ಪ್ರಸ್ತುತ ಸನ್ನಿವೇಶದಲ್ಲಿ ಇರಾನ್ ತನ್ನ ಸುತ್ತಮುತ್ತಲಿನ ಭೂಪ್ರದೇಶದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. ಒಂದು ವೇಳೆ ತನ್ನ ಆಡಳಿತದಿಂದ ಅನುಮತಿ ದೊರೆತರೆ, ಅದು ನ್ಯೂಕ್ಲಿಯರ್ ಆಯುಧವನ್ನು ಹೊಂದಲೂ ಶಕ್ತವಾಗಿದೆ. ಭವಿಷ್ಯದಲ್ಲಿ ಒಂದು ವೇಳೆ ಇರಾನ್ ನ್ಯೂಕ್ಲಿಯರ್ ಆಯುಧಗಳನ್ನು ಗಳಿಸಿಕೊಂಡರೆ, ಅದು ಮಿಲಿಟರಿ ಕ್ಷೇತ್ರದಲ್ಲಿ ಸೂಪರ್ ಪವರ್ ಎನಿಸಿಕೊಳ್ಳಲಿದೆ.
ಇರಾನಿಯನ್ನರಿಗೆ ಅವರ ನ್ಯೂಕ್ಲಿಯರ್ ಸೌಲಭ್ಯಗಳಿಗೆ ಹೊಸ ತಲೆಮಾರಿನ ಹಾರ್ಡ್‌ವೇರ್‌ಗಳನ್ನು ನಿರ್ಮಿಸುವ ಸಾಮರ್ಥ್ಯವಿದ್ದು, ಅವರಿಗೆ ಆಧುನಿಕ ತಂತ್ರಜ್ಞಾನ ಹೊಂದುವ ಕೌಶಲ್ಯ ಮತ್ತು ಸಂಶೋಧನೆಗಳ ಬೆಂಬಲವೂ ಇದೆ.
ಇರಾನಿನ ಮಿಲಿಟರಿ
ಅಮೆರಿಕಾ, ಫ್ರಾನ್ಸ್, ರಷ್ಯಾ, ಭಾರತ, ಚೀನಾ, ಜರ್ಮನಿ ಮತ್ತು ಬ್ರಿಟನ್‌ಗಳು ಅತ್ಯಂತ ಪ್ರಬಲ ಮಿಲಿಟರಿ ಶಕ್ತಿಗಳಾಗಿದ್ದರೆ, ಈ ಪಟ್ಟಿಯಲ್ಲಿಲ್ಲದ ಇರಾನನ್ನೂ ಉಪೇಕ್ಷಿಸುವಂತಿಲ್ಲ.
ಇರಾನ್ ಬಳಿ ಅತ್ಯಂತ ಬೃಹತ್ತಾದ, ಅನುಭವಿ ಸೇನೆಯಿದೆ. ಇರಾನ್ ಬಹುತೇಕ ಧ್ವಂಸಗೊಂಡಿದ್ದ ತನ್ನ ಸೇನೆಯನ್ನು ಬಳಸಿಯೇ ಎಂಟು ವರ್ಷಗಳ ಕಾಲ ನಡೆದ ಯುದ್ಧವನ್ನು ಗೆದ್ದಿತ್ತು. ಇಂದು ಇರಾನ್ ಸೇನೆಯಲ್ಲಿರುವ ಹಲವಾರು ಕಮಾಂಡರ್‌ಗಳು ಆ ಯುದ್ಧ ಗೆದ್ದ ಯೋಧರ ಮಕ್ಕಳೇ ಆಗಿದ್ದಾರೆ. ಅಂತಹಾ ಇರಾನ್ ಸೇನೆಯಲ್ಲಿ ಇಂದು ಏಳು ಲಕ್ಷ ಸೈನಿಕರಿದ್ದು, ಇರಾನಿನಲ್ಲಿ ಸ್ಥಳೀಯವಾಗಿ ಉತ್ಪಾದನೆಗೊಳ್ಳುವ ಆಧುನಿಕ ಹಾರ್ಡ್‌ವೇರ್ ಸೌಲಭ್ಯವೂ ಇದೆ. ಇದರಿಂದ ನೆರೆಹೊರೆಯ ದೇಶಗಳಿಂದ ಇರಾನ್ ಹೆಚ್ಚಿನ ಸೈನಿಕ ಸಾಮರ್ಥ್ಯ ಗಳಿಸಿದೆ.
ಇರಾನಿನ ಡ್ರೋನ್ ಸಾಮರ್ಥ್ಯ
1980ರ ದಶಕದ ಇರಾನ್ ಮತ್ತು ಇರಾಕ್ ಯುದ್ಧದ ಅವಧಿಯಲ್ಲಿ ಇರಾನ್ ಡ್ರೋನ್‌ಗಳು ಮತ್ತು ಮಾನವರಹಿತ ಹಾರಾಟ ವಾಹನಗಳ (ಯುಎವಿ) ನಿರ್ಮಾಣದಲ್ಲಿ ಆಸಕ್ತಿ ತಾಳಿತು. ಇರಾನಿನ ಅಣ್ವಸ್ತ್ರ ಕಾರ್ಯಕ್ರಮಗಳು ಮತ್ತು ಸಾಮರ್ಥ್ಯದ ಕುರಿತು ಅಪಾರವಾಗಿ ಚರ್ಚೆಯಾಗುತ್ತಿದ್ದರೂ, ಯುಎವಿ ಕ್ಷೇತ್ರದಲ್ಲೂ ಇರಾನ್ ಅಪಾರ ಸಾಧನೆ ಮೆರೆದಿದೆ.
ಕಳೆದ ಕೆಲ ವರ್ಷಗಳಲ್ಲಿ ಇರಾನಿನ ಡ್ರೋನ್ ಸಾಮರ್ಥ್ಯ ವೃದ್ಧಿಸಿದೆ. ಇರಾನ್ ತನ್ನ ಡ್ರೋನ್ ತಂತ್ರಜ್ಞಾನವನ್ನು ಸಿರಿಯಾ, ಯೆಮೆನ್, ಲೆಬನಾನ್, ಗಾಜ಼ಾ ಮತ್ತು ಇರಾಕ್‌ಗಳಲ್ಲಿ ಉಪಯೋಗಿಸಿ, ಡ್ರೋನ್ ಸೂಪರ್ ಪವರ್ ಎನಿಸಿಕೊಂಡಿದೆ.
ಅಮೆರಿಕಾ ಅಥವಾ ಸೌದಿ ಅರೇಬಿಯಾದ ಸೇನೆಗಳ ವಿರುದ್ಧ ಸಿರಿಯಾ ಮತ್ತು ಯೆಮೆನ್‌ನಂತಹ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಉಪಯೋಗವಾದ ಡ್ರೋನ್‌ಗಳು ಕಾಮಿಕೇಜ್ ಡ್ರೋನ್‌ಗಳಾಗಿದ್ದವು. ಈ ಡ್ರೋನ್‌ಗಳು ಸ್ಫೋಟಕಗಳನ್ನು ಹೊತ್ತು, ಮೊದಲೇ ನಿರ್ಧರಿಸಿದ ಗುರಿಯೆಡೆಗೆ ಸಾಗಬಲ್ಲವು.
ಇರಾನ್ ಬಳಿ ಕಣ್ಗಾವಲು, ಇಂಟಲಿಜೆನ್ಸ್ ಆ್ಯಂಡ್ ರಿಕನಯಸೆನ್ಸ್‌ಗಾಗಿ (ಐಎಸ್‌ಆರ್) ಹಗುರ, ಸಣ್ಣ, ಕಡಿಮೆ ವ್ಯಾಪ್ತಿಯ, ಮಧ್ಯಮ ಮತ್ತು ಬೃಹತ್ ಯುಎವಿಗಳಿವೆ.
ಕೆಲವು ವರದಿಗಳ ಪ್ರಕಾರ ಇರಾನ್ ಬಳಿ ಇರುವ ಕೆಲವು ಡ್ರೋನ್‌ಗಳು ಅಮೆರಿಕಾದಲ್ಲಿ ಉತ್ಪಾದಿಸಲ್ಪಟ್ಟಿವೆ. ಅದರ ಕೆಲವು ಬಿಡಿಭಾಗಗಳು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಖರೀದಿಸಿರಲೂಬಹುದು. ಟೆಹರಾನ್ ಅಮೆರಿಕಾದ ಎರಡು ಡ್ರೋನ್‌ಗಳನ್ನು ಆಗಸದಲ್ಲಿ ಹೊಡೆದುರುಳಿಸಿದ್ದರೂ, ಅದರ ಆರ್ಥಿಕ ಏಕಾಕಿತನದಿಂದಾಗಿ ಬಹುತೇಕ ಡ್ರೋನ್‌ಗಳು ಇರಾನಿನ ತಂತ್ರಜ್ಞಾನ ಆಧಾರಿತವಾಗಿವೆ.
ಬೇರೆ ದೇಶಗಳಿಗೆ ಹೋಲಿಸಿದರೆ ಇರಾನ್ ಬಳಿ ಹೆಚ್ಚಿನ ಆಯುಧವಿರುವ ಡ್ರೋನ್‌ಗಳಿವೆ. ಇರಾನ್ ವಿವಿಧ ರೀತಿಯ ಡ್ರೋನ್‌ಗಳನ್ನು ಹೊಂದಿದ್ದು, ಮೊಹಾಜೆರ್ ಸರಣಿಯ ಅತ್ಯುತ್ಕೃಷ್ಟ ಯುದ್ಧ ಡ್ರೋನ್‌ಗಳೂ ಇವೆ. ಮೊಹಾಜೆರ್- 6 ಈ ಸರಣಿಯ ಇತ್ತೀಚಿನ ಡ್ರೋನ್ ಆಗಿದೆ.
ಮೊಹಾಜೆರ್- 6 ಡ್ರೋನ್ 18,000 ಅಡಿ ಎತ್ತರಕ್ಕೆ ಹಾರಬಲ್ಲದು. ಇದು ಜಗತ್ತಿನಾದ್ಯಂತ ಇರುವ ಇತರ ಕನಿಷ್ಠ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳಿಂದ ಸಾಕಷ್ಟು ಹೆಚ್ಚಾಗಿದೆ. ಇದು 124 ಮೈಲು ವ್ಯಾಪ್ತಿ ಹೊಂದಿದ್ದು, 12 ಗಂಟೆಗಳ ಹಾರಾಟ ಸಾಮರ್ಥ್ಯ ಹೊಂದಿದೆ.
ಇರಾನ್ ಬತ್ತಳಿಕೆಯಲ್ಲಿರುವ ಶಹೆದ್ 129 ಇನ್ನೊಂದು ಮಾರಕ ದಾಳಿ ಯುಎವಿ ಆಗಿದ್ದು, ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯುರೆನ್ಸ್ (ಎಂಎಎಲ್‌ಇ) ಡ್ರೋನ್ ಎನ್ನಬಹುದು. ಇದನ್ನು ಇಸ್ರೇಲಿನ ಹರ್ಮೆಸ್ 450 ಯುಸಿಎವಿ ಜೊತೆ ಹೋಲಿಸಬಹುದಾಗಿದೆ. ಇದು ಆಸ್ಟ್ರಿಯಾ ನಿರ್ಮಿತ ರೊಟಾಕ್ಸ್ 914 ಪಿಸ್ಟನ್ ಇಂಜಿನ್ ಬಳಸುತ್ತದೆ. ಇದೇ ಇಂಜಿನ್ ಅಮೆರಿಕಾದ ಎಂಕ್ಯು- 1 ಡ್ರೋನ್‌ನಲ್ಲೂ ಬಳಕೆಯಾಗುತ್ತದೆ.
ಶಹೆದ್ ಡ್ರೋನ್‌ಗಳು ಹಲವು ಕದನಗಳಲ್ಲಿ ಭಾಗಿಯಾಗಿದ್ದು, ಅಲ್ – ಟನ್ಫ್ ಹಾಗೂ ಸಿರಿಯಾದ ಬೇರೆ ಪ್ರದೇಶಗಳಲ್ಲಿದ್ದ ಅಮೆರಿಕಾದ ವಿಶೇಷ ಪಡೆಗಳ ಮೇಲೆ ನಿಗಾ ಇಡಲು ಮತ್ತು ಅಸ್ಸಾದ್ ವಿರೋಧಿಗಳ ಮೇಲೆ ದಾಳಿ ನಡೆಸಲು 2014ರಿಂದ ಬಳಕೆಯಾಗುತ್ತಿತ್ತು.
ಇದನ್ನೂ ಓದಿ: Drone terror | ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಟ, ಭದ್ರತಾ ಪಡೆಗಳ ದೌಡು
ಅಮೆರಿಕಾದಿಂದ 1970ರ ದಶಕದಲ್ಲಿ ಎಂಕ್ಯುಎಂ- 107ಎ ಸ್ಟ್ರೀಕರ್ ಪ್ರ್ಯಾಕ್ಟೀಸ್ ಡ್ರೋನ್‌ಗಳನ್ನು ಖರೀದಿಸಿದ ಬಳಿಕ, 2000ನೇ ದಶಕದಲ್ಲಿ ಇರಾನಿಯನ್ನರು ಅದರ ರಿವರ್ಸ್ ಇಂಜಿನಿಯರಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡರು. ಇದರ ಫಲಿತಾಂಶವಾದ ಕರಾರ್ ಡ್ರೋನ್ ಬಹುತೇಕ ಅಗಲ ರೆಕ್ಕೆಗಳುಳ್ಳ ಕ್ರೂಸ್ ಕ್ಷಿಪಣಿಯನ್ನು ಹೋಲುತ್ತದೆ ಮತ್ತು ಗಂಟೆಗೆ 560 ಮೈಲಿಗಳ ವೇಗದಲ್ಲಿ ಚಲಿಸುತ್ತದೆ. ಇದು ಸೌತ್ ಆಫ್ರಿಕಾದ ಡೆನೆಲ್ ಸ್ಕುವಾ ಟಾರ್ಗೆಟ್ ಡ್ರೋನಿನ ತಂತ್ರಜ್ಞಾನವನ್ನು ಬಳಸಿಕೊಂಡಿದೆ.
ಕರಾರ್ ಡ್ರೋನನ್ನು ಕಾಮಿಕೇಜ್ ಡ್ರೋನ್ ಆಗಿ ಬಳಸಬಹುದಾದರೂ, ಪ್ರಸ್ತುತ ಅದು ಟಾರ್ಗೆಟ್ ಡ್ರೋನ್ ಆಗಿ ಪ್ರಮುಖವಾಗಿ ಬಳಸಲ್ಪಡುತ್ತಿದೆ. ಇದನ್ನು ಈಗಾಗಲೇ ಒಂದು 500 ಪೌಂಡ್ ತೂಕದ ಮಾರ್ಕ್- 82 ಅನ್ ಗೈಡೆಡ್ ಬಾಂಬ್, ಅಥವಾ ಎರಡು 250 ಪೌಂಡ್ ತೂಕದ ಮಾರ್ಕ್- 81 ಬಾಂಬ್‌ಗಳನ್ನು ಹೊತ್ತೊಯ್ಯುವಂತೆ ಮಾರ್ಪಡಿಸಲಾಗಿದೆ.
ಇರಾನ್ ಈಗಾಗಲೇ ಕರಾರ್ ಇಂಟರ್‌ಸೆಪ್ಟರ್ ಆವೃತ್ತಿಯನ್ನು ಕಡಿಮೆ ವ್ಯಾಪ್ತಿಯ, ಅಮೆರಿಕಾದ ಸೈಡ್‌ವಿಂಡರ್ ಕ್ಷಿಪಣಿಯನ್ನು ಹೋಲುವ, ಅಜ಼ರಾಖ್ಷ್ ಗಾಳಿಯಿಂದ ಗಾಳಿಗೆ ದಾಳಿ ಮಾಡುವ ಕ್ಷಿಪಣಿಯೊಂದಿಗೆ ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿ ಆಗಸದಲ್ಲಿರುವ ಗುರಿಯನ್ನು ನಾಶಪಡಿಸಲು ಬಳಕೆಯಾಗುತ್ತದೆ.
2011ರಲ್ಲಿ ಅಮೆರಿಕಾದ ಆರ್‌ಕ್ಯೂ – 170 ಡ್ರೋನ್ ಇರಾನಿನ ಸೈಬರ್ ಯುದ್ಧದಿಂದಾಗಿ ಕೆಳಗುರುಳಿತ್ತು. ಅದು ಬಹುತೇಕ ಯಾವುದೇ ಹಾನಿಯಾಗದೆ ಉಳಿದಿತ್ತು. ಇರಾನ್ ಇಂಜಿನಿಯರ್‌ಗಳು ಅದನ್ನು ಹೋಲುವ ಡ್ರೋನ್ ತಯಾರಿಸಲು ಪ್ರಯತ್ನಿಸಿ, 2014ರಲ್ಲಿ ಶಹೆದ್ 171 ಸಿಮ್ರೋಘ್ ಡ್ರೋನ್ ತಯಾರಿಸಿದರು. ಪಿಸ್ಟನ್ ಇಂಜಿನ್ ಸಾಘೆಹ್ – 1 ಹಾಗೂ ಜೆಟ್ ಇಂಜಿನ್ ಸಾಘೆಹ್- 2 ಆಗಿನ ಸ್ಟೆಲ್ತ್ ಡ್ರೋನ್‌ಗಳಾಗಿದ್ದವು.
2013ರ ಅಣ್ವಸ್ತ್ರ ತಡೆ ಮಾತುಕತೆಗೂ ಮೊದಲು ಇರಾನ್ ತನ್ನ ಅತಿದೊಡ್ಡ ಡ್ರೋನ್, ಫೋಟ್ರೋಸ್ ಲಾಂಗ್ ರೇಂಜ್ ಯುಸಿಎವಿಯನ್ನು ಪ್ರದರ್ಶಿಸಿತ್ತು. ಅದು 1,200 ಮೈಲಿ ವ್ಯಾಪ್ತಿ ಹೊಂದಿದ್ದು, ಆರು ಕಾಯೆಮ್- 1 ನಿಖರ ಗ್ಲೈಡ್ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲದು. ಇದು 30 ಗಂಟೆಗಳ ಹಾರಾಟ ಸಾಮರ್ಥ್ಯ ಹೊಂದಿದೆ.
ಫೆಬ್ರವರಿ 2021ರಲ್ಲಿ ಇರಾನಿನ ವಾಯುಪಡೆ ಹೊಸದಾದ, ಹೆಚ್ಚು ವ್ಯಾಪ್ತಿ ಹೊಂದಿದ ಎಂಎಎಲ್‌ಇ ಡ್ರೋನನ್ನು ಪ್ರದರ್ಶಿಸಿತ್ತು. ಈ ಡ್ರೋನ್ ಬಹುಮಟ್ಟಿಗೆ ಅಮೆರಿಕಾದ ಎಂಕ್ಯು- 9 ರೀಪರ್ ಯುಸಿಎವಿಯನ್ನು ಹೋಲುತ್ತಿತ್ತು. ಕರ್ಮನ್- 22 ಡ್ರೋನ್ 24 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಬಲ್ಲದು. ಇದು 1,860 ಮೈಲಿ ವ್ಯಾಪ್ತಿ ಹೊಂದಿದ್ದು, ರೆಕ್ಕೆಯ ಕೆಳಗೆ 661 ಪೌಂಡ್ ತೂಕದ ತನಕ ಆರು ಆಯುಧಗಳನ್ನು ಹೊತ್ತೊಯ್ಯಬಲ್ಲದು.
ಆದರೆ ಅಮೆರಿಕಾ ಇನ್ನೂ ಯಾವ ಆಧುನಿಕ ಡ್ರೋನ್‌ಗಳು ಮತ್ತು ಯುಎವಿಗಳು ರಷ್ಯಾಗೆ ರಫ್ತಾಗಲಿದ್ದವು ಎಂದು ಬಹಿರಂಗಪಡಿಸಿಲ್ಲ. ಜೋ ಬೈಡೆನ್ ಸೌದಿ ಅರೇಬಿಯಾ ಮತ್ತು ಇಸ್ರೇಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇರಾನಿನ ಡ್ರೋನ್ ಚಟುವಟಿಕೆ ಮತ್ತು ಅಣ್ವಸ್ತ್ರ ಕಾರ್ಯಕ್ರಮಗಳ ಕುರಿತು ಚರ್ಚೆಗಳು ನಡೆದಿವೆ. ಆ ನಿಟ್ಟಿನಲ್ಲಿ ಈಗ ಬಹಿರಂಗಗೊಂಡಿರುವ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.
ಅಂಕಣಕಾರರ ಪರಿಚಯ: ಗಿರೀಶ್ ಲಿಂಗಣ್ಣ ಅವರು ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಇಂಡೋ – ಜರ್ಮನ್ ಸಹಯೋಗದ ಸಂಸ್ಥೆ) ನಿರ್ದೇಶಕರಾಗಿದ್ದಾರೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ವಿಶ್ಲೇಷಕರಾಗಿದ್ದಾರೆ. ಅವರ ಲೇಖನಗಳು ಅಂತಾರಾಷ್ಟ್ರೀಯ, ರಾಷ್ಟ್ರ ಹಾಗೂ ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಇದನ್ನೂ ಓದಿ: ವಿಸ್ತಾರ Explainer | Srilanka crisis: ಶ್ರೀಲಂಕೆಗೆ ಈಗ ಭಾರತ ಒಂದೇ ಆಸರೆಯಾ?