| ಸೂರಿ ಮಲ್ಲೇಶ್
ನೋಡಿ ನೋಡಿ ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲ
ಹಾಡಿನಲಿ ಹೇಳೋದಲ್ಲ ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ
— ಉಪೇಂದ್ರ
ಲವ್ವು ಅಂದ್ರೇನೆ ಹಂಗೆ ಗುರು ! ಲವ್ ಅಂದ್ರೆ ಇಷ್ಟೇ ಅಂತ ಯಾರಾದ್ರೂ ಹೇಳಿದ್ರೆ ಆಕಾಶ ಇಷ್ಟೇನಾ ಎಂಬ ಪ್ರಶ್ನೆ ಎದುರಾಗುತ್ತೆ. ಲವ್ ಅಷ್ಟೊಂದು ಅಂದ್ರೆ ಸಣ್ಣದೊಂದು ಭಾವವೇ ಪ್ರೇಮ ಎಂಬ ಉತ್ತರ ಸಿಗುತ್ತೆ. ಬಹುಶಃ ಯಾವ ಕಡೆಯಿಂದ ಹುಡುಕಿದ್ರೂ ಕೂಡ ಅಂಗುಲದ ಕಟ್ಟೆ ಕಟ್ಟಿಬಿಡುವ, ವ್ಯಾಖ್ಯಾನವೇ ಸಿಗದ ಭಾವವೇ ಪ್ರೀತಿ. ಈ ಪ್ರಪಂಚದಲ್ಲಿ ಹಣ, ಐಶ್ವರ್ಯ, ಅಧಿಕಾರಕ್ಕಿಂತ ಹೆಚ್ಚಿನ ಯುದ್ಧ ನಡೆದಿದ್ದೇ ಪ್ರೀತಿಗೋಸ್ಕರ. ಪ್ರೀತಿ ಎಂಬುದಕ್ಕೆ ಸಾಮ್ರಾಜ್ಯಗಳನ್ನೆ ಅಡವಿಟ್ಟರೂ ಅದೊಂದು ಭಾವ ಮಾತ್ರ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಪ್ರೀತ್ಸೋದೆ ಪ್ರೀತಿ ಅಂತ ಎಷ್ಟೇ ಸಲೀಸಾಗಿ ಹೇಳಿದರೂ ಅದೊಂದನ್ನು ಅಷ್ಟೇ ಧ್ಯಾನಸ್ಥರಾಗಿ ಪಾಲಿಸುವುದು ಸುಲಭವಲ್ಲ.
ಗಂಡು ಹೆಣ್ಣೆಂಬ ಎರಡು ಜೀವಗಳ ನಡುವೆ ಸಂಘಟಿಸುವ ಸುಂದರ ಭಾವದ ಹೆಸರು ಪ್ರೀತಿ. ಪ್ರೀತಿ ದೇಹದ ವಾಂಛೆಗಳನ್ನು ಮೀರಿದ್ದು. ಎರಡು ದೇಹಗಳು ಒಂದಾಗುವ ಕ್ಷಣ ಪ್ರೀತಿಯಲ್ಲ. ಎರಡು ಆತ್ಮ, ಎರಡು ಜೀವ, ಎರಡು ಜೀವನ ಒಂದಾಗುವ ಅಮೃತಕಾಲವೇ ಪ್ರೀತಿ. ಕೈ ತುತ್ತು ಮಾಡಿ ತಿನಿಸುವುದು, ಹೆಗಲ ಮೇಲೆ ಆರೈಕೆ ಮಾಡಿ ಸಂತೈಸುವುದು, ಸುತ್ತಲಿನ ಪ್ರಪಂಚ ಎದುರು ನಿಂತರೂ ಹಿಡಿದ ಕೈ ಬಿಡದಿರುವುದು, ಗುಡಿಯ ದೈವದ ಮುಂದೆ ಹಣೆಗೊಂದು ಕುಂಕುಮವಿಟ್ಟು ನನ್ನವರು ಎಂದು ಹಿಗ್ಗುವುದು, ಮಡಿಲು ನೀಡಿ ಲಾಲಿ ಹಾಡುವುದು, ಕಷ್ಟಕ್ಕೊಂದು ಸನಿಹ ನೀಡುವುದು, ಭಾವಕ್ಕೊಂದು ಬದುಕಾಗುವುದು, ಗೆಲುವಿನಲ್ಲಿ ಸಂಭ್ರಮಿಸುವುದು, ಸೋಲಲ್ಲಿ ಜೊತೆ ನಿಲ್ಲುವುದು, ಸಾಧನೆಗೆ ಮೆಟ್ಟಿಲಾಗುವುದು, ಜೀವಕ್ಕೆ ಹತ್ತಿರವಾಗುವುದು, ಕೆನ್ನೆಗೊಂದು ಮುತ್ತಿಟ್ಟು ಲವ್ ಯೂ ಚಿನ್ನಾ ಎಂದು ಉಸಿರಾಡುವುದೇ ಪ್ರೀತಿ.
ಪ್ರೀತಿ, ಪ್ರೇಮ ಎಂಬ ಎರಡಕ್ಷರವನು ಇಡಿಯ ಪ್ರಪಂಚದಲ್ಲಿ ಗೆದ್ದವರಿದ್ದಾರೆ, ಸೋತವರಿದ್ದಾರೆ, ಬಿದ್ದವರಿದ್ದಾರೆ, ಎದ್ದವರಿದ್ದಾರೆ ಆದರೆ ಅರಿತವರು ಮಾತ್ರ ಬೆರಳಣಿಕೆಯಷ್ಟು. ಪ್ರೀತಿ ಮನಸ್ಸಿನೊಳಗೆ ಸಿಲುಕಿದ ಭಾವ ಲಹರಿ. ಏನೂ ಅಲ್ಲದ ವ್ಯಕ್ತಿಯನ್ನು ಯಾವುದೋ ಸಾಧನೆಯೆಡೆಗೆ ಕರೆದೊಯ್ಯುವುದು ಪ್ರೀತಿ, ಮತ್ತು ಸಾಧಿಸಿ ಉತ್ತುಂಗದಲ್ಲಿದ್ದವನನ್ನು ಪ್ರಪಾತಕ್ಕೆ ಬಿದ್ದು ಕಣ್ಣೀರಾಗಿಸುವದು ಕಳೆದುಕೊಂಡ ಅದೇ ಪ್ರೀತಿ.
ಪ್ರೀತಿ, ಲವ್, ಪ್ಯಾರ್, ಇಷ್ಕ್, ಮೊಹಬ್ಬತ್, ಕಾದಲ್, ಪ್ರೇಮ ಹೀಗೆ ಅಸಂಖ್ಯಾತ ಭಾಷೆಯಲ್ಲಿ ಆ ಭಾವಕ್ಕೆ ಯಾವುದೇ ಹಣೆಪಟ್ಟಿ ಕಟ್ಟಿದರೂ ಕೂಡ ಅದು ಯಾವುದೇ ಮಿತಿಗೆ ಸಿಗದ ಭಾವನೆ. ಪಡೆದುಕೊಂಡ ಪ್ರೀತಿ ನೆಮ್ಮದಿಯ ನಿಟ್ಟುಸಿರು ಬಿಡುವ ಖುಷಿ, ಸಂಭ್ರಮವನ್ನು ನೀಡಿದರೆ ಕಳೆದುಕೊಂಡ ಪ್ರೀತಿ ನೋವಿನ ಯಾತನೆಯನ್ನೆ ನೀಡುತ್ತದೆ. ಆದರೆ ಅದೆಲ್ಲವನ್ನೂ ಮೀರಿ ಆ ಭಾವವನ್ನು ಅನುಭವಿಸುವುದೇ ಒಂದು ಅದ್ಭುತ. ಪ್ರೀತಿ ಅನುಭವಕ್ಕೆ ಸೀಮಿತವಾದುದು. ಪ್ರೀತಿಯನ್ನು ಅಕ್ಷರಗಳಲ್ಲಿ ಬರೆಯಲಾಗದು, ಪದಗಳಲ್ಲಿ ವರ್ಣಿಸಲಾಗದು. ಪ್ರೀತಿಯನ್ನು ಪ್ರೀತಿಸಬೇಕು.
ಪ್ರೀತಿ ಎಂಬುದು ಬದುಕನ್ನು ಮೀರಿದ ಕಾವ್ಯ, ಕವನ, ಕನಸು, ಒಡಲು, ಬದುಕು, ಬವಣೆ, ಜೀವ, ಜೀವನ, ಸುಖ, ದುಃಖ, ನೋವು, ನಲಿವು, ಯಾತನೆ ಎಲ್ಲವೂ ಅವರವರ ಅಂತರಂಗದ ಭಾವಕ್ಕೆ ಬಿಟ್ಟದ್ದು. ಗಂಡು ಹೆಣ್ಣೆಂಬ ಎರಡು ಜೀವಗಳಿಗೆ ನೋಡಿದೊಡನೆ ಆಗುವುದು ಆಕರ್ಷಣೆ ಹೆಚ್ಚೆಂದರೆ ಒಲವು. ಆದರೆ ಪ್ರೀತಿ ಬೇರೆಯದೇ ಹಂತದ್ದು. ಪ್ರೀತಿ ಹುಟ್ಟಲು ಕಾರಣ ಬೇಕಿಲ್ಲ, ಹಾಗಂತ ಕಾರಣವೇ ಇಲ್ಲದೆ ಪ್ರೀತಿ ಹುಟ್ಟಲ್ಲ.
ಇದನ್ನೂ ಓದಿ: Valentines week 2023: ಪ್ರೀತಿ ಎಂಬ ಮಾಯೆ: ಪ್ರೀತಿ ಕಲಿಸುವ ಐದು ಗುಣಗಳಿವು!
ಅವಳೆಂಬ ಅದ್ಭುತದ ಸೌಂದರ್ಯ, ಕಣ್ಣೀರಾಗಿಸುವ ಕರುಣೆ, ತುಂಬಿರುವ ಮಮಕಾರ, ನನ್ನೆಡೆಗಿನ ಒಲವು, ತುಟಿಯಂಚಿನ ಹುಸಿ ಕೋಪ, ಕೊಪ್ಪರಿಗೆ ತುಂಬುವ ಅವಳ ನಗು ಅವಳೆಡೆಗೆ ನನ್ನನ್ನು ಸೆಳೆದು ನಿಲ್ಲಿಸಿದೆ. ಅವನ ಆಳೆತ್ತರದ ಮೈಕಟ್ಟು, ಎದೆಬಿರಿವ ವಿಶಾಲತೆ, ಅಪ್ಪನಂತ ಗುಣ ಮಂತ್ರಮುಗ್ಧವಾಗಿಸಿದೆ. ಆದರೂ ಪ್ರೀತಿಗೆ ಇಷ್ಟು ಮಾತ್ರ ಸಾಲಲ್ಲ. ಅದು ಮತ್ತೇನನ್ನೋ ಕೇಳುತ್ತೆ, ಬೇಡುತ್ತೆ, ಅರಸುತ್ತೆ. ಪ್ರೀತಿಯಲ್ಲಿ ಮುಳುಗಿದ ಪ್ರತಿ ಪ್ರೇಮಿಯೂ ಈ ಭಾವವೊಂದು ಶಾಶ್ವತವಾಗಿ ಉಳಿಯಲಿ ಎಂದು ಮನಸ್ಸಲ್ಲೆ ಹರಕೆ ಹೊರುತ್ತಾನೆ. ಪ್ರೀತಿ ಕಳೆದುಹೋಗುವುದೋ ಎಂದು ಮನದಲ್ಲೆ ಮರುಗುತ್ತಾನೆ.
ಬಹುಶಃ ಎಷ್ಟೇ ಬರೆದರೂ ಅದು ಇನ್ನೂ ಪೀಠಿಕೆ ಎನಿಸುತ್ತದೆ. ಯಾಕೆಂದ್ರೆ ಪ್ರೀತಿಯ ಒಳಹೊಕ್ಕಲು ಸಂವತ್ಸರಗಳೇ ಬೇಕು. ಪ್ರೀತಿ ಎಂಬ ಒಂದು ಭಾವಕ್ಕೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಮಾಡಿಸುವ ಶಕ್ತಿಯಿದೆ. ಸೋತವನು ಗೆಲ್ಲಬಲ್ಲ, ಬಿದ್ದವನು ಏಳಬಲ್ಲ, ಸತ್ತಂತಿರುವವನು ಸಾಧಿಸಬಲ್ಲ, ಕ್ರೂರಿಯೊಬ್ಬ ಮಗುವಾಗಬಲ್ಲ. ಆ ಪ್ರೀತಿಯ ಪ್ರತಿ ಕ್ಷಣದಲ್ಲಿ, ಕಣದಲ್ಲಿ ಬದುಕಿ. ಪ್ರೀತಿಸುವವರನ್ನು ಕಳೆದುಕೊಳ್ಳುವಂತಾದರೂ ಪ್ರೀತಿ ಕಳೆದುಹೋಗದಿರಲಿ. ಕೋಟಿ ಬೆಲೆ ಬಾಳುವಂತದ್ದನ್ನು ಕೊಡಲಾಗದಿದ್ದರೂ ಬೆಲೆ ಕಟ್ಟಲಾಗದ ಪ್ರೀತಿ ಕೊಟ್ಟು ಕಾಪಾಡಿಕೊಳ್ಳಿ. ಪ್ರೀತಿಯನ್ನು ಪ್ರೀತ್ಸೋದೇ ಪ್ರೀತಿ.
ಇದನ್ನೂ ಓದಿ: Valentine’s Day 2023 : ವಾಲೈಂಟೈನ್ಸ್ ಡೇ ಸ್ಪೆಷಲ್ ರೋಸ್‌ಗಳು, ಇವುಗಳ ಸಂಕೇತಗಳೇನು?
ಎದೆಯಾಳದೊಳಗೊಂದು ಭಾವ ಉಕ್ಕಿ ಅಲೆಯಾಗಿ ದಡದ ತೀರಕ್ಕೊಂದು ಅಪ್ಪುಗೆ ನೀಡುತಿದೆ,
ಬಾನಂಗಳದಿ ಹಾರಾಡುತಿಹ ಗಾಳಿಪಟದ ಸೂತ್ರ ಕಂಗಳಲಿ ನೆಲೆ ನಿಂತಿದೆ,
ಕಾಲ ಅಂಗುಷ್ಟದಿಂದ ಹಿಡಿದು ಸಹಸ್ರಾರ ಚಕ್ರದವರೆಗೂ ಒಲವೆಂಬ ಬಂಧ ತುಂಬಿದೆ,
ದೇಹದೊಳಗಿನ ಕಣಕಣದ ಸ್ಪರ್ಶದಲಿ ಸಾನಿಧ್ಯವಿದೆ,
ಪ್ರೀತಿಯೆಂಬ ಭಾವಹೊಕ್ಕು ಸಾಕ್ಷಾತ್ಕಾರದೆಡೆಗೆ ಕರೆದೊಯ್ಯುತಿದೆ,
ಒಡಲು ತುಂಬಿ ಬದುಕ ಕಾಣುವ ಕನಸು ಕಟ್ಟಿದೆ
ಈ ಎಲ್ಲಾ ಭಾವದ, ಭಾವಚಿತ್ತದ, ಅಂತಃಸತ್ವದ ಶಕ್ತಿಯ ಹೆಸರೊಂದೆ ಪ್ರೇಮ…ಒಲವಿನ ಪ್ರೇಮ.. ಹೃದಯದ ಪ್ರೇಮ.
(ಲೇಖಕರು ವಿಸ್ತಾರ ನ್ಯೂಸ್ ವರದಿಗಾರ)