Site icon Vistara News

ವಿಸ್ತಾರ ಅಂಕಣ | ಪರಮ ಸಹಿಷ್ಣ ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !

bollywood culture

ಹಿಂದೂಗಳ ಮನನೋಯಿಸುವ ಮೂರ್ಖರು ಮತ್ತು ಬಾಲಿವುಡ್ ಅರಿಯಬೇಕಾಗಿರುವ ಸಂಗತಿ ಇದು

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವಿದ್ದೇವೆ. ಭಾರತವು ವಿದೇಶಿ ಆಡಳಿತದಿಂದ ಮುಕ್ತವಾಗಿ 75 ವರ್ಷಗಳು ಸಂದಿವೆ. ಈ ಏಳೂವರೆ ದಶಕದ ಅವಧಿಯಲ್ಲಿ ಭಾರತ ಗಣನೀಯ ಬದಲಾವಣೆ ಕಂಡಿದೆ. ಸ್ವಾತಂತ್ರ್ಯದ ಬಳಿಕ ಜನಿಸಿದ ವ್ಯಕ್ತಿಯೊಬ್ಬರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. 1975ರ ತುರ್ತುಪರಿಸ್ಥಿತಿ ಎಂಬುದು ಸ್ವಾತಂತ್ರ್ಯೋತ್ತರ ಭಾರತದ ಸಂಗ್ರಾಮವೂ ಹೌದು. ಆ ವರುಷದ ಬಳಿಕ ಜನಿಸಿದವರು ಭಾರತದ ಅನೇಕ ರಂಗಗಳ ನೇತೃತ್ವ ವಹಿಸಿದ್ದಾರೆ. ನಾಯಕತ್ವ ಎಂಬುದು ಮೂರು ತಲೆಮಾರುಗಳನ್ನು ದಾಟಿ, ನಾಲ್ಕನೇ ತಲೆಮಾರಿನ ಹೆಗಲೇರಿದೆ. ಈ ಎಲ್ಲ ಪೀಳಿಗೆಯ ಕಾಲಘಟ್ಟದಲ್ಲೂ ಭಾರತೀಯ ಮನಸ್ಸುಗಳು ಬದಲಾಗುತ್ತಿವೆ. ನಾನು ಭಾರತೀಯ, ನಾನು ಹಿಂದೂ, ನಾನು ಕನ್ನಡಿಗ, ನಾನು ಉತ್ತರ ಕನ್ನಡದವ- ಇಂಥದ್ದೊಂದು ತೆರನಾದ ಅಸ್ಮಿತೆಯೂ ಎಲ್ಲರನ್ನೂ ಆವರಿಸುತ್ತಿದೆ. ಇದು ತಪ್ಪಾ? ತಪ್ಪೇನೂ ಇಲ್ಲ. ಭಾರತೀಯ ಎಂಬ ದಾರದಲ್ಲಿ ಉಳಿದೆಲ್ಲಾ ಅಸ್ಮಿತೆಗಳು ದಾರದಲ್ಲಿ ಪೋಣಿಸಿದಂತೆ ಸಿಂಗಾರಗೊಂಡು ನಿಂತಿವೆ.

ಮೊದಲೆಲ್ಲಾ ಇಂಥಾ ಭಾವ ಇರಲಿಲ್ಲವೇ? ಇತ್ತು. ಆದರೆ. ಅದನ್ನು ಗಟ್ಟಿಯಾಗಿ ಅಭಿವ್ಯಕ್ತಗೊಳಿಸಬೇಕು ಎಂದು ಯಾರಿಗೂ ಅನಿಸುತ್ತಿರಲಿಲ್ಲ. ಅನಿಸಿದರೂ ಇಂಥದ್ದೊಂದು ಭಾವವೇ ಮಡಿವಂತಿಕೆಯ ಲಕ್ಷಣ ಎನ್ನುವ ಅಸಾಮಾನ್ಯರ ಅಬ್ಬರದಿಂದ ಎಲ್ಲರೂ ಸುಮ್ಮನಿದ್ದರೆ? ಇದ್ದರೂ ಇರಬಹುದು. ಎಲ್ಲ ಶ್ರೀ ಸಾಮಾನ್ಯರೂ ಈಗ ಒಂದರ್ಥದಲ್ಲಿ ಅಸಾಮಾನ್ಯರೇ. ಅವರು ಜಾಗೃತರಾಗಿದ್ದಾರೆ. ಈ ಜನರ ಅಸ್ಮಿತೆಯನ್ನು, ಅದರ ಯಾವುದೇ ಸ್ವರೂಪದಲ್ಲಿ ಕೆಣಕಿದರೆ ಅವರು ಸುಮ್ಮನೇ ಇರುವುದಿಲ್ಲ.

ಸ್ವಾತಂತ್ರ್ಯದ ಐದು ದಶಕದವರೆಗೂ ದಕ್ಷಿಣ ಭಾರತೀಯರನ್ನೇ ಮದ್ರಾಸಿಗರು ಎಂದೇ ಉತ್ತರದವರು ಕೀಳರಿಮೆಯಲ್ಲಿ ನೋಡುವ ಸ್ಥಿತಿ ಇತ್ತು. ಈಗ ಆ ರೀತಿ ಯೋಚಿಸಲೂ ಸಾಧ್ಯವಿಲ್ಲ. ಉತ್ತರದವರನ್ನೇ ದಕ್ಷಿಣ ಭಾರತೀಯರು ಲಘುವಾಗಿ ನೋಡಬಲ್ಲಷ್ಟು ಜಾಗೃತರಾಗಿದ್ದಾರೆ. ಇದ್ಯಾಕೆ ಹೀಗೆ? ಮೊದಲೆಲ್ಲಾ ದಕ್ಷಿಣದ ಮದ್ರಾಸಿಗರು ನಾವೇನೇ ಹೇಳಿದರು, ತೋರಿಸಿದರೂ ಸಹಿಸಿಕೊಳ್ಳುತ್ತಿದ್ದರು. ಸಹಿಷ್ಣುಗಳಾಗಿದ್ದರು. ಈಗ ಎಲ್ಲದರಲ್ಲೂ ತಪ್ಪು ಹುಡುಕುತ್ತಾರಲ್ಲ. ಅಸಹಿಷ್ಣರಾಗಿದ್ದಾರಲ್ಲ ಎಂದು ಉತ್ತರದವರು ಮೂಗು ಮುರಿಯಬಹುದು. ಆದರೆ, ಪ್ರಶ್ನೆ ಸಹಿಷ್ಣು-ಅಸಹಿಷ್ಣತೆಯದ್ದಲ್ಲ. ಜಾಗೃತಿಯದ್ದು.

ಭಾರತೀಯರ ಗುಣಧರ್ಮ, ಸ್ವಭಾವ ಜಾಯಮಾನಗಳು ಆಳದಲ್ಲಿ ಬದಲಾಗಿಲ್ಲ. ಆಲೋಚನಾ ಕ್ರಮವೂ ಬದಲಾಗಿಲ್ಲ. ಆದರೆ ಅವರು ಜಾಗೃತರಾಗಿದ್ದಾರೆ!

ಬಾಲಿವುಡ್ ಸಿನಿಮಾಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗೆ ಇಷ್ಟೊಂದು ದೀರ್ಘ ಪೀಠಿಕೆ ಹಾಕಿದೆ. ಅದರ ಪ್ರವೇಶ ಮಾಡುವ ಮುನ್ನ, ಸ್ವಾತಂತ್ರ್ಯ ಪಡೆದ ಹೊತ್ತಲ್ಲಿ ಭಾರತೀಯ ಮನಸ್ಸುಗಳು ಹೇಗಿದ್ದವು ಎಂಬುದನ್ನು ಅರಿಯೋಣ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಜತೆಗೆ ದೇಶ ತುಂಡಾಯಿತು. ಸಾವಿರ ವರ್ಷದ ಗುಲಾಮಿತನದಿಂದ ದೇಶ ಹೊರಬಂತು ಎನ್ನುತ್ತಿರುವಾಗಲೇ, ಅದು ಎರಡು ಭಾಗವಾಯಿತು. ಅಲ್ಲಿಯವರೆಗೆ ನಮ್ಮದೇ ದೇಶದವರಾಗಿದ್ದ, ನಮ್ಮದೇ ನೆರೆಹೊರೆಯವರಾಗಿದ್ದವರು ಶತ್ರುಗಳಾದರು. ಹೊಸದಾಗಿ ಸೃಷ್ಟಿಯಾದ ಪಾಕಿಸ್ತಾನದಿಂದ, ಭಾರತಕ್ಕೆ ರಾಶಿ ರಾಶಿ ಹೆಣಗಳು ಬಂದಿಳಿದವು. ಈ ಹಿಂಸೆಯಿಂದಾಗಿ ಮುಸ್ಲಿಮರಿಗೆ ಪಾಕಿಸ್ತಾನ ಎಂಬ ಮತೀಯ ದೇಶ ಸಿಕ್ಕಿತು. ಆದರೆ ಭಾರತ ಮಾತ್ರ ಬಹುಸಂಖ್ಯಾತ ಹಿಂದೂಗಳನ್ನು ಒಳಗೊಂಡ ಬಹುತ್ವದ ರಾಷ್ಟ್ರವಾಗಿ ಮುಂದುವರಿಯಿತು. ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಸೇರಿದಂತೆ ಎಲ್ಲರ ನಾಡಾಯಿತು. ಇದು ಹೆಚ್ಚುಗಾರಿಕೆ ಏನಲ್ಲ. ಸಾವಿರಾರು ವರ್ಷಗಳಿಂದ ಭಾರತ, ಅದರಲ್ಲಿಯೂ ವಿಶೇಷವಾಗಿ ಹಿಂದೂಗಳು ಇದ್ದದ್ದೇ ಹಾಗೆ. ಬಹುತ್ವ ಅವರ ರಕ್ತದಲ್ಲಿತ್ತು. ಆದರೂ ವಿಭಜನೆ ಕಾಲದ ಹಿಂದೂಗಳ ಮಾರಣಹೋಮ ಮಾತ್ರ ಕೆಲವರಲ್ಲಿಯಾದರೂ ಇನ್ಯಾವತ್ತೂ ಭಾರತದಲ್ಲಿ ಹಿಂದೂ-ಮುಸ್ಲಿಮರು ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಮೂಡಿಸಿತು.

ಹಿಂದೂ, ಮುಸ್ಲಿಂ- ಇಬ್ಬರ ಸಂಸ್ಕೃತಿ ಬೇರೆ, ಆಚಾರ, ವಿಚಾರ ಬೇರೆ. ಈಗಷ್ಟೆ ವಿಭಜನೆಯೂ ಆಗಿರುವುದರಿಂದ ಪರಸ್ಪರರು ಕಚ್ಚಾಡುತ್ತಾರೆ. ದೇಶದಲ್ಲಿ ಅಶಾಂತಿ ಮೂಡುತ್ತದೆ ಎಂಬ ಆತಂಕವಿತ್ತು. ಆದರೆ ಆ ಎಲ್ಲ ಅನುಮಾನ, ಆತಂಕಗಳನ್ನೂ ಭಾರತ ಸುಳ್ಳಾಗಿಸಿತು. ಇದಕ್ಕೆ ಕಾರಣ ಇಲ್ಲಿನ ಹಿಂದುಗಳು. ಅದೇಕೆ ಮುಸ್ಲಿಮರಲ್ಲ? ಅದೇಕೆ ಕ್ರೈಸ್ತರಲ್ಲ? ಎಂದು ಯಾರಾದರೂ ಕೇಳಬಹುದು. ಸಿಂಧು ನದಿಯಿಂದ ಈ ಭಾಗದಲ್ಲಿ ನೆಲೆಸಿರುವ ಜನಾಂಗವನ್ನು ವಿದೇಶಿಗರು ಹಿಂದು ಎಂದು ಕರೆದರು. ಅವರು ಹಿಂದುಗಳು ಎಂದು ಹೆಸರಿಟ್ಟರು ಎಂದು ಕರೆದಾಕ್ಷಣ ಅಲ್ಲಿವರೆಗೆ ಹಿಂದು ಧರ್ಮವೇ ಇರಲಿಲ್ಲ ಎಂದು ವಾದಿಸುವ ಮೂರ್ಖರಿಗೆ ಉತ್ತರಿಸುವ ಸಮಯ ಇದಲ್ಲ. ಆ ವಿಷಯ ಈಗ ಬೇಡ. ಆದರೆ ಅದಕ್ಕೂ ಮುನ್ನವೇ ಇಲ್ಲೊಂದು ಹಿಂದೂಗಳ ನಾಗರಿಕತೆ ನೆಲೆಗೊಂಡಿತ್ತು. ಅದರ ಮುಖ್ಯ ಗುಣಲಕ್ಷಣ ಎಂದರೆ ವೈವಿಧ್ಯತೆ ಮತ್ತು ಬಹುತ್ವವೇ ಆಗಿತ್ತು. ಒಂದು ದೇವರನ್ನು ಇಲ್ಲಿಯ ಜನರು ಪೂಜಿಸುತ್ತಿರಲಿಲ್ಲ. ಒಂದು ಪ್ರದೇಶದ ಜನರೂ ಹತ್ತಾರು ದೇವರುಗಳನ್ನು ಆರಾಧಿಸುತ್ತಿದ್ದರು. ಒಂದೇ ಊರಿನ, ಒಂದೇ ಮನೆಯ ಸದಸ್ಯರಿಗೂ ತಮ್ಮದೇ ʼಪರ್ಸನಲ್ ಗಾಡ್ʼ ಇದ್ದರು. ಅಣ್ಣನಿಗೆ ಶಿವ ಇಷ್ಟವಾದರೆ ತಮ್ಮನಿಗೆ ವಿಷ್ಣು ಪ್ರಿಯ. ಹಾಗೆಂದು ಈ ವಿಚಾರಕ್ಕೆ ಅವರಾರೂ ಕಚ್ಚಾಡುತ್ತಿರಲಿಲ್ಲ. ದೇವರುಗಳ ಜತೆಗೆ ಭಾರತದ ನೆಲದಲ್ಲಿಯೇ ಬೌದ್ಧ, ಜೈನ ಮತಗಳೂ ಉದಯವಾದವು, ಬೆಳೆದವು. ಅವುಗಳನ್ನೂ ಇಲ್ಲಿನ ನಾಗರಿಕತೆ ಅಪ್ಪಿಕೊಂಡಿತು. ಹಾಗಾಗಿ ಹಿಂದುಗಳಿಗೆ ಬಹುದೇವೋಪಾಸನೆಯ, ಬಹು ನಂಬಿಕೆಯ ಜಗತ್ತಿನಲ್ಲಿ ಪರಸ್ಪರರನ್ನು ವಿರೋಧಿಸದೆ ಜೀವಿಸುವುದು ರಕ್ತಗತವಾಗಿ ಬಂದಿದೆ.

ಇಸ್ಲಾಮಿಕ್ ಆಕ್ರಮಣಕಾರರು ದಂಡೆತ್ತಿ ಬಂದಾಗ, ಬ್ರಿಟಿಷರು ಅನ್ಯಾಯ ಮಾಡಿದಾಗ ಅವರ ವಿರುದ್ಧ ವೀರಾವೇಶದಿಂದ ಹೋರಾಡಿದ ಹಿಂದುಗಳು, ಎಂದಿಗೂ ಇಸ್ಲಾಂ ಮತವನ್ನಾಗಲಿ, ಕ್ರೈಸ್ತ ಮತವನ್ನಾಗಲಿ ವಿರೋಧಿಸಲಿಲ್ಲ. ದೇವರ ಬಳಿ ಸಾಗಲು ಇದೂ ಒಂದು ಮಾರ್ಗ, ಇಷ್ಟವಿದ್ದವರು ಅನುಸರಿಸಿಕೊಳ್ಳುತ್ತಾರೆ ಎಂದು ಸುಮ್ಮನಿದ್ದರು. ಸ್ವಾತಂತ್ರ್ಯದ ಬಳಿಕವೂ ಈ ದೇಶವನ್ನು ಬಿಗಿಯಾಗಿ ಹಿಡಿದಿಟ್ಟಿರುವುದು ಇದೇ ʼಹಿಂದುʼ ಭಾವನೆ. ಇದರರ್ಥ ಇಸ್ಲಾಂ ಆಚರಣೆ ಮಾಡುವವರಾಗಲಿ, ಕ್ರೈಸ್ತ ಮತದವರಾಗಲಿ ಕೆಟ್ಟವರು ಎಂದಲ್ಲ. ಆ ಮತಗಳ ಮೂಲ ನಂಬಿಕೆಯೇ ಏಕದೇವೋಪಾಸನೆ. ಇನ್ನೊಂದು ಮಾರ್ಗವನ್ನು ಒಪ್ಪುವುದಿಲ್ಲ ಎಂದು ಘಂಟಾಘೋಷವಾಗಿ ಒಪ್ಪಿಕೊಳ್ಳುತ್ತವೆ. ಇದು ವಾಸ್ತವ ಸಂಗತಿಯೇ ಹೊರತು ಯಾರ ವಿರುದ್ಧದ ದ್ವೇಷದ ಮಾತಲ್ಲ.

ಇಂತಹ ಹಿಂದೂ ಸಂಸ್ಕೃತಿಯನ್ನೇ ಹೀಯಾಳಿಸುವ ಕೆಟ್ಟ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಬಾಲಿವುಡ್ ಎಂದು ಕರೆಯಲಾಗುವ ಹಿಂದಿ ಸಿನಿಮಾ ಜಗತ್ತು ತನ್ನನ್ನು ತಾನು ಒಂದು ರಿಲಿಜನ್ ಎಂದು ಭಾವಿಸಿಕೊಂಡಿದೆ. ತಾನು ನಡೆದದ್ದೇ ಮಾರ್ಗ ಎನ್ನುವಂತೆ. ತನ್ನ ಸಿನಿಮಾ ಗೆಲ್ಲಬೇಕೆಂದರೆ ಯಾವುದೇ ಟ್ರಿಕ್ ಮಾಡಬಹುದು, ಯಾರನ್ನು ಬೇಕಾದರೂ ಕೆರಳಿಸಬಹುದು ಎನ್ನುವುದು ಅದಕ್ಕಿರುವ ದಾರ್ಷ್ಟ್ಯ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಬಾಲಿವುಡ್‌ನ ಬೌದ್ಧಿಕ ದಾರಿದ್ರ್ಯಕ್ಕೆ ದಾರ್ಷ್ಟ್ಯದ ಕಿರೀಟ

ಇತ್ತೀಚಿನ ಉದಾಹರಣೆಯಾಗಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಹಾಡೊಂದು ವಿವಾದಕ್ಕೀಡಾಗಿದೆ. ಹಿಂದುಗಳು ಪವಿತ್ರ ಎಂದು ಭಾವಿಸುವ ಕೇಸರಿ ಬಣ್ಣವನ್ನು ಅಪಹಾಸ್ಯ ಮಾಡಲಾಗಿದೆ ಎಂಬುದು ಕೆಲವು ಹಿಂದೂಗಳ ಸಿಟ್ಟು. ಇಂತಹ ಮಾತನ್ನು ಆಡಿದ ಕೂಡಲೆ ಬಾಲಿವುಡ್ ಎನ್ನುವ ಜಗತ್ತು ಅಸಹಿಷ್ಣುತೆ ಎಂಬ ಬೊಬ್ಬೆ ಹೊಡೆಯುತ್ತದೆ. ಭಾರತದಲ್ಲಿ ಸಮಾಜ ಇನ್ನೂ ಸಂಪ್ರದಾಯವಾದಿಯಾಗಿದೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ, ಮುಕ್ತ ಸಮಾಜ ನಿರ್ಮಾಣ ಮಾಡಬೇಕು, ಸಮಾಜ ಸುಧಾರಣೆ ಆಗಬೇಕು ಎನ್ನುವಂತಹ ಉಪದೇಶಗಳು ಹೊರಬರುತ್ತವೆ. ಇಲ್ಲಿಯೇ ಆಧುನಿಕ ಎನಿಸಿಕೊಂಡವರು ಎಡವುತ್ತಿರುವುದು.

ಹಿಂದೂಗಳು ಸಾಂಪ್ರದಾಯಿಕವಾಗಿಲ್ಲ. ಅವರು ಆಧುನಿಕರೇ ಆಗಿದ್ದಾರೆ. ಆದರೆ, ಅವರೊಳಗಿನ ಅಸ್ಮಿತೆ ಎಚ್ಚರಗೊಂಡಿದೆ. ಅವರಿಗೆ ಧರ್ಮ, ಸಂಪ್ರದಾಯ, ಆಚಾರ, ವಿಚಾರ, ಆಧುನಿಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ- ಎಲ್ಲದರ ಅರಿವಿದೆ. ಜತೆಗೆ, ಇದೆಲ್ಲವನ್ನೂ ಯಾರು ಹೇಗೆ ನೋಡುತ್ತಾರೆ, ಬಳಸಿಕೊಳ್ಳುತ್ತಾರೆ ಎಂಬ ಎಚ್ಚರಿಕೆಯೂ ಮೂಡಿದೆ.

ಹಾಗೆ ನೋಡಿದರೆ, ಭಾರತೀಯ ಸಮಾಜ ಎಂದಿಗೂ ಸುಧಾರಣೆಗೆ ಬೆನ್ನು ತೋರಿಸಿಲ್ಲ. ಹಿಂದು ಸಮಾಜದಷ್ಟು ಸುಧಾರಣೆಗಳನ್ನು ಕಂಡಿರುವ, ಈಗಲೂ ಕಾಣುತ್ತಿರುವ ವಿಶ್ವದ ಇನ್ನೊಂದು ಮತ, ಸಂಪ್ರದಾಯವನ್ನು ಯಾರಾದರೂ ತೋರಿಸಬಹುದೇ? ಸಾಧ್ಯವಿಲ್ಲ. ಆದರೆ ಸುಧಾರಣೆ ಎನ್ನುವುದು ಒಂದು ಪ್ರಕ್ರಿಯೆಯಾಗಿದ್ದು, ಅದಕ್ಕೆ ಮನಸ್ಸುಗಳನ್ನು ಸಜ್ಜುಗೊಳಿಸಬೇಕಾಗುತ್ತದೆ. ಸುಧಾರಣೆಯ ಕೂಗೆಬ್ಬಿಸುವವರ ಉದ್ದೇಶವನ್ನು ಸಮಾಜ ಮೊದಲಿಗೆ ಒರೆಗೆ ಹಚ್ಚುತ್ತದೆ.

ಕೇರಳದಲ್ಲಿ ಅಸ್ಪೃಶ್ಯತೆ ಆಚರಣೆಯ ಪರಮಾವಧಿಯನ್ನು ಕಂಡ ಸ್ವಾಮಿ ವಿವೇಕಾನಂದರು, ಇದೊಂದು ಹುಚ್ಚರ ಸಂತೆ ಎಂದರು. ಯಾರಾದರೂ ಸ್ವಾಮಿ ವಿವೇಕಾನಂದರನ್ನು ವಿರೋಧಿಸಿದರ? ಇಲ್ಲವಲ್ಲ? ಸುಧಾರಣೆ ಮಾಡಬೇಕೆಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ಆ ಮೌಲ್ಯವನ್ನು ಅಳವಡಿಸಿಕೊಂಡಿದ್ದಾನೆಯೇ ಎನ್ನುವುದನ್ನು ನೋಡುತ್ತದೆ. ಮಾತು ಹಾಗೂ ಕೃತಿಯಲ್ಲಿ ಅಂತರ ಇಲ್ಲವೇ ಎಂದು ಪರೀಕ್ಷಿಸುತ್ತದೆ. ಈತ ತನ್ನ ಒಳಿತಿಗಾಗಿ ಈ ಬದಲಾವಣೆಯನ್ನು ಸೂಚಿಸುತ್ತಿದ್ದಾನೆಯೇ ಅಥವಾ ಅವನತಿಗಾಗಿಯೇ ಎಂದು ಖಾತ್ರಿಪಡಿಸಿಕೊಂಡ ನಂತರವಷ್ಟೇ ಮುಂದುವರಿಯುತ್ತದೆ. ಇಂದು ಬಾಲಿವುಡ್ ಎಂಬ ಸಿನಿ ಜಗತ್ತು ಈ ವಿಚಾರವನ್ನು ಮರೆಯುತ್ತಿದೆ. ತನ್ನ ವೈಯಕ್ತಿಕ ಜೀವನದಲ್ಲಿ ಎಷ್ಟೇ ಅನೈತಿಕತೆ, ಕಾನೂನು ಬಾಹಿರ ಚಟುವಟಿಕೆಯನ್ನು ನಡೆಸಿದರೂ ಸಿನಿಮಾ ಪರದೆಯ ಮೇಲೆ ಉಪದೇಶ ಮಾಡಬಹುದು ಎಂದು ಭ್ರಮಿಸಿದೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್‌ ಕುರಿತೇ ಆಗಿರಬೇಕು ಎನ್ನಿಸುವಂತಿದೆ!

ಬಾಲಿವುಡ್‌ನಲ್ಲಿರುವ ಅದೆಷ್ಟೋ ಜನರು ಇಂದು ಪ್ರಾಣಿಗಳಿಗೂ ಕಡೆಯಾದ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ, ಮಾದಕ ವಸ್ತು ಸೇವನೆಯಂತಹ ಕಾನೂನು ಬಾಹಿರ ಚಟುವಟಿಕೆಯನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆ, ಸಿನಿಮಾ ಗೆಲ್ಲಬೇಕೆಂದರೆ ಮದುವೆಯಾಗುತ್ತಾರೆ, ನಂತರ ವಿಚ್ಛೇದನ ನೀಡುತ್ತಾರೆ. ದೇಶಕ್ಕೆ ಕಟ್ಟಬೇಕಾದ ತೆರಿಗೆ ಹಣವನ್ನು ಉಳಿಸಲು ಇದ್ದಕ್ಕಿದ್ದಂತೆ ರೈತರಾಗುತ್ತಾರೆ. ಇವೆಲ್ಲವನ್ನೂ ದೇಶದ ಜನರು ನೋಡಿದರೂ ನೋಡದಂತೆ ಇರಬೇಕು ಎಂದು ಭಾವಿಸುತ್ತಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಿನಿಮೋತ್ಸವದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸಹ ಈ ಅಸಹಿಷ್ಣುತೆಯ ರೈಲನ್ನು ಏರಿದ್ದಾರೆ. ಹಾಗಾದರೆ ಅದೇ ಪಶ್ಚಿಮ ಬಂಗಾಳದಲ್ಲಿದ್ದ ಸರ್ಕಾರ, ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ಆಶ್ರಯ ನೀಡಲು ನಿರಾಕರಿಸಿದ್ದನ್ನು ಏಕೆ ಪ್ರಶ್ನೆ ಮಾಡಲಿಲ್ಲ? ಭಾರತವೇ ತನ್ನ ಮನೆ, ನನ್ನ ಆತ್ಮ ಭಾರತದಲ್ಲಿಯೇ ಇರುತ್ತದೆ ಎನ್ನುತ್ತ ಇಲ್ಲಿ ಆಶ್ರಯಕ್ಕೆ ಬೇಡಿದರೂ ನಿರಾಕರಿಸಿ ಆಕೆಯ ಮೇಲೆ ದಾಳಿಗಳು ನಡೆದರೂ ರಕ್ಷಣೆ ನೀಡದೆ ವಿದೇಶಕ್ಕೆ ಅಟ್ಟಿದಾಗ ಅಸಹಿಷ್ಣುತೆ ಎಲ್ಲಿತ್ತು?

ಸಲ್ಮಾನ್ ರಶ್ದಿ ಎಂಬ ಲೇಖಕ ಬರೆದ ಕೃತಿಗಾಗಿ ಆತ ಅನುಭವಿಸುತ್ತಿರುವ ಚಿತ್ರಹಿಂಸೆ, ಜೀವಬೆದರಿಕೆಗಳನ್ನು ಏಕೆ ಪ್ರಶ್ನಿಸಲಿಲ್ಲ? ಕೇರಳದಲ್ಲಿ ಒಂದು ಕಾಲೇಜು ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ್ದರಲ್ಲಿನ ಸಾಲನ್ನು ಉಲ್ಲೇಖಿಸಿದ್ದಕ್ಕೆ 2010ರಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್‌ರ ಬಲಗೈಯನ್ನೇ ತುಂಡರಿಸಿದಾಗ ಎಲ್ಲಿತ್ತು ಅಭಿವ್ಯಕ್ತಿ ಸ್ವಾತಂತ್ರ್ಯ? ಶ್ರೀ ಸಾಮಾನ್ಯರು ಇದೆಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಹಿಂದೂಗಳು ಅಸಹಿಷ್ಣು ಎಂಬುವವರ ಇಬ್ಬಂದಿತನಕ್ಕೆ ಕಣ್ಣಾಗಿದ್ದಾರೆ.

ಇದರ ಬೆನ್ನಲ್ಲಿಯೇ ಕೆಲವರು ಇನ್ನೊಂದು ಪ್ರಶ್ನೆ ಕೇಳುತ್ತಾರೆ. ಹಿಂದೆಯೂ ಸಾಕಷ್ಟು ಸಿನಿಮಾಗಳು ಹಿಂದು ಭಾವನೆಗಳನ್ನು ನೋಯಿಸುವ ಕೆಲಸ ಮಾಡುತ್ತಿದ್ದವು. ಆಗೆಲ್ಲಾ ಹಿಂದೂಗಳು ಕೇಳುತ್ತಿಲಿಲ್ಲ. ಪರಮ ಸಹಿಷ್ಣುರಾಗಿದ್ದರು ಎಂಬುದು ಇಂಥವರ ವಾದ. ಆದರೆ, ಇದು ನಾನು ಮೊದಲೇ ಹೇಳಿದಂತೆ ಸಹಿಷ್ಣುತೆಯ ಪ್ರಶ್ನೆಯಲ್ಲ. ಸುಮಾರು ಮೂರ್ನಾಲ್ಕು ದಶಕದ ಹಿಂದೆ ಹಿಂದು ಸಮಾಜ ತನ್ನ ನಿದ್ರಾ ಸ್ಥಿತಿಯಲ್ಲೇ ಇತ್ತು. ನಿರಂತರ ತನ್ನದೇ ನೆಲದಲ್ಲಿ ಆಗುತ್ತಿರುವ ಅವಮಾನಗಳನ್ನು ನೋಡುತ್ತಾ ಪಾಠ ಕಲಿಯಿತು. ಸುಖಾ ಸುಮ್ಮನೆ, ದುರುದ್ದೇಶಪೂರ್ವಕವಾಗಿ ಯಾರಾದರೂ ತನ್ನನ್ನು ಕೆಣಕಿದರೆ ಗುಟುರು ಹಾಕಲು ಬರುತ್ತದೆ ಎಂದು ತೋರಿಸಿತು. ಈಗ ಹಿಂದು ಸಮಾಜ ಸಾಕಷ್ಟು ಜಾಗೃತವಾಗಿದೆ. ತನ್ನ ಮೇಲಿನ ಅಪಹಾಸ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸಿದ ಕೂಡಲೆ ಬಾಲಿವುಡ್ ಜಗತ್ತಿಗೆ ಅಸಹಿಷ್ಣುತೆ ಕಾಡುತ್ತಿದೆ. ಹಾಗಾದರೆ ಒಂದು ಸಮಾಜ, ಸಮುದಾಯ ತನ್ನ ನೋವನ್ನು ವ್ಯಕ್ತಪಡಿಸದೇ ಅದುಮಿಟ್ಟುಕೊಳ್ಳುವುದು ಸಹಿಷ್ಣುತೆಯ ಪ್ರತೀಕವೇ ಎಂದು ಪ್ರಶ್ನಿಸಬೇಕಿದೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ನೈತಿಕತೆ ಮೆರೆಯಲು ಅಂದು 6 ಶಾಸಕರನ್ನು ಉಚ್ಚಾಟಿಸಿದ ಪಕ್ಷಕ್ಕೆ ಇಂದು ರೌಡಿಗಳ ಅವಶ್ಯಕತೆ ಏಕೆ ಬಂತು?

ಇಷ್ಟೆಲ್ಲ ಆದರೂ ಹೆಚ್ಚೆಂದರೆ ಸಿನಿಮಾ ಬಹಿಷ್ಕರಿಸುವ, ಸಿನಿಮಾಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ, ಸರ್ಕಾರದ ಮೇಲೆ ಒತ್ತಡ ಹೇರಿ ಬಿಡುಗಡೆಯಾಗದಂತೆ ತಡೆಯುವ ಕೆಲಸವನ್ನು ಮಾತ್ರವೇ ಹಿಂದು ಸಮಾಜ ಮಾಡುತ್ತಿದೆ. ಅದು ಎಂದಿಗೂ ತಲೆ ಕಡಿಯುವ, ರಕ್ತ ಹರಿಸುವ ಮಾರ್ಗವನ್ನು ತುಳಿದಿಲ್ಲ. ಸಂವಿಧಾನಾತ್ಮಕವಾಗಿ ದೊರೆತಿರುವ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಭಾಗವಾಗಿದ್ದ ಪ್ರತಿಭಟನೆಯ ಹಕ್ಕನ್ನಷ್ಟೆ ಬಳಸುತ್ತಿದೆ. ತನ್ನ ನಂಬಿಕೆಗೆ ಘಾಸಿ ಉಂಟುಮಾಡುವ ಸಿನಿಮಾಗಳನ್ನು, ನಟರನ್ನು ಬಹಿಷ್ಕರಿಸುವುದು ಸಾಂವಿಧಾನಿಕವಾಗಿ ದೊರೆತಿರುವ ಹಕ್ಕು. ಅದನ್ನು ಚಲಾಯಿಸಲು ಸರ್ವ ಸ್ವಾತಂತ್ರ್ಯವಿದೆ. ಈ ಬಗ್ಗೆ ಹಿಂದು ಸಮಾಜ ನಿರ್ಧಾರ ಮಾಡಿ ಆಗಿದೆ.

ಸಮಾಜಕ್ಕೆ ಪೂರಕವಾದ, ಸುಧಾರಣೆಯನ್ನು ತರಬೇಕಾದಂತಹ ಸಿನಿಮಾ ಮಾಡಬೇಕೆ? ವೈಯಕ್ತಿಕ ಜೀವನದಲ್ಲೂ ನೈತಿಕತೆಯನ್ನು ರೂಢಿಸಿಕೊಳ್ಳಬೇಕೆ? ತಮ್ಮ ಮಕ್ಕಳಿಗೆ ಉತ್ತಮ ನಡವಳಿಕೆಗಳನ್ನು ಕಲಿಸಬೇಕೆ? ಯಾವುದೋ ಕಲ್ಪನಾ ಜಗತ್ತಿನಲ್ಲಿ ತೇಲದೇ ಸಮಾಜದಲ್ಲಿ ಬೆರೆತು ಒಂದಾಗಬೇಕೆ? ಅಥವಾ ಬಹಿಷ್ಕಾರಕ್ಕೆ ಒಳಗಾಗಬೇಕೆ? ಎಂಬ ಕುರಿತು ಬಾಲಿವುಡ್ ನಿರ್ಧಾರ ಮಾಡಬೇಕಿದೆ. ಚೆಂಡು ಈಗ ಬಾಲಿವುಡ್ ಅಂಗಳದಲ್ಲಿದೆ.

Exit mobile version