Site icon Vistara News

Independence Day 2023 : ಟೆಲಿಫೋನ್‌, ಮೊಬೈಲ್‌ ಇಲ್ಲದ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂವಹನ ಹೀಗಿತ್ತು!

Communication

ಸಂಪರ್ಕ ಮತ್ತು ಸಂಹವನ ಮಾಧ್ಯಮಗಳಿಂದಲೇ ಗಿಜಿಗುಡುತ್ತಿರುವ ಈ ಕಾಲದಲ್ಲಿ ನಿಂತು ನೂರಾರು ವರ್ಷದ ಹಿಂದಿನ ಬದುಕನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅದರಲ್ಲೂ ನಮ್ಮ ಕಲ್ಪನೆಗೆ ನಿಲುಕಬೇಕಿರುವ ಶತಮಾನಗಟ್ಟಲೆಯ ಹಿಂದಿನ ದಿನಗಳು ಸಂಘರ್ಷಮಯವಾಗಿದ್ದರೆ, ಇನ್ನೂ ಕಷ್ಟ. ಸಾರ್ವಜನಿಕ ಸಂಪರ್ಕ ವ್ಯವಸ್ಥೆಗಳು ಆಗಿನ್ನೂ ಶೈಶವಾವಸ್ಥೆಯಲ್ಲಿರುವ ದಿನಗಳು; ದೇಶದೆಲ್ಲೆಡೆ ಆಡಳಿತವಿದ್ದೂ ಅರಾಜಕತೆ; ಸ್ವಾತಂತ್ರ್ಯ ಹೋರಾಟ (Independence Day 2023) ತಾರಕಕ್ಕೇರಿದ್ದ ಸಂದರ್ಭ; ಉಸಿರಾಡುವುದಕ್ಕೂ ಜನರನ್ನು ನಿರ್ಬಂಧಿಸುವ ಮನಸ್ಥಿತಿಯಲ್ಲಿದ್ದ ಸರಕಾರ- ಇಂಥ ದಿನಗಳಲ್ಲಿ ಸಂಪರ್ಕ, ಸಂವಹನ ಹೇಗಿತ್ತು? ಇದು ಕುತೂಹಲಕರ.

ಬ್ರಿಟಿಷ್‌ ಆಡಳಿತದಲ್ಲಿ 1764ರ ಸುಮಾರಿಗೆ ಅಂಚೆ ವ್ಯವಸ್ಥೆ ಆರಂಭವಾಗಿದ್ದು ಹೌದು. ಜನರಲ್‌ ವಾರೆನ್‌ ಹೇಸ್ಟಿಂಗ್ಸ್‌ ಕಾಲದಲ್ಲಿ, 1774ರಲ್ಲಿ ಈ ಸೌಲಭ್ಯವನ್ನು ಸಾರ್ವಜನಿಕರಿಗೂ ತೆರೆಯಲಾಯಿತು. ಕ್ರಮೇಣ ತಂತಿ ವ್ಯವಸ್ಥೆ, ರೈಲು, ರಸ್ತೆ, ಬಂದರು ಮುಂತಾದ ಸಾರ್ವಜನಿಕ ಸಂಪರ್ಕದ ಸೌಲಭ್ಯಗಳು ಆರಂಭವಾದರೂ, ಇವುಗಳನ್ನು ಆರಂಭಿಸುವುದರ ಹಿಂದಿನ ಉದ್ದೇಶ ಭಾರತದ ಅಭಿವೃದ್ಧಿ ಆಗಿರಲಿಲ್ಲ. ಬದಲಿಗೆ ವಸಾಹತು ವಿಸ್ತರಿಸುವ ಉದ್ದೇಶವೇ ಪ್ರಮುಖವಾಗಿತ್ತು. ಹಾಗಾಗಿ ಸ್ಥಳೀಯರಿಗೆ ಇದರಿಂದ ಮೊದಲಿಗೆ ತೊಂದರೆಗಳೇ ಹೆಚ್ಚಾಗಿದ್ದವು. ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ ಈ ವ್ಯವಸ್ಥೆಗಳನ್ನು ತಮ್ಮ ಅನುಕೂಲಕ್ಕೂ ಬಳಸಿಕೊಳ್ಳುವುದನ್ನು ಸ್ಥಳೀಯರು ಅರಿಯತೊಡಗಿದರು.

ಮುದ್ರಣ ಮಾಧ್ಯಮ ಪ್ರಚಲಿತಕ್ಕೆ ಬರುತ್ತಿದ್ದಂತೆ ವೃತ್ತಪತ್ರಿಕೆಗಳು ಬೆಳಕು ಕಂಡವು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಲ್ಲೊಂದು ಇಲ್ಲೊಂದು ಇದ್ದಂಥವು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಪತ್ರಿಕೆಗಳ ಸಂಖ್ಯೆ ಮತ್ತು ಪ್ರಸಾರ ಹೆಚ್ಚಾಯಿತು. ಆಡಳಿತದ ವಕ್ರದೃಷ್ಟಿ ಸಹಜವಾಗಿ ಇವುಗಳ ಮೇಲೂ ಬಿತ್ತು. ರಾಷ್ಟ್ರೀಯ ಮತ್ತು ಭಾಷಾ ಪತ್ರಿಕೆಗಳ ಮೇಲೆ ಅಂಕುಶ ಹಾಕುವುದಕ್ಕಾಗಿ ಬ್ರಿಟಿಷ್‌ ಸರಕಾರ ಸಾಲುಸಾಲು ಕಾಯ್ದೆಗಳನ್ನು ಜಾರಿ ಮಾಡಿತು. 1799ರ ಸೆನ್ಸರ್‌ಶಿಪ್‌ ಕಾಯ್ದೆ, 1823ರ ಲೈಸೆಲ್ಸಿಂಗ್‌ ಕಾಯ್ದೆ, 1835ರ ಪ್ರೆಸ್‌ ಕಾಯ್ದೆ, 1867ರ ನೋಂದಣಿ ಕಾಯ್ದೆ, 1878ರ ವರ್ನಾಕ್ಯುಲರ್‌ ಪ್ರೆಸ್‌ ಕಾಯ್ದೆ, 1910ರ ಭಾರತೀಯ ಪ್ರೆಸ್‌ ಕಾಯ್ದೆ- ಹೀಗೆ. ಜನ ಜಾಗೃತಿ ಮೂಡಿಸುವ ಪ್ರತಿಯೊಂದು ಪ್ರಯತ್ನವೂ ವಸಾಹತುಕೋರರಿಗೆ ಅಪಾಯಕಾರಿಯಾಗಿ ಕಂಡಿದ್ದರಿಂದ ಮಾಧ್ಯಮಗಳನ್ನು ಹಿಡಿತಕ್ಕೆ ತರಲು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.

ಇವೆಲ್ಲವುಗಳ ನಡುವೆ ರಾಷ್ಟ್ರೀಯ ಮತ್ತು ಭಾಷಾ ಮಾಧ್ಯಮಗಳು ತೋರಿದ ಕೆಚ್ಚು ಮತ್ತು ನಿರ್ಭೀತ ನಡೆಗಳು ಯಾವತ್ತಿಗೂ ಅನುಸರಣೀಯ. ಮುಖ್ಯವಾಹಿನಿಯಲ್ಲಿದ್ದು ನೇರಾನೇರ ಅಧಿಕಾರಕ್ಕೆ ಸೆಡ್ಡು ಹೊಡೆದು ಹೋರಾಡುತ್ತಿದ್ದ ಮಾಧ್ಯಮಗಳು ಒಂದೆಡೆಯಾದರೆ, ಭೂಗತವಾಗಿದ್ದುಕೊಂಡು ರಹಸ್ಯ ಕಾರ್ಯಾಚರಣೆಯ ಮೂಲಕ ಕೆಲಸ ಮಾಡುತ್ತಿದ್ದವರ ಸಂಖ್ಯೆ ಲೆಕ್ಕಕ್ಕೆ ಸಿಗಲಾರದು. ಗುಪ್ತ ಜಾಗದಲ್ಲಿ ಗೋಡೆ ಬರಹಗಳ ಮೂಲಕ ಒಬ್ಬರಿಂದೊಬ್ಬರಿಗೆ ವಿಷಯ ತಲುಪುತ್ತಿತ್ತು. ಸಂದೇಶವಾಹಕರನ್ನು ಆಶ್ರಯಿಸಲಾಗುತ್ತಿತ್ತು. ಇದಲ್ಲದೆ, ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಅಂಚೆಯ ಮೂಲಕ ಆಗೊಮ್ಮೆ ಈಗೊಮ್ಮೆ ವೃತ್ತ ಪತ್ರಿಕೆಗಳನ್ನು ತರಿಸಿಕೊಳ್ಳುವ ಗ್ರಾಮೀಣ ಜನರಿದ್ದರೂ, ಅವರನ್ನು ಹೋರಾಟದ ಮುಖ್ಯವಾಹಿನಿಗೆ ತರುವಲ್ಲಿ ಅಹರ್ನಿಶಿ ಶ್ರಮಿಸಿದ್ದು ಕರಪತ್ರಗಳು. ಗ್ರಾಮೀಣ ಭಾಗಗಳಲ್ಲಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದ್ದ ಈ ಮಾಧ್ಯಮಗಳ ಕತೆಯೇ ರೋಚಕವಾದದ್ದು.

ಕರಪತ್ರಗಳೆಂಬ ಗುಪ್ತಗಾಮಿನಿಗಳು

ಅಂದಿನ ಕರಪತ್ರಗಳಲ್ಲಿ ಹೆಚ್ಚಿನವು ಕಲ್ಲಚ್ಚಿನ ಪ್ರತಿಗಳಾಗಿದ್ದವು. ಎಲ್ಲೋ ಕಾಡು-ಮೇಡು, ಬೆಟ್ಟ-ಗುಡ್ಡಗಳ ಎಡೆಯಲ್ಲಿ ಇವುಗಳನ್ನು ರಾತ್ರಿಯ ಹೊತ್ತು ಮುದ್ರಿಸಲಾಗುತ್ತಿತ್ತು. ಬೆಳಗಾಗುವುದರೊಳಗೆ ಇವುಗಳನ್ನು ಊರುಗಳ ನಿಗದಿತ ಸ್ಥಳಗಳಿಗೆ ತಲುಪಿಸಲಾಗುತ್ತಿತ್ತು. ಅಂದಿನ ಹಳ್ಳಿಗಳಲ್ಲಿ ಸಂಪರ್ಕ ಸಾಧನಗಳು ಬಹುತೇಕ ಯಾವುದೂ ಇರಲಿಲ್ಲ. ಸಾಕ್ಷರತೆಯ ಪ್ರಮಾಣ ಕಡಿಮೆಯಿದ್ದು, ಬಡತನ ಹೆಚ್ಚಿದ್ದರಿಂದ ವೃತ್ತ ಪತ್ರಿಕೆಗಳನ್ನು ದುಡ್ಡು ಕೊಟ್ಟು ಅಂಚೆಯ ಮೂಲಕ ತರಿಸಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವರು ಪೇಟೆಗಳಿಗೆ ಹೋದಾವಾಗ ಕೊಂಡು ತರುತ್ತಿದ್ದರು. ಇಷ್ಟಾದರೂ ಅವರೆಲ್ಲರಿಗೂ ಕಾಲಕಾಲಕ್ಕೆ ಚಳುವಳಿಯ ಸುದ್ದಿ, ಹೋರಾಟದ ಸ್ಥಿತಿಗತಿಗಳ ಬಗ್ಗೆ ಸುದ್ದಿ ಮುಟ್ಟುತ್ತಿತ್ತು- ಈ ಕರಪತ್ರಗಳ ಮೂಲಕ.

ಸೈಕ್ಲೋಸ್ಟೈಲ್‌ ಯಂತ್ರದ ಬಳಕೆ

“ಕರಪತ್ರಗಳನ್ನು ಹೊರತರುವುದು, ಅವುಗಳನ್ನು ನಾಡಿನಾದ್ಯಂತ ಜನರಿಗೆ ಮುಟ್ಟಿಸುವುದು ಸಾಧಾರಣದ ಕೆಲಸವಲ್ಲ. ಪೊಲೀಸರ ಕಣ್ಣು ತಪ್ಪಿಸಿ, ಅವುಗಳನ್ನು ಸೈಕ್ಲೋಸ್ಟೈಲ್‌ ಯಂತ್ರದ ಮೂಲಕ ಸಿದ್ಧಗೊಳಿಸಲಾಗುತ್ತಿತ್ತು. ಸತ್ಯಾಗ್ರಹದ ಸುದ್ದಿಗಳನ್ನು ಎಲ್ಲೆಡೆಯಿಂದ ಗುಪ್ತವಾಗಿ ತರಿಸಿಕೊಳ್ಳಲಾಗುತ್ತಿತ್ತು. ಸ್ವಯಂಸೇವಕರ ಮೂಲಕ ಅವು ಜನರಿಗೆ ದೊರೆಯುವಂತೆಯೂ ಮಾಡಲಾಗುತ್ತಿತ್ತು. ಇದಕ್ಕಾಗಿ ಪ್ರತಿಪ್ರಾಂತ್ಯದಲ್ಲೂ ಒಂದೊಂದು ಸತ್ಯಾಗ್ರಹಿ ಸ್ವಯಂಸೇವಕರ ಪಡೆಯೇ ಇರುತ್ತಿತ್ತು. ಈ ಸ್ವಯಂಸೇವಕರು ಕರಪತ್ರ ತಯಾರಾದ ಸ್ಥಳದಿಂದ ಆ ಕಟ್ಟುಗಳನ್ನು ಪ್ರತಿ ತಾಲೂಕಿನ ಕೇಂದ್ರಕ್ಕೆ ಒಯ್ದು, ಅದನ್ನು ಒಂದು ನಿರ್ದಿಷ್ಟವಾದ ಗುಪ್ತ ಸ್ಥಳದಲ್ಲಿ ಇಟ್ಟು ಬರುತ್ತಿದ್ದರು. ಮತ್ತೊಬ್ಬ ಸ್ವಯಂಸೇವಕ ಆ ಕಟ್ಟನ್ನು ಕೊಂಡು ಹೋಗಿ ಆ ತಾಲೂಕಿನ ಪ್ರಮುಖ ಹಳ್ಳಿಗಳಲ್ಲಿ ನೇಮಿತರಾಗಿದ್ದ ಸ್ವಯಂಸೇವಕರ ವಶಕ್ಕೆ ಕೊಡಬೇಕಾಗಿತ್ತು. ಇದನ್ನು ಪಡೆದ ಗ್ರಾಮಮಟ್ಟದ ಸ್ವಯಂ ಸೇವಕರು ಕರಪತ್ರಗಳ ಪ್ರತಿಯನ್ನು ಜನಕ್ಕೆ ಮುಟ್ಟಿಸುತ್ತಿದ್ದರು. ಈ ಕರಪತ್ರಗಳಿಗೆ ೩ ಕಾಸು ಬೆಲೆ. ಅದನ್ನು ಜನರು ಕೊಂಡು ಮುಚ್ಚು ಮರೆಯಲ್ಲಿ ಓದು ಪುಳಕಿತರಾಗುತ್ತಿದ್ದರು” ಎಂಬುದಾಗಿ ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್.‌ ದೊರೆಸ್ವಾಮಿ ಅವರು “ಸ್ವಾತಂತ್ರ್ಯ ಚಳುವಳಿಯ ಕರಪತ್ರಗಳು” ಎಂಬ ಪುಸ್ತಕದ ಪ್ರವೇಶಿಕೆಯಲ್ಲಿ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ : Independence Day 2023 : ಭಾರತ ಸ್ವಾತಂತ್ರ್ಯ ಹೋರಾಟದ ಹಾದಿಯನ್ನೊಮ್ಮೆ ತಿರುಗಿ ನೋಡೋಣ…

ಗೌಪ್ಯ ಕಾಪಾಡುವ ಸವಾಲು

ಮುಖ್ಯವಾಗಿ ಬೇರಾವುದೇ ರೀತಿಯ ಸಂಪರ್ಕ ಸಾಧನಗಳು ಇರದಿದ್ದಾಗ, ಸುಳ್ಳು ಸುದ್ದಿಗಳ ಮೂಲಕ ಚಳುವಳಿಗಳ ತೀವ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುವ ಗುರುತರ ಹೊಣೆಯನ್ನು ಈ ಕರಪತ್ರಗಳು ಉದ್ದಕ್ಕೂ ನಿಭಾಯಿಸಿದ್ದವು. ಕರಪತ್ರಗಳನ್ನು ಮುದ್ರಿಸುವುದು, ಹಂಚುವುದು, ಮಾರುವುದು ಮಾತ್ರವೇ ಅಲ್ಲ, ಅವುಗಳನ್ನು ಓದುವುದು ಮತ್ತು ಇರಿಸಿಕೊಳ್ಳುವುದನ್ನೂ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಅಂಥ ಕಷ್ಟದ ದಿನಗಳಲ್ಲೂ ಕಾಲಕಾಲಕ್ಕೆ ಹೋರಾಟದ ಸುದ್ದಿಗಳನ್ನು ಜನರಿಗೆ ಮುಟ್ಟಿಸುವುದು, ಜನರನ್ನು ಚಳುವಳಿಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಮುಂತಾದ ಮಹತ್ವದ ಕೆಲಸಗಳನ್ನು ಭೂಗತವಾಗಿ ಇದ್ದುಕೊಂಡೇ ಈ ಕರಪತ್ರದ ಮಾಧ್ಯಮಗಳು ದೀರ್ಘಕಾಲ ನಿಭಾಯಿಸಿವೆ.

ಬಾಯಿ ಮಾತಲ್ಲೇ ಪ್ರಚಾರ

ಉಪ್ಪಿನ ಸತ್ಯಾಗ್ರಹ, ವಿದೇಶೀ ವಸ್ತುಗಳ ನಿರಾಕರಣೆ, ಹೆಂಡದಂಗಡಿಗಳ ಪಿಕೆಟಿಂಗ್‌, ಈಚಲು ಮರಗಳನ್ನು ಕಡಿಯುವುದು, ಕರ ನಿರಾಕರಣೆ ಮುಂತಾದ ಹತ್ತು ಹಲವು ಸತ್ಯಾಗ್ರಹಗಳು ಪ್ರಾರಂಭವಾಗಿರುವ ಮತ್ತು ನಡೆಯುತ್ತಿರುವ ವಿಷಯಗಳನ್ನು ಕೆಲವೊಮ್ಮೆ ಸ್ವಯಂಸೇವಕರು ಬಾಯಿ ಮಾತಲ್ಲೇ ಊರಿಂದೂರಿಗೆ ಪ್ರಚಾರ ಮಾಡುತ್ತಿದ್ದರು. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಥವಾ ಯಾವುದೇ ಕೆಲಸಗಳನ್ನು ಖುಲ್ಲಂಖುಲ್ಲಾ ಮಾಡುವುದು ಅಪಾಯಕ್ಕೆ ದಾರಿ ಮಾಡುತ್ತಿತ್ತು. ಇದಕ್ಕಾಗಿ ವೇಷಾಂತರ ಮಾಡುವುದೂ ಇತ್ತು. ಯಾವ್ಯಾವುದೋ ಊರಿನ ಯಾರ್ಯಾರದ್ದೋ ಮನೆಗಳಲ್ಲಿ ಆಶ್ರಯ ಪಡೆಯುವುದು ಮಾಮೂಲಿಯೂ ಆಗಿತ್ತು. ಅಂತೂ ಆಧುನಿಕ ಸಂಪರ್ಕ ಸಾಧನಗಳು ಇಲ್ಲದ ಕಾಲದಲ್ಲಿ, ವಿಸ್ತಾರವಾದ ದೇಶವೊಂದರ ಜನ ಶತಮಾನಗಳ ಕಾಲ ಹೋರಾಟದ ಬಿಸಿಯನ್ನು ಕಾಯ್ದುಕೊಳ್ಳುವುದು ಹುಡುಗಾಟದ ಮಾತಲ್ಲ.

Exit mobile version