ಪುರಾಣಗಳು ಸಾವಿರಾರು ವರ್ಷಗಳ ಕಾಲ ಬದುಕಿದವರ ಕತೆಗಳನ್ನು ಹೇಳುತ್ತವೆ. ಆದರೆ ವೇದಗಳು ಶತಾಯುಷ್ಯವನ್ನು “ಭರ್ತಿ ಆಯಸ್ಸು” ಎಂದು ತೋರುತ್ತವೆ. ಯಜುರ್ವೇದದ “ಪಶ್ಯೇಮ ಶರದಃ ಶತಂ”; ತೈತ್ತರೀಯ ಬ್ರಾಹ್ಮಣದ “ಶತಮಾನಂ ಭವತಿ” ಮೊದಲಾದವು ನೂರು ವರ್ಷಗಳ ಕಾಲ ಜೀವಿಸುವುದನ್ನು ಬದುಕಿನ ಭಾಗ್ಯಗಳಲ್ಲಿ ಒಂದೆಂದು ಸೂಚಿಸುತ್ತವೆ. ಜೀವನದಲ್ಲಿ ಅರವತ್ತು ವರ್ಷಗಳನ್ನು ಪೂರೈಸುವುದು ಒಂದು ಸಾಧನೆಯಾಗಿದ್ದ ಕಾಲವಿತ್ತು. ಸಂವತ್ಸರ ಚಕ್ರದ ಅರವತ್ತು ವರ್ಷಗಳನ್ನು ಪೂರೈಸಿ, ಮತ್ತೊಮ್ಮೆ ಹುಟ್ಟಿದ ಸಂವತ್ಸರದ ಹೆಸರಿಗೆ ಮರಳುವ ಪ್ರಕ್ರಿಯೆಯನ್ನು ಎರಡನೆಯ ಆಯಸ್ಸು ಎಂದು ಪರಿಗಣಿಸಿ ಮಾಡುವ ಸಮಾರಂಭಕ್ಕೆ ಷಷ್ಠಿಪೂರ್ತಿ ಎನ್ನುವ ಹೆಸರಿದೆ. ಶಕ 1800ರಲ್ಲಿ ಭಾರತದಲ್ಲಿ ಹುಟ್ಟಿದ ವ್ಯಕ್ತಿಯ ಸರಾಸರಿ ಆಯಸ್ಸು ಕೇವಲ 25 ವರ್ಷಗಳು. ಶಕ 1900ಕ್ಕೆ ಇದು 47 ವರ್ಷಗಳಿಗೆ ಏರಿತ್ತು. ಇಸವಿ 2000ಕ್ಕೆ ಈ ಸಂಖ್ಯೆ 62 ವರ್ಷಗಳಿಗೆ ತಲುಪಿ, ಪ್ರಸ್ತುತ 70 ವರ್ಷಗಳನ್ನು ಮೀರಿದೆ. ಅಂದರೆ, 1800ನೆಯ ಇಸವಿಯಲ್ಲಿ ಷಷ್ಠಿಪೂರ್ತಿ ಮಾಡಿಕೊಳ್ಳುವುದು ನಿಜದ ಸಾಧನೆ ಎನಿಸಿದರೆ, 2000 ಇಸವಿಯಲ್ಲಿ ಅದು ಕೇವಲ ಸಾಂಕೇತಿಕ ಅನಿಸಬಹುದು.
ಆಯಸ್ಸಿನ ಏರಿಕೆಗೆ ಕಾರಣವೇನು? ಇದಕ್ಕೆ ಮನುಷ್ಯರ ಸಾವಿಗೆ ಪ್ರಮುಖ ಕಾರಣಗಳೇನು ಎನ್ನುವುದರ ಜಿಜ್ಞಾಸೆ ಬೇಕು. ಶಕ 1800 ಸುಮಾರಿನಲ್ಲಿ ಸಾವಿಗೆ ಮುಖ್ಯ ಕಾರಣ ಸಾಂಕ್ರಾಮಿಕ ಕಾಯಿಲೆಗಳು. ಶಕ 1900 ಸುಮಾರಿಗೆ ಸಾಂಕ್ರಾಮಿಕ ಕಾಯಿಲೆಗಳ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಕಾಯಿಲೆಗಳು, ಅಪಘಾತಗಳು, ಅಪೌಷ್ಟಿಕತೆ ಈ ಪಟ್ಟಿಗೆ ಸೇರಿದವು. ಶಕ 2000ದ ಹೊತ್ತಿಗೆ ಲಸಿಕೆಗಳ, ಪ್ರತಿಜೀವಕಗಳ ಕೃಪೆಯಿಂದ ಸಾಂಕ್ರಾಮಿಕ ಕಾಯಿಲೆಗಳ ತೀವ್ರತೆ ಇಳಿದು, ಪರಿಸ್ಥಿತಿ ಬಹಳಷ್ಟು ಸುಧಾರಿಸಿತ್ತು. ಜೀವನಶೈಲಿಯ ಕಾಯಿಲೆಗಳು, ಕ್ಯಾನ್ಸರ್, ತಂಬಾಕು ಬಳಕೆ, ಮದ್ಯಪಾನದ ಚಟ, ಅಪಘಾತಗಳು, ಬೊಜ್ಜು, ಅತಿ-ಪೌಷ್ಟಿಕತೆ, ಆತ್ಮಹತ್ಯೆ ಇಂತಹ ಅನೇಕ ಕಾರಣಗಳು ಪೂರ್ಣಾಯಸ್ಸಿಗೆ ಅಡ್ಡಿಯಾದವು. ಇಷ್ಟಾಗಿಯೂ ಸರಾಸರಿ ಆಯಸ್ಸು ಏರಿಕೆಯಾದದ್ದರ ಮುಖ್ಯ ಕಾರಣ 1900ರಲ್ಲಿ ಸಾವಿಗೆ ಕಾರಣವಾಗುತ್ತಿದ್ದ ಅಂಶಗಳನ್ನು ಬಹುತೇಕ ನಿವಾರಿಸಿಕೊಂಡದ್ದು.
ಒಂದು ವೇಳೆ ಸಾವಿಗೆ ಕಾರಣವಾಗಬಲ್ಲ ಯಾವುದೇ ಬಾಹ್ಯ ಸಮಸ್ಯೆ ಸಂಭವಿಸಲಿಲ್ಲವೆನ್ನೋಣ. ಆಗ ಪೂರ್ಣಾಯುಷ್ಯ ಎಂದರೆ ಎಷ್ಟು? ಈಗ ನಾವು ಸಾಕಷ್ಟು ಶತಾಯುಷಿಗಳನ್ನು ಕಾಣುತ್ತಿದ್ದೇವೆಯಾದರೂ, ಆ ಆಯಸ್ಸನ್ನು ಪ್ರತಿಯೊಬ್ಬರೂ ಸಾಧಿಸಬಲ್ಲರು ಎಂಬುದಿಲ್ಲ. ವೃದ್ಧಾಪ್ಯದ ಏಕೈಕ ಕಾರಣದಿಂದ ಆಗುವ ಸಾವುಗಳು ಸಾಕಷ್ಟಿವೆ. ಅಂದರೆ, ಯಾವುದೇ ಬಾಹ್ಯ ಕಾರಣಗಳು ಇಲ್ಲದಿದ್ದರೂ, ಶರೀರ ತಾನೇ ತಾನಾಗಿ, ಸಹಜವಾಗಿ, ವಯೋಸಂಬಂಧಿ ಕಾರಣಗಳಿಂದ ಜರ್ಜರಿತವಾಗುತ್ತಾ ಕಡೆಗೆ ಸಾವಿಗೆ ಶರಣಾಗುತ್ತದೆ. ಸದ್ಯಕ್ಕೆ ಈ ರೀತಿ ಸಾವಿಗೆ ಗುರಿಯಾಗುವವರ ಸರಾಸರಿ ಆಯಸ್ಸು 80-90 ವರ್ಷಗಳ ಆಸುಪಾಸಿನಲ್ಲಿದೆ. ಬಾಹ್ಯ ಕಾರಣಗಳಿಂದ ಆಗುತ್ತಿದ್ದ ಸಾವುಗಳನ್ನು ಚಿಕಿತ್ಸೆಗಳ ಮೂಲಕ ತಡೆಗಟ್ಟಿ, ಸರಾಸರಿ ಆಯಸ್ಸನ್ನು ಬೆಳೆಸಿದಂತೆ, ವೃದ್ಧಾಪ್ಯ ಸಂಬಂಧಿ ವಯೋಸಹಜ ಸಮಸ್ಯೆಗಳನ್ನು ತಡೆಗಟ್ಟಿ, ಬದುಕಿನ ಅವಧಿಯನ್ನು ಮತ್ತಷ್ಟು ಹೆಚ್ಚಿಸಿ, ಆಯಸ್ಸನ್ನು ವಿಸ್ತರಿಸಲು ಸಾಧ್ಯವೇ? ಒಂದು ವೇಳೆ ಸಾಧ್ಯವೆಂದರೆ, ಆಗ ಆಯಸ್ಸು ಎಷ್ಟು ವರ್ಷಗಳಿಗೆ ತಲುಪಬಹುದು?
ವಿಜ್ಞಾನಿಗಳು ಬಹಳ ಕಾಲದಿಂದ ಈ ಸಾದ್ಯತೆಯ ಹಿಂದೆ ಬಿದ್ದಿದ್ದಾರೆ. ವೃದ್ಧಾಪ್ಯ ಎಂದರೇನು? ಅದು ಹೇಗೆ ಸಂಭವಿಸುತ್ತದೆ? ಅದನ್ನು ಸಮರ್ಪಕವಾಗಿ, ವಸ್ತುನಿಷ್ಠವಾಗಿ ಅಳೆಯುವ ಬಗೆ ಹೇಗೆ? ಯಾವ ರೀತಿ ವೃದ್ಧಾಪ್ಯಕ್ಕೆ ಕಾರಣವಾಗುವ ಸಂಗತಿಗಳನ್ನು ನಿಯಂತ್ರಿಸಬಹುದು?– ಈ ಮೊದಲಾದ ಪ್ರಶ್ನೆಗಳ ಬಗ್ಗೆ ವಿಜ್ಞಾನಿಗಳಿಗೆ ತೀವ್ರ ಕುತೂಹಲವಿದೆಯಾದರೂ, ಅದಕ್ಕೆ ಸಮಾಧಾನಕರ ಉತ್ತರಗಳಿಲ್ಲ. ಈವರೆಗೆ ಮಾಡಿರುವ ಅನೇಕ ಅಂದಾಜುಗಳ ಪೈಕಿ ಯಾವುದೇ ಒಂದು ಅಂಶವೂ ಪಕ್ಕಾ ಎನ್ನಬಹುದಾದ ಉತ್ತರಗಳನ್ನು ನೀಡಿಲ್ಲ. ಆದರೆ, ಒಂದು ಮಾತನ್ನು ಬಹುತೇಕ ಎಲ್ಲ ಸಂಶೋಧಕರೂ ಒಪ್ಪುತ್ತಾರೆ: ಪ್ರತಿಯೊಂದು ಕ್ಷಣವೂ ನಮ್ಮ ದೇಹ ಸಾವಿರಾರು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹಾದುಹೋಗುತ್ತದೆ. ನಾವು ಚಯಾಪಚಯ (metabolism) ಎಂದು ಕರೆಯುವ ಈ ಪ್ರಕ್ರಿಯೆಗೆ ಬಹಳಷ್ಟು ಶಕ್ತಿ ಖರ್ಚಾಗುತ್ತದೆ. ಈ ಶಕ್ತಿ ನಮಗೆ ದೊರೆಯುವುದು ಆಹಾರದ ಮೂಲಕ. ಶಕ್ತಿಯ ಎಷ್ಟು ಪ್ರಮಾಣ ಚಯಾಪಚಯಕ್ಕೆ ಖರ್ಚಾಗುತ್ತದೆ ಮತ್ತು ಎಷ್ಟು ಭಾಗ ಶರೀರದ ಅಂಗಾಂಶಗಳ ತಯಾರಿಕೆಗೆ ದೊರೆಯುತ್ತದೆ ಎನ್ನುವುದು ಮುಖ್ಯ. ಸಣ್ಣ ವಯಸ್ಸಿನಲ್ಲಿ ಶರೀರದ ಗಾತ್ರ ಕಡಿಮೆ. ಹೀಗಾಗಿ ಶರೀರದ ನಿರ್ವಹಣೆಗೆ ಹೆಚ್ಚು ಶಕ್ತಿ ಬೇಕಿಲ್ಲ. ಪರಿಣಾಮವಾಗಿ, ಶಕ್ತಿಯ ಖರ್ಚು ಶರೀರವನ್ನು ಬೆಳೆಸಲು ನೆರವಾಗುತ್ತದೆ. ಆದರೆ ಶರೀರ ಗಾತ್ರದಲ್ಲಿ ಬೆಳೆಯುತ್ತಾ ಹೋದಂತೆ ನಿರ್ವಹಣೆಯ ಅಗತ್ಯ ಹೆಚ್ಚುತ್ತದೆ; ಶರೀರದ ಅಂಗಾಂಶಗಳ ತಯಾರಿಕೆಗೆ ದೊರೆಯುವ ಶಕ್ತಿಯ ಪ್ರಮಾಣ ಕುಗ್ಗುತ್ತದೆ.
ಬದುಕಿನ ಒಂದು ಹಂತದಲ್ಲಿ ಇವೆರಡೂ ಸಮಸ್ಥಿತಿಯನ್ನು ತಲುಪುತ್ತವೆ. ಈ ಸ್ಥಿತಿಯನ್ನು ಕಾಯ್ದಿಟ್ಟುಕೊಳ್ಳಲು ಶರೀರ ಸಜ್ಜಾಗುತ್ತದೆ. ಸಮಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಏರುಪೇರಾದಾಗ ಶರೀರ ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಸಾಕಷ್ಟು ಹೆಣಗುತ್ತದೆ. ಒಂದು ವೇಳೆ ಈ ಹೆಣಗಾಟವನ್ನು ಅಳೆಯಲು ಸಾಧ್ಯವಾದರೆ, ಆಗ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ಶರೀರ ಎಷ್ಟು ಸಮರ್ಥವಾಗಿದೆ ಎಂಬುದನ್ನು ಲೆಕ್ಕಾಚಾರ ಹಾಕಿದಂತೆ. ಕಾಲಕಾಲಕ್ಕೆ ಈ ರೀತಿಯ ಮಾಪನವನ್ನು ಬಳಸಿದರೆ, ಅದು ವೃದ್ಧಾಪ್ಯದ ಅಳತೆಗೋಲಿನಂತೆ ಕೆಲಸ ಮಾಡಬಲ್ಲದು. ಇದು ಸಾಧ್ಯವೇ?
ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು! ಶರೀರವಾಗಲೀ, ಯಂತ್ರವಾಗಲಿ ಬಳಸುತ್ತಾ ಹೋದಂತೆ ಅಲ್ಪಸ್ವಲ್ಪ ಜಖಂ ಆಗುತ್ತಲೇ ಇರುತ್ತದೆ. ಶರೀರದ ವ್ಯವಸ್ಥೆ ಈ ಜಖಂಗಳನ್ನು ಅಲ್ಲಲ್ಲೇ ರಿಪೇರಿ ಮಾಡುತ್ತಾ ಹೋಗುತ್ತದೆ. ಆದರೆ, ಈ ರಿಪೇರಿ ಮಾಡುವ ಸಾಮರ್ಥ್ಯ ವಯಸ್ಸಾಗುತ್ತಾ ಕುಂದುತ್ತದೆ. ಜೀವನದ ಒಂದು ಹಂತದಲ್ಲಿ ಹೀಗೆ ಜಖಂಗೊಂಡಿರುವ ಕೋಶಗಳ ಸಂಖ್ಯೆ ಒಂದು ಹಂತವನ್ನು ಮೀರುತ್ತದೆ. ಅಲ್ಲಿಂದ ಮುಂದೆ ಶರೀರದ ಅಂಗಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರೊಂದಿಗೆ ಮರಣದ ಸಾಧ್ಯತೆಯೂ ಏರುತ್ತದೆ. ಈ ಸಮೀಕರಣವನ್ನು ಗಣಿತೀಯವಾಗಿ ವಿವರಿಸುವ ಪ್ರಯತ್ನಗಳು 19ನೆಯ ಶತಮಾನದ ಆರಂಭದಿಂದಲೇ ನಡೆದಿವೆ. 1825ರಲ್ಲಿ ಬ್ರಿಟನ್ನಿನ ಬೆಂಜಮಿನ್ ಗೊಂಪರ್ಟ್ಜ್ ಎಂಬಾತ ಮರಣದ ಸಾಧ್ಯತೆಗಳ ಬಗ್ಗೆ ಒಂದು ಸಮೀಕರಣ ನೀಡಿ, ನಕ್ಷೆಗಳನ್ನು ತಯಾರಿಸಿದರು. 30ರಿಂದ 80 ವರ್ಷಗಳ ವಯಸ್ಸಿನ ಜನರಲ್ಲಿ ಇದು ಮರಣದ ಅಂದಾಜನ್ನು ಸಾಕಷ್ಟು ನಿಖರವಾಗಿ ನೀಡುತ್ತಿತ್ತು. ಇದರ ಪ್ರಯೋಜನ ಪಡೆದದ್ದು ಜೀವವಿಮೆಯ ಸಂಸ್ಥೆಗಳು! ಯಾವ ವಯಸ್ಸಿನಲ್ಲಿ ಜೀವವಿಮೆ ಮಾಡಿಸಿದರೆ ಎಷ್ಟು ಪ್ರೀಮಿಯಂ ಹಣ ಪಾವತಿಸಬೇಕೆನ್ನುವ ಲೆಕ್ಕಾಚಾರಕ್ಕೆ ಈ ನಕ್ಷೆ ಆಧಾರವಾಯಿತು. ಈ ನಕ್ಷೆಯನ್ನು ಕಾಲಕಾಲಕ್ಕೆ ಮಾರ್ಪಾಡು ಮಾಡುತ್ತಾ ಇಂದಿಗೂ ಬಳಸಬಹುದೆಂದು ಗಣಿತಜ್ಞರ ಅಭಿಮತ. ಹುಟ್ಟಿದ ಮೊದಲ ವರ್ಷವನ್ನು ಹೊರತುಪಡಿಸಿದರೆ, ಸುಮಾರು ಮೂವತ್ತು ವರ್ಷ ವಯಸ್ಸಿನ ನಂತರ ಪ್ರತಿ 8 ವರ್ಷಗಳಿಗೆ ಸಾವಿನ ಸಾಧ್ಯತೆಗಳು ದುಪ್ಪಟ್ಟಾಗುತ್ತವೆ ಎನ್ನುವ ಲೆಕ್ಕಾಚಾರವಿದೆ. ಇದರ ಮೇಲೆ ತಂಬಾಕು ಬಳಕೆ, ಮದ್ಯಪಾನದ ಚಟ, ಅಪಘಾತಗಳಿಗೆ ಪೂರಕವಾಗಬಲ್ಲ ವೃತ್ತಿ, ಬೊಜ್ಜು ಮೊದಲಾದುವು ಸಾವಿನ ಸಾಧ್ಯತೆಗಳನ್ನು ಮತ್ತಷ್ಟು ಹಿಗ್ಗಿಸುತ್ತವೆ. ಈ ಕಾರಣಕ್ಕಾಗಿಯೇ ವಿಮೆ ಮಾಡಿಸುವ ಸಂಸ್ಥೆಗೆ ಇವೆಲ್ಲವನ್ನೂ ತಿಳಿಸುವುದು ಕಡ್ಡಾಯ.
ಇದು ಗಣಿತದ ಮಾತಾಯಿತು. ಇದನ್ನು ಶರೀರದ ಕೆಲಸ-ಕಾರ್ಯಗಳ ಜೊತೆಗೆ ಹೋಲಿಕೆ ಮಾಡಿದರೆ ಮತ್ತಷ್ಟು ನಿಖರವಾದ ಮಾಹಿತಿ ದಕ್ಕಲು ಸಾಧ್ಯವೇ? ರಕ್ತಕೋಶಗಳ ಸಂಖ್ಯೆ ಮತ್ತು ಮಿದುಳಿನ ಸಾಮರ್ಥ್ಯಗಳನ್ನು ಅಳೆಯುವ ಸರಳ ಪರೀಕ್ಷೆಗಳನ್ನು ಮಾಡಿ, ಅದನ್ನು ಸುಮಾರು ಐದೂವರೆ ಲಕ್ಷ ಜನರಲ್ಲಿ ಅನ್ವಯಗೊಳಿಸಿ, ಆಯುಸ್ಸಿನ ಪ್ರಮಾಣವನ್ನು ಸೂಚಿಸಬಲ್ಲ ನಕ್ಷೆಗಳನ್ನು ಸಂಶೋಧಕರು ತಯಾರಿಸಿದ್ದಾರೆ. ಈ ಬೃಹತ್ ಪ್ರಮಾಣದ ಅಧ್ಯಯನವನ್ನು ಬಳಸಿಕೊಂಡು ಆಯಾ ವ್ಯಕ್ತಿಯ ಅನಾರೋಗ್ಯದ ಆಧಾರದ ಮೇಲೆ ಅವರ ಜೀವಿತಾವಧಿ ಎಷ್ಟೆಂದು ಅಂದಾಜಿಸಬಹುದು; ತೀವ್ರ ಮಟ್ಟದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರ ಒಟ್ಟು ಆಯಸ್ಸು ಎಷ್ಟಿರಬಹುದೆಂದೂ ಲೆಕ್ಕ ಹಾಕಬಹುದು. ಇದರ ಪ್ರಕಾರ ನಮ್ಮ ದೇಹದ ಜಖಂ-ರಿಪೇರಿ ವ್ಯವಸ್ಥೆ ಕಾಯಿಲೆಯಂತಹ ಯಾವುದೇ ಬಾಹ್ಯ ಪ್ರಚೋದನೆ ಇಲ್ಲದಿದ್ದರೂ ಒಂದು ಹಂತಕ್ಕೆ ಸ್ಥಗಿತವಾಗುತ್ತದೆ. ಹೀಗೆ ವ್ಯವಸ್ಥೆ ಕೊನೆಗೊಳ್ಳುವ ಬಿಂದುವನ್ನು ನಮ್ಮ ಆಯುಸ್ಸಿನ ಪರಮಾವಧಿ ಎಂದು ಭಾವಿಸಬಹುದು. ಈ ಲೆಕ್ಕಾಚಾರದ ಪ್ರಕಾರ ಸದ್ಯಕ್ಕೆ ಮಾನವರ ಆಯಸ್ಸಿನ ಗರಿಷ್ಠ ಸಾಧ್ಯತೆ 138 ರಿಂದ 150 ವರ್ಷಗಳು. ಆದರೆ, ಪ್ರಸ್ತುತ ಶತಾಯುಷಿಗಳ ಸಂಖ್ಯೆ ಹೆಚ್ಚಿಲ್ಲದಿರುವುದರಿಂದ, ಒಂದು ಹಂತದ ನಂತರ ಅವರಿಗೆ ಯಾವ ಕಾಯಿಲೆಗಳು ಬರಬಹುದು ಎಂದು ಅರಿಯುವುದು ಕಷ್ಟ. ಹೀಗಾಗಿ, ತೀವ್ರ ಆರೋಗ್ಯ ಸಮಸ್ಯೆಯ ಅನುಪಸ್ಥಿತಿ ಎಷ್ಟು ಕಾಲ ಮುಂದುವರೆಯಬಲ್ಲದು ಎಂದು ತಿಳಿಯಲಾಗದು. ಅಂತೆಯೇ, ಯಾರಾದರೂ ಈ 150 ವರ್ಷಗಳ ಮಿತಿಯನ್ನು ಮುಟ್ಟಿಯಾರೆ ಎಂದು ಅಂದಾಜಿಸುವುದೂ ಕಠಿಣವೇ.
ಇದು ಇಂದಿನ ಮಾತಾಯಿತು. ಈ ದಿನಕ್ಕೆ ನಾವೇನಿದ್ದರೂ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು; ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಿ ಅವನ್ನು ನಿಖರವಾಗಿ ನಿರ್ನಾಮ ಮಾಡುವ ನವೀನ ತಂತ್ರಗಳನ್ನು ಬಳಸಬಹುದು; ಅಪಘಾತಗಳ ವಿರುದ್ಧ ಸಾಧ್ಯವಾದಷ್ಟೂ ಎಚ್ಚರ ವಹಿಸಬಹುದು; ತಂಬಾಕು, ಮದ್ಯಗಳಿಂದ ದೂರ ಉಳಿಯಬಹುದು; ಸಾತ್ವಿಕ ಆಹಾರ ಸೇವನೆ ಮಾಡಬಹುದು; ಆಯಾ ವಯಸ್ಸು ಅನುಮತಿಸುವ ಕ್ಲುಪ್ತ ವ್ಯಾಯಾಮ ಮಾಡಬಹುದು. ಇದ್ಯಾವುದೂ ದೇಹದ ಜಖಂ-ರಿಪೇರಿ ವ್ಯವಸ್ಥೆಯ ಮಿತಿಯನ್ನು ಹೆಚ್ಚಿಸಲಾರವು; ಇದನ್ನು ಉತ್ತೇಜಿಸಬಲ್ಲ ಪಕ್ಕಾ ವಿಧಾನಗಳೂ ಸದ್ಯಕ್ಕೆ ನಮ್ಮಲ್ಲಿಲ್ಲ. ಆದ್ದರಿಂದ, ನಮ್ಮ ಮಿತಿಯನ್ನೇ ನಿಸರ್ಗದ ಮಿತಿ ಎಂದು ಭಾವಿಸಬೇಕಾಗುತ್ತದೆ. ಆದರೆ, ನಾಳೆ?
1900ರಲ್ಲಿ ಇದ್ದ ವೈದ್ಯಕೀಯ ತಂತ್ರಜ್ಞಾನ ಬೆಳೆದು ದುಪ್ಪಟ್ಟಾಗಲು 50 ವರ್ಷಗಳು ಹಿಡಿದಿದ್ದವು. ಅಲ್ಲಿಂದ ಮುಂದೆ ವೇಗವನ್ನು ಪಡೆದುಕೊಂಡ ಈ ಕ್ಷೇತ್ರ ಈಗ ದಾಪುಗಾಲಿಡುತ್ತಿದೆ. ಪ್ರಸ್ತುತ ವೈದ್ಯಕೀಯ ವಿಜ್ಞಾನ ಪ್ರತಿ ವರ್ಷ ಶೇಕಡಾ 14ರಿಂದ 17ರಷ್ಟು ವೇಗವಾಗಿ ಬೆಳೆಯುತ್ತಿದೆ ಎಂದು ಸಂಶೋಧಕರ ಮತ್ತು ಅರ್ಥಶಾಸ್ತ್ರಜ್ಞರ ಅಭಿಮತ. ಈ ಲೆಕ್ಕದಲ್ಲಿ ಇಂದಿನ ನವೀನ ವೈದ್ಯಕೀಯ ವಿಧಾನ 6-7 ವರ್ಷಗಳ ನಂತರ ಹಳತಾಗುತ್ತದೆ ಮತ್ತು ಹೊಸ ವಿಧಾನವೊಂದು ಅದರ ಸ್ಥಾನ ಗಿಟ್ಟಿಸುತ್ತದೆ. ಅಂದರೆ, ಇಂದು ನಮಗಿರುವ ಸಾಧ್ಯತೆಗಳಿಗೂ, ಇನ್ನು ಐವತ್ತು ವರ್ಷಗಳ ನಂತರ ಜನಿಸುವ ಮಗುವೊಂದರ ಸಾಧ್ಯತೆಗಳಿಗೂ ನಾವು ಊಹಿಸಲಾರದಷ್ಟು ಅಂತರವಿದೆ. 1900 ನೆಯ ಇಸವಿಯಲ್ಲಿ, ಶತಮಾನಗಳಿಂದ ಮನುಷ್ಯರ ಆಯಸ್ಸನ್ನು ಕುಂಠಿತಗೊಳಿಸುತ್ತಿದ್ದ ಸಾಂಕ್ರಾಮಿಕ ಕಾಯಿಲೆಗಳನ್ನು ಯಶಸ್ವಿಯಾಗಿ ಗೆಲ್ಲಬಹುದೆಂಬ ಅಂದಾಜೂ ಇರಲಿಲ್ಲ. 1950 ರ ವೇಳೆಗೆ ಈ ಕುರಿತಾದ ದಿಟ್ಟ ಹೆಜ್ಜೆಗಳಿಂದ ಇದರ ಸಾಧ್ಯತೆಗಳು ಸ್ಪಷ್ಟವಾದವು. 2000ದ ವೇಳೆಗೆ ಸಾಂಕ್ರಾಮಿಕ ಕಾಯಿಲೆಗಳು ಪ್ರಾಣ ತೆಗೆಯುತ್ತವೆ ಎಂಬುದು ಮುಖ್ಯವಾಗಿ ಬಡದೇಶಗಳಿಗೆ ಸೀಮಿತವಾಗಿದ್ದವು. 1900ರಲ್ಲಿ ಅನೂಹ್ಯವಾಗಿದ್ದ ಸಂಗತಿಯೊಂದು 2000 ದ ವೇಳೆಗೆ ಅತಿ ದೊಡ್ಡ ಸಮಸ್ಯೆಯಾಗಿ ಉಳಿದಿರಲಿಲ್ಲ. ಅಂತೆಯೇ, 2000ದ ವೇಳೆಗೆ ಅತಿ ದೊಡ್ಡ ಆರೋಗ್ಯ ಸಮಸ್ಯೆ ಎನಿಸಿದ ಸಂಗತಿ 2050ರ ವೇಳೆಗೆ ನಗಣ್ಯವಾಗಬಹುದು.
ಸರಿ; 150 ವರ್ಷಗಳ ಕಾಲ ಬದುಕುವ ಕನಸು ನನಸಾಯಿತು ಎಂದೇ ಭಾವಿಸೋಣ. ಆದರೆ ಗುಣಮಟ್ಟ? ಕಾಯಿಲೆಗಳಿಂದ ನರಳುತ್ತಾ, ಮತ್ತೊಬ್ಬರ ಹಂಗಿನಲ್ಲಿ ಬದುಕುವ ಇಚ್ಛೆ ಯಾರಿಗೂ ಇರುವುದಿಲ್ಲ. ಜೀವನದ ಉದ್ದವನ್ನು ಹೆಚ್ಚಿಸಿಕೊಳ್ಳುವುದಷ್ಟೆ ಅಲ್ಲ, ಅದರ ವಿಸ್ತಾರವನ್ನೂ ಹೆಚ್ಚಿಸಿಕೊಂಡು, ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಭರ್ತಿ ಜೀವನವನ್ನು ತುಂಬಿಸಿಕೊಳ್ಳುವ ಕನಸು ಪ್ರತಿಯೊಬ್ಬರದ್ದೂ ಆಗಿರುತ್ತದೆ. ಇದು ಸಾಧ್ಯವಾಗುವುದು ಹೇಗೆ? ವಿಜ್ಞಾನ ನಮ್ಮ ಜೀವನದ ಉದ್ದವನ್ನು ಹೆಚ್ಚಿಸಿದರೆ ಸಾಲದು; ನಮ್ಮ ಅನಾರೋಗ್ಯದ ಮಿತಿಗಳನ್ನೂ ಮೀರಬೇಕು. ಇದಕ್ಕೆ ನಮ್ಮ ಜಖಂ-ರಿಪೇರಿ ವ್ಯವಸ್ಥೆ ಸುಧಾರಿಸಬೇಕು. ಪ್ರಸ್ತುತ ವಿಜ್ಞಾನಿಗಳ ಗಮನ ಇರುವುದು ಅಲ್ಲೇ. ವೃದ್ಧಾಪ್ಯದ ವೈಜ್ಞಾನಿಕ ಸಂಶೋಧನೆಗಳು ಈಗ ಖಚಿತ ರೂಪ ಪಡೆಯುತ್ತಿವೆ. ನಮ್ಮ ಜಖಂ-ರಿಪೇರಿಯ ಒಳಸುಳಿಗಳ ಅಧ್ಯಯನ ನಡೆಯುತ್ತಿದೆ. ಮುಕ್ತ-ಆಕ್ಸಿಜನ್ ಸಂಯುಕ್ತಗಳಿಂದ ಹಿಡಿದು ನಮ್ಮ ವರ್ಣತಂತುವಿನ ತುದಿಯ ಟೆಲೊಮೆರ್ ಎನ್ನುವ ಭಾಗದವರೆಗೆ, ಜೀವಕೋಶದ ರಾಸಾಯನಿಕಗಳಿಂದ ಮೊದಲಾಗಿ ಮೈಟೊಕಾಂಡ್ರಿಯಾ ರಚನೆಯವರೆಗೆ ಇದರ ಹುಡುಕಾಟ ನಡೆಯುತ್ತಿದೆ. ಅನಾದಿ ಕಾಲದ “ದೀರ್ಘಾಯುಷ್ಮಾನ್ ಭವ” ಎನ್ನುವ ಹಿರಿಯರ ಹಾರೈಕೆ ಇಂದು “ಸುದೀರ್ಘ ನಿರಾಮಯ ಸಂತೃಪ್ತ ಆಯುಷ್ಮಾನ್ ಭವ” ಎಂದು ಬದಲಾಗುವತ್ತ ಮುನ್ನಡೆಯುತ್ತಿದೆ. ಮನುಕುಲದ ಭವಿಷ್ಯ ಮತ್ತಷ್ಟು ರೋಚಕವಾಗಲಿದೆ!