Site icon Vistara News

ವಿಸ್ತಾರ ಅಂಕಣ: ಮತ್ತೆ ಮತ್ತೆ ಹಳೆಯ ಸೂತ್ರಕ್ಕೇ ಜೋತುಬೀಳುವ ಕಾಂಗ್ರೆಸ್‌

ಭಾರತದಲ್ಲಿ ಪ್ರಜಾಪ್ರಭುತ್ವ (democracy) ವ್ಯವಸ್ಥೆ ಹೊಸದಲ್ಲ, ಅದರ ಈಗಿನ ಸ್ವರೂಪವಷ್ಟೆ ಹೊಸತು. ಅನಾದಿಕಾಲದಿಂದಲೂ ಭಾರತದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳು, ಪ್ರಜೆಗಳನ್ನು ಆಲಿಸುವ ವ್ಯವಸ್ಥೆ ಇದ್ದೇ ಇದೆ ಎನ್ನುವುದನ್ನು ಈ ಸರಣಿಯ ಮೊದಲ ಲೇಖನದಲ್ಲಿ ಚರ್ಚಿಸಿದೆವು. ಇಲ್ಲಿನ ಮುಸಲ್ಮಾನರ ಪೂರ್ವಜರೂ ಹಿಂದೂಗಳೇ ಆಗಿರುವುದರಿಂದ, ನೆಮ್ಮದಿಯ ಜೀವನಕ್ಕೆ ಮುಂದಾಗೋಣ ಎಂಬ ಆಲೋಚನೆ ಅವರಲ್ಲೂ ಬಂದಿತ್ತು. ಬಾಬರಿ ಕಟ್ಟಡವಿದ್ದ ಜಾಗದ ಮೇಲಿನ ಹಕ್ಕಿನ ವಾದವನ್ನು ಹಿಂದೂಗಳಿಗೆ ಬಿಟ್ಟುಕೊಡೋಣ ಎಂದು ಮುಸ್ಲಿಮರು ಆಲೋಚಿಸುತ್ತಿದ್ದರೂ, ಕಮ್ಯುನಿಸ್ಟ್‌ ಇತಿಹಾಸಕಾರರು ಅವರನ್ನು ಹೇಗೆ ದಾರಿ ತಪ್ಪಿಸಿದರು ಎನ್ನುವುದನ್ನು ಎರಡನೇ ಲೇಖನದಲ್ಲಿ ಚರ್ಚಿಸಿದೆವು. ಇದೆಲ್ಲದರ ನಡುವೆ, ಕಾಂಗ್ರೆಸ್‌ ಎಂಬ ಶತಮಾನ ದಾಟಿದ ಪಕ್ಷವೊಂದು ಹೇಗೆ ಸದಾ ಬಹುಸಂಖ್ಯಾತರ ಭಾವನೆಗಳಿಗೆ ವಿರುದ್ಧವಾದ ನಿಲುವುಗಳನ್ನೇ ತಳೆಯುತ್ತ ಬರುತ್ತಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಾವು ಆಗಮಿಸುವುದಿಲ್ಲ ಎಂದು ಕಾಂಗ್ರೆಸ್‌ ಹಾಗೂ ಐಎನ್‌ಡಿಐಎ ಮಿತ್ರಪಕ್ಷಗಳು ನಿರ್ಧಾರ ಮಾಡಿದವು. ಇದಕ್ಕೆ ಅವುಗಳು ಕೊಟ್ಟ ಕಾರಣವೇನು? ಬಾಲರಾಮ ಪ್ರಾಣಪ್ರತಿಷ್ಠೆಯು ಧಾರ್ಮಿಕ ಕಾರ್ಯಕ್ರಮವಲ್ಲ, ರಾಜಕೀಯ ಕಾರ್ಯಕ್ರಮ ಎಂಬುದಷ್ಟೆ. ಇಲ್ಲಿ ವಿಚಿತ್ರ ನೋಡಿ. ಅದೇ ದಿನ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಮನ ದೇವಾಲಯವೊಂದನ್ನು ಉದ್ಘಾಟನೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು (mamata banerjee) ಸೌಹಾರ್ದ ಯಾತ್ರೆ ನಡೆಸಿದರು. ಮೊದಲು ಕಾಳಿಘಾಟ್‌ನ ದೇವಾಲಯದಿಂದಲೇ ಯಾತ್ರೆ ಆರಂಭಿಸಿ ನಂತರ ಮಸೀದಿ, ಚರ್ಚ್‌ಗೂ ತೆರಳಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶ್ರೀರಾಮನ ಪುತ್ಥಳಿಯೊಂದನ್ನು ಲೋಕಾರ್ಪಣೆ ಮಾಡಿದರು. ಇಷ್ಟೇ ಅಲ್ಲ, ದಿಲ್ಲಿಯ ಪ್ರತಿ ವಾರ್ಡಿನಲ್ಲಿ ಸುಂದರ ಕಾಂಡ ಪಠಣವನ್ನೇ ಅವರು ನಡೆಸಿದರು.

ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ (CM Siddaramaiah) ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ʼನಾನೂ ಒಬ್ಬ ಹಿಂದೂʼ, ʼಜೈ ಶ್ರೀರಾಮ್‌ʼ ಎಂದು ಘೋಷಣೆ ಕೂಗಿದರು, ಸಭಿಕರಿಂದ ಕೂಗಿಸಿದರು !

ಇನ್ನೂ ಕಾಂಗ್ರೆಸ್‌ನ ರಾಹುಲ್‌ ಗಾಂಧಿಯವರು ತಾವೊಬ್ಬ ಜನಿವಾರಧಾರಿ ಬ್ರಾಹ್ಮಣ, ಕೌಲ್‌ ಬ್ರಾಹ್ಮಣ ಎಂದೆಲ್ಲ ಹೇಳಿದರು. ಇರಲಿ, ಯಾರೇ ಆಗಲಿ ತಾವು ಹುಟ್ಟಿದ ಊರು, ತಮ್ಮ ಜಾತಿ, ಗೋತ್ರವನ್ನು ಹೇಳಿಕೊಳ್ಳುವುದು ತೀರಾ ತಪ್ಪಲ್ಲ. ಇದರಾಚೆಗೂ ನಮಗೆ ಗೊತ್ತಿರಬೇಕಾದ ಸಂಗತಿ ಎಂದರೆ- ಜಾತಿ ಈ ನೆಲದ ವಾಸ್ತವ. “ಜಾತಿ ನಾಶವಾಗಬೇಕು, ನಾಶವಾಗಿದೆ,” ಎಂದೆಲ್ಲಾ ಬಯಸುವುದು ಅವಾಸ್ತವ‌. ಹಾಗೆ ನೋಡಿದರೆ, ಪರಸ್ಪರ ಜಾತಿಗಳಲ್ಲಿ ಭೇದವಿಲ್ಲದೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ರಾಷ್ಟ್ರೀಯವಾದಿಗಳು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರೀಯವಾದಿಗಳಿಗೆ ಸ್ಪಷ್ಟತೆ ಇದೆ. ಆದರೆ ಈ ಕಾಂಗ್ರೆಸಿಗರು ಹಾಗೂ ಅವರ ಮೆದುಳೇ ಆಗಿರುವ ಕಮ್ಯುನಿಸ್ಟರಿಗೆ ಈ ಸ್ಪಷ್ಟತೆ ಇಲ್ಲ. ಅವರಿನ್ನೂ ʼಜಾತಿ ವಿನಾಶʼದ ಅಸಾಧ್ಯತೆಯನ್ನು ತಲೆಗೆ ತುಂಬಿಕೊಂಡು, ಜಾತಿಯ ವಿರುದ್ಧ ಕಿಡಿಕಾರುತ್ತಲೆ ಇದ್ದಾರೆ.‌ ಇರಲಿ, ಇದೆಲ್ಲಾ ಅವರ ಇಷ್ಟಕಷ್ಟ. ಆದರೆ, ಹಿಂದೂ ಧರ್ಮದ ಕುರಿತ ಅವರ ಒಲವು-ನಿಲುವಿಗಳಲ್ಲಿ ಅಪಾರ ವೈರುಧ್ಯವೂ, ಸೋಗಲಾಡಿತನವೂ,, ದ್ವಂದ್ವವೂ ಇದೆ. ಹೇಗೆ ಗೊತ್ತೆ ?

ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಲೇ ಅದರ ಪದ್ಧತಿಯನ್ನು ಆಚರಣೆ ಮಾಡಲು ಕಾಂಗ್ರೆಸ್‌ ಹಾಗೂ ಇನ್ನಿತರೆ ಪಕ್ಷಗಳಿಗೆ ಅಧಿಕಾರವಿದೆಯಂತೆ. ಆದರೆ ಹಿಂದೂ ಧರ್ಮದ ವೈವಿಧ್ಯತೆಯ ಪರವಾಗಿರುವ ಬಿಜೆಪಿ ನಾಯಕರು ಮಾತ್ರ ದೇವಾಲಯಕ್ಕೆ ಹೋದರೆ, ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದರೆ ರಾಜಕೀಯವಾಗುವುದಂತೆ. ಇದೆಂತಹ ನ್ಯಾಯ?

ಹಿಂದೂಗಳ ಭಾವನೆಗೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳುವುದು ಕಾಂಗ್ರೆಸ್‌ಗೆ ಹೊಸದೇನೂ ಅಲ್ಲ. ಜವಾಹರಲಾಲ್‌ ನೆಹರೂ ಕಾಲದಿಂದಲೂ ಈ ನಿಲುವನ್ನು ಕಾಂಗ್ರೆಸ್‌ ಹೊಂದಿದೆ. ಗುಜರಾತ್‌ನಲ್ಲಿ ಸೋಮನಾಥ ಮಂದಿರ ಪುನರುತ್ಥಾನ ಮಾಡಬೇಕೆಂಬ ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಕೆ.ಎಂ. ಮುನ್ಷಿ ಹಾಗೂ ಬಾಬು ರಾಜೇಂದ್ರ ಪ್ರಸಾದರ ಪ್ರಸ್ತಾವನೆಯನ್ನು ಪ್ರಧಾನಿ ಜವಾಹರಲಾಲ್‌ ನೆಹರೂ ವಿರೋಧಿಸಿದರು. ರಾಷ್ಟ್ರಪತಿಯವರು ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಈ ದೇಶದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುತ್ತದೆ ಎಂಬುದು ಅವರ ನಿಲುವಾಗಿತ್ತು. ಏಳು ಬಾರಿ ದಾಳಿಕೋರರಿಂದ ನಾಶವಾಗಿದ್ದ ಸೋಮನಾಥ ಮಂದಿರವನ್ನು, ಮಹಾತ್ಮಾ ಗಾಂಧಿ ಸೂಚಿಸಿದ್ದಂತೆಯೇ ಸಾರ್ವಜನಿಕರ ಹಣದಿಂದಲೇ ಮರುನಿರ್ಮಾಣ ಮಾಡಬೇಕು ಎನ್ನುವುದು ಸರ್ದಾರ್‌ ಪಟೇಲರ ನಿಲುವಾಗಿತ್ತು. ಹಿಂದುಗಳ ಭಾವನೆಗೆ ಅನುಗುಣವಾಗಿ ಸೋಮನಾಥ ದೇವಾಲಯ ಪುನರುತ್ಥಾನ ಆಗಲೇಬೇಕೆಂದು ಬಯಸಿದ್ದ ಸರ್ದಾರ್‌ ಪಟೇಲರು 1950ರಲ್ಲಿ ನಿಧನರಾದರು. ಹಿಂದುತ್ವ ವಿರುದ್ಧದ ನಿಲುವನ್ನು ನೆಹರೂ ಮತ್ತಷ್ಟು ಗಟ್ಟಿಯಾಗಿಸಿಕೊಂಡರು.

ಈ ಸಮಯದಲ್ಲಿ ಸಚಿವರಾಗಿದ್ದ ಎನ್‌.ವಿ. ಗಾಡ್ಗೀಳ್‌ ಅವರು ತಮ್ಮ ಪುಸ್ತಕದಲ್ಲಿ ಈ ರೀತಿ ತಿಳಿಸಿದ್ದಾರೆ. “ಸರ್ಕಾರವು ಸಾವಿರಾರು ಮಸೀದಿ ಹಾಗೂ ಗುಮ್ಮಟಗಳ ನಿರ್ಮಾಣಕ್ಕೆ ಹಣ ನೀಡುತ್ತದೆ. ಹಿಂದು ದೇವಸ್ಥಾನದ ಮರುನಿರ್ಮಾಣಕ್ಕೆ ಹಣ ವ್ಯಯಿಸಿದರೆ ಏನೂ ತಪ್ಪಿಲ್ಲ. ಎಲ್ಲ ಆಚರಣೆಗಳನ್ನೂ ಸಮಾನವಾಗಿ ಕಾಣುವುದೇ ಜಾತ್ಯತೀತತೆ. ಈ ದೇಶದ ಬಹುಪಾಲು ಹಿಂದೂಗಳು ವಿಗ್ರಹಾರಾಧಕರೇ ವಿನಃ ನೆಹರೂ ರೀತಿ ಬುದ್ಧಿಜೀವಿಗಳಲ್ಲ ಎಂಬುದನ್ನು ತಿಳಿಸಿದೆ. ಆದರೆ ಸೋಮನಾಥ ಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ ವ್ಯಯಿಸಬಾರದು ಹಾಗೂ ರಾಷ್ಟ್ರಪತಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು ಎಂದು ನೆಹರೂ ಬಯಸಿದ್ದರು”.

ನೆಹರೂ ಅವರಿಗೆ ಒಂದು ಸುದೀರ್ಘ ಪತ್ರ ಬರೆದ ಕೆ.ಎಂ. ಮುನ್ಷಿ ಅವರು, ʼಸೋಮನಾಥ ಮಂದಿರ ನಿರ್ಮಾಣ ಮಾಡುವುದರಿಂದ ಈ ದೇಶದ ನಾಗರಿಕರ ಮನಸ್ಸು ಸಂತಸಗೊಳ್ಳುತ್ತದೆ. ನಾವು ಜಾರಿ ಮಾಡಿರುವ ಇತರೆ ಅನೇಕ ಯೋಜನೆಗಳಿಗಿಂತಲೂ ಈ ಕಾರ್ಯ ಹೆಚ್ಚು ಸಂತಸವನ್ನು ನೀಡುತ್ತದೆʼ ಎಂಬ ವಾಸ್ತಿಕ ನೆಲೆಗಟ್ಟಿನ ಮನವರಿಕೆ ಮಾಡುವ ಪ್ರಯತ್ನವನ್ನೂ ಮಾಡಿದರು.

ಕಾಂಗ್ರೆಸ್‌ ಕಿವಿಗೆ ಜನರ ಯಾವುದೇ ಧ್ವನಿ ಕಿವಿಗೆ ಬೀಳುತ್ತಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಕಾಂಗ್ರೆಸ್‌ ಹೊರತುಪಡಿಸಿದರೆ ಇಡೀ ದೇಶದಲ್ಲಿ ವ್ಯಾಪಿಸಿದ್ದ ಮತ್ತೊಂದು ಪಕ್ಷ ಇರಲಿಲ್ಲ. ಜನರು ಹೇಗೂ ತನಗೆ ಮತ ನೀಡುತ್ತಾರೆ, ಮತ ಗಳಿಸಿದ ನಂತರ ಜಾತ್ಯತೀತ ಸಿದ್ಧಾಂತವನ್ನು ಅನುಸರಿಸಿದರಾಯಿತು ಎಂದು ನೆಹರೂ ಬಯಸಿದ್ದರು, ಹಾಗೆಯೇ ನಡೆದುಕೊಂಡರು.

ಇದನ್ನೂ ಓದಿ: ವಿಸ್ತಾರ ಅಂಕಣ: ಮುಸ್ಲಿಮರನ್ನು ದಾರಿ ತಪ್ಪಿಸಿದ್ದು ʼಕಮ್ಯುನಿಸ್ಟ್ʼ ಇತಿಹಾಸಕಾರರು!

ಅದೇ ಮಾನಸಿಕತೆಯನ್ನು ಕಾಂಗ್ರೆಸ್‌ ಈಗಲೂ, ರಾಮಜನ್ಮಭೂಮಿ ವಿಚಾರದಲ್ಲೂ ಅನುಸರಿಸಿದೆ. ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಗೌರವಿಸದೆಯೂ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಅಹಂಕಾರ ಎದ್ದು ಕಾಣುತ್ತಿದೆ. ಹಿಂದೂಗಳಲ್ಲಿರುವ ಜಾತೀಯ ಭಾವನೆಯನ್ನು ಉದ್ರೇಕಿಸಿ ಅದರ ಲಾಭ ಪಡೆಯುವ ಹಳೆಯ ಚಾಳಿಯನ್ನೇ ಮುಂದುವರಿಸಿದೆ. ಆದರೆ ಅಂದು ಜವಾಹರಲಾಲ್‌ ನೆಹರೂ ಹಿಂದೂ ವಿರೋಧಿ ನಿಲುವು ತಳೆದಾಗ ಎದುರಾಳಿಯಾಗಿ ಯಾವ ಸದೃಢ ನಾಯಕನಾಗಲಿ, ಪಕ್ಷವಾಗಲಿ ಇರಲಿಲ್ಲ. ಆದರೆ ಇಂದು, ಸನಾತನ ಧರ್ಮಾಚರಣೆ ಕುರಿತು ಯಾವುದೇ ಅಳುಕಿಲ್ಲದೆ ಮಾತನಾಡುವ, ಯಾವ ಮುಚ್ಚುಮರೆಯಿಲ್ಲದೆ ಧಾರ್ಮಿಕ ಆಚರಣೆಯಲ್ಲಿ ತೊಡಗುವ ʼಹಿಂದೂ ಪ್ರಧಾನಿʼ ನರೇಂದ್ರ ಮೋದಿಯವರಿದ್ದಾರೆ. ಹಿಂದೂ ವಿರೋಧಿ ನಿಲುವನ್ನು ತಳೆದು ಜಯಿಸಿಕೊಳ್ಳಬಹುದು ಎಂಬ ಕಾಂಗ್ರೆಸ್‌ನ ಹಳೆಯ ಸೂತ್ರ ಈ ಬಾರಿ ಚುನಾವಣೆಯಲ್ಲಿ ಸೂತ್ರ ಹರಿದ ಗಾಳಿಪಟವಾಗುತ್ತದೆ ಎನ್ನುವುದೇ ಎದುರಿಗೆ ಕಾಣುತ್ತಿರುವ ಸತ್ಯ.

ಕಡೆಗೆ ನೆನಪಾದ ಪಿವಿಎನ್ ಮಾತು: ಈ ದೇಶದಲ್ಲಿ ಕಾಂಗ್ರೆಸ್ ಮನಸ್ಸು ಮಾಡಿದರೆ ಮುಂದೊಂದು ದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಬಹುದು. ಆದರೆ, ಕಾಂಗ್ರೆಸ್‌ಗೆ ರಾಮನನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರಾಮ ಈ ದೇಶದ ಕಣಕಣದಲ್ಲಿ ಬೆರೆತುಹೋಗಿದ್ದಾನೆ. ಪರಂಪರೆಯೇ ಆಗಿದ್ದಾನೆ. ಅಂಥ ರಾಮನ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತು ಸತ್ಯವಾಗಬೇಕೆ?

Exit mobile version