Site icon Vistara News

Valentine Day: ಅನೈತಿಕತೆ ಹೆಚ್ಚಿಸುವ ಪಾಶ್ಚಾತ್ಯ ದಿನ ಬೇಕೋ, ನೈತಿಕತೆ ಹೆಚ್ಚಿಸುವ ಭಾರತೀಯ ದಿನ ಬೇಕೋ?

Valentine Day

Valentine Day

| ಮೋಹನ ಗೌಡ

ಫೆಬ್ರವರಿ 14ರಂದು ‘ವ್ಯಾಲೆಂಟೈನ್ ಡೇ’ ಅಂದರೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ನಿಜವಾದ ಪ್ರೇಮ ಕೇವಲ ಒಂದು ದಿನ ಇರುತ್ತದೆಯೇ ? ಮಹಾವಿದ್ಯಾಲಯಗಳಲ್ಲಿನ ಡೇʼ ಆಚರಣೆ ಎಂದರೆ ಪಾಶ್ಚಾತ್ಯರ ಅನೈತಿಕತೆಯ ಭೊಗವಾದದ ಅನುಕರಣೆ. ವ್ಯಾಲೆಂಟೈನ್ ಡೇ’ ಅಂದರೆ ಸಭ್ಯತೆ ಮತ್ತು ನೈತಿಕತೆಯನ್ನು ಅಪಮಾನಗೊಳಿಸುವ ಒಂದು ಕಪ್ಪು ದಿನ. ಭಾರತೀಐ ಮಹಾನ್‌ ಸನಾತನ ಸಂಸ್ಕೃತಿಯ ಮೇಲೆ ಆಘಾತ ಮಾಡುವ ಸಮಸ್ಯೆ. ವ್ಯಾವಹಾರಿಕ ಲಾಭಕ್ಕಾಗಿ ಆಧುನಿಕ ಪ್ರಸಾರ ಮಾಧ್ಯಮಗಳು ಮತ್ತು ಶುಭೇಚ್ಛಾ ಪತ್ರಗಳನ್ನು ಮಾರಾಟ ಮಾಡುವ ಕಂಪನಿಗಳು ʻವ್ಯಾಲೆಂಟೈನ್ ಡೇ’ಯನ್ನು ಉತ್ಸಾಹದಿಂದ ಪ್ರಸಾರ ಮಾಡುತ್ತವೆ. ಇದರಿಂದ ಹಿಂದೂಗಳ ಸಾಂಸ್ಕೃತಿಕ ಮತಾಂತರಕ್ಕೆ ಒಂದು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತದೆ ಮತ್ತು ದೇಶದ ಯುವ ಪೀಳಿಗೆ ತಪ್ಪು ದಾರಿಗೆ ಹೋಗುತ್ತದೆ. ವ್ಯಕ್ತಿಯು ಸಾತ್ವಿಕವಾಗಿ ನೀತಿವಂತ, ನೈತಿಕ ಮತ್ತು ಸಂಯಮೀ ಜೀವನ ನಡೆಸಲು ಹಬ್ಬ, ಉತ್ಸವ, ವ್ರತಗಳನ್ನು ಮತ್ತು ಧಾರ್ಮಿಕ ಕೃತಿಗಳನ್ನು ಆಚರಿಸಲು ಹೇಳುವ ಸನಾತನ ಧರ್ಮದ ಹಿಂದೂಗಳು ಪಾಶ್ಚಾತ್ಯರಂತೆ ʻವ್ಯಾಲೆಂಟೈನ್ ಡೇ’ಯ ಉದಾತ್ತೀಕರಣ ಮಾಡುವುದು ಸನಾತನ ಧರ್ಮದ ಮೇಲಿನ ಹಾನಿಯೇ ಆಗಿದೆ.

ಯಾರು ಈ ವ್ಯಾಲೆಂಟೈನ್?

ಮೂರನೆಯ ಶತಮಾನದಲ್ಲಿ ರೋಮ್ ರಾಜನಾದ ಕ್ಲೌಡಿಯಸ್‌ನು(2) ಯುವಕರು ವಿವಾಹವಾಗದೇ ಸೇನೆಯಲ್ಲಿ ಸೇರಬೇಕು ಎಂಬ ಆದೇಶ ಹೊರಡಿಸಿದನು. ಈ ಆದೇಶಕ್ಕೆ ಬಗ್ಗದೇ ʻವ್ಯಾಲೆಂಟೈನ್’ ಎಂಬ ಕ್ರೈಸ್ತ ಪಾದ್ರಿಯು ಯುವಕ-ಯುವತಿಯರಿಗೆ ರಹಸ್ಯವಾಗಿ ವಿವಾಹ ಮಾಡಿಸಿದನು. ರಾಜನಿಗೆ ಈ ವಿಷಯ ತಿಳಿದಾಗ ಪಾದ್ರಿಯನ್ನು ಸೆರಮನೆಗೆ ತಳ್ಳಿದನು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಿದನು. ಸೆರಮನೆಯಲ್ಲಿ ಈ ತಥಾಕಥಿತ ಅನೈತಿಕತೆ ಪೋಷಣೆ ಮಾಡುವ ಪಾದ್ರಿಯು ಸೆರೆಮನೆಯ ಜೈಲಧಿಕಾರಿಯ ಪುತ್ರಿಯನ್ನು ಪ್ರೇಮಿಸತೊಡಗಿದ. ಗಲ್ಲು ಶಿಕ್ಷೆಯ ಹಿಂದಿನ ದಿನ ಅವನು ಆ ಯುವತಿಗೆ ʻನಿನ್ನ ವ್ಯಾಲೆಂಟೈನ್’ ಎಂದು ಬರೆದ ಪತ್ರವನ್ನು ಕಳುಹಿಸಿದ. ಅಲ್ಲಿಂದ ವ್ಯಾಲೆಂಟೈನ್ಸ್‌ ಡೇ ಪ್ರಾರಂಭವಾಯಿತು. ಇಂತಹ ಅನೈತಿಕತೆಗೆ ಕುಮ್ಮಕ್ಕು ನೀಡುವ ಪಾದ್ರಿಯ ದಿನ ಆಚರಣೆ ಮಾಡುವುದು ಎಷ್ಟು ಸರಿ?

Valentine Day

ಕ್ಯಾಲೆಂಡರ್‌ನಿಂದ ಕಿತ್ತು ಹಾಕಿದ ಕ್ಯಾಥೋಲಿಕ್ ಇಗರ್ಜಿ

ಮತ್ತೊಂದು ಐತಿಹಾಸಿಕ ದಾಖಲೆಯ ಪ್ರಕಾರ ಪ್ರಾಚೀನ ರೋಮ್‌ನಲ್ಲಿ ಮೂರ್ತಿ ಪೂಜಕ (ಪ್ಯಾಗನ್) ಸಂಸ್ಕೃತಿಯಲ್ಲಿ 13ರಿಂದ 15 ಫೆಬ್ರವರಿ, ಈ ಸಮಯದಲ್ಲಿ `ಲ್ಯೂಪರಕ್ಯಾಲಿಯಾ’ ಎಂಬ ಉತ್ಸವ ಆಚರಿಸಲಾಗುತ್ತದೆ. ಮೂರ್ತಿಪೂಜಕರನ್ನು ಕ್ರೈಸ್ತರನ್ನಾಗಿಸಲು ಪೋಪ್ ಗೆಲಾಸಿಸ್ (ಪ್ರಥಮ) ಫೆಬ್ರವರಿ 14ಕ್ಕೆ ’ವೆಲೆಂಟೈನ್ ಡೇ’ಯನ್ನು ಆಚರಿಸಲು ಪ್ರಾರಂಭಿಸಿದರು. 14ನೇ ಶತಕದವರೆಗೆ ʻವ್ಯಾಲೆಂಟೈನ್ ಡೇ’ ಮತ್ತು ʻಪ್ರೇಮ’ಕ್ಕೆ ಸಂಬಂಧವಿರಲಿಲ್ಲ. ಆದುದರಿಂದ ರೋಮ್‌ನ ಕ್ಯಾಥೋಲಿಕ್ ಇಗರ್ಜಿಯು ʻವ್ಯಾಲೆಂಟೈನ್ ಡೇ’ಯನ್ನು ತನ್ನ ಕ್ಯಾಲೆಂಡರ್‌ನಿಂದ ತೆಗೆದು, ಆಚರಣೆಯನ್ನು ಕೈ ಬಿಟ್ಟಿತ್ತು.

ಪಾಶ್ಚ್ಯಾತ್ಯರ ದಾಸರಾದ ಭಾರತೀಯರು!

ಆಧುನಿಕತೆ ಹೆಸರಿನಲ್ಲಿ ಇಂದಿನ ಯುವಜನತೆಯು ಪಾಶ್ಚಾತ್ಯರ ‘ವ್ಯಾಲೆಂಟೈನ್ ಡೇ’, ‘ಚಾಕಲೇಟ್ ಡೇ, ‘ರೋಜ್ ಡೇ’, ‘ಫಾದರ‍್ಸ್ ಡೇ’, ‘ಮದರ‍್ಸ್ ಡೇ’ ಅಂತಹ ಅರ್ಥಹೀನ ದಿನಾಚರಣೆಗಳನ್ನು ಆಚರಿಸುತ್ತಿದೆ. ಇಂತಹ ಆಚರಣೆಗಳ ಮೂಲಕ ಯುವಕ ಯುವತಿಯರು ಮಾದಕ ವಸ್ತುಗಳ ಸೇವನೆ ಮಾಡುವುದು, ಪಬ್‌ಗೆ ಹೋಗಿ ಕುಣಿಯುವುದು, ಯುವತಿಯರನ್ನು ಪೀಡಿಸುವುದು, ಅತ್ಯಾಚಾರ, ಬಲಾತ್ಕಾರಗಳಂತಹ ಘಟನೆಗಳಾಗುತ್ತಿವೆ. ಯುವಕರನ್ನು ದಾರಿ ತಪ್ಪಿಸಲು ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ಯುವಕರು ವ್ಯಸನಿಗಳಾಗುತ್ತಿದ್ದಾರೆ, ಆತ್ಮಹತ್ಯೆ, ಅಪಘಾತಕ್ಕೀಡಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಯುವಜನತೆ ಅನೈತಿಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಪ್ರೀತಿ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಪ್ರೀತಿಯು ವ್ಯಾಪಕವಾಗಿದೆ. ಪ್ರೀತಿ ಭಗವಂತನ ಗುಣವಾಗಿದೆ ಎಂದು ಭಾವಿಸುತ್ತೇವೆ. ನದಿ, ಗಿಡ, ಮರ, ತಂದೆ, ತಾಯಿ, ಪಕ್ಷಿ, ಪ್ರಾಣಿ ಹೀಗೆ ಎಲ್ಲವನ್ನು ಸಮಾನವಾಗಿ ಪ್ರೀತಿಸುವ ಗುಣ ಭಾರತೀಯರಲ್ಲಿದೆ.

ಆರ್ಥಿಕ ಲಾಭ ಗಳಿಸುವ ಉದ್ಯೋಗಪತಿಗಳು

ಒಂದು ಅಂಕಿ ಅಂಶದ ಪ್ರಕಾರ ಅಮೆರಿಕಾದಲ್ಲಿ ವ್ಯಾಲೆಂಟೈನ್ ಡೇ 22 ಬಿಲಿಯ ಡಾಲರ್ ಉದ್ಯಮ. ಭಾರತದಲ್ಲಿ ಅಸೋಸಿಯೇಟೆಡ್ ಚೇಂಬರ್ಸ್‌ ಆಂಡ್‌ ಕಾಮರ್ಸ್‌ ಪ್ರಕಾರ ಕಳೆದ ಪ್ರೇಮಿಗಳ ದಿನಾಚರಣೆಯ ದಿನ 18,000 ಕೋಟಿ ರೂಪಾಯಿ ಮೌಲ್ಯದ ಹೂವು, ಉಡುಗೊರೆ ವಹಿವಾಟು ನಡೆದಿದೆ. ಈ ವರ್ಷ 22,000 ಕೋಟಿ ದಾಟಬಹುದು ಎಂದು ಹೇಳಿದೆ. ಕಳೆದ ವರ್ಷ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್‌ಡೀಲ್ ಡಾಟ್ ಕಾಮ್ ಭಾರತದಲ್ಲಿ ‘ವ್ಯಾಲೆಂಟೈನ್ ಡೇ’ಯ ಒಂದೇ ದಿನ ಒಂದುವರೆ ಲಕ್ಷ ಕಾಂಡೋಮ್ ಮಾರಾಟ ಮಾಡಿತ್ತು. ‘ವ್ಯಾಲೆಂಟೈನ್ ಡೇ’ಯಂದು ಗುಲಾಬಿ ಹೂವು ಮತ್ತು ಉಡುಗೊರೆಗಳಿಗಿಂತ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳು ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿರುವುದು ವರದಿಗಳಿಂದ ಸ್ಪಷ್ಟವಾಗಿದೆ.

ರಾಷ್ಟ್ರೀಯ ತನಿಖಾ ದಳದ ಪ್ರಕಾರ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ‌ ಮತ್ತು ಅದರ ಅಂಗ ಸಂಸ್ಥೆಗಳು ಈ ಪ್ರೇಮಿಗಳ ದಿನವನ್ನು ಲವ್‌ ಜಿಹಾದ್‌ಗೆ ಬಳಸುತ್ತಿವೆ ಎನ್ನುವ ಅಂಶವನ್ನು ಹೇಳಿದೆ. ಇಸ್ಲಾಮೇತರ ಯುವತಿಯರನ್ನು ಸುಳ್ಳು ಪ್ರೇಮ ಜಾಲದಲ್ಲಿ ಸಿಲುಕಿಸಿ, ಅವರಿಗೆ ವಿವಿಧ ಉಡುಗೊರೆ ನೀಡಿ ಲವ್ ಜಿಹಾದ್ ಮೂಲಕ ಅವರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತವೆ ಎನ್ನುವ ಅಂಶವನ್ನು ಹೇಳಿದೆ. ಪ್ರೇಮಿಗಳ ದಿನದಂದು ಅನೇಕ ಯುವತಿಯರ ಮೇಲೆ ಮೋಸ, ವಂಚನೆಯಿಂದ ಅತ್ಯಾಚಾರ ಮಾಡುವ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿದೆ. ಈ ಘಟನೆಗಳನ್ನು ನೋಡಿದಾಗ ಈ ಪ್ರೇಮಿಗಳ ದಿನ ಭಾರತದಲ್ಲಿ ಸ್ವೇಚ್ಛಾಚಾರ, ಅನೈತಿಕತೆ ಹೆಚ್ಚು ಮಾಡುವುದು ಕಂಡುಬಂದಿದೆ. ಕುಟುಂಬ ಮೌಲ್ಯ, ನೈತಿಕತೆಯನ್ನು ಸಂವರ್ಧಿಸಲು ಈ ಪ್ರೇಮಿಗಳ ದಿನವನ್ನು ಕೈಬಿಡಬೇಕಾಗಿದೆ.

ಶ್ರೇಷ್ಠ ಪರಂಪರೆ ಕಾಪಾಡೋಣ

ನಮ್ಮ ಸಾವಿರಾರು ವರ್ಷಗಳ ಶ್ರೇಷ್ಠ ಪರಂಪರೆಯನ್ನು ಮರೆಯುತ್ತಿದ್ದೇವೆ. ನಮ್ಮ ಆಚರಣೆಗಳ ಶಾಸ್ತ್ರವನ್ನು ಅರಿತುಕೊಂಡು ಅವುಗಳನ್ನು ಆಚರಣೆಗೆ ತಂದಲ್ಲಿ ಅವುಗಳಿಂದ ನಮ್ಮ ರಕ್ಷಣೆಯಾಗುವುದು. ಸನಾತನ ಧರ್ಮವು ಇಡೀ ವಿಶ್ವವೇ ನಮ್ಮ ಮನೆ ಎಂಬ ವಿಶಾಲ ಮನೋಭಾವದಿಂದ ಪೃಕೃತಿ, ಪ್ರಾಣಿ-ಪಕ್ಷಿಗಳಲ್ಲಿ ನಿರಪೇಕ್ಷ ಪ್ರೀತಿ ಮಾಡಲು ಕಲಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೇಳಿದ ಕುಂಕುಮ ಹಚ್ಚಿಕೊಳ್ಳುವುದು ಸ್ತ್ರೀ ಪುರುಷರಿಗೆ ಆರೋಗ್ಯಕರ. ಯುವಕರು ತಿಲಕ ಹಚ್ಚುವುದರಿಂದ ಶಿವನ ತತ್ತ್ವವನ್ನು ಪಡೆಯಬಹುದು. ಈ ರೀತಿ ಧರ್ಮದ ಆಚರಣೆಯಿಂದ ನಮ್ಮ, ಕುಟುಂಬ ಮತ್ತು ರಾಷ್ಟ್ರ ಹಾಗೂ ಧರ್ಮದ ರಕ್ಷಣೆಯಾಗುವುದು. ಅದಕ್ಕಾಗಿ ಇಂತಹ ನಾವು ವ್ಯಾಲೆಂಟೈನ್ ಡೇ ನಿಲ್ಲಿಸಿ ರಾಷ್ಟ್ರಪುರುಷರ ದಿನವನ್ನು ಆಚರಿಸೋಣ.

ಹುತಾತ್ಮ ವೀರ ಸೈನಿಕರಿಗೆ ಅಪಮಾನ

2019 ಫೆಬ್ರವರಿ 14ರಂದು ಪಾಕ್ ಪ್ರಚೋದಿತ ಭಯೋತ್ಪಾದಕರು ಕಾಶ್ಮೀರದ ಪುಲ್ವಾಮದಲ್ಲಿ ನಮ್ಮ ಭಾರತೀಯ ವೀರ ಸೈನಿಕರ ಮೇಲೆ ಆಕ್ರಮಣ ಮಾಡಿದರು. ಅದರಿಂದ 40 ಸಿಆರ್‌ಪಿಎಫ್ ಸೈನಿಕರು ಹುತಾತ್ಮರಾದರು. ಇದು ಭಾರತೀಯರಿಗೆ ಕಪ್ಪು ದಿನ. ಇಡೀ ದೇಶವು ಈ ದಿನ ಶೋಕಾಚರಣೆ ಮಾಡುವಾಗ, ನಾವು ಪ್ರೇಮಿಗಳ ದಿನ ಆಚರಿಸುವುದು ಹುತಾತ್ಮರಾದ ವೀರ ಸೈನಿಕರಿಗೆ ಮಾಡಿದ ಅಪಮಾನವಾಗಿದೆ.

(ಲೇಖಕರು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರರು)

ಇದನ್ನೂ ಓದಿ:Valentine’s Week 2023: ಇಂದಿನಿಂದ ಪ್ರತಿದಿನವೂ ಹಬ್ಬ: ಪ್ರೇಮಿಗಳ ಈ ವಾರವಿಡೀ ಪ್ರೀತಿ ಮಾಡಿ!

Exit mobile version