:: ಡಾ.ಜಿ.ವಿ.ಜೋಶಿ
ರಾಜ್ಯದಲ್ಲಿ ಬಡವರಿಗೆ ಕೇ೦ದ್ರ ಸರಕಾರದ ಉಚಿತ ಹಳೆಯ ಅಕ್ಕಿ ಪೂರೈಕೆ ಯೋಜನೆಗೆ ರಾಜ್ಯ ಸರಕಾರದ 5 ಕೆ.ಜಿ. ಅಕ್ಕಿಗೆ ಸಮನಾದ ಹೊಸ ಕ್ಯಾಶ್ ಪೂರೈಕೆ ಯೋಜನೆ ಸಾಥ್ ನೀಡಲು ಪ್ರಾರಂಭಿಸಿದೆ. ಅಕ್ಕಿ ಪೂರೈಕೆ ವಿಷಯದಲ್ಲಿ ಕೇಂದ್ರ ಸರಕಾರದ ಮೇಲೆ ದೊಡ್ಡ ಗೂಬೆ ಕೂರಿಸುವ ಬಡವರ ಸರಕಾರ ನಾಡಿನಲ್ಲಿ ಮೆರೆಯುತ್ತಿರುವುದು ಸುಳ್ಳಲ್ಲ. ಅಕ್ಕಿ,ತಿಕ್ಕಾಟ, ಅಕ್ಕಿ ಕದನ, ಅಕ್ಕಿ ರಾಜಕೀಯ ಹೀಗೆ ವಿವಿಧ ರೀತಿಯಲ್ಲಿ ಅಕ್ಕಿ ಕರ್ನಾಟಕದಲ್ಲಿ ಕೇವಲ ಆಹಾರ ಧಾನ್ಯವಾಗಿ ಉಳಿದಿಲ್ಲ, ವಿಶಿಷ್ಟ ವಿಶೇಷಣವಾಗಿ ವಿಜೃಂಭಿಸುತ್ತಿದೆ. ಆಂತರಿಕ ಕಲಹದಿಂದ ನಲುಗುತ್ತಿರುವ, ಬಿಕ್ಕಳಿಸುತ್ತಿರುವ ಬಿಜೆಪಿಗೆ ರಾಜ್ಯ ಸರಕಾರವನ್ನು ವಿರೋಧಿಸುವ ಶಕ್ತಿಯೇ (ಮತ್ತೆ ಹೊ೦ದಾಣಿಕೆಯ ಶಾಖ ?) ಇಲ್ಲವಾದರೆ, ಚುನಾವಣೆಯ ನಂತರ ದುರ್ಬಲವಾಗಿ ತತ್ತರಿಸಿಹೋದ ಕುಮಾರಸ್ವಾಮಿ ಹೇಳುತ್ತಿರುವುದನ್ನು ಅವರ ಪಕ್ಷದಲ್ಲೇ ಕೇಳುವವರಿಲ್ಲ. ಆದರೂ ಅವರ ಮಾಮೂಲಿ ಶೈಲಿಯಲ್ಲಿ, ಅವರಿಗೆ ಮಾತ್ರ ಸುಲಭವಾಗಿ ತಿಳಿಯುವ ರೀತಿಯಲ್ಲಿ ಒಂದಿಷ್ಟು ಹೇಳುತ್ತಿರುತ್ತಾರೆ. ಬಿಜೆಪಿಗಾಗಲಿ, ಜೆಡಿಸ್ ಗಾಗಲಿ ಅಭಿವೃದ್ಧಿ ಬಗ್ಗೆ ಮಾತನಾಡಲು ಪುರಸೊತ್ತೇ ಇಲ್ಲ, ತಾಕತ್ತಂತೂ ಇಲ್ಲವೇ ಇಲ್ಲ
ಈಗ ಕಣ್ಣಿಗೆ ರಾಚುತ್ತಿರುವುದು ಕಾಂಗ್ರೆಸ್ ಸರಕಾರಕ್ಕೆ ಸುಲಭದಲ್ಲಿ ಹೊಂದಾಣಿಕೆಯಿಂದ ಒಲಿದು ಬಂದ ಬಹುಮತ ರೂಪದ ದೊಡ್ಡ ಭಾಗ್ಯ. ಅನ್ನ ಭಾಗ್ಯ ಯೋಜನೆ ಭಾಗಶ: ಹಣ ಭಾಗ್ಯದ ರೂಪ ತೊಟ್ಟು ಮುಂದಿನ ಲೋಕಸಭಾ ಚುನಾವಣೆಯತ್ತ ಮುಖ ಮಾಡಿದೆ. ನೌಕರರ ವರ್ಗಾವಣೆಯಲ್ಲೇ ಬ್ಯೂಸಿ ಆಗಿರುವ ಅಧಿಕಾರ ರೂಢ ಪಕ್ಷಕ್ಕೆ ರಾಜ್ಯದ ಅಭಿವೃದ್ಧಿಯ ನೆನಪು ಕೂಡ ಆಗುತ್ತಿಲ್ಲ.
2013-18ರ ಅವಧಿಯಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಸಿದ್ದರಾಮಯ್ಯನವರೇ ಮುಖ್ಯಾಮಂತ್ರಿಯಾಗಿದ್ದಾಗ ಭಾಗ್ಯಗಳ ಹೊಳೆ ಹರಿಸಿದ್ದರು. ಇದನ್ನು ವಿಮರ್ಶಿಸುತ್ತ ಸಾಹಿತಿ ಎಸ್,ಎಲ್ ಭೈರಪ್ಪ ರಾಜ್ಯದಲ್ಲಿ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯಗಳ ಸೃಷ್ಟಿಗೆ ಸಾರ್ವಜನಿಕ ಹಣ ಬಳಸುವ ಬದಲು ಜನಪ್ರಿಯ ಭಾಗ್ಯಗಳಿಗೆ ಬಳಸುವ ಯೋಜನೆಯ ಔಚಿತ್ಯವನ್ನೇ ಪ್ರಶ್ನಿಸಿದ್ದರು. ಹಿಂದೆ ಎಸ್. ಎಂ. ಕೃಷ್ಣ ಮುಂದಾಳತ್ವದ ಕಾಂಗ್ರೆಸ್ ಸರಕಾರ ಬೆಂಗಳೂರಿನ ಅಭಿವೃದ್ಧಿಗೆ ಮಾಡಿದ ಬೃಹತ್ ಪ್ರಯತ್ನಕ್ಕೆ ಅವರಿಂದ ಪ್ರಶಂಸೆ. ಆಗ ಭೈರಪ್ಪರ ವಿಚಾರಧಾರೆಯ ಪರ-ವಿರೋಧದ ವಾದಗಳು ಹುಟ್ಟಿಕೊಂಡಿದ್ದಂತೂ ನಿಜ. ಈಗ ಮತ್ತೆ ಭೈರಪ್ಪನವರಿಗೆ ಗೋಚರಿಸುವ ಬಡವರ ರಾಜ್ಯ ಸರಕಾರ 5 ಕೆ.ಜಿ. ಅಕ್ಕಿ ಬದಲು 170 ರೂ.ಗಳನ್ನು ಅದೃಷ್ಟವಂತ ಫಲಾನುಭವಿ ಖಾತೆಗೆ ಜಮೆ ಮಾಡಲು ತೀರ್ಮಾನಿಸಿದ್ದು ಎಲ್ಲರಿಗೂ ತಿಳಿದ ಸತ್ಯ. ಮತ್ತೆ ಹುಟ್ಟಿಕೊಂಡ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರವನ್ನು ಬಯ್ಯುತ್ತ ಬಡವರ ಉದ್ಧಾರದ ಶಂಖ ಊದುತ್ತಿದೆ. ರಾಜ್ಯದ ಆರ್ಥಿಕ ವಿಕಾಸದ ಪ್ರಶ್ನೆ ಪರದೆಯ ಹಿಂದೆ ಕೂಡ ಉಳಿದುಕೊಂಡಿಲ್ಲ. ಇದ್ದಲ್ಲೇ ಕರಗಿ ಹೋಗಿದೆ.
ಹಾಗೆಂದು, ರಾಜ್ಯ ಸರಕಾರ ತನ್ನ ಪಾಲಿನ 5 ಕೆ.ಜಿ ಅಕ್ಕಿ ನೀಡುವ ಭರವಸೆಯನ್ನು ಸದ್ಯಕ್ಕಂತೂ ಮರೆತಿಲ್ಲ. ಆಹಾರ ಸಚಿವ ಮುನಿಯಪ್ಪ ʼ ಅಕ್ಕಿ ಸಿಗುವ ವರೆಗೆ ಹಣ ನೀಡುತ್ತೇವೆ. ಅನ್ನ ಭಾಗ್ಯಕ್ಕೆ ಬೇಕಾಗುವಷ್ಟು ಪ್ರಮಾಣದ ಅಕ್ಕಿ ಸಿಕ್ಕಿದ ಬಳಿಕ ನೇರ ನಗದು ಜಮೆ ಮಾಡುವದಿಲ್ಲ ʼ ಎಂದು ಹೇಳಿದ್ದಕ್ಕೂ ಸಾಕಷ್ಟು ಪ್ರಚಾರ ಸಿಕ್ಕಿದೆ. ನಗದು ಹಣದ ಆಕರ್ಷಣೆಗೊಳಗಾಗಿ ಹೆಚ್ಚಿನ ಆಯ್ಕೆ ಸ್ವಾತಂತ್ರ್ಯ ಪಡೆದ ಮತದಾರರಾದ ಬಡವರು ʼಅಕ್ಕಿ ಬೇಡ, ಹಣವನ್ನೇ ಕೊಡಿ ʼ ಎಂದು ಹೇಳುವ ಸಾಧ್ಯತೆಯೂ ಇಲ್ಲದಿಲ್ಲ. ಬರುತ್ತಿರುವ ಲೋಕ ಸಭಾ ಚುನಾವಣೆಯನ್ನು ಟಾರ್ಗೆಟ್ ಮಾಡಿ ಕೊಂಡ ಕರ್ನಾಟಕ ಸರಕಾರ ಹಣ ಭಾಗ್ಯ ಯೋಜನೆಯನ್ನು ಮುಂದುವರಿಸುವ ಚಾಕಚಕ್ಯತೆ ತೋರಬಹುದಲ್ಲ! ಬಡವರ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ವಿರೋಧಿಸುವ ಗೋಜಿಗೇ ಹೋಗದೆ ಉಳಿದರೆ ಆಶ್ಚರ್ಯ ಪಡುವದೇನಿದೆ ಹೇಳಿ? ಕರ್ನಾಟಕದ ಆರ್ಥಿಕ ಅಭಿವೃಧಿಯ ವಿಷಯ ಮಾತ್ರ ಮೂಲೆಗೆ ಸರಿದು ಅನ್ನಸೇವನೆಯ ಭಾಗ್ಯ ಮುಗಿಸಿದ ಮೇಲೆ ಬಿಸಾಡಿದ ಬಾಳೆಯಂತಾಗಬಹುದು ಅಷ್ಟೆ.
ಇದೇ ಲೇಖಕ ಶಿರಸಿಯಲ್ಲಿ ಪಿಯುಸಿ ಕ್ಲಾಸಿನಲ್ಲಿದ್ದಾಗ(1965-66) ಸಿದ್ದಯ್ಯ ಪುರಾಣಿಕರ ʼರಜತ ರೇಖೆʼ ಓದಬೇಕಿತ್ತು. ಆ ಕೃತಿಯಲ್ಲಿ ಹದಿಹರಯದ ಯುವಕ ಮೊದಲು ಗಾಂಧಿ ತತ್ವದ ಮಹತ್ವವನ್ನು ಪ್ರಶ್ನಿಸುತ್ತ “ಮೊದಲು ದೊರೆಯಲಿ ಕೂಳು, ಆ ಮೇಲೆ ತತ್ವವ ಹೇಳುʼʼ ಎನ್ನುವ ವಾದವನ್ನು ಮಂಡಿಸುತ್ತಾನೆ. ಈಗ ಅಪ್ಪಟ ಅವಕಾಶವಾದಿ ರಾಜಕಾರಣಿಗಳ ಬಾಯಲ್ಲಿ ಸಿಲುಕಿ ನರಳುತ್ತಿದೆ ʼಸರ್ವ ಜನಾಂಗದ ಶಾಂತಿಯ ತೋಟʼ. ಇದೇ ತೋಟದಲ್ಲಿ ಒಂದು ವೇಳೆ 10 ಕೆ.ಜಿಯ ಅನ್ನ ಭಾಗ್ಯ ಯೋಜನೆಯ ರಜತ ರೇಖೆ ಕಾಣಿಸಿಕೊಂಡರೆ ʼʼಮೊದಲು ದೊರೆಯಲಿ ಕೂಳು, ಆ ಮೇಲೆ ವೋಟನು ಕೇಳುʼʼ ಎಂದು ಭಾವಿಸಿ ಆಳುವ ಪಕ್ಷ ಜಾಣ್ಮೆ ತೋರಬಹುದು. ಹೀಗೆ ಭಾವಿಸುತ್ತಲೇ ಹತ್ತಿರದಲ್ಲಿರುವ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ರಾಜಕೀಯ ತಂತ್ರಗಾರಿಕೆ ಮಾಡುವುದು ನಿಕ್ಕಿ. ಆಗ ಈಗಲೇ ಸೋತು ಸುಣ್ಣದಂತಾದ ವಿರೋಧ ಪಕ್ಷದವರಿಗೆ ರಾಜ್ಯದ ಅಭಿವೃದ್ಧಿ ಬಗೆಗೆ ಚಕಾರ ಎತ್ತುವ ಧೈರ್ಯವೂ ಇರಲಿಕ್ಕಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂಗ್ರೆಸ್ ಭರವಸೆಗಳ ಮುಂದೆ ಬಿಜೆಪಿ ಹತಾಶೆ
1977ರ ಲೋಕಸಭಾ ಚುನಾವಣೆಯ ನೆನಪಾಗುತ್ತದೆ. ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸರಕಾರದ ವಿರುದ್ಧ ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ಶಿವರಾಮ ಕಾರಂತರು ಸಿಡಿದೆದ್ದು ಯಾವ ಮುಲಾಜು ಇಲ್ಲದೆ ಪ್ರಚಾರ ಮಾಡಿದ್ದರು. ಚುನಾವಣೆಯ ನಂತರ ಜನತಾ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕನ್ನಡದ ದಿನಪತ್ರಿಕೆಯೊಂದು ಅವರೊಡನೆ ಸಂದರ್ಶನ ನಡೆಸಿತ್ತು. ಪ್ರಜಾಸತ್ತೆಯಲ್ಲಿ ಸರಕಾರ ವ್ಯಕ್ಕಿ ಸ್ವಾತಂತ್ರ್ಯವನ್ನು ರಕ್ಷಿಸಲೇ ಬೇಕು, ಅನ್ನ ಕೊಡುವುದು ಸರಕಾರದ ಕೆಲಸವಲ್ಲ. ಅನ್ನವನ್ನು ಪ್ರತಿ ಭಾರತೀಯ ದುಡಿದು ಸಂಪಾದಿಸಬೇಕು ಎಂದು ಖಡಕ್ ಆಗಿ ಹೇಳಿದ್ದರು. ಕಾರಂತರ ನಾಡಿನಲ್ಲಿ 25 ವರ್ಷಗಳ ನಂತರವೂ ಪುಕ್ಸಟೆ ಅಕ್ಕಿ ನೀಡಿ ಬಡವರ ಉದ್ಧಾರದ ಮಾತನಾಡುತ್ತಿರುವುದು ದೊಡ್ಡ ದುರಂತವಲ್ಲದೇ ಬೇರೇನೂ ಅಲ್ಲ. ರೈತರ ಸಾಲಮನ್ನಾ ಮಾಡುವದೇ ದೊಡ್ಡ ಸಾಧನೆ ಎಂದು ಬೊಬ್ಬೆ ಹಾಕುವ ಕೆಲಸನ್ನು ಒಂದಲ್ಲ ಒಂದೊ ಹಂತದಲ್ಲಿ ಮಾಡಿ ಅಪಚಾರವೆಸಗಿದ ರಾಜಕೀಯ ಪಕ್ಷಗಳ ಬೀಡು ಈ ನಮ್ಮ ಕನ್ನಡ ನಾಡು.
ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲು ಕರ್ನಾಟಕದ ಬೇರೆ ಬೇರೆ ವಲಯಗಳಲ್ಲಿ ಬೇಕಾದ ಯೋಜನೆಗಳನ್ನು ಭಾರತದ ಕೃಷಿ ಸಂಶೋಧನಾ ಮ೦ಡಳಿ ಪಟ್ಟಿ ಮಾಡಿದೆ. ಬರಗಾಲ ಪೀಡಿತ ಪ್ರದೇಶದ ವಿಸ್ತಾರವನ್ನು ಪರಿಗಣಿಸಿದರೆ ರಾಜಸ್ಥಾನಕ್ಕೆ ಪ್ರಥಮ ಸ್ಥಾನ, ಕರ್ನಾಟಕ ಎರಡನೇ ಸ್ಥಾನದಲ್ಲೇ ಇದೆ. ರಾಜ್ಯದಲ್ಲಿ ಬೆಳೆ ಸಾಂದ್ರತೆ, ಉತ್ಪಾದಕತೆ ಹೆಚ್ಚಿಸಲು ಮಂಡಳಿ ಮಾರ್ಗೋಪಾಯಗಳನ್ನು ಸೂಚಿಸಿದೆ. ಬೇಕಾದ ನೂತನ ತಂತ್ರಜ್ಞಾನ ಅಗತ್ಯವನ್ನೂ ವಿವರಗಳೊಂದಿಗೆ ಕೃಷಿ ಸಂಶೋಧನಾ ಮಂಡಳಿ ನೀಡಿದೆ. ಸಾಲ ಮನ್ನಾ, ಅನ್ನ ಭಾಗ್ಯ, ಹಣ ಭಾಗ್ಯಗಳನ್ನೇ ದಯಪಾಲಿಸುವ ಭರವಸೆ ನೀಡಿ ಮತ ದೋಚುವ ರಾಜಕೀಯ ಪಕ್ಷಗಳಿಗೆ ನಿಜವಾಗಿ ಬೇಕಾಗಿದ್ದನ್ನು ಮಾಡುವ ಬುದ್ಧಿಯೇ ಬರುವದಿಲ್ಲ.
ಇದನ್ನೂ ಓದಿ: ಸಕಾಲಿಕ: ಗುತ್ತಿಗೆ ಕಾರ್ಮಿಕರೆಂಬ ಬಾವಲಿಗಳ ಬವಣೆ ನೀಗುವುದು ಹೇಗೆ?