ನಮ್ಮಲ್ಲಿ ಇತ್ತೀಚಿನ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಪದ ಎಂದರೆ ಅಭಿವೃದ್ಧಿ. ನಮ್ಮದು ಅಭಿವೃದ್ಧಿ ಪರ ಸರ್ಕಾರ, ಅವರದ್ದು ಅಭಿವೃದ್ಧಿ ವಿರೋಧಿ ಸರ್ಕಾರ ಎಂದು ರಾಜಕಾರಣಿಗಳು ಹೇಳುವುದು ಸಾಮಾನ್ಯ. ನಾಡಿನ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ ಎಂದು ಭಾಷಣದಲ್ಲಿ ಕೇಳುತ್ತೇವೆ. ಮೊದಲಿಗೆ, ಸಾಮಾನ್ಯವಾಗಿ ನಾವು ಬಳಸುವ ಪಾಶ್ಚಾತ್ಯ ಪರಿಭಾಷೆಯಲ್ಲಿ ಅಭಿವೃದ್ಧಿ ಎಂದರೆ ಏನು ಎಂದು ನೋಡೋಣ.
ಅಭಿವೃದ್ಧಿ ಎಂದರೆ ಆರ್ಥಿಕ, ಸಾಮಾಜಿಕ, ಪರಿಸರ ಹಾಗೂ ತಂತ್ರಜ್ಞಾನ ವಿಚಾರದಲ್ಲಿ ಉನ್ನತ ಸ್ಥಾನಕ್ಕೆ ಏರುವುದು. ಆರ್ಥಿಕ ಅಭಿವೃದ್ಧಿ ಎಂದರೆ, ಒಂದು ದೇಶದ ಅಥವಾ ಸಮುದಾಯದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು. ಕೈಗಾರಿಕೆಗಳ ಉತ್ಪಾದನೆ ಹೆಚ್ಚಿಸುವುದು, ಉದ್ಯೋಗ ಸೃಜನೆ, ಬಡತನ ನಿರ್ಮೂಲನೆ ವಿಚಾರಗಳು ಇದರಲ್ಲಿ ಬರುತ್ತವೆ.
ಎರಡನೆಯದು ಸಾಮಾಜಿಕ ಅಭಿವೃದ್ಧಿ. ವ್ಯಕ್ತಿ ಹಾಗೂ ಸಮುದಾಯದ ಜೀವನಮಟ್ಟವನ್ನು ಸುಧಾರಿಸುವುದು ಸಾಮಾಜಿಕ ಅಭಿವೃದ್ಧಿ. ಈ ಗುರಿಯನ್ನು ಸಾಧಿಸಲು ಶಿಕ್ಷಣ, ಆರೋಗ್ಯ ಹಾಗೂ ವಸತಿ ಮುಂತಾದ ಯೋಜನೆಗಳನ್ನು ರೂಪಿಸುವುದು. ಮೂರನೆಯದು ಪರಿಸರ ಅಭಿವೃದ್ಧಿ. ನೈಸರ್ಗಿಕ ಪರಿಸರವನ್ನು ಉಳಿಸುವುದು ಹಾಗೂ ಬೆಳೆಸುವುದು. ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಕೆ ಮಾಡುವುದರ ಜತೆಗೆ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಬಹುದು. ನಾಲ್ಕನೆಯದು ತಂತ್ರಜ್ಞಾನ ಅಭಿವೃದ್ಧಿ. ಇವೆಲ್ಲದಕ್ಕೂ ಮುಕುಟಪ್ರಾಯವಾದದ್ದು ತಂತ್ರಜ್ಞಾನ ಅಭಿವೃದ್ಧಿ. ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಷ್ಟೂ ಉತ್ಪಾದಕತೆ, ಕಾರ್ಯಕ್ಷಮತೆ, ಜನರ ಜೀವನ ಮಟ್ಟ, ಪರಿಸರ, ಎಲ್ಲವೂ ಸುಧಾರಿಸುತ್ತದೆ.
ಇದಿಷ್ಟೂ ಸಾಮಾನ್ಯ ಸನ್ನಿವೇಶದಲ್ಲಿ ಅಭಿವೃದ್ಧಿ ಎನ್ನುವುದರ ವ್ಯಾಖ್ಯಾನ. ಆದರೆ ನಿಜಕ್ಕೂ ನಮ್ಮ ರಾಜಕೀಯ ಪರಿಭಾಷೆಯಲ್ಲಿ ಇವುಗಳನ್ನು ಅಭಿವೃದ್ಧಿ ಎಂದು ಕರೆಯಲಾಗುತ್ತಿದೆಯೇ? ಯಾವುದೇ ದೇಶದ ಅಭಿವೃದ್ಧಿಯನ್ನು ಅಳೆಯಲು ಅತಿ ಹೆಚ್ಚು ದೇಶಗಳು ಜಿಡಿಪಿ (ನಿವ್ವಳ ದೇಸಿ ಉತ್ಪನ್ನ) ಸೂಚ್ಯಂಕವನ್ನು ಬಳಸುತ್ತವೆ. ಜಿಡಿಪಿ ಹೆಚ್ಚಾದಷ್ಟೂ ದೇಶ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಲಾಗುತ್ತದೆ. ಆದರೆ ಈ ಜಿಡಿಪಿ ಲೆಕ್ಕವೇ ಅವಾಸ್ತವಿಕ ಎನ್ನುವುದು ಹಲವರ ವಾದ. ಇತ್ತೀಚೆಗೆ ಈ ವಾದಕ್ಕೆ ಪುಷ್ಠಿ ಸಿಗುತ್ತಿದೆ.
ಇಲ್ಲೊಂದು ಉದಾಹರಣೆಯನ್ನು ನೋಡೋಣ. ನಮ್ಮ ಮನೆಯ ಬಳಿ ಒಂದು ಬೃಹತ್ ಮರವಿದೆ. ಅದರಲ್ಲಿ ಸಾವಿರಾರು ಹಕ್ಕಿಪಕ್ಷಿಗಳು ಗೂಡುಕಟ್ಟಿಕೊಂಡಿವೆ. ಆ ಮರವು ಗ್ಯಾಲನ್ಗಟ್ಟಲೆ ಆಮ್ಲಜನಕವನ್ನು ಸುತ್ತಲಿನ ಜನರಿಗೆ ನೀಡುತ್ತಿದೆ. ಆ ಮರದಿಂದಾಗಿ ಮಣ್ಣು ಗುಣಮಟ್ಟವನ್ನು ಕಾದುಕೊಂಡು, ಸವಕಳಿ ತಪ್ಪಿದೆ. ಅದರ ಬೇರುಗಳಲ್ಲಿ ಕೋಟ್ಯಂತರ ಜೀವಿಗಳು ಜೀವನ ಕಂಡುಕೊಂಡಿವೆ. ವಿಪರ್ಯಾಸ ಎಂದರೆ ನಮ್ಮ ಜಿಡಿಪಿ ಲೆಕ್ಕಕ್ಕೆ ಈ ಮರ ಸೇರುವುದೇ ಇಲ್ಲ. ಆದರೆ, ಅದೇ ಮರವನ್ನು ಕತ್ತರಿಸಿ ಅದರ ಕಾಂಡದಿಂದ ದೊಡ್ಡ ದೊಡ್ಡ ಹಲಗೆ, ಕೊಂಬೆಗಳಿಂದ ಪೀಠೋಪಕರಣ, ಅಲಂಕಾರಿಕ ವಸ್ತುಗಳನ್ನು ಮಾಡಿ ಅದನ್ನು ರಫ್ತು ಮಾಡಿದರೆ ಅದರಿಂದ ಆರ್ಥಿಕ ಚಟುವಟಿಕೆ ನಡೆಯುತ್ತದೆ. ಆರ್ಥಿಕ ಚಟುವಟಿಕೆ ನಡೆದಾಗ ದೇಶದ ಜಿಡಿಪಿಗೆ ಆ ಮರವು ಸೇರ್ಪಡೆ ಆಗುತ್ತದೆ. ಹಾಗಾದರೆ, ನೈಸರ್ಗಿಕ ಸಂಪನ್ಮೂಲವನ್ನು ಹಾಳು ಮಾಡುವುದು ಜಿಡಿಪಿಯೇ? ಎಂಬ ವಾದ ಜೋರಾಗಿದೆ.
ಇದಕ್ಕೆ ಸರಿಯಾಗಿ, ಭೂತಾನ್‌ನ ಸರ್ಕಾರ ನಿವ್ವಳ ಸಂತೋಷ ಸೂಚ್ಯಂಕ (ಜಿಡಿಎಚ್) ಅಥವಾ ನಿವ್ವಳ ರಾಷ್ಟ್ರೀಯ ಸಂತಸ(ಜಿಎನ್ಎಚ್) ಎಂಬ ಹೊಸ ಸೂಚ್ಯಂಕವನ್ನು ರೂಪಿಸಿದೆ. ಒಟ್ಟಾರೆ ಮನುಷ್ಯ ಬದುಕುವುದು ಸಂತೋಷಕ್ಕಾಗಿ. ಸಂತೋಷ ಎಂದರೆ ಹುಚ್ಚೆದ್ದು ಕುಣಿಯುವುದಲ್ಲ. ನಾವು ಸಂತಸದಿಂದ ಇರುವುದರ ಜತೆಗೆ ನಮ್ಮ ಸುತ್ತಮುತ್ತವೂ ಅದೇ ಸಂತೋಷದ ವಾತಾವರಣ ಇರುವಂತೆ ನೋಡಿಕೊಳ್ಳುವುದು. ಪ್ರಾಣಿಪಕ್ಷಿಗಳೂ ಸಂತಸದಿಂದ ಇರುವಂತೆ ಜೀವನ ನಡೆಸುವುದು. ಆಗಲೇ ಬದುಕು ಸುಂದರವಾಗಿರುತ್ತದೆ. ಆದ್ಧರಿಂದ, ಜಿಡಿಪಿಗಿಂತಲೂ ಇದು ಉತ್ತಮ ಸೂಚ್ಯಂಕ ಎಂಬ ಅಭಿಪ್ರಾಯವಿದೆ.
ನಮ್ಮ ರಾಜಕೀಯ ಪರಿಭಾಷೆಯ ಅಭಿವೃದ್ಧಿ ಹೇಗಿದೆ ಎಂದರೆ, ಸಮಸ್ಯೆ ಉಲ್ಬಣವಾಗುವವರೆಗೂ ಸುಮ್ಮನಿದ್ದು ಪರಿಹಾರಕ್ಕೆ ಒದ್ದಾಡುವುದು ಅಭಿವೃದ್ಧಿ ಎಂದಂತಾಗಿದೆ. ಉದಾಹರಣೆಗೆ, ಸರ್ಕಾರಗಳು ಸಿಗರೇಟ್ ಸೇವನೆಗೆ ಮುಕ್ತ ಅವಕಾಶ ನೀಡಿವೆ. ಇದರ ಜತೆಗೆ ತಂಬಾಕು ಮಾರಾಟವೂ ನಡೆಯುತ್ತದೆ. ಇತ್ತ ಮದ್ಯ ಸೇವನೆಯನ್ನು ಸರ್ಕಾರವೇ ಮಾಡುತ್ತದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಇಡೀ ಬ್ರಹ್ಮಾಂಡದ ಸಂಶೋಧನೆಗಳೆಲ್ಲ ಹೇಳಿವೆ. ತಂಬಾಕು ಸೇವಿಸಿ ಕ್ಯಾನ್ಸರ್ ಬರುತ್ತದೆ. ಅದನ್ನು ತಡೆಯದ ಸರ್ಕಾರ, ಕ್ಯಾನ್ಸರ್ ಆಸ್ಪತ್ರೆಗೆ ಹೂಡಿಕೆ ಮಾಡುತ್ತದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳೂ ಆಂಕಾಲಜಿ(ಕ್ಯಾನ್ಸರ್ ಚಿಕಿತ್ಸೆ) ವಿಭಾಗ ತೆರೆಯಬೇಕೆಂಬ ಒತ್ತಾಯವೂ ಇದೆ. ಮದ್ಯ ಸೇವನೆ ಮಾಡಿ ಮನೆಗಳು ಬೀದಿ ಸೇರುತ್ತವೆ. ಹಳ್ಳಿ ಹಳ್ಳಿಗಳಲ್ಲಿ ಹೆಂಗಸರು ಪೊರಕೆ ಹಿಡಿದು ನಿಂತಿದ್ದಾರೆ, ಮದ್ಯದ ಅಂಗಡಿ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 2,000 ರೂ. ನೀಡುತ್ತೇವೆ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ನೀಡುತ್ತೇವೆ ಎಂದು ಇತ್ತೀಚೆಗಷ್ಟೆ ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಉಳಿದ ಪಕ್ಷಗಳೇನೂ ಕಡಿಮೆ ಇಲ್ಲ. ರಾಜ್ಯದಲ್ಲಿರುವ ಕೃಷಿ, ಕೈ ಸಾಲ ಸೇರಿ ಎಲ್ಲ ರೀತಿಯ ಸಾಲವನ್ನೂ ಮನ್ನಾ ಮಾಡುತ್ತೇನೆ ಎಂದು ಈ ಹಿಂದೆ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಆದರೆ ಅಷ್ಟೆಲ್ಲ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎನ್ನುವುದು ಅಧಿಕಾರಕ್ಕೆ ಬಂದ ನಂತರ ಅರ್ಥವಾಯಿತು. ಕೇವಲ ಕೃಷಿ ಸಾಲ ಮನ್ನಾಕ್ಕೆ ಮುಂದಾದರು. ಅದರಲ್ಲೂ, ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ನಲ್ಲಿ ಎರಡೂ ಕಡೆ ಸಾಲ ಹೊಂದಿದ್ದಾರೆ ಒಂದೇ ಕಡೆ ಮನ್ನಾ, ಹೆಚ್ಚಿನ ಆದಾಯ ಹೊಂದಿದ್ದಾರೆ ಮನ್ನಾ ಇಲ್ಲ ಎಂಬ ನಿಬಂಧನೆ ವಿಧಿಸಿ ಉಳಿದವರಿಗೆ ಮನ್ನಾ ಮಾಡಲಾಯಿತು.
ಬಿಜೆಪಿಯೇನೂ ಕಡಿಮೆಯಿಲ್ಲ. ಸದ್ಯದಲ್ಲೆ ಚುನಾವಣಾ ಪ್ರಣಾಳಿಕೆ ಹೊರಬೀಳಲಿದ್ದು, ʼಅಭಿವೃದ್ಧಿʼ ಹೆಸರಿನಲ್ಲಿ ನೇರವಾಗಿ ಹಣ ನೀಡುವ ಅನೇಕ ಯೋಜನೆಗಳು ಘೋಷಣೆಯಾಗುವ ಎಲ್ಲ ಸಾಧ್ಯತೆಗಳಿವೆ. ಇದೇ ಫೆಬ್ರವರಿ 17ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಘೋಷಣೆ ಮಾಡಲಿದ್ದಾರೆ. ಇಲ್ಲಿವರೆಗೆ ಚರ್ಚೆ ನಡೆಸಿದ ವಿಚಾರಗಳನ್ನು ಗಮನದಲ್ಲಿರಿಸಿ ಬಜೆಟ್ ವಿಶ್ಲೇಷಣೆ ಮಾಡಿದರೆ ನಿಜವಾಗಲೂ ಅದು ಅಭಿವೃದ್ಧಿಗೆ ಪೂರಕವೇ ಅಥವಾ ಕೇವಲ ಜನರನ್ನು ತಮ್ಮತ್ತ ಸೆಳೆಯುವ ಜನಪ್ರಿಯತೆಯೇ ಎನ್ನುವುದು ಗೊತ್ತಾಗುತ್ತದೆ.
ಇತ್ತೀಚೆಗೆ ಒಬ್ಬ ತಜ್ಞರ ಜತೆಗೆ ಮಾತನಾಡುತ್ತಿದ್ದಾಗ ಅವರು ಹೇಳಿದ ಮಾತು ಇಷ್ಟವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಬೆಂಗಳೂರಿನಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ಸಂಚಾರ ದಟ್ಟಣೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬೇಕೆಂದು ಸರ್ಕಾರಗಳು ಸಭೆ ನಡೆಸಿದ್ದೇ ನಡೆಸಿದ್ದು. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ವಿವಿಧ ರಸ್ತೆಗಳನ್ನು ಒನ್ ವೇ ಮಾಡಲಾಯಿತು, ಅನೇಕ ರಸ್ತೆಗಳನ್ನು ಒಡೆದು ಅಗಲ ಮಾಡಲಾಯಿತು, ಫ್ಲೈ ಓವರ್ ಬಂದವು, ಮೊದಲು ರಿಂಗ್ ರಸ್ತೆ, ನಂತರ ಹೊರ ವರ್ತುಲ ರಸ್ತೆ ಬಂತು. ಈಗ ಹತ್ತಾರು ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಬರುತ್ತಿದೆ. ಇಷ್ಟೆಲ್ಲ ಯೋಜನೆಗೆ ಸುಮಾರು 50-60 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಸುಮ್ಮನೆ ಯೋಚನೆ ಮಾಡಿ. ಇದೇ 50-60 ಸಾವಿರ ಕೋಟಿ ರೂ. ಹಣವನ್ನು ಮೆಟ್ರೋಗೆ ಒಂದಿಷ್ಟು, ಸಬ್ಅರ್ಬನ್‌ಗೆ ಒಂದಿಷ್ಟು, ಬಿಎಂಟಿಸಿಗೆ ಒಂದಿಷ್ಟು ನೀಡಬೇಕು. ನಿಮ್ಮ ಟಿಕೆಟ್ ದರವನ್ನು ಶೇ.80 ಕಡಿಮೆ ಮಾಡಿ. ಶೇ. 20 ದರವನ್ನು ಮಾತ್ರ ಜನರಿಂದ ಪಡೆಯಿರಿ. ನಷ್ಟವನ್ನು, ಸರ್ಕಾರ ನೀಡುವ ಹಣದಿಂದ ಭರಿಸಿಕೊಳ್ಳಿ ಎಂದು ಹೇಳಿದರೆ ಏನಾಗುತ್ತದೆ? ಹೊಸದಾಗಿ ಅನೇಕರು ಕಾರು, ಬೈಕ್ ಖರೀದಿ ಮಾಡುವುದೇ ಇಲ್ಲ. ಖರೀದಿಸಿದರೂ, ದಿನನಿತ್ಯದ ಚಟುವಟಿಕೆಗೆ ಸಾಮೂಹಿಕ ಸಾರಿಗೆಯನ್ನೇ ಬಳಸುತ್ತಾರೆ. ಆಗ ಸಹಜವಾಗಿಯೇ ವೈಯಕ್ತಿಕ ವಾಹನಗಳ ಸಂಖ್ಯೆ ರಸ್ತೆಯಲ್ಲಿ ಕಡಿಮೆಯಾಗಿ, ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಇದರಿಂದಾಗಿ ವಾಯು ಮಾಲಿನ್ಯವೂ ಕಡಿಮೆ ಆಗುತ್ತದೆ. (ಕೆಲದಿನಗಳ ಹಿಂದೆ ಜರ್ಮನಿಯಲ್ಲಿ ಅಲ್ಲಿನ ಸರಕಾರ ಇಂಥದ್ದೊಂದು ಪ್ರಯೋಜನವನ್ನು ಜಾರಿಗೆ ತಂದಿದೆ. ಖಾಸಗಿ ಕಾರು, ಖಾಸಗಿ ಮೋಟಾರ್ ಬೈಕ್‌ಗಳ ಸಂಚಾರವನ್ನು ನಿರ್ಬಂಧಿಸಲು, ಅನ್ ಲಿಮಿಟೆಡ್ ಟ್ರಾವೆಲ್ ಪಾಸ್ ಪರಿಚಯಿಸಿದೆ. ಅಂದರೆ, ಅಲ್ಲಿನ ಜನ ಕೇವಲ 49 ಯುರೋ (ಭಾರತೀಯ ರೂಪಾಯಿ ಲೆಕ್ಕದಲ್ಲಿ 4 ಸಾವಿರ ರೂ.) ಪಾಸ್ ಪಡೆದು, ವರ್ಷವಿಡಿ ದೇಶಾದ್ಯಂತ ಸಂಚರಿಸಬಹುದು. ಕೇವಲ ಬಸ್ಸಿನಲ್ಲಿ ಮಾತ್ರವಲ್ಲ, ರೈಲು, ಮೆಟ್ರೋ, ಟ್ರ್ಯಾಮ್ ಗಳಲ್ಲಿ ಸಂಚರಿಸಲು ಇದೇ ಪಾಸ್ ಬಳಸಬಹುದು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬೆಂಬಲಿಸಲು ಜರ್ಮನಿ ಈ ನಿಯಮ ಜಾರಿಗೆ ತಂದಿದೆ).
ಇದು ಬಾಯಿ ಮಾತಿಗೆ ಹೇಳಿದ ವಿಚಾರ. ಹೆಚ್ಚಿನ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಅಗತ್ಯವಿದೆ. ಆದರೆ ಮೇಲ್ನೋಟಕ್ಕೆ ಹೌದು ಎನ್ನಬಹುದಾದ ವಿಚಾರ. ಅದೇ ರೀತಿ, ಬಯಲಿನಲ್ಲಿ ಮೂತ್ರ ವಿಸರ್ಜನೆಯಿಂದ ಏನೆಲ್ಲ ಖಾಯಿಲೆಗಳು ಬರುತ್ತವೆ ಎಂದು ಸರ್ಕಾರವೇ ಹೇಳುತ್ತದೆ. ಇಂತಹ ಖಾಯಿಲೆಗಳು ಬಂದಾಗ ಗುಣಪಡಿಸಲು ಔಷಧಿಗಳನ್ನು ಸಾವಿರಾರು ಕೋಟಿ ರೂ. ಕೊಟ್ಟು ಖರೀದಿ ಮಾಡುತ್ತದೆ. ಅದರ ಬದಲಿಗೆ ಅಷ್ಟೇ ಹಣದಲ್ಲಿ ಎಲ್ಲೆಡೆ ಶೌಚಾಲಯ ನಿರ್ಮಾಣ ಮಾಡಿ, ಸಂಪೂರ್ಣ ಉಚಿತ ಮಾಡಿದರೆ ಜನರೇಕೆ ಬಯಲಿನಲ್ಲಿ ಬಹಿರ್ದೆಸೆಗೆ ಹೋಗುತ್ತಾರೆ? ಎಲ್ಲರೂ ಶೌಚಾಲಯದಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡಿದರೆ ಅಷ್ಟು ಪ್ರಮಾಣದಲ್ಲಿ ಖಾಯಿಲೆಗಳು ಹರಡುವುದು ಕಡಿಮೆ ಆಗುತ್ತದೆ ಅಲ್ಲವೆ? ಆದರೆ ರಾಜಕಾರಣಿಗಳಿಗೆ, ಆ ಕಾಮಗಾರಿಗಳ ಗುತ್ತಿಗೆ ಪಡೆಯುವವರಿಗೆ, ಅದರ ಸುತ್ತ ಜೀವನ ಕಂಡುಕೊಂಡಿರುವ ಅನೇಕರಿಗೆ ಇದರಿಂದ ʼಜೀವನʼ ನಡೆಯುವುದಿಲ್ಲ. ಹಾಗಾಗಿ ಇಂತಹ ಅಪಸವ್ಯಗಳು ನಡೆಯುತ್ತಿವೆ.
ಇದನ್ನೂ ಓದಿ | ವಿಸ್ತಾರ ಅಂಕಣ | ಈ ಇಬ್ಬರು ಭಾರತದ ಸಾಮಾಜಿಕ ಬದುಕಿನ ರಾಯಭಾರಿಗಳು!
ಹಾಗಾಗಿ, ಅಭಿವೃದ್ಧಿ ಎಂದರೆ ಏನು? ಎನ್ನುವ ಪ್ರಶ್ನೆಯೇ ನಮ್ಮ ಮುಂದಿದೆ. ಇತ್ತೀಚೆಗೆ ಸದನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ ಉತ್ತರ ವಿಶೇಷವಾಗಿದೆ. ಶಾಸಕರೊಬ್ಬರು, ತಮ್ಮ ಕ್ಷೇತ್ರದ ಒಂದು ಹೋಬಳಿಯಲ್ಲಿ ಪೊಲೀಸ್ ಠಾಣೆ ಇಲ್ಲ ಎಂದು ಬೇಸರಪಟ್ಟುಕೊಂಡರು. ಅದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ, ಒಂದು ಪೊಲೀಸ್ ಠಾಣೆ ಸ್ಥಾಪನೆ ಆಗಬೇಕೆಂದರೆ ಆ ಪ್ರದೇಶದಲ್ಲಿ ಇಂತಿಷ್ಟು ಕೊಲೆಗಳು, ಸುಲಿಗೆಗಳು, ಕಳ್ಳತನ, ಅನೈತಿಕ ಚಟುವಟಿಕೆಗಳು ವರದಿಯಾಗಬೇಕು ಎಂಬ ನಿಯಮವಿದೆ. ಆದರೆ ನೀವು ಹೇಳಿದ ಪ್ರದೇಶದಲ್ಲಿ ಆ ಪ್ರಮಾಣದಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿಲ್ಲ, ಹಾಗಾಗಿ ನಿಮಗೆ ಪೊಲೀಸ್ ಠಾಣೆ ನೀಡಲು ಆಗುವುದಿಲ್ಲ ಎಂದರು. ಅಷ್ಟಕ್ಕೇ ಸುಮ್ಮನಾಗದೆ, ನೀವು ಹೇಳಿದ ಪ್ರದೇಶದಲ್ಲಿ ಹೆಚ್ಚಿನ ಅಪರಾಧ ಚಟುವಟಿಕೆಗಳು ನಡೆಯದೆ ಜನರು ನೆಮ್ಮದಿಯಿಂದ ಇದ್ದಾರೆ ಎಂದು ನೀವು ಖುಷಿ ಪಡಿ. ಪೊಲೀಸ್ ಠಾಣೆ ಸಿಗುವುದು ಒಳ್ಳೆಯ ವಿಚಾರವಲ್ಲ ಎಂದರು.
ಅಭಿವೃದ್ಧಿ ಎಂದರೆ ನಮ್ಮ ಊರಿನಲ್ಲಿ ಒಂದು ಪೋಸ್ಟ್ ಆಫೀಸ್ ಇರಬೇಕು, ಒಂದು ಶಾಲೆ ಇರಬೇಕು ಎಂದು ಕೇಳುವುದು ಸರಿ. ನಮ್ಮ ಊರಿನಲ್ಲಿ ಪೊಲೀಸ್ ಠಾಣೆ ಇದೆ ಎನ್ನುವುದು ಅಭಿವೃದ್ಧಿ ಎಂದು ಜನಕ್ಕೆ ಏಕೆ ಅನ್ನಿಸುತ್ತಿದೆ? ಜನಪ್ರತಿನಿಧಿಗಳ ಜತೆಗೆ, ಸಾಮಾನ್ಯ ಜನರೂ ಈ ಬಗ್ಗೆ ಚಿಂತನೆ ಮಾಡಬೇಕು. ಅಭಿವೃದ್ಧಿ ಎಂದರೆ ಕಟ್ಟಡ ನಿರ್ಮಾಣ, ರಸ್ತೆ ಅಗಲ ಮಾಡುವುದು, ಮರಗಳನ್ನು ಕಡಿದು ಬಣ್ಣ ಬಣ್ಣದ ಲೈಟ್ ಹಾಕುವುದು… ಇಂತಹದ್ದೇ? ನಾವೂ ಬದುಕಿ ಮುಂದಿನ ಪೀಳಿಗೆಯೂ ಬದುಕುವಂತೆ ಮಾಡುವುದು ಅಭಿವೃದ್ಧಿಯೇ? ಈ ಬಗ್ಗೆ ಜನರೂ ಆಲೋಚಿಸಬೇಕು.
ಅಂತಿಮವಾಗಿ, “ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ ….” ಎಂದು ಪುರುಷ ಸೂಕ್ತ ಹೇಳುತ್ತದೆ. ಮಾನವರು ಮಾತ್ರ ಸಂತೋಷದಿಂದ ಇದ್ದರೆ ಸಾಲದು. ಎರಡು ಕಾಲುಗಳಲ್ಲಿ ಚಲಿಸುವ(ಮನುಷ್ಯರು), ನಾಲ್ಕು ಕಾಲುಗಳಲ್ಲಿ ಚಲಿಸುವ (ಇತರೆ ಪ್ರಾಣಿಗಳು) ಎಲ್ಲರಿಗೂ ಮಂಗಳ ಉಂಟಾಗಲಿ ಎನ್ನುವುದು ನಮ್ಮ ʼಅಭಿವೃದ್ಧಿʼಯ ಸಂಕೇತ. ಈ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಇದನ್ನೂ ಓದಿ | ವಿಸ್ತಾರ ಅಂಕಣ | ಹಾಲಿವುಡ್ ನಮ್ಮ ಕಡೆ ನೋಡುತ್ತಿದೆ, ಬಾಲಿವುಡ್ ಎತ್ತ ಸಾಗುತ್ತಿದೆ?