ಈ ವರ್ಷ (2024) ಲೇಖಕ ನಿರಂಜನರ ಜನ್ಮ ಶತಮಾನೋತ್ಸವ
ಕುಳಕುಂದ ಶಿವರಾವ್ ಅಂದರೆ ಯಾರಿಗೂ ಥಟ್ಟನೆ ಪರಿಚಯ ಆಗಲಾರದು. ಆದರೆ ಕನ್ನಡದ ಶ್ರೇಷ್ಠ ಲೇಖಕ ನಿರಂಜನ (Niranjana) ಎಂದರೆ ಎಲ್ಲರಿಗೂ ಪರಿಚಯ ಆಗುತ್ತದೆ. ಅವರು 71 ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಕನ್ನಡದ ಮೊದಲ ಮತ್ತು ಜನಪ್ರಿಯ ಅಂಕಣ ಲೇಖಕರು ಅಂದರೆ ಅದು ನಿರಂಜನ! (ರಾಜಮಾರ್ಗ ಅಂಕಣ)
ಬಾಲ್ಯದಿಂದಲೂ ಬರವಣಿಗೆ
1924 ಜೂನ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಳಕುಂದ ಎಂಬ ಗ್ರಾಮದಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿ ಪತ್ರಿಕೆಗಳಿಗೆ ಬರೆಯಲು ತೊಡಗಿದರು. ಮೊದಲು ಕಂಠೀರವ ಪತ್ರಿಕೆ ಅವರಿಗೆ ಬರೆಯಲು ಅವಕಾಶ ಕೊಟ್ಟಿತು. ಮುಂದೆ ಕನ್ನಡದ ಎಲ್ಲ ಪ್ರಸಿದ್ಧ ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆಯುತ್ತಾ ಹೋದರು. ರಾಷ್ಟ್ರಬಂಧು ಎಂಬ ಪತ್ರಿಕೆಯ ಪ್ರಮುಖ ಲೇಖಕರಾಗಿ ಅವರು ಸಾವಿರಾರು ಅಂಕಣಗಳನ್ನು ಬರೆದರು. ಅವರ ಅಂಕಣ ಲೇಖನಗಳು ಎಂಟು ಕೃತಿಗಳಾಗಿ ಹೊರಬಂದು ಅವರಿಗೆ ಅಪಾರ ಜನಪ್ರಿಯತೆ ಕೊಟ್ಟವು. ಅವರು ಕನ್ನಡದ ಮೊದಲ ಅಂಕಣಕಾರ ಎಂಬ ದಾಖಲೆಯೂ ನಿರ್ಮಾಣವಾಯಿತು.
ಪ್ರಭಾವಶಾಲಿ ಸಣ್ಣ ಕಥೆಗಳು
ಸಣ್ಣ ಕಥೆಗಳು ಅವರಿಗೆ ಇಷ್ಟವಾದ ಇನ್ನೊಂದು ಪ್ರಕಾರ. ಅವರ 156 ಸಣ್ಣ ಕಥೆಗಳ ಸಂಗ್ರಹವಾದ ‘ಧ್ವನಿ’ ಕನ್ನಡದ ಶ್ರೇಷ್ಠ ಕೃತಿ ಆಗಿದೆ. ಕಾರಂತರ ಸಂಪರ್ಕ, ಲೆನಿನ್ ಬಗ್ಗೆ ಓದು ಅವರನ್ನು ಬೆಳೆಸುತ್ತಾ ಹೋದವು.
ಬಾಪೂಜಿ ಬಾಪು ಅವರ ಅತ್ಯಂತ ಶ್ರೇಷ್ಟವಾದ ಸಣ್ಣ ಕಥೆ. ಗಾಂಧೀಜಿ ಬದುಕಿದ್ದಾಗಲೇ ಅವರು ಸತ್ತಂತೆ ಕಲ್ಪಿಸಿಕೊಂಡು ಬರೆದ ಕಥೆ ಇದು! ರಕ್ತ ಸರೋವರ ಕಾಶ್ಮೀರದ ದಾಲ್ ಸರೋವರದ ಹಿನ್ನೆಲೆಯಲ್ಲಿ ಅರಳಿದ ಅದ್ಭುತವಾದ ಕಥೆ.
ತಿರುಕಣ್ಣನ ಮತದಾನ ರಾಜಕೀಯ ವಿಡಂಬನೆಯ ಕಥೆ. ಅವರ ಸಣ್ಣ ಕಥೆಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸಂಸ್ಕೃತಿಯಲ್ಲಿ ಅರಳಿದ ಕಥೆಗಳು. ಕನ್ನಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನಂತರ ಇಷ್ಟೊಂದು ವೈವಿಧ್ಯಮಯವಾದ ಸಣ್ಣ ಕಥೆಗಳನ್ನು ಬರೆದವರು ನಿರಂಜನ ಮಾತ್ರ ಅಂದರೆ ಅದು ಅತಿಶಯೋಕ್ತಿ ಅಲ್ಲ!
ಕಾದಂಬರಿಕಾರರಾಗಿ ನಿರಂಜನರು
ಅವರು ಬರೆದದ್ದು ಒಟ್ಟು 21 ಕಾದಂಬರಿಗಳು. ವರ್ಗ ಸಂಘರ್ಷ ಮತ್ತು ಸಾಮಾಜಿಕ ಸಮಾನತೆ ಅವರ ಹೆಚ್ಚಿನ ಕಾದಂಬರಿಗಳ ಹೂರಣ. 700 ಪುಟಗಳ ಬೃಹತ್ ಕಾದಂಬರಿ ಮೃತ್ಯುಂಜಯ ಅದೊಂದು ಮಾಸ್ಟರಪೀಸ್ ಕಲಾಕೃತಿ. ವಿಮೋಚನೆ, ಬನಶಂಕರಿ, ಅಭಯ, ಚಿರಸ್ಮರಣೆ, ರಂಗಮ್ಮನ ವಟಾರ ಮೊದಲಾದ ಕಾದಂಬರಿಗಳು ಒಮ್ಮೆ ಓದಿದರೆ ಮರೆತುಹೋಗೋದಿಲ್ಲ. ಸುಳ್ಯ ಮತ್ತು ಮಡಿಕೇರಿ ಪ್ರದೇಶದಲ್ಲಿ ಕಲ್ಯಾಣಸ್ವಾಮಿ ಎಂಬಾತ ನಡೆಸಿದ ರಕ್ತಕ್ರಾಂತಿಯ ಹಸಿಹಸಿ ಕಥೆಯನ್ನು ಹೊಂದಿರುವ ಒಂದು ಶ್ರೇಷ್ಟವಾದ ಕಾದಂಬರಿ ಅವರು ಬರೆದಿದ್ದಾರೆ. ನಿರಂಜನರು ಬರೆದ ನಾಟಕಗಳೂ ಜನಪ್ರಿಯವಾಗಿವೆ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ
ನಿರಂಜನ ಅವರ ಸಂಪಾದನಾ ಗ್ರಂಥಗಳು
ಇಂದು ಕನ್ನಡ ನಾಡು ನಿರಂಜನರನ್ನು ನೆನಪಿಟ್ಟುಕೊಳ್ಳಲೇ ಬೇಕಾದ ಮುಖ್ಯ ಕಾರಣ ಎಂದರೆ ಅವರ ಸಂಪಾದನೆಯ ಗ್ರಂಥಗಳು. 25 ಸಂಪುಟಗಳ ವಿಶ್ವ ಕಥಾಕೋಶ, ಜ್ಞಾನಗಂಗೋತ್ರಿ ಹೆಸರಿನ ಎಳೆಯರ ಏಳು ಸಂಪುಟಗಳ ವಿಶ್ವ
ಜ್ಞಾನಕೋಶ, ಪುರೋಗಾಮಿ ಪ್ರಕಾಶನದ ಎಂಟು ಪುಸ್ತಕಗಳು, ಜನತಾ ಸಾಹಿತ್ಯಮಾಲೆಯ 25 ಪುಸ್ತಕಗಳು….ಹೀಗೆ ಲೆಕ್ಕ ಮಾಡುತ್ತಾ ಹೋದರೆ ಸಾವಿರಾರು ಪುಟಗಳ ಅದ್ಭುತ ಜ್ಞಾನಕೋಶಗಳು ಅರಳಿದ್ದು ನಿರಂಜನರ ಸಂಪಾದಕತ್ವದಲ್ಲಿ! ಅವರ ಇಡೀ ಜೀವನವನ್ನು ನಿರಂಜನರು ಅಧ್ಯಯನ ಮತ್ತು ಬರವಣಿಗೆಯಲ್ಲಿಯೇ ಕಳೆದರು.
ಇಡೀ ಕುಟುಂಬವು ಸಾಹಿತ್ಯಕ್ಕೆ ಮೀಸಲು
ನಿರಂಜನರ ಪತ್ನಿ ಅನುಪಮಾ ನಿರಂಜನ ಕನ್ನಡದ ಸ್ಟಾರ್ ಕಾದಂಬರಿಕಾರರು. ಹೆಣ್ಣು ಮಕ್ಕಳಾದ ತೇಜಸ್ವಿನಿ ಮತ್ತು ಸೀಮಂತಿನಿ ಇಬ್ಬರೂ ಕನ್ನಡದ ಪ್ರಭಾವೀ ಲೇಖಕರಾಗಿ ಗುರುತಿಸಿಕೊಂಡವರು. ಹಾಗೆ ನಿರಂಜನರ ಇಡೀ ಕುಟುಂಬವು ಕನ್ನಡದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿತು.
ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ದೊರೆತವು. 1995ರಲ್ಲಿ ಅವರು ನಮ್ಮನ್ನು ಅಗಲಿದರು. ಕನ್ನಡ ಸಾಹಿತ್ಯಲೋಕವನ್ನು ಚಂದವಾಗಿ ಬೆಳೆಸಿದ ನಿರಂಜನರ ಜನ್ಮ ಶತಮಾನೋತ್ಸವದ ಈ ವರ್ಷ ಕನ್ನಡ ಸಾರಸ್ವತ ಲೋಕ ಒಂದು ಸ್ಮರಣೀಯ ಕಾರ್ಯಕ್ರಮವನ್ನು ಅವರ ನೆನಪಿನಲ್ಲಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಆಗಬೇಕು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು