ಪ್ರಜಾಪ್ರಭುತ್ವ ಎನ್ನುವುದು ಭಾರತೀಯರ ರಕ್ತದಲ್ಲೇ ಅಡಗಿದೆ ಎನ್ನುವುದು ಕ್ಲೀಷೆಯ ಮಾತಲ್ಲ. ರಾಜಾಡಳಿತದ ಕಾಲದಲ್ಲೂ ಇಲ್ಲಿ ನೆಲೆಯೂರಿದ್ದು ಪ್ರಜಾಪ್ರಭುತ್ವವೆ. ಸ್ವರೂಪ ಈಗಿನ ರೀತಿಯದ್ದಾಗಿರಲಿಲ್ಲ ಅಷ್ಟೆ. ಶ್ರೀರಾಮ ಚಂದ್ರನು ವನವಾಸ ಪೂರ್ಣಗೊಳಿಸಿ ಅಯೋಧ್ಯೆಗೆ ವಾಪಸಾಗಿ ರಾಜಾರಾಮನಾದ. ಪಟ್ಟಾಭಿಷೇಕದ ನಂತರ, ಅದರಲ್ಲೂ ಅಷ್ಟರ ವೇಳೆಗಾಗಲೆ ದೇವರ ಸ್ಥಾನ ಪಡೆದಿದ್ದ ರಾಮನನ್ನು ಪ್ರಶ್ನಿಸುವವರು ಯಾರೂ ಇರಲಿಲ್ಲ. ಇಂತಹ ಸಮಯದಲ್ಲೂ ರಾಮನ ಕಿವಿ, ನೆಲದಲ್ಲಿತ್ತು.
ಕಾಯಕ ಬಂಧು ಅಗಸನೊಬ್ಬ ತನ್ನ ಪತ್ನಿಯ ಜತೆ ಜಗಳವಾಡುತ್ತ, ಮನೆ ಬಿಟ್ಟು ಹೋದ ನಿನ್ನನ್ನು ಸೇರಿಸಿಕೊಳ್ಳಲು ನಾನೇನು ಶ್ರೀರಾಮಚಂದ್ರನೇ ಎಂದನಂತೆ. ಈ ಮಾತು ಶ್ರೀರಾಮನ ಕಿವಿಗೆ ಬಿತ್ತು ಎಂಬ ಕಥೆಯಿದೆ. ಕಥೆ ಸಲುವಾಗಿ ಹೀಗೆ ಒಬ್ಬ ಅಗಸನನ್ನು ಉದಾಹರಿಸಿರಬಹುದು. ನಿಜವಾಗಿಯೂ ಇದು ಶ್ರೀಸಾಮಾನ್ಯನ ದನಿ. ಆ ಅಗಸ, ಅದೆಲ್ಲ ಜನರ ಮನದಲ್ಲಿದ್ದ ಶಂಕೆಯ ಪ್ರತೀಕವಷ್ಟೆ. ಜನರ ನಡುವೆ ತನ್ನ ಹಾಗೂ ಆಡಳಿತದ ಕುರಿತು ಯಾವ ಭಾವನೆ ಇದೆ ಎಂದು ಸದಾ ಒಂದು ಕಿವಿಯನ್ನು ಇಟ್ಟಿರುತ್ತಿದ್ದ ಶ್ರೀರಾಮಚಂದ್ರ, ಸೀತಾ ಮಾತೆಯನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದ. ಸೀತಾರಾಮನಾಗಿದ್ದಾಗ, ಸೀತೆಗಾಗಿಯೇ ಕಾಡು ಮೇಡು ಅಲೆದು ರಾವಣನನ್ನು ಸಂಹಾರ ಮಾಡಿದ ರಾಮ. ಅದೇ ಪಟ್ಟಾಭಿಷೇಕವಾಗಿ ರಾಜಾರಾಮನಾದ ನಂತರ, ಗರ್ಭಿಣಿ ಹೆಂಡತಿಗಿಂತಲೂ ಆತನಿಗೆ ಪ್ರಜೆಗಳ ಯೋಗಕ್ಷೇಮವೇ ಮುಖ್ಯವಾಯಿತು. ಹಾಗಾದರೆ ಇದು ಪ್ರಜಾಪ್ರಭುತ್ವವಲ್ಲವೇ?
ನಂತರದಲ್ಲೂ ಪ್ರಜಾಪ್ರಭುತ್ವ ಎನ್ನುವುದು ಭಾರತೀಯ ಸಂಸ್ಕೃತಿಯ ಭಾಗವೇ ಆಗಿ ಮುಂದುವರಿದಿದೆ. ವೇದಗಳ ಕಾಲದಲ್ಲೂ, ಆಡಳಿತದಲ್ಲಿ ಜನರ ಅಭಿಪ್ರಾಯವನ್ನು ಪಡೆಯಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಅನುಸರಿಸಲಾಯಿತು.
ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೊಂದಿದ್ದ ಸ್ಪಷ್ಟ ಉದಾಹರಣೆಗಳಲ್ಲೊಂದು ಮೌರ್ಯ ಸಾಮ್ರಾಜ್ಯ. ಭಾರತದ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದ ಸಾಮ್ರಾಟ್ ಅಶೋಕನ ರಾಜ್ಯವೂ ಇದಕ್ಕೊಂದು ನಿದರ್ಶನ. ಪ್ರಜಾಪ್ರಭುತ್ವ ವ್ಯವಸ್ಥೆಯ ಜತೆಗೆ ನ್ಯಾಯಯುತ ಹಾಗೂ ಸಮಾನತೆಯ ಸಾಮ್ರಾಜ್ಯವನ್ನು ಸ್ಥಾಪಿಸುವುದು ಆತನ ಬದ್ಧತೆಯಾಗಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟವೂ ಇದೇ ಪ್ರಜಾಪ್ರಭುತ್ವದ ನಂಬಿಕೆಗಳ ತಳಹದಿಯಲ್ಲೇ ನಡೆಯಿತು. ಬ್ರಿಟಿಷರ ಆಗಮನಕ್ಕೂ ಮುನ್ನ ಕೇವಲ ಆಕ್ರಮಣಕಾರರನ್ನು ಸೋಲಿಸಲು ಸೀಮಿತವಾಗಿದ್ದ ಭಾರತೀಯರು ಬ್ರಿಟಿಷರ ಕಾಲದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯೇ ಸರಿಯಾದ ಮಾರ್ಗವೆಂದು ಕಂಡುಕೊಂಡರು. ಅಲ್ಲಿವರೆಗೆ ಎಷ್ಟೇ ಆಕ್ರಮಣಕಾರರನ್ನು ನಮ್ಮ ರಾಜರು ಸೋಲಿಸಿ ವಾಪಸ್ ಕಳಿಸಿದರು. ಕೆಲವರು ಇಲ್ಲೇ ಉಳಿದು ರಾಜ್ಯಭಾರ ಮಾಡಿದರು. ಹಾಗಾದರೆ ಇದು ಕೇವಲ ರಾಜರಿಂದ, ಸೈನ್ಯದಿಂದ ಆಗುವ ಕೆಲಸವಲ್ಲ. ಇಲ್ಲಿನ ಜನರಿಗೆ ತಾವು ಗುಲಾಮಗಿರಿಯಲ್ಲಿದ್ದೇವೆ, ಇದನ್ನು ಹೋಗಲಾಡಿಸಬೇಕು ಎಂಬ ಮನಃಸ್ಥಿತಿ ನಿರ್ಮಾಣ ಆಗದೇ ಪೂರ್ಣ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂಬ ಅರಿವಾಯಿತು.
ಲೋಕಮಾನ್ಯ ತಿಲಕರಾದಿಯಾಗಿ ಸ್ವಾತಂತ್ರ್ಯ ಹೋರಾಟಗಾರರು ಆರಂಭಿಸಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಕ್ಕೆ ಮಹಾತ್ಮಾ ಗಾಂಧಿ ವ್ಯಾಪಕತೆಯನ್ನು ದೊರಕಿಸಿಕೊಟ್ಟರು. ಹೀಗೆ, ಜನರಲ್ಲಿ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಶ. ಸಂವಿಧಾನ ನಿರ್ಮಾತೃಗಳೂ ಇದನ್ನೇ ಪಾಲಿಸಿದರು. ಭಾರತದ ಯಾವುದೇ ಪ್ರಜೆಗೆ ಅವರ ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಭೇದವಿಲ್ಲದೆ ಮತದಾನವನ್ನು ನೀಡಲಾಯಿತು. ಅತ್ಯಂತ ಮುಂದುವರಿದ ನಾಗರಿಕತೆ ಎನ್ನಲಾಗುವ ಅಮೆರಿಕದಲ್ಲೂ ಅನೇಕ ದಶಕಗಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಹೋರಾಟದ ನಂತರ ಅದನ್ನು ಪಡೆಯಲಾಯಿತು. ಭಾರತದಲ್ಲಿ ಇದ್ಯಾವುದೂ ಇಲ್ಲದೆ ಮಹಿಳೆಯರಿಗೂ ಅತ್ಯಂತ ಸಹಜವಾಗಿ ಮತದಾನದ ಹಕ್ಕು ನೀಡಲಾಯಿತು. ಇದು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳ ಮುಂದುವರಿದ ಭಾಗ.
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದಲ್ಲೇಕೆ ಮಿಲಿಟರಿ ಆಡಳಿತ ಸಾಧ್ಯವಿಲ್ಲ ಎಂದರೆ…
ಆದರೆ ಇಂದು ಏನಾಗಿದೆ? ಚುನಾವಣೆ ಎನ್ನುವುದೇ ಪ್ರಜಾಪ್ರಭುತ್ವ ಎಂದು ಭಾವಿಸಲಾಗಿದೆ. ಐದು ವರ್ಷಕ್ಕೆ ಒಮ್ಮೆ ಚುನಾವಣೆಯನ್ನು ನಡೆದು, ಅದರಲ್ಲಿ ಮತ ನೀಡಿ ಬಂದರೆ ಆಯಿತು. ರಾಜನು ಅಂದರೆ ಪ್ರಜೆಯು ತನ್ನ ಹಕ್ಕು ಚಲಾಯಿಸಿ ಆಯಿತು. ಇನ್ನು ಐದು ವರ್ಷ, ತಮ್ಮ ಪ್ರತಿನಿಧಿಗಳ ಮುಂದೆ ಸೊಂಟ ಬಗ್ಗಿಸಿ ನಿಲ್ಲುವುದೊಂದೇ ಮಾರ್ಗ ಎನ್ನುವಂತಾಗಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನಾಳುವವರು ಮತ್ತೊಂದು ಗುಲಾಮಗಿರಿಯನ್ನು ಸೃಷ್ಟಿಸುವ ವ್ಯವಸ್ಥಿತ ತಂತ್ರ ಹೆಣೆದಿದ್ದಾರೆ. ಸಮಾಜದ ಒಂದೊಂದೇ ಕ್ಷೇತ್ರವನ್ನು ರಾಜಕೀಯ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಸಾಗಿದೆ. ಸಮಾಜದ್ದೇ ಆಸ್ತಿಯಾಗಿದ್ದ ದೇವಸ್ಥಾನಗಳೂ ಇಂದು ಸರ್ಕಾರದ ಕಬಂಧ ಬಾಹುಗಳಲ್ಲಿ ಒಂದು ಸರ್ಕಾರಿ ಕಚೇರಿಯಂತೆ ಕೆಲಸ ಮಾಡುತ್ತಿವೆ. ಈ ಸರ್ಕಾರಿ ಆಡಳಿತಕ್ಕೆ ಯಾವ ಆಗಮ, ಸಂಪ್ರದಾಯ, ನಡವಳಿಕೆ, ಭಾವನೆಗಳ ಅರಿವಿಲ್ಲ. ಸರ್ಕಾರಿ ಕಚೇರಿಯ ರೀತಿ ಕಡತ ವಿಲೇವಾರಿ ಮಾಡುತ್ತ ಅಲ್ಲಿನ ಕೆಲಸಗಾರರಿಗೆ ಸಂಬಳ ನೀಡುವುದಷ್ಟೆ ಗೊತ್ತು. ಈ ಸರ್ಕಾರಿ ವ್ಯವಸ್ಥೆಯ ಹಿಂದೆ ನಿಂತು ಆಡಳಿತ ನಡೆಸುವುದು ಅದೇ ರಾಜಕಾರಣಿಗಳು, ಅವರ ಹಿಂಬಾಲಕರು. ಹೀಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸ್ವಾಭಿಮಾನವನ್ನು ಶೂನ್ಯವಾಗಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ.
ಹಾಗೆ ನೋಡಿದರೆ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನವು ನಿಜವಾದ ಪ್ರಜಾಪ್ರಭುತ್ವದ ಫಲವನ್ನು ಪ್ರಜೆಗಳಿಗೆ ನೀಡುತ್ತಿದೆ. ತಂತ್ರಜ್ಞಾನ ಮಾತ್ರವೇ ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣಲು ಸಾಧ್ಯ ಎಂಬ ಮಾತು ಈಗ ಜನಜನಿತವಾಗುತ್ತಿದೆ. ಒಮ್ಮೆ ನಿಯಮಗಳನ್ನು ರೂಪಿಸಿ ಅದರ ಮೂಲಕವೇ ಎಲ್ಲರೂ ಸರ್ಕಾರದೊಂದಿಗೆ ಸಂವಹನ ನಡೆಸಬೇಕು ಎಂದು ತೀರ್ಮಾನಿಸಿಬಿಟ್ಟರೆ ಅದು ಎಲ್ಲರನ್ನೂ ಒಂದೇ ಸಮನಾಗಿ ಕಾಣುತ್ತದೆ. ಸರ್ಕಾರದಿಂದ ನೀಡುವ ವಿಧವಾ ವೇತನ, ಪಿಂಚಣಿ, ಅಂಗವಿಕಲರ ವೇತನಗಳು ನಗರ, ಗ್ರಾಮೀಣ, ಗುಡ್ಡಗಾಡು, ಬಡವರು, ಮಹಿಳೆಯರು ಎಂಬ ಭೇದವಿಲ್ಲದೆ ಎಲ್ಲರ ಖಾತೆಗಳನ್ನೂ ನೇರವಾಗಿ ತಲುಪುತ್ತದೆ. ಅದರ ಫಲಾನುಭವಿಗಳು ತಮ್ಮ ಮರ್ಜಿಯಂತೆ ಹಣವನ್ನು ಪಡೆಯಬಹುದು. ಮಾಹಿತಿ ಸಂವಹನವೂ ಅಷ್ಟೆ. ಆಧುನಿಕ ತಂತ್ರಜ್ಞಾನದ ಫಲವಾಗಿ, ಸರ್ಕಾರದೊಂದಿಗೆ ಜನರ ನೇರ ಸಹಭಾಗಿತ್ವ ಸಾಧ್ಯವಾಗಿದೆ. ಇದೆಲ್ಲದರ ನಡುವೆಯೂ ಪ್ರಜಾಪ್ರಭುತ್ವವನ್ನು ಹಳಿ ತಪ್ಪಿಸುವ ಪ್ರಯತ್ನಗಳೂ ನಿರಂತರವಾಗಿ ನಡೆದಿವೆ.
ಭಾರತದ ಚುನಾವಣಾ ಆಯೋಗವು ತನ್ನ ಶಕ್ತಿಯನ್ನು ಬಳಸಿ, ಸರಿಯಾದ ಕಾಲಕ್ಕೆ ಚುನಾವಣೆಗಳನ್ನು ನಡೆಸುತ್ತಿದೆ. ಕರ್ನಾಟಕದಲ್ಲಿ 2023ರ ಅಂತ್ಯದ ವೇಳೆಗೆ ಹೊಸ ಸರ್ಕಾರವೊಂದು ರಚನೆಯಾಗುತ್ತದೆ ಎಂದು ಯಾವ ಭಾರತೀಯನಾದರೂ ಕಣ್ಮುಚ್ಚಿಕೊಂಡು ಹೇಳಬಹುದು. ಅಷ್ಟು ಕರಾರುವಕ್ಕಾಗಿ, ಸ್ವತಂತ್ರವಾಗಿ ಚುನಾವಣೆ ನಡೆಸುವ ನಿರ್ಧಾರ ಆಗುತ್ತಿದೆ. ಆದರೆ ನಮ್ಮ ರಾಜಕಾರಣಿಗಳ ಕೈಯಲ್ಲೇ ಇರುವ ವ್ಯವಸ್ಥೆ ಹೇಗಿದೆ?
ಇದನ್ನೂ ಓದಿ: ವಿಸ್ತಾರ ಅಂಕಣ: ʻಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ಎಂದು ಹೇಳುವ ಅನಿವಾರ್ಯತೆ ತಂದಿಟ್ಟಿದ್ದು ಯಾರು?
ಉದಾಹರಣೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಹೊಣೆಯನ್ನು ರಾಜ್ಯ ಚುನಾವಣಾ ಆಯೋಗಗಳು ಹೊರುತ್ತವೆ. ಈ ಸಂಸ್ಥೆಗಳೇನೋ ಚುನಾವಣೆ ನಡೆಸಲು ಸಿದ್ಧವಾಗಿರುತ್ತವೆ. ಆದರೆ ನಮ್ಮ ರಾಜಕಾರಣಿಗಳು ಇಲ್ಲೊಂದು ಚೆಕ್ ಪಾಯಿಂಟ್ ಇಟ್ಟಿದ್ದಾರೆ. ಕ್ಷೇತ್ರಗಳ ವಿಂಗಡಣೆ ಹಾಗೂ ಮೀಸಲಾತಿ ಅಧಿಕಾರವನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಇವೆರಡೂ ಆಗದೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೇ ಖ್ಯಾತವಾದ ಬೆಂಗಳೂರು ಸೇರಿ ಕರ್ನಾಟಕದ ಅನೇಕ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣವಾಗಿ ಎರಡು ವರ್ಷವಾದರೂ ಚುನಾವಣೆ ನಡೆದಿಲ್ಲ. ತಾವು ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಆಯ್ಕೆಯಾಗಿ ಬರುತ್ತಾರೆಯೋ ಅದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ಶಾಸಕರು ಹಾಗೂ ಸಂಸದರೂ ಸದ್ದೇ ಇಲ್ಲದಂತೆ ಮಾಡುತ್ತಿರುವ ನೇರ ಉದಾಹರಣೆ ಇದು.
ಈ ರೀತಿಯಲ್ಲಿ, ಭಾರತದ ಜನರು ಸದಾ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಹಂಬಲಿಸುತ್ತಿದ್ದರೆ ಇತ್ತ ನಮ್ಮ ಜನಪ್ರತಿನಿಧಿಗಳು ಅದರ ಹಳಿ ತಪ್ಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಚುನಾವಣೆಗಳು ನಡೆಯುತ್ತಿವೆ, ಜನರ ತೀರ್ಪನ್ನು ನೌವು ಗೌರವಿಸಬೇಕು ಎಂದು ರಾಜಕಾರಣಿಗಳು ಸರಾಗವಾಗಿ ಹೇಳಿಬಿಡುತ್ತಾರೆ. ಹಾಗಾದರೆ ಭ್ರಷ್ಟ, ನೈತಿಕತೆಯನ್ನು ಮರೆತವರನ್ನು ಜನರು ಆಯ್ಕೆ ಮಾಡಲು ಸಾಧ್ಯವಾಗಿದ್ದು ಹೇಗೆ? ನಿಜವಾಗಲೂ ಜನರು ಇಂತಹ ವ್ಯವಸ್ಥೆಯನ್ನು ಬಯಸುತ್ತಾರೆಯೇ? ಚುನಾವಣೆಗಳಲ್ಲಿ ನೈಜ ಅಭಿವೃದ್ಧಿ ವಿಚಾರಗಳ ಬದಲಿಗೆ ಭಾವನಾತ್ಮಕವಾದ, ಜಾತಿ ಆಧಾರಿತ, ವೈಯಕ್ತಿಕ ಆರೋಪಗಳನ್ನು ಮುಂದಾಗಿಸಿ ರಾಜಕಾರಣಿಗಳು ದಾಳಿ ನಡೆಸುತ್ತಾರೆ. ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸ್ಪಷ್ಟತೆ ಮೂಡಿಸದೆ ಗೊಂದಲ ಮೂಡಿಸಿ, ಉದ್ವೇಗಗೊಳಿಸಿ ಯಾವುದೋ ವಿಷಯಗಳತ್ತ ಗಮನ ಸೆಳೆಯಲಾಗುತ್ತದೆ. ರಾಜಕಾರಣಿಗಳು ಈಗ ಹೇಳುತ್ತಿರುವ ಭಾವನಾತ್ಮಕ ವಿಚಾರಗಳೇ ತಮ್ಮ ಜೀವನದ ಅತಿ ಮುಖ್ಯ ಅಂಶ ಎಂಬಂತೆ ಬಿಂಬಿಸಿ ಅದರ ಆಧಾರದಲ್ಲಿ ಮತದಾನ ಮಾಡುವಂತೆ ಅನಿವಾರ್ಯಗೊಳಿಸಲಾಗುತ್ತಿದೆ. ಹಂಸ ಕ್ಷೀರ ನ್ಯಾಯದಂತೆ ಹಾಲನ್ನು ನೀರಿನಿಂದ ಬೇರ್ಪಡಿಸುವ ಕಾರ್ಯ ಆಗಬೇಕಿದೆ.
ಇದನ್ನೂ ಓದಿ: ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?
ಚುನಾವಣೆ ಸಮಯದಲ್ಲಷ್ಟೆ ಅಲ್ಲ, ಆಡಳಿತ ಸಮಯದಲ್ಲೂ ಜಾಗರೂಕರಾಗಿದ್ದು ಸರಿಯಾದ ಮಾರ್ಗದಲ್ಲೇ ನಡೆಸುವ ಹೊಣೆಯೂ ನಾಗರಿಕ ಸಮಾಜದ ಮೇಲೆ ಇದೆ. ಇದಕ್ಕೆ ಮಾಧ್ಯಮ ಹಾಗೂ ನ್ಯಾಯಾಂಗ ಸಹಕಾರಿ ಆಗಬಲ್ಲದು. ತಾನೇ ಸಾವಿರಾರು ವರ್ಷಗಳಿಂದ ತಾನು ಕಾಪಾಡಿಕೊಂಡು ಬಂದಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದೇ ಅರ್ಥದಲ್ಲಿ ಮುಂದುವರಿಸಿಕೊಂಡು ಹೋಗುವ ಹೊಣೆಯೂ ಸಮಾಜದ ಮೇಲೆಯೇ ಇದೆ. ಸದ್ಯದಲ್ಲೇ ಎದುರಾಗುವ ಕರ್ನಾಟಕ ವಿಧಾನಸಭೆ ಚುನಾವಣೆ ಇದಕ್ಕೊಂದು ಅವಕಾಶ.
ಕಡೆ ಮಾತು;
ರಾಮರಾಜ್ಯದ ಕುರಿತು ಇನ್ನೊಂದು ವ್ಯಾಖ್ಯಾನವಿದೆ. ರಾಮರಾಜ್ಯ ಆಗಿದ್ದು ರಾಮನಿಂದಲ್ಲ, ಆತನ ಪಾದುಕೆ ಸೇವೆ ಮಾಡುತ್ತಾ ಮೂಲೆಗುಂಪಾದ ಭರತನಿಂದಲೂ ಅಲ್ಲ, ಬದಲಿಗೆ, ಆ ಇಬ್ಬರ ಅನುಪಸ್ಥಿತಿಯಲ್ಲಿ ಸುದೀರ್ಘ 14 ವರ್ಷ ಅಯೋಧ್ಯೆಯಲ್ಲಿ ರಾಜ್ಯಾಡಳಿತವನ್ನು ಬದುಕಿಸಿದ ಅಲ್ಲಿನ ಪ್ರಜೆಗಳಿಂದ! ಬಲಿಷ್ಠ ನಾಯಕನ ಅನುಪಸ್ಥಿತಿ ಹಾಗೂ ದುರ್ಬಲ ನಾಯಕನ ಉಪಸ್ಥಿತಿಯಲ್ಲೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಬೇಕು. ರಾಮರಾಜ್ಯ ಸಾಕಾರಗೊಂಡ ಬಗೆ ಇದು. ಅಂಥಾ ಪ್ರಜೆಗಳು ನಾವಾಗಬೇಕಿದೆ !