ನಾವು ಯಾವುದನ್ನು ಜೀವಿಸುತ್ತೇವೆಯೋ, ಯಾವ ವ್ಯವಸ್ಥೆಯಲ್ಲಿ ಇರುತ್ತೇವೆಯೋ ಅದರ ಕುರಿತು ನಮಗೆ ತಿಳಿವಳಿಕೆ ಕಡಿಮೆಯಿರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಉದಾಹರಣೆಗೆ ನಮ್ಮ ದೇಹ. ನಾವು ಹೊರಜಗತ್ತಿಗೆ ಕಾಲಿಡುವ ಮುನ್ನವೇ ನಮ್ಮ ದೇಹದೊಂದಿಗೆ ನಾವು ಇದ್ದೇವೆ. ಆದರೆ ಇಂದಿಗೂ ನಮ್ಮ ದೇಹದ ಇತಿ ಮಿತಿ, ಸಾಮರ್ಥ್ಯ ತಿಳಿದೇ ಇರುವುದಿಲ್ಲ. ಎಷ್ಟು ವ್ಯಾಯಾಮ ಮಾಡಿದರೆ, ಎಷ್ಟು ಊಟ ಮಾಡಿದರೆ, ಯಾವ ಆಹಾರ ಸೇವಿಸಿದರೆ, ಯಾವುದನ್ನು ಸೇವಿಸದಿದ್ದರೆ ದೇಹಾರೋಗ್ಯ ಚೆನ್ನಾಗಿರುತ್ತದೆ ಎನ್ನುವುದು 30-40-50 ವರ್ಷವಾದರೂ ಅನೇಕರಿಗೆ ಗೊತ್ತೇ ಇರುವುದಿಲ್ಲ. ಅದೇ ರೀತಿ ಹಿಂದೂ ಧರ್ಮ (Hindu Dharma) ಅಥವಾ ಸನಾತನ ಧರ್ಮ (Sanatan Dharma).
ಕನಿಷ್ಠ 5 ಸಾವಿರ ವರ್ಷದಿಂದ ನಾವು ಈ ಸನಾತನ ಧರ್ಮದ ಜತೆಗೆ ಜೀವಿಸುತ್ತಿದ್ದೇವೆ. ಇಂದಿಗೂ ವಿಶ್ವದಲ್ಲಿ ಜೀವಂತವಾಗಿ ಉಳಿದಿರುವ, ಕಾಲ ಕಾಲಕ್ಕೆ ಸುಧಾರಣೆ ಕಾಣುತ್ತಿರುವ, ಅತ್ಯಂತ ಪ್ರಾಚೀನ ನಂಬಿಕೆ, ಧರ್ಮ ಎಂದರೆ-ಅದು ಹಿಂದೂ ಧರ್ಮ. ಆದರೆ ಕೇವಲ 200 ವರ್ಷದ ಬ್ರಿಟಿಷ್ ಆಡಳಿತವು ನಮ್ಮಲ್ಲಿ ಯಾವ ಮಟ್ಟಿಗಿನ ಅಜ್ಞಾನವನ್ನು ತುಂಬಿತು ಎಂದರೆ, ಹಿಂದೂ ಧರ್ಮ ಎಂದರೆ ಏನು? ಎಂದು ಯಾರಾದರೂ ಪ್ರಶ್ನೆ ಕೇಳಿದರೆ ಥಟ್ಟನೆ ಹೇಳಲು ಉತ್ತರವೇ ಹೊಳೆಯುವುದಿಲ್ಲ. ದೇಶದ ಹೊರಗಷ್ಟೆ ಅಲ್ಲ, ದೇಶದ ಒಳಗೂ ಹಿಂದೂ ಧರ್ಮದ ಕುರಿತು ಇರುವ ತಪ್ಪು ಕಲ್ಪನೆ ಅಷ್ಟಿಷ್ಟಲ್ಲ. ಬ್ರಿಟಿಷರು ನಮ್ಮನ್ನು ಒಡೆದು ಆಳಲು ಸೃಷ್ಟಿಸಿದ ಆರ್ಯ-ದ್ರಾವಿಡ ಸಿದ್ಧಾಂತದಿಂದ ಎಷ್ಟು ಪ್ರಭಾವಿತವಾಗಿದ್ದೇವೆ ಎಂದರೆ, ನಮ್ಮದೇ ಅನುಭವವನ್ನು ಅನೇಕ ಬಾರಿ ಅಲ್ಲಗಳೆಯುತ್ತೇವೆ.
ಭಾರತದ ಖ್ಯಾತ ಸಂಶೋಧಕರಲ್ಲೊಬ್ಬರಾಗಿದ್ದ ಡಾ. ಎಂ. ಚಿದಾನಂದ ಮೂರ್ತಿ ಅವರು ಹೇಳುವಂತೆ, “ಒಂದು ಧರ್ಮದ ಶ್ರೇಷ್ಠತೆ, ಕೊರತೆ, ದೌರ್ಬಲ್ಯಗಳನ್ನು ಕುರಿತು ವಿವೇಚನೆ ಮಾಡುವಾಗ ಆ ಧರ್ಮದ ಮೂಲಗ್ರಂಥಗಳು ಮುಖ್ಯವಾಗುತ್ತವೆಯೇ ಹೊರತು ಅದರ ಅನುಯಾಯಿಗಳು ಅಲ್ಲ. ಧರ್ಮದ ಶ್ರೇಷ್ಠ ತತ್ವಗಳನ್ನು ಅನುಯಾಯಿಗಳು ಅನುಸರಿಸದಿದ್ದರೆ ಆ ಅನಾಚಾರವನ್ನು ಆಧಾರಗ್ರಂಥದ ಮೇಲೆ ಹೊರಿಸಬಾರದು. ಹಾಗೊಂದು ವೇಳೆ ಮೂಲ ಗ್ರಂಥದಲ್ಲೇ ಅನಾಚಾರದ ಬೋಧನೆ ಇದ್ದರೆ ಅದು ಖಂಡನೀಯ,” ಎಂದಿದ್ದಾರೆ ಚಿದಾನಂದ ಮೂರ್ತಿಯವರು. ಇದೇ ದೃಷಿಕೋನದಲ್ಲಿ, “ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂ ಧರ್ಮ” ಎಂಬ ಕೃತಿಯನ್ನೇ ಬರೆದಿದ್ದಾರೆ.
ಸನಾತನ ಧರ್ಮದ ವಿಸ್ತೃತ ವ್ಯಾಖ್ಯಾನದ ಆಧಾರದಲ್ಲಿ ಚಿದಾನಂದ ಮೂರ್ತಿಯವರ ಮಾತನ್ನು ಸಂಪೂರ್ಣವಾಗಿ ಒಪ್ಪಲಾಗದಿರಬಹುದು. ಸನಾತನ ಧರ್ಮ ಎನ್ನುವುದು ಕೇವಲ ಪುಸ್ತಕಗಳ ಆಧಾರದಲ್ಲಿ ನಡೆಯುತ್ತಿಲ್ಲ. ಪುಸ್ತಕಗಳು ಆರಂಭವಾಗುವುದಕ್ಕೂ ಮುನ್ನವೇ ಧರ್ಮ ಆರಂಭವಾಗಿತ್ತು. ಇಂದಿಗೂ ಸನಾತನ ಧರ್ಮದ ಆರಂಭದ ದಿನಾಂಕ ಯಾರಿಗೂ ಗೊತ್ತಿಲ್ಲ. ಧರ್ಮಗ್ರಂಥಗಳು ಈಗ ಇವೆ. ಆದರೂ ಅವುಗಳಲ್ಲಿ ಏನಾದರೂ ಸಂದೇಹಗಳು, ಧರ್ಮಸಂಕಟಗಳು ಬಂದರೆ ಅದಕ್ಕೆ ಪರಿಹಾರ ಆ ಊರಿನಲ್ಲಿರುವ ಹಿರಿಯರು ಅಥವಾ ಮಠದ ಸ್ವಾಮೀಜಿಗಳಾಗಿರುತ್ತಾರೆ. ಹಿಂದೂ ಧರ್ಮ ಎನ್ನುವುದು ರಿಲೀಜನ್ನುಗಳ ರೀತಿ ಪುಸ್ತಕ ಆಧರಿತವಲ್ಲ. ಆದರೂ ಹಿಂದು ಧರ್ಮದ ಕೆಲವು ಪುಸ್ತಕಗಳನ್ನು ಉಲ್ಲೇಖಿಸಿ ಹಿಂದು ಧರ್ಮದ ಕುರಿತು ಕೆಲವು ಸ್ಪಷ್ಟತೆಯನ್ನು ಪಡೆದುಕೊಳ್ಳಬಹುದು.
ಹಿಂದೂ ಧರ್ಮವೂ ಒಂದು ಸಣ್ಣ ಹೊಳೆಯಲ್ಲ. ಅದು ಹಲವು ನದಿ ಉಪನದಿಗಳು ಕೂಡಿ ಹರಿಯುವ ಮಹಾನದಿ ಇದ್ದಂತೆ ಎಂದು ಮೊನಿಯರ್ ವಿಲಿಯಮ್ಸ್ ಹೇಳಿದ್ದಾರೆ. ಒಂದೇ ಸತ್ಯವನ್ನು ಜ್ಞಾನಿಗಳು ಬೇರೆ ಬೇರೆ ಹೆಸರುಗಳಿಂದ ಹೇಳುತ್ತಾರೆ ಎನ್ನುವುದರಿಂದ ಆರಂಭವಾಗುವ ಹಿಂದೂ ಧರ್ಮದ ಮೂಲವು ಶೈವ, ವೈಷ್ಣವ, ಶಾಕ್ತ್ಯ, ಸೌರ, ಗಾಣಪತ್ಯ ಮುಂತಾದ ಅನೇಕ ನಂಬಿಕೆಗಳಲ್ಲಿ ಮೂಡಿಬಂದಿದೆ.
ಮೂಲ ಯಾವುದು?
ಹಿಂದೂ ಧರ್ಮವೂ ಯಾವಾಗ ಆರಂಭವಾಯಿತು ಎನ್ನುವುದಕ್ಕೆ ದಾಖಲೆ ಇಲ್ಲವಾದರೂ ಸದ್ಯ ಆಚರಣೆ ಮಾಡುತ್ತಿರುವ ಹಿಂದೂ ಧರ್ಮಕ್ಕೆ ಮೂಲ ಆಧಾರ ಯಾವುದು ಎಂಬ ಕುರಿತು ಅನೇಕ ಚರ್ಚೆಗಳು ನಡೆದಿವೆ. ಸ್ವಾತಂತ್ರ್ಯವೀರ ಸಾವರ್ಕರರು ಈ ಕುರಿತು ಒಂದು ವ್ಯಾಖ್ಯೆಯನ್ನು ಮಾಡಿದ್ದರು. ಅದರಂತೆ, ಭಾರತವು ಯಾರಿಗೆ ಪುಣ್ಯಭೂಮಿಯೋ ಯಾರಿಗೆ ಪಿತೃ ಭೂಮಿಯ ಅವರೆಲ್ಲ ಹಿಂದುಗಳು ಎಂದು ತಿಳಿಸಿದ್ದರು. ಇದು ಅನ್ವಯದ ದೃಷ್ಟಿಯಿಂದ ಹಾಗೂ ಪ್ರಾಕ್ಟಿಕಲ್ ಆಗಿ ಸಾಕಷ್ಟು ಉಪಯೋಗಿಸುವ ವ್ಯಾಖ್ಯಾನ. ಆದರೆ ಅನೇಕ ಸಂಶೋಧಕರು ಇದರಲ್ಲಿ ಕೆಲವು ಲೋಪಗಳನ್ನು ಕಂಡುಕೊಂಡಿದ್ದಾರೆ. ಕ್ರಿಶ್ಚಿಯನ್ನರು ಮುಸಲ್ಮಾನರು, ಅವರಿಗೆ ಇದು ಮಾತೃಭೂಮಿಯಾದರೂ ಅವರು ಹಿಂದೂಗಳಲ್ಲ. ಜೈನರು, ಬೌದ್ಧರಿಗೆ ಭಾರತವು ಪಿತೃ ಭೂಮಿ ಮತ್ತು ಪುಣ್ಯಭೂಮಿ ಆದರೂ, ಅವರು ತಾವು ಹಿಂದೂಗಳಲ್ಲ ಎಂದು ಹೇಳಿಕೊಳ್ಳುತ್ತಾರೆ. ಹಾಗಾಗಿ 1995ರಲ್ಲಿ ಸುಪ್ರೀಂ ಕೋರ್ಟ್ ಈ ಕುರಿತು ನೀಡಿದ ತೀರ್ಪು ಮುಖ್ಯ ವಾಗುತ್ತದೆ. ವೇದಗಳಲ್ಲಿ ಶ್ರದ್ಧೆ, ಅವು ಧರ್ಮದ ಅಧಿಕೃತ ಮೂಲ ಗ್ರಂಥಗಳೆಂದು ಒಪ್ಪಿಕೊಳ್ಳುವುದು ಹಿಂದೂ ಧರ್ಮದ ಪ್ರಮುಖ ಲಕ್ಷಣ ಎಂದು ಸುಪ್ರೀಂಕೋರ್ಟ್ ಪೂರ್ಣ ಪೀಠ ಹೇಳಿದ್ದು. ಈ ವ್ಯಾಖ್ಯಾನವು ಮತ್ತಷ್ಟು ವಿಸ್ತಾರ ಆಗುತ್ತದೆ ಮತ್ತು ಸ್ಪಷ್ಟವಾಗುತ್ತದೆ. ಆದರೂ ಹಿಂದೂಗಳಲ್ಲಿ ವೇದಗಳನ್ನು ನಂಬದ, ದೇವರನ್ನು ನಂಬದ ಅನೇಕರು ಇರುತ್ತಾರೆ. ಅಂತಹವರಿಗೂ ಹಿಂದೂ ಧರ್ಮವೂ ಗೌರವಯುತವಾದ ಸ್ಥಾನವನ್ನು ನೀಡಿದೆ.
ಆರ್ಯ- ದ್ರಾವಿಡ
ಭಾರತದಲ್ಲಿ ಎರಡು ರೀತಿಯ ಜನಾಂಗಗಳಿವೆ, ಅದರಲ್ಲಿ ಮೊದಲನೆಯದಾಗಿ ದ್ರಾವಿಡರು ಇದೇ ಭೂಮಿಯಲ್ಲಿ ಜನಿಸಿದವರು. ಅವರು ಮೂಲ ನಿವಾಸಿಗಳು ಹಾಗೂ ಆರ್ಯರು ವಿದೇಶದಿಂದ ಆಕ್ರಮಣಕಾರರಾಗಿ ಆಗಮಿಸಿ ಇಲ್ಲೇ ನೆಲೆಸಿದವರು ಎನ್ನುವುದು ಇದನ್ನು ಆರ್ಯ ದ್ರಾವಿಡ ಸಿದ್ಧಾಂತ ಎಂದು ಅನೇಕ ವರ್ಷಗಳ ಕಾಲ ಪ್ರಚಾರ ಮಾಡಲಾಯಿತು. ಇದು ಪಾಶ್ಚಾತ್ಯರು ಭಾರತೀಯರ ಮನಸ್ಸಿನಲ್ಲಿ ಬಿತ್ತಿರುವ ಇನ್ನೊಂದು ಅಪಾಯದ ಬೀಜ. ಆರ್ಯರು ಹೊರಗಿನಿಂದ ಬಂದು ದ್ರಾವಿಡರನ್ನು ದಕ್ಷಿಣ ಭಾರತಕ್ಕೆ ಓಡಿಸಿದರು ಎಂದು ಈ ಸಿದ್ಧಾಂತ ಹೇಳುತ್ತದೆ. ಆದರೆ ವೇದಗಳಲ್ಲಿ ಬರುವ ಆರ್ಯ- ದಸ್ಯು ಪದಗಳಿಗೆ ವಿವೇಕಿ -ದುಷ್ಟ ಎಂಬ ಅರ್ಥಗಳಿವೆ ಮತ್ತು ಅದನ್ನು ಆಧುನಿಕ ಸಂಶೋಧನೆಗಳು ದೃಢಪಡಿಸಿವೆ. ವೇದಗಳು ಪ್ರಕೃತಿಯ ಬೇರೆ ಬೇರೆ ಭಾಗಗಳನ್ನು ಆರಾಧಿಸುವುದನ್ನು ಹೇಳುತ್ತವೆಯೇ ಹೊರತು ಏಕದೇವತಾರಾಧನೆಯನ್ನು ಹೇಳುವುದೇ ಇಲ್ಲ ಎಂದೂ ಅನೇಕರು ಹೇಳುತ್ತಾರೆ. ಇಡೀ ವಿಶ್ವದ ಹಿಂದಿನ ಚೈತನ್ಯ ಸ್ವರೂಪಿ ಭಗವಂತ ಒಬ್ಬನೇ ಎಂದೂ ವೇದಗಳಲ್ಲಿವೆ. ಏಕಮ್ ಸತ್ ವಿಪ್ರಾಃ ಬಹುದಾ ವದಂತಿ ಎನ್ನುವುದು ಇದಕ್ಕೆ ಉದಾಹರಣೆ.
ಹಿಂದೂ ಧರ್ಮವೂ ಅತ್ಯಂತ ಉದಾತ್ತವಾದ ನೆಲೆಗಟ್ಟಿನಲ್ಲಿ ನಿಂತಿದೆ. ಎಲ್ಲ ಬಗೆಯ ಸಮಾನತೆಯನ್ನು ಸಾರುವ ಹಾಗೂ ಆಧ್ಯಾತ್ಮಿಕದಂತೆಯೇ ಲೌಕಿಕ ಸುಖಕ್ಕೂ ಮಹತ್ವ ನೀಡುತ್ತದೆ. ಸರ್ವೇ ಜನ ಸುಖಿನೋ ಭವಂತು ಎಂದು ಹಿಂದೂ ಧರ್ಮವೂ ಹೇಳುತ್ತದೆ ಹೊರತು ಹಿಂದೂಗಳು ಮಾತ್ರವೇ ಸುಖವಾಗಿರಬೇಕು, ದೇವರನ್ನು ನಂಬುವವರು ಮಾತ್ರ ಸುಖವಾಗಿರಬೇಕು, ನಮ್ಮನ್ನು ಪ್ರೀತಿಸುವವರು ಮಾತ್ರ ಸುಖವಾಗಿರಬೇಕು, ಉಳಿದವರನ್ನು ಕೊಲ್ಲಬೇಕು, ಅವರು ಜೀವನ ನಡೆಸಲು ಅರ್ಹರಲ್ಲ ಎಂದು ಹಿಂದೂ ಧರ್ಮ ಎಲ್ಲೂ ಹೇಳಿಲ್ಲ.
ಮೂರು ಆಯಾಮಗಳು
ಹಿಂದು ಧರ್ಮವನ್ನು ಮೂರು ಆಯಾಮಗಳಲ್ಲಿ ನೋಡಬಹುದು. ಮೊದಲನೆಯದು, ಹಿಂದೂ ಧರ್ಮದ ಆಧ್ಯಾತ್ಮಿಕ ಆಯಾಮ. ಇದರಲ್ಲಿ ವಿಶ್ವದ ಹಿಂದಿನ ನಿತ್ಯ ಸತ್ಯದ ಅನುಭವ ದರ್ಶನ ಇರುತ್ತದೆ. ಈಶಾವಾಸ್ಯೋಪನಿಷತ್ತು ಹೇಳುವಂತೆ, ವಿಶ್ವ ಎಂಬ ಚಿನ್ನದ ಪಾತ್ರೆಯು ಸತ್ಯವನ್ನು ಅರ್ಥಾತ್ ವಿಶ್ವಚೇತನವನ್ನು ಮರೆ ಮಾಡಿದೆ. ಮನುಷ್ಯ ಆ ಚಿನ್ನದ ಪಾತ್ರೆಯನ್ನು ಪಕ್ಕಕ್ಕೆ ತಳ್ಳಿ ಅದರ ಆಚೆ ಇರುವ ಸತ್ಯದ ದರ್ಶನ ಮಾಡಬೇಕು ಎನ್ನುವುದು.
ಎರಡನೆಯದು, ಧಾರ್ಮಿಕ ಆಯಾಮ. ಎಲ್ಲ ಮತ ಪಂಥಗಳು ಅವು ಎತ್ತಿ ಹಿಡಿಯುವ ಎಲ್ಲ ದೈವಗಳು ಒಂದೇ ವಿಶ್ವ ಸತ್ಯದ ಬೇರೆ ಬೇರೆ ಹೆಸರುಗಳು. ಹಾಗಾಗಿ ಅವುಗಳ ಆಚರಣೆಯಲ್ಲಿ ಮೇಲ್ನೋಟದ ವಿನ್ಯಾಸದಲ್ಲಿ ಬದಲಾವಣೆಗಳು ಕಾಣಿಸುತ್ತವೆ. ಆದರೆ ಆಂತರ್ಯದಲ್ಲಿ ಅವೆಲ್ಲವುಗಳು ಒಬ್ಬನೇ ಭಗವಂತ ಅಂದರೆ ಸತ್ಯದ ಕಡೆಗೆ ನಮ್ಮನ್ನು ಒಯ್ಯುತ್ತದೆ ಎನ್ನುವುದು ಅನೇಕ ಮಹನೀಯರು ಸಾಧು ಸಂತರು ತಿಳಿಸಿರುವ ವಿಚಾರ.
ಮೂರನೆಯ ಆಯಾಮ ಎಂದರೆ ಅದು ಸಾಮಾಜಿಕ ಆಯಾಮ. ಮೃತ್ಯುವಿನ ನಂತರ ಮಾತ್ರವಲ್ಲ, ಭೂಮಿಯ ಮೇಲೆ ಇರುವಾಗಲೂ ಸರ್ವ ಜನರು ಸುಖವಾಗಿರಬೇಕು ಎನ್ನುವುದು ಹಿಂದೂ ಧರ್ಮದ ಮೂಲ ವಿಚಾರಗಳು. ಸಮುತ್ಕರ್ಷ ಹಾಗೂ ನಿಶ್ರೇಯಸ್ಸು ಎಂಬ ಎರಡು ಪದಗಳಿವೆ. ನಿಶ್ರೇಯಸ್ಸು ಎಂದರೆ ಮೃತ್ಯುವಿನ ನಂತರದ ಮುಕ್ತಿ ಮೋಕ್ಷ ಎಂಬ ಆಧ್ಯಾತ್ಮಿಕ ಪರಿಕಲ್ಪನೆ. ಸಮುತ್ಕರ್ಷ ಎನ್ನುವುದು ಭೂಮಿಯ ಮೇಲೆ ಎಲ್ಲಾ ಜೀವಿಗಳು ಉತ್ತಮ ರೀತಿಯಲ್ಲಿ ಬದುಕುವ ಸಮಾಜವನ್ನು ನಿರ್ಮಾಣ ಮಾಡುವುದು. ಯಾವುದನ್ನು ಸಮಾಜವಾದಿಗಳು ಸಮ ಸಮಾಜ ಎಂದು ಕರೆಯುತ್ತಾರೆಯೋ ಅದನ್ನು ಹಿಂದೂ ಧರ್ಮವು ಸಾವಿರಾರು ವರ್ಷಗಳ ಹಿಂದೆಯೇ ಪ್ರತಿಪಾದನೆ ಮಾಡಿದೆ. ಕೇವಲ ಮನುಷ್ಯರ ಸುಖ ಶಾಂತಿಯಲ್ಲದೆ ಪ್ರಾಣಿಗಳು ಪಕ್ಷಿಗಳು, ಜಲಚರಗಳು, ಕ್ರಿಮಿ ಕೀಟಗಳು ಸಹಿತ ಇಲ್ಲಿ ಜೀವಿಸುವ ಹಕ್ಕನ್ನು ಹೊಂದಿವೆ ಎಂಬುದು ಕೇವಲ ಮೇಲ್ನೋಟದ ತೋರಿಕೆಯ ಹೇಳಿಕೆಯಲ್ಲ, ಇಂದು ಧರ್ಮದ ಮೂಲ ಸಿದ್ಧಾಂತ.
ಕಳಂಕ
ಹಿಂದೂ ಧರ್ಮದಲ್ಲಿ ಇಷ್ಟು ಉದಾತ್ತ ಚಿಂತನೆಗಳು ಇವೆ ಎಂದ ಮಾತ್ರಕ್ಕೆ ಆಚರಣೆಯಲ್ಲಿ ಎಲ್ಲವೂ ಅಷ್ಟೇ ಉದಾತ್ತವಾಗಿವೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಹಿಂದೂ ಧರ್ಮಕ್ಕೆ ಗಂಡು ಹೆಣ್ಣು, ವರ್ಣಭೇದ, ಜಾತಿಭೇದ ಸ್ಪೃಷ್ಯ ಅಸ್ಪೃಶ್ಯ ಮುಂತಾದ ಕಳಂಕಗಳು ಪ್ರಾಪ್ತಿ ಆದದ್ದು ವೇದದ ನಂತರದ ಕಾಲದಲ್ಲಿ ಎಂದು ಸಂಶೋಧಕರು ಹೇಳುತ್ತಾರೆ. ವ್ಯಕ್ತಿಯ ವರ್ಣವನ್ನು ಅವನ ವೃತ್ತಿ ಮತ್ತು ಮನೋಧರ್ಮಕ್ಕೆ ಅನುಗುಣವಾಗಿ ವರ್ಗೀಕರಿಸುವ ವ್ಯವಸ್ಥೆ ಇತ್ತು. ಆದರೆ ಅದು ಸ್ಮೃತಿಗಳ ಕಾಲಕ್ಕೆ ಹುಟ್ಟಿನಿಂದ ಆಧಾರಿತವಾಗಿ ನಿರ್ಣಯ ಆಗಲು ಪ್ರಾರಂಭವಾಯಿತು. ಶೂದ್ರರು, ಸ್ತ್ರೀಯರು ವೇದಾಧ್ಯಯನಕ್ಕೆ ಅರ್ಹರಲ್ಲ ಎನ್ನುವ ಮಾತುಗಳು ಅನೇಕ ಸ್ಮೃತಿಗಳಲ್ಲಿ ಕೇಳಿ ಬರುತ್ತದೆ. ಇವುಗಳು ಆಯಾ ಕಾಲಕ್ಕೆ ತಕ್ಕಂತೆ ಮಾಡಿಕೊಂಡ ನಿಯಮಗಳಿರಬಹುದು. ಅವುಗಳು ಆಗಿನ ಕಾಲಕ್ಕೆ ಎಷ್ಟು ಸೂಕ್ತ ಎನ್ನುವುದೂ ಪ್ರಶ್ನಾರ್ಹ. ಆದರೆ ಈಗಿನ ಕಾಲಕ್ಕಂತೂ ತ್ಯಜಿಸಲು ಯೋಗ್ಯವಾಗಿರುವಂತಹ ವಾಕ್ಯಗಳು.
ಹಿಂದೂ ಧರ್ಮದ ಗ್ರಂಥಗಳಲ್ಲಿ ಇಲ್ಲದ ಈ ರೀತಿಯ ಆಚರಣೆಗಳನ್ನು ಕೆಲವರು ಮಾಡಿಕೊಂಡು ಬಂದಿದ್ದಾರೆ. ಇಲ್ಲಿನ ವ್ಯವಸ್ಥೆಯಲ್ಲಿ ಶಿಥಿಲತೆ ಕಂಡುಬಂದಿತು. ಇದೇ ಶಿಥಿಲತೆಯನ್ನು ದುರುಪಯೋಗಪಡಿಸಿಕೊಂಡ ಬ್ರಿಟಿಷರು ಹಾಗೂ ನಮ್ಮೊಳಗಿರುವ ಜಾತ್ಯತೀತರು (Seculars) ಎನಿಸಿಕೊಂಡ ಅನೇಕರು ಆರ್ಯ ದ್ರಾವಿಡದಂತಹ ಅನೇಕ ತಪ್ಪು ಸಿದ್ಧಾಂತಗಳನ್ನು ಹರಿಯಬಿಟ್ಟರು. ಆರ್ಯರು ಎಂದರೆ ವಿದೇಶದಿಂದ ಬಂದವರು, ಅಂದರೆ ಮೇಲುಜಾತಿಯವರು ಎನ್ನುವ ಭ್ರಮೆಯನ್ನು ಹುಟ್ಟಿಸಿದರು. ಇಡೀ ಭಾರತದಲ್ಲಿ ಅತಿ ಹೆಚ್ಚಾಗಿ ಆರ್ಯ ದ್ರಾವಿಡ ಸಿದ್ದಾಂತವನ್ನು ರಾಜಕೀಯವಾಗಿ ಸಫಲ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ತಮಿಳುನಾಡಿನಲ್ಲಿ.
ಕಳೆದ ನಾಲ್ಕೈದು ದಶಕಗಳಿಂದಲೂ ಇಡೀ ತಮಿಳುನಾಡು ರಾಜಕೀಯವನ್ನು ಈ ಆರ್ಯ ದ್ರಾವಿಡ ಸಿದ್ಧಾಂತವು ಪ್ರಭಾವಿಸುತ್ತಲೇ ಬಂದಿದೆ. ಆದರೆ ನಾವು ಇಲ್ಲಿ ಗಮನಿಸಬೇಕಾದ ಅಂಶ ಮತ್ತು ಎಲ್ಲ ಸಾರ್ವಜನಿಕರಿಗೂ ಸ್ಪಷ್ಟವಾಗಿ ಕಾಣುವ ವಿಚಾರವೆಂದರೆ ತಮಿಳುನಾಡಿನ ಸಾಮಾನ್ಯ ಜನರಲ್ಲಿ ಈ ರೀತಿಯ ಆರ್ಯ ದ್ರಾವಿಡ ಎನ್ನುವ ಯಾವ ಸೈದ್ಧಾಂತಿಕ ಬೇಧವಾಗಲಿ ಹಿಂದೂ ಧರ್ಮದ ಕುರಿತು ಹಾಗೂ ದೇವರ ಕುರಿತು ಯಾವುದೇ ವಿರೋಧವಾಗಲಿ ಕಂಡುಬರುವುದಿಲ್ಲ. ತಮಿಳುನಾಡು ಅತ್ಯಂತ ವೈಭವಯುತವಾದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಪ್ರದೇಶ. ಅಲ್ಲಿನ ದೇವಸ್ಥಾನಗಳು, ಮಠ ಮಂದಿರಗಳು ಇಂದಿಗೂ ಲಕ್ಷಾಂತರ ಜನರನ್ನು ತಮ್ಮತ್ತ ಸೆಳೆಯುತ್ತಿವೆ.
ತಮಿಳುನಾಡಿನಿಂದ ಸಿಂಗಾಪುರ ಮಲೇಷ್ಯಾದಂತಹ ದೇಶಗಳಿಗೆ ವಲಸೆ ಹೋದ ಜನರು ಅಲ್ಲಿ ಹಿಂದೂ ಸಂಸ್ಕೃತಿಯ ಪ್ರತೀಕಗಳಾದ ದೇವಸ್ಥಾನಗಳನ್ನು ಸ್ಥಾಪಿಸಿ ಹಬ್ಬ ಹರಿದಿನಗಳ ಆಚರಣೆಯನ್ನು ನಡೆಸುತ್ತಿರುವುದನ್ನು ಕಾಣುತ್ತೇವೆ. ತಮಿಳುನಾಡಿನ ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ಜನರ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವಂತಹ ಯೋಜನೆಗಳನ್ನು ಘೋಷಿಸುತ್ತಾರೆ. ಅಂದರೆ ಉಚಿತ ಟಿವಿ, ಉಚಿತ ಮಿಕ್ಸಿ, ಕುಕ್ಕರ್ ಈ ರೀತಿ ಯೋಜನೆಗಳು ಹಾಗೂ ಅತ್ಯಂತ ಕಡಿಮೆ ಹಣಕ್ಕೆ ಊಟ ನೀಡುವ ಅಮ್ಮ ಕ್ಯಾಂಟೀನ್ ನಂತಹ ಯೋಜನೆಗಳಿರಬಹುದು. ದ್ರಾವಿಡ ಎಂಬ ಹೆಸರಿನಲ್ಲಿ ಇರುವ ಎರಡೂ ಪಕ್ಷಗಳು ತಮಿಳುನಾಡನ್ನು ಆಳುತ್ತಾ ಬಂದಿವೆ. ಎರಡೂ ಪಕ್ಷಗಳು ಚುನಾವಣೆ ಸಮಯದಲ್ಲಿ ಜನರನ್ನು ತಮ್ಮ ಇಂತಹ ಯೋಜನೆಗಳ ಮೂಲಕ ಸೆಳೆಯುತ್ತವೆ. ಆದರೆ ಚುನಾವಣೆ ಮುಗಿದ ನಂತರದಲ್ಲಿ ತಾವು ತಮ್ಮ ದ್ರಾವಿಡ ಸಿದ್ದಾಂತದ ಕಾರಣಕ್ಕಾಗಿ ಗೆದ್ದು ಬಂದೆವು, ಜನರು ಇದಕ್ಕಾಗಿಯೇ ತಮಗೆ ಮತ ನೀಡಿದ್ದಾರೆ ಎಂದು ಹೇಳಿಕೊಳ್ಳುತ್ತವೆ. ಅಸಲಿಗೆ ಆರ್ಯ ದ್ರಾವಿಡ ಸಿದ್ಧಾಂತಕ್ಕೂ ಈ ಪಕ್ಷಗಳಿಗೆ ಮತ ನೀಡಿದ ಮತದಾರರಿಗೂ ಯಾವ ಸಂಬಂಧವೂ ಇರುವುದಿಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ನೈತಿಕ ಪೊಲೀಸ್‌ಗಿರಿಯ ಕುರಿತು ಅನೈತಿಕ ದೃಷ್ಟಿಕೋನ ಯಾಕಪ್ಪ??!!
ಮತ್ತೊಂದು ಮುಖ್ಯವಾದ ವಿಚಾರ ತಮಿಳುನಾಡಿನ ರಾಜಕಾರಣಿಗಳು, ಆರ್ಯ ದ್ರಾವಿಡ ಸಿದ್ಧಾಂತವನ್ನು ಮೇಲ್ಜಾತಿ ಹಾಗೂ ಕೆಳಜಾತಿ ಎಂಬ ಸಾಮಾನ್ಯ ವ್ಯಾಖ್ಯಾನಕ್ಕೆ ಒಳಪಡಿಸಿರುವುದು. ದ್ರಾವಿಡರು ಎಂದರೆ ಎಸ್ ಸಿ, ಎಸ್ ಟಿ ಹಿಂದುಳಿದ ವರ್ಗ, ಇತರೆ ಹಿಂದುಳಿದ ವರ್ಗಗಳು. ಈ ರೀತಿ ಎಲ್ಲರದ್ದು ಒಂದು ಗುಂಪು. ಆರ್ಯ ಎಂದರೆ ಬ್ರಾಹ್ಮಣ ಮುಂತಾದ ಇತರೆ ಮೇಲ್ಜಾತಿಗಳು ಎಂದು ಅಲ್ಲಿ ಬ್ರ್ಯಾಂಡ್ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇತರೆ ಜಾತಿಯ ಸಮುದಾಯಗಳು ಒಗ್ಗಟ್ಟಾಗಿ ಜಾತಿಯ ಕಾರಣಕ್ಕೆ ಈ ಪಕ್ಷಗಳಿಗೆ ಮತ ನೀಡುತ್ತ ಮನ್ನಣೆ ನೀಡುತ್ತಾ ಬಂದಿವೆಯೇ ಹೊರತು ಆರ್ಯ ದ್ರಾವಿಡ ಸಿದ್ಧಾಂತವನ್ನು ಆಗಲಿ ಹಿಂದೂ ಧರ್ಮದ ದ್ವೇಷವನ್ನಾಗಲಿ ಸಾಮಾನ್ಯ ಜನರು ಇಂದಿಗೂ ಒಪ್ಪಿಲ್ಲ.
ಹಿಂದೂ ಧರ್ಮವನ್ನು ಒಂದು ಗ್ರಂಥ ಒಬ್ಬ ವ್ಯಕ್ತಿಯ ಆಧಾರದಲ್ಲಿ ನೋಡಲು ಸಾಧ್ಯವಿಲ್ಲವಾದರೂ ಅನೇಕ ಸಾಧು ಸಂತರು ಅನೇಕ ಗ್ರಂಥಗಳು ಇದನ್ನು ವ್ಯಾಖ್ಯಾನಿಸಿದ್ದಿದೆ. ಇದೊಂದು ಜೀವನ ಕ್ರಮ ಆದ್ದರಿಂದ, ತಪ್ಪು ವ್ಯಾಖ್ಯಾನಗಳನ್ನು ಮಾಡುವವರಿಗೂ ಅನೇಕ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಈಗ ಉದಯ ನಿಧಿ ಸ್ಟಾಲಿನ್ ಅವರಂತವರು ಮೇಲ್ಜಾತಿಯವರ ವಿರುದ್ಧ ವಾಗ್ದಾಳಿ ನಡೆಸುವ ಹಾಗೂ ಅವರ ವಿರುದ್ಧ ಇತರರನ್ನು ಎತ್ತಿ ಕಟ್ಟುವ ರಾಜಕೀಯವನ್ನು ಮುನ್ನಡೆಸಿದ್ದಾರೆ. ಈ ಮೂಲಕ ತನ್ನ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅಷ್ಟು ಬಿಟ್ಟರೆ ಹಿಂದೂ ಧರ್ಮದ ಕುರಿತು ಮಾತನಾಡಲು ಉದಯ ನಿಧಿ ಸ್ಟಾಲಿನ್ ಯಾವುದೇ ಕಾರಣಗಳನ್ನು ಹೊಂದಿಲ್ಲ. ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೇಳಿರುವ ಪ್ರಶ್ನೆಯಂತೆ, ಸ್ವತಃ ಉದಯ ನಿಧಿ ಸ್ಟಾಲಿನ್ ಅವರ ತಾಯಿ ಬಹಿರಂಗವಾಗಿ ಅನೇಕ ದೇವಸ್ಥಾನಗಳನ್ನು ಭೇಟಿ ನೀಡುವುದು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದು ಇದ್ದೇ ಇದೆ. ಹಾಗಾಗಿ ಈ ರೀತಿಯ ಹೇಳಿಕೆಗಳು ಕೇವಲ ರಾಜಕೀಯ ಉದ್ದೇಶಕ್ಕೆ ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೂಗಳು ಇಂತಹ ಮಾತುಗಳನ್ನು ಯಾವ ರೀತಿ ಕೇಳಿಸಿಕೊಳ್ಳಬೇಕು ಎನ್ನುವುದನ್ನು ನಿರ್ಧಾರ ಮಾಡುವುದಷ್ಟೇ ಮುಖ್ಯ.
ಇದನ್ನೂ ಓದಿ: ವಿಸ್ತಾರ ಅಂಕಣ: ಎರಡು ಬಾರಿ ಸಂಸದರಾದವರ ವಿಸಿಟಿಂಗ್ ಕಾರ್ಡ್‌ನಲ್ಲಿ ಅದರ ಉಲ್ಲೇಖವೇ ಇರಲಿಲ್ಲ!