ಅಭಿವೃದ್ಧಿ ಎಂದ ಕೂಡಲೆ ಅನೇಕರ ಕಿವಿಗಳು ನಿಮಿರುತ್ತವೆ. ಅದಕ್ಕೆ ಅನೇಕ ಕಾರಣಗಳಿವೆ. ಸಾಮಾನ್ಯ ಜನರು ತಮ್ಮ ಜೀವನ ಹಸನಾಗುತ್ತದೆ ಎಂಬ ಬೆರಗುಗಣ್ಣಿನಿಂದ ನೋಡುತ್ತಾರೆ. ಇಷ್ಟು ದಿನ ಕಳೆದ ಕಷ್ಟದ ದಿನಗಳು ಇನ್ನು ಮುಂದೆ ಸ್ವಲ್ಪಮಟ್ಟಿಗಾದರೂ ಇಲ್ಲವಾಗುತ್ತವೆ ಎಂದು ಭಾವಿಸುತ್ತಾರೆ. ನಮ್ಮ ಊರಿಗೊಂದು ಉತ್ತಮ ರಸ್ತೆಯಾದರೆ ದಿನನಿತ್ಯ ವ್ಯಾಪಾರಕ್ಕೆ, ಉದ್ಯೋಗಕ್ಕೆ ಸರಾಗವಾಗಿ ಹೋಗಿಬರಬಹುದು. ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯಲು ಸಲೀಸಾಗುತ್ತದೆ. ನಮ್ಮೂರಿನ ಶಾಲೆಗೆ ಆಗಮಿಸಲು ಶಿಕ್ಷಕರು ಹಿಂದೇಟು ಹಾಕುವುದಿಲ್ಲ… ಹೀಗೆ ಹತ್ತಾರು ಕನಸುಗಳು ಚಿಗುರುತ್ತವೆ.
ಆದರೆ ಇನ್ನೊಂದು ಕಡೆ ಹಾಗಿರುವುದಿಲ್ಲ. ಅಭಿವೃದ್ಧಿ ಎಂದ ಕೂಡಲೆ ತಮ್ಮ ರಿಯಲ್ ಎಸ್ಟೇಟ್ ಕಂಪನಿಗೆ ಲಾಭವಾಗುತ್ತದೆ, ತಮ್ಮ ಗುತ್ತಿಗೆ ಕಂಪನಿಗೆ ಕೆಲಸ ಸಿಗುತ್ತದೆ, ಇದರಿಂದ ತಮಗೆ ಇನ್ನಷ್ಟು ಹಣ ಲಭಿಸುತ್ತದೆ ಎಂಬ ಲೆಕ್ಕಾಚಾರ ಮಾಡುವವರೂ ಇರುತ್ತಾರೆ. ಅಭಿವೃದ್ಧಿಯನ್ನು ಒಂದು ಸಹಜ ಪ್ರಕ್ರಿಯೆಯಾಗಿ ನೋಡಿದರೆ ಇದು ತಪ್ಪಲ್ಲ. ಆದರೆ ಹಾಗೆ ಸಹಜವಾಗಿ ಇದು ಆಗುತ್ತಿಲ್ಲ.
ಒಂದು ಕಾಲದಲ್ಲಿ ಇಡೀ ದೇಶದ ಜನಕ್ಕೆ ಮೆಟ್ರೊ ರೈಲಿನ ಕನಸನ್ನು ಬಿತ್ತಲಾಯಿತು. ಆಂಧ್ರಪ್ರದೇಶದ ವಿಜಯವಾಡ ಹಾಗೂ ವಿಶಾಖಪಟ್ಟಣಂನಲ್ಲಿ ಮೆಟ್ರೊ ಪ್ರಸ್ತಾಪನೆ, ಯೋಜನೆ ಜಾರಿಯಲ್ಲಿದೆ. ಈ ಹಿಂದೆ ಸ್ನೇಹಿತರೊಬ್ಬರ ಜತೆಗೆ ಮಾತನಾಡುವಾಗ, ತಿರುಪತಿಯಲ್ಲೂ ಮೆಟ್ರೊ ರೈಲು ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಹೊಂದಿದೆ ಎಂದರು. ವಿಶಾಖಪಟ್ಟಣಂ ಹಾಗೂ ವಿಜಯವಾಡ ಉದ್ಯಮ ನಗರಗಳಾಗಿ ಬೆಳೆದಿವೆ. ನಗರೀಕರಣದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ, ಅಲ್ಲಿಗೆ ಮೆಟ್ರೊ ಮಾಡುವುದು ಸರಿ. ತಿರುಪತಿಗೂ ಮೆಟ್ರೊ ಅವಶ್ಯಕತೆ ಇದೆಯೇ? ಅಲ್ಲಿನ ಆರ್ಥಿಕತೆಗೆ ಈ ದೊಡ್ಡ ಮಟ್ಟದ ಹೂಡಿಕೆಯ ‘ಬಿಳಿಯಾನೆʼಯನ್ನು ಸಾಕಲು ಶಕ್ತಿ ಇದೆಯೇ? ಎಂದು ಕುತೂಹಲಕ್ಕೆ ಕೇಳಿದೆ. ಅದಕ್ಕೆ ಆ ಸ್ನೇಹಿತರು ತುಸು ಅಸಮಾಧಾನಗೊಂಡವರಂತೆ, ಹಾಗಾದರೆ ತಿರುಪತಿಯ ಜನರಿಗೆ ಅಭಿವೃದ್ಧಿಯ ಫಲ ಸಿಗಬಾರದೆ? ದೊಡ್ಡ ದೊಡ್ಡ ನಗರದ ಜನರಿಗೆ ಮಾತ್ರ ಸಿಗುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಂಚಾರಿ ವ್ಯವಸ್ಥೆಯು ತಿರುಪತಿಗೂ ಸಿಗುವುದರಲ್ಲಿ ತಪ್ಪೇನು? ಎನ್ನುತ್ತಾ ಮಾತನಾಡತೊಡಗಿದರು.
ಹೀಗೆ, ಅಭಿವೃದ್ಧಿ ಹೆಸರಿಗೆ ಕೆಲವು ಯೋಜನೆಗಳು ಸೇರಿಕೊಂಡುಬಿಟ್ಟಿವೆ. ಅವುಗಳನ್ನು ಪ್ರಶ್ನೆ ಮಾಡಿದ ಕೂಡಲೆ ಅಭಿವೃದ್ಧಿ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಲಾಗುತ್ತದೆ. ನಿಜವಾಗಿಯೂ ನಮ್ಮ ಊರಿಗೆ ಮೆಟ್ರೊ ಬೇಕೆ, ನೂರು ಅಡಿ ರಸ್ತೆಯ ಅಗತ್ಯವಿದೆಯೇ? ಈ ದೊಡ್ಡ ಯೋಜನೆಗಳಿಂದ ಸಣ್ಣ ನಗರದ ಸಣ್ಣ ವ್ಯಾಪಾರಿಗಳು ನೆಲಕಚ್ಚುತ್ತಾರೆ. ದೊಡ್ಡ ಮಾಲ್‌ಗಳು, ಶೋರೂಂಳು ತಲೆಯೆತ್ತುತ್ತವೆ. ಭಾರತದ ವ್ಯಾಪಾರ ಜಗತ್ತಿನ ವಿಕೇಂದ್ರೀಕರಣ ನಾಶವಾಗಿ ಏಕಸ್ವಾಮ್ಯತೆ ಮೂಡುತ್ತದೆ ಎಂದು ಯಾರಾದರೂ ತಜ್ಞರು ಹೇಳಿದರೆ ಅವರೂ ಅಭಿವೃದ್ಧಿ ವಿರೋಧಿಗಳೆಂದು ಬಿಂಬಿಸಲ್ಪಡುತ್ತಾರೆ.
ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯೂ ಒಂದು. ಇದು ವಿಶ್ವದಾದ್ಯಂತ ವರ್ಷಕ್ಕೆ 80 ಲಕ್ಷಕ್ಕೂ ಹೆಚ್ಚೂ ಜನರನ್ನು ಕೊಲ್ಲುತ್ತಿದೆ. ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಹೆಚ್ಚಿನ ಜನರು ಸಾವಿಗೀಡಾಗುತ್ತಿದ್ದಾರೆ. ಆದರೆ ಧೂಮಪಾನ ಮಾಡದೆ, ಸ್ವಚ್ಛ ಜೀವನಶೈಲಿ ರೂಪಿಸಿಕೊಂಡಿರುವವರೂ ಪರೋಕ್ಷ ಧೂಮಪಾನಕ್ಕೆ ಬಲಿಯಾಗುತ್ತಿದ್ದಾರೆ. ಯಾವುದೇ ಧೂಮಪಾನದ ದುಶ್ಚಟ ಇಲ್ಲದ 12 ಲಕ್ಷ ಜನರು ವರ್ಷಕ್ಕೆ ಸಾಯುತ್ತಿದ್ದಾರೆ. ವಿಶ್ವಾದಾದ್ಯಂತ ಇರುವ ನೂರು ಕೋಟಿಗೂ ಹೆಚ್ಚಿನ ಧೂಮಪಾನಿಗಳಲ್ಲಿ ಸುಮಾರು 80%ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಭಾರತವೂ ಸೇರಿದೆ. ಇಲ್ಲಿ ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ. ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನು ಮಾಡುವ ಬದಲಾಗಿ ತಂಬಾಕಿಗೆ ಖರ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ ಎಂದು ಅಂತಾರಾಷ್ಟ್ರೀಯ ವರದಿಗಳು ಹೇಳುತ್ತವೆ.
ಸರ್ಕಾರದ ವತಿಯಿಂದ ಧೂಮಪಾನ ತಡೆಗೆ ತಂಡಗಳನ್ನು, ಸಮಿತಿಗಳನ್ನು ರಚಿಸಲಾಗಿದೆ. ಈ ರೀತಿ ಸಮಿಯಲ್ಲಿರುವ ಸದಸ್ಯರ ಕ್ರಿಯಾಶೀಲತೆಯಿಂದಾಗಿ ಮೈಸೂರು ಜಿಲ್ಲೆಯ ನಗುವಿನಹಳ್ಳಿ ಗ್ರಾಮವನ್ನು ತಂಬಾಕು ಮಾರಾಟ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ. ಸುಮಾರು ಎರಡೂವರೆ ಸಾವಿರ ಜನರಿರುವ ಈ ಗ್ರಾಮದ ಅಂಗಡಿಗಳಲ್ಲಿ ಸಿಗರೇಟ್, ಬೀಡಿ ಸೇರಿ ಯಾವುದೇ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ. ಜತೆಗೆ ಪ್ರತಿ ಅಂಗಡಿಯಲ್ಲೂ ತಂಬಾಕು ಸೇವನೆಯಿಂದ ಆಗುವ ದುಶ್ಚಟಗಳ ಮಾಹಿತಿ ಅಳವಡಿಸಲಾಗಿದೆ. ಇದೇ ರೀತಿ ಮಂಡ್ಯ ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲೂ ತಂಬಾಕು ಮಾರಾಟ ಮುಕ್ತ ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಹಾಗೆಂದು ಈ ಗ್ರಾಮಗಳಲ್ಲಿರುವ ಯಾರೂ ತಂಬಾಕು ಸೇವನೆ ಮಾಡುವುದಿಲ್ಲ ಎಂದಲ್ಲ. ಮೊದಲ ಹಂತದಲ್ಲಿ ಮಾರಾಟವನ್ನು ನಿಲ್ಲಿಸಲಾಗಿದೆ. ಹೊಸದಾಗಿ ಸೇವನೆ ಮಾಡುವವರ ಸಂಖ್ಯೆ ಇದರಿಂದ ಗಣನೀಯವಾಗಿ ತಗ್ಗುತ್ತದೆ. ಗ್ರಾಮದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳ ಮೂಲಕ, ಈಗಾಗಲೆ ಸೇವಿಸುತ್ತಿರುವವರನ್ನು ವಿಮುಕ್ತರಾಗಿಸುವ ಕೆಲಸ ನಡೆಯುತ್ತದೆ ಎಂದು ಅಲ್ಲಿನವರು ಹೇಳುತ್ತಾರೆ. ಇದೇ ರೀತಿ ಭಾರತದ ಗ್ರಾಮಗಳು ತಂಬಾಕು ಮುಕ್ತವಾದರೆ ಅದು ಅಭಿವೃದ್ಧಿ ಅಲ್ಲವೇ?
ನಮ್ಮ ಸರ್ಕಾರಗಳು ರೂಪಿಸಿರುವ ಅಭಿವೃದ್ಧಿ ಎನ್ನುವ ಜಾಲದಲ್ಲಿ ಈ ವಿಚಾರ ಸೇರುವುದೇ ಇಲ್ಲ. ಜಿಲ್ಲಾಧಿಕಾರಿಗಳೇನಾದರೂ ತಂಬಾಕು ಮುಕ್ತ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರೆ ಅದಕ್ಕೆ ರಾಜಕೀಯ ಬಾಸ್‌ಗಳ ಬೆಂಬಲ ಸಿಗುತ್ತದೆಯೇ? ನಗರದಲ್ಲಿ ಆಗಬೇಕಿರುವ ಫ್ಲೈ ಓವರ್, ರಸ್ತೆ ಅಗಲ ಮಾಡುವಿಕೆ, ಹೊಸ ಲೇಔಟ್‌ಗಳಿಗೆ ಒಪ್ಪಿಗೆ ಪಡೆಯುವಂತಹ ʼಅಭಿವೃದ್ಧಿʼ ಕಾರ್ಯಗಳ ನಡುವೆ ಇಂತಹದ್ದಕ್ಕೆ ಜಿಲ್ಲಾಧಿಕಾರಿ ತೊಡಗಿಕೊಳ್ಳಲು ಅವಕಾಶ ನೀಡಲಾಗುತ್ತದೆಯೇ?
ಇದನ್ನೂ ಓದಿ: ವಿಸ್ತಾರ ಅಂಕಣ | ರಾಜಕಾರಣಿಗಳು ನಮಗೆ ಹೇಳುತ್ತಿರುವ ʼಅಭಿವೃದ್ಧಿʼ, ನಿಜವಾಗಿಯೂ ಸಮಾಜದ ʼಅಧೋಗತಿʼ
ಇದಕ್ಕಾಗಿಯೇ, ಭಾರತದಲ್ಲಿ ಅಭಿವೃದ್ಧಿ ಮಾದರಿಗಳನ್ನು ಪ್ರಾಚೀನ ಕಾಲದಲ್ಲೇ ತಿಳಿಸಲಾಗಿದೆ. ಅದಕ್ಕೆ, ʼಅಭಿವೃದ್ಧಿʼ ಎಂಬ ಲೇಬಲ್ ಕೊಟ್ಟಿರಲಿಲ್ಲ ಅಷ್ಟೆ. ಧರ್ಮ-ಅರ್ಥ-ಕಾಮ-ಮೋಕ್ಷಗಳು ನಮಗೆ ಅಭಿವೃದ್ಧಿ ಮಾದರಿಯಂತೆ ಕಾಣುವುದೇ ಇಲ್ಲ. ಇದು ಅಧ್ಯಾತ್ಮದ ವಿಚಾರ ಎಂದು ಪಕ್ಕಕ್ಕೆ ಇಡಲಾಗುತ್ತದೆ. ಅದರಲ್ಲಿ ಅರ್ಥವನ್ನು ಮಾತ್ರ ಪಡೆದುಕೊಳ್ಳಲಾಗುತ್ತದೆ. ಉಳಿದ ಮೂರಕ್ಕೂ, ಸರ್ಕಾರಕ್ಕೂ ಸಂಬಂಧವಿಲ್ಲ ಎನ್ನಲಾಗುತ್ತದೆ. ಅದೇ ರೀತಿ, ʼಸರ್ವೇ ಭವಂತು ಸುಖಿನಃʼ ಎಂದು ಹೇಳುವ ಭಾರತೀಯ ಚಿಂತನೆಯಲ್ಲಿ ಎಲ್ಲವನ್ನೂ ಒಳಗೊಳ್ಳಲಾಗಿದೆ. ಸರ್ವೇ ಎಂದರೆ ಕೇವಲ ಮನುಷ್ಯನದಲ್ಲ. ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳೂ ಸೇರಿವೆ. ಪ್ರಕೃತಿಯ ಯಾವುದೂ ನಿರುಪಯುಕ್ತವಲ್ಲ. ಅದಕ್ಕೆ ಅದರದ್ದೇ ಆದ ಸ್ಥಾನವಿದೆ, ಕೆಲಸವಿದೆ. ಒಂದು ಕೊಂಡಿ ಕಳಚಿದರೂ ಮತ್ತೊಂದರ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
ಈ ರೀತಿ ಭಾರತೀಯ ತತ್ವ ಚಿಂತನೆಯ ಆಧಾರದಲ್ಲಿ ಡಾ. ಭಜರಂಗಲಾಲ್ ಗುಪ್ತ ಅವರು ʼಸುಮಂಗಲಂʼ ಎನ್ನುವ ಅಭಿವೃದ್ಧಿ ಮಾದರಿಯನ್ನು ಪ್ರಸ್ತಾಪಿಸಿದ್ದರು. ಸರ್ವೇ ಭವಂತು ಸುಖಿನಃ ಎಂಬ ಚಿಂತನೆಯ ಆಧಾರದಲ್ಲೇ ರೂಪಿತಗೊಂಡ ಸುಮಂಗಲಂ ಮಾದರಿಯಲ್ಲಿ ದೇಶದ ಭೌತಿಕ ಅಭಿವೃದ್ಧಿ ಮಾತ್ರ ಇರಲಿಲ್ಲ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಯನ್ನು ಒಟ್ಟಾಗಿ ಸೇರಿಸಿ ಅದನ್ನು ಅಭಿವೃದ್ಧಿ ಎಂದು ಹೇಳಲಾಯಿತು. ಇದರಲ್ಲಿ, ಅವಕಾಶ ವಂಚಿತರಿಗೆ ಸಮಾನ ವೇದಿಕೆಗಳನ್ನು ಒದಗಿಸುವ ಸಾಮಾಜಿಕ ಸುಧಾರಣೆಗೂ ಒತ್ತು ನೀಡಲಾಗಿತ್ತು. ಈ ಕುರಿತು ಹೆಚ್ಚಿನ ಸಂಶೋಧನೆಗಳು ಹಾಗೂ ಸರ್ಕಾರದ ಆಡಳಿತದಲ್ಲಿ ಅಳವಡಿಸಿಕೊಂಡಿದ್ದನ್ನು ಇತ್ತೀಚಿನ ವರ್ಷದಲ್ಲಿ ನಾನಂತೂ ಕೇಳಿಲ್ಲ.
ಇನ್ನು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ತಿಳಿಸಿದ ಏಕಾತ್ಮ ಮಾನವತಾವಾದ ಸಾಕಷ್ಟು ಜನರಿಗೆ ಪರಿಚಿತ. ವ್ಯಕ್ತಿ. ಸಮಾಜ, ಸೃಷ್ಟಿ ಹಾಗೂ ಸಮಷ್ಟಿಯು ಒಂದಕ್ಕೊಂದು ಪೂರಕವಾದದ್ದು. ಒಂದರ ನಂತರ ಇನ್ನೊಂದಿಲ್ಲ. ಪಾಶ್ಚಾತ್ಯ ಪರಿಕಲ್ಪನೆಯಲ್ಲಿ ಮನುಷ್ಯನೇ ಅಭಿವೃದ್ಧಿಯ ಕೇಂದ್ರ. ಆದರೆ ಭಾರತದ ಪರಿಕಲ್ಪನೆಯು, ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ. ʼಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲʼ ಎನ್ನುವ ಚಿಂತನೆ. ಇಂತಹ ಏಕಾತ್ಮ ಮಾನವ ದರ್ಶನದ ಕುರಿತು ಪ್ರತಿ ವರ್ಷ ವಿಚಾರ ಸಂಕಿರಣಗಳು ನಡೆಯುತ್ತವೆ. ಆದರೆ ದೀನದಯಾಳ್ ಉಪಾಧ್ಯಾಯ ಅವರ ಚಿಂತನೆಗಳ ಆಧಾರದಲ್ಲೆ ರಾಜಕಾರಣ ಮಾಡುತ್ತೇವೆ ಎನ್ನುವ ಬಿಜೆಪಿ ಸರ್ಕಾರಗಳಲ್ಲೂ ಇದನ್ನು ಅನ್ವಯ ಮಾಡಲಾಗಿದೆಯೇ ಎನ್ನುವುದಕ್ಕೆ ಉತ್ತರವಿಲ್ಲ. ಸಾಮಾನ್ಯ ರೀತಿಯ ಕಲ್ಯಾಣ ಕಾರ್ಯಕ್ರಮಗಳಿಗೇ ದೀನದಯಾಳರ ಹೆಸರಿಟ್ಟರೆ ಅದು ಏಕಾತ್ಮಮಾನವತೆ ಆಗುತ್ತದೆಯೇ?
ಇದು ಆ ಒಂದು ಪಕ್ಷಕ್ಕೆ ತೆಗಳುವ ಮಾತಲ್ಲ. ನಮ್ಮ ಒಟ್ಟಾರೆ ಆಲೋಚನೆಯೇ ಹಾಗೆ ಆಗಿದೆ. ಕಳೆದ 75 ವರ್ಷಗಳಲ್ಲಿ, ಅಭಿವೃದ್ಧಿ ಎಂದರೆ ಇಂಥದ್ದೇ ಎನ್ನುವುದನ್ನು ತಲೆಗೆ ತುಂಬಲಾಗಿದೆ. ಅಭಿವೃದ್ಧಿ ಎಂದರೆ ಮಾನವನ ಏಳಿಗೆ. ಮನುಷ್ಯನ ಜೀವನವನ್ನು ಸುಂದರವಾಗಿಸಲು ಕೆಲಸ ಮಾಡುವುದೇ ಅಭಿವೃದ್ಧಿ ಎಂದು ಹೇಳಲಾಗಿದೆ. ಹೀಗಾಗಿ ಅಭಿವೃದ್ಧಿ ಹೆಸರಿನಲ್ಲಿ ಏನೇ ಮಾಡಿದರೂ ಜನರಿಂದ ಸಮರ್ಥನೆ ಸಿಗುತ್ತದೆ. ನಮ್ಮ ಊರಿನಲ್ಲಿ ಕಟ್ಟಿದ ರಸ್ತೆ, ಫ್ಲೈ ಓವರ್, ಮೆಟ್ರೊ ರೈಲುಗಳನ್ನು ಕಾಣುವ ನಾಗರಿಕ ಸಮಾಜ, ಅದೇ ಊರಿನಲ್ಲಿ ತಂಬಾಕು ಸೇವನೆ ಕಡಿಮೆ ಆಗಿರುವುದು, ಜನರು ನೈತಿಕತೆಯಿಂದ ಬದುಕುತ್ತಿರುವುದು, ಕಡಿಮೆ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಸರಿಯಾಗಿ ನೋಡಲಾರರು ಮತ್ತು ಅದು ಒಂದು ರೀತಿಯ ಅಭಿವೃದ್ಧಿ ಎಂದು ಭಾವಿಸಲಾರರು. ಇದೇ ಕಾರಣಕ್ಕೆ, ರಾಜಕಾರಣಿಗಳೂ ಚುನಾವಣೆ ಸಮಯದಲ್ಲಿ ಬೇಕಾಬಿಟ್ಟಿ ಘೋಷಣೆಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ನನಗೆ ಯಾವುದೋ ಪಕ್ಷ ಬಿಟ್ಟಿಯಾಗಿ ಏನನ್ನೋ ಕೊಡುತ್ತದೆ ಎಂದರೆ ಅದು ನನ್ನ ಅಭಿವೃದ್ಧಿಯೇ? ಅಥವಾ ನನ್ನ ಮಕ್ಕಳಿಗೆ ಕೆಲಸ ಕೊಟ್ಟರೆ ಅಭಿವೃದ್ಧಿಯೇ? ಎಂದು ಆಲೋಚಿಸುವ ಸಂಯಮವನ್ನು ಸಮಾಜವೇ ಬೆಳೆಸಿಕೊಳ್ಳಬೇಕಿದೆ. ಅಭಿವೃದ್ಧಿಗೆ ಭಾರತೀಯ ಮಾದರಿಗಳನ್ನು ಇನ್ನಷ್ಟು ಅಧ್ಯಯನ ನಡೆಸುವ, ವಿಕಸಿತಗೊಳಿಸುವ ಕಾರ್ಯವನ್ನು ಮಾಡಬೇಕಿದೆ.
ಒಮ್ಮೆ ಉತ್ತರ ಕರ್ನಾಟಕ ಬಾಗಲಕೋಟೆ ಪ್ರವಾಸದಲ್ಲಿದ್ದಾಗ, ಹೆದ್ದಾರಿಯಲ್ಲಿ ನೂರಾರು ಕುರಿಗಳನ್ನು ಒಗ್ಗೂಡಿಸಿಕೊಂಡು ಹೋಗಲು ಪರದಾಡುತ್ತಿದ್ದ ಕುರಿಗಾಹಿಗಳನ್ನು ಗಮನಿಸಿದೆ. ವಾಹನಗಳ ಸಂಚಾರ ಆರ್ಭಟದಲ್ಲಿ ಅವರು ತಮ್ಮ ಕುರಿಮಂದೆ ನಿಯಂತ್ರಿಸಲು ಪರದಾಡುತ್ತಿದ್ದರು. ಮಾತನಾಡಬೇಕು ಎನಿಸಿ ಕೆಳಗಿಳಿದು, ಅವರೊಂದಿಗೆ ಕುಶಲೋಪರಿಗೆ ಇಳಿದೆ. “ಹೆದ್ದಾರಿಯಲ್ಲಿ 5 ಕಿ. ಮೀ. ದೂರ ಸಾಗಿದರೆ ಸಿಗುವ ಹಳ್ಳಿಯ ಜಮೀನ್ದಾರ್ ತೋಟಕ್ಕೆ ಕುರಿಮಂದೆ ಹೋಗುವುದಿತ್ತು. ಆ ಹೆದ್ದಾರಿ ನಿರ್ಮಾಣಕ್ಕೆ ಪೂರ್ವದಲ್ಲಿ ಕುರಿಮಂದೆ ಸಾಗಿಸುವುದು ಕಷ್ಟವಾಗಿರಲಿಲ್ಲ. ಆದರೆ, ಈಗ ಆ ರಸ್ತೆಯಲ್ಲಿ ಕುರಿ ಮಂದೆ ಸಾಗಿಸುವುದೇ ಕಷ್ಟವಾಗಿದೆ,” ಎಂದರು. ಹೆದ್ದಾರಿ ಮಾಡಿದ್ದೇ ತಪ್ಪಾಯಿತೇ ಎಂದೆ. ಅದಕ್ಕವರು “ಈ ರಸ್ತೆ ಬದಿಯಲ್ಲಿ ಮರಗಿಡಗಳು ಇರೋದಿಲ್ಲ. ಆಡು ಕುರಿ ಮುಟ್ಟಲು ಸೊಪ್ಪು ಸೆದೆ ಕೇಳೊದೆಂತು? ಟಾರ್ ರಸ್ತೆಯಲ್ಲಿ ಬರಿಗಾಲಲ್ಲಿ ನಾವೇ ಹೆಜ್ಜೆ ಹಾಕೋದು ಬಹಳ ಕಷ್ಟ. ಮೂಕ ಪ್ರಾಣಿಗಳು ಮ್ಯಾಮ್ಯಾ ಅಂತಾವೆ, ಅವಕ್ಕೇನು ಕಷ್ಟವೋ? ಏನ್ ಸುಡುಗಾಡು ರಸ್ತೆನೊ, ಅದೇನು ಹೆದ್ದಾರಿಯೋ, ಇಂಥಾ ರೋಡು ಇಲ್ಲಿಗ್ಯಾಕೆ ಸ್ವಾಮಿ? ಇದೇನು ಬೆಂಗ್ಳೂರಾ? ನಮ್ಮ ಕುರಿಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ,” ಎಂದರು!
ನೂರಾರು ಕಾರುಗಳು ಶರವೇಗದಲ್ಲಿ ಚಲಿಸಲು ಯೋಗ್ಯವಾದುದು ಒಳ್ಳೆಯ ಹೆದ್ದಾರಿಯಲ್ಲ. ಬದಲಿಗೆ, ಯಾವ ಹೆದ್ದಾರಿಯ ಫುಟ್ ಪಾತಿನಲ್ಲಿ ಪಾದಚಾರಿಯೊಬ್ಬ, ವಾಹನಗಳ ಭಯವಿಲ್ಲದೇ ಓಡಾಡುವನೋ, ಅದು ಒಳ್ಳೆಯ ಹೆದ್ದಾರಿ!
ಇದನ್ನೂ ಓದಿ: ವಿಸ್ತಾರ ಅಂಕಣ | ಈ ಇಬ್ಬರು ಭಾರತದ ಸಾಮಾಜಿಕ ಬದುಕಿನ ರಾಯಭಾರಿಗಳು!