Site icon Vistara News

Mann Ki Baat: ವಿಸ್ತಾರ ಅಂಕಣ; ಮನ್ ಕಿ ಬಾತ್ ಮೂಲಕ ಭಾರತೀಯರೊಂದಿಗೆ ಮೋದಿ ಕುಶಲೋಪರಿ

modi mann ki baat new

ಮನ್ ಕಿ ಬಾತ್@100: ಜನರ ಹೃದಯದಲ್ಲಿ ನರೇಂದ್ರ ಮೋದಿ ವಿರಾಜಮಾನರಾಗಿದ್ದು ಇದರಿಂದಲೇ

ದೇಶವು ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ಸರಣಿ ʼಮನ್ ಕಿ ಬಾತ್ʼ (Mann Ki Baat)ನೂರನೇ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ ಎಡೆಬಿಡದ 100ನೇ ಮನ್ ಕಿ ಬಾತ್ (Mann Ki Baa 100) ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಭಾರತದ ಪ್ರಸಾರ ಇತಿಹಾಸದಲ್ಲಿ ಒಂದು ಮೈಲುಗಲ್ಲಷ್ಟೆ ಅಲ್ಲ, ದೇಶದ ಜನರೊಂದಿಗೆ ಬೆರೆಯಬೇಕೆಂಬ ಮೋದಿಯವರ ಬದ್ಧತೆಗೆ ಜ್ವಲಂತ ಉದಾಹರಣೆ. 2014ರ ಅಕ್ಟೋಬರ್ 3ರಂದು, ವಿಜಯದಶಮಿಯ ದಿನದಿಂದ ಮೋದಿಯವರ ಮನ್ ಕಿ ಬಾತ್ (Mann Ki Baat) ಪ್ರಸಾರವಾಗಲು ಆರಂಭವಾದ ನಂತರ ದೇಶದಲ್ಲಿ ಅನೇಕ ಸವಾಲುಗಳು, ನಿರಂತರ ಪ್ರವಾಸ, ಶತಮಾನದಲ್ಲೇ ವಿಶ್ವ ಕಂಡ ಕೋವಿಡ್-19 ಮಹಾಮಾರಿಯೂ ಬಂದು ಹೋದವು. ಆದರೆ ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ (Mann Ki Baat@100) ನಡೆಸಿಕೊಡುವ ಮೋದಿಯವರ ಬದ್ಧತೆಗೆ ಇವುಗಳು ತಡೆಯೊಡ್ಡಲೇ ಇಲ್ಲ.

ಮನ್ ಕಿ ಬಾತ್ ಎನ್ನುವುದು ಸುಮ್ಮನೆ ಒಬ್ಬ ವ್ಯಕ್ತಿ ಮಾತನಾಡಿಕೊಂಡು ಹೋಗುವ ವಿಚಾರವಲ್ಲ. ಎಂಟು ವರ್ಷದಿಂದಲೂ ಈ ಕಾರ್ಯಕ್ರಮವನ್ನು ಜೀವಂತಿಕೆಯಿಂದ ಮೋದಿ ಇರಿಸಿದ್ದಾರೆ. ಈ ಹಿಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ -ರೋಹ್ಟಕ್ (ಐಐಎಂ- ರೋಹ್ಟಕ್) ನಡೆಸಿದ ಸಮೀಕ್ಷೆಯ ಪ್ರಕಾರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ದೇಶದ 21 ಕೋಟಿ ಜನರು ಪ್ರತಿ ತಿಂಗಳೂ ತಪ್ಪದೆ ರೇಡಿಯೋದಲ್ಲಿ ಕೇಳುತ್ತಾರೆ ಅಥವಾ ದೂರದರ್ಶನದಲ್ಲಿ ನೋಡುತ್ತಾರೆ. ದೇಶದ ಕನಿಷ್ಠ 100 ಕೋಟಿ ಜನರು ಒಮ್ಮೆಯಾದರೂ ಮನ್ ಕಿ ಬಾತ್ ಆಲಿಸಿದ್ದಾರೆ. ಅಂದರೆ ದೇಶದ ಸುಮಾರು ಐದನೇ ಒಂದು ಭಾಗದ ಜನರ ಜತೆಗೆ ಪ್ರಧಾನಿ ನೇರ ಸಂಪರ್ಕದಲ್ಲಿದ್ದಾರೆ ಎಂದರ್ಥ.

ಕಾರ್ಯಕ್ರಮದಲ್ಲಿ ಜೀವಂತಿಕೆಯನ್ನು ಉಳಿಸಿಕೊಳ್ಳಲು ಸಾರ್ವಜನಿಕರಿಂದಲೂ ಅನೇಕ ಸಲಹೆಗಳನ್ನು ಮನ್ ಕಿ ಬಾತ್ ತಂಡ ಪಡೆಯುತ್ತದೆ. ಕರ್ನಾಟಕದ ಕಲೆ, ಸಂಸ್ಕೃತಿ ಇರಬಹುದು, ಇಲ್ಲಿನ ಪರಿಸರವಾದಿಗಳಿರಬಹುದು, ನಾಟಿ ವೈದ್ಯರಿರಬಹುದು, ಉದ್ಯಮಿಗಳೇ ಇರಬಹುದು… ಹೀಗೆ ಸಮಾಜದ ನಾನಾ ಸ್ತರದ ಸಾಧಕರು ಮನ್ ಕಿ ಬಾತ್ ನಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಅದೇ ರೀತಿ ವಿಭಿನ್ನ ರಾಜ್ಯಗಳ ವಿಶೇಷತೆಗಳನ್ನು ಮನ್ ಕಿ ಬಾತ್ ಒಳಗೊಂಡಿರುತ್ತದೆ. ಮುಂದಿನ ಮನ್ ಕಿ ಬಾತ್ ನಲ್ಲಿ ಮೋದಿ ಯಾವ ವಿಷಯವನ್ನು ಉಲ್ಲೇಖಿಸಬಹುದು ಎಂದು ಕಾತರದಿಂದ ಕಾದು ಕೂತಿರುವಂತೆ ಕುತೂಹಲವನ್ನು ಈ ಕಾರ್ಯಕ್ರಮ ಉಳಿಸಿಕೊಂಡಿದೆ. ಹಾಗೆ ನೋಡಿದರೆ ಮನ್ ಕಿ ಬಾತ್ ಕೇವಲ ಒಂದು ರೇಡಿಯೊ ಕಾರ್ಯಕ್ರಮ ಅಲ್ಲ. ಅದು ಮೋದಿ ಸ್ಟೈಲಿನ ಆಡಳಿತ ವಿಧಾನ.

ಯಾವುದೇ ನಾಯಕನು ವಿಫಲವಾಗುವುದು ಅಧಿಕಾರ ಸಿಕ್ಕಾಗ. ಹೋರಾಟ ನಡೆಸುವಾಗೆಲ್ಲ ಆತ ಜನರ ನಡುವೆಯೇ ಇರುತ್ತಾನೆ. ಆದರೆ ಒಮ್ಮೆ ಅಧಿಕಾರ ಸಿಕ್ಕ ಕೂಡಲೆ ನಾಲ್ಕು ಗೋಡೆಗಳ ನಡುವೆ ಬಂಧಿಯಾಗುತ್ತಾನೆ. ದಿನನಿತ್ಯದ ಕೆಲಸಗಳು, ಒತ್ತಡಗಳ ನಡುವೆ ಅವರ ಸುತ್ತಲಿನ ಸಲಹೆಗಾರರು, ಆಪ್ತರ ಕೋಟೆಯೊಳಗೆ ಇರಲು ಆರಂಭಿಸುತ್ತಾನೆ. ನಾಯಕನ ಬಳಿಗೆ ಯಾರು ಬರಬೇಕು, ಬರಬಾರದು ಎನ್ನುವುದನ್ನೂ ಈ ಕೋಟೆಯೇ ನಿರ್ಧಾರ ಮಾಡುತ್ತದೆ. ತಮಗೆ ಇಷ್ಟವಾಗದವರನ್ನು ನಾಯಕನ ಬಳಿ ಬಿಡುವುದೇ ಇಲ್ಲ. ಈ ವಿಷಯ ನಾಯಕನಿಗೆ ತಿಳಿದಿರುವುದೇ ಇಲ್ಲ. ಆದರೆ, ಅವರು ಭೇಟಿ ಆಗುವುದಿಲ್ಲ ಎಂದಿದ್ದಾರೆ, ಅವರು ಬ್ಯುಸಿ ಇದ್ದಾರಂತೆ ಎಂದೆಲ್ಲ ಸುಳ್ಳು ಹೇಳಿ ಕಳಿಸುತ್ತಾರೆ. ನಿಧಾನವಾಗಿ ಜನರಲ್ಲೂ ನಾಯಕನ ಕುರಿತು ನಕಾರಾತ್ಮಕ ಭಾವನೆ ಮೂಡಲು ಆರಂಭವಾಗುತ್ತದೆ. ನಾಯಕನಿಗೂ, ಜನರಲ್ಲಿ ಯಾವ ಸಮಸ್ಯೆಗಳಿವೆ ಎನ್ನುವುದು ತಿಳಿಯದಂತಾಗುತ್ತದೆ. ತನ್ನ ಸುತ್ತಲಿನ ಕೋಟೆ ಹೇಳಿದ್ದೇ ಪ್ರಪಂಚ ಎನ್ನುವಂತಾಗಿ ಜನರಿಂದ ದೂರಾಗುತ್ತಾನೆ. ಅಲ್ಲಿಗೆ ಆತನ ಪತನ ಆರಂಭವಾಗುತ್ತದೆ. ಈ ಕೋಟೆ ವ್ಯವಸ್ಥೆಯೇ ಆತನನ್ನು ನಿಯಂತ್ರಿಸಲು ಆರಂಭಿಸುತ್ತದೆ, ಹೀಗೆ ಮಾಡದೇ ಇದ್ದರೆ ನೀವು ಪಾತಾಳಕ್ಕೆ ಕುಸಿಯುತ್ತೀರ ಎಂದು ಬ್ಲ್ಯಾಕ್ ಮೇಲ್ ಸಹ ಮಾಡುತ್ತದೆ. ಒಟ್ಟಿನಲ್ಲಿ ಆತನೊಬ್ಬ ಕೈಗೊಂಬೆ ಆಗಿಬಿಡುತ್ತಾನೆ. ಇದನ್ನು ಮೀರಬೇಕೆಂದರೆ ನಾಯಕನಾದವನು ನೇರವಾಗಿ ಜನರೊಂದಿಗೆ ಸಂಬಂಧ ಹೊಂದಿರಬೇಕು.

ಭಾರತದಂತಹ ಜನಸಂಖ್ಯೆಯ ದೇಶದಲ್ಲಿ, ಇಷ್ಟು ವೈವಿಧ್ಯಮಯ ಸಮಾಜದಲ್ಲಿ, ನಾನಾ ಭಾಷೆಗಳಿರುವ ರಾಜ್ಯಗಳ ನಡುವೆ ನೇರವಾಗಿ ಜನರೊಂದಿಗೆ ಸಂವಹನ ನಡೆಸುವುದು ಸವಾಲಿನ ವಿಷಯ. ಇಲ್ಲಿ ಭಾಷೆಯ ತೊಡಕು ಇದೆಯಾದರೂ ಭಾವನೆ ಒಂದೆ. ಪ್ರಾರಂಭದ ದಿನಗಳಲ್ಲಿ ಮನ್ ಕಿ ಬಾತ್ ಹಿಂದಿಯಲ್ಲಿ ಮಾತ್ರವೇ ಬರುತ್ತಿತ್ತು. 2017ರಿಂದ ಕನ್ನಡವೂ ಸೇರಿ ಭಾರತದ ವಿವಿಧ ಭಾಷೆಗಳಲ್ಲೂ ಅನುವಾದ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಇದು ಹಿಂದಿಯೇತರ, ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲೂ ಮೋದಿಯವರು ನೇರವಾಗಿ ಜನರೊಂದಿಗೆ ಬೆರೆಯಲು ಅನುಕೂಲ ಕಲ್ಪಿಸಿತು.

ಭಾರತದ ದಕ್ಷಿಣದ ಕರ್ನಾಟಕದಲ್ಲಿ ಮಾತ್ರವೇ ಬಿಜೆಪಿ ಸರ್ಕಾರ ರಚಿಸುವಷ್ಟು ಸದೃಢವಾಗಿದೆ. ಮೋದಿ ಆಗಮಿಸುವುದಕ್ಕಿಂತ ಮೊದಲಿನಿಂದಲೂ ಕರ್ನಾಟಕದ ಜನರಲ್ಲಿ ಒಂದು ರಾಷ್ಟ್ರೀಯ ಭಾವನೆ ಇದೆ. ಇದು ಮೋದಿ ಅವಧಿಯಲ್ಲಿ ಮತ್ತಷ್ಟು ಹೆಚ್ಚಾಗಿ ಲೋಕಸಭೆಯಲ್ಲಿ ಬಿಜೆಪಿಗೆ ಅನುಕೂಲವಾಗಿದೆ. ಆದರೆ ದಕ್ಷಿಣದ ಅನ್ಯ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗಿಲ್ಲ. ವಿಧಾನಸಭೆ ಚುನಾವಣೆಗಳಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಲಾಗುತ್ತಿಲ್ಲ. ಆದರೂ ಈ ರಾಜ್ಯಗಳಲ್ಲಿ ಮೋದಿ ಅಲೆ ಇದೆ. ತಮಿಳುನಾಡು, ಕೇರಳದಲ್ಲಿ ಮೋದಿ ರೋಡ್ ಶೋ ಮಾಡಿದರೂ ಜನರು ಕಿಕ್ಕಿರಿದು ಸೇರುತ್ತಾರೆ. ಮನ್ ಕಿ ಬಾತ್ ನಂತಹ ಕಾರ್ಯಕ್ರಮಗಳು ಈ ಸಂಬಂಧಕ್ಕೆ ಪ್ರಮುಖ ಕಾರಣವಾಗಿವೆ.

ಮೋದಿಯವರು ಆಡಳಿತದಲ್ಲಿ out-of-the-box ಆಲೋಚನೆಗಳನ್ನು ಮಾಡುತ್ತಾರೆ, ಅದನ್ನು ಕ್ರಿಯಾನ್ವಯ ಮಾಡುತ್ತಾರೆ ಎನ್ನುವುದಕ್ಕೆ ಮನ್ ಕಿ ಬಾತ್ ಉತ್ತಮ ಉದಾಹರಣೆ. ಇದರ ಜತೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಯೋಜನೆ, ಯೋಚನೆಗಳನ್ನು ನೇರವಾಗಿ ಜನರಿಗೆ ತಿಳಿಸುತ್ತಾರೆ. ಈ ರೀತಿ ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರೊಂದಿಗೆ ಸಂವಹನ ನಡೆಸುವುದರಿಂದ, ಜನರ ಅಭಿಪ್ರಾಯಗಳೂ ನೇರವಾಗಿ ಪ್ರಧಾನಿಗೆ ತಲುಪುತ್ತವೆ. ಅವುಗಳ ಆಧಾರದಲ್ಲಿ ಮುಂದಿನ ಯೋಜನೆಗಳನ್ನು ರೂಪಿಸಬಹುದಾಗಿದೆ. ಸಾಂಪ್ರದಾಯಿಕವಾಗಿ ಸರ್ಕಾರದ ವ್ಯವಸ್ಥೆ ಅಳವಡಿಸಿಕೊಳ್ಳದ ಅನೇಕ ಮಾರ್ಗಗಳನ್ನು ಮೋದಿ ಅನುಸರಿಸಿ ಸಕ್ಸೆಸ್ ಆಗಿದ್ದಾರೆ.

ಉದಾಹರಣೆಗೆ, ಇಡೀ ವಿಶ್ವವೇ ಕೋವಿಡ್-19 ಆತಂಕದಲ್ಲಿತ್ತು. ಮನೆಯಿಂದ ಹೊರ ಹೋದರೆ ಸತ್ತೇ ಹೋಗುತ್ತೇವೆ ಎಂಬ ಭಯವಿತ್ತು. ಈ ಸಮಯದಲ್ಲಿ ಒಂದು ದಿನ ಮೋದಿ ಆಗಮಿಸಿ, ಎಲ್ಲರೂ ತಮ್ಮ ಮನೆಗಳ ಪಾತ್ರ ಪಗಡೆ, ಗಂಟೆಗಳನ್ನು ಹಿಡಿದು ಜೋರಾಗಿ ಶಬ್ದ ಮಾಡಿ ಎಂದು ಕರೆಕೊಟ್ಟರು. ಒಬ್ಬೊಬ್ಬರಂತೂ ಪಾತ್ರೆಗಳನ್ನು ಬಡಿದು ಕೊರೊನಾವನ್ನೇ ಹೊಡೆದೋಡಿಸಿದೆವು ಎನ್ನುವಂತೆ ಮಾಡಿದರು. ಕೆಲವರು ಅತಿರೇಕವಾಗಿಯೂ ವರ್ತಿಸಿದರು. ಈ ರೀತಿ ಗಂಭೀರ ಆರೋಗ್ಯ ಸಮಸ್ಯೆ ಎದುರಾದಾಗ ಔಷಧಿಯನ್ನು ಸೂಚಿಸುವ ಬದಲು ಜಾಗಟೆ ಬಡಿಯಲು ಹೇಳುತ್ತಿದ್ದಾರೆ ಎಂದು ಅನೇಕರು ಗೇಲಿ ಮಾಡಿದರು. ಆದರೆ ಜನರಿಗೆ ಇದು ಗೇಲಿ ಎನ್ನಿಸಲಿಲ್ಲ. ಮೋದಿ ಹೇಳಿದ್ದಾರೆ ಎಂದರೆ ಅದರಲ್ಲಿ ನಮ್ಮ ಒಳಿತಿಗೆ ಏನೋ ಇದ್ದೇ ಇರುತ್ತದೆ ಎಂದು ತಿಳಿದರು.

ಇನ್ನು ಸ್ವಲ್ಪ ಹಿಂದಿನ ಸಮಯಕ್ಕೆ ಹೋದರೆ, ದೇಶದಲ್ಲಿ ಇದ್ದಕ್ಕಿದ್ದಂತೆ 1000 ರೂ. ಹಾಗೂ 500 ರೂ. ನೋಟುಗಳನ್ನು ಅಮಾನ್ಯಗೊಳಿಸಿದ್ದು. ಆಗಲೂ ಜನರಿಗೆ ನೇರವಾಗಿ ಹೊಡೆತ ಬಿದ್ದಿತ್ತು. ತಮ್ಮದೇ ಹಣ ಬ್ಯಾಂಕಿನಲ್ಲಿದ್ದರೂ ತೆಗೆಯಲು ಆಗದ ಪರಿಸ್ಥಿತಿ. ತುರ್ತು ಅಗತ್ಯಕ್ಕೆ ಬೇಕಿದ್ದ ಹಣ ಲಾಕರ್ ನಲ್ಲೇ ಉಳಿದು ತೊಂದರೆಯಾಯಿತು. ಈ ಸಮಯದಲ್ಲಿ ನಾವು ಮಾಧ್ಯಮದವರು ಸಹಜವಾಗಿ ಜನರ ಅಭಿಪ್ರಾಯ ಸಂಗ್ರಹಿಸಿದೆವು.

ಬಹುತೇಕರು ಈ ಸಮಯದಲ್ಲಿ ಕಷ್ಟದಲ್ಲಿದ್ದರು. ಉದ್ದುದ್ದ ಕ್ಯೂನಲ್ಲಿ ನಿಂತಿರುತ್ತಿದ್ದರು. ʼಹೌದು, ನಮಗೆ ಬಹಳ ಕಷ್ಟವಾಗುತ್ತಿದೆʼ ಎಂದು ಹೇಳುತ್ತಿದ್ದರು. ಆದರೆ ಕೊನೆಗೆ ಒಂದು ಮಾತು ಹೇಳುತ್ತಿದ್ದರು. ʼಮೋದಿಯವರು ದೇಶಕ್ಕೆ ಒಳ್ಳೆಯದಾಗಲಿ ಎಂದು ಇದನ್ನು ಮಾಡಿದ್ದಾರೆ. ನಮಗೆ ಮೋದಿಯವರ ಮೇಲೆ ನಂಬಿಕೆ ಇದೆ. ದೇಶಕ್ಕೆ ಒಳ್ಳೆಯದಾಗುತ್ತದೆ ಎಂದರೆ ನಾನು ಒಂದೆರಡು ದಿನ ಕಷ್ಟ ಪಡಲು ಸಿದ್ಧವಾಗಿದ್ದೇನೆʼ ಎನ್ನುತ್ತಿದ್ದರು. ಆಡಳಿತದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಜನರು ಬೆಂಬಲ ನೀಡಿದ್ದನ್ನು ಅನೇಕ ಬಾರಿ ನೋಡಿದ್ದೇವೆ. ಅದು ಜನರಿಗೆ ನೇರವಾಗಿ ಉಪಯೋಗವಾಗುವ ಯೋಜನೆಯನ್ನು ಘೋಷಣೆ ಮಾಡಿದಾಗಲೊ, ಹಣವನ್ನು ಬಿಡುಗಡೆ ಮಾಡಿದಾಗಲೊ, ಸಾಲಮನ್ನ ಘೋಷಿಸಿದಾಗಲೊ ಇರಬಹುದು. ಆದರೆ ಜನರು ಕಷ್ಟದಲ್ಲಿ ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ ನಿರ್ಧಾರಕ್ಕೆ ಜನರು ಈ ಪಾಟಿ ಬೆಂಬಲವಾಗಿ ನಿಂತದ್ದನ್ನು ಬಹುಶಃ ನಾವು ಕಂಡೇ ಇಲ್ಲ. ಈ ರೀತಿ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಮೋದಿ ನೇರವಾಗಿ ಜನರ ಸಂಪರ್ಕದಲ್ಲಿದ್ದಾರೆ.

ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರುವ ಕಾರಣ, ಎರಡು ಅಡೆತಡೆಗಳನ್ನು ಮೋದಿ ನಿವಾರಿಸಿಕೊಂಡಿದ್ದಾರೆ. ಮೊದಲನೆಯದು, ಪ್ರತಿಪಕ್ಷಗಳ ದಾಳಿಯನ್ನು ಮೋದಿ ಸಮರ್ಥವಾಗಿ ಎದುರಿಸಲು ಇದರಿಂದ ಸಾಧ್ಯವಾಗಿದೆ. ಕೇಂದ್ರ ಸರ್ಕಾರದ ಕುರಿತು, ಅದರಲ್ಲೂ ಮೋದಿ ಕುರಿತು ವಿರೋಧಿಗಳು ಹೆಚ್ಚು ತೆಗಳಿದಷ್ಟೂ ಅದು ಮೋದಿಗೇ ಅನುಕೂಲ ಆಗುತ್ತಿದೆ. ಮೋದಿಯವರನ್ನು ಬೈದವರನ್ನೇ ಜನರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಗುಜರಾತ್ ಚುನಾವಣೆ ವೇಳೆ ಮೋದಿಯವರನ್ನು ರಾವಣನಿಗೆ ಮಲ್ಲಿಕಾರ್ಜುನ ಖರ್ಗೆ ಹೋಲಿಸಿದರು ಎನ್ನುವುದು ದೊಡ್ಡ ವಿಷಯವಾಯಿತು. ಇದೀಗ ಮೋದಿಯವರನ್ನು ಅದೇ ಖರ್ಗೆ, ವಿಷ ಸರ್ಪಕ್ಕೆ ಹೋಲಿಸಿದ್ದಾರೆ ಎಂಬ ಬಿರುಸಿನ ಚರ್ಚೆ ಆಗುತ್ತಿದೆ. ಈ ರೀತಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸಾಧ್ಯವಾಗಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದರ ಹಿಂದೆ ಬಿ.ಎಲ್ ಸಂತೋಷ್ ಸ್ವಹಿತಾಸಕ್ತಿ ಏನಿದೆ?

ಎರಡನೆಯದು, ಸ್ವಂತ ಪಕ್ಷದೊಳಗಿನ ಸ್ಪರ್ಧೆಯಲ್ಲೂ ನರೇಂದ್ರ ಮೋದಿಯವರನ್ನು ಹಿಂದಿಕ್ಕಲು ಯಾರಿಂದಲೂ ಆಗುತ್ತಿಲ್ಲ. ಮೋದಿಯವರಿಗಿಂತ ಹಿರಿಯರು, ಆಡಳಿತದ ಅನುಭವವಿರುವವರೂ ಇಂದು ಮೋದಿಯವರ ಸ್ಥಾನಕ್ಕೆ ಸ್ಪರ್ಧೆ ಮಾಡುವ ಬಗ್ಗೆ ಆಲೋಚಿಸಲೂ ಸಾಧ್ಯವಿಲ್ಲವಾಗಿದೆ. ಇದಕ್ಕೆ ಕಾರಣ ಮೋದಿ ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರುವುದು. ಮೋದಿಯವರನ್ನು ವಿರೋಧಿಸಿದರೆ, ಅವರೊಂದಿಗೆ ಸ್ಪರ್ಧೆಗೆ ನಿಂತರ ಜನರ ವಿರುದ್ಧವೇ ಯುದ್ಧಕ್ಕೆ ಇಳಿದಂತೆ. ಹಾಗಾಗಿಯೇ ಬಿಜೆಪಿ ಪಕ್ಷದಲ್ಲಿಯೂ ಮೋದಿ ಇಂದು ಅಕ್ಷರಶಃ ರಾಜನಂತೆ ಆಡಳಿತ ನಡೆಸುತ್ತಿದ್ದಾರೆ.

ಮನ್ ಕಿ ಬಾತ್ ಮೂಲಕ ಶಿಕ್ಷಣ, ಮಹಿಳೆಯರು, ಯುವಕರು, ಕೃಷಿ… ಹೀಗೆ ನಾನಾ ಮುಖಗಳ ಕುರಿತು ಮೋದಿ ಮಾತನಾಡುತ್ತಾರೆ. ಮೋದಿ ತಮ್ಮನ್ನೇ ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂದು ಜನರು ಭಾವಿಸುತ್ತಾರೆ. ಮೋದಿಯವರು ದಿನದ 18ಕ್ಕೂ ಹೆಚ್ಚು ಗಂಟೆಗಳು ಎಚ್ಚರವಿದ್ದು ಸೇವೆ ಮಾಡುತ್ತಾರೆ, ಇದು ಎಲ್ಲರಿಗೂ ತಿಳಿದಿರುವ ವಿಚಾರ. ಅವರ ಒಂದು ದಿನದ ಕಾರ್ಯಕ್ರಮಗಳಲ್ಲಿ ನಡೆಸುವಷ್ಟು ಚಟುವಟಿಕೆಯನ್ನು ಸಾಮಾನ್ಯ ಜನರು ಒಂದು ವಾರವಾದರೂ ಮಾಡುವುದು ಕಷ್ಟ. ಇಂತಹ ಬಿಡುವಿಲ್ಲದ ದಿನಗಳ ನಡುವೆ, ವಿವಿಧ ದೇಶಗಳ ಪ್ರವಾಸವಿದ್ದಾಗ್ಯೂ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಮೋದಿ ಬ್ರೇಕ್ ಹಾಕಿಲ್ಲ. ಇದು ಯಾರು ಬೇಕಾದರೂ ಮಾಡಬಹುದು ಎನ್ನುವಷ್ಟು ಸುಲಭದ ಮಾರ್ಗದಂತೆ ಕಾಣುತ್ತದೆ. ಆದರೆ ಸತತ ಎಂಟು ವರ್ಷ ಇಂತಹ ಬದ್ಧತೆಯನ್ನು ತೋರುವುದು ಬಹು ಕಷ್ಟ. ಈ ಬದ್ಧತೆಯೇ ಮೋದಿಯವರನ್ನು ಇಂದು ಜನರ ಹೃದಯದಲ್ಲಿ ಸ್ಥಾನ ಗಳಿಸಲು ಸಹಾಯ ಮಾಡಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಯನ್ನು ಆಯೋಗಕ್ಕೆ ಮಾತ್ರ ಹೊರಿಸುವುದು ಹೊಣೆಗೇಡಿತನ

ಕಡೆಯದಾಗಿ ಗಾಂಧೀಜಿ ನೆನಪಾಗುತ್ತಿದ್ದಾರೆ. ಗಾಂಧಿಯೂ ತಮ್ಮ ಕಾಲದಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕ. ಗಾಂಧಿಯ ಮಾತನ್ನು ಆ ಹೊತ್ತಿನ ಭಾರತ ಕೇಳುತ್ತಿತ್ತು. ಇದಕ್ಕೆ ಕಾರಣ, ಸಾಮಾನ್ಯರೊಂದಿಗಿನ ಮಾತುಕತೆ ಮತ್ತು ಪತ್ರ ವ್ಯವಹಾರ. ಯಾರೂ ಬೇಕಾದರೂ ಗಾಂಧಿಯ ಜತೆ ಪತ್ರ ವ್ಯವಹಾರ ನಡೆಸಬಹುದಿತ್ತು. ಗಾಂಧಿ ಅಥವಾ ಅವರ ಮಾನಸ ಪುತ್ರ ಮಹಾದೇವ್ ದೇಸಾಯಿ ಅವರು ಎಲ್ಲ ಪತ್ರಗಳಿಗೂ ಉತ್ತರಿಸುತ್ತಿದ್ದರು. ಪತ್ರದಲ್ಲಿ ಒಳಿತು ಇದ್ದರೆ ಅಳವಡಿಸಿಕೊಳ್ಳುತ್ತಿದ್ದರು. ಶ್ರೀಸಾಮಾನ್ಯರೊಂದಿಗೆ ಬೆರೆಯುವುದು ಎಂದರೆ ಇದೇ!

ಗಾಂಧೀಜಿ ಅವರದ್ದೇ ಪ್ರಸಿದ್ಧ ಮಾತಿದೆ: ಒಳಿತು ಜಗತ್ತಿನ ಯಾವುದೇ ಮೂಲೆಯಿಂದಲೂ ಬರಬಹುದು. ಅದಕ್ಕಾಗಿ ಮನೆಯ ಕಿಟಿಕಿಗಳನ್ನು ತೆರೆದು ಇಟ್ಟುಕೊಂಡಿರಿ. ಒಳಿತನ್ನು ಸ್ವೀಕರಿಸಿ! ಮೋದಿ ಅವರು ತಮ್ಮ ಮನ್ ಕಿ ಬಾತ್ ಮೂಲಕ, ತಮ್ಮನ್ನು ತಾವು ದೇಶದ ಮುಂದೆ ತೆರೆದುಕೊಂಡಿದ್ದಾರೆ, ಕಿಟಿಕಿಯಂತೆ ! ದೇಶದ ಒಳಿತಿನ ಚಿಂತನೆಗಳನ್ನು ಯಾರೂ ಬೇಕಾದರೂ ಅವರ ಬಳಿ ಕೊಂಡೊಯ್ಯಬಹುದು. ಪ್ರವೇಶಿಸಲು ಅವರ ಕಿಟಕಿಯಂತೂ ಸದಾ ಸಿದ್ಧವಿದೆ. ಒಳಿತಿಗೆ ಕಿವಿಗೊಡುತ್ತಾರೆ. ಅದನ್ನು ಜೋಡಿಸುತ್ತಾರೆ. ಒಳಿತಿನ ಭಾರತವನ್ನು ಕಟ್ಟುತ್ತಿದ್ದಾರೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಸಿಟಿ ಜನರೇಕೆ ಹೆಚ್ಚು ವೋಟ್ ಹಾಕ್ತಾ ಇಲ್ಲ? ಆನ್‌ಲೈನ್ ವೋಟಿಂಗ್ ಬಗ್ಗೆ ಆಲೋಚಿಸಲು ಇದು ಸಕಾಲ!

Exit mobile version