Site icon Vistara News

ವಿಸ್ತಾರ ಅಂಕಣ: ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದರ ಹಿಂದೆ ಬಿ.ಎಲ್ ಸಂತೋಷ್ ಸ್ವಹಿತಾಸಕ್ತಿ ಏನಿದೆ?

bl santosh

ಯಾರು ಈ ಸಂತೋಷ್?

ನಿನ್ನೆ ಮೊನ್ನೆಯವರೆಗೂ ರಾಜ್ಯ ಬಿಜೆಪಿಯ ವರಿಷ್ಠ ನೇತಾ ಆಗಿ, ಸದ್ಯ ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ಪ್ರಶ್ನೆಯನ್ನು ಎತ್ತಿದಾಗ, ಸಂಘದ ಗೀತೆಯೊಂದು ನೆನಪಾಯಿತು.

ಸಂಘ ಪರಿವಾರದ ಸಂಪರ್ಕಕ್ಕೆ ಬಂದವರಿಗೆಲ್ಲರಿಗೂ ಈ ಗೀತೆ ನೆನಪಿರುತ್ತದೆ. ನಾನೂ ನನ್ನ ಕಾಲೇಜು ದಿನಗಳಲ್ಲಿ ಒಂದಿಷ್ಟು ಕಾಲ ಸಂಘದ ಒಡನಾಟದಲ್ಲಿ ಇದ್ದ ಪರಿಣಾಮ, ನನಗಂತೂ ಯಾರು ಸಂತೋಷ್ ಎಂದ ತಕ್ಷಣ- “ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ/ ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವ/ ಲೋಕಹಿತದ ಕಾಯಕ ನಾಡಿಗಭಯದಾಯಕ/ ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರಸೇವಕ…’’–ಎಂಬ ಗೀತೆ ನಿರಾಯಾಸವಾಗಿ ಹಾದು ಹೋಯಿತು.

ನೈಜ ರಾಷ್ಟ್ರಸೇವಕ ಯಾರು ಎಂದರೆ, ಸೇವೆ ಮಾಡುವವನು ಹಾಗೂ ಲೋಕ ಹಿತವನ್ನು ಬಯಸುವವನು ಎಂದರ್ಥ. ಸಂತೋಷ್ ಅವರು ಅಂಥ ಒಬ್ಬ ನೈಜ ರಾಷ್ಟ್ರಸೇವಕ!

“ನನಗೆ ಟಿಕೆಟ್ ತಪ್ಪಿಸಲು, ಯಾರು ಈ ಸಂತೋಷ್?” ಎಂಬ ಪೂರ್ಣಾರ್ಥದ ಸಾಲಿನ ಪ್ರಶ್ನೆಯಲ್ಲಿ “ಯಾರು ಈ ಸಂತೋಷ್” ಎಂಬ ಮೂರಕ್ಷರದ ವ್ಯಗ್ರ ಧಾಟಿಯ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಲ್ಲ. ಸ್ವತಃ ಶೆಟ್ಟರ್ ಅವರಿಗೂ ಸಂತೋಷ್ ಒಬ್ಬ ನೈಜ ರಾಷ್ಟ್ರಸೇವಕ ಎಂಬುದು ಚೆನ್ನಾಗಿಯೇ ಗೊತ್ತು. ಆದರೂ ಅವರು ಕೇಳಿದ್ದಾರೆ. ಇರಲಿ. ಅವರ ಸಿಟ್ಟು-ಸೆಡವಿನ ಬಗ್ಗೆಯೂ ಕಡೆಯಲ್ಲಿ ಚರ್ಚಿಸೋಣ.

ತನ್ನ ವಿದ್ಯಾರ್ಥಿ ಕಾಲದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯಲ್ಲಿ ಸೇವೆ ಮತ್ತು ಲೋಕಹಿತದ ಪಾಠ ಕಲಿಯುತ್ತಾ ಬೆಳೆದ ಸಂತೋಷ್ ಅವರು, ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು. ಓದಿನಲ್ಲೂ ಅಪಾರ ಬುದ್ಧಿವಂತರೇ ಇದ್ದರು. ಹೆಸರಿನ ಮುಂದೆ ಬಿಇ, ತಲೆಯ ಒಳಗಿನ ಬುದ್ಧಿಮತ್ತೆ ಹಾಗೂ ಸಹಜ ಸ್ವಭಾವವಾಗಿ ರೂಢಿಸಿಕೊಂಡಿರುವ ಶಿಸ್ತು-ಪರಿಶ್ರಮಗಳನ್ನೇ ಖಾಸಗಿ ಬದುಕಿನ ಒರೆಗಲ್ಲಿಗೆ ಹಚ್ಚಿದ್ದರೆ, ಅವರು ಈ ವೇಳೆಗೆ ಯಾವುದಾದರೂ ದೇಶದ ಎಂಎನ್‌ಸಿಯಲ್ಲಿ ಸಿಇಒ ಆಗಿರುತ್ತಿದ್ದರೇನೋ!

ಆದರೆ, ವೈಯಕ್ತಿಕ ಬದುಕಿಗಿಂತ ಲೋಕ ಹಿತ/ಸಮಾಜ ಸೇವೆ ಅವರನ್ನು ಕರೆದಿರಬಹುದು. 1993ರಲ್ಲಿ ಆರ್‌ಎಸ್‌ಎಸ್ ಪೂರ್ಣಾವಧಿ ಪ್ರಚಾರಕರಾಗಿ ಸಾರ್ವಜನಿಕ ಬದುಕಿಗೆ ಪ್ರವೇಶಿಸಿದರು. ಆರ್‌ಎಸ್‌ಎಸ್‌ನಲ್ಲಿ ಪ್ರಚಾರಕ್ ಎಂದರೆ, ಯಾವುದೇ ವೇತನವಿಲ್ಲದೆ, ಸ್ವಂತ ಕುಟುಂಬಕ್ಕೆ ಆಸರೆಯಾಗದೆ, ಹಿಂದೂ ಸಮಾಜದ ಒಳಿತಿಗಾಗಿ ತೊಡಗಿಸಿಕೊಳ್ಳುವ ಮಾರ್ಗ. ಹಿಂದೂ ಸಮಾಜದ ಕೆಲಸ ಎಂದರೆ ಬರೀ ಬಿಜೆಪಿ ಕೆಲಸವಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಕೆಲಸ ಮಾಡುವುದು. ಈ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಎಲ್ಲಿ ಹೇಳುತ್ತದೆಯೋ ಅಲ್ಲಿಗೆ ತೆರಳಿ ಕಾರ್ಯ ಮಾಡುವುದು. ಇದೇ ರೀತಿ ರಾಜ್ಯದ ವಿವಿಧ ನಗರಗಳಲ್ಲಿ, ವಿವಿಧ ವಲಯಗಳಲ್ಲಿ ಸಂತೋಷ್ ಕಾರ್ಯನಿರ್ವಹಿಸಿದರು. ಈ ಸೇವೆ ಹೇಗಿರುತ್ತದೆ? ಅದು ಯಾಕೆ ಯಾರಿಗೂ ಗೊತ್ತಾಗುವುದೇ ಇಲ್ಲ? – ಸಂಘದ ಹೊರಗಿನವರಿಗೆ ಈ ಪ್ರಶ್ನೆ ಕಾಡುವುದು ಸಹಜ.

ಇದಕ್ಕೆ ಉತ್ತರ ಮತ್ತದೇ ಸಂಘ ಗೀತೆ- “ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ…’’–ಇದರ ಎರಡನೇ ಚರಣ. ಅದು ಹೀಗಿದೆ: ʼʼಎಲೆಯ ಮರೆಯೊಳರಳಿ ನಗುವ ಸುಮನ ರಾಶಿಯಂದದಿ/ ಕಡಲ ಒಡಲೊಳುಕ್ಕಿ ನಗುವ ಕೋಟಿ ಅಲೆಗಳಂದದಿ/ ವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆ/ ಸಹಜ ಭಾವದಿಂದ ಧುಮುಕಿ ಬನ್ನಿ ಕಾರ್ಯಕ್ಷೇತ್ರಕೆ/ʼʼ

ಸಂಘದಲ್ಲಿ ಖ್ಯಾತಿಗೆ, ಪ್ರಚಾರಕ್ಕೆ ಅವಕಾಶವೇ ಇಲ್ಲ. ಸಹಜ ಭಾವದಿಂದ ಸೇವೆಗೆ ಧುಮುಕಬೇಕಷ್ಟೆ. ಇಷ್ಟೆಲ್ಲಾ ಅಪವಾದಗಳು, ಆರೋಪಗಳು ತಮ್ಮ ಮೇಲೆ ಕೇಳಿಬಂದರೂ, ಸಂತೋಷ್ ಅವರು ಯಾಕೆ ಯಾರಿಗೂ ಪ್ರತಿಕ್ರಿಯಿಸುವುದಿಲ್ಲ ಎಂದರೆ, ಪ್ರತಿಕ್ರಿಯಿಸಿ ಪ್ರಸಿದ್ಧಿಯಾಗುವ ಉಮೇದು ಅವರಿಗಿಲ್ಲ. ಕಾಯಕವೇ ಕೈಲಾಸವಷ್ಟೇ!

ಇಂಥ ಸಂತೋಷ್ ಅವರು ಸಂಘದ ನಿರ್ದೇಶನದಂತೆ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತು ಬಿಜೆಪಿ ಸೇವೆ ಮಾಡಲು ಅಡಿಯಿಟ್ಟರು. ಹಾಗೆ ಬಿಜೆಪಿಗೆ ಸಂಘದಿಂದ ಬಂದವರಲ್ಲಿ ಅವರು ಮೊದಲನೆಯವರು ಅಲ್ಲ, ಕೊನೆಯವರೂ ಅಲ್ಲ. ಆದರೆ, ಅವರು ಕರ್ನಾಟಕ ಬಿಜೆಪಿಗೆ ಕಾಲಿಟ್ಟ ಅವಧಿ, ಕಾಲ ಅವರ ದುಡಿಮೆಯನ್ನು ಬಹುವಾಗಿ ಬಯಸುತ್ತಿತ್ತು. ಸೇವೆ, ತತ್ವ, ಸಿದ್ಧಾಂತವೇ ಇಲ್ಲದ ಸಾರ್ವಜನಿಕ ಆಡುಂಬೊಲವಾಗಿದ್ದ ಬಿಜೆಪಿಯಲ್ಲಿ ಒಂದು ರೀತಿಯ ಸೈದ್ಧಾಂತಿಕ ನಿಷ್ಠೆಯನ್ನು ಬೆಳೆಸುವುದು ಹಾಗೂ ಬಿಜೆಪಿ ಸಂಪರ್ಕಕ್ಕೆ ಬರುವ ವಿವಿಧ ಸಂಘಟನೆಗಳಲ್ಲಿ ಸೈದ್ಧಾಂತಿಕ ಅರಿವು ಮೂಡಿಸುವ ಜವಾಬ್ದಾರಿ ಅವರದ್ದಾಗಿತ್ತು. ಬಂದ ಬಳಿಕ ಅವರು ಎಂದಿನಂತೆ ಸಹಜವಾಗಿ, ಬಹಳ ಪ್ರಾಮಾಣಿಕವಾಗಿ ತಮ್ಮ ಕೆಲಸ ಶುರು ಮಾಡಿದರು. ಒಂದು ರೀತಿಯ ಸೈದ್ಧಾಂತಿಕ ಖಾಲಿತನದಲ್ಲಿ ಮೈ ಮರೆತಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಲಾರಂಭಿಸಿದರು. ಅಷ್ಟರೊಳಗೆ ಬಿಜೆಪಿಯಲ್ಲಿ ಘಟಾನುಘಟಿ ನಾಯಕರಾದ ಅನಂತಕುಮಾರ್ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನಡುವೆ ವೈಮನಸ್ಸು ಶುರುವಾಗಿತ್ತು. ಅಧಿಕಾರದ ರುಚಿ ನೋಡಿದ ನಾಯಕರು ಹಾಗೂ ಅವರ ಬೆಂಬಲಿಗರು, ಪಕ್ಷಕ್ಕೋಸ್ಕರ ದುಡಿಯುವುದರ ಬದಲಿಗೆ ತಮ್ಮ ಪ್ರಿಯ ನಾಯಕನಿಗಾಗಿ, ತನ್ನ ಜಾತಿಗಾಗಿ ದುಡಿಯಲು ನಿಂತಿದ್ದರು.

ವ್ಯಕ್ತಿಯ ಹಿಂದೆ ಹೋಗುವುದು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ವ್ಯಕ್ತಿ ಎಂದಿಗೂ ನಶ್ವರ ಹಾಗೂ ಅಪರಿಪೂರ್ಣ. ಯಾವತ್ತಿಗೂ ಒಂದು ಸಿದ್ಧಾಂತ, ತತ್ವ ಹಾಗೂ ಸಂಘಟನೆಯೇ ಸರಿಯಾದ ಮಾರ್ಗ ಎಂಬ ಸಂಘ ಸಿದ್ಧಾಂತದ ಪರವಾಗಿ ನಿಂತಿದ್ದ ಸಂತೋಷ್ ಅವರು, ಆ ಕಾಲದಿಂದಲೇ ಬಿಜೆಪಿಯಲ್ಲೂ ಹೊಸ ಪೀಳಿಗೆಯ ನಾಯಕತ್ವಕ್ಕೆ ಬೀಜ ಬಿತ್ತಲಾರಂಭಿಸಿದರು.

ಸಂಘ ಇಂದಿಗೂ ನಡೆಯುತ್ತಿರುವುದೇ ಈ ತತ್ವದಡಿಯಲ್ಲಿ. ವ್ಯಕ್ತಿಯನ್ನು ಸಂಘ ಯಾವತ್ತೂ ತನ್ನ ಗುರು ಎಂದು ಸ್ವೀಕರಿಸಿಲ್ಲ. ಬದಲಿಗೆ ಭಗವಾಧ್ವಜವನ್ನೇ ಗುರು ಎಂದು ಆರ್‌ಎಸ್‌ಎಸ್‌ ಸ್ವೀಕರಿಸಿದೆ. ಹಾಗಾಗಿ ಇಂದಿಗೂ ಸಂಘ-ಪರಿವಾರದ ಕಾರ್ಯಕ್ರಮಗಳಲ್ಲಿ ಧ್ವಜ ಮತ್ತು ಭಾರತಾಂಬೆಗೆ ಅಗ್ರಸ್ಥಾನ. ಸಂಘದ ಸರಸಂಘಚಾಲಕರಾಗಿದ್ದ ಡಾಕ್ಟರ್ ಜೀ, ಗುರೂಜಿ, ದೇವರಸ್ ಜಿ, ರಜ್ಜೂಭಯ್ಯ, ಸುದರ್ಶನ್ ಜಿ- ಹೀಗೆ ಯಾರ ಹೆಸರನ್ನೂ ಸಂಘ ಪ್ರಚಾರಪಡಿಸಿಲ್ಲ. ಅವರು ಕೂಡ ನಿಮಿತ್ತ ಮಾತ್ರ!

ಇದೇ ತತ್ತ್ವದಡಿ ಕರ್ನಾಟಕ ಬಿಜೆಪಿಯಲ್ಲೂ ವ್ಯಕ್ತಿಗಿಂತ ಪಕ್ಷ ಮುಖ್ಯ, ಸಂಘಟನೆ ಮುಖ್ಯ ಎಂದು ಅಭಿಯಾನ ಆರಂಭಿಸಿ, ಹಿರಿಯರನ್ನು ಬದಲಿಸಲು ಆರಂಭಿಸಿದರು. ಮೊದಲಿಗೆ ಹೊಸ ಪೀಳಿಗೆಗೆ ಅವಕಾಶ ನೀಡುವ ಕೆಲಸ ಆರಂಭಿಸಿದರು. ಸಂಘಟನೆಯಲ್ಲಿ ಅದಾಗಲೇ 10-15 ವರ್ಷಗಳಿಂದ ಹುದ್ದೆಗಳನ್ನು ಅಲಂಕರಿಸಿದ್ದವರನ್ನು ಬದಿಗೆ ಸರಿಸಿ ಹೊಸ ನೀರು ತಂದರು. ನಂತರ ನಿಧಾನವಾಗಿ ಟಿಕೆಟ್ ನೀಡಿಕೆ, ವಿವಿಧ ನಾಮನಿರ್ದೇಶನಗಳಲ್ಲೂ ಇದೇ ನಿಯಮವನ್ನು ಅನುಸರಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಪರಿಷತ್ ನಾಮಕಾರಣಗಳಲ್ಲೂ ನೀವು ಈ ಬದಲಾವಣೆಯನ್ನು ಕಾಣಬಹುದು.

ಹಾಗೆ ನೋಡಿದರೆ ಸಂತೋಷ್ ಅವರು ಕೈಗೊಳ್ಳುತ್ತಿರುವ ನಿರ್ಧಾರಗಳಲ್ಲಿ ಹೊಸತೇನೂ ಇಲ್ಲ. ಅವರನ್ನು ಆರ್‌ಎಸ್‌ಎಸ್‌ ಯಾವ ಕಾರ್ಯಕ್ಕೆ ನಿಯೋಜನೆ ಮಾಡಿದೆಯೋ ಆ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಈ ಹಿಂದೆ ದೇಶದ ವಿವಿಧೆಡೆ ಇದ್ದ ಸಂಘಟನಾ ಕಾರ್ಯದರ್ಶಿಗಳಿಗಿಂತ ಸಂತೋಷ್ ಕಾರ್ಯಶೈಲಿ ವಿಭಿನ್ನ. ಸಂತೋಷ್ ಅವರಿಗೂ ಮುನ್ನ ಒಂದು ದಶಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ ರಾಮಲಾಲ್ ಅವರ ಹೆಸರನ್ನು ಎಷ್ಟೋ ಬಿಜೆಪಿಗರೇ ಕೇಳಿರಲಿಕ್ಕಿಲ್ಲ. ಅಷ್ಟು ತೆರೆಮರೆಯಲ್ಲಿ ಕೆಲಸ ಮಾಡಿದವರು. ಆದರೆ ಸಂತೋಷ್ ಅವರು ಮುಕ್ತ ಸಂವಾದಿ. ತಮ್ಮ ಟ್ವಿಟರ್ ಖಾತೆಯ ಮೂಲಕ ವಿಶ್ವದ ಯಾವುದೇ ವಿಚಾರದ ಕುರಿತೂ ಅಭಿಪ್ರಾಯ ಹೇಳಬಲ್ಲರು.

ಅನೇಕ ಸಂದರ್ಭಗಳಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಪರೋಕ್ಷವಾಗಿ ಚಾಟಿಯೇಟು ನೀಡಿದ್ದಾರೆ. ಒಮ್ಮೆಯಂತೂ, ಅಮೆರಿಕನ್ನರಿಗೂ ಬೆದರಿಕೆಯೊಡ್ಡಿದ್ದರು. ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬರ್ನಿ ಸ್ಯಾಂಡರ್ಸ್, ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದೆ ಎಂದು ಟೀಕೆ ಮಾಡಿದ್ದರು. ಇದಕ್ಕೆ ಸಿಟ್ಟಾಗಿದ್ದ ಸಂತೋಷ್, ನಮ್ಮ ಪಾಡಿಗೆ ನಾವು ಇರೋಣ ಎಂದು ಎಷ್ಟು ಸುಮ್ಮನಿದ್ದರೂ ನೀವು ಕೇಳುತ್ತಿಲ್ಲ. ಅಮೆರಿಕ ಚುನಾವಣೆಯನ್ನು ನಾವು ಪ್ರಭಾವಿಸುವಂತೆ ಅನಿವಾರ್ಯಗೊಳಿಸುತ್ತಿದ್ದೀರ ಎಂದಿದ್ದರು. ಆನಂತರ ಇದು ವಿದೇಶಾಂಗ ಇಲಾಖೆ ಮಟ್ಟಕ್ಕೆ ಹೋಗಿ ಟ್ವೀಟ್ ಡಿಲೀಟ್ ಮಾಡಿದ್ದರು.

ಬಿಜೆಪಿ ನಾಯಕರೇ ಹೇಳುವಂತೆ ಸಂತೋಷ್ ಅವರ ಪ್ರಮುಖ ಕೊಡುಗೆಗಳೆಂದರೆ;

  1. ಸಂಘಟನೆಯನ್ನು ಸದೃಢಗೊಳಿಸುವುದು.
  2. ಚುನಾವಣಾ ತಂತ್ರಗಾರಿಕೆ
  3. ಸೈದ್ಧಾಂತಿಕ ಸ್ಪಷ್ಟತೆ
  4. ಯುವಕರನ್ನು ಒಳಗೊಳ್ಳುವಿಕೆ

ಈ ನಾಲ್ಕು ವಿಷಯಗಳಲ್ಲಿ ಸಂತೋಷ್ ನಿರಂತರ ಕಾರ್ಯನಿರ್ವಹಿಸುತ್ತ, ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿಯಾದರು. 2019ರಿಂದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭೂತಪೂರ್ವ ಜಯಗಳಿಸಿದ ಚುನಾವಣೆಯಲ್ಲಿ ಸಂತೋಷ್ ಅವರ ಪಾತ್ರವಿತ್ತು. 2017ರ ಉತ್ತರ ಪ್ರದೇಶ ಚುನಾವಣೆ, 2019ರ ಲೋಕಸಭೆ ಚುನಾವಣೆ ಸಫಲತೆಯಲ್ಲಿ ಸಂತೋಷ್ ಅವರ ಪಾತ್ರವಿತ್ತು. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗಣನೀಯ ಉತ್ತಮ ಪ್ರದರ್ಶನದಲ್ಲಿ ಸಂತೋಷ್ ಅವರ ಪಾತ್ರವಿತ್ತು.

ಈ ಚುನಾವಣೆಗಳಲ್ಲಿ ಅವರ ಪಾತ್ರವಿತ್ತು ಎಂದು ಹೇಗೆ ಖಚಿತವಾಗಿ ಹೇಳುವುದು ಎಂದು ಯಾರಾದರೂ ಕೇಳಬಹುದು. ಬಿಜೆಪಿ ಸಂಘಟನೆಯಲ್ಲಿ ಅಧ್ಯಕ್ಷರ ಸ್ಥಾನ ಎನ್ನುವುದು ಮುಖವಾಣಿಯಿದ್ದಂತೆ. ಸಂಘಟನಾ ಕಾರ್ಯದರ್ಶಿಯೇ ಪಕ್ಷದ ಎಲ್ಲ ದಿನನಿತ್ಯದ ಆಗುಹೋಗುಗಳಿಗೆ ಹೊಣೆಗಾರ. ಇದು ಒಂದು ರೀತಿಯಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿ ಇದ್ದಂತೆ. ಸಂತೋಷ್ ಅವರು ಈ ಹಿಂದಿನ ಸಂಘಟನಾ ಕಾರ್ಯದರ್ಶಿಗಿಂತ ಸುಮಾರು 10 ಪಟ್ಟು ಡೈನಮಿಕ್ ಆದ್ದರಿಂದ ಹೆಚ್ಚೆಚ್ಚು ಹೊರಗೆ ಅವರ ಹೆಸರು ಕೇಳಿಬರುತ್ತದೆ.

ಪಕ್ಷದಲ್ಲಿರುವವರು ಹೇಳುವ ಪ್ರಕಾರ ಶಾರುಖ್ ಖಾನ್ ನಟನೆಯ ಚಕ್ ದೇ ಇಂಡಿಯಾ ಚಲನಚಿತ್ರವನ್ನು ಸುಮಾರು ಹತ್ತಕ್ಕೂ ಹೆಚ್ಚು ಬಾರಿ ಸಂತೋಷ್ ನೋಡಿದ್ದಾರೆ. ಅದರ ಪ್ರತಿ ಡೈಲಾಗ್ ಸಹಿತ ಅವರಿಗೆ ಇಷ್ಟವಂತೆ. ಅನೇಕ ಸಭೆಗಳಲ್ಲಿ ಒಂದು ಡೈಲಾಗ್ ಹೆಚ್ಚಾಗಿ ಹೇಳುತ್ತಾರೆ.

‘ಇಸ್ ಟೀಂ ಕೋ ಸಿರ್ಫ್ ಔಹ್ ಪ್ಲೇಯರ್ಸ್ ಚಾಹಿಯೇ ಜೊ ಪೆಹ್ಲೆ ಇಂಡಿಯಾ ಕೇ ಲಿಯೇ ಖೇಲ್ ರಹೇ ಹೈ… ಫಿರ್ ಅಪ್ನೇ ಟೀಂ ಮೇ ಅಪ್ನೇ ಸಾಥಿಯೋಂ ಕೇ ಲಿಯೇ ಖೇಲೆ… ಔರ್ ಉಸ್ಕೇ ಬಾದ್‌ಭೀ ಥೋಡಿ ಬಹುತ್ ಜಾನ್ ಬಚ್ ಜಾಯೇ, ತೋ ಅಪ್ನೇ ಲಿಯೆʼ

(ಯಾರು ಮೊದಲ ಆದ್ಯತೆಯಲ್ಲಿ ಭಾರತಕ್ಕಾಗಿ (ಅಂದರೆ ಬಿಜೆಪಿಗಾಗಿ) ಆಡುತ್ತಾರೆಯೋ ಅಂತಹ ಆಟಗಾರರು ಮಾತ್ರ ಈ ತಂಡಕ್ಕೆ ಬೇಕು. ನಂತರದಲ್ಲಿ ತಮ್ಮ ತಂಡದ ಇತರ ಆಟಗಾರರಿಗಾಗಿ ಆಡಬೇಕು. ಇಷ್ಟೆಲ್ಲದರ ನಂತರವೂ ಏನಾದರೂ ಚೈತನ್ಯಶಕ್ತಿ ಉಳಿದಿದ್ದರೆ ಆಗ ವೈಯಕ್ತಿಕಕ್ಕೆ ಆಡಬಹುದು.)

2006ರಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದರು. ಮುಂದಿನ ವರ್ಷವೆ ಅಂದರೆ 2007ರಲ್ಲೇ ಚಕ್ ದೇ ಇಂಡಿಯಾ ಸಿನಿಮಾ ತೆರೆ ಕಂಡಿತ್ತು. ಇದೇ ನೀತಿಯನ್ನು ತಮ್ಮ ಪ್ರತಿ ಹೆಜ್ಜೆಯಲ್ಲೂ ಸಂತೋಷ್ ಅನುಸರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.

ಸಂತೋಷ್ ಅವರು ಪಕ್ಷಕ್ಕೆ ಹೊಸ ನೀರನ್ನು ಹರಿಸಲು ಆರಂಭಿಸಿದ ಬಳಿಕ, ಕರ್ನಾಟಕ ಬಿಜೆಪಿಯಲ್ಲಿ ಹೊಸ ಹೊಸ ಮುಖಗಳು ಕಾಣಿಸಲಾರಂಭಿಸಿವೆ. ಹೊಸ ಸೋಶಿಯಲ್ ಎಂಜಿನಿಯರಿಂಗ್ ಗಮನ ಸೆಳೆಯುತ್ತಿದೆ. ಹಾಗೆ ನೋಡಿದರೆ, ಇದು ಬಿಜೆಪಿ ಎಲ್ಲ ರಾಜ್ಯಗಳಲ್ಲೂ ಮಾಡುತ್ತಿರುವ ಪ್ರಯೋಗವೇ ಆಗಿದೆ. ಹಿಂದೆ ಕರ್ನಾಟಕದಲ್ಲಿ ಅನಂತಕುಮಾರ್ ಕೂಡ ಸ್ವಲ್ಪಮಟ್ಟಿಗೆ ವೈಯಕ್ತಿಕ ನೆಲೆಯಲ್ಲಿ ಮಾಡಿದ್ದರು. ಈಗ ಅದು ಪಾರ್ಟಿಯ ಅಜೆಂಡಾವೇ ಆಗಿದೆ. ಅಧಿಕಾರದ ಅಂಚಿನಲ್ಲಿರುವ, ಸೌಲಭ್ಯ ವಂಚಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಸಂತೋಷ್ ಪ್ರಮುಖ ಆದ್ಯತೆ. ಇದನ್ನು ಅವರು ಎಷ್ಟು ಸುಂದರವಾಗಿ ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು “ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ…’- ಗೀತೆಯ ಇನ್ನೊಂದು ಚರಣವನ್ನು ನೋಡೋಣ.

ʼʼದೀನದಲಿತ ಸೇವೆಯೇ ಪರಮ ಆರಾಧನೆ/ ಸಾಕು ಬರಿಯ ಬೋಧನೆ, ಬೇಕು ಹಿರಿಯ ಸಾಧನೆ/ ದಿಟದಿ ನಾವು ಅಳಿಸಬೇಕು, ನುಡಿಯ ನಡೆಯ ಅಂತರ/ ರಚಿಸಬೇಕು ನವಸಮಾಜ ಸರ್ವಾಂಗ ಸುಂದರ.ʼʼ

ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳ ಕಾಲ ಬಹಳಷ್ಟು ರಾಜಕೀಯ ಪಕ್ಷಗಳು, ಯೂನಿವರ್ಸಿಟಿಯ ಬುದ್ಧಿಜೀವಿಗಳು ದಲಿತ ಹೆಸರು ಹೇಳಿಕೊಂಡು ತಮ್ಮ ಬೇಳೆಕಾಳು ಬೇಯಿಸಿಕೊಂಡರೆ ಹೊರತು, ನಿರ್ಲಕ್ಷಿತರಿಗೆ ಅವಕಾಶವನ್ನೇ ನೀಡಲಿಲ್ಲ. ಒಂದಿಷ್ಟು ಮುಖಂಡರಿಗೆ ಅವಕಾಶ ನೀಡಿ, ಅವರನ್ನು ಆಸ್ಥಾನದಲ್ಲಿ ಪೊರೆಯುವ ಕೆಲಸವೇ ನಡೆಯುತ್ತಿತ್ತು.

ಆದರೆ ಈಗ ಬಿಜೆಪಿ ಸರಕಾರದ ಅವಧಿಯಲ್ಲಿ ಕಂಡು ಕೇಳರಿಯದ ಜಾತಿ ಜನಾಂಗದವರು, ದಲಿತರು ಎಲ್ಲ ರಂಗದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಲಿತ ನಾಯಕರ ಉದ್ಧಾರವೇ ಬೇರೆ, ದಲಿತರ ಉದ್ಧಾರವೇ ಬೇರೆ ಎಂಬ ಸಾಮಾಜಿಕ ವಿವೇಕವನ್ನು ಅರಿತವರಂತೆ ಸಂತೋಷ್, ಪಕ್ಷದ ಸಂಘಟನೆಯಲ್ಲಿ, ಅಧಿಕಾರದ ಸ್ತರದಲ್ಲಿ ದೀನ ದಲಿತರಿಗೆ ಪ್ರಾತಿನಿಧ್ಯ ನೀಡುತ್ತಿದ್ದಾರೆ. ಆದರೆ, ಇದು ಅವರಿಗೆ ಘೋಷಣೆಯಲ್ಲ!

ಇಂಥಾ ನಾಯಕರೊಬ್ಬರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬರ್ಥದ ಮಾತುಗಳನ್ನಾಡುವ ಮನಸ್ಥಿತಿಗಳಿಗೆ ಏನೆನ್ನಬೇಕು? ಎಲ್ಲವನ್ನೂ ಜಾತಿ, ವರ್ಗ, ಬಣ್ಣದ ಕನ್ನಡಕದಲ್ಲಿ ನೋಡಿ-ಅಳೆಯುವ ರೋಗ ಪೀಡಿತ ಮನಸ್ಸುಗಳು ಏನೋ ಹೇಳಿದರು ಎಂದರೆ, ನಿರ್ಲಕ್ಷಿಸಬಹುದು. ಆದರೆ, ಸಂತೋಷ್ ಏನು ಎಂದು ಎಲ್ಲವೂ ಗೊತ್ತಿದ್ದೂ, ಅವರ ಬಗ್ಗೆ ಲಘುವಾಗಿ ಮಾತನಾಡುವ ಜಗದೀಶ್ ಶೆಟ್ಟರ್ ಅವರಿಗೆ ಏನು ಹೇಳುವುದು?
ನಿಜ, ಜಗದೀಶ್ ಶೆಟ್ಟರ್ ಅವರಿಗೆ ಒಂದು ಒಳ್ಳೆಯ ಬೀಳ್ಕೊಡುಗೆ ಬೇಕಿತ್ತು. ಅದನ್ನು ಎಲ್ಲರೂ ಒಪ್ಪುತ್ತಾರೆ. ಹಾಗೆಂದು ಅವರು, ಇದಕ್ಕೆಲ್ಲಾ ಸಂತೋಷ್ ಕಾರಣ ಎನ್ನುವುದು, ಇಡೀ ವಿದ್ಯಮಾನಕ್ಕೆ ಲಿಂಗಾಯತ ವರ್ಸಸ್ ಬ್ರಾಹ್ಮಣ ಎಂಬ ಸವಕಲಾದ ಪ್ರಗತಿಪರರ ಸಂಕಥನವನ್ನು ಹೆಣೆಯುವುದು ಸರಿಯಲ್ಲ.

ನಿಜ, ಶೆಟ್ಟರ್ ಅವರು ಈ ರಾಜ್ಯ ಕಂಡ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರು. ಆರು ಬಾರಿ ಶಾಸಕರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿ ಕೆಲಸ ಮಾಡಿದ ಜಗದೀಶ ಶೆಟ್ಟರ್ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಯಾರ ವಿರುದ್ಧವೂ ಕೋಪಗೊಂಡು ಮಾತಾಡಿದವರೂ ಅಲ್ಲ. ರಾಜ್ಯ ಅಧ್ಯಕ್ಷರಾಗಿದ್ದವರು. ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಹೊರನಡೆದಾಗಲೂ, ಅವರದೇ ಸಮುದಾಯದ ಶೆಟ್ಟರ್ ಬಿಜೆಪಿ ಬಿಡಲಿಲ್ಲ. ಅವರು ಆಗ ಮುಖ್ಯಮಂತ್ರಿಯಾಗಿದ್ದರು. ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಿತು. ಯಡಿಯೂರಪ್ಪ ಅವರಂತಹ ಘಟಾನುಘಟಿ ನಾಯಕರೇ ಪಕ್ಷದ ವಿರುದ್ಧ ತೊಡೆ ತಟ್ಟಿ ನಿಂತಾಗಲೂ ತಮ್ಮ ಕ್ಷೇತ್ರದ ಜತೆಗೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲು ಕಾರಣರಾದರು. ಇಷ್ಟೆಲ್ಲ ಇರುವುದರಿಂದ ಶೆಟ್ಟರ್ ಅವರಿಗೆ ಒಂದು ಗೌರವಯುತವಾದ ಎಕ್ಸಿಟ್ ಸಿಗಬೇಕಾಗಿತ್ತು ಎನ್ನುವುದು ಎಲ್ಲರೂ ಒಪ್ಪುವ ಮಾತು. ಯಾವುದೇ ವಸ್ತುವನ್ನು ಅದರ ಅವಧಿ ಮುಗಿಯುವವರೆಗೆ ಬಳಸಿಕೊಂಡು ಬಿಸಾಡುವುದು ಯಾವ ಸಂಸ್ಕಾರವನ್ನೂ ತೋರಿಸುವುದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು, ಪ್ರಮುಖ ನಾಯಕರಲ್ಲೇ ಅಸಮಾಧಾನವಿದೆ. ಮುಂದಿನ ದಿನಗಳಲ್ಲಿ ತಮ್ಮನ್ನೂ ಇದೇ ರೀತಿ ಮಾಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಹಾಗಾದರೆ ಪಕ್ಷಕ್ಕೆ ದುಡಿದರೆ ಬೆಲೆಯೇ ಇಲ್ಲವೇ? ಹೀಗೆ ಅನಾಮತ್ತಾಗಿ ಕಿತ್ತೆಸೆದರೆ ತಮ್ಮ ಕುಟುಂಬದವರು, ಬಂಧು ಮಿತ್ರರು, ಮತದಾರರು ಎದುರು ತಲೆಯೆತ್ತಿ ಓಡಾಡುವುದು ಹೇಗೆ? ಎ ಗ್ರೂಪ್‌ನಿಂದ ಡಿ. ಗ್ರೂಪ್‌ವರೆಗೆ ಯಾವುದೇ ಹುದ್ದೆಯಲ್ಲಿದ್ದು ನಿವೃತ್ತನಾದರೂ ಒಂದು ಗೌರವಯುತವಾದ ಬೀಳ್ಕೊಡುಗೆ ನೀಡುವಾಗ, ಸುಮಾರು ಮೂವತ್ತು ವರ್ಷ ಪಕ್ಷ ನಿಷ್ಠೆ ಹೊಂದಿದ್ದ ಶೆಟ್ಟರ್ ಒಂದು ಗೌರವಯುತ ಎಕ್ಸಿಟ್ ಬಯಸಿದ್ದರಲ್ಲಿ ತಪ್ಪಿಲ್ಲ. ಆದರೆ ಶೆಟ್ಟರ್ ಅವರು, ಸಂತೋಷ್ ಯಾರು ಎಂದು ಪ್ರಶ್ನಿಸಿದ್ದು ಹಾಗೂ ತಮ್ಮ ಇಂದಿನ ಸ್ಥಿತಿಗೆ ಅವರೇ ಕಾರಣ ಎಂದು ದೂರಿದ್ದು ಮಾತ್ರ ಒಪ್ಪುವ ಮಾತಲ್ಲ.

ಶೆಟ್ಟರ್ ಬಿಜೆಪಿ ಬಿಡುವ ಮುನ್ನ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಎತ್ತಿದ ಪ್ರಶ್ನೆಗಳನ್ನು ನೋಡಿದರೆ, ಅವರು ತಿಳಿಯದೇ ಹೋದ ಇನ್ನೂ ಕೆಲವು ಮೂಲಭೂತ ಸಂಗತಿಗಳಿದ್ದವು.

  1. ಅಣ್ಣಾಮಲೈ ಇಲ್ಲಿಯವರೆಗೆ ಒಂದೂ ಎಲೆಕ್ಷನ್ ಗೆದ್ದಿಲ್ಲ, ಅಂಥವರನ್ನು ಚುನಾವಣಾ ಸಹ ಉಸ್ತುವಾರಿ ಮಾಡಿದ್ದಾರೆ. ಅವರ ಎದುರು ನಾವು ಚಿಕ್ಕ ಮಕ್ಕಳಂತೆ ಕೂರಬೇಕು ಎಂದು ಶೆಟ್ಟರ್ ಹೇಳಿದ್ದಾರೆ: ಸಂಘಟನೆಯಲ್ಲಿ ವ್ಯಕ್ತಿಗೆ ಪ್ರಾಮುಖ್ಯತೆ ಇಲ್ಲ ಎನ್ನುವುದು ಮೊದಲ ಸೂತ್ರ. ತಾವು ಆರ್‌ಎಸ್‌ಎಸ್‌ ಸ್ವಯಂಸೇವಕರು ಎಂದು ಶೆಟ್ಟರ್ ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ಆರ್‌ಎಸ್‌ಎಸ್‌ ಶಾಖೆಗಳಲ್ಲಿ ಮುಖ್ಯ ಶಿಕ್ಷಕನಾಗಿ ಇರುವುದು 8-10ನೇ ತರಗತಿಯ ಬಾಲಕರು. ಅವರು ಹೇಳಿದಂತೆ ಅಲ್ಲಿರುವ ಹಿರಿಯರು, ಕಿರಿಯರೆಲ್ಲರೂ ಕೇಳುತ್ತಾರೆ. ಈ ಸೂತ್ರ ಶೆಟ್ಟರ್ ಅವರಿಗೆ ತಿಳಿಯದೇ ಹೋಯಿತು.
  2. ಬಿ.ಎಲ್ ಸಂತೋ಼ಷ್ ಅವರು ಕೇರಳದಲ್ಲಿ ಚುನಾವಣೆ ಸೋತರು, ಬೇರೆ ರಾಜ್ಯದಲ್ಲಿ ಸೋತರು ಎಂದು ಶೆಟ್ಟರ್ ಆರೋಪಿಸಿದ್ದಾರೆ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಸಂತೋಷ್, ಎಲ್ಲ ಚುನಾವಣೆಗಳಿಗೂ ಇನ್‌ಚಾರ್ಜ್ ಆಗಿರುತ್ತಾರೆ. ಚುನಾವಣಾ ಉಸ್ತುವಾರಿಗಳು ಎಂದು ನೇಮಕ ಮಾಡುವುದು ಪಕ್ಷದ ಪದಾಧಿಕಾರಿಗಳನ್ನು. ಈಗ ಕರ್ನಾಟಕದಲ್ಲಿ ಧರ್ಮೇಂದ್ರ ಪ್ರಧಾನ್ ಅವರನ್ನು ಚುನಾವಣಾ ಉಸ್ತುವಾರಿ ಮಾಡಿರುವ ರೀತಿ. ಸಂತೋಷ್ ಅವರ ಅವಧಿಯಲ್ಲೇ ಗುಜರಾತ್ ಚುನಾವಣೆ, ಉತ್ತರಾಖಂಡ್, ಗೋವಾ ಚುನಾವಣೆಗಳೂ ನಡೆದಿವೆ. ಹಾಗಾದರೆ ಅಲ್ಲಿನ ಸಫಲತೆಯ ಗರಿಯನ್ನೂ ನೀಡಬೇಕಲ್ಲವೇ?
  3. ಬಿ.ಎಲ್. ಸಂತೋಷ್ ಅವರಿಂದ ತಮಗೆ ಟಿಕೆಟ್ ತಪ್ಪಿದೆ ಎಂದು ಶೆಟ್ಟರ್ ಹೇಳಿದ್ದಾರೆ: ಇಲ್ಲಿಯವರೆಗಿನ ಭಾರತದ ಚುನಾವಣಾ ದಿಕ್ಕನ್ನೇ ಬದಲಾಯಿಸಿದವರು ನರೇಂದ್ರ ಮೋದಿ. ನಿಜವಾದ ಗ್ರೌಂಡ್ ರಿಪೋರ್ಟ್ ಪಡೆಯುವವರು, ಯಾರೂ ದಾರಿ ತಪ್ಪಿಸಲಾಗದವರು ಎಂದೇ ಖ್ಯಾತಿ. ಇಷ್ಟು ದೊಡ್ಡ ತಂಡ, ತಮ್ಮದೇ ಖಾಸಗಿ ಸಮೀಕ್ಷಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳುವ ಅಮಿತ್ ಶಾ ಹಾಗೂ ಮೋದಿಯವರಿಗೆ ದಾರಿ ತಪ್ಪಿಸಿ ತಮಗಿಷ್ಟದವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಹೇಳಲು ಸಾಧ್ಯವೇ? ಎಲ್ಲಕ್ಕಿಂತ ಹೆಚ್ಚಾಗಿ, ಫಲಿತಾಂಶವನ್ನೇ ತೋರಿಸದೇ ಮೋದಿ, ಅಮಿತ್ ಶಾ ಕಣ್ಣಿಗೆ ಮಣ್ಣೆರಚಿ ಎಷ್ಟು ದಿನ ಇರಲು ಸಾಧ್ಯ? ಇಂದು ಬಿಜೆಪಿಯ ನಂ.1 ಹಾಗೂ ನಂ.2 ನಂತರ ಮೂರನೇ ಸ್ಥಾನದಲ್ಲಿ ಜೆ.ಪಿ. ನಡ್ಡಾ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿರುವವರು ಸಂತೋಷ್ ಎಂದರೆ ಅವರ ಯೋಜನೆಗಳು ತ್ವರಿತವಾಗಿ ಹಾಗೂ ದೂರಗಾಮಿಯಾಗಿಯೂ ಪಕ್ಷಕ್ಕೆ ಒಳಿತನ್ನು ಉಂಟುಮಾಡುತ್ತಿವೆ ಎಂದೇ ಅಲ್ಲವೇ?

ಇದನ್ನೂ ಓದಿ: ವಿಸ್ತಾರ ಅಂಕಣ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಯನ್ನು ಆಯೋಗಕ್ಕೆ ಮಾತ್ರ ಹೊರಿಸುವುದು ಹೊಣೆಗೇಡಿತನ

ಜಗದೀಶ ಶೆಟ್ಟರ್ ಅವರು ಸಂತೋಷ್ ಅವರನ್ನು ಟಾರ್ಗೆಟ್ ಮಾಡುವ ಮೂಲಕ ಸೇಫ್ ಗೇಮ್ ಪ್ಲೇ ಮಾಡಿದ್ದಾರೆ. ಏಕೆಂದರೆ ಟಿಕೆಟ್ ಅಂತಿಮಗೊಳಿಸಿದ ಸಮಿತಿ, ಅಂದರೆ ಸಂಸದೀಯ ಮಂಡಳಿಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕರ್ನಾಟಕದವರೇ ಆದ ಬಿ.ಎಸ್. ಯಡಿಯೂರಪ್ಪ ಅವರೂ ಇದ್ದಾರೆ.

ಇಡೀ ಸಂಸದೀಯ ಮಂಡಳಿ ವಿರುದ್ಧ ಮಾತನಾಡಿದರೆ ಜನರೇ ತಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಸಂತೋಷ್ ಅವರ ವಿರುದ್ಧ ದಾಳಿ ಮಾಡಿದರೆ ಏನೂ ತೊಂದರೆ ಆಗುವುದಿಲ್ಲ ಎಂಬ ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೂ ಇದೇ ರೀತಿ ಪರೋಕ್ಷವಾಗಿ ಸಂತೋಷ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಒಟ್ಟಾರೆ, ಬಿ.ಎಲ್ ಸಂತೋಷ್ ಅವರು ಕೈಗೊಂಡ ಎಲ್ಲ ನಿರ್ಣಯಗಳೂ ಸರಿಯಾಗಿವೆ ಎಂದು ಹೇಳುವುದು ಇಲ್ಲಿನ ಉದ್ದೇಶವಲ್ಲ. ನಡೆಯುವವನು ಎಡವಲೇ ಬೇಕು. ಸಾರ್ವಜನಿಕ ಬದುಕಿನಲ್ಲಿ ಗಾಂಧಿಯಿಂದ ಹಿಡಿದು ಇಂದಿರಾ, ಮೋದಿ ತನಕ ಎಲ್ಲರೂ ಎಡವಿದ್ದಾರೆ. ತಪ್ಪಾದ ನಿರ್ಧಾರಗಳನ್ನು ಕೈಗೊಂಡಿರಲೂಬಹುದು.

ಇದನ್ನೂ ಓದಿ: ವಿಸ್ತಾರ ಅಂಕಣ: ಸಿಟಿ ಜನರೇಕೆ ಹೆಚ್ಚು ವೋಟ್ ಹಾಕ್ತಾ ಇಲ್ಲ? ಆನ್‌ಲೈನ್ ವೋಟಿಂಗ್ ಬಗ್ಗೆ ಆಲೋಚಿಸಲು ಇದು ಸಕಾಲ!

ರಾಜಕೀಯ ಎಂಬ ಒಂದು ಡೈನಮಿಕ್ ವ್ಯವಸ್ಥೆಯಲ್ಲಿ ನಿರ್ಧಾರ ಕೈಗೊಳ್ಳುವಾಗ ಎಡವುವುದು ಸಹಜ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಲೆಕ್ಕಾಚಾರಗಳೂ ಅನೇಕ ಬಾರಿ ತಲೆಕೆಳಗಾಗಿವೆ. ಆದರೆ ಈ ನಿರ್ಧಾರಗಳ ಹಿಂದಿನ ತಾತ್ವಿಕ ನೆಲೆ ಮುಖ್ಯ. ಸ್ವತಃ ನರೇಂದ್ರ ಮೋದಿಯವರೇ ಹೇಳುವಂತೆ, ʼನಿಯತ್ʼ ಶುದ್ಧವಾಗಿದೆಯೇ ಎನ್ನುವುದಷ್ಟೆ ಮುಖ್ಯ. ಉತ್ತಮ ಉದ್ದೇಶ ಇಟ್ಟುಕೊಂಡು ಕೈಗೊಂಡ ನಿರ್ಧಾರಗಳು ತಪ್ಪಾದರೂ ಅದಕ್ಕೆ ದೋಷವಿಲ್ಲ. ಹಾಗೆ, ಸಂತೋಷ್ ಅವರು ಕೈಗೊಂಡ ನಿರ್ಧಾರಗಳ ಹಿಂದೆ ಯಾರನ್ನೋ ಬೆಳೆಸಬೇಕು, ಯಾರನ್ನೋ ತುಳಿಯಬೇಕು ಎನ್ನುವ ಲೆಕ್ಕಾಚಾರ ಇರಬಹುದು ಎಂದು ಅವರನ್ನು, ಹಾಗೂ ಅವರು ಇರುವ ಪ್ರಚಾರಕ ವ್ಯವಸ್ಥೆಯನ್ನು ತಿಳಿದವರು ಹೇಳಲು ಸಾಧ್ಯವಿಲ್ಲ.

ಒಂದು ಕೊನೆಯ ಮಾತು, ಈಗ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಸಂತೋಷ್ ಅವರನ್ನು ಯಾವುದೇ ಕ್ಷಣದಲ್ಲಿ ಆರ್‌ಎಸ್‌ಎಸ್‌ ಹಿಂದಕ್ಕೆ ಕರೆಸಿಕೊಳ್ಳಬಹುದು. ನಂತರ ಯಾವುದೋ ಒಂದು ತಾಲೂಕಿನ ಆರ್‌ಎಸ್‌ಎಸ್‌ ಹೊಣೆಯನ್ನೂ ನೀಡಬಹುದು. ಇಂತಹ ಸಾಧ್ಯತೆ ಇರುವ ಸ್ಥಾನದಲ್ಲಿರುವವರು ಹೇಗೆ ತಾನೆ ಸ್ವಾರ್ಥವನ್ನು ಅನುಸರಿಸಲು ಸಾಧ್ಯ?

ಕುಮಾರಸ್ವಾಮಿ ಇರಲಿ, ಜಗದೀಶ ಶೆಟ್ಟರ್ ಇರಲಿ- ಒಬ್ಬರನ್ನು ಟೀಕಿಸುವಾಗ ಅವರ ಪೂರ್ವಾಪರ ಅರಿಯಬೇಕು. ಈಗಿನ ಸಾಮಾಜಿಕ ಜಾಲತಾಣಯುಗದಲ್ಲಿ ಯಾರ್ಯಾರು ಏನೇನು ಮಾಡುತ್ತಿದ್ದಾರೆ, ಎಷ್ಟೆಷ್ಟು ಸಂಪಾದನೆ ಮಾಡಿದ್ದಾರೆ, ಎಷ್ಟು ತಲೆಮಾರಿಗೆ ಮಾಡಿಟ್ಟಿದ್ದಾರೆ ಎನ್ನುವುದು ಜನರಿಗೆ ತಿಳಿಯುತ್ತಿರುತ್ತದೆ. ಸಂತೋಷ್ ಅಂಥವರ ಕುರಿತು ಮಾತನಾಡಿದಾಗ ಜನರ ಕಣ್ಣಲ್ಲಿ ಗೌರವ ಕಡಿಮೆ ಆಗುವುದು ಅವರ ವಿರುದ್ಧ ಮಾತನಾಡಿದವರಿಗೇ ಹೊರತು ಸಂತೋಷ್ ಅವರದ್ದಲ್ಲ. ಶೆಟ್ಟರ್ ಸ್ವಲ್ಪ ಎಚ್ಚರಿಕೆಯಿಂದಲೇ ಮಾತನಾಡಬೇಕಿತ್ತು.

ಇದನ್ನೂ ಓದಿ: ವಿಸ್ತಾರ ಅಂಕಣ: ಮತದಾರರು ʼದೇವರ’ ರೀತಿ ಹಕ್ಕು ಚಲಾಯಿಸುತ್ತಾರ? ʼದೇವರʼ ರೀತಿ ಸುಮ್ಮನೆ ಕೂರುತ್ತಾರ?

Exit mobile version