Site icon Vistara News

ವೈದ್ಯ ದರ್ಪಣ ಅಂಕಣ: ಚಿರಂಜೀವ ಚಿರಂಜೀವ ಸುಖೀ ಭವ ಸುಖೀ ಭವ…

eternal youth

ನಮ್ಮ ಪುರಾಣಗಳಲ್ಲಿ ಸಪ್ತ ಚಿರಂಜೀವಿಗಳ ಪ್ರಸ್ತಾಪವಿದೆ. “ಅಶ್ವತ್ಥಾಮ ಬಲಿಃ ವ್ಯಾಸೋ…” ಎನ್ನುವ ಶ್ಲೋಕ ಪಠಣ ಮಾಡಿದರೆ ಆಯಸ್ಸು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಚಿರಂಜೀವ ಎಂದರೆ ಬಹುಕಾಲ ಜೀವಿಸುವವರು ಎಂದಷ್ಟೇ ಲಿಟರಲ್ ಅರ್ಥವಾದರೂ, ಅದು “ಸದಾ ಕಾಲ ಜೀವಿಸುವವರು” ಎನ್ನುವ ಪ್ರತೀತಿ ಜನಮಾನಸದಲ್ಲಿದೆ. ಪ್ರತಿಯೊಂದು ನಾಗರಿಕತೆಯ ರಮ್ಯ ಕಥಾನಕಗಳಲ್ಲೂ ಚಿರತಾರುಣ್ಯವನ್ನು ನೀಡಬಲ್ಲ ಸಾಧನಗಳ ಮನಮೋಹಕ ಮಿಥಕಗಳಿವೆ. ಹತ್ತಾರು ಬೆಟ್ಟಗಳನ್ನು, ಕಾಡುಗಳನ್ನು ದಾಟಿದ ನಂತರ ಸಿಗುವ ವಿಶಿಷ್ಟ ನೀರಿನ ಊಟೆ; ಕಡಿದಾದ ಪರ್ವತದ ಮೇಲೆ ತಪಸ್ಸು ಮಾಡುತ್ತಿರುವ ಋಷಿಯ ಪ್ರಸಾದ; ಯಾವುದೋ ಅಪರಿಚಿತ ದೇಶದ ಪ್ರವಾಸಿಯೊಬ್ಬ ತಂದುಕೊಟ್ಟ ಮಾಯಾವಿ ಹಣ್ಣು – ಹೀಗೆ ಹಲವಾರು ಕಥಾನಕಗಳು ಚಿರತಾರುಣ್ಯದ ನಮ್ಮ ಆಸೆಯನ್ನು ಜೀವಂತವಾಗಿಟ್ಟಿವೆ. “ಪ್ರತಿಯೊಂದು ಜೀವಿಯೂ ಕಾಲಕ್ರಮೇಣ ಸವೆದು ನಶಿಸುವ ಯಂತ್ರ” ಎಂದೇ ಹೇಳುವ ವಿಜ್ಞಾನ ತನ್ನ ನಿಲುವನ್ನು ಬದಲಿಸಿ ಚಿರಂಜೀವತ್ವದ ಪರವಾಗಿ ನಿಲ್ಲುತ್ತದೆಯೇ? ಚಿರತಾರುಣ್ಯದ (eternal youth) ನಮ್ಮ ಕಾಲಾಂತರದ ಬಯಕೆ ನಿಜವಾದೀತೆ? ವರ್ತಮಾನ ಮತ್ತು ಸದ್ಯೋಭವಿಷ್ಯದಲ್ಲಿ ಇದರ ಪ್ರಾಯೋಗಿಕತೆಗಳ ಬಗ್ಗೆ ಹೀಗೊಂದು ನೋಟ:

ವಿಜ್ಞಾನದ ನೆರವಿನಿಂದ ನೂರೈವತ್ತು ವರ್ಷಗಳವರೆಗೆ ಬದುಕಬಲ್ಲ ಸಾಧ್ಯತೆಗಳನ್ನು ಈಚೆಗೆ ಗಮನಿಸಿದ್ದೇವೆ. (ನೋಡಿ: ಇದೇ ಅಂಕಣದ ಇನ್ನೊಂದು ಲೇಖನ ). ಇದು ನಮ್ಮ ಆಯಸ್ಸನ್ನು ಸಹಜವಾಗಿ ಮುಗಿಸಬಲ್ಲ ಕಾರಣಗಳಿಂದ ತಪ್ಪಿಸಿಕೊಂಡು, ವಿಧಿ ನೀಡಿದ ಪೂರ್ಣಾಯಸ್ಸನ್ನು ಪಡೆಯುವ ಮಾತಾಯಿತು. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ದೇಹದೊಳಗೆ ಆಯಸ್ಸನ್ನು ಕಳೆಯುವ ಪ್ರಕ್ರಿಯೆಗಳನ್ನು ನಿವಾರಿಸಿಕೊಳ್ಳುತ್ತಾ ಜೀವನಾವಧಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವೇ? ಸಾಂಕ್ರಾಮಿಕ ಕಾಯಿಲೆಯೊಂದರ ಉದಾಹರಣೆ ನೋಡೋಣ. ಸಾಂಕ್ರಾಮಿಕ ಕಾಯಿಲೆಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸದ್ಯಕ್ಕೆ ಎರಡು ಪ್ರಮುಖ ದಾರಿಗಳಿವೆ. ಒಂದು: ಕಾಯಿಲೆ ಬಂದ ನಂತರ ಅದಕ್ಕೆ ಸೂಕ್ತವಾದ ಔಷಧಗಳನ್ನು ತೆಗೆದುಕೊಂಡು ಕಾಯಿಲೆಯನ್ನು ನಿವಾರಿಸಿಕೊಳ್ಳುವುದು. ಎರಡು: ಕಾಯಿಲೆ ಬಾರದಂತೆ ಲಸಿಕೆಗಳನ್ನು ತೆಗೆದುಕೊಳ್ಳುವುದು. ಇವೆರಡೂ ನೂರಕ್ಕೆ ನೂರಷ್ಟು ಪರಿಣಾಮಕಾರಿ ಅಲ್ಲದಿದ್ದರೂ ಮಾನವ ಇತಿಹಾಸದ ದಿಕ್ಕನ್ನು ಬದಲಿಸಿದ ಆವಿಷ್ಕಾರಗಳು. ಮೂರನೆಯ ದಾರಿ ಉಂಟೇ? ಒಂದು ವೇಳೆ ಸಾಂಕ್ರಾಮಿಕ ಕಾಯಿಲೆಗೆ ಪೂರಕವಾಗಿರುವ ನಮ್ಮ ಜೀನ್ ರಚನೆಯನ್ನು ಬದಲಾಯಿಸಿದರೆ? ಅಥವಾ, ಸಾಂಕ್ರಾಮಿಕ ಕಾಯಿಲೆ ಉಂಟುಮಾಡುವ ಪರೋಪಜೀವಿ ದೇಹದ ಒಳಗೆ ಪ್ರವೇಶಿಸಿದರೂ ಅದು ಜೀವಕೋಶದ ಒಳಗೆ ನುಗ್ಗಲು ಸಾಧ್ಯವಿಲ್ಲದಂತಹ ಸ್ಥಿತಿಯನ್ನು ನಿರ್ಮಿಸಿದರೆ? ವೈಜ್ಞಾನಿಕ ಪ್ರಗತಿಯ ನಾಗಾಲೋಟವನ್ನು ಗಮನಿಸಿದವರಿಗೆ ಇದು ಅಸಾಧ್ಯದ ಮಾತು ಎಂದೇನೂ ಅನಿಸುವುದಿಲ್ಲ. ಇದೇ ನಿಟ್ಟಿನಲ್ಲಿ ಮುಂದುವರೆದು, ಸಾವಿಗೆ ಕಾರಣವಾಗುವ ಅಂಶಗಳನ್ನೂ ನಿಯಂತ್ರಿಸಬಹುದೇ?

ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿದ ಇಲಾನ್ ಮಸ್ಕ್ ಎಂಬ ಸಾಹಸಿಯ ಕತೆ ಕೇಳಿರುತ್ತೇವೆ. ಅಂತರ್ಜಾಲ ಆರಂಭವಾದ ದಿನಗಳಲ್ಲಿ ಅದನ್ನು ಕರೆನ್ಸಿ ನೋಟು-ರಹಿತ ಹಣಸಂದಾಯದ ಮಾರ್ಗವಾಗಿ ಬಳಸಬಹುದೆಂಬ ಆಲೋಚನೆಯ “ಪೇ-ಪಾಲ್” ಎನ್ನುವ ಸಂಸ್ಥೆಯೂ ಅವರ ನಿರ್ವಹಣೆಯಲ್ಲೇ ಇತ್ತು. ಮೂಲತಃ ಪೇ-ಪಾಲ್ ಸಂಸ್ಥೆಯನ್ನು ಆರಂಭಿಸಿ, ಅದರ ನಿರ್ವಹಣೆಯಲ್ಲಿ ಮಸ್ಕ್ ಅವರ ಜೊತೆಗಾರರಾಗಿದ್ದವರು ಪೀಟರ್ ಥೇಲ್ ಎಂಬ ಮತ್ತೊಬ್ಬ ಸಾಹಸಿ. ಜಗತ್ತಿನ ಮುನ್ನೂರು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಥೇಲ್ ಅವರು 2006 ರ ಸೆಪ್ಟೆಂಬರ್ ತಿಂಗಳಿನಲ್ಲಿ ಚಿರತಾರುಣ್ಯದ ಸಂಶೋಧನೆಗೆ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡುವ ಸಂಕಲ್ಪ ಮಾಡಿದರು. ಜೀವವಿಜ್ಞಾನದ ಸಂಶೋಧನೆಗಳಿಂದ ಭವಿಷ್ಯದಲ್ಲಿ ಎಲ್ಲರಿಗೂ ಸಾಕಷ್ಟು ಆಯಸ್ಸು ಮತ್ತು ಆರೋಗ್ಯ ದೊರೆಯುವ ಕನಸು ನನಸಾಗುತ್ತದೆ ಎಂದು ಅವರ ಗಟ್ಟಿ ನಂಬಿಕೆ. ಇಳಿವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯಗಳು ಕಾಡಬಾರದೆಂದರೆ ದೇಹವು ತಾರುಣ್ಯದ ವೇಳೆ ಹೇಗಿತ್ತೋ, ಹಾಗೆಯೇ ಇರಬೇಕು. ಕಾಯಿಲೆಗಳಿಂದ ಜರ್ಜರಿತವಾದ ಆಯಸ್ಸು ಯಾರಿಗೆ ತಾನೇ ಸಹ್ಯ? ನಮಗೆ ಬೇಕಾದ್ದು ಜಿರಂಜೀವತ್ವ ಮಾತ್ರವಲ್ಲ; ಚಿರತಾರುಣ್ಯ ಕೂಡ. ಥೇಲ್ ಅವರ ಕನಸೂ ಇಂತಹದ್ದೇ. ಉಳಿದವರು ಈ ಕನಸು ಕಂಡರೆ ಅದು ಕನಸಾಗಿಯೇ ಉಳಿಯಬಹುದು. ಆದರೆ ನವೋದ್ಯಮಗಳ ಹಣಹೂಡಿಕೆಯಲ್ಲಿ ಅಪಾರ ಸಾಫಲ್ಯ ಕಂಡ ಥೇಲ್ ಅವರಂತಹ ವಿನಿಯೋಜಕರು ಸಾಕಷ್ಟು ಅಧ್ಯಯನವಿಲ್ಲದೆ ಯಾವುದರಲ್ಲೂ ಬೃಹತ್ ಮೊತ್ತವನ್ನು ಹೂಡುವುದಿಲ್ಲ. ಹೀಗಾಗಿ, ಚಿರತಾರುಣ್ಯದ ಸಂಶೋಧನೆಯಲ್ಲಿ ಥೇಲ್ ಆಸಕ್ತಿ ವಹಿಸಿದ್ದಾರೆ ಎಂದರೆ ಅದನ್ನು ಗಂಭೀರವಾಗಿಯೇ ಪರಿಗಣಿಸಬೇಕು.

eternal youth

ಏಕಕೋಶ ಜೀವಿಗಳಾದ ಬ್ಯಾಕ್ಟೀರಿಯಾಗಳಿಂದ ಹಿಡಿದು ಬೃಹತ್ ಗಾತ್ರದ ತಿಮಿಂಗಲಗಳವರೆಗೆ ವ್ಯಾಪಿಸಿರುವ ಅಪಾರ ಜೀವವೈವಿಧ್ಯಗಳಲ್ಲಿ ಈಗಾಗಲೇ ಸಹಜವಾಗಿ, ನಿಸರ್ಗವೇ ಪ್ರಸಾದಿಸಿರುವಂತೆ ಚಿರತಾರುಣ್ಯ ಅನುಭವಿಸುತ್ತಿರುವ ಪ್ರಭೇದಗಳು ಇವೆಯೇ? ಅಂದರೆ, ವೃದ್ಧಾಪ್ಯವೇ ಇಲ್ಲದ ಜೀವಿಗಳು ಸೃಷ್ಟಿಯ ಅಸ್ತಿತ್ವದಲ್ಲಿ ಉಂಟೇ? ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ “ಹೌದು”! ಜೀವವಿಕಾಸದ ಹಂತಗಳನ್ನು ಗಮನಿಸಿದಾಗ ಕೆಲವೊಂದು ಅಚ್ಚರಿಯ ಮಾಹಿತಿಗಳು ಗೋಚರಿಸುತ್ತವೆ. ಏಕಕೋಶ ಬ್ಯಾಕ್ಟೀರಿಯಾಗಳು ತಮ್ಮ ಸಂಖ್ಯೆಯಲ್ಲಿ ವೃದ್ಧಿಯಾಗುವುದು ವಿದಳನದಿಂದ. ಅಂದರೆ, ತನ್ನ ನಿಶ್ಚಿತ ಜೀವಿತಾವಧಿಯ ನಂತರ ಒಂದು ಬ್ಯಾಕ್ಟೀರಿಯಾ ಎರಡಾಗಿ ಒಡೆಯುತ್ತದೆ. ಹೀಗೆ ಒಂದು ಮುದಿ ಬ್ಯಾಕ್ಟೀರಿಯಾ ವಿದಳನಗೊಂಡು ಎರಡು ಮುದಿ ಬ್ಯಾಕ್ಟೀರಿಯಾಗಳು ಆಗುವುದಿಲ್ಲ; ಬದಲಿಗೆ, ಎರಡು ಯುವ ಬ್ಯಾಕ್ಟೀರಿಯಾಗಳು ಹುಟ್ಟುತ್ತವೆ. ವಿಕಾಸದ ಹಾದಿಯಲ್ಲಿ ಹೀಗೆಯೇ ಮುಂದುವರೆದರೆ ಆರಂಭಿಕ ಬಹುಕೋಶ ಜೀವಿಗಳಲ್ಲಿಯೂ ವೃದ್ಧಾಪ್ಯದ ಛಾಯೆಯಿಲ್ಲದ ಜೀವಿಗಳು ಕಾಣುತ್ತವೆ. ಸ್ಪಾಂಜಿನ ತುಣುಕಿನಂತೆ ಕಾಣುವ ಸಮುದ್ರಸೌತೆ, ನಾವು ಶಾಲೆಯ ಪಠ್ಯಗಳಲ್ಲಿ ಓದಿದ್ದ ಹೈಡ್ರಾ, ಕೆಲಬಗೆಯ ಹವಳ ಉತ್ಪಾದಿಸುವ ಜೀವಿಗಳು, ಮಿದುಳೇ ಇಲ್ಲದೆ ಬಹುಕಾಲ ಬದುಕುವ ಖ್ಯಾತಿಯ ಜೆಲ್ಲಿಫಿಶ್ ಈ ಗುಂಪಿಗೆ ಸೇರುವ ಚಿರತಾರುಣ್ಯದ ಫಲಾನುಭವಿಗಳು.

ಮಾನವ ದೇಹವೂ ಇಂತಹ ಕೋಶ-ವಿಭಜನೆಯ ಪ್ರಕ್ರಿಯೆಯಿಂದಲೇ ಅಭಿವೃದ್ಧಿಯಾಗುತ್ತದೆ. ಭ್ರೂಣದ ಹಂತದಲ್ಲಿರುವ ಬಹುತೇಕ ಕೋಶಗಳು ಒಂದು ನಿರ್ದಿಷ್ಟ ಘಟ್ಟದ ನಂತರ ಹೊಸದಾಗಿ ಉತ್ಪತ್ತಿಯಾಗುವುದಿಲ್ಲ; ಬದಲಿಗೆ, ಇರುವ ಕೋಶಗಳೇ ವಿಭಜನೆಗೊಳ್ಳುತ್ತಾ ಸಂಖ್ಯೆಯಲ್ಲಿ ವೃದ್ಧಿಸುತ್ತವೆ. ಆದರೆ ಈ ವಿಭಜನೆ ನಿರಂತರವಾಗಿ ಮುಂದುವರೆಯಲಾರದು. ಪ್ರತಿ ಬಾರಿ ಒಂದು ಕೋಶ ವಿಭಜನೆಗೆ ಒಳಗಾದಾಗ ಅದರ ವರ್ಣತಂತುಗಳ ತುದಿಯ ಭಾಗ ಸ್ವಲ್ಪ ಗಿಡ್ಡದಾಗುತ್ತದೆ. ಸುಮಾರು 40-60 ವಿಭಜನೆಗಳ ನಂತರ ಕೋಶಗಳು ತಮ್ಮ ಸಾಮರ್ಥ್ಯವನ್ನು ಬಹುತೇಕ ಕಳೆದುಕೊಳ್ಳುತ್ತವೆ. ಆನಂತರ ಅದರ ವಿಭಜನೆಯ ತಾಕತ್ತು ನಿಂತುಹೋಗುತ್ತದೆ. ಅಂತಹ ಮುದಿಕೋಶಗಳು ದೇಹದ ಕೆಲಸಕ್ಕೆ ಬಾರವು. ಕೋಶವಿಭಜನೆಯ ಈ ಮಿತಿಯನ್ನು ಹೇಫ್ಲಿಕ್ ಮಿತಿ ಎಂದು ಕರೆಯುತ್ತಾರೆ. ಹೇಫ್ಲಿಕ್ ಮಿತಿ ತಲುಪಿದ ಕೋಶಗಳ ವರ್ಣತಂತುಗಳ ತುದಿ ಭಾಗ ತೀರಾ ಸಣ್ಣದಾಗಿರುವುದನ್ನು ಗಮನಿಸಿದ ವಿಜ್ಞಾನಿಗಳು, ಈ ಭಾಗಕ್ಕೂ ವೃದ್ಧಾಪ್ಯಕ್ಕೂ ಇರುವ ಸಂಬಂಧವನ್ನು ಗಟ್ಟಿಯಾಗಿ ಅನುಮಾನಿಸುತ್ತಾರೆ. ಟೀಲೊಮರ್ ಎಂದು ಕರೆಯಲ್ಪಡುವ ಈ ತುದಿ ಭಾಗ ವೃದ್ಧಾಪ್ಯ ಸಂಶೋಧಕರ ನೆಚ್ಚಿನ ವಸ್ತು. ಒಂದು ವೇಳೆ ವರ್ಣತಂತುವಿನ ತುದಿ ಭಾಗ ಗಿಡ್ಡವಾಗದಂತೆ ಕೋಶ ವಿಭಜನೆಯನ್ನು ಸಾಧಿಸಿದರೆ? ಆಗ ವೃದ್ಧಾಪ್ಯಕ್ಕೆ ಇತಿಶ್ರೀ ಹಾಡಬಹುದೇ? ವಿಜ್ಞಾನಿಗಳಿಗೆ ಇದೊಂದು ಚೇತೋಹಾರಿ ಕನಸು.

ಪ್ರಾಥಮಿಕ ಜೀವವರ್ಗಗಳನ್ನು ಹೊರತುಪಡಿಸಿ, ನಾವು ಸಂಪರ್ಕದಲ್ಲಿರುವ ಇತರ ಜೀವಿಗಳನ್ನು ಪರಿಗಣಿಸಿದರೆ ಎಲ್ಲವೂ ವೃದ್ಧಾಪ್ಯ ಅನುಭವಿಸುವ ಗುಂಪಿಗೇ ಸೇರಿದ್ದವು. ಅಂದರೆ, ವೃದ್ಧಾಪ್ಯವೆಂಬುದು ನಿಸರ್ಗದ ಸಹಜ ನಿಯಮವಲ್ಲ. ಯಾವುದೋ ಕಾರ್ಯಸಾಧನೆಗೆ ಜೀವವಿಕಾಸದ ಒಂದು ಹಂತದಲ್ಲಿ ಖುದ್ದು ನಿಸರ್ಗವೇ ಜೀವಿಗಳ ದೇಹಕ್ಕೆ ಸೇರಿಸಿದ ಪ್ರಕ್ರಿಯೆ ಎಂದಾಯಿತು. ವೃದ್ಧಾಪ್ಯವನ್ನು ಶರೀರದೊಳಗೆ ಸೇರಿಸಲು ನಿಸರ್ಗ ಜೀವಿಗಳ ದೇಹದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿರಬೇಕು. ಇಂತಹ ಬದಲಾವಣೆಗಳನ್ನು ಅಧ್ಯಯನ ಮಾಡಿ ವೃದ್ಧಾಪ್ಯವನ್ನು ನಿವಾರಿಸಿಕೊಳ್ಳಲು ಸಾಧ್ಯವೇ? ಅಸಲಿಗೆ ನಮ್ಮನ್ನು ಸೃಷ್ಟಿಸಿದ ಹಿಂದೆ ನಿಸರ್ಗಕ್ಕೆ ಏನಾದರೂ ಉದ್ದೇಶವಿದೆಯೇ? ಆ ಉದ್ದೇಶಸಾಧನೆಗೆ ವೃದ್ಧಾಪ್ಯ ಪೂರಕವೇ? ಅದು ಪೂರಕವಾಗಿದ್ದರೆ ನಾವು ವೃದ್ಧಾಪ್ಯವನ್ನು ಮೀರಲಾದೀತೆ? ಪೀಟರ್ ಥೇಲ್ ಅವರಿಂದ ಅನುದಾನ ಪಡೆದಿರುವ ಸಂಶೋಧಕರಿಗೆ ಇವೆಲ್ಲವೂ ಉತ್ತರ ಪಡೆಯಬೇಕಾದ ಕೌತುಕದ ಪ್ರಶ್ನೆಗಳು.

ಪ್ರಯೋಗಾಲಯದ ಪ್ರಾಣಿಗಳಲ್ಲಿ ನಡೆಸಿರುವ ಪರೀಕ್ಷೆಗಳಿಂದ ಆಯಸ್ಸನ್ನು ಹೆಚ್ಚಿಸಲು ಮೂರು ವಿಧಾನಗಳನ್ನು ಪತ್ತೆ ಮಾಡಲಾಗಿದೆ. ಮೊದಲನೆಯದು – ಕೇವಲ ಅಗತ್ಯ ಪ್ರಮಾಣದ ಶಕ್ತಿ ಮತ್ತು ಪೋಷಣೆಗಳನ್ನು ನೀಡುವಷ್ಟು ಆಹಾರವನ್ನು ಮಾತ್ರ ಸೇವಿಸುವುದು. ಇದರಿಂದ ಅನಗತ್ಯ ಕ್ಯಾಲೊರಿಗಳು ದೇಹವನ್ನು ಸೇರುವುದು ತಪ್ಪುತ್ತದೆ; ಈ ಹೆಚ್ಚುವರಿ ಕ್ಯಾಲೊರಿಗಳನ್ನು ನಿರ್ವಹಿಸುವ ಹೊಣೆಗಾರಿಕೆ ಶರೀರಕ್ಕೆ ಇಲ್ಲವಾಗುತ್ತದೆ. ಇದರಿಂದ ಮಹತ್ವದ ರಾಸಾಯನಿಕ ಪ್ರಕ್ರಿಯೆಗಳಿಗೆ ಬೇಕಾಗುವ ಅಧಿಕ ಶಕ್ತಿಯ ಉಳಿತಾಯವಾಗುತ್ತದೆ. ಜೀವಿತಾವಧಿ ಏರುತ್ತದೆ. ಎರಡನೆಯದು – ಔಷಧ ಚಿಕಿತ್ಸೆ. ನಮ್ಮ ದೇಹ ಸಮರ್ಪಕವಾಗಿ ಕೆಲಸ ಮಾಡಲು ವಯಸ್ಸಾದ ಜೀವಕೋಶಗಳ ಸ್ಥಾನದಲ್ಲಿ ಹೊಸದಾಗಿ ವಿದಳನಗೊಂಡ ಜೀವಕೋಶಗಳು ತಯಾರಾಗುತ್ತಲೇ ಇರಬೇಕು. ಮುದಿ ಜೀವಕೋಶಗಳನ್ನು ವ್ಯವಸ್ಥಿತವಾಗಿ ನಾಶ ಮಾಡುವ ವ್ಯವಸ್ಥೆ ನಮ್ಮ ಶರೀರದಲ್ಲಿದೆ. ಈ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಜೀವಕೋಶಗಳ ವಿದಳನಕ್ಕೆ ಅಡ್ಡಿಯಾಗುತ್ತದೆ. ಇಂತಹ ಸಹಜ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಬಲ್ಲ ಔಷಧಗಳಿದ್ದರೆ ಹೇಗೆ? ಈ ಔಷಧಗಳು ಮುದಿ ಜೀವಕೋಶಗಳನ್ನು ಮಾತ್ರ ಆಯ್ದು ಹುಡುಕಿ, ಅವನ್ನು ನಿವಾರಿಸಬಲ್ಲವು. ಈ ಮೂಲಕ ಅವುಗಳ ಸ್ಥಾನದಲ್ಲಿ ಸಮರ್ಥವಾಗಿ ಕೆಲಸ ಮಾಡಬಲ್ಲ ಜೀವಕೋಶಗಳ ನೆರವಿನಿಂದ ಶರೀರ ಚುರುಕಾಗಿಯೇ ಇರುತ್ತದೆ. ಇದರ ಜೊತೆಗೆ ಜೀವಕೋಶಗಳ ಮುದಿತನವನ್ನು ಕಳೆದು ಅವಕ್ಕೆ ನವಚೈತನ್ಯ ನೀಡಬಲ್ಲ ಔಷಧಗಳಿವೆ.

eternal youth

ಮೂರನೆಯದು ಜೀನ್ ಮಟ್ಟದ ಚಿಕಿತ್ಸೆ. ಸದ್ಯಕ್ಕೆ ಇದು ಪ್ರಾಥಮಿಕ ಹಂತದ ಪ್ರಯೋಗದಲ್ಲಿದೆ. ಔಷಧದ ರೀತಿಯಲ್ಲಿ ನಿರ್ದಿಷ್ಟ ಜೀನ್‌ಗಳನ್ನು ಶರೀರಕ್ಕೆ ಸೇರಿಸಿದರೆ, ಅವು ಶರೀರಕ್ಕೆ ಅಗತ್ಯವಾದ, ಆದರೆ ವಯಸ್ಸಾದ ಕೋಶಗಳಲ್ಲಿ ತಯಾರಾಗಲು ಸಾಧ್ಯವಿಲ್ಲದ ಪ್ರೋಟೀನ್‌ಗಳನ್ನು ತಯಾರಿಸಿ, ಕೊರತೆಯನ್ನು ನೀಗಬಲ್ಲವು. ಇದರಿಂದ ಶರೀರಕ್ಕೆ ಹೊಸ ಚೈತನ್ಯ ಮೂಡಿದಂತಾಗುತ್ತದೆ. ಜೀವಕೋಶಗಳ ಒಳಗೆ ವೃದ್ಧಾಪ್ಯದ ಅಥವಾ ಕಾಯಿಲೆಗಳಿಂದ ಹಾಳಾಗಿರುವ ಸಹಜ ಜೀನ್‌ಗಳ ಬದಲಿಗೆ ಅದೇ ರೀತಿಯ ಹೊಸ ಜೀನ್‌ಗಳನ್ನು ನೀಡಬಹುದು. ಇದರಿಂದ ಜೀವಕೋಶಗಳು ಮತ್ತೊಮ್ಮೆ ಚುರುಕಾಗಿ ಕೆಲಸ ಮಾಡಲು ಉಪಕ್ರಮಿಸುತ್ತವೆ. ಈ ರೀತಿಯ ಜೀನ್ ಚಿಕಿತ್ಸೆಯ ನೆರವಿನಿಂದ ಪ್ರಯೋಗಾಲಯದ ಇಲಿಗಳ ಆಯಸ್ಸನ್ನು ಶೇಕಡಾ 50 ಹೆಚ್ಚಿಸಲಾಗಿದೆ. ಅಂದರೆ, ಸುಮಾರು 3 ವರ್ಷಗಳ ಕಾಲ ಬದುಕುವ ಇಂತಹ ಇಲಿಗಳು 4-5 ವರ್ಷಗಳ ಕಾಲ ಬದುಕಿವೆ. ಜೀನ್ ಚಿಕಿತ್ಸೆಯ ಮೂಲಕ ಲಾಡಿಹುಳುವಿನಂತಹ ಚಪ್ಪಟೆ ದೇಹದ ಹುಳುಗಳ ಜೀವಿತಾವಧಿಯನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ.

ಈ ಚಿಕಿತ್ಸೆಯ ಅತಿ ಮುಖ್ಯ ಭಾಗವೆಂದರೆ ಯಾವ ಜೀನ್‌ಗಳನ್ನು ಪ್ರಭಾವಶಾಲಿಯಾಗಿ ಬಳಸಬಹುದೆಂದು ಪತ್ತೆ ಮಾಡುವುದು. ಸಣ್ಣ ಗಾತ್ರದ ಜೀವಿಗಳಲ್ಲಿ ಇಂತಹ ಜೀನ್‌ಗಳ ಸಂಖ್ಯೆ ಕಡಿಮೆಯಿರುತ್ತದೆ. ಅಲ್ಲಿ ಹುಡುಕಾಟ ಸುಲಭ. ಮನುಷ್ಯರಂತಹ ಸಂಕೀರ್ಣ ಜೀವಿಗಳಲ್ಲಿ ಇಂತಹ ನಿರ್ದಿಷ್ಟ ಜೀನ್‌ಗಳ ಪತ್ತೆ ಸುಲಭವಲ್ಲ. ವಿಜ್ಞಾನಿಗಳು ಇದಕ್ಕಾಗಿ ಅನೇಕ ರಾಷ್ಟ್ರಗಳ ಜನಗಣತಿ ಮಾಹಿತಿಗೆ ಪಾತಾಳಗರಡಿ ಹಾಕಿದ್ದಾರೆ. ದೀರ್ಘಕಾಲ ಆರೋಗ್ಯವಂತರಾಗಿ ಬದುಕಿರುವ ಸುಮಾರು 17 ಲಕ್ಷ ಜನರ ಮಾಹಿತಿ ಸಂಗ್ರಹಿಸಿ, ಅವರ ಜೀನ್ ಪರೀಕ್ಷೆ ನಡೆಸಿ, ಹತ್ತು ನಿರ್ದಿಷ್ಟ ಜೀನ್ ಕೇಂದ್ರಗಳನ್ನು ಪತ್ತೆ ಮಾಡಿದ್ದಾರೆ. ಇವುಗಳ ಪೈಕಿ ಐದು ಜೀನ್‌ಗಳು ಈ ಮುನ್ನ ವಿಜ್ಞಾನಿಗಳ ಸಂಶೋಧನೆಯ ವ್ಯಾಪ್ತಿಗೆ ಬಂದಿರಲಿಲ್ಲ. ಈ ಹಾದಿಯಲ್ಲಿ ಕಂಡುಬಂದ ಅಚ್ಚರಿಯ ಅಂಶವೆಂದರೆ, ರಕ್ತದಲ್ಲಿ ಕಬ್ಬಿಣದ ಅಂಶ ಅಗತ್ಯಕ್ಕಿಂತ ಅಧಿಕವಾದರೆ ಜೀವಕೋಶಗಳ ಕಾರ್ಯಕ್ಷಮತೆ ಕ್ಷೀಣಿಸುತ್ತದೆ ಎಂಬುದು. ಹಾಗೆಂದು ಆಹಾರದಲ್ಲಿ ಕಬ್ಬಿಣದ ಅಂಶವನ್ನು ತಗ್ಗಿಸಿದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ದಾರಿಯೆಂದರೆ, ಶರೀರದಲ್ಲಿ ಅಧಿಕ ಕಬ್ಬಿಣದ ಅಂಶವನ್ನು ಸಮರ್ಥವಾಗಿ ನಿವಾರಿಸುವ ಜೀನ್‌ಗಳನ್ನು ವೃದ್ಧಿಸುವುದು. ಇದರಿಂದ ಜೀವಿತಾವಧಿ ಮತ್ತು ಒಟ್ಟಾರೆ ಆರೋಗ್ಯ ಹೆಚ್ಚುತ್ತದೆ ಎಂದು ವಿಜ್ಞಾನಿಗಳ ಆಂಬೋಣ. ಈ ನಿಟ್ಟಿನ ಸಂಶೋಧನೆ ಕುತೂಹಲಕಾರಿಯಾಗಲಿದೆ.

ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?

ವಿಜ್ಞಾನದ ನೆರವಿನಿಂದ ವಯಸ್ಸನ್ನು ಹಿಂದಕ್ಕೆ ಹಾಕಲಾದೀತೆ? 1922ರಲ್ಲಿ ಸ್ಕಾಟ್ ಫಿಟ್ಸ್’ಜೆರಾಲ್ಡ್ ಅವರು ಬರೆದಿದ್ದ ಸಣ್ಣ ಕತೆಯನ್ನು ಆಧರಿಸಿ 2008ರಲ್ಲಿ ಅಮೆರಿಕನ್ ನಟ ಬ್ರಾಡ್ ಪಿಟ್ ನಟಿಸಿದ್ದ ಬೆಂಜಮಿನ್ ಬಟನ್ ಎಂಬ ಹೆಸರಿನ ಚಲನಚಿತ್ರ ಬಂದಿತ್ತು. ವೃದ್ಧನಾಗಿ ಹುಟ್ಟಿ, ಕಾಲ ಕಳೆಯುತ್ತಾ ವಯಸ್ಸು ಕಿರಿದಾಗುತ್ತಾ ಹೋಗುವ ವ್ಯಕ್ತಿಯ ಕತೆ. ಆದರೆ ಚಿರತಾರುಣ್ಯ ಬಯಸುವ ಮಂದಿ ತಮ್ಮ ವಯಸ್ಸನ್ನು ಕಡಿಮೆ ಮಾಡಲಾರರು. ಹೆಚ್ಚಿನ ವಯಸ್ಸಿನಲ್ಲೂ ಕಡಿಮೆ ವಯಸ್ಸಿನವರ ಚೈತನ್ಯವನ್ನು ಮಾತ್ರ ಹೊಂದಬಲ್ಲರು. ಶರೀರದ ಅಂಗಗಳಲ್ಲಿ ಘಾಸಿಯಾದ ಕೋಶಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಾ; ದೇಹದಲ್ಲಿ ಕುಂಠಿತವಾಗಿರುವ ರಾಸಾಯನಿಕಗಳನ್ನು, ಹಾರ್ಮೋನುಗಳನ್ನು, ಕಿಣ್ವಗಳನ್ನು ಬಾಹ್ಯವಾಗಿ ನೀಡುತ್ತಾ; ಆಹಾರ, ವ್ಯಾಯಾಮ, ಸೂಕ್ತ ಪೋಷಕಾಂಶಗಳ ನೆರವಿನಿಂದ ಮರುಚೈತನ್ಯ ಪಡೆಯುತ್ತಾ ಹೋದರೆ ಚಿರತಾರುಣ್ಯ ಪ್ರಾಯೋಗಿಕವಾಗಿ ಸಾಧ್ಯ. ಆದರೆ, ಈ ಮಟ್ಟವನ್ನು ತಲುಪಲು ಇನ್ನೂ ಕೆಲ ದಶಕಗಳೇ ಬೇಕಾಗಬಹುದು.

ವೃದ್ಧಾಪ್ಯವನ್ನು ಕಾಯಿಲೆ ಎಂದು ಪರಿಗಣಿಸಬೇಕೆ ಎನ್ನುವ ಕುತೂಹಲಕಾರಿ ಚರ್ಚೆ ಚಾಲ್ತಿಯಲ್ಲಿದೆ. ಅದು ಶರೀರದ ಸಹಜ ಸ್ಥಿತಿಯೇ ಹೊರತು ಕಾಯಿಲೆಯಲ್ಲ ಎಂದು ವಾದಿಸುವವರ ಸಂಖ್ಯೆ ಹೆಚ್ಚು. ಆದರೆ, ಅದನ್ನು ಕಾಯಿಲೆ ಎಂದು ಪರಿಗಣಿಸಿದರೆ ನಮಗೆ ಲಾಭಗಳು ಅಧಿಕ ಎಂದು ಭಾವಿಸುವವರಿದ್ದಾರೆ. ಇದು ಕಾನೂನಾತ್ಮಕ ವಿಶ್ಲೇಷಣೆ. ಕಾಯಿಲೆಗಳ ಸಂಶೋಧನೆಗೆ ಸರ್ಕಾರ ಹಣ ನೀಡುತ್ತದೆ; ಔಷಧ ಕಂಪನಿಗಳು ಮದ್ದು ಹುಡುಕುತ್ತವೆ; ಹೊಸ ಮಾದರಿಯ ಚಿಕಿತ್ಸೆಗಳು, ಸಲಕರಣೆಗಳು ಲಭ್ಯವಾಗುತ್ತವೆ. ಇವೆಲ್ಲ ಕಾಯಿಲೆಗಳಿಗೆ ಇರುವ ವಿಶೇಷ ಕಾನೂನು ವ್ಯಾಪ್ತಿ. ಒಂದು ವೇಳೆ ವೃದ್ಧಾಪ್ಯವನ್ನು ಸಹಜ ಎಂದು ನಿರ್ಧರಿಸಿದರೆ, ಅದರ ವಿರುದ್ಧ ಮಾಡುವ ಸಂಶೋಧನೆಯ ಚೌಕಟ್ಟು ಬೇರೆಯೇ ಆಗುತ್ತದೆ. ಇದರಲ್ಲಿ ಚಿಕಿತ್ಸೆ ಎನ್ನುವ ಆಯಾಮ ಇರುವುದಿಲ್ಲ. ಇದಕ್ಕೆ ಮದ್ದು ಹುಡುಕುವುದು ಅಪರಾಧ ಅನಿಸಿಕೊಳ್ಳುತ್ತದೆ! ಹೀಗಾಗಿ, ಕಾಯಿಲೆಯ ದಾಯರೆಗಳೊಳಗೆ ವೃದ್ಧಾಪ್ಯವನ್ನು ಸೇರಿಸಬೇಕೆಂಬ ತುಡಿತ ಸಂಶೋಧಕರದ್ದು.

ಜೀವನದ ಅತಿ ದೊಡ್ಡ ಸುಖವೆಂದರೆ ಒಳ್ಳೆಯ ಆರೋಗ್ಯ ಎನ್ನುವ ಮಾತಿದೆ. ಆರೋಗ್ಯಪೂರ್ಣವಾದ ಸಂತೃಪ್ತ ದೀರ್ಘ ಜೀವನ ಪ್ರತಿಯೊಬ್ಬ ಮಾನವನ ಕನಸು. ಮಾಯಾಬಜಾರ್ ಚಲನಚಿತ್ರದಲ್ಲಿ ಘಟೋತ್ಕಚನ ಅಹಂಕಾರ ಮುರಿಯಲು ಕೃಷ್ಣ ವೃದ್ಧನ ವೇಷದಲ್ಲಿ ಕಾಣಿಸಿಕೊಂಡು “ಚಿರಂಜೀವ ಚಿರಂಜೀವ ಸುಖೀಭವ ಸುಖೀಭವ” ಎಂದು ಹಾಡುತ್ತಾ ಇರುವ ಪ್ರಸಂಗವಿದೆ. ಜಗತ್ತೆನ್ನುವ ಮಾಯಾಬಜಾರಿನಲ್ಲಿ ಮಾನವಜೀವಿಯ ಮೃಗತೃಷ್ಣೆಯೂ ಇದೇ ಮಾತು! ಚಿರತಾರುಣ್ಯದ ಸಾಕಾರದತ್ತ ಅದೆಷ್ಟೋ ಸಂಶೋಧಕರು ಪ್ರಯತ್ನ ನಡೆಸಿದ್ದಾರೆ. ಒಟ್ಟಿನಲ್ಲಿ, ಮನುಕುಲದ ನಾಡಿದ್ದು ಕೌತುಕಮಯವಾಗಲಿದೆ.

ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ: ನೆತ್ತಿಯೊಳಗಿನ ವಿದ್ಯುತ್ ಮತ್ತು ಮಾನಸಿಕ ಸಂತೃಪ್ತಿ

Exit mobile version