Site icon Vistara News

ವಿಸ್ತಾರ ಅಂಕಣ | ಬ್ರಿಟಿಷರು ನಮ್ಮನ್ನು ಬರ್ಬಾದ್ ಮಾಡುವವರೆಗೆ ಭಾರತದ ಆರ್ಥಿಕತೆ ವಿಶ್ವದಲ್ಲೇ ನಂ.1 ಆಗಿತ್ತು ಎನ್ನುವುದು ಎಷ್ಟು ಜನರಿಗೆ ಗೊತ್ತು?

kohinoor india gdp

ಭಾರತವನ್ನು 5 ಟ್ರಿಲಿಯನ್ ಡಾಲರ್ ಮೊತ್ತದ ಆರ್ಥಿಕತೆ ಮಾಡುವುದು ನಮ್ಮ ಪರಮಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಆರನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದ ಭಾರತ ಇತ್ತೀಚೆಗಷ್ಟೆ ಬ್ರಿಟನ್ನನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ. ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆಯನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯೋಣ ಎಂದು ಅನೇಕ ಬಾರಿ ಹೇಳಿರುವ ಮೋದಿ, ಗುರುವಾರವಷ್ಟೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ 26ನೇ ರಾಷ್ಟ್ರೀಯ ಯುವಜನಮೇಳ ಉದ್ಘಾಟನಾ ಸಮಾರಂಭದಲ್ಲೂ ಇದೇ ಮಾತನ್ನು ಪುನರುಚ್ಚರಿಸಿದರು. ಮೋದಿಯವರು ಈ ಮಾತನ್ನು ಹೇಳಿದ ಕೂಡಲೆ ಅಲ್ಲಿ ನೆರೆದಿದ್ದ ಯುವ ಸಮೂಹ ಸಹಜವಾಗಿಯೇ ರೋಮಾಂಚನಕ್ಕೆ ಒಳಗಾಯಿತು. ಎಲ್ಲರೂ ಹರ್ಷದಿಂದ ಈ ಘೋಷಣೆಯನ್ನು ಸ್ವಾಗತಿಸಿದರು. ಆದರೆ ಸುಮಾರು 1,800 ವರ್ಷಗಳವರೆಗೆ ಭಾರತವು ವಿಶ್ವದ ಆರ್ಥಿಕ ಸೂಪರ್ ಪವರ್ ಆಗಿತ್ತು ಎನ್ನುವುದು ಅಲ್ಲಿನ ಎಷ್ಟು ಯುವಜನರಿಗೆ ಗೊತ್ತು?

ಮೊದಲನೇ ಶತಮಾನದಿಂದ ಆರಂಭಿಸಿ ಬ್ರಿಟಿಷರು ಭಾರತವನ್ನು ಆಳಲು ಆರಂಭಿಸಿದ ಸುಮಾರು 18ನೇ ಶತಮಾನದವರೆಗೆ ಅಂದರೆ ಸುಮಾರು 1,800 ವರ್ಷಗಳ ಕಾಲ ಭಾರತವು ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿತ್ತು. ಸುಮಾರು ಕ್ರಿ.ಶ. 500ರಲ್ಲಿ ಐದಾರು ಸಂಸ್ಥಾನಗಳನ್ನೊಳಗೊಂಡ ಮಹಾಜನಪದವು ಬೆಳ್ಳಿಯ ನಾಣ್ಯಗಳನ್ನು ಠಂಕಿಸಿತ್ತು. ಈ ಅವಧಿಯಲ್ಲಿ ಅತಿ ಹೆಚ್ಚು ವ್ಯಾಪಾರ ಚಟುವಟಿಕೆಗಳು ನಡೆಯುತ್ತಿದ್ದವು. ಕ್ರಿ.ಶ. 300ರ ಹೊತ್ತಿಗೆ ಭಾರತದ ಬಹಳಷ್ಟು ಭಾಗಗಳನ್ನು ಮೌರ್ಯ ಸಾಮ್ರಾಜ್ಯ ಒಳಗೊಂಡಿತು. ಇದರಿಂದಾಗಿ ಆ ಎಲ್ಲ ಪ್ರದೇಶಗಳಲ್ಲಿ ರಾಜಕೀಯ ಏಕತೆ, ಮಿಲಿಟರಿ ಭದ್ರತೆಯ ಜತೆಗೆ ಸಮಾನವಾಗಿ ವ್ಯಾಪಾರ ನಡೆಸುವ ವಾತಾವರಣ ನಿರ್ಮಾಣವಾಯಿತು. ಇದರಿಂದಾಗಿ ಕೃಷಿ ಆರ್ಥಿಕತೆ ವೃದ್ಧಿ ಕಂಡಿತು. ಮೌರ್ಯ ಸಾಮ್ರಾಜ್ಯದ ನಂತರ ಬಂದ ಶಾತವಾಹನರು, ಚೋಳರು, ಪಾಂಡ್ಯರು, ಗುಪ್ತರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು ಸೇರಿ ವಿವಿಧ ಸಾಮ್ರಾಜ್ಯಗಳ ಸಮಯದಲ್ಲೂ ಆರ್ಥಿಕ ಆರ್ಥಿಕ ಪ್ರಗತಿ ಮುಂದುವರಿಯಿತು. ಈ ಸಮಯದಲ್ಲಿ ಹೆಚ್ಚಾಗಿ ದೇಸೀ ವ್ಯಾಪಾರ ಪ್ರಚಲಿತದಲ್ಲಿತ್ತು. ಆರ್ಥಿಕತೆ ಉತ್ತಮವಾಗಿದ್ದರೂ, ಈಗ ನಾವು ಆರ್ಥಿಕತೆಯನ್ನು ಅಳೆಯುವ ಜಿಡಿಪಿ ಬೆಳವಣಿಗೆ ತೀರಾ ಹೇಳಿಕೊಳ್ಳುವಂತಿರಲಿಲ್ಲವೇನೋ.

ವಿಜಯನಗರ ಸಾಮ್ರಾಜ್ಯದ ಪೇಟೆಬೀದಿಯ ಚಿತ್ರ

ನಂತರ, ಉತ್ತರದಲ್ಲಿ ಮುಸ್ಲಿಂ ಆಡಳಿತ, ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ವೇಗ ಪಡೆಯಿತು. ಬಹಳಷ್ಟು ಉತ್ಪನ್ನಗಳನ್ನು ಉತ್ಪಾದನೆ ಮಾಡಿ ವಿಶ್ವದ ನಾನಾ ಕಡೆಗಳಿಗೆ ರಫ್ತು ಮಾಡುವ ಕೇಂದ್ರವಾದ ಭಾರತದ ಜಿಡಿಪಿ, ವಿಶ್ವದ ಒಟ್ಟು ಜಿಡಿಪಿಯ ಶೇಕಡಾ 25ರಷ್ಟು ಪಾಲನ್ನು ಪಡೆದುಕೊಂಡಿತು. ಇಂದು ಈ ಮಾತನ್ನು ನಂಬಲು ಸಾಧ್ಯವಿಲ್ಲ. ಆದರೆ ಇದು ಸತ್ಯ. ಹಿಂದೊಮ್ಮೆ ವಿಶ್ವದ ಜಿಡಿಪಿಯ ಶೇಕಡಾ 35 ಪಾಲನ್ನೂ ಹೊಂದಿದ್ದ ಭಾರತದ ಆರ್ಥಿಕತೆ ನಿಜವಾಗಿ ಹಳ್ಳ ಹಿಡಿಯಲು ಆರಂಭವಾಗಿದ್ದು ಬ್ರಿಟಿಷರು ಆಡಳಿತ ನಡೆಸಲು ಆರಂಭಿಸಿದ ಮೇಲೆ.

1,700ನೇ ಇಸವಿಯಲ್ಲಿ ಅಂದರೆ ಬ್ರಿಟಿಷರು ಆಡಳಿತ ಆರಂಭಿಸುವ ಸಮಯದಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಶೇಕಡಾ 24.4 ಇದ್ದ ಭಾರತದ ಪಾಲು ಬ್ರಿಟಿಷರು ಭಾರತವನ್ನು ಬಿಟ್ಟು ತೆರಳುವ ಆಲೋಚನೆ ಮಾಡುವ ವೇಳೆಗೆ ಅಂದರೆ 1,900ರ ಸಮಯದಲ್ಲಿ ಕೇವಲ ಶೇಕಡಾ 4.2ಕ್ಕೆ ಕುಸಿದಿತ್ತು. 1,750ರಲ್ಲಿ ವಿಶ್ವದ ಶೇಕಡಾ 25 ಇದ್ದ ಕೈಗಾರಿಕಾ ಉತ್ಪಾದನಾ ಪ್ರಮಾಣವು 1,900ರ ವೇಳೆಗೆ ಕೇವಲ ಶೇಕಡಾ 2ಕ್ಕೆ ಬಂದು ನಿಂತಿತು. ಬ್ರಿಟಿಷ್ ಆಡಳಿತವು ಭಾರತದಲ್ಲಿದ್ದ ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳು, ಕರಕುಶಲ ಉದ್ಯಮಗಳನ್ನು ಬಹುತೇಕ ಹೊಸಕಿ ಹಾಕಿತು.

ನಿಜ, ಈ ಸಂಗತಿಯನ್ನು ಸಾಬೀತು ಪಡಿಸಲು ದೊಡ್ಡ ದೊಡ್ಡ ಸಂಶೋಧನೆಗಳು ನಡೆದು, ಪಂಡಿತರು ಮುಂದಿಡುವ ಅಂಕಿ-ಅಂಶಗಳನ್ನು ಸಾದರ ಪಡಿಸಬೇಕು. ಅದನ್ನು ಆರ್ಥಿಕ ವಿದ್ವಾಂಸರು ಮಾಡಲಿ. ಭಾರತದಲ್ಲಿ ಹಿಂದೊಮ್ಮೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿತ್ತು(ಜಿಡಿಪಿ) ಎಂದು ಹೇಳಲು, ನಾವು ಓದಿರುವ, ನೋಡಿರುವ ಹಾಗೂ ಕೇಳಿರುವ ಇತಿಹಾಸವೂ ಸಾಕೆನಿಸುತ್ತದೆ. ವಿಜಯ ನಗರ ಸಾಮ್ರಾಜ್ಯ ಕಾಲದಲ್ಲಿ ಹಂಪಿಯಲ್ಲಿ ಬೀದಿ ಬೀದಿಯಲ್ಲಿ ವಜ್ರ ವೈಢೂರ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಕಥಾನಕ, ಹಂಪಿಯ ವೈಭವ, ನಾಡಿನ ಪ್ರಾಚೀನ ಗುಡಿ ಗೋಪುರಗಳ ಶ್ರೀಮಂತಿಕೆ ಏನನ್ನು ಹೇಳುತ್ತದೆ? ನಾಡಿನ ದೊರೆ ಸಮೃದ್ಧವಾಗಿದ್ದಾಗ ಮಾತ್ರ, ಆ ಸಮಾಜದ ಧಾರ್ಮಿಕ-ಸಾಂಸ್ಕೃತಿಕ ಬದುಕು ಹಸನಾಗಿರುತ್ತದೆ.

ಪ್ರಧಾನಿ ಮೋದಿಯವರು ಉದ್ಘಾಟಿಸಿದ ಯುವಜನೋತ್ಸವದಲ್ಲಿ ನೆರೆದಿದ್ದ ಯುವಜನರಿಗೆ ಈ ಎಲ್ಲ ವಿಚಾರಗಳು ತಿಳಿದಿಲ್ಲ. (ಹಾಗೆ ನೋಡಿದರೆ, ಇದು ಯುವಜನರ ತಪ್ಪಲ್ಲ. ಸ್ವಾತಂತ್ರ್ಯದ ಬಳಿಕ ದೇಶವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದು ನಿರ್ಧಾರ ಮಾಡುವಾಗ ಆದ ವ್ಯತ್ಯಾಸದಿಂದಾಗಿ ಹೀಗೆ ಆಗಿದೆ. ಮತ್ತು ವಿದೇಶಿ ಚಿಂತನೆಯಿಂದ ಪ್ರಭಾವಿತರಾದ ನಮ್ಮ ಇತಿಹಾಸಕಾರರು ಇಂಥ ಸಂಗತಿಗಳನ್ನು ದಾಖಲಿಸಿಲ್ಲ. ಅವರ ಪರಂಪರೆಯೇ ಆಗಿರುವ ಈ ಹೊತ್ತಿನ ಇತಿಹಾಸಕಾರರು ಕೂಡ, ನಮ್ಮ ಸಂಸ್ಕೃತಿ, ಶ್ರೇಷ್ಠತೆಯನ್ನು ಹೇಳುವುದಿಲ್ಲ. ಅವರಿಗೆ ಈ ಬಗ್ಗೆ ಅನಾದರಣೆ ಇರಬಹುದು ಅಥವಾ ಕೀಳರಿಮೆಯ ಕಾಯಿಲೆಯಿಂದ ಅವರು ಬಳಲುತ್ತಿರಬಹುದು.)

ಇದೇ ಕಾರ್ಯಕ್ರಮದಲ್ಲಿ ಹಾಗೂ 2022ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೂ ಮೋದಿ ಹೇಳಿದ ಮತ್ತೊಂದು ಪ್ರಮುಖ ಅಂಶವಿದೆ. ಈಗ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶ ಆಚರಿಸುತ್ತಿದ್ದು, 100ನೇ ಸ್ವಾತಂತ್ರ್ಯ ದಿನ ಆಚರಿಸುವವರೆಗಿನ 25 ವರ್ಷಗಳನ್ನು ಅಮೃತ ಕಾಲ ಎಂದು ಕರೆದರು. ಈ ಅಮೃತ ಕಾಲದಲ್ಲಿ ದೇಶದ ಪ್ರತಿ ಪ್ರಜೆಯೂ ಐದು ಸಂಕಲ್ಪ ಮಾಡುವಂತೆ ಕರೆ ನೀಡಿದರು. ಅವುಗಳೆಂದರೆ, 1. ಭಾರತ ವಿಕಾಸವಾಗಬೇಕೆಂಬ ಗುರಿ ಎಲ್ಲರದ್ದೂ ಆಗಬೇಕು, 2. ಗುಲಾಮಿತನದ ಪ್ರತಿ ಕಣಕಣವನ್ನೂ ಕಿತ್ತೆಸೆಯಬೇಕು, 3. ನಮ್ಮ ವೈಭವಯುತ ಪರಂಪರೆಯ ಮೇಲೆ ಗೌರವ ಇರಬೇಕು, 4. ಏಕತೆಯನ್ನು ಹೊಂದಬೇಕು ಹಾಗೂ 5. ನಮ್ಮ ಕರ್ತವ್ಯಗಳನ್ನು ಮಾಡಬೇಕು.

ಇದನ್ನೂ ಓದಿ | ವಿಸ್ತಾರ ಅಂಕಣ | ಈ ಇಬ್ಬರು ಭಾರತದ ಸಾಮಾಜಿಕ ಬದುಕಿನ ರಾಯಭಾರಿಗಳು!

ಈ ಐದು ಅಂಶಗಳಲ್ಲಿ ಇಂದಿನ ಲೇಖನಕ್ಕೆ ಅತ್ಯಂತ ಹತ್ತಿರವಾದವು ಎಂದರೆ ಎರಡು ಮತ್ತು ಮೂರನೆಯ ಅಂಶ. ಭಾರತ ಎಂದರೆ ಏನು ಎಂದು ಸ್ವಾತಂತ್ರ್ಯಾನಂತರದಲ್ಲಿ ಬೋಧನೆ ಮಾಡಲಾಯಿತೋ ಅದೆಲ್ಲವೂ ವಿದೇಶಿ ಮಾನಸಿಕತೆಯಿಂದ ರೂಪಿಸಿದ ವ್ಯವಸ್ಥೆಯ ಪರಿಣಾಮ. ಸ್ವಾತಂತ್ರ್ಯಾನಂತರದಲ್ಲಿ ದೇಶದ ಚುಕ್ಕಾಣಿ ಹಿಡಿದ ನಾಯಕತ್ವಕ್ಕೆ, ಹೇಗಾದರೂ ಮಾಡಿ ದೇಶವನ್ನು ʼಅಭಿವೃದ್ಧಿʼ ಪಥದಲ್ಲಿ ಕೊಂಡೊಯ್ಯಬೇಕು ಎಂಬ ಆಸೆಯೇನೋ ಇತ್ತು. ಆದರೆ ನಮ್ಮ ದೇಶದ ಇತಿಹಾಸ, ಪರಂಪರೆಯಲ್ಲಿ ನಾವು ಹೇಗೆಲ್ಲಾ ವ್ಯಾಪಾರ, ಉದ್ಯಮ ನಡೆಸಿದ್ದೇವೆ ಎಂಬುದರ ಕುರಿತು ಆಗಿನ ನಮ್ಮ ನಾಯಕತ್ವ ಆಲೋಚಿಸಲೇ ಇಲ್ಲ. ಪಂಚವಾರ್ಷಿಕ ಯೋಜನೆಗಳನ್ನು ಹಾಕಿಕೊಂಡು ನೀರಾವರಿ, ಕೃಷಿ, ಸಮುದಾಯ ಅಭಿವೃದ್ಧಿ, ಇಂಧನ, ಸಾರಿಗೆ ಹಾಗೂ ಸಂವಹನ, ಕೈಗಾರಿಕೆ, ಸಾಮಾಜಿಕ ಸೇವೆಗಳು, ಭೂರಹಿತರ ಪುನರ್ವಸತಿ… ಹೀಗೆ ಅನೇಕ ಕ್ಷೇತ್ರಗಳಿಗೆ ಅಷ್ಟಿಷ್ಟು ಅನುದಾನಗಳನ್ನು ಮೀಸಲಿಟ್ಟು ಯೋಜನೆ ರೂಪಿಸಲಾಯಿತು. ಆದರೆ ಇದ್ದಕ್ಕಿದ್ದಂತೆ ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಸಂಪೂರ್ಣ ಕೈಗಾರಿಕೀಕರಣಕ್ಕೆ ಒತ್ತು ನೀಡಲಾಯಿತು.

ಮೂರನೇ ಪಂಚವಾರ್ಷಿಕ ಯೋಜನೆ ವೇಳೆಗೆ ಕೃಷಿಯತ್ತ ಗಮನ ನೀಡಿ, ಗೋಧಿ ಉತ್ಪಾದನೆಗೆ ಒತ್ತು ನೀಡಿತು. ಈ ಸಮಯದಲ್ಲಿ (1962) ಚೀನಾದೊಂದಿಗೆ ನಡೆದ ಯುದ್ಧದ ಸೋಲು, ಭಾರತದ ಆರ್ಥಿಕತೆಯ ಕೊರತೆಯನ್ನು ತೋರಿಸಿತು. ಓಹೋ, ಕೃಷಿಯೆಡೆಗೆ ಮಾತ್ರ ಗಮನ ನೀಡಿದರೆ ಸಾಲದು, ರಕ್ಷಣಾ ಉತ್ಪಾದನೆ ಹಾಗೂ ಸೇನಾ ಬಲವರ್ಧನೆಗೆ ಒತ್ತು ನೀಡಬೇಕು ಎಂದು ನಾಯಕರು ನಿರ್ಧರಿಸಿದರು. ಇದೇ ವೇಳೆಗೆ 1965ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧ, ಅದೇ ವರ್ಷ ದೇಶದಲ್ಲಿ ಎದುರಾದ ತೀವ್ರ ಬರಗಾಲ. ಇದೆಲ್ಲದರಿಂದಾಗಿ ಆರ್ಥಿಕತೆ ಮತ್ತೆ ಸಮತೋಲನ ಕಳೆದುಕೊಂಡರು. ದರ ನಿಯಂತ್ರಣಕ್ಕೆ ಗಮನ ನೀಡಲಾಯಿತು. 2012ರಲ್ಲಿ ರೂಪಿತವಾಗಿದ್ದು 12ನೇ ಪಂಚವಾರ್ಷಿಕ ಯೋಜನೆ. ನರೇಂದ್ರ ಮೋದಿ ಸರ್ಕಾರ ಬಂದ ನಂತರ ಯೋಜನಾ ಆಯೋಗವನ್ನು ಸಮಾಪ್ತಿ ಮಾಡಿ, ವಿಭಿನ್ನ ಕಾರ್ಯನೀತಿ, ರೂಪವನ್ನೊಳಗೊಂಡ ನೀತಿ ಆಯೋಗವನ್ನು ಸ್ಥಾಪಿಸಿತು. ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುತ್ತಿದ್ದದ್ದೇ ಯೋಜನಾ ಆಯೋಗವಾಗಿತ್ತು. 12ನೇ ಪಂಚವಾರ್ಷಿಕ ಯೋಜನೆ 2017ರಲ್ಲಿ ಮುಕ್ತಾಯವಾದ ನಂತರ ಮತ್ತೆ ಯಾವುದೇ ಪಂಚವಾರ್ಷಿಕ ಯೋಜನೆ ಮಾಡಲಾಗಲಿಲ್ಲ. ಸದ್ಯಕ್ಕೆ ರಕ್ಷಣಾ ವಲಯಕ್ಕೆ ಸೀಮಿತವಾಗಿ ಪಂಚವಾರ್ಷಿಕ ಯೋಜನೆ ಇನ್ನೇನು ಜಾರಿಯಲ್ಲಿದೆ, ಅದೂ ಇನ್ನೇನು ಮುಕ್ತಾಯದ ಹಂತದಲ್ಲಿದೆ.

ಇದನ್ನೂ ಓದಿ | ವಿಸ್ತಾರ ಅಂಕಣ | ಹಾಲಿವುಡ್ ನಮ್ಮ ಕಡೆ ನೋಡುತ್ತಿದೆ, ಬಾಲಿವುಡ್ ಎತ್ತ ಸಾಗುತ್ತಿದೆ?

ದೇಶಕ್ಕೆ ರೂಪಿಸಿದ ಪ್ರತಿ ಪಂಚವಾರ್ಷಿಕ ಯೋಜನೆಯೂ ಒಂದಿಲ್ಲೊಂದು ಅನುಕೂಲವನ್ನು ಮಾಡಿವೆ. ಒಂದಷ್ಟು ಹೆಜ್ಜೆ ಮುಂದೆ ನಡೆದಿದ್ದೇವೆ, ಅದರಲ್ಲಿ ಅನುಮಾನವಿಲ್ಲ. ಆದರೆ ನಿಜವಾಗಿ ಯಾವ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯಬೇಕು ಎಂಬ ಕುರಿತು ನಾಯಕರಲ್ಲಿ ದೂರದೃಷ್ಟಿಯ ಕೊರತೆ ಇತ್ತು ಎನ್ನುವುದು ಪ್ರತಿ ಪಂಚವಾರ್ಷಿಕ ಯೋಜನೆಯಲ್ಲಿದ್ದ ಆದ್ಯತೆಗಳಲ್ಲಿ ಬದಲಾವಣೆಗಳನ್ನು ಕಂಡಾಗ ತಿಳಿಯುತ್ತಿದೆ.

ಅಭಿವೃದ್ಧಿ, ಅಭಿವೃದ್ಧಿ ಎನ್ನುವ ಪದವನ್ನು ಕೇಳುತ್ತಲೇ ಐದಾರು ಶತಮಾನ ಕಳೆದ ಭಾರತೀಯರಿಗೆ ಅಭಿವೃದ್ಧಿಯ ನಿಜ ಫಲ ಮಾತ್ರ ಸಿಗಲೇ ಇಲ್ಲ. ತೊಂಬತ್ತರ ದಶಕದಲ್ಲಿ, ದೇಶವು ಸಾಲದ ಸುಳಿಗೆ ಸಿಲುಕುವ ಅಪಾಯದಲ್ಲಿದ್ದಾಗ ಅನಿವಾರ್ಯವಾಗಿ ಆರ್ಥಿಕತೆಯನ್ನು ಮುಕ್ತಗೊಳಿಸುವವರೆಗೆ ಭಾರತವು ವ್ಯಾಪಾರೋದ್ಯಮದಲ್ಲಿ ಬಾವಿಯೊಳಗಿನ ಕಪ್ಪೆಯಾಗಿತ್ತು. ನಮ್ಮ ದೇಶವನ್ನು ವಿದೇಶಿ ವ್ಯಾಪಾರಕ್ಕೆ ತೆರೆದುಬಿಟ್ಟರೆ ಕೊಚ್ಚಿ ಹೋಗುತ್ತೇವೆಯೇನೋ ಎಂಬ ಭಾವನೆಯೇ ನಮ್ಮನ್ನಾಳುವವರಲ್ಲಿತ್ತು. ಇದು ಬ್ರಿಟಿಷರು ತಮ್ಮ ಆಡಳಿತದಲ್ಲಿ ಭಾರತೀಯರಲ್ಲಿ ಉದ್ದೇಶಪೂರ್ವಕವಾಗಿ ಬಿತ್ತಿದ ಕೀಳರಿಮೆ. ಅಲ್ಲಿಗೆ, ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ ಎರಡನೇ ಅಂಶವನ್ನು (ಗುಲಾಮಿತನದ ಪ್ರತಿ ಕಣಕಣವನ್ನೂ ಕಿತ್ತೆಸೆಯಬೇಕು) ಅನುಸರಿಸುವುದು ಇದಕ್ಕೆ ಪರಿಹಾರ. ನಮ್ಮ ಇತಿಹಾಸದಲ್ಲಿ ವಿದೇಶಗಳೊಂದಿಗೆ ವ್ಯಾಪಾರ ನಡೆಸಿ ಜಯಿಸಿದ್ದ ಇತಿಹಾಸದ ಅರಿವು ಇರಲಿಲ್ಲ. ಅದಕ್ಕಾಗಿಯೇ, ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ ಮೂರನೇ ಅಂಶ (ನಮ್ಮ ವೈಭವಯುತ ಪರಂಪರೆಯ ಮೇಲೆ ಗೌರವ ಇರಬೇಕು) ಅನುಸರಿಸುವುದು ಪರಿಹಾರ.

ಅಭಿವೃದ್ಧಿಯ ಅನೇಕ ವಿಧಗಳು ಹಾಗೂ ಅವುಗಳಲ್ಲಿ ನಮ್ಮನ್ನಾಳುವವರ ಎಡಬಿಡಂಗಿತನದ ಕುರಿತು ಮುಂದಿನ ಲೇಖನದಲ್ಲಿ ಮತ್ತಷ್ಟು ಚರ್ಚೆ ನಡೆಸೋಣ.

ಇದನ್ನೂ ಓದಿ | ವಿಸ್ತಾರ ಅಂಕಣ | ಪರಮ ಸಹಿಷ್ಣ ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !

Exit mobile version