Site icon Vistara News

ವಾಕಿಂಗ್‌ ಚಿತ್ರಗಳು: ಚಾಟ್‌ ಜಿಪಿಟಿ- ರೋಬಾಟ್ ಪರ್‌ಫೆಕ್ಟು, ಹಲವು ಎಡವಟ್ಟು

openai chatgpt

openai chatgpt

ಹಲವು ವರ್ಷಗಳ ಹಿಂದೆ ನಮ್ಮ ಪರಿಚಯದವರ ಮಗ ಕ್ಯಾಲ್ಕುಲೇಟರ್ ಹಿಡಿದುಕೊಂಡು ಹೋಂವರ್ಕ್ ಮಾಡುತ್ತಿದ್ದ. ಆಗಿನ್ನೂ ಅವನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಗಣಿತದ ಕೂಡು, ಕಳೆಯುವಿಕೆಯ ಲೆಕ್ಕಗಳನ್ನೇ ಇನ್ನೂ ಹೇಳಿಕೊಡುತ್ತಿದ್ದರು ಅವನಿಗೆ. ಅವನ ತಲೆಯನ್ನು ಸ್ವಲ್ಪವೂ ಉಪಯೋಗಿಸದೆ ಆರಾಮಾಗಿ ಕ್ಯಾಲ್ಕುಲೇಟರಿನ ನಂಬರ್ ಪ್ಯಾಡಿನಲ್ಲಿ ಸಂಖ್ಯೆಗಳನ್ನು ಒತ್ತಿ ಉತ್ತರ ಕಂಡುಕೊಂಡು ಉಳಿದ ಸಮಯವನ್ನು ಹಾಯಾಗಿ ಬಾಬ್ ದಿ ಬಿಲ್ಡರ್ ಕಾರ್ಟೂನ್ ನೋಡಿಕೊಂಡು ಕೂತಿರುತ್ತಿದ್ದ. ನಾನು ಚಿಕ್ಕವಳಿದ್ದಾಗ ಕಳೆಯುವಿಕೆಯ ಲೆಕ್ಕ ಮಾಡುವಷ್ಟರಲ್ಲಿ ಪ್ರಾಣ ಹೋಗುತ್ತಿತ್ತು. ಕಣ್ಣಲ್ಲಿ ನೀರೂ ಬರುತ್ತಿತ್ತು. ಆದರೂ ಆ ಲೆಕ್ಕಗಳನ್ನು ಯಾರ ಸಹಾಯವೂ ಕೇಳದೇ ಮಾಡಬೇಕಿತ್ತು. ಕ್ಯಾಲ್ಕುಲೇಟರ್ ಮನೆಯಲ್ಲಿ ಇದ್ದರೂ ಅದನ್ನು ಕೈಗೆ ಸಿಗದ ಹಾಗೆ ಮಾಡುತ್ತಿದ್ದರು. ಆದರೆ ನನ್ನ ಮುಂದಿನ ಪೀಳಿಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿರಲ್ಲಿಲ್ಲ. ಮಗ್ಗಿಯನ್ನು ಯಾಕೆ ಕಲಿಯಬೇಕು, ಎಕ್ಸಾಮ್ ಹಾಲಲ್ಲಿ ಕ್ಯಾಲ್ಕುಲೇಟರ್ ಬಿಡ್ತಾರಲ್ಲ ಎಂದು ಪಂಚ್ ಡೈಲಾಗ್ ಹೊಡೀತಿದ್ರು. ಸುಮ್ಮನೆ ಬುದ್ಧಿ ಉಪಯೋಗಿಸಬೇಕಿಲ್ಲ ಎಂಬುದು ಅವರ ವಾದ.

ಆ ವಾದಕ್ಕೆ ಪುಷ್ಟಿ ಕೊಡುವುದಕ್ಕೆ ಆ ಪೀಳಿಗೆಯ ಆವಿಷ್ಕಾರವೇ ಚಾಟ್ ಜಿಪಿಟಿ. ಇದು ಓಪನ್ ಏಐನ ಅತ್ಯಂತ ಜನಪ್ರಿಯ ಪ್ರಾಡಕ್ಟ್ ಆಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದರೆ ಗೂಗಲ್ಲಿನ ಪಾಲುದಾರರೆಲ್ಲ ಅದಕ್ಕೆ ಸೆಡ್ಡು ಹೊಡೆಯಲು ಏನು ಮಾಡಬೇಕು ಎಂದು ತಲೆ ಕೆರೆದುಕೊಂಡು ಕೂತಿದ್ದಾರೆ. ಇದೊಂದು ಸಾಧಾರಣ ಚಾಟ್ ಬಾಟ್ ಎಂದು ಮೂಲೆಗೆ ಸರಿಸುವ ಹಾಗೇನೂ ಇಲ್ಲ. ಅದರ ಹತ್ತಿರ ಎಲ್ಲದರ ಉತ್ತರ ಇದೆ, ಅಕಸ್ಮಾತ್ ಗೊತ್ತಿಲ್ಲದಿದ್ದರೆ ಕೃತಕ ಬುದ್ಧಿಮತ್ತೆಯಿಂದ ಕಲಿತು, ಮುಂದಿನ ಬಾರಿ ಉತ್ತರ ಕೊಡುವಷ್ಟು ಜಾಣ್ಮೆ ಇದೆ. ಬೇರೆ ಚಾಚ್ ಬಾಟ್‌ಗಳಿಗಿಂತ ಭಿನ್ನವಾದುದು. ಅಕಸ್ಮಾತ್ ನೀವು ನಮ್ಮ ದೇಶದ ಅತ್ಯಂತ ನಿಧಾನವಾಗಿ ಚಲಿಸುವ ಬ್ಯಾಕಿಂಗ್ ವ್ಯವಸ್ಥೆಯ ಚಾಟ್ ಬಾಟುಗಳನ್ನು ಗಮನಿಸಿದರೂ ಅಲ್ಲಿ ಒಂದೊಂದು ವಾಕ್ಯದ ಅಥವಾ ಒಂದು ಪ್ಯಾರಾದ ಉತ್ತರಗಳನ್ನು ಕೊಡುವಷ್ಟೇ ಸಮರ್ಥವಾಗಿ ಅವುಗಳನ್ನು ಕಟ್ಟಲಾಗಿದೆ. ಆದರೆ ಇದು ಹಾಗಲ್ಲ, ಬೆರಳನ್ನು ತೋರಿಸಿದರೆ ಹಸ್ತವನ್ನೇ ನುಂಗುವಷ್ಟು ಜಾಣ್ಮೆಯನ್ನು ತೋರಿಸಿ ಜನರ ಬುದ್ಧಿಮತ್ತೆಗೆ ಸವಾಲಾಗಿ ಪರಿಣಮಿಸಿದೆ. ಇದಕ್ಕೋಸ್ಕರವೇ ಇದು ಬಹು ಚರ್ಚಿತವಾದ ಪ್ರಾಡಕ್ಟ್ ಆಗಿದೆ.

ಡಿಸೆಂಬರ್ 2015ರಲ್ಲಿ ಎಲಾನ್ ಮಸ್ಕ್, ಸ್ಯಾಮ್ ಆಲ್ಟ್ಮ್ಯಾನ್, ಗ್ರೆಗ್ ಬಾಕ್ಮಾನ್, ರೀಡ್ ಹಾಫ್ಮಾನ್, ಜೆಸ್ಸಿಕಾ ಲಿವಿಂಗ್ಸ್ಟನ್, ಪೀಟರ್ ಥೀಲ್ ಮತ್ತು ಕಂಪೆನಿಗಳಾದ ಅಮೆಝಾನ್ ವೆಬ್ ಸರ್ವೀಸಸ್, ಇನ್ಫೋಸಿಸ್ ಮತ್ತು ವೈ ಸಿ ರಿಸರ್ಚ್ ಸೆಂಟರ್ ಈ ಕಂಪೆನಿಯನ್ನು ಹುಟ್ಟು ಹಾಕಿ 1 ಬಿಲಿಯನ್ ಡಾಲರಿನಷ್ಟು ಹೂಡಿಕೆ ಮಾಡಿ ಜಗತ್ತಿನಲ್ಲಿ ನಡೆಯುವ ಯಾವ ಏಐ ಸಂಶೋಧನೆಗೂ ಸಾಥ್ ಕೊಡುವುದಾಗಿ ಹೇಳಿತು. 2015ರಲ್ಲಿ ಕೃತಕ ಬುದ್ಧಿಮತ್ತೆಯನ್ನು ಬರೀ ಪ್ರಾಡಕ್ಟ್ ಟೆಸ್ಟಿಂಗ್ ಅಟೋಮೇಷನ್ನಿಗೆ ಬಳಸುತ್ತಾರೆ ಎಂದು ನಂಬುತ್ತಿದ್ದದ್ದರಿಂದ ಇದು ಶುರುವಾದಾಗ ಹೆಚ್ಚು ಸದ್ದು ಮಾಡಲಿಲ್ಲ. 2020ರಲ್ಲಿ ಜಿಪಿಟಿ-3 ಎಂಬ ಲ್ಯಾಂಗ್ವೇಜ್ ಮಾಡೆಲ್ಲನ್ನು ಓಪನ್ ಏಐ ಬಿಡುಗಡೆ ಮಾಡಿತ್ತು. ಮಿಲಿಯನ್ನುಗಟ್ಟಲೆ ಅಂತರ್ಜಾಲದಿಂದ ಹೆಕ್ಕಿದ ಪದಗಳಿಂದ ಇದು ತರಬೇತಿ ಹೊಂದಿತ್ತು. ಇದು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವಷ್ಟು ಸಾಮರ್ಥ್ಯವೂ ಹೊಂದಿತ್ತು. ಕೇಳಿದ ಪ್ರಶ್ನೆಗೆ ಉತ್ತರ ಕೊಡುವಷ್ಟು ಬುದ್ಧಿಮತ್ತೆಯನ್ನು ಹೊಂದಿತ್ತು. ಜೆನರೇಟಿವ್ ಪ್ರೀ ಟ್ರೈನ್ಡ್ ಟ್ರಾನ್ಸ್‌ಫಾರ್ಮರ್ ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆಗೊಂಡು ಕೃತಕ ಬುದ್ಧಿಮತ್ತೆಯ ಮೇಲೆ ಕೆಲಸ ಮಾಡುವವರಿಗೆ ಸಾಕಷ್ಟು ಸಹಾಯ ಮಾಡಿತ್ತು.

ಅವರ ಏಪಿಐಗಳನ್ನು ಉಪಯೋಗಿಸಿ ಕೆಲವಾರು ಹೊಸ ಪ್ರಯೋಗಗಳನ್ನು ಮಾಡಬಹುದಾಗಿತ್ತು. 2 ವರ್ಷದ ನಂತರ ಅಂದರೆ ನವೆಂಬರ್ 2022ರಲ್ಲಿ ತನ್ನದೇ ಮಾಡೆಲ್ಲನ್ನು ಉಪಯೋಗಿಸಿಕೊಂಡು ಒಂದು ಚಾಟ್ ಬಾಟನ್ನು ಜನರಿಗೆ ಪ್ರಯೋಗ ಮಾಡಲು ಬಿಡಲಾಯಿತು. ಸಾಮಾನ್ಯವಾಗಿ ಹೀಗೆ ಮಾರುಕಟ್ಟೆಗೆ ಬರುವ ಬಾಟ್‌ಗಳನ್ನು ಸಾಮಾನ್ಯ ಜನರು ಅಷ್ಟು ಆಸಕ್ತಿದಾಯಕವಾಗಿ ನೋಡುವುದಿಲ್ಲ. ಯಾಕೆಂದರೆ ಅವುಗಳನ್ನು ನಿರ್ದಿಷ್ಟ ಕೆಲಸಗಳಿಗೆ ಬಿಲ್ಡ್ ಮಾಡಿರುತ್ತಾರೆ. ಅದು ಬ್ಯಾಂಕ್, ಜೀವವಿಮೆ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಲಾಗುತ್ತದೆ. ಸುಮ್ಮನೆ ಅಲೆಕ್ಸಾ ಅಥವಾ ಗೂಗಲ್ ಹೋಂ ಹಾಗೆ ಟೈಂ ಪಾಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ಅವುಗಳೆಲ್ಲಾ ಮಾತೂ ಆಡುತ್ತವೆ. ಅದರಿಂದ ಜನರಿಗೆ ಸಮಯ ಹಾಳು ಮಾಡುವ ಸಾಧನವಾಗಿಯೂ ಮಾರ್ಪಾಡಾಗುತ್ತದೆ. ಆದರೆ ಈ ಚಾಟ್ ಜಿಪಿಟಿ ಬರೀ ಟೆಕ್ಸ್ಟ್ ಮಾತ್ರ, ಮಾತೂ ಆಡಲ್ಲ, ನಮ್ಮ ಮಾತನ್ನೂ ಕೇಳುವುದಿಲ್ಲ. ಇಷ್ಟವಾದ ಹಾಡನ್ನೂ ಹಾಡುವುದಿಲ್ಲ, ಜೋಕ್ ಸಹ ಹೇಳುವುದಿಲ್ಲ, ನಗುವುದೂ ಇಲ್ಲ.

ಡಿಸೆಂಬರ್ 2022ರಲ್ಲಿ ಮೆಡೆಕ್ಸ್ ರಿವ್ಯೂನಲ್ಲಿ ಪ್ರಕಟವಾದ ಒಂದು ಸೈಂಟಿಫಿಕ್ ಸಂಶೋಧನಾ ಪೇಪರಿನಲ್ಲಿ 12 ಜನರ ಹೆಸರಿತ್ತು. ಅದರಲ್ಲಿ 11 ಜನ ಮನುಷ್ಯರು, ಮತ್ತೊಂದು ಆಥರ್‌ನ ಹೆಸರು ಚಾಟ್ ಜಿಪಿಟಿ ಎಂದಿತ್ತು. ಇದು ಈ ಚಾಟ್ ಬಾಟಿನ ತಾಕತ್ತು. ಪ್ರತಿ ಸೈಂಟಿಫಿಕ್ ಪೇಪರನ್ನು ಬರೆಯೋದಕ್ಕೆ ಹತ್ತಾರು ಜನರ ಶ್ರಮವಿರುತ್ತದೆ. ಅದಕ್ಕೆ ಸುಮಾರು ವರ್ಷಗಳ ಕಾಲ ಅಧ್ಯಯನ ಮಾಡಬೇಕು. ಮನುಷ್ಯ ಬಿಲ್ಡ್ ಮಾಡಿರುವ ಒಂದು ಯಂತ್ರ ಮನುಷ್ಯನ ಸಮಕ್ಕೆ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರೆ ಅದು ಸೋಜಿಗವೇ ಸರಿ. ಸದ್ಯಕ್ಕೆ ನಮ್ಮ ದೇಶದ ಮುಂಬರುವ ಬಡ್ಜೆಟ್ಟಿನ ಭಾಷಣವನ್ನು ಬರೆದು ಸೈ ಎನಿಸಿಕೊಂಡಿದೆ. ಅಂದರೆ ಮುಂದಿನದ್ದನ್ನು ಹೇಳುವಷ್ಟು ದೊಡ್ಡ ಜ್ಯೋತಿಷಿಯ ಕೆಲಸವನ್ನು ಮಾಡುತ್ತದೆ. ಜನರು ಕೇಳುವ ಲೇಖನಗಳು, ಜೀವನಪ್ರೀತಿಯ ಬರಹಗಳು, ಪದ್ಯ, ಕಥೆ ಯಾವುದನ್ನು ಕೇಳಿದರೂ ತನ್ನದೇ ಶೈಲಿಯಲ್ಲಿ ಬರೆದು ತೋರಿಸುತ್ತಿದೆ. ಇಂಗ್ಲೀಷ್ ಮತ್ತು ಇತರ ಯುರೋಪಿನ ಭಾಷೆಯ ಡೇಟಾಸೆಟ್ಟುಗಳು ಬಹಳ ಉತ್ಕೃಷ್ಟವಾಗಿರುವ ಕಾರಣ ಆಯಾ ಭಾಷೆಯಲ್ಲೂ ಸಂವಹನ ಮಾಡುವಷ್ಟು ಚತುರತೆ ಇದಕ್ಕೆ ಬಂದಿದೆ. ಸುಮ್ಮನೆ ಬೋರ್ ಆದರೆ ಚಾಟ್ ಬಾಟ್ ತೆಗೆದು ಹರಟೆ ಹೊಡೆಯಬಹುದು.

ಇದನ್ನೂ ಓದಿ: ವಾಕಿಂಗ್‌ ಚಿತ್ರಗಳು ಅಂಕಣ | ರೋಬಾಟ್‌ಗಳ ಹಾಲೋವೀನ್‌ ಹಬ್ಬ

ಎಲ್ಲದಕ್ಕಿಂತ ಬಹಳ ಮುಖ್ಯವಾದ ಕೆಲಸ ಆಗಿರುವುದು “ಆಟೋಮ್ಯಾಟಿಕ್ ಕೋಡ್ ಜೆನರೇಷನ್” ವಿಭಾಗದಲ್ಲಿ. ಕಂಪೆನಿಯಲ್ಲಿ ನಡೆಯುವ ಟೆಕ್ನಿಕಲ್ ಸಂದರ್ಶನದ ಪ್ರಶ್ನೆಗಳನ್ನು ಕಾಪಿ ಪೇಸ್ಟ್ ಮಾಡಿದರೆ ನಾವು ಹೇಳಿದ ಭಾಷೆಯಲ್ಲಿ ಕೋಡ್ ಬರೆದು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರಣೆಯನ್ನು ಕೊಟ್ಟು, ಅದರಿಂದ ಬರುವ ಔಟ್‌ಪುಟ್ಟನ್ನು ಸಹ ಕೊಟ್ಟುಬಿಡುತ್ತದೆ. ಅಂದರೆ ಮುಖತಃ ಮಾಡಲಾಗದ ಟೆಕ್ನಿಕಲ್ ಸಂದರ್ಶನದಲ್ಲಿ ಜನರು ಹೇಗೆ ಬೇಕಾದರೂ ಮೋಸ ಮಾಡಬಹುದು ಎಂಬುದನ್ನ ಇದು ತೋರಿಸುತ್ತಿದೆ. ಕೆಲವಾರು ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಆಫೀಸುಗಳಲ್ಲಿ ಈ ಚಾಟ್ ಬಾಟನ್ನು ಬ್ಯಾನ್ ಮಾಡಲಾಗಿದೆ. ಇದರಿಂದ ಬರೆಯುವ ಕೋಡುಗಳನ್ನು ಬರೆದರೆ ಅಥವಾ ಉಪಯೋಗಿಸಿದರೆ ಅವರ ಉತ್ತರವನ್ನು ಅಮಾನ್ಯ ಮಾಡಬೇಕು ಎಂದು ಆದೇಶವನ್ನು ಕೊಟ್ಟಿದ್ದಾರೆ. ಇಂತಹ ಎಡವಟ್ಟುಗಳನ್ನು ಈ ಚಾಟ್ ಜಿಪಿಟಿ ಮಾಡುತ್ತಿದೆ. ಕೆಲವೊಮ್ಮೆ ಅಸಂಬದ್ಧ ಪ್ಯಾರಾಗಳನ್ನು/ ಪದಗಳನ್ನು ಬರೆದು ಕಥೆಯನ್ನೋ ಅಥವಾ ಕವಿತೆಯನ್ನು ಹಾಳು ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಬಿಟ್ಟರೆ ಭಾರತೀಯ ಭಾಷೆಯ ಸಪೋರ್ಟ್ ಸಹ ಬಹಳ ಕಡಿಮೆಯೆ.

ಕುವೆಂಪುರವರ ಬಗ್ಗೆ ಪ್ರಶ್ನೆ ಕೇಳಿದಾಗ ಅವರ ಬಗ್ಗೆ ಮಾಹಿತಿ ನೀಡುತ್ತಾ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು ಎಂಬ ತಪ್ಪು ಮಾಹಿತಿಯನ್ನು ಕೊಡುತ್ತದೆ, ಅನಂತಮೂರ್ತಿಯವರ ಕೃತಿಗಳನ್ನು ಬೇರೆ ಲೇಖಕರ ಹೆಸರಿಗೆ ತಳುಕು ಹಾಕಿ ಸಹ ಉತ್ತರವನ್ನು ನೀಡುತ್ತದೆ. ಕೆಲವೊಮ್ಮೆ ಕನ್ನಡದ್ದಲ್ಲದ ಕೃತಿಗಳನ್ನು ಕನ್ನಡಿಗರು ಬರೆದಿದ್ದಾರೆ ಎಂದು ಹೇಳುತ್ತದೆ. ಇಂತಹ ತಲೆಹರಟೆ ಮಾಡಲು, ಮಜ ತೆಗೆದುಕೊಳ್ಳುವುದಕ್ಕೆ ಜನ ಇದನ್ನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದಾರೆ. ಈಗ ಇದರ ಪ್ರೋ ವರ್ಷನ್ ಸಹ ಬಂದಿದೆ. ಸ್ವಲ್ಪ ದುಡ್ಡು ಕೊಟ್ಟರೆ ಎಷ್ಟು ಹೊತ್ತು ಬೇಕಾದರೂ ಇದರ ಜೊತೆ ಕಾಲ ಕಳೆಯಬಹುದು ಮತ್ತು ಯಾವ ಸಮಯದಲ್ಲಾದರೂ ಸರ್ವರ್ ಡೌನ್ ಆಗದೇ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಆ ಕಂಪೆನಿ ವಹಿಸಿಕೊಳ್ಳುತ್ತದೆ. ಇಂಗ್ಲೀಷಿನಲ್ಲಿ ಬಹಳ ಚೆನ್ನಾಗಿ ಲೇಖನ ಬರೆಯುವ ಈ ಬಾಟ್ ಕನ್ನಡಲ್ಲಿ ಇನ್ನೂ ಮಾಗಬೇಕು. ಈ ಅಂಕಣದ ಸೀರೀಸಿನ ಮುಂದಿನ ಲೇಖನವನ್ನು ಅದೇ ಬರೆದರೆ ಮಾತ್ರ ಅದು ಬಹಳ ಯಶಸ್ವಿಯಾದ ಬಾಟ್ ಎಂದು ನಾನು ನಂಬುತ್ತೇನೆ. ಇಲ್ಲದಿದ್ದರೆ ನನ್ನ ಮೇಲೆ ಒಂದು ಘನಘೋರ ಪದ್ಯ ಬರೆದು ನಗೆಪಾಟಲಿಗೀಡಾಗುವ ಬಾಟ್ ಆಗಿಯೇ ಇರುತ್ತದೆ.

ಇದನ್ನೂ ಓದಿ: ವಾಕಿಂಗ್‌ ಚಿತ್ರಗಳು ಅಂಕಣ | ಕೋಪದಿಂದ ಮೂಗು ಕೊಯ್ದುಕೊಂಡರೆ ಅಪಾಯವಿಲ್ಲ!

Exit mobile version