜಿ ಹತ್ತಿರ ಹೋದರು. ಏಕೆ ಹೀಗೆ ಬರೆದಿದ್ದೀರ ಎಂದು ಸ್ವಲ್ಪ ಕೋಪದಿಂದಲೇ ಗೃಹಿಣಿ ಕೇಳಿದರು.
ಅದಕ್ಕೆ ಸ್ವಾಮೀಜಿ ಸಾವಧಾನದಿಂದ ಉತ್ತರಿಸಿದರು. ಈ ಜಗತ್ತಿನಲ್ಲಿ ಜನಿಸಿದ ಮೇಲೆ ಎಲ್ಲರೂ ಸಾಯಲೇಬೇಕು. ನಾನು ಅಲ್ಲಿ, ನಿಮ್ಮ ಮನೆಯವರೆಲ್ಲಾ ಎಲ್ಲರೂ ಒಟ್ಟಿಗೆ ಸಾಯಲಿ ಎಂದು ಬರೆದಿಲ್ಲ. ಮೊದಲಿಗೆ ಅಜ್ಜ ಸಾಯಬೇಕು, ಅವನ ಚಿತೆಗೆ ಮಗ ಅಗ್ನಿ ಸ್ಪರ್ಶ ಮಾಡಬೇಕು. ಮಗನ ಚಿತೆಗೆ ಮೊಮ್ಮಗ ಅಗ್ನಿ ಸ್ಪರ್ಶ ಮಾಡಬೇಕು. ಮನೆಯಲ್ಲಿ ಹಳೆಯ ಎಲೆ ಉದುರುತ್ತಿರಬೇಕು, ಹೊಸ ಎಲೆ ಚಿಗುರುತ್ತಿರಬೇಕು. ಹಳೆಯ ಎಲೆ ಉದುರದೆಯೇ ನೂರೈವತ್ತು ಇನ್ನೂರು ವರ್ಷ ಇದ್ದರೆ ಮರಕ್ಕೆ ಭಾರ. ಅದೇ ರೀತಿ ಚಿಕ್ಕ ಮಕ್ಕಳು ಬೆಳೆಯುವ ಮುನ್ನವೇ ಸತ್ತರೆ ಅದು, ಸಹಿಸಿಕೊಳ್ಳಲಾರದ ಭಾರ ಎಂದು ಹೇಳಿದಾಗ ಗೃಹಿಣಿಗೆ ಸಮಾಧಾನವಾಯಿತು.

ಸತ್ತ ಮಗನನ್ನು ಬದುಕಿಸಿ ಎಂದು ತನ್ನಲ್ಲಿಗೆ ಬರುವ ಕಿಸಾ ಗೌತಮಿಗೆ, ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡ ಬಾ ಎಂದು ಬುದ್ಧ ಸಾವಿನ ಸತ್ಯವನ್ನು ಮನವರಿಕೆ ಮಾಡಿಕೊಟ್ಟ ಕಥೆ ನಮಗೆಲ್ಲಾ ತಿಳಿದೇ ಇದೆ. ಹೀಗೆ,
ಭಾರತೀಯ ಸಂಸ್ಕೃತಿ ಯಾವತ್ತೂ ಸಾವಿಗೆ ಹೆದರಿದ್ದಿಲ್ಲ. ಸಾಧು ಸಂತರು ಶ್ರೀಸಾಮಾನ್ಯರಿಗೆ ಅದನ್ನು ಅರ್ಥೈಸುತ್ತಲೇ ಇದ್ದಾರೆ. ಅಧ್ಯಾತ್ಮಜೀವಿಗಳಂತೂ ಸಾವಿನ ದಿನಾಂಕವನ್ನು ತಾವೇ ನಿರ್ಧರಿಸಿ, ಸಾವೆಂದರೆ ಇಷ್ಟೇ ಎಂಬುದನ್ನು ನಮಗೆ ದರ್ಶನ ಮಾಡಿಸಿದ್ದಾರೆ.

ಹಾಗೆ ನೋಡಿದರೆ ಇದು ಅಧ್ಯಾತ್ಮಜೀವಿಗಳಿಗಷ್ಟೆ ಸೀಮಿತವಾಗಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಚಂದ್ರಶೇಖರ್ ಅಜಾದ್ ನಂಥವರು ಒಂದೆಡೆ ಸ್ವಾತಂತ್ರ್ಯವನ್ನು ಪಡೆದು ಸಂಭ್ರಮಿಸಲು ಶ್ರಮಿಸುತ್ತಿರುವಾಗಲೇ, ಬ್ರಿಟಿಷರ ಕೈಗೆ ಸಿಗದಂತೆ ʼತಪ್ಪಿಸಿಕೊಳ್ಳಲುʼ ಕೊನೆಯ ಗುಂಡೊಂದನ್ನು ತಮ್ಮ ಹೆಸರಿಗೇ ಬರೆದುಕೊಂಡು ಹೊರನಡೆಯುತ್ತಿದ್ದರು.

ತನ್ನ ಹೆಸರು ಸ್ವಾತಂತ್ರ್ಯ (ಆಜಾದ್), ನಾನು ಸ್ವತಂತ್ರವಾಗಿಯೇ ಇರುತ್ತೇನೆ ಎಂದು ಚಿಕ್ಕ ವಯಸ್ಸಿನಲ್ಲಿ ಘೋಷಿಸಿದ್ದ ಚಂದ್ರಶೇಖರ ಆಜಾದ್. ಜತೆಗಾರನೊಬ್ಬನ ಮೋಸದಿಂದ ಇನ್ನೇನು ಬ್ರಿಟಿಷರ ಕೈಗೆ ಸಿಕ್ಕಿಕೊಳ್ಳುತ್ತೇನೆ ಎಂದು ಗೊತ್ತಾದಾಗ ತಾನೇ ಗುಂಡುಹಾರಿಸಿಕೊಂಡು ಪ್ರಾಣತ್ಯಾಗ ಮಾಡಿದ.

ಇದನ್ನೂ ಓದಿ | ವಿಸ್ತಾರ ಅಂಕಣ | ಪರಮ ಸಹಿಷ್ಣ ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !

ಅನೇಕರು ಸಾವಿಗೆ ಹೆದರುತ್ತಾರೆ. ಇವರಲ್ಲಿ ಎರಡು ರೀತಿ ಇರುತ್ತಾರೆ. ಮೊದಲನೆಯದು, ತಾವು ಭೂಮಿಯಲ್ಲಿ ಇನ್ನೂ ಅನುಭವಿಸುವುದು ತುಂಬಾ ಇದೆ, ಸಾಧಿಸಬೇಕಾದದ್ದು ಬಹಳಷ್ಟಿದೆ ಎನ್ನುವವರು. ಎರಡನೆಯವರೆಂದರೆ, ತಾನು ಇನ್ನಷ್ಟು ಕೆಲಸವನ್ನು ಪೂರ್ಣಗೊಳಿಸದೇ ಸತ್ತರೆ ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುತ್ತದೆಯೋ ಇಲ್ಲವೋ ಎಂಬ ಅಪನಂಬಿಕೆ ಉಳ್ಳವರು. ಮುಂದಿನ ಪೀಳಿಗೆಯ ಮೇಲೆ ಅಪನಂಬಿಕೆ ಹೊಂದಿದ ಅನೇಕರು ಚಿರಂಜೀವಿಗಳಾಗಲು ಬಯಸಿದರು. ಮಾನವನ ವಿಕಸನ ಆಗುವುದು ಹೊಸ ಪೀಳಿಗೆ ಬಂದ ನಂತರವೇ. ಒಂದು ಪೀಳಿಗೆ ಎಷ್ಟೇ ಬುದ್ಧಿವಂತ ಆಗಿದ್ದರೂ ಹೊಸ ಆಲೋಚನೆಗಳು ಮೂಡಬೇಕೆಂದರೆ ಹೊಸ ಪೀಳಿಗೆಯೇ ಬರಬೇಕು. ಮುಂದಿನ ಪೀಳಿಗೆ, ಹಿಂದಿನದ್ದಕ್ಕಿಂತ ಹೆಚ್ಚು ಬುದ್ಧಿವಂತವಾಗಿಯೂ, ಸದೃಢವಾಗಿಯೂ ಇರುತ್ತದೆ ಎಂಬುದನ್ನು ನಂಬಲೇಬೇಕು. ಇದು ಸೃಷ್ಟಿ ನಿಯಮ.

ಚಿರಂಜೀವಿಯಾಗಲು ಅನೇಕ ಅಸುರರು ಪ್ರಯತ್ನಿಸಿದರು. ತನಗೆ ಸಾವೇ ಬರಬಾರದು ಎಂದು, ಶಿವನಲ್ಲಿ ವಿಶಿಷ್ಟ ನಿಬಂಧನೆಗಳ ವರವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಅದೇ ರೀತಿ ಭಸ್ಮಾಸುರ. ಆದರೆ ಮಾನವನಾಗಿ ಹುಟ್ಟಿದ ಮೇಲೆ ಸಾವು ಖಚಿತ. ಹನುಮಂತ, ಪರಶುರಾಮ, ಮಾರ್ಕಂಡೇಯ, ಕೃಪಾಚಾರ್ಯ, ವಿಭೀಷಣ ಮುಂತಾದ ಕೆಲವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಇದು ಅನ್ವಯ. ಮಾನವ ಅವತಾರವೆತ್ತಿದ ಸ್ವತಃ ವಿಷ್ಣುವಿಗೂ ಇದೇ ನಿಯಮ.

ಇಂಥದ್ದನ್ನು ಸಿದ್ದೇಶ್ವರ ಸ್ವಾಮೀಜಿಯವರು, ಹೀರಾಬೆನ್ ಮೋದಿಯವರು ಅಕ್ಷರಶಃ ಪಾಲಿಸಿದವರು. ಇವರ ಶ್ರೇಷ್ಠತೆ ಎಷ್ಟು ಎನ್ನುವುದನ್ನು, ಅವರ ಮುಂದಿನ ಪೀಳಿಗೆ, ಅನುಯಾಯಿಗಳು ನಡೆದುಕೊಳ್ಳುವುದರಿಂದಲೂ ತಿಳಿಯಬೇಕು. ಹೀರಾಬೆನ್ ಅವರು ಅತ್ಯಂತ ಪವಿತ್ರ ಜೀವನ ನಡೆಸುವ ಜತೆಗೆ ತಮ್ಮ ಪ್ರೀತಿಯನ್ನು ಧಾರೆ ಎರೆದಿದ್ದರಿಂದ ಮೋದಿಯವರಂತಹ ಪುತ್ರನನ್ನು ಬೆಳೆಸಲು ಸಾಧ್ಯವಾಯಿತು. ಅದೇ ರೀತಿ ಮೋದಿಯವರೂ, ತಮ್ಮ ಕರ್ಮದ ಮೂಲಕ ತಾಯಿಗೆ ನಮಿಸಿದರು. ಅಧಿಕಾರದಲ್ಲಿರುವ ಒಬ್ಬ ಸಣ್ಣ ರಾಜಕಾರಣಿಯ ಕುಟುಂಬದಲ್ಲಿ ಯಾರೇ ಮೃತಪಟ್ಟರೂ ಸಹಜವಾಗಿ ಸಾವಿರಾರು ಜನರು ಆಗಮಿಸುತ್ತಾರೆ. ಸಾಂತ್ವನ ಹೇಳಲು ಬರುವವರಿಗಿಂತ, ಅಧಿಕಾರದಲ್ಲಿರುವ ವ್ಯಕ್ತಿಯನ್ನು ಓಲೈಸುವವರೇ ಹೆಚ್ಚಿರುತ್ತಾರೆ. ಇದು ತಪ್ಪಲ್ಲ. ಆದರೆ, ಮೋದಿ‌ಯವರು ಇಂಥದ್ದಕ್ಕೂ ಆಸ್ಪದ ನೀಡದೆ, ಮನೆಯ ಮಗನಾಗಿ, ತೀರಾ ಖಾಸಗಿಯಾಗಿ ಅಂತ್ಯಕ್ರಿಯೆಯನ್ನು ಕೆಲವೇ ಗಂಟೆಗಳಲ್ಲಿ ಮಾಡಿಮುಗಿಸಿದರು. ಬಳಿಕ ಅವರು ಸೂತಕ ಎಂದು ಮನೆಯಲ್ಲಿ ಕೂರಲಿಲ್ಲ. ಕಾಯಕದ ಕರೆಗೆ ಓಗೊಟ್ಟು
ಮತ್ತೆ ಪ್ರಧಾನ ಸೇವಕನ ಕಾರ್ಯದಲ್ಲಿ ಮಗ್ನರಾದರು. ಅದು ತಾಯಿ ಕಲಿಸಿದ ಸಂಸ್ಕಾರ.

ಇತ್ತ ಸಿದ್ದೇಶ್ವರ ಸ್ವಾಮೀಜಿಯವರು ದೇಹಾಂತ್ಯದ ನಂತರ ಸುಮಾರು 20 ಲಕ್ಷ ಜನರು ಅವರ ದೇಹದ ಅಂತಿಮ ದರ್ಶನ ಪಡೆದರು. ಅಲ್ಲಿ ಬಂದಿದ್ದ ಯಾರಿಗೂ ಸಿದ್ದೇಶ್ವರ ಸ್ವಾಮೀಜಿಯವರಿಂದ ಹಣಕಾಸಿನ ನೆರವೊ, ಉದ್ಯೋಗದ ಆಸರೆಯೋ, ರಾಜಕೀಯ ಆಶೀರ್ವಾದವೋ ಆಗಿರಲಿಲ್ಲ. ಏಕೆಂದರೆ, ಸಾಮಾನ್ಯ ರೀತಿಯಲ್ಲಿ ಹೇಳುವ ಯಾವುದೇ ಸಾಮಾಜಿಕ ಸೇವೆಯನ್ನು ಸಿದೇಶ್ವರ ಸ್ವಾಮೀಜಿ ಮಾಡುತ್ತಿರಲಿಲ್ಲ. ಉದಾಹರಣೆಗೆ ಲಕ್ಷಾಂತರ ಜನರಿಗೆ ಶಿಕ್ಷಣ ನೀಡುವ ಸಂಸ್ಥೆಯನ್ನಾಗಲಿ, ಆಸ್ಪತ್ರೆಯನ್ನಾಗಲಿ, ದೊಡ್ಡ ಉದ್ಯಮವನ್ನಾಗಲಿ ನಡೆಸುತ್ತಿರಲಿಲ್ಲ. ಅವರು ನೀಡುತ್ತಿದ್ದದ್ದು ಕೇವಲ ಜ್ಞಾನ ದಾಸೋಹ. ಅನ್ನ ದಾಸೋಹ, ಅಕ್ಷರ ದಾಸೋಹದಷ್ಟೇ ಜ್ಞಾನ ದಾಸೋಹವೂ ಮುಖ್ಯ. ಅಜ್ಞಾನ ತುಂಬಿದ ಮನಸ್ಸಿಗೆ, ಆಹಾರ, ಅಕ್ಷರದಿಂದ ಏನೂ ಪ್ರಯೋಜನವಿಲ್ಲ. ಇಂತಹ ಜ್ಞಾನವನ್ನು ಪಡೆದ ಲಕ್ಷೋಪಲಕ್ಷ ಜನರು ಸಮರೋಪಾದಿಯಲ್ಲಿ ಬಂದು ಗುರುವಿಗೆ ನಮಿಸಿದರು.

ಇಲ್ಲಿ ಯಾರು ಗ್ರೇಟ್ ಎಂದು ಹೇಳುವುದು? ಉತ್ತಮ ಮಗನನ್ನು ಬೆಳೆಸಿದ ತಾಯಿಯೋ ? ತಾಯಿ ಹೇಳಿದಂತೆಯೇ ಬದುಕಿ, ಕರ್ಮ ಸಾಗಿಸುತ್ತಿರುವ ಪುತ್ರನೋ? ಜ್ಞಾನ ದಾಸೋಹ ನೀಡುತ್ತ ದೇಹಾಂತ್ಯ ಮಾಡಿದ ಗುರು ಶ್ರೇಷ್ಠರೋ? ಅವರನ್ನು ಹಿಂಬಾಲಿಸುತ್ತ ಅವರಂತೆಯೇ ನಡೆಯುವ ಜನಸ್ತೋಮ ಶ್ರೇಷ್ಠವೋ? ಇದೇ ಭಾರತದ ಶಕ್ತಿ.
ಸಮಾಜದಲ್ಲಿ ಅನೇಕ ಕೆಡುಕುಗಳು, ಭ್ರಷ್ಟಾಚಾರ, ಅತ್ಯಾಚಾರ, ಜಾತಿ ವಿಷವರ್ತುಲಗಳನ್ನು ನೋಡಿ ಬೇಸತ್ತ ಜನರಿಗೆ ಹೀರಾಬೆನ್ ಮೋದಿ, ಸಿದ್ದೇಶ್ವರ ಸ್ವಾಮಿಯವರಂಥವರೇ ಮರಳುಗಾಡಿನಲ್ಲಿ ಸಿಗುವ ಓಯಸಿಸ್ ಗಳು. ಇವರೇ ನಿಜವಾದ ಭಾರತದ ರಾಯಭಾರಿಗಳು.

ಇದನ್ನೂ ಓದಿ | ವಿಸ್ತಾರ ಅಂಕಣ | ಹಾಲಿವುಡ್ ನಮ್ಮ ಕಡೆ ನೋಡುತ್ತಿದೆ, ಬಾಲಿವುಡ್ ಎತ್ತ ಸಾಗುತ್ತಿದೆ?

Exit mobile version