Site icon Vistara News

ಪೋಸ್ಟ್​ ಬಾಕ್ಸ್​ 143 | ಪೋಷಾಕಿಲ್ಲದಿದ್ದರೂ ನೀನು ರಾಜ, ನಾನು ಬೆದರಿದ ಪ್ರಜೆ; ಭಾವದಲ್ಲೇ ಪಾತ್ರ ಬದಲಾಗುತ್ತದಲ್ಲಾ?

king love story

ಎಲ್ಲಿ ಸ್ಕೂಲು ಓದಿದ್ದು ನೀನು ಹೇಳು? ನಿನ್ನ ಸ್ಕೂಲಿಗೆ ಹೋಗೋ ದಾರೀಲಿ ಕಾಡಿತ್ತಾ? ಬಯಲಿತ್ತಾ? ನಡಿಗೆಯೋ, ಬಸ್ಸೋ? ನಂಗೊತ್ತಿಲ್ಲ. ನೀನು ಯಾವತ್ತೂ ಹೇಳೂ ಇಲ್ಲ. ಬಯಲುಸೀಮೆಯ ಕಪ್ಪುಮಣ್ಣಿನ ಜನ ನಾವು. ನಮ್ಮ ಸ್ಕೂಲಿನ ದಾರೀಲಿ ಹಿಪ್ಪುನೇರಳೆ ತೋಟ. ಸೀಸನ್ವೈಸೂ ಕಡಲೆ, ತೊಗರಿ, ಎಲಚಿಹಣ್ಣು, ನೆಲ್ಲಿಕಾಯಿ, ನೇರಳೆಗಳು. ಹೋಗ್ತಾ ಅರ್ಜೆಂಟಿರುತ್ತಿತ್ತು ಕೈ ಹಾಕ್ತಿರಲಿಲ್ಲ. ಬರ್ತಾ ಹೊಲಗಳಲ್ಲಿ ನಡೀತಾ ಯೂನಿಫಾರ್ಮ್​ ಲಂಗದ ಜೇಬಿಗೆ ಸಿಕ್ಕಿದ್ದೆಲ್ಲ ತುಂಬಿಕೊಂಡು ತಿಂತಾ ದಾರಿ ಸವೆಸೋದು. ಅಲ್ಲಾ…ನನ್ನ ಹಾಗೆ ಮರಹತ್ತುವ ಸಾಹಸೀ ಹೆಣ್ಮಕ್ಕಳೂ ಕಡೆಗೊಮ್ಮೆ ಭಾವುರಾಗಿ ಹಾಳಾಗಿಹೋಗ್ತಾರಲ್ಲ ಅಂತ ಈ ಕ್ಷಣ ಅನಿಸ್ತಿದೆ ನೋಡು!

ಬರೀಬೇಕು ಅನ್ಕೊಂಡಿದ್ದು ಅದಲ್ಲ, ಮರ ಹತ್ತಿ ಕೂತು, ಜೊಂಪೆ ಜೊಂಪೆ ಪುಟ್ಟನೆಲ್ಲಿಕಾಯನ್ನು ಕೆಳಗೆ ನಿಂತು ಲಂಗ, ಶರಟು ಒಡ್ಡುತ್ತಿದ್ದ, ಹುಡುಗ ಹುಡುಗಿಯರಿಗೆ ಕ್ಯಾಚ್ ಎಸೆದು, ಭರ್ತಿ ನನ್ನ ಲಂಗದ ಜೇಬಿಗಿಳಿಸಿ ಮರದಿಂದ ಧಡ್ಡಂತ ಧುಮುಕಿದಾಗ ಬಾಹುಬಲಿ ಪಿಚ್ಚರಿನ ಹೀರೋ ಯುದ್ಧಗೆದ್ದಾಗ ಬೀಗೋ ಥರದ್ದೇ ಒಂದು ಗಮ್ಮತ್ತಿರ್ತಿತ್ತಲ್ಲಾ ನಂದು? ಅಂತದ್ದು ಈಗಲೂ ಘಟಿಸುತ್ತದೆ ಕಣೋ. ಸ್ವರೂಪ ಬೇರೆ ಅಷ್ಟೆ. ಯಾವುದೋ ಹೊಸ ಸಾಹಸ, ಪುಟ್ಟ ಗೆಲುವು, ಲೋಕದ ಪಾಲಿಗೆ ಅದೇನೂ ದೊಡ್ಡ ವಿಷಯವಾಗಿರಲೂಬೇಕಿಲ್ಲ. ಆದರೆ ನನಗೆ ಥೇಟು ನೆಲ್ಲಿಕಾಯಿ ಕೊಡುವಂತದೇ ಸಣ್ಣದಾದ ಖುಷಿ, ನೆಲ್ಲಿಕಾಯ ಒಗರಿನಂತದೇ ಯಾವ್ದೋ ಬೇಸರ! ಅಂತದನ್ನೆಲ್ಲ ಲಂಗದ ಜೇಬಿಗೆ ನೆಲ್ಲಿಕಾಯಿ ತುಂಬಿಕೊಂಡಂತದೇ ಖುಷಿಯಲ್ಲಿ ಫೋನೊಳಗೆ, ತಲೆಯೊಳಗೆ, ಮನಸೊಳಗೆ ತುಂಬಿಕೊಂಡು ಬರುತ್ತೇನೆ ನಿನ್ನ ಮುಂದೆ. ನೀನೂ ಬೀಗುತ್ತಲೇ ನನ್ನನ್ನು ನೋಡಿ ಏನೆಂದು ಕೇಳುತ್ತೀ. ಹೇಳು ಅನ್ನುತ್ತೀ, ಆದರೆ ಒಂದೇ ಒಂದು ಶಬ್ದವೂ ಹೊರಡುವುದಿಲ್ಲ. ನನ್ನ ಬಾಹುಬಲಿತ್ವವೆಲ್ಲ ಒಂದೇ ಕ್ಷಣಕ್ಕೆ ಕರಗಿ ರಾಜನೊಬ್ಬನ ಮುಂದೆ ನಿಂತ ಅತಿಸಾಮಾನ್ಯ ಪ್ರಜೆಯಂತೆ ಜೀವವೆಲ್ಲಾ ಹಿಡಿಯಾಗಿಬಿಡುತ್ತದೆ. “ಹೂಂ ಹೇಳುವಂತವನಾಗು ಏನ್ಸಮಾಚಾರ?” ಅಂತ ರಾಜ ಕೇಳಿದರೆ ಪ್ರಜೆ ಯಾವ ಸಮಾಚಾರ ಹೇಳಬೇಕು? ಹಿತ್ತಲಲ್ಲಿ ಈ ಸಲ ಮಲ್ಲಿಗೆ ಅರಳಿದ್ದು? ದೇವಿ ಹಸುವಿನ ಮಗಳು ಗೌರಿ ಈಗ ಬಸುರಿಯಾದದ್ದು? ಹೊಲದ ಬದುವಲಿ ಕಂಡ ದೊಡ್ಡ ನವಿಲು? ಅಥವಾ ಹೊಳೆಯ ಸೊಗಸು? ಥತ್ತೇರಿ. ಇವೆಲ್ಲಾ ರಾಜನಿಗೊಂದು ವಿಷಯವಾ? ಅನಿಸಿಬಿಡತ್ತಲ್ಲಾ ಪ್ರಜೆಗೆ…ಹಾಗೇ ಅನಿಸುತ್ತದೆ ನನಗೂ. “ಹೂಂ. ಹೇಳು ಪ್ರಜೆಯೇ, ಏನು ಸಮಾಚಾರ” ಅಂತ ರಾಜ ಯಾವ ಬಗೆಯ ಧ್ವನಿಯಲ್ಲಿ ಕೇಳಿದರೂ ಅವನ ಗತ್ತು ಮಾತ್ರ ಬದಲಾಗುವುದಿಲ್ಲ. ಪ್ರಜೆಯ ಗಂಟಲು ಮಾತು ಕೇಳುವುದಿಲ್ಲ. ನನಗೂ ನಿನ್ನ ಮುಂದೆ ಮಾತು ಹೊರಡುವುದಿಲ್ಲ!!

ಅಲ್ವೋ ರಾಜನೆದುರು ಪ್ರಜೆಗೆ ಗಂಟಲು ಕಟ್ಟುವುದು ಸಹಜವೇ ಇರಬಹುದು. ಆದರೆ ನಿನ್ನ ನೋಡಿ ನನಗೆ ಗಂಟಲು ಕಟ್ಟುವುದು ಅಸಹಜ ಅನಿಸಲ್ವ? ಪೋಷಾಕಿಲ್ಲದಿದ್ದರೂ ನೀನು ರಾಜನಂತೆ ನಾನು ಬೆದರಿದ ಸಾಮಾನ್ಯಪ್ರಜೆಯಂತೆ ತತ್ಕ್ಷಣ ಭಾವದಲ್ಲೆ ಪಾತ್ರ ಬದಲಾಗುತ್ತದಲ್ಲಾ… ಅದರ ಮೂಲ ಕಾರಣ ಹುಡುಕುವಷ್ಟು ಧೈರ್ಯವಿಲ್ಲ ನಿನಗೆ. ನೀನೇ ಹುಡುಕಿ ನೋಡು.

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ಪ್ರೇಮಲೋಕದ ಬಾಗಿಲು ಯಾವಾಗ ತೆಗೆಯುತ್ತೆ?

ರಾಜನಂತೆ ಮಾತ್ರವಲ್ಲ ಆಗಾಗ ತಕ್ಕಡಿ ಹಿಡಿದು ನಿಂತಂತೆಯೂ ಕಂಡುಬಿಡುತ್ತೀ. ಖುಷಿ ಬೇಸರಗಳನ್ನೆಲ್ಲ ನಿನ್ನ ಮುಂದೆ ಸುರಿದುಕೊಳ್ಳೋಣವೆಂದು ಬರುತ್ತೇನೆ. ಯೂನಿಫಾರ್ಮ್​ ಲಂಗದ ಎರಡೂ ಜೇಬು ತುಂಬಿಕೊಂಡ ಹುಡುಗಿಯ ಹಾಗೇ ಥೇಟ್! ನಿನ್ನ ಮುಂದೆ ಬಂದ ಕೂಡಲೆ ಆ ಯಾವ ಖುಷಿ ಬೇಸರಗಳಿಗೂ ತಕ್ಕಡಿಯೇರುವ ತೂಕವೇ ಇಲ್ಲವೇನೋ ಅನಿಸಿಬಿಡುತ್ತದೆ. ನೀನು ಸುಮ್ಮನೇ ತಿರುಗಿ “”ಏನು ಹೇಳು”?” ಅಂತ ಕೇಳಿದಾಗ, ನನಗೆ ಅದು “ಎಷ್ಟು ತೂಕ ನಿನ್ನ ಮಾತಿಗೆ?” ಎಂಬ ಶಬ್ದ ರೂಪಾಂತರವಾಗಿ ನನ್ನನ್ನು ತಲುಪತ್ತದೆ. ಮತ್ತೂ ಒಮ್ಮೊಮ್ಮೆ ನೀನು ತೀರಾ ಎದುರಾ ಎದುರೇ ಕೂತಿದ್ದರೂ ನಮ್ಮಿಬ್ಬರ ನಡುವೆ ಚೀನಾ ಮಹಾಗೋಡೆಯಂತದೊಂದು ದೊಡ್ಡ ಗೋಡೆಯಿರುವಂತೆ ಭಾಸವಾಗುತ್ತದೆ. ಸಿನೆಮಾದಲ್ಲಿ ಯಾರೋ ಒಬ್ಬರ ಕಣ್ಣಿಗೆ ಮಾತ್ರ ದಯ್ಯ ಕಾಣುವಂತೆ ಆ ಅದೃಶ್ಯ ಗೋಡೆ ನನಗೆ ಮಾತ್ರವೇ ಕಾಣುತ್ತಿರುತ್ತದೆ. ಆ ಅದೃಶ್ಯ ತಡೆಗೋಡೆಯ ನಿರಾಕರಣ ಭಾವದ ಇಟ್ಟಿಗೆಗಳು ನಿನ್ನೊಳಗಿಂದಲೇ ಹುಟ್ಟಿಬಂದವಾ? ಕೇಳಿಕೋ ನಿನ್ನನ್ನೇ ಒಮ್ಮೆ.

ನಿನಗೆ ಪುರುಸೊತ್ತಿಲ್ಲದ ವ್ಯಾಪಾರ ಗೊತ್ತು. ಆದರೂ ಆಗೀಗ ಒಂದೊಂದು ಪುಸ್ತಕ, ಸಿನೆಮಾ, ನಾಟಕ, ಹಾಡು ಅಂತ ಟೈಮು ಕೊಡು. ಈ ಅಭ್ಯಾಸಗಳನ್ನು ಮಾಡಿಕೊಂಡದ್ದರಿಂದಾಗಿ ಮರಹತ್ತಿಳಿದ ಸಾಹಸಿ ಹುಡುಗಿ ಭಾವುಕವಾಗಿ ಹಾಳಾದಂತೆ ನೀನೂ ಚೂರು ಹಾಳಾದರೆ ಹೊಂದಾಣಿಕೆ ಸುಲಭ ಅನ್ನುವ ಸ್ವಾರ್ಥಕ್ಕಲ್ಲ, ಅವೆಲ್ಲ ನಮ್ಮ ಬದುಕಿನ ದೃಷ್ಟಿ ಬದಲಿಸುತ್ತವೆ. ಸ್ವಲ್ಪವಾದರೂ… “ಹೋಮ್​​” ಅಂತೊಂದು ಮಲಯಾಳಂ ಸಿನಿಮಾ ಇದೆ ನೋಡು. ನಮ್ಮ ಮನೆಯಲ್ಲಿ ನಾವು ಆಫೀಸಿನಲ್ಲಿರುವಂತೆ ಇರುತ್ತೇವಾ? ಬೇಕಾದ ಹಾಗಿರುತ್ತೇವೆ. ಬೇಕಾದ್ದು ಮಾತಾಡುತ್ತೇವೆ. ನೂರು ಗ್ರಾಮಿನ ಮಾತು, ನೂರು ಕೆಜಿಯ ಮಾತು ಎಲ್ಲವೂ ಸಲ್ಲುತ್ತದೆ ಅಲ್ಲಿ . ಪಾನಿಪುರಿಗೆ ಖಾರ ಹೆಚ್ಚಾದ್ದೂ ದೊಡ್ಡ ಚರ್ಚೆಯ ವಿಷಯವೇ. ನಮ್ಮ ಮಾತಿಗೆ ಚೌಕಟ್ಟಿನ, ಅಳತೆಯ, ಭಯದ ಯಾವ ಭಾರವೂ ಇರುವುದಿಲ್ಲ. ಜಗತ್ತಿನಲ್ಲಿ ಕೋಟ್ಯಂತರ ಮನೆಗಳಿದ್ದರೂ ನಮ್ಮ ಮನೆ ಕೊಡುವ ಆಪ್ತಭಾವವನ್ನು ಬೇರೆ ಯಾವುದೂ ಕೊಡಲಾರದು. ಈ ಜಗತ್ತಿನಲ್ಲಿ ಕೋಟ್ಯಂತರ ಜನರಿದ್ದರೂ ನೀನು ನನಗೆ ಬೇರೆಯೇ ಅಲ್ವ? ನಾವು ಪ್ರೀತಿಸುವ ವ್ಯಕ್ತಿಗಳೂ ನಮ್ಮ ಪಾಲಿಗೆ ನಮ್ಮ ಮನೆಯಂತೆಯೇ ಆಪ್ತವಾಗಿರಬೇಕು ಅಂತ ಬಯಸಿದರೆ ಅದನ್ನು ಬಾಲಿಶತನ ಅಂತೀಯಾ? ಅಂದರೂ ಅನ್ನಬಹುದು ಬಿಡು. ಅಂತವನೇ ನೀನು.

ನಿನ್ನ ಮನ ನನ್ನ ಮನೆ ಅನ್ನುವ ಭಾವ ಹುಟ್ಟಿಸದ ಪ್ರತಿ ಸಂದರ್ಭದಲ್ಲೂ ನೀನು ರಾಜ, ನಾನು
ಅತಿಸಾಮಾನ್ಯಪ್ರಜೆ ಎಂಬುದು ಕೇವಲ ಕಲ್ಪಿತ ಭಾವವೇನಲ್ಲ ಅಂತಲೇ ಅನಿಸುತ್ತದೆ ಕಣೋ.
“ಹಾಡುವುದು ಅನಿವಾರ್ಯ ಕರ್ಮ ನನಗೆ” ಅನ್ನುತ್ತಾರೆ ಜಿ ಎಸ್ ಶಿವರುದ್ರಪ್ಪನವರು.

“ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು ಆನು ಹಾಡಿದಲ್ಲದೆ ಸೈರಿಸಲಾರೆನಯ್ಯಾ”
ಅನ್ನುತ್ತಾಳೆ ಅಕ್ಕಮಹಾದೇವಿ.
ಅಷ್ಟೆಲ್ಲ ದೊಡ್ಡ ಮನ್ಷಳಲ್ಲಪ್ಪ ನಾನು.
ನಿನ್ನ ಖುಷಿ-ಬೇಸರಗಳ ತೂಕವೆಷ್ಟು ಅಂತ ಮಾತ್ರ ಕೇಳಬೇಡ. ಪ್ಲೀಸ್.
ಹೋಗಲಿ ಹೇಳು, ಯಾವ್ದು ನಿನ್ನ ಸ್ಕೂಲು?

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ದೂರ- ಅಂತರಗಳೆಂಬ ಮಾಯೆ!

Exit mobile version