ಜೇಮ್ಸ್ ಕೆಮರೂನ್ ನಿರ್ದೇಶನದ ‘ಅವತಾರ್’ ಸಿನಿಮಾದ ಎರಡನೇ ಸರಣಿ ಬಿಡುಗಡೆಯಾಗಿದೆ. ಚಿಕ್ಕವರು- ದೊಡ್ಡವರೆಂಬ ಭೇದವಿಲ್ಲದೆ, ತೆರೆಯ ಮೇಲಿನ ಮಾಯಾ ಜಗತ್ತನ್ನು ಎಲ್ಲರೂ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ವಿದೇಶದಲ್ಲಷ್ಟೆ ಅಲ್ಲದೆ ಭಾರತದಲ್ಲೂ ಅವತಾರ್ ಸಿನಿಮಾ ವೀಕ್ಷಕರು ಕಡಿಮೆ ಇಲ್ಲ. ಅದಕ್ಕಾಗಿಯೇ ಕನ್ನಡ ಸೇರಿ ಅನೇಕ ಭಾರತೀಯ ಭಾಷೆಗಳಿಗೂ ಸಿನಿಮಾ ಡಬ್ ಮಾಡಲಾಗಿದೆ. ಇದರಲ್ಲಿ ಅತ್ಯುತ್ತಮವಾದ ಸಾಮಾಜಿಕ, ಆಧ್ಯಾತ್ಮಿಕ ಸಂದೇಶಗಳು ಅಡಗಿವೆ. ಈ ಹಾಲಿವುಡ್ ಸಿನಿಮಾದ ಹೆಸರು ಅವತಾರ ಎಂಬುದೇ ಭಾರತೀಯ ಮೂಲದ್ದು. ಇಲ್ಲಿಂದಲೇ ಹೆಸರನ್ನು ಎರವಲು ಪಡೆಯಲಾಗಿದೆ.
ಮಾನವರು ತಮ್ಮ ಪ್ರತಿರೂಪಗಳನ್ನು ಸೃಷ್ಟಿಸಿ ಮತ್ತೊಂದು ಗ್ರಹದ ಜೀವಿಗಳೊಂದಿಗೆ ಸೆಣಸುವುದು ಈ ಸಿನಿಮಾದ ಕಥಾವಸ್ತು. ಇದನ್ನೇ ಅವತಾರ್ ಎನ್ನಲಾಗಿದೆ. ವಿಷ್ಣುವು ದುಷ್ಟ ಸಂಹಾರಕ್ಕಾಗಿ ದಶಾವತಾರಗಳನ್ನು ಎತ್ತಿ ಬಂದದ್ದು ನಮಗೆಲ್ಲ ತಿಳಿದೇ ಇದೆ. ಸಿನಿಮಾದಲ್ಲಿನ ಪಾತ್ರಗಳಿಗೆ ಬಾಲವಿದೆ. ಹನುಮಂತನ ಬಾಲ ನಮಗೆಲ್ಲ ತಿಳಿದಿದೆ. ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಆತ್ಮವು ಚಲಿಸಿ ನೆಲೆಗೊಳ್ಳುವುದನ್ನು ಪರಕಾಯ ಪ್ರವೇಶ ಎಂತಲೂ ಹಿಂದು ಧರ್ಮದಲ್ಲಿ ಹೇಳಲಾಗಿದೆ. ಈ ಎಲ್ಲ ಸಂಗತಿಗಳ ಕುರಿತು ಸ್ವತಃ ನಿರ್ದೇಶಕ ಜೇಮ್ಸ್ ಕೆಮರೂನ್ ಹಿಂದೊಮ್ಮೆ ಸೊಗಸಾಗಿ ಮಾತನಾಡಿದ್ದರು. ಅವತಾರ್ ಮೊದಲ ಚಲನಚಿತ್ರ ತೆರೆಕಂಡ ನಂತರ 2010ರಲ್ಲಿ ನವದೆಹಲಿಯಲ್ಲಿ ಸಂದರ್ಶನವೊಂದರಲ್ಲಿ, “ಹಿಂದು ಪುರಾಣಗಳು, ದೇವಸ್ಥಾನಗಳು ನನಗೆ ಅತ್ಯಂತ ಪ್ರಿಯವಾದವು. ಕಲಾವಿದನಾಗಿ ಇಲ್ಲಿನ ಬಣ್ಣ, ವೈವಿಧ್ಯತೆಗಳು ನನ್ನನ್ನು ಚಕಿತಗೊಳಿಸುತ್ತವೆ. ಬಹುಶಃ ಅಪ್ರಜ್ಞಾಪೂರ್ವಕವಾಗಿ ಇವೆಲ್ಲವೂ ನನ್ನ ಸಿನಿಮಾದಲ್ಲಿ ಕೆಲಸ ಮಾಡಿರಬಹುದು,” ಎಂದಿದ್ದರು.
2014ರಲ್ಲಿ ತೆರೆ ಕಂಡ ಇಂಟರ್ಸ್ಟೆಲ್ಲಾರ್ ಸಿನಿಮಾದ ಭೂಮಿಕೆಯೇ ಅಧ್ಯಾತ್ಮದ ತಳಹದಿಯ ಮೇಲೆ ನಿಂತಿದೆ. ಎಲ್ಲ ಮಾನವ ಜೀವಿಗಳನ್ನೂ ನಿಯಂತ್ರಿಸುತ್ತಿರುವ ದೇಶ ಹಾಗೂ ಕಾಲವನ್ನು ಮೀರಿದ ಗ್ರಹದ ಪರಿಕಲ್ಪನೆಯನ್ನು ಆ ಚಿತ್ರ ಪ್ರತಿಪಾದಿಸುತ್ತದೆ.
ಈ ಗ್ರಹದಲ್ಲಿ ಒಂದು ಗಂಟೆ ಕಳೆದರೆ ಅದು ಭೂಮಿಯಲ್ಲಿ ಏಳು ವರ್ಷಕ್ಕೆ ಸಮ. ಅಲ್ಲಿಗೆ ತೆರಳುವ ಮಾನವರ ತಂಡ ವಾಪಸ್ ಬರುವಾಗ ಉಂಟಾದ ತಾಂತ್ರಿಕ ತೊಂದರೆ ಕಾರಣಕ್ಕೆ ಮೂರು ಗಂಟೆ ಕಳೆಯಬೇಕಾಗುತ್ತದೆ. ಇದರಿಂದಾಗಿ ಅವರು ಭೂಮಿಗೆ ಬರುವುದು 23 ವರ್ಷ ತಡವಾಗುತ್ತದೆ. ತಂಡವು ಬೇರೆ ಗ್ರಹಕ್ಕೆ ತೆರಳುವಾಗ 10 ವರ್ಷದವಳಾಗಿದ್ದ ನಾಯಕನ ಪುತ್ರಿ, 31 ವರ್ಷದವಳಾಗಿರುತ್ತಾಳೆ. ಆದರೆ ನಾಯಕನ ವಯಸ್ಸು ಮಾತ್ರ ಅಷ್ಟೇ ಇರುತ್ತದೆ. ಇಂಥದ್ದೇ ಒಂದು ಕಥೆಯೊಂದು ಭಾರತೀಯ ಪುರಾಣದಲ್ಲಿ ಬರುತ್ತದೆ. ಒಮ್ಮೆ ಅಸುರರು ಇಂದ್ರನ ಮೇಲೆ ದಾಳಿ ಮಾಡುತ್ತಾರೆ. ಆಗ ಸೂಕ್ತ ಸೇನಾಧಿಕಾರಿಯ ಕೊರತೆ ಹೊಂದಿದ್ದ ಇಂದ್ರ, ತನ್ನ ಸಹಾಯಕ್ಕೆ ಆಗಮಿಸುವಂತೆ ಭೂಮಿಯಲ್ಲಿದ್ದ ರಾಜ ಮುಚುಕುಂದನನ್ನು ಕೇಳುತ್ತಾನೆ. ಪರಮ ವೀರನಾದ ರಾಜ ಇಂದ್ರನಿಗೆ ಸಹಾಯ ಮಾಡಲು ತೆರಳುತ್ತಾನೆ. ಸುಮಾರು ಒಂದು ವರ್ಷ ಹೋರಾಟ ನಡೆಯುತ್ತದೆ, ಈ ವೇಳೆಗೆ ಕಾರ್ತಿಕೇಯನಂತಹ ಸಮರ್ಥ ನಾಯಕ ಸಿಗುತ್ತಾನೆ. ಆಗ ರಾಜನ ಬಳಿ ಆಗಮಿಸುವ ಇಂದ್ರ, ನೀನು ನಮ್ಮೊಂದಿಗೆ ಯುದ್ಧದಲ್ಲಿ ಸಹಾಯ ಮಾಡಿದ್ದಕ್ಕೆ ಧನ್ಯವಾದ. ಆದರೆ ನೀನು ಈಗ ಭೂಮಿಗೆ ಹೋಗುವುದು ಪ್ರಯೋಜನವಿಲ್ಲ. ದೇವಲೋಕದಲ್ಲಿ ಕಳೆದ ಒಂದು ವರ್ಷವು ಭೂಮಿಯಲ್ಲಿ 360 ವರ್ಷಕ್ಕೆ ಸಮನಾದದ್ದು. ಈ ವೇಳೆಗಾಗಲೆ ನಿನ್ನ ಕುಟುಂಬ, ಸಾಮ್ರಾಜ್ಯ ಎಲ್ಲವೂ ನಶಿಸಿರುತ್ತದೆ. ನೀನು ತ್ರೇತಾ ಯುಗದಲ್ಲಿ ಭೂಮಿಯಿಂದ ಬಂದಿದ್ದೆ, ಈಗ ಅಲ್ಲಿ ದ್ವಾಪರ ಯುಗ ನಡೆಯುತ್ತಿದೆ ಎನ್ನುತ್ತಾನೆ!
2010ರಲ್ಲಿ ತೆರೆಕಂಡು ಪ್ರಸಿದ್ಧಿ ಪಡೆದ ಕ್ರಿಸ್ಟೊಫರ್ ನೋಲಾನ್ ನಿರ್ದೇಶನದ ಇನ್ಸೆಪ್ಷನ್ ಚಲನಚಿತ್ರ ಕಥೆಯಲ್ಲೂ ಇಂಥದ್ದೇ ಒಂದು ಎಳೆ ಇದೆ. ಆದಿಶಂಕರಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಆಧಾರದಲ್ಲೇ ಚಿತ್ರಿತವಾಗಿದೆ. ಮಾಯ ಹಾಗೂ ವಾಸ್ತವದ ನಡುವಿನ ಜಿಜ್ಞಾಸೆಗಳ ಸುತ್ತಲೇ ಸಿನಿಮಾ ಸುತ್ತುತ್ತದೆ. ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ (ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ) ಎನ್ನುವುದು ಆದಿಶಂಕರರ ಅದ್ವೈತ ಸಿದ್ಧಾಂತದ ಸಾರ ಎಂದು ವಿದ್ವಾಂಸರು ಹೇಳುತ್ತಾರೆ.
ಇದೇ ಕ್ರಿಸ್ಟೊಫರ್ ನೋಲಾನ್ ನಿರ್ದೇಶನದ ಮತ್ತೊಂದು ಅದ್ಭುತ ಚಲನಚಿತ್ರ ದಿ ಡಾರ್ಕ್ ನೈಟ್ ಸಹ ನೋಡುತ್ತಿರುವಾಗ ನಮ್ಮದೇ ರಾಮಾಯಣ, ಮಹಾಭಾರತದ ಪಾತ್ರಗಳಿಂದ ಸ್ಫೂರ್ತಿ ಪಡೆದಿರುವಂತೆ ಕಾಣುತ್ತದೆ. ಅಧರ್ಮದ ಮಾರ್ಗದಲ್ಲಿ ಸಾಗುವ ಶಕ್ತಿಯುತ ದುಷ್ಟನನ್ನು ನಾಯಕನು ಸೋಲಿಸಲು ಬಳಸುವ ತಂತ್ರಗಳು, ವಾಲಿಯನ್ನು ಸೋಲಿಸಲು ರಾಮ ಕಂಡುಕೊಂಡ ಮಾರ್ಗದಂತೆ ಕಾಣುತ್ತದೆ.
ಇವಿಷ್ಟೇ ಅಲ್ಲ. ಹಾಲಿವುಡ್ ನ ಅತ್ಯಂತ ಪ್ರಸಿದ್ಧ ಸಿನಿಮಾಗಳಾದ ಸ್ಟಾರ್ ವಾರ್ಸ್ ಸರಣಿ, ಮ್ಯಾಟ್ರಿಕ್ಸ್, ಕಿಂಗ್ ಕಾಂಗ್ ಸೇರಿ ಅನೇಕ ಸಿನಿಮಾಗಳು ನಮ್ಮದೇ ಸಂಸ್ಕೃತಿಯ ಚಲನಚಿತ್ರಗಳು ಎನ್ನಿಸುತ್ತದೆ. ಭಾರತ ಮಾತ್ರವಲ್ಲ, ಚೀನಾ, ಜಪಾನ್ ಸಂಸ್ಕೃತಿಗಳನ್ನೂ, ಅಲ್ಲಿನ ಜನಪದವನ್ನು ಹಾಲಿವುಡ್ ಅಪ್ಪಿಕೊಂಡಿದೆ.
ಜಾಕಿ ಚಾನ್ ಸಿನಿಮಾಗಳಿಂದ ಕುಂಗ್ ಫು ಪಾಂಡಾದಂತಹ ಮಕ್ಕಳ ಸಿನಿಮಾವರೆಗೂ ಮೂಲ ಚೀನಾ ಸಂಸ್ಕೃತಿಯನ್ನು (ಕಮ್ಯುನಿಸ್ಟ್ ಚೀನಾ ಅಲ್ಲ) ಬಿಂಬಿಸುತ್ತದೆ. ಅದು ಭಾರತ ಇರಲಿ, ಮೂಲ ಚೀನಾ ಇರಲಿ, ಜಪಾನ್ ಇರಲಿ. ಪೂರ್ವ ದೇಶಗಳ ಅಧ್ಯಾತ್ಮಿಕತೆ, ತತ್ವಜ್ಞಾನಗಳಲ್ಲಿ ಸಾಕಷ್ಟು ಸಾಮ್ಯತೆ ಇವೆ. ಮುಖ್ಯವಾಗಿ, ಮಾನವನಿಗಿಂತ ಬಹುದೊಡ್ಡದೊಂದು ಶಕ್ತಿ ಇದೆ, ಅದು ಎಲ್ಲವನ್ನೂ ನಿಯಂತ್ರಿಸುತ್ತಿದೆ. ಈ ಜಗತ್ತಿನಲ್ಲಿ ಮಾನವ ಅಷ್ಟೆ ಅಲ್ಲ, ಇಂತಹ ಕೋಟ್ಯಂತರ ಜೀವಿಗಳಿವೆ, ಈ ಭೂಮಿ ಅವೆಲ್ಲವುಗಳಿಗೂ ಸೇರಿದ್ದು. ಪ್ರಕೃತಿಯನ್ನು ನಮ್ಮ ಅವಶ್ಯಕತೆಗೆ ತಕ್ಕಷ್ಟು ಬಳಸಲು ನಮಗೆ ಅನುಮತಿ ಇದೆಯೇ ವಿನಃ ನಮ್ಮ ದುರಾಸೆಗಳನ್ನು ಈಡೇರಿಸಲು ಶೋಷಣೆ ಮಾಡಲು ಅಲ್ಲ ಎನ್ನುವುದು ಪೂರ್ವದ ಸಂಸ್ಕೃತಿಗಳಲ್ಲಿರುವ ಕೆಲವು ಸಮಾನ ಅಂಶಗಳು.
ಹಾಲಿವುಡ್ ಸಿನಿಮಾ ನಿರ್ದೇಶಕರು ಇಲ್ಲಿನ ಸಂಸ್ಕೃತಿಗಳ ಸಾರ ಸಂಗ್ರಹವನ್ನು ಗ್ರಹಿಸಿ ಅದನ್ನು ಆಧುನಿಕ ಜಗತ್ತಿಗೆ ಸರಿಹೊಂದುವಂತೆ ಕಥೆಗಳಲ್ಲಿ ಹೆಣೆಯುತ್ತಿದ್ದಾರೆ. ಹಾಲಿವುಡ್ ಸಿನಿಮಾವನ್ನು ಇಡೀ ವಿಶ್ವದ ಜನರು ನೋಡುವಾಗ ಎಲ್ಲರಿಗೂ ಒಪ್ಪಿಗೆಯಾಗುವ ತತ್ವಗಳನ್ನು ನೀಡಬೇಕು. ಭಾರತ ಸೇರಿದಂತೆ ಪೂರ್ವದ ಸಂಸ್ಕೃತಿಗಳಿಂದ ಪ್ರೇರಣೆ ಪಡೆದ ಪರಿಕಲ್ಪನೆಗಳು ಎಲ್ಲ ಕಡೆ ಸ್ವೀಕಾರ ಆಗುತ್ತಿರುವುದರಿಂದಲೇ ಈ ಹಾಲಿವುಡ್ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿವೆ.
ಏಕೆಂದರೆ ಭಾರತದಲ್ಲಾಗಲಿ ಚೀನಾದಲ್ಲಾಗಲಿ- ಎರಡೂ ಕಡೆ ಇರುವ ಇರುವ ಸಂಸ್ಕೃತಿಗಳು ಜನ್ಮ ತಾಳಿದ್ದು ಇಲ್ಲಿಯೇ ಆದರೂ ಅದರ ಸಂದೇಶ ಇಡೀ ಜಗತ್ತಿಗೆ ಸೇರಿದ್ದು. ವಸುಧೈವ ಕುಟುಂಬಕಂ ಪರಿಕಲ್ಪನೆಯಲ್ಲಿ ಮೂಡಿರುವ ಸಿದ್ಧಾಂತಗಳಾದ್ಧರಿಂದ ವಿಶ್ವದ ಎಲ್ಲರಿಗೂ ಅನ್ವಯವಾಗುತ್ತದೆ. ಇದೇ ಶಾಶ್ವತ ಮೌಲ್ಯಗಳನ್ನು ಇಂದು ಹಾಲಿವುಡ್ ಮೆಚ್ಚಿದೆ, ಹಣಕಾಸು ವಿಚಾರದಲ್ಲೂ ಗೆದ್ದಿದೆ.
ಈ ಹಿಂದಿನ ಎರಡು ಲೇಖನಗಳಲ್ಲಿ ನಾವು, ಬಾಲಿವುಡ್ ನ ಬೌದ್ಧಿಕ ದಾರಿದ್ರ್ಯದ ಕುರಿತು ಚರ್ಚೆ ನಡೆಸಿದ್ದೆವು. ಹೇಗೆ ವಿದೇಶದ ಸಂಸ್ಕೃತಿಗಳ ಅಗ್ಗದ ನಕಲಾಗುತ್ತಿವೆ ಎನ್ನುವುದನ್ನು ನೋಡಿದ್ದೆವು. ಶಾರುಖ್ ಖಾನ್ ನಟನೆಯ ಪಠಾನ್ ಇತ್ತೀಚಿನ ಉದಾಹರಣೆ ಅಷ್ಟೆ. ಅತ್ತ ಹಾಲಿವುಡ್ ಸಿನಿಮಾಗಳು ಭಾರತದತ್ತ, ಭಾರತದ ಸಂಸ್ಕೃತಿಯತ್ತ ನೋಡುತ್ತ ಅದರಿಂದ ಸ್ಫೂರ್ತಿ ಪಡೆಯುತ್ತಿದೆ, ಉತ್ತಮ ಹಣವನ್ನೂ ಗಳಿಸುತ್ತಿದೆ. ಆದರೆ ಬಾಲಿವುಡ್ ಎಂಬ ಭ್ರಮಾ ಜಗತ್ತು ಮಾತ್ರ ವಾಸ್ತವಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ.
ಹಾಲಿವುಡ್ ಸಿನಿಮಾಗಳು ಭಾರತದಿಂದ, ಅಧ್ಯಾತ್ಮದಿಂದ ಪ್ರೇರಣೆ ಪಡೆದಿವೆ ಎಂದ ತಕ್ಷಣ ಒಂದು ಪ್ರಶ್ನೆ ಮೂಡುತ್ತದೆ. ಹಾಗಾದರೆ ಈ ಸಿನಿಮಾಗಳನ್ನು ನೋಡಿದವರೆಲ್ಲ ಅಧ್ಯಾತ್ಮಜೀವಿಗಳು ಆಗಿಬಿಟ್ಟಿದ್ದಾರೆಯೇ ಎಂದು ಯಾರಾದರೂ ಪ್ರಶ್ನಿಸಬಹುದು. ಇದಕ್ಕೆ ಉತ್ತರ, ಇಲ್ಲ ಹಾಗೂ ಹೌದು. ಇಲ್ಲ ಏಕೆಂದರೆ ಒಂದೆರಡು ಸಿನಿಮಾಗಳನ್ನು ನೋಡಿ ಅದರಿಂದ ಪ್ರಭಾವಿತರಾಗುವ ಸಾಧ್ಯತೆ ಕಡಿಮೆ ಅಥವಾ ಅತ್ಯಂತ ವಿರಳ ಎನ್ನಬಹುದು. ಕನ್ನಡದಲ್ಲಿ ಬಂಗಾರದ ಮನುಷ್ಯ ನೋಡಿ ಸನ್ನಡತೆ ಕಲಿತವರು, ಕೃಷಿಗೆ ಮರಳಿದವರು, ಗಂಧದ ಗುಡಿ ನೋಡಿ ಫಾರೆಸ್ಟ್ ಆಫೀಸರ್ ಆಗಲು ಪ್ರೇರೇಪಣೆ ಪಡೆದವರಿದ್ದಾರೆ. ಆದರೆ ಒಟ್ಟಾರೆ ಸಾಮಾಜಿಕ ಸ್ವಭಾವವನ್ನೇ (Social Behaviour) ಬದಲಾಯಿಸಲು ಒಂದೆರಡು ಸಿನಿಮಾಗಳಿಂದ ಸಾಧ್ಯವಿಲ್ಲ. ಕನ್ನಡದಲ್ಲಿ, ವರದಕ್ಷಿಣೆ ವಿರುದ್ಧವಾಗಿ ನೂರಾರು ಸಿನಿಮಾಗಳು ಬಂದಿವೆ. ಅದರಿಂದ ಏನಾದರೂ ವರದಕ್ಷಿಣೆ ಪಿಡುಗನ್ನು ಕಡಿಮೆ ಮಾಡಲು ಆಗಿದೆಯೇ? ಇದಕ್ಕೂ ಹೌದು/ ಇಲ್ಲ ಎಂಬ ಉತ್ತರವೇ ಸಿಗುತ್ತದೆ. ಆದರೆ, ಸಿನಿಮಾಗಳು ದೀರ್ಘಕಾಲದಲ್ಲಿ ಜನಾಭಿಪ್ರಾಯವನ್ನು ಮೂಡಿಸುತ್ತವೆ.
ಉದಾಹರಣೆಗೆ ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ನಿರಂತರವಾಗಿ ಸಿನಿಮಾಗಳಲ್ಲಿ ತೋರಿಸಿರುವುದರಿಂದ ಸಮಾನತೆ ಕುರಿತು ಮಹಿಳೆಯರಲ್ಲಿ ಹಕ್ಕಿನ ಪ್ರಜ್ಞೆ ಮೂಡಿದೆ. ಅಂತರ್ಜಾತಿ ವಿವಾಹಗಳನ್ನು ಬೆಂಬಲಿಸಿದ ಸಿನಿಮಾಗಳಿಂದ ತರುಣ ತರುಣಿಯರು ಬದಲಾಗಿರುವುದು ಕಣ್ಮುಂದಿನ ವಾಸ್ತವ. ಸಿನಿಮಾ ಸಮಾಜದ ಆಲೋಚನೆಯಲ್ಲಿ ಸಾಕಷ್ಟು ಬದಲಾಯಿಸಿದೆ. ಅಂತರ್ಜಾತಿ ವಿವಾಹಕ್ಕೆ ಈಗಲೂ ಅನೇಕ ಕಡೆಗಳಲ್ಲಿ ವಿರೋಧ ಇದೆಯಾದರೂ ಅದು ಸಾಕಷ್ಟು ಪ್ರಮಾಣದಲ್ಲಿ ಸ್ವೀಕೃತವಾಗಿದೆ. ಅದಕ್ಕೆ ಸಿನಿಮಾವೂ ಒಂದು ಕಾರಣ.
ಸಿನಿಮಾ ಇತರೆ ಎಲ್ಲ ಸಮೂಹ ಮಾಧ್ಯಮಗಳಿಗಿಂತ ಹೆಚ್ಚು ಪ್ರಭಾವಿ. ಸಿನಿಮಾಗಳು ಮತ್ತು ಅಲ್ಲಿನ ನಾಯಕ-ನಾಯಕಿಯರು ಟ್ರೆಂಡ್ ಸೆಟ್ಟರ್ಸ್ ಎಂಬುದನ್ನು ಮಾರುಕಟ್ಟೆ ಜಗತ್ತೇ ಒಪ್ಪಿಕೊಂಡಿರುವ ಸತ್ಯ.
ನಿಧಾನಗತಿಯಲ್ಲಿ ಸಾಮಾಜಿಕ ಸ್ವಭಾವವನ್ನು ಸಿನಿಮಾಗಳು ಪ್ರಭಾವಿಸಬಲ್ಲವು. ಶಾಶ್ವತ ಮೌಲ್ಯಗಳನ್ನು ಆಧರಿಸಿ ಸಿನಿಮಾಗಳು ಕೆಲ ವರ್ಷಗಳು ಮೂಡಿಬಂದರೆ ಒಂದಷ್ಟು ವರ್ಷಗಳಲ್ಲಿ ಅಥವಾ ಒಂದೆರಡು ಪೀಳಿಗೆಯಲ್ಲಾದರೂ ಜನರ ಮಾನಸಿಕತೆಯಲ್ಲಿ ಬದಲಾವಣೆ ತರಬಹುದು. ಈ ನಿಟ್ಟಿನಲ್ಲಿ ಬಾಲಿವುಡ್ ಚಿಂತನೆ ನಡೆಸಲಿ ಎಂದು ನಾವು ಆಶಿಸೋಣ.
ಇದನ್ನೂ ಓದಿ | ವಿಸ್ತಾರ ಅಂಕಣ | ಪರಮ ಸಹಿಷ್ಣ ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !