* ಮೇಘನಾ ಸುಧೀಂದ್ರ
“All truly great thoughts are conceived by walking” ಎಂದು ಜರ್ಮನಿಯ ದೊಡ್ಡ ತತ್ವಜ್ಞಾನಿ ಫ್ರೆಡ್ರಿಕ್ ನೀಝೆ ಹೇಳುತ್ತಾರೆ. ಪ್ರಾಯಶಃ ಅವರ ಕಾಲದಲ್ಲಿ ನಡಿಗೆಯಲ್ಲೇ ಅವರ ಅರ್ಧ ಜೀವನ ಸವೆಸಬೇಕಾದ ಕಾರಣ ನಡಿಗೆಯ ಸಮಯದಲ್ಲೇ ಆತನ ಆಲೋಚನೆಗಳು ಇನ್ನಷ್ಟು ಪಕ್ವಗೊಳ್ಳುತ್ತಿತ್ತು, ತನ್ನ ತತ್ವಗಳನ್ನು ಜನರಿಗೆ ಪ್ರಚುರ ಪಡಿಸಲು ತನಗೆ ಬೇಕಾದ ಸಮಯ ಸಿಗುತ್ತಿತ್ತು ಎಂದು ತನ್ನ ಭಾಷಣಗಳಲ್ಲಿ ಹೇಳಿಕೊಂಡಿದ್ದಾರೆ. “God is Dead” ಎನ್ನುವ ಉಕ್ತಿಯನ್ನು ಆಗಿನ ಕಾಲದಲ್ಲಿ ಹೇಳಿ ಜನರಿಂದ ಬಹಿಷ್ಕಾರಕ್ಕೊಳಗಾದ ವ್ಯಕ್ತಿ ಇವರು. ದೇವರು ಇಲ್ಲ ಎಂಬುದನ್ನು ಅರಿತರೆ ಮನುಷ್ಯ ಎಲ್ಲ ಕಾಲದಲ್ಲೂ ಒಟ್ಟಿಗೆ ಒಗ್ಗಟ್ಟಾಗಿರುತ್ತಾರೆ ಎಂದು ತತ್ವವನ್ನು ಎಲ್ಲಾ ಕಡೆ ಸಾರುತ್ತಿದ್ದರು. ಪ್ರಾಯಶಃ 1900ನೇ ಇಸವಿಯಲ್ಲಿ ಇಷ್ಟೆಲ್ಲಾ ಹೇಳೋದಕ್ಕೆ ಬಹಳ ಧೈರ್ಯ ಬೇಕು ಅನ್ನೋದು ಸುಳ್ಳಲ್ಲ.
ವಾಕಿಂಗ್ ಹೋಗುವ ಸಂದರ್ಭದಲ್ಲಿ ಕಾಣುವ ದೃಶ್ಯಗಳು ಸಾಮಾನ್ಯವಾಗಿ ವಿಷ್ಣು ಸಹಸ್ರನಾಮ ನಾಲಕ್ಕು ರಸ್ತೆಗೆ ಕೇಳಿಸುವ ಹಾಗೆ ಹಾಕಿಕೊಳ್ಳುವವರು, ಮನೆಯ ಸಮಸ್ಯೆಗಳನ್ನು ಡಾಕ್ಟರ್, ಥೆರಪಿಸ್ಟ್ ಮತ್ತು ಪಕ್ಕದ ಮನೆಯವರ ಹತ್ತಿರ ಮುಚ್ಚಿಟ್ಟು ಯಾರೋ ಮೂರನೆಯವರ ಬಳಿ ದುಃಖ ದುಮ್ಮಾನಗಳನ್ನ ತೋಡಿಕೊಳ್ಳುವವರು, ಹಠಕ್ಕೆ ಬಿದ್ದು 10 ಸಾವಿರ ಹೆಜ್ಜೆಗಳನ್ನು ಜಿಟಿಜಿಟಿ ಮಳೆಯಲ್ಲಿಯೂ ಹಾಕುವವರ ಮಧ್ಯದಲ್ಲಿ ಒಂದಷ್ಟು ಜನ ಸ್ಮಾರ್ಟ್ ವಾಚ್ ಕಟ್ಟಿಕೊಂಡು ಕೈ ಮಾತ್ರ ಅಲ್ಲಾಡಿಸಿಕೊಂಡು ಚೇರ್ ಮೇಲೆ ಕೂತು “ಬ್ರೇಕಿಂಗ್ ನ್ಯೂಸ್” ನೋಡುತ್ತಿರುತ್ತಾರೆ. ಪ್ರತಿ ಬಾರಿ ವಾಕಿಂಗ್ ಮಾಡೋವಾಗ ನನಗೆ ಇವರುಗಳೆಲ್ಲ ಬಹಳ ವಿಚಿತ್ರವಾಗಿ ಕಾಣುತ್ತಾರೆ. ಕೈ ಮಾತ್ರ ಅಲ್ಲಾಡಿಸಿಕೊಂಡು ಒಂದು ಹೊಸ ರೀತಿಯ ವ್ಯಾಯಾಮ ಮಾಡಬಹುದಾ ಎಂದು ಆಲೋಚಿಸುತ್ತಿರುತ್ತೇನೆ. ಒಂದು ಅರ್ಧ ಮುಕ್ಕಾಲು ಘಂಟೆ ಹೀಗೆ ಕೈ ಅಲ್ಲಾಡಿಸಿ ಎದ್ದು ಫೋನ್ ಹಿಡಿದುಕೊಂಡು ಮನೆಗೆ ಹೊರಟುಬಿಡುತ್ತಾರೆ.
ಹೀಗೆ ಮಾಡುವವರಲ್ಲಿ ನಮ್ಮ ಮಿಡಲ್ ಏಜಿನ ಆಂಟಿ ಅಂಕಲ್ಲುಗಳೇ ಜಾಸ್ತಿ. ಕ್ವಾರ್ಟರ್ ಹಾಕೋ, ಕ್ವಾರ್ಟರ್ ವಯಸ್ಸಿನ ಹುಡುಗ ಹುಡುಗಿಯರು ಶಿಸ್ತಾಗಿ ದೇಹ ದಂಡಿಸಿ, ಫ್ರೀ ಜಿಮ್ ಮಾಡಿಕೊಂಡು “ಇವತ್ತಿನ 10K ಸ್ಟೆಪ್ಸ್ ಮುಗೀತು” ಎಂದು ಅವರ ಸ್ಟೇಟಸ್ ನೋಡುವ ಹುಡುಗ/ಹುಡುಗಿಗೆ ಕಳಿಸಿರುತ್ತಾರೆ. ಒಂದು 10- 20 ದಿನ ಒಂದೇ ರೀತಿಯ ಡೇಟಾ ಸೆಟ್ಟನ್ನು ನೋಡಿದ ಮೇಲೆ ನನ್ನಂತಹ ಮೆಷೀನ್ ಲರ್ನಿಂಗ್ ಇಂಜಿನಿಯರ್‌ಗಳಿಗೆ ಒಂದು ಕೆಟ್ಟ ಕುತೂಹಲ ಶುರುವಾಗಿಬಿಡುತ್ತದೆ. ಒಂದು ಅನಾಲಿಸಿಸ್ ಮಾಡೋಣ, ಒಂದು ಅಲ್ಗಾರಿಥಮ್ಮಿಗೆ ಡೇಟಾ ಫೀಡ್ ಮಾಡೋಣ ಎಂದು.
You stop and you listen (Maadeva)
Your angels are crying (Maadeva)
These people are wicked (Maadeva)
They chop you to pieces (Maadeva)
ಎಂದು ಹಾಡು ಕೇಳಿಕೊಂಡು ಒಂದು ಪದ ಅರ್ಥವಾಗದೇ ನನ್ನ ಕೈಯನ್ನೂ ನಾನು ಅಲ್ಲಾಡಿಸುತ್ತಿದ್ದಾಗ ಒಂದು 300 ಸ್ಟೆಪ್ ಆರಾಮಾಗಿ ನನ್ನ ವಾಚಿನಲ್ಲಿ ಕ್ಲಾಲ್ ಆಯ್ತು. “ಅರೆ ವಾ” ಎಂದು ಮತ್ತೆ 2 ನಿಮಿಷ ಅಲ್ಲಾಡಿಸಿದ ಮೇಲೆ ಅರ್ಥ ಆಗಿದ್ದು ಇಷ್ಟೆ, “ನಾನು ಓಡುತ್ತೇನೋ ಬಿಡುತ್ತೇನೋ ನನ್ನ ಕೈ ಆಡಿಸಿದ ಮೇಲೆ ಸ್ಟೆಪ್ಸ್ ಆಯ್ತು ಹೋಗ್ ಅತ್ಲಾಗೆ” ಎಂದು ಏನೇನು ಮಾಡಿದರೆ ಹೀಗೆ ಈ ಮೆಷೀನಿಗೆ ಏಮಾರಿಸಬಹುದು ಎಂದು ಲೆಕ್ಕ ಹಾಕತೊಡಗಿದೆ.
ಕೈಗೆ ಕಟ್ಟುವ ಬದಲು ಕಾಲಿಗೆ ಕಟ್ಟಿಕೊಂಡರೆ ಏನಾಗುತ್ತದೆ, ಜೋಕಾಲಿಯ ಸರಪಳಿಗೆ ಕಟ್ಟಿದರೆ ಇನ್ನೇನಾಗುತ್ತದೆ, ದಿಕ್ಕುಪಾಲಾಗಿ ಕಂಡಕಂಡವರನ್ನ ಅಟ್ಟಾಡಿಸಿಕೊಂಡು ಓಡುವ ನಮ್ಮ ಬೀದಿಯ ನಾಯಿಗಳಿಗೆ ಕಟ್ಟಿದರೆ ದಿನಕ್ಕೆ 10 ಸಾವಿರವೇನು 25 ಸಾವಿರ ಹೆಜ್ಜೆಗಳನ್ನೂ ಆರಾಮಾಗಿ ತೋರಿಸಬಹುದೇನೋ ಎಂದೇ ಆಲೋಚನೆ ಮಾಡುತ್ತಿದ್ದಾಗ ಈ ವಾಚ್ ಹೆಂಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳುವ ಆಸೆಯಾಯಿತು.
ಸ್ಮಾರ್ಟ್ ವಾಚಲ್ಲಿ ಪಿಳಿಪಿಳಿ ಎಂದು ಹಿಂಭಾಗ ಲೈಟ್ ಬರುತ್ತಿರುತ್ತದೆ ನೋಡಿದ್ದೀರ ಅಲ್ಲವೇ? ಅದು ನಮ್ಮ ದೇಹ/ಚರ್ಮವನ್ನು ಮುಟ್ಟಿದಾಗ ಮಾತ್ರ ಆ ಹಸಿರು ದೀಪ ಹತ್ತಿಕೊಳ್ಳೋದು. ಅಂದರೆ ಅದು ನಮ್ಮ ಹೃದಯ ಬಡಿತವನ್ನು ಒಂದು ಬೆಳಕಿನ ಡಯೋಡ್ ಮೂಲಕ ಮ್ಯಾಪ್ ಮಾಡುತ್ತಿರುತ್ತದೆ. ಉಸಿರಾಡದ ಒಂದು ವಸ್ತುವಿಗೆ ಇದೇ ವಾಚ್ ಕಟ್ಟಿ ನೋಡಿ, ಅಲ್ಲಿ ಹಸಿರು ದೀಪ ಪಿಳಿಪಿಳಿ ಅನ್ನೋದೆ ಇಲ್ಲ. ಇದನ್ನ ನಾವು ವಾಚ್ ಚಾರ್ಟ್ ಹಾಕಿದರೂ ಕಾಣಬಹುದು. ಹೃದಯ ಬಡಿತ 0 ಎಂದೋ ಅಥವಾ ಎರಡು ಗೆರೆಗಳನ್ನು ತೋರಿಸುತ್ತದೆ.
ಇನ್ನು ವಾಚಿನಲ್ಲಿ ಒಂದು ಆಕ್ಸಿಲರೋಮೀಟರ್ (ವೇಗೋತ್ಕರ್ಷ ಮಾಪಕ) ಮತ್ತು ಗೈರೋಸ್ಕೋಪ್ ಇರುತ್ತದೆ. ಈ ಅಕ್ಸಿಲರೋ ಮೀಟರ್ ಹೆಸರೇ ಹೇಳುವಂತೆ ನಮ್ಮ ನಡಿಗೆಯ ವೇಗ ಮತ್ತು ಗೈರೋಸ್ಕೋಪ್ ನಾವು ನಡೆಯುವ ಓರಿಯಂಟೇಷನ್‌ನ ಗೊತ್ತು ಮಾಡಿಕೊಳ್ಳುತ್ತದೆ. ಇದೆರೆಡು ಸರಿಯಾಗಿ ಕೆಲಸ ಮಾಡಿದಾಗ ನಾವದೆಷ್ಟು ದೂರ ಕ್ರಮಿಸಿದ್ದೇವೆ ಎಂಬ ಲೆಕ್ಕಾಚಾರವನ್ನು ತಿಳಿಸುತ್ತದೆ. ಎಲ್ಲಾ ವಿಷಯವನ್ನು ತಿಳಿದುಕೊಂಡು ಬಿಟ್ಟರೆ ಸ್ವಾರಸ್ಯ ಇರೋದಿಲ್ಲ ನೋಡಿ. ನನಗೂ ಹಾಗೇ ಆಗಿಹೋಯಿತು. ಅರೆ ಈ ವಾಚ್ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗಿ ನಾನು ಮೋಸ ಮಾಡಬಹುದಾದ ವಿಚಾರವನ್ನೇ ಬದಿಗೆ ಸರಿಸಿಬಿಟ್ಟೆನಲ್ಲಾ ಎಂದು ಬೇಜಾರಾಯಿತು.
ಹಾಗಾಗಿ ಒಂದು ಸ್ವಲ್ಪ ಮುಂದೆ ನಡೆದರೆ ಪಾರ್ಕಿನ ಕೊನೆಯಲ್ಲೇ ಗೋಬಿ ಗಾಡಿ, ಅದರ ಪಕ್ಕದಲ್ಲಿ ಚಾಟ್ಸ್ ಗಾಡಿಯ ಮಸಾಲೆ ಪುರಿಯ ವಾಸನೆ ಘಮ್ಮನೆ ಮೂಗಿಗೆ ಬಡಿಯುತ್ತಿತ್ತು. “ನೀನು 10 ಸಾವಿರ ಸ್ಟೆಪ್ ನಡೆದು ಒಂದು ಚಮಚ ಮಸಾಲೆ ಪುರಿ ಬಾಯಿಗಿಟ್ಟರೂ ಇನ್ನೂ 25 ಸಾವಿರ ಸ್ಟೆಪ್ ಹಾಕಬೇಕು” ಎಂದು ಡಯಟೀಷಿಯನ್ ಹೇಳಿದ ಮಾತು ನೆನಪಿಗೆ ಬಂದು ಮೂಗನ್ನು ಮುಚ್ಚಿಕೊಂಡು ಹೋಗಲು ಪ್ರಯತ್ನ ಪಟ್ಟೆ. ಮೊದಲೇ ನನ್ನ ಮೂಗಿನ ಸುತ್ತಳತೆ ದೊಡ್ಡದು. ಅದು ನನ್ನ ಪಿತ್ರಾರ್ಜಿತ ಆಸ್ತಿ. ಇಂತಹ ಸಂದರ್ಭದಲ್ಲಿ ಕೈ ಅಲ್ಲಾಡಿಸುವುದಲ್ಲ ನನ್ನ ತಲೆ ಅಲ್ಲಾಡಿಸಿದರೆ ಸ್ಟೆಪ್ಸ್ ಜಾಸ್ತಿ ಆಗಬಹುದು ಎಂದೇ ನನಗೆ ಅನ್ನಿಸುತ್ತಿತ್ತು.
ನೀವು ಬಿಗ್ ಬ್ಯಾಂಗ್ ಥಿಯರಿ ಎನ್ನುವ ಸೀರೀಸ್ ನೋಡುತ್ತಿದ್ದರೆ ಹಾವರ್ಡ್ ತನ್ನ ಹೆಂಡತಿಯ ಒತ್ತಡಕ್ಕೆ ಒಂದು ಸ್ಮಾರ್ಟ್ ವಾಚ್ ಕಟ್ಟಿಕೊಂಡು ತಿರುಗುತ್ತಿರುತ್ತಾನೆ. ಅವಳ ಫೋನಿಗೆ ಸಿಂಕ್ ಆಗುತ್ತಿದ್ದ ಇವನ ಸ್ಟೆಪ್ ಪುರಾಣ ಅವನಿಗೆ ತಲೆ ಕೆಡಿಸುತ್ತದೆ. ಕಡೆಗೆ ಇಂಜಿನಿಯರಿನ ಹಾಗೆ ಯೋಚನೆ ಮಾಡಿ ಒಂದು ರೊಬಾಟಿಕ್ ಆರ್ಮ್ ಬಿಲ್ಡ್ ಮಾಡಿ ಅದು ಕೈ ಆಡಿಸುತ್ತಿರುವ ಹಾಗೆ ಪ್ರೋಗ್ರಾಮ್ ಬರೆದು ಅದಕ್ಕೆ ವಾಚ್ ಕಟ್ಟಿ ಸುತ್ತಿಸುತ್ತಿರುತ್ತಾನೆ.
ಈಗ ಎಲ್ಲರ ಕೈಯಲ್ಲೂ ಒಂದು ವಾಚ್ ಬಂದಿದೆ. ಅದರಿಂದ ಬಹಳ ಸ್ಮಾರ್ಟ್ ಆಗಿದ್ದೇವೆ ಅದನ್ನು ಯಾಮಾರಿಸುವುದರಲ್ಲಿ ಎಂಬುದಂತೂ ಸತ್ಯ. ಪಾರ್ಕಿನಲ್ಲಿ ಕೂತು ಬ್ರೇಕಿಂಗ್ ನ್ಯೂಸ್ ನೋಡುವವರಿಗೆ ಹೇಳಬಯಸುವ ಮತ್ತೊಂದು ವಿಷಯ ಏನೆಂದರೆ ನಮ್ಮ ಫೋನಿನಲ್ಲಿರುವ ಆಪಿಗೂ ಮತ್ತು ವಾಚ್ “Do not sync automatically” ಎಂದು ಹೇಳಿದರೆ ಸಾಕು, ಮನೆಗೆ ಬಂದು ಆಪಿಗೆ ನಮಗೆ ಬೇಕಾದಷ್ಟು ಸ್ಟೆಪ್ಪುಗಳನ್ನು ತುಂಬಿಕೊಳ್ಳಬಹುದು.
10 ಸಾವಿರ ಸ್ಟೆಪ್ ಹಾಕಿದರೆ ನಾವು ಆರೋಗ್ಯವಂತರಾ ಎಂದು ಕೇಳುವ ಮಂದಿಯೂ ಇದ್ದಾರೆ. ಇದು ಪಾರ್ಕಿನಲ್ಲಿ ಅತಿ ಹೆಚ್ಚು ಚರ್ಚೆ ಆಗುವ ವಿಷಯ. ಮೊದಲು ಸರ್ಕಾರ, ಬೆಲೆ ಏರಿಕೆ, ಸೀರಿಯಲ್ಲಿನಲ್ಲಿ ಆಗುವ ಕೊಲೆಯನ್ನು ಇನ್ನೆಷ್ಟು ಚೆನ್ನಾಗಿ ಮಾಡಬೇಕಿತ್ತು ಎಂದು ಚರ್ಚೆ ಮಾಡಿ ನಂತರ, “ಈ ಸಣ್ಣ ಹುಡುಗರೇನು ನಡೆಯೋದು ಪಾರ್ಕಲ್ಲಿ, ನಾವೆಲ್ಲಾ ಒಂದು ಕಾಲದಲ್ಲಿ ಕಲಾಸಿಪಾಳ್ಯದಿಂದ ಹಿಡಿದು ಬಿನ್ನಿ ಮಿಲ್ ತನಕ ನಡೆದುಕೊಂಡು ಹೋಗುತ್ತಿದ್ದೆವು” ಎಂದು ಕಾಮೆಂಟ್ ಮಾಡಿ ಮತ್ತೆ ದೇವರ ಸ್ತುತಿಯನ್ನು ಹಾಕಿಕೊಂಡು ಕೂತಿರುತ್ತಾರೆ. ಕೆಲವೊಮ್ಮೆ ಈ ಮನಸ್ಥಿತಿಯನ್ನು ಬ್ಲಾಕ್ ಮಾಡುವ ಟೆಕ್ನಾಲಜಿಯನ್ನು ಕಂಡುಹಿಡಿಯುವ ಜುಗಾಡ್ ಬಗ್ಗೆಯೂ ನನಗೆ ಕುತೂಹಲವಾಗಿದೆ.
ಒಟ್ನಲ್ಲಿ ಸ್ಟೆಪ್ ಹಾಕುವ ನಮ್ಮ ಕಾರ್ಯಕ್ರಮದ ಜುಗಾಡ್, ಅದರ ವಿಚಿತ್ರ ಸಂಗತಿಗಳ ಮೊದಲನೆಯ ಅಂಕಣ ಇಲ್ಲಿ ಮುಗಿಯಿತು.
ಅಂಕಣಕಾರರ ಪರಿಚಯ: ಆಧುನಿಕ ತಲೆಮಾರಿನ ತಿಳಿವಳಿಕೆ ತಳಮಳಗಳನ್ನು ಸಮರ್ಥವಾಗಿ ಚಿತ್ರಿಸುವ ಮೇಘನಾ ಸುಧೀಂದ್ರ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ಉದ್ಯೋಗಿ. ಮೆಶಿನ್ ಲರ್ನಿಂಗ್‌ನ ಪ್ರೋಗ್ರಾಮ್‌ಗಳನ್ನು ಬರೆಯುತ್ತಲೇ ಕತೆ ಕಾದಂಬರಿಗಳನ್ನೂ ಬರೆಯುವ ಇವರ ʻಜಯನಗರದ ಹುಡುಗಿʼ ʻಲಿಪಿಯ ಪತ್ರಗಳುʼ ʻಪ್ರೀತಿ ಗೀತಿ ಇತ್ಯಾದಿʼ ʻಎಐ ಕತೆಗಳುʼ ಕೃತಿಗಳು ಜನಪ್ರಿಯವಾಗಿವೆ. ಓದು, ಚಾರಣ, ಶಾಸ್ತ್ರೀಯ ಸಂಗೀತ ಹವ್ಯಾಸಗಳು. ʻಕನ್ನಡ್ ಗೊತ್ತಿಲ್ಲʼ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ ಸಕ್ರಿಯರು.