ಮಾನಸಿಕ ಸಂತೃಪ್ತಿಯ ಸಂಶೋಧಕರಲ್ಲಿ ಒಂದು ನಗೆಯ ಮಾತಿದೆ. “ನೀವು ನಿಮ್ಮ ಗಂಡ/ಹೆಂಡತಿಯನ್ನು ಪ್ರೀತಿಸುತ್ತೀರಾ?” ಮತ್ತು “ನೀವು ನಿಮ್ಮ ವೃತ್ತಿಯನ್ನು ಪ್ರೀತಿಸುತ್ತೀರಾ?” ಎನ್ನುವ ಪ್ರಶ್ನೆಗಳ ಪೈಕಿ ಯಾವುದಕ್ಕೆ ಹೆಚ್ಚು “ಹೌದು” ಎನ್ನುವ ಉತ್ತರ ಬರುತ್ತದೆ ಎಂದು ಯಾರಿಗೂ ತಿಳಿಯದು. ಜೊತೆಗೆ ಈ ಎರಡೂ ಪ್ರಶ್ನೆಗಳು ಸಾಪೇಕ್ಷವಾಗಿ ವಿಲೋಮವಂತೆ! ಅಂದರೆ, ಮೊದಲ ಪ್ರಶ್ನೆಗೆ ಹೌದು/ಇಲ್ಲ ಎಂದವರು ಎರಡನೆಯ ಪ್ರಶ್ನೆಗೆ ಇಲ್ಲ/ಹೌದು ಎನ್ನುವರಂತೆ! “ನೀವು ಸೋಮವಾರದ ಮುಂಜಾನೆಗೆ ಕಾಯುತ್ತಿದ್ದೀರಿ ಎಂದರೆ, ಒಂದೋ ನೀವು ನಿಮ್ಮ ಕೆಲಸವನ್ನು ಹೆಚ್ಚು ಪ್ರೀತಿಸುತ್ತೀರಿ ಅಥವಾ ನಿಮ್ಮ ಮನೆಯಾಕೆ/ಮನೆಯಾತನನ್ನು ಹೆಚ್ಚು ದ್ವೇಷಿಸುತ್ತೀರಿ ಎಂದರ್ಥ” ಎನ್ನುವ ಚಮತ್ಕಾರದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಒಟ್ಟಿನಲ್ಲಿ, ವೃತ್ತಿಯ ಮೇಲಿನ ಪ್ರೀತಿ ಎನ್ನುವುದು ಸುಲಭವಾಗಿ ಪರಿಹಾರವಾಗುವಂಥದ್ದಲ್ಲ.
ಕೆಲವೊಮ್ಮೆ ಇಷ್ಟವಿಲ್ಲದೆ ಮಾಡುವ ಕೆಲಸಗಳನ್ನು ಬಹಳ ಕಾಲ ಮಾಡುತ್ತಿದ್ದರೆ ಒಂದು ರೀತಿಯ ಆತ್ಮೀಯತೆ ಬಂದುಬಿಡುತ್ತದೆ. ಇದೇ ತತ್ತ್ವವನ್ನು ಆಧರಿಸಿ ಬಲವಂತದ ಮದುವೆಗಳನ್ನು ಮಾಡಿಸುತ್ತಿದ್ದ ಕಾಲವೂ ಇತ್ತು! “ಮಾಡುವ ವೃತ್ತಿಯ ಬಗ್ಗೆ ಪ್ರೀತಿ ಇದೆಯೇ?” ಎನ್ನುವ ಪ್ರಶ್ನೆಯನ್ನು “ನಿಮ್ಮ ವೃತ್ತಿಯ ಬಗ್ಗೆ ಸಂತೃಪ್ತಿ ಇದೆಯೇ?” ಎಂದು ಬದಲಾಯಿಸಿದರೆ ಧನಾತ್ಮಕ ಉತ್ತರಗಳ ಪರಿಮಾಣ ಮತ್ತಷ್ಟು ಕಡಿಮೆಯಾಗಬಹುದು. ಕೆಲಸದಲ್ಲಿ ಸಂತೃಪ್ತಿ ಎಂದರೇನು? ಅದು ಯಾವಾಗ ಬರುತ್ತದೆ? ಎನ್ನುವುದರ ಬಗ್ಗೆ ಸಂಶೋಧಕರು ಬಹಳ ಕಾಲದಿಂದ ಗಮನ ಹರಿಸಿದ್ದಾರೆ. ಇದರಲ್ಲಿ ಎರಡು ಮಾಪನಗಳಿವೆ.
ಒಂದು: ಮಾಡುವ ಕೆಲಸದಲ್ಲಿ ನಮ್ಮ ಪರಿಣತಿ. ಎರಡು: ಆ ಕೆಲಸ ಒಡ್ಡುವ ಸವಾಲುಗಳು. ಕೆಲಸದಲ್ಲಿ ಪರಿಣತಿ ಇರದಿದ್ದರೆ ಸವಾಲಿನ ಮಟ್ಟ ಹೆಚ್ಚಿದಂತೆ ಆತಂಕ ಹೆಚ್ಚುತ್ತದೆ. “ಇದನ್ನು ನಾನು ಮಾಡಲಾರೆ. ಆದರೆ, ಇದು ಮೇಲ್ವಿಚಾರಕರಿಗೆ ತಿಳಿದುಹೋದರೆ ಕೆಲಸ ಹೋಗಬಹುದು. ಹೀಗಾಗಿ, ನಾನು ಕೆಲಸದಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಬೇಕು” ಎನ್ನುವ ಮನಸ್ಥಿತಿ ಬೆಳೆಯುತ್ತದೆ. ಅಂತೆಯೇ, ನಮ್ಮ ಪರಿಣತಿ ಬಹಳ ಚೆನ್ನಾಗಿದ್ದು, ನಾವು ಮಾಡಬೇಕಾದ ಕೆಲಸದಲ್ಲಿ ಸವಾಲುಗಳೇ ಇಲ್ಲವಾದರೆ ಒಂದು ರೀತಿಯ ಆಲಸ್ಯ ಬೆಳೆಯುತ್ತದೆ. ಹತ್ತು ಫೈಲುಗಳನ್ನು ಒಂದೇ ದಿನಕ್ಕೆ ವಿಲೇವಾರಿ ಮಾಡುವ ಸಾಮರ್ಥ್ಯದ ನೌಕರನಿಗೆ ದಿನಕ್ಕೊಂದೇ ಫೈಲು ನೀಡಿದರೆ ಆತ ಹತ್ತನೆಯ ದಿನದವರಗೆ ಸೋಮಾರಿಯಾಗಿ ಕಳೆದು, ಹತ್ತನೆಯ ದಿನ ಚಕಚಕನೆ ಹತ್ತೂ ಫೈಲುಗಳನ್ನು ಮುಗಿಸಿ ಒಗೆಯುತ್ತಾನೆ. ಇದು ಕೆಲಸಗಾರನ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸಬಲ್ಲ ನಾಯಕರ ಅಭಾವದಿಂದ ಆಗುವ ಪ್ರಕ್ರಿಯೆ. ಈ ಎರಡೂ ಸಾಧ್ಯತೆಗಳ ಪರಮೋಚ್ಚ ಉದಾಹರಣೆಗಳು ನಮ್ಮ ದೇಶದಲ್ಲಿ ಒಂದೇ ಕಡೆ ಲಭಿಸುತ್ತವೆ. ಅದನ್ನು ನಾವೆಲ್ಲರೂ ಕಂಡಿರುತ್ತೇವೆ.
ಇದರ ಮತ್ತಷ್ಟು ಆಯಾಮಗಳನ್ನು ಗಮನಿಸಬಹುದು: ಕಡಿಮೆ ಸಾಮರ್ಥ್ಯದ ಕೆಲಸಗಾರನಿಗೆ ಕಡಿಮೆ ಸವಾಲಿನ ಕೆಲಸ ನೀಡಿದರೆ ಆತನಿಗೆ ನಿರ್ಲಕ್ಷ್ಯ ಧೋರಣೆ ಬೆಳೆಯುತ್ತದೆ. ಸವಾಲಿನ ಮಟ್ಟ ಒಂದೆರಡು ಇಂಚು ಬೆಳೆದರೂ ಆತ ಚಿಂತೆಗೊಳಗಾಗುತ್ತಾನೆ; ಇತರರ ಸಹಾಯಕ್ಕೆ ಹಂಬಲಿಸುತ್ತಾನೆ. ತಕ್ಕಮಟ್ಟಿನ ಸಾಮರ್ಥ್ಯದ ವ್ಯಕ್ತಿಗೆ ಕಡಿಮೆ ಸವಾಲಿನ ಕೆಲಸ ಬೋರು ಹೊಡೆಸುತ್ತದೆ. ಆದರೆ, ಅದೇ ವ್ಯಕ್ತಿಗೆ ಹೆಚ್ಚು ಸವಾಲಿನ ಕೆಲಸ ನೀಡಿದರೆ ಆತನ ಮನಸ್ಥಿತಿಯನ್ನು ಉತ್ತೇಜಿಸಿದಂತಾಗುತ್ತದೆ. ಉನ್ನತ ಸಾಮರ್ಥ್ಯದ ವ್ಯಕ್ತಿ ಮಧ್ಯಮ ಸವಾಲಿನ ಕೆಲಸವನ್ನು ಬಹುಬೇಗ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.
ಈ ಸಮೀಕರಣದ ಅಂತಿಮ ಆಯಾಮ ಉನ್ನತ ಸಾಮರ್ಥ್ಯದ ವ್ಯಕ್ತಿಗೆ ಹೆಚ್ಚಿನ ಸವಾಲಿನ ಕೆಲಸ ನೀಡುವುದು. ಜಗತ್ತಿನ ಸಾಧಕರು ಇದೇ ಗುಂಪಿಗೆ ಸೇರಿದವರು. ತನ್ನ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ ಸವಾಲಿಗೆ ಆತ ಯಾವಾಗಲೂ ಹಾತೊರೆಯುತ್ತಾನೆ. ಅದನ್ನು ಸಶಕ್ತವಾಗಿ ನಿರ್ವಹಿಸಲು ತನ್ನ ಶಕ್ತಿಯನ್ನು ಪಣಕ್ಕಿಡುತ್ತಾನೆ. ಸಮಯದ ಪರಿವೆಯಿಲ್ಲದೆ ಆ ಕೆಲಸದಲ್ಲಿ ನೈಪುಣ್ಯ ಸಾಧಿಸುತ್ತಾನೆ. ಒಂದು ವಿಧದಲ್ಲಿ ಆತನ ಮಾನಸಿಕತೆ ಕಠಿಣ ಕೆಲಸದ ಜೊತೆ ಸಮನ್ವಯವಾಗುತ್ತದೆ. ಅದನ್ನು ಮಾಡುತ್ತಾ ಹೋದಂತೆ ಅಸಾಧಾರಣ ಸಂತೃಪ್ತಿ ಆವರಿಸುತ್ತದೆ. ಮನಃಶಾಸ್ತ್ರಜ್ಞರು ಇಂತಹ ಮನಸ್ಥಿತಿಯನ್ನು “ಫ್ಲೋ” (Flow) ಎಂದು ಕರೆಯುತ್ತಾರೆ. ತನ್ನ ಕೆಲಸವನ್ನು ಪ್ರೀತಿಸುವ, ಅದರಲ್ಲಿ ಸಂತೃಪ್ತಿ ಕಾಣುವ ಇಂತಹ ಮನಸ್ಥಿತಿ ಪ್ರತಿಯೊಬ್ಬ ಸಾಮರ್ಥ್ಯಶಾಲಿಯ ಕನಸಾದರೂ, ಅದನ್ನು ಸಾಧಿಸಬಲ್ಲ ಅವಕಾಶ, ಅನುಕೂಲ, ಅದೃಷ್ಟ ಇರುವವರು ಕಡಿಮೆಯೇ. ಪ್ರಪಂಚದ ದಿಕ್ಕನ್ನು ಬದಲಿಸಿದ ಬಹುತೇಕ ಮಂದಿ ಈ ಗುಂಪಿನವರು.
ಆದರೆ ಈ ಗುಂಪಿಗೆ ಸೇರುವುದು ಸುಲಭವಲ್ಲ. ಇದೊಂದು ರೀತಿಯ ತಪಸ್ಸಿನಂತೆ. ಜಗದ್ವಿಖ್ಯಾತ ಸಂಗೀತಕಾರ ಬಿಥೋವನ್ ಕುರಿತಾದ ಒಂದು ಪ್ರಸಂಗವಿದೆ. ಇಳಿವಯಸ್ಸಿನಲ್ಲಿ ಆತನಿಗೆ ಕಿವಿ ಕೇಳುತ್ತಿರಲಿಲ್ಲ. ಅದು ಆತನ ಸಂಗೀತ ಸಾಧನೆಗೆ ಅಡ್ಡಿಯಾಗಲಿಲ್ಲ. ಒಮ್ಮೆ ಆತನ ಕಛೇರಿಯ ನಂತರ ತುಸು ವಯಸ್ಸಾದ ಹೆಂಗಸೊಬ್ಬರು ಆತನನ್ನು ಅಭಿನಂದಿಸುತ್ತಾ “ನಿಮ್ಮಷ್ಟು ನೈಪುಣ್ಯವನ್ನು ಆ ಭಗವಂತ ನನಗೆ ಕೊಟ್ಟಿದ್ದರೆ…” ಎಂದರಂತೆ. ತನ್ನ ಸಹಾಯಕನಿಂದ ಸನ್ನೆಗಳ ಮೂಲಕ ಆಕೆಯ ಮಾತನ್ನು ಅರಿತ ಬಿಥೋವನ್ ಆಕೆಗೆ ಉತ್ತರಿಸಿದರಂತೆ: “ಅಂತಹ ಸಾಮರ್ಥ್ಯವನ್ನು ಭಗವಂತನಿಂದ ನೀವು ಕೂಡ ಪಡೆಯಬಹುದು. ಹೆಚ್ಚೇನಿಲ್ಲ – ದಿನಕ್ಕೆ ಹದಿನಾಲ್ಕು ಗಂಟೆಗಳಂತೆ ಒಂದು ದಿನವೂ ಬಿಡದೆ ಮೂವತ್ತು ವರ್ಷಗಳ ಕಾಲ ಅಭ್ಯಾಸ ಮಾಡಿದರೆ ಸಾಕು; ಭಗವಂತ ಇಷ್ಟು ನೈಪುಣ್ಯವನ್ನು ಮುಲಾಜಿಲ್ಲದೆ ಪ್ರಸಾದಿಸುತ್ತಾನೆ”. ಸಾಧಕರ ಅಂತಿಮ ಪ್ರದರ್ಶನವನ್ನು ನೋಡುವವರಿಗೆ ಅದರ ಹಿಂದಿನ ನಿರಂತರ ಅಭ್ಯಾಸದ ಅಂದಾಜು ಮೂಡುವುದಿಲ್ಲ. “ಯಾವುದೇ ಕೆಲಸ ನೋಡುಗರಿಗೆ ಸುಲಭ ಎನಿಸಿದರೆ ಆ ಕೆಲಸ ಸುಲಭ ಎಂತಲ್ಲ. ಬದಲಿಗೆ ಅದನ್ನು ಮಾಡುತ್ತಿರುವ ವ್ಯಕ್ತಿ ಅತ್ಯಂತ ಸಮರ್ಥ ಎಂದರ್ಥ” ಎನ್ನುವ ಮಾತಿದೆ. ಶಿಲ್ಪಕಲೆಯೋ, ಶಸ್ತ್ರಚಿಕಿತ್ಸೆಯೋ, ರೇಸ್ ವಾಹನ ಚಾಲನೆಯೋ, ಚಿತ್ರಕಲೆಯೋ, ಪ್ರಯೋಗವೋ – ಯಾವುದನ್ನಾದರೂ ದಣಿವರಿಯದೆ, ಅತೀವ ಆನಂದದಿಂದ ಮಾಡುವ ವ್ಯಕ್ತಿ ಅದರಲ್ಲಿ ತನ್ನ “ಫ್ಲೋ” ಎನ್ನುವ ಸಂತೃಪ್ತಿಯನ್ನು ಕಂಡುಕೊಂಡಿರುತ್ತಾನೆ.
ಈಗ ಸ್ವಲ್ಪ ಕಾಲದ ಮಟ್ಟಿಗೆ ಬೇರೊಂದು ಪ್ರದೇಶಕ್ಕೆ ಹೋಗೋಣ. ಉಸುಕಿನಿಂದ ತುಂಬಿದ ಇಪ್ಪತ್ತು ಗೋಣಿಚೀಲಗಳು. ಅದರ ಹಿಂದೆ ನಿಂತಿರುವ, ಹುಲ್ಲೆಯಂತೆ ನಡುಗುತ್ತಿರುವ ಮೂವತ್ತರ ಹರೆಯದ ಓರ್ವ ಹೆಣ್ಣುಮಗಳು. ಆಕೆಯ ಕೈಲೊಂದು ಆಟೊಮ್ಯಾಟಿಕ್ ಬಂದೂಕು. ಚೀಲಗಳ ಮತ್ತೊಂದು ಬದಿ ಜೋರಾಗಿ ಚೀರುತ್ತಾ ಈಕೆಯೆಡೆಗೆ ಮುನ್ನುಗ್ಗುತ್ತಿರುವ ಇಪ್ಪತ್ತು ಮಂದಿ ಮುಸುಕುಧಾರಿ ಆತ್ಮಾಹುತಿ ಭಯೋತ್ಪಾದಕರು. ಅವರ ಸೊಂಟದಲ್ಲೊಂದು ಬಾಂಬ್; ಕೈಯಲ್ಲಿ ಬಂದೂಕು. ಇವರಲ್ಲಿ ಒಬ್ಬರನ್ನು ಆಕೆ ಗುಂಡು ಹೊಡೆದು ಬೀಳಿಸಿದರೆ ಮೂವರು ಮುನ್ನುಗ್ಗುವರು. ಆಕೆಯ ಹಣೆಯಲ್ಲಿ ಬೆವರ ಸಾಲು; ಕೈಲಿ ನಡುಕ. ಈ ಆತಂಕದಿಂದ ಆಗಾಗ ಜ್ಯಾಮ್ ಆಗುತ್ತಿರುವ ಬಂದೂಕಿನ ಟ್ರಿಗ್ಗರ್. ಬಂದೂಕು ಚಲಾಯಿಸುವ ತನ್ನ ವೇಗ ಸಾಲದಾಗಿದೆ ಎನ್ನುವ ಭೀತಿ ಆಕೆಯದ್ದು; ನೀಡಿದ ಕೆಲಸ ನಿಭಾಯಿಸಲು ತಾನು ಅಸಮರ್ಥಳು ಎನ್ನುವ ಭಾವ .ಎಲ್ಲ ಮುಗಿದುಹೋಯಿತು ಎನ್ನುವ ಮನಸ್ಥಿತಿ.
ಈ ವಿಷಮ ಪರಿಸ್ಥಿತಿಯಲ್ಲಿ ಇದ್ದ ಒಂದೇ ಒಂದು ಸಮಾಧಾನ ಎಂದರೆ ಇದೊಂದು ವಿಡಿಯೋ ಆಟ ಎನ್ನುವುದು ಮಾತ್ರ. ಆಕೆ ಉಸುಕಿನ ಚೀಲಗಳ ಹಿಂದೆ ಇದ್ದದ್ದು ನಿಜ. ಆದರೆ ಆಕೆಯ ಕೈಲಿದ್ದದ್ದು ಆಟಿಕೆಯ ಬಂದೂಕು. ಉಳಿದೆಲ್ಲವೂ ಆ ಚೀಲಗಳ ಮತ್ತೊಂದು ಬದಿ ಇದ್ದ ದೊಡ್ಡ ಪರದೆಯ ಮೇಲೆ ನೈಜತೆಗೆ ಸವಾಲೊಡ್ಡುವಂತೆ ಮೂಡುತ್ತಿದ್ದ ಬಿಂಬಗಳು. ಇದು ನಡೆಯುತ್ತಿದ್ದುದು ಕ್ಯಾಲಿಫೋರ್ನಿಯಾದ ಸೈನಿಕ ತರಬೇತಿ ಕೇಂದ್ರದ ಮಿಲಿಟರಿ ಪ್ರಯೋಗಾಲಯದಲ್ಲಿ. ಶಾರ್ಪ್ ಶೂಟರ್‌ಗಳ ತರಬೇತಿಗೆ ಬಳಸುವ ಪ್ರಯೋಗದ ಒಂದು ಭಾಗವಾಗಿ ಜನಪ್ರಿಯ ವಿಜ್ಞಾನದ ಲೇಖಕಿಯಾದ ಆಕೆ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಇಪ್ಪತ್ತು ನಿಮಿಷಗಳ ಕಾಲ ನಡೆದ ಪ್ರಯೋಗದ ಭಾಗವಾಗಿ ಆಕೆ ಉಸುಕಿನ ಚೀಲಗಳ ಹಿಂದೆ ಬಂದೂಕು ಹಿಡಿದು ನಿಂತಿದ್ದರು. ಆ ಇಪ್ಪತ್ತು ನಿಮಿಷಗಳ ಉಸಿರುಗಟ್ಟಿಸುವ ಅವಧಿಯ ನಂತರ ಆಕೆ ಸಾಗಿದ್ದು ತನ್ನ ಜೀವನದಲ್ಲಿ ಮರೆಯಲಾಗದ ಒಂದು ಅನುಭವದ ಮೂಲಕ.
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?
ಮಿಲಿಟರಿ ತರಬೇತಿ ಕೇಂದ್ರದ ಸಂಶೋಧಕರು ಆಕೆಯ ತಲೆಗೆ ಕೆಲವು ವಿದ್ಯುತ್ ವಾಹಕಗಳನ್ನು ಒಳಗೊಂಡ ಹೆಲ್ಮೆಟ್ ಮಾದರಿಯ ತಲೆಗವಚವನ್ನು ಜೋಡಿಸಿದರು. ಇದಕ್ಕೆ 9 ವೋಲ್ಟಿನ ಪುಟ್ಟ ಬ್ಯಾಟರಿ ಸಂಪರ್ಕ ನೀಡಿದರು. ಇದರಿಂದ ಅಲ್ಪ ಪ್ರಮಾಣದ ವಿದ್ಯುತ್ ನೇರವಾಗಿ ಆಕೆಯ ಮಿದುಳಿನ ಕೆಲವು ನಿರ್ದಿಷ್ಟವಾದ ಭಾಗಗಳನ್ನು ಪ್ರಚೋದಿಸುತ್ತಿತ್ತು. ಮತ್ತೊಮ್ಮೆ ಬಂದೂಕು ಹಿಡಿದ ಆಕೆ ಉಸುಕಿನ ಚೀಲಗಳ ಹಿಂದೆ ನಿಂತರು. ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಆಕೆ ಬೇರೆಯೇ ವ್ಯಕ್ತಿಯಾದರು. ಆಕೆಯ ಬಂದೂಕಿನ ಗುರಿ ಒಮ್ಮೆಯೂ ತಪ್ಪಲಿಲ್ಲ. ಸರಣಿಯಲ್ಲಿ ಆತ್ಮಾಹುತಿ ಭಯೋತ್ಪಾದಕರು ಆಕೆಯೆಡೆಗೆ ನುಗ್ಗಿ ಬರುತ್ತಿದ್ದರೂ ಆಕೆ ಒಂದಿನಿತೂ ಅಳುಕಲಿಲ್ಲ. ಭೀತಿ ಎಂಬುದು ಆಕೆಯ ಅನುಭವಕ್ಕೂ ಬರಲಿಲ್ಲ. ಭಯವಿಲ್ಲ; ಆತ್ಮಶಂಕೆಯಿಲ್ಲ; ಗೊಂದಲವಿಲ್ಲ. ಆಕೆಯ ಬಂದೂಕಿನ ಪ್ರತಿಯೊಂದು ನಿಶಾನೆಯೂ ನಿಶಿತ, ನಿಖರ. ದಶಕಗಳ ನಿರಂತರ ಪ್ರಯತ್ನಗಳಿಂದ ಪಳಗಿದ ಗುರಿಕಾರನ ರೀತಿಯಲ್ಲಿ ಸಂದರ್ಭವನ್ನು ಶಾಂತವಾಗಿ, ಸಂಪೂರ್ಣ ನಿಯಂತ್ರಣದಿಂದ ನಿಭಾಯಿಸಿದರು. ಇಪ್ಪತ್ತು ನಿಮಿಷಗಳ ಅವಧಿ ಮುಗಿದಾಗ ಆಕೆಯ ಎದುರು ಒಬ್ಬ ಭಯೋತ್ಪಾದಕನೂ ಉಳಿದಿರಲಿಲ್ಲ. ತಾನು ಮಾಡುತ್ತಿರುವ ಕೆಲಸದಲ್ಲಿ ಬಹಳ ಉನ್ನತ ಮಟ್ಟದ ಸಾಮರ್ಥ್ಯ ಆ ಇಪ್ಪತ್ತು ನಿಮಿಷಗಳ ಕಾಲ ಆಕೆಯದಾಗಿತ್ತು. ಅಷ್ಟೂ ವೇಳೆಯೂ ಅತ್ಯಂತ ಕಠಿಣವಾದ ಕೆಲಸವನ್ನು ಆಕೆ ನಿಷ್ಪ್ರಯಾಸದಿಂದ ಮಾಡಿ ಸಂತೃಪ್ತಿಯ “ಫ್ಲೋ” ಅನುಭವಿಸಿದರು. ಆಕೆಯ ತಲೆಯಿಂದ ವಿದ್ಯುತ್ ವಾಹಕಗಳನ್ನು ತೆಗೆದುಹಾಕಿದ ಕೂಡಲೇ ಮೊದಲಿನ ಬೆದರಿದ ಹುಲ್ಲೆಯಾದರು.
ತನ್ನ ಈ ಅನುಭವವನ್ನು ಆಕೆ ನ್ಯೂ ಸೈಂಟಿಸ್ಟ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಒಂದು ಸಂಚಲನವೇ ಮೂಡಿತು. ಯುವಲ್ ನೋಹ್ ಹರಾರಿಯಂತಹ ಪ್ರಸಿದ್ಧ ಲೇಖಕರು ಆಕೆಯ ಅನುಭವದ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದರು. ತನ್ನ ಈ ಅನುಭವವನ್ನು ಆಕೆ The nine-volt Nirvana (9 ವೋಲ್ಟ್ ನಿರ್ವಾಣ) ಎಂದು ಬಣ್ಣಿಸಿದರು. ಯಾವ ಸಂತೃಪ್ತಿಯ ಸಾಧನೆಗಾಗಿ ದಶಕಗಳ ನಿರಂತರ ಶ್ರಮ ಹಿಡಿಯುತ್ತದೆಯೋ ಅದನ್ನು ತಲೆಗೆ ಹಚ್ಚಿದ ವಿದ್ಯುತ್ ವಾಹಕಗಳ ಹೆಲ್ಮೆಟ್ ಮತ್ತು ಪುಟ್ಟ ಬ್ಯಾಟರಿಗಳು ಮಾಡಿದ್ದವು. ಆ ಸಮಯದಲ್ಲಿ ಆಕೆಗೆ ಯಾವ ಅಡ್ಡ ಪರಿಣಾಮಗಳೂ ಆಗಲಿಲ್ಲ. ಆ ಸಂತೃಪ್ತಿಯ ಗುಂಗಿನಿಂದ ಹೊರಬರಲು ಆಕೆಗೆ ಮೂರು ದಿನಗಳು ಹಿಡಿದವು. “ಈ ಅನುಭವ ಮತ್ತೊಮ್ಮೆ ಆಗಲಿ” ಎಂದು ಆಕೆಯ ಮನಸ್ಸು ಹಾತೊರೆಯಹತ್ತಿತು. ವಿದ್ಯುತ್ ವಾಹಕಗಳ ಹೆಲ್ಮೆಟ್ ಧರಿಸಿದ ಆ ಇಪ್ಪತ್ತು ನಿಮಿಷಗಳ ಕಾಲ ಆಕೆಗೆ ಆದದ್ದೇನು? ಆಕೆಯ ಮನದಲ್ಲಿ ಈ ಮೊದಲೇ ಮನೆಮಾಡಿದ್ದ ಸೋಲಿನ ಭೀತಿ, ಆತ್ಮಶಂಕೆಗಳಂತಹ ಹಿಂಜರಿತಗಳು ಇಲ್ಲವಾದವೇ? ಅಥವಾ ಆಕೆಯ ಮಿದುಳು ಈ ಮೊದಲು ಎಂದೂ ಅರಿಯದ ಹೊಸ ಬಗೆಯ ಕಲಿಕೆಯನ್ನು ಅನುಭವಿಸಿತೇ? ಈ ಅನುಭವ ಆಕೆಯಿಂದ ಹಳೆಯ ಏನನ್ನಾದರೂ ಕಳೆಯಿತೇ ಅಥವಾ ಹೊಸದಾದ ಏನನ್ನಾದರೂ ನೀಡಿತೇ?
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ಮನುಷ್ಯನ ಆಯಸ್ಸು ಎಷ್ಟು?
ಈ ಪ್ರಶ್ನೆಗಳ ಉತ್ತರ ಸುಲಭವಲ್ಲ. ಪರಿಣತಿ ಎಂದರೇನು? ನಿರಂತರ ಪ್ರಯತ್ನಗಳಿಂದ ನಾವು ನಮ್ಮ ಮಿದುಳಿನಲ್ಲಿ ವಿವಿಧ ನರಕೋಶಗಳ ನಡುವೆ ಶಕ್ತಿಶಾಲಿಯಾದ ಸಂಪರ್ಕಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಅದು ಸಂಗೀತಗಾರನೊಬ್ಬನ ಹಾಡುಗಾರಿಕೆಯಿರಬಹುದು; ವಾದ್ಯವೊಂದರ ಮೇಲಿನ ನೈಪುಣ್ಯವಿರಬಹುದು; ವಾಹನದ ಕ್ಲಿಷ್ಟಕರ ರಿಪೇರಿಯ ಸೂಕ್ಷ್ಮ ಹಂತಗಳಿರಬಹುದು; ಕಠಿಣವಾದ ಶಸ್ತ್ರಚಿಕಿತ್ಸೆಯ ಹತ್ತಾರು ಅಂಶಗಳಿರಬಹುದು; ಕುಸುರಿ ಕೆಲಸ ಮಾಡುವ ಅಕ್ಕಸಾಲಿಯ ಪರಿಶ್ರಮವಿರಬಹುದು – ಪ್ರತಿಬಾರಿಯ ಸಾಧನೆ, ಅನುಭವದ ಕಲಿಕೆ, ತಪ್ಪುಗಳನ್ನು ಒಪ್ಪಗೊಳಿಸುವುದು, ಹಿಂದಿನ ಬಾರಿಯ ಸಾಫಲ್ಯವನ್ನು ಮತ್ತಷ್ಟು ಚಂದಗೊಳಿಸುವುದು, ಒಂದು ಹಂತದ ಪ್ರಾವೀಣ್ಯ ಪಡೆದ ಮೇಲೆ ಆ ಕೆಲಸಕ್ಕೆ ಮತ್ತೊಂದು ನವೀನ ಆಯಾಮವನ್ನು ಜೋಡಿಸುವುದು – ಹೀಗೆ ಪ್ರತಿಬಾರಿಯೂ ಆ ಕೆಲಸ ಮಾಡುವಾಗ ಮಿದುಳು ಹೊಸಹೊಸ ನರಕೋಶಗಳನ್ನು ಜೋಡಿಸುತ್ತಾ, ಹಿಂದೆಂದೂ ಆಗಿಲ್ಲದ ಸಂಪರ್ಕಗಳನ್ನು ನಿರ್ಮಿಸುತ್ತದೆ. ಪ್ರತಿ ಬಾರಿ ಈ ಸಾಧನೆಯಲ್ಲಿ ಯಶಸ್ಸು ಕಂಡಾಗ ಆಗುವ ಆನಂದದ ಭಾವ, ನಮಗೆ ಸಂತಸವನ್ನು ಉಂಟುಮಾಡುವ ಮಿದುಳಿನ ಭಾಗದ ಜೊತೆಗೆ ಈ ಬಲಶಾಲಿ ಸಂಪರ್ಕಗಳನ್ನು ಸಮನ್ವಯಗೊಳಿಸಿ ಬೆಸೆಯುತ್ತದೆ. ಸಾಧನೆ ಕಠಿಣವಾದಷ್ಟೂ ಸಂತಸದ ಪ್ರಮಾಣ ಹೆಚ್ಚುತ್ತದೆ. ಇದು ಒಂದು ಹಂತವನ್ನು ಮೀರಿದಾಗ ಆನಂದದ ಭಾವ ಸ್ಥಾಯಿಯಾಗುತ್ತದೆ. ಇದನ್ನೇ ಸಂತೃಪ್ತಿಯ “ಫ್ಲೋ” ಎಂದು ಬಣ್ಣಿಸುತ್ತಾರೆ. ಅಸಲಿಗೆ ಈ ಫ್ಲೋ ಎನ್ನುವುದು ಮಿದುಳಿನ ವಿವಿಧ ನರಕೋಶಗಳ ನಡುವಿನ ಸಂಪರ್ಕಗಳ ಮೂಲಕ ಹರಿಯುವ ಸಣ್ಣ ಪ್ರಮಾಣದ ವಿದ್ಯುದಾವೇಶ. ತಲೆಯ ಮೇಲ್ಭಾಗದಲ್ಲಿ ಅಂಟಿಸಿದ ವಿದ್ಯುತ್ ವಾಹಕಗಳ ಹೆಲ್ಮೆಟ್ ಮೂಲಕ ಮಿದುಳಿನ ನರಗಳಿಗೆ ಕೃತಕ ಸಂಪರ್ಕ ಕಲ್ಪಿಸಿ ನೀಡಿದ ವಿದ್ಯುದಾವೇಶವೂ ಸಾಧಿಸಿದ್ದು ಇದನ್ನೇ.
ಇದರ ದೂರಗಾಮಿ ಪರಿಣಾಮಗಳೇನು? ಪ್ರಯತ್ನದ ಲವಲೇಶವೂ ಇಲ್ಲದೆ ಪರಿಣತ ಸಾಧಕರಾಗುವ ಭಾಗ್ಯವನ್ನು ಯಾರು ತಾನೇ ನಿರಾಕರಿಸಬಲ್ಲರು? ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಮಿದುಳಿನ ಕೆಲಸಗಳನ್ನು ಚೆನ್ನಾಗಿ ಅರಿತುಕೊಂಡು, ಸರಿಯಾದ ಹಾದಿಯಲ್ಲಿ ವಿದ್ಯುದಾವೇಶ ಕಲ್ಪಿಸಿ, ಹಾದಿಬದಿಯ ಯಾರನ್ನು ಬೇಕಾದರೂ ಸೂಪರ್ ಮ್ಯಾನ್ ಮಾಡಬಲ್ಲ ವಿಧಾನಗಳು ಮನುಕುಲವನ್ನು ಸರಿಯಾದ ಹಾದಿಯಲ್ಲಿ ಒಯ್ಯಲು ಸಾಧ್ಯವೇ? ಇಂತಹ ಪ್ರಯೋಗಗಳು ಅಸಾಧುವಲ್ಲವೇ? ಇದು ಹೀಗೆಯೇ ಮುಂದುವರೆದರೆ ನಾಳೆ ಇಂತಹ ತಂತ್ರಜ್ಞಾನದ ಲಭ್ಯತೆ ಇಲ್ಲದ ಸಾಮಾನ್ಯರ ಪಾಡೇನು?
ಈ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಸದ್ಯಕ್ಕಂತೂ ಕಂಡುಬಂದಿಲ್ಲ. ಆದರೆ ಎಂದಾದರೊಂದು ದಿನ ಇವು ನಮ್ಮ ಮುಂದೆ ರಾಕ್ಷಸಾಕಾರವಾಗಿ ನಿಲ್ಲುತ್ತವೆ. ಅಷ್ಟರೊಳಗೆ ಇದರ ಸಮ್ಯಕ್ ಉತ್ತರಗಳನ್ನು ನಾವು ಆಲೋಚಿಸಲೇಬೇಕು. ಪ್ರಗತಿಯ ನಾಗಾಲೋಟವನ್ನು ತಡೆಯುವುದು ಅಸಾಧ್ಯ. ಆದರೆ ಅದನ್ನು ಒಳ್ಳೆಯ ಹಾದಿಯಲ್ಲಿ ಬಳಸಿಕೊಳ್ಳಲು ಸರಿಯಾದ ನಿಯಮಗಳನ್ನು ರೂಪಿಸುವುದರಲ್ಲಿ ಮನುಕುಲದ ಭವಿಷ್ಯ ಅಡಗಿದೆ.
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ | ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ ಇತ್ಯಾದಿ…