ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆಗಳ ಕುರಿತು (Indian heritage, Indian culture) ಪ್ರಜ್ಞೆ ಇರಬೇಕಾಗಿರುವುದು ಪ್ರತಿ ಭಾರತೀಯ ಪ್ರಜೆಯ ಆಯ್ಕೆ ಅಲ್ಲ, ಕರ್ತವ್ಯ. ನಮ್ಮ ಸಂವಿಧಾನದಲ್ಲೇ (constitution) ಇದನ್ನು ತಿಳಿಸಲಾಗಿದೆ. “ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು.” ಎನ್ನುವುದನ್ನು ಸಂವಿಧಾನದತ್ತ ಮೂಲಭೂತ ಕರ್ತವ್ಯಗಳಲ್ಲೇ ತಿಳಿಸಲಾಗಿದೆ. ಹಾಗಾದರೆ ಮುಂದಿನ ಪೀಳಿಗೆಗೆ ನಿಜವಾಗಿಯೂ ನಮ್ಮ ಸಾಂಸ್ಕೃತಿಕ ವೈಭವವನ್ನು, ಸಂಪ್ರದಾಯವನ್ನು ದಾಟಿಸುತ್ತಿದ್ದೇವೆಯೇ ಎನ್ನುವುದು ಪ್ರಶ್ನೆ.
ಸದಾ ಕಾಲ ಒಂದು ಮಾತು ಸಾಮಾನ್ಯವಾಗಿ ಅನುರಣಿಸುತ್ತಲೇ ಇರುತ್ತದೆ. “ಹೊಸ ಪೀಳಿಗೆ ನಮ್ಮ ಮಾತು ಕೇಳುತಿಲ್ಲ, ಈ ಜನರೇಷನ್ನಿಗೆ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಲಕ್ಷ್ಯವೇ ಇಲ್ಲ”.. ಇತ್ಯಾದಿ ಇತ್ಯಾದಿ. ಅಚ್ಚರಿ ಎಂದರೆ ನಮ್ಮ ಮುತ್ತಜ್ಜನ ಕಾಲದಲ್ಲಿಯೂ ಈ ಮಾತಿತ್ತು, ನಮ್ಮ ಅಜ್ಜನ ಕಾಲದಲ್ಲಿಯೂ ಇತ್ತು, ನಮ್ಮ ಅಪ್ಪನ ಕಾಲದಲ್ಲಿಯೂ ಇತ್ತು, ನಮ್ಮ ಕಾಲದಲ್ಲೂ ಇದೆ, ಮುಂದಿನ ಪೀಳಿಗೆಯ ಕಾಲದಲ್ಲೂ ಇರುತ್ತೆ. ಇದೊಂದು ಹಳಹಳಿಕೆಯಷ್ಟೆ. ಆದರೆ, ಸ್ವಾಮಿ ವಿವೇಕಾನಂದರು ಯಾವತ್ತೂ, ತನ್ನ ಮುಂದಿನ ಪೀಳಿಗೆಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಮುಂದಿನ ಪೀಳಿಗೆಯನ್ನು ಸಶಕ್ತವಾಗಿಸುವುದೊಂದೇ ದೇಶ-ಧರ್ಮ-ಸಮಾಜದ ಏಳಿಗೆಗೆ ಇರುವ ದಾರಿ ಎನ್ನುವುದನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದರು. ಹಾಗಾಗಿ, ಹೊಸ ಪೀಳಿಗೆಯ ಜತೆಗೆ ಮಾತನಾಡುವಾಗ ಹೇರಿಕೆಯ ಭಾವನೆಯನ್ನು, ಮೊದಲು ನಾವೆಲ್ಲರೂ ಕೈಬಿಡಬೇಕು.
ಹಾಗೆ ನೋಡಿದರೆ, ಈಗಿನ ಪೀಳಿಗೆ ಹೆಚ್ಚುಹೆಚ್ಚು ಪ್ರಶ್ನೆ ಕೇಳುತ್ತದೆ. ಬಹಿರಂಗವಾಗಿ ಪ್ರಶ್ನೆ ಕೇಳದಿದ್ದರೂ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಆ ಯುವಮನಸ್ಸುಗಳಲ್ಲಿ ಇದ್ದೇ ಇರುತ್ತೆ. ಅವುಗಳಿಗೆ ಸರಿಯಾದ ಉತ್ತರಗಳನ್ನು ನೀಡಿದಾಗ ಮಾತ್ರವೇ, ಆ ಪೀಳಿಗೆ ಪರಂಪರೆಗಳನ್ನು ಗೌರವಿಸುತ್ತದೆ. ಭಾರತದ ಪ್ರಮುಖ ಸಂಶೋಧಕರಲ್ಲೊಬ್ಬರಾದ ಡಾ. ಎಂ. ಚಿದಾನಂದ ಮೂರ್ತಿ ಅವರು, “ಕ್ರಿಶ್ಚಿಯನ್, ಇಸ್ಲಾಂನಂತೆ ಹಿಂದು ಧರ್ಮವು ಒಂದು ಸರಳ ವ್ಯವಸ್ಥೆ ಅಲ್ಲ. ಇಲ್ಲಿ ಭಿನ್ನ ದೈವಗಳ ಬಗ್ಗೆ ಶ್ರದ್ಧೆ, ಭಿನ್ನ ತತ್ತ್ವನಿಷ್ಠೆ ಇವು ಇದ್ದರೂ ಶುದ್ಧ ಪರಿಪೂರ್ಣ ತ್ಯಾಗಮಯ ಜೀವನವೇ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ ಎಂಬ ಸಮಾನ ನಂಬಿಕೆ ಇದೆ. ಶೈವ-ವೀರಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ ಎಲ್ಲರೂ ತಾವು ಹಿಂದೂಗಳು ಎಂದು ನಂಬಿ ಅದರ ರಕ್ಷಣೆಗೆ, ಏಳಿಗೆಗೆ ಕಂಕಣಬದ್ಧರಾಗುವುದು ಅಗತ್ಯ ಮಾತ್ರವಲ್ಲ, ಇಂದಿನ ತುರ್ತು ಅನಿವಾರ್ಯ” ಎಂದಿದ್ದಾರೆ. ಇದು ಎಷ್ಟೊಂದು ಸತ್ಯವಾದ ಹಾಗೂ ವಿವೇಕದ ಮಾತು. ಇದನ್ನು ನಾವು ಅನುಸರಿಸುವ ತುರ್ತು ಇದೆ.
ಹಾಗಾದರೆ ಮುಂದಿನ ಪೀಳಿಗೆಗೆ ಇದನ್ನು ತಿಳಿಸಿಕೊಡುವುದು ಹೇಗೆ? ಇತ್ತೀಚೆಗೆ ಒಬ್ಬ ಗಣ್ಯರು ಸಿಕ್ಕಿದ್ದರು. ನಮ್ಮ ಸಂಪ್ರದಾಯಗಳ ಹೆಗ್ಗಳಿಕೆ, ʼವೈಜ್ಞಾನಿಕತೆʼಗಳ ಕುರಿತು ಬಹಳ ಮಾತನಾಡಿದರು. ಮಹಿಳೆಯರು ಕಾಲಲ್ಲಿ ಉಂಗುರ ಧರಿಸಲೇಬೇಕು. ಏಕೆಂದರೆ ಬೆಳ್ಳಿಯ ಕಾಲುಂಗುರ ಧರಿಸಿದರೆ ಉತ್ತಮ ರಕ್ತ ಸಂಚಾರವಾಗುತ್ತದೆ. ಅವರ ಹೃದಯಕ್ಕೆ ಒಳ್ಳೆಯದು, ಗರ್ಭಕೋಶಕ್ಕೆ ರಕ್ತ ಪೂರೈಕೆ ಸರಿಯಾಗಿ ಆಗುತ್ತದೆ, ಋತುಚಕ್ರದ ಸಮಸ್ಯೆ ಇರುವುದಿಲ್ಲ” ಎಂದರು. ಇನ್ನೂ ಒಂದು ʼವೈಜ್ಞಾನಿಕʼ ಮಾತು ಹೇಳಿದರು. ಪ್ರವಾಸಿ ತಾಣಗಳಲ್ಲಿ ನದಿ ನೀರಿಗೆ ನಾಣ್ಯಗಳನ್ನು ಹಾಕುವುದು ಏಕೆ ಎಂದು. ನಾಣ್ಯಗಳನ್ನು ತಾಮ್ರದಿಂದ ಮಾಡಿರುತ್ತಾರೆ, ಅದು ನೀರನ್ನು ಶುದ್ಧವಾಗಿಡುತ್ತದೆ. ಹಾಗಾಗಿ ನೀರಿಗೆ ತಾಮ್ರದ ನಾಣ್ಯಗಳನ್ನು ಹಾಕುತ್ತಾರೆ ಎಂದರು. ಅವರು ಹಿರಿಯರಾದ್ದರಿಂದ ಏನನ್ನೂ ಮರುಪ್ರಶ್ನಿಸದೆ ಸುಮ್ಮನಾದೆ.
ಕಾಲಿಗೆ ಉಂಗುರ ಧರಿಸುವುದನ್ನು ವಿರೋಧಿಸಬೇಕು ಎಂದಲ್ಲ. ಅದು ನಮ್ಮ ಸಂಸ್ಕೃತಿಯ ಭಾಗ. ಆದರೆ ಎಲ್ಲ ಜಾತಿ, ಪಂಥಗಳಲ್ಲೂ ಸಮಾನವಾಗಿ ಇದೆಯೇ? ಎಂದರೆ ಇಲ್ಲ. ಹಾಗಾದರೆ ಮದುವೆ ಆಗುವವರೆಗೆ ಕಾಲಿಗೆ ಉಂಗುರ ಧರಿಸುವುದಿಲ್ಲವಲ್ಲ, ಆಗ ಅವರ ಆರೋಗ್ಯದ ಕಥೆ ಏನು? ಪತ್ನಿಯ ವಯಸ್ಸು ಚಿಕ್ಕದಿರಲಿ, ಹಿರಿಯರಿರಲಿ, ಗಂಡ ನಿಧನನಾದ ಮೇಲೆಯೂ ಕಾಲುಂಗುರ ತೆಗೆಯುತ್ತಾರೆ. ಆಗ ಅವರ ಆರೋಗ್ಯದ ಕಾಳಜಿ ಏಕಿಲ್ಲ? ಎಂದು ಈಗಿನ ಪೀಳಿಗೆ ಪ್ರಶ್ನಿಸುತ್ತದೆ. ನದಿಗೆ ನಾಣ್ಯಗಳನ್ನು ಹಾಕುವ ಬದಲಿಗೆ ದೊಡ್ಡ ದೊಡ್ಡ ತಾಮ್ರದ ಪೈಪ್‌ಗಳನ್ನೇ ಹೂತುಬಿಡಬಹುದಲ್ಲ? ಸುಮ್ಮನೆ ಆರ್‌ಬಿಐ ಠಂಕಿಸಿದ ನಾಣ್ಯವನ್ನು ಹಾಳು ಮಾಡುವುದೇಕೆ? ಈಗ ತಾಮ್ರದಲ್ಲಿ ನಾಣ್ಯವನ್ನೇ ಮಾಡುತ್ತಿಲ್ಲವಲ್ಲ ಹಾಗಿದ್ದರೂ ಏಕೆ ನದಿಗೆ ಎಸೆಯುತ್ತಾರೆ? ಎಂದು ಪ್ರಶ್ನಿಸಿದರೆ ನಮ್ಮ ಬಳಿ ಉತ್ತರ ಏನಿದೆ?
ಹಾಗಾಗಿ ಸಂಪ್ರದಾಯವನ್ನು ಸಂಪ್ರದಾಯವನ್ನಾಗಿಯೇ ಯುವಜನರ ಮುಂದಿಡಬೇಕು. ವಿಜ್ಞಾನವನ್ನು ವಿಜ್ಞಾನವನ್ನಾಗಿಯೇ ಮುಂದಿಡಬೇಕು. ಸಂಪ್ರದಾಯಗಳು ಆಯಾ ಕಾಲ, ಸಂದರ್ಭ, ದೇಶಕ್ಕೆ ಅನುಗುಣವಾಗಿ ರೂಪುಗೊಂಡಿರುತ್ತವೆ. ಹಿಂದುಗಳೆಲ್ಲರೂ ಕಾಲಿಗೆ ಉಂಗುರ ಧರಿಸಬೇಕು, ಎಲ್ಲರೂ ಶಿಖೆ ಬಿಡಲೇಬೇಕು, ಎಲ್ಲರೂ ಮಾರಿ ಹಬ್ಬ ಮಾಡಲೇಬೇಕು, ಎಲ್ಲರೂ ಇಂತಹ ದೇವರನ್ನೇ ಆರಾಧಿಸಬೇಕು, ಬೆಳಗ್ಗೆ ಎದ್ದಾಗ ಇಂತಹ ಶ್ಲೋಕವನ್ನೇ ಹೇಳಬೇಕು… ಇತ್ಯಾದಿ ಇತ್ಯಾದಿ ವಿಚಾರಗಳು ಹಿಂದೂ ಧರ್ಮಕ್ಕೆ ಒಗ್ಗುವುದಿಲ್ಲ ಎನ್ನುವುದನ್ನು ಮೊದಲು ತಿಳಿಯಬೇಕು. ಈಗಾಗಲೆ ಚಿದಾನಂದ ಮೂರ್ತಿ ಅವರು ತಿಳಿಸಿದಂತೆ ಶುದ್ಧ, ತ್ಯಾಗಮಯ, ಪರಿಪೂರ್ಣ ಜೀವನ ನಡೆಸುವುದೇ ಹಿಂದೂ ಧರ್ಮದ ಗುರಿ. ಇಂತಹ ಅನೇಕ ಸಮಾನ ಅಂಶಗಳು ಹಿಂದೂ ಧರ್ಮದಲ್ಲಿ ಜಾತಿಗಳನ್ನು, ಸಮುದಾಯಗಳನ್ನು ಮೀರಿ ಇವೆ.
ಉದಾಹರಣೆಗೆ ಶ್ರೀರಾಮ ನಮಗೆಲ್ಲ ಆದರ್ಶ. ನಾವೆಲ್ಲರೂ ಪುನರ್ಜನ್ಮದಲ್ಲಿ ನಂಬಿಕೆ ಇರಿಸುತ್ತೇವೆ. ಕರ್ಮ ಸಿದ್ಧಾಂತದಲ್ಲಿಯೂ ನಂಬಿಕೆ ಇದೆ. ದೇವರ ಹೆಸರಿನಲ್ಲಿ ವಿಭಿನ್ನತೆ ಇದ್ದರೂ ಸತ್ಯವು ಒಂದೇ ಆಗಿದೆ, ಅದನ್ನು ಬೇರೆಬೇರೆಯವರು ವಿಭಿನ್ನವಾಗಿ ಹೇಳುತ್ತಾರೆ. ನಮ್ಮದು ಕೃತಜ್ಞತೆಯ ಸಂಸ್ಕೃತಿ. ಹೀಗೆ ನೂರಾರು ಸಮಾನ ಅಂಶಗಳಿವೆ. ಈ ಸಮಾನ ಅಂಶಗಳನ್ನು ಮಾತ್ರವೇ ಸಾಮೂಹಿಕವಾಗಿ ಹೇಳಬೇಕು. ಹೀಗೇ ಆಚರಣೆ ಮಾಡಬೇಕು, ಹೀಗೆ ಮಾಡದಿದ್ದರೆ ನೀನು ಹಿಂದುವೇ ಅಲ್ಲ ಎನ್ನುವುದಾದರೆ ಅದು ಕ್ರೈಸ್ತ, ಇಸ್ಲಾಂಗಿಂತ ಭಿನ್ನ ಹೇಗಾಗುತ್ತದೆ? ಈಗಿನ ಯುವಜನತೆಗೆ ಹಿಂದು ಧರ್ಮದ ಕುರಿತು ಮಾಹಿತಿಗಿಂತ ಇತರೆ ನಂಬಿಕೆಗಳ ಮಾಹಿತಿ, ವಿಚಾರಗಳು ಬೇಗ ತಲುಪುತ್ತಿವೆ. ಅವುಗಳ ಆಧಾರದಲ್ಲೇ ಹಿಂದು ಧರ್ಮವನ್ನು ಪ್ರಶ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ, ಭಾರತ ಹಾಗೂ ಇಂಡಿಯಾ ಹೆಸರುಗಳ ಚರ್ಚೆ ಬಂದಾಗ ಯುವಜನತೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಹೆಸರುಗಳ ನಡುವೆ ಗುದ್ದಾಡುವುದೇಕೆ? ಹೆಸರಿನಲ್ಲಿ ಏನಿದೆ? ಇಂಡಿಯಾ ಎಂದ ಕೂಡಲೆ ನಾವೇನು ಬ್ರಿಟಿಷರಾಗುತ್ತೇವೆಯೇ? ಎಂದು ಕೇಳುತ್ತಿದ್ದಾರೆ. ಮೊದಲಿಗೆ ನಮ್ಮ ಕುಟುಂಬದಲ್ಲಿ ಸಂಪ್ರದಾಯಗಳ ಆಚರಣೆ ಆಗುತ್ತಿದೆಯೇ ಎಂದು ನೋಡಬೇಕು. ಸಂಪ್ರದಾಯ ಎಂದರೆ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುವುದಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ʼಭಾರತʼದಲ್ಲಿರುವ ಗಾಂಭೀರ್ಯ ‘ಇಂಡಿಯಾʼದಲ್ಲಿ ಏಕಿಲ್ಲ?
ಪೋಷಕರು ಮೊದಲಿಗೆ ಶುದ್ಧ ಜೀವನ ನಡೆಸುತ್ತಿದ್ದಾರೆಯೇ? ಸತ್ಯವನ್ನೇ ಹೇಳುತ್ತಾರೆಯೇ? ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆಯೇ ಅಥವಾ ಭ್ರಷ್ಟಾಚಾರದ ದುಡ್ಡಿನಲ್ಲಿ ದೊಡ್ಡದೊಡ್ಡ ಬಂಗಲೆ ಕಟ್ಟಿದ್ದಾರೆಯೇ? ನೈತಿಕವಾಗಿ ಚಾರಿತ್ರ್ಯವನ್ನು ಕಾಪಾಡಿಕೊಂಡಿದ್ದಾರೆಯೇ? ಎನ್ನುವುದನ್ನು ಮುಂದಿನ ಪೀಳಿಗೆ ನೋಡುತ್ತಲೇ ಇರುತ್ತದೆ. ಇದನ್ನೆಲ್ಲ ಹೊಂದಿದ ವ್ಯಕ್ತಿ, ಹಿತಕರವಾದ ಹಾಗೂ ಅಷ್ಟೇ ಸ್ಪಷ್ಟವಾದ ಭಾಷೆಯಲ್ಲಿ ಹೇಳಿದರೆ ಕೇಳುತ್ತಾರೆ. ಸದ್ಗುರು ಜಗ್ಗಿ ವಾಸುದೇವ್ ಅವರ ವಿಡಿಯೋಗಳೇ ಇದಕ್ಕೆ ಉದಾಹರಣೆ. ಯುವಜನರಿಂದ ಮುಕ್ತವಾಗಿ ಸ್ವೀಕರಿಸುವ ಸದ್ಗುರು, ಅಷ್ಟೇ ಸಮರ್ಥವಾಗಿ ಉತ್ತರ ನೀಡುತ್ತಾರೆ. ಪೆದ್ದುಪೆದ್ದು ಪ್ರಶ್ನೆಗಳಿಗೂ ಸುದೀರ್ಘವಾದ ಉತ್ತರ ನೀಡುತ್ತಾರೆ. ಹಾಗಾಗಿ ಹೆಚ್ಚೆಚ್ಚು ಯುವಜನರು ಅವರತ್ತ ಸಾಗುತ್ತಿದ್ದಾರೆ. ಇದೇ ರೀತಿ ಅನೇಕ ಸಾಧು ಸಂತರೂ ಯುವಜನರತ್ತ ತಮ್ಮ ಸಹಾಯಹಸ್ತವನ್ನು ಚಾಚುತ್ತಿದ್ದಾರೆ. ಇಡೀ ಸಮಾಜದಲ್ಲಿ ಇಂತಹ ವಾತಾವರಣ ನಿರ್ಮಾಣವಾದರೆ ಯುವಜನರು ಇಂದು ಯಾವುದೇ ಮಾತನ್ನು ಕೇಳಲು ಸಿದ್ಧರಾಗಿದ್ದಾರೆ.
ಅದು ಬಿಟ್ಟು ಮುಂದಿನ ಪೀಳಿಗೆಯನ್ನು ತೆಗಳುವುದನ್ನೇ ʼಸಂಪ್ರದಾಯʼ ಮಾಡಿಕೊಂಡರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಭಾರತ ಹಾಗೂ ಇಂಡಿಯಾದ ಮಹತ್ವ ತಿಳಿಯದೆ ತಾವು ರಾಜಕೀಯದಿಂದ ಹೊರತಾಗಿರುವವರು ಎಂಬ ಸ್ಟೇಟ್ಮೆಂಟ್ ಕೊಡುತ್ತಾರೆ. ತನ್ನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸದ ಕಾರಣವೂ ಈಗ ಇಸ್ರೇಲ್‌ನಲ್ಲಿ ಕದನ ನಡೆಯಲು ಒಂದು ಕಾರಣ ಎನ್ನುವುದು ನಮಗೆಲ್ಲ ತಿಳಿದಿರಬೇಕು.
ಇದನ್ನೂ ಓದಿ: ವಿಸ್ತಾರ ಅಂಕಣ: ಸಮಾಜಭಂಜಕರನ್ನು ಗುರುತಿಸಿ, ದೂರವಿಡೋಣ