| ಬಿ. ಸೋಮಶೇಖರ್, ಬೆಂಗಳೂರು
ಜೋರು ಧ್ವನಿ, ಕಾನೂನು ಪಾಂಡಿತ್ಯ, ಸಾರ್ವಜನಿಕವಾಗಿ ನಿರರ್ಗಳವಾದ ಭಾಷಣ, ಅಲ್ಲಲ್ಲಿ ಸ್ವಲ್ಪ ವಿವಾದ, ಬಿಜೆಪಿ ಜತೆಗಿನ ನಂಟು… ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅರ್ಥಾತ್ ಎಲ್. ವಿಕ್ಟೋರಿಯಾ ಗೌರಿ ಅವರು ಫೆಬ್ರವರಿ ೭ರಂದು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ತಮಿಳುನಾಡಿನ ಜನರ ಹೊರತಾಗಿ ಬೇರೆಡೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ, ನ್ಯಾ. ವಿಕ್ಟೋರಿಯಾ ಗೌರಿ ಅವರ ಹೆಸರು ಈಗ ದೇಶದೆಲ್ಲೆಡೆ ಪಸರಿಸಿದೆ. ಬಿಜೆಪಿ ಜತೆಗೆ ನಂಟು ಹೊಂದಿದ್ದ, ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿದ್ದ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ಜಡ್ಜ್ ಆಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ, ವಿಕ್ಟೋರಿಯಾ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ವಿಕ್ಟೋರಿಯಾ ಗೌರಿ ಅವರ ನೇಮಕ ವಿವಾದ ಉಂಟಾಗಿದ್ದು ಏಕೆ? ಅವರ ವಿರುದ್ಧ ಅರ್ಜಿ ಸಲ್ಲಿಕೆಯಾಗಿದ್ದು ಏಕೆ? ಅಷ್ಟಕ್ಕೂ, ಇವರು ಯಾರು ಎಂಬುದರ ಮಾಹಿತಿ ಇಲ್ಲಿದೆ.
ಯಾರಿವರು ವಿಕ್ಟೋರಿಯಾ ಗೌರಿ?
ಕನ್ಯಾಕುಮಾರಿ ಜಿಲ್ಲೆಯ ಕುಗ್ರಾಮವೊಂದರಲ್ಲಿ ೧೯೭೩ರ ಮೇ ೨೧ರಂದು ಜನಿಸಿದ ವಿಕ್ಟೋರಿಯಾ ಗೌರಿ ಅವರದ್ದು ಹೋರಾಟದ ಹಾದಿ. ಮದುರೈ ಕಾನೂನು ಕಾಲೇಜ್‌ನಲ್ಲಿ ಓದಿ, ೧೯೯೫ರಲ್ಲಿ ನ್ಯಾಯವಾದಿಯಾಗಿ ನೋಂದಣಿ ಮಾಡಿಕೊಂಡ ಅವರು ಸಿವಿಲ್, ಕ್ರಿಮಿನಲ್, ತೆರಿಗೆ ಹಾಗೂ ಕಾರ್ಮಿಕರ ಪ್ರಕರಣಗಳ ಕುರಿತು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ವಕೀಲಿಕೆಯಲ್ಲಿ ೨೧ ವರ್ಷ ಅನುಭವ ಹೊಂದಿರುವ ೪೯ ವರ್ಷದ ವಿಕ್ಟೋರಿಯಾ ಗೌರಿ ಅವರೀಗ ಉನ್ನತ ಹುದ್ದೆಗೆ ಏರಿದ್ದಾರೆ. ಇವರು ತುಳಸಿ ಮುತ್ತುರಾಮ್ ಎಂಬುವರನ್ನು ಮದುವೆಯಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ.
ಸ್ವಂತ ಕಚೇರಿ ಹೊಂದಿದ ಮೊದಲ ವಕೀಲೆ
ಬಡ ಕುಟುಂಬದಲ್ಲಿ ಜನಿಸಿ, ಶಿಕ್ಷಣವೊಂದನ್ನೇ ಆಧಾರವನ್ನಾಗಿಸಿಕೊಂಡ ವಿಕ್ಟೋರಿಯಾ ಗೌರಿ ಅವರು ಕನ್ಯಾಕುಮಾರಿಯಲ್ಲಿ ಸ್ವಂತ ಕಚೇರಿ ಹೊಂದಿದ ಮೊದಲ ವಕೀಲೆ ಎಂಬ ಖ್ಯಾತಿ ಗಳಿಸಿದ್ದಾರೆ. ಲಿಟಲ್ ಫ್ಲವರ್ ಹೈಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ, ಮದುರೈ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಎಲ್‌ಎಲ್‌ಬಿ, ಕೊಡೈಕೆನಲ್‌ನಲ್ಲಿರುವ ಮದರ್ ಥೆರೆಸಾ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದರು. ಕಾನೂನಿನಲ್ಲಿ ಹೆಚ್ಚು ಆಸಕ್ತಿಯಿದ್ದ ಕಾರಣ ಮೊದಲಿಗೆ ಕರೂರ್‌ನಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದರು. ಇದಾದ ಬಳಿಕ ಕನ್ಯಾಕುಮಾರಿ ಜಿಲ್ಲಾ ನ್ಯಾಯಾಲಯದ ವಕೀಲೆಯಾಗಿ ಕಾರ್ಯಾರಂಭ ಮಾಡಿದರು. ಅಲ್ಲದೆ, ೨೦೦೬ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಇವರು ವಕೀಲಿಕೆ ಆರಂಭಿಸಿದರು.
ಸಮಾಜ ಸೇವೆಯಲ್ಲೂ ಆಸಕ್ತಿ
ಅಧ್ಯಾತ್ಮ ಗುರು ಮಾತಾ ಅಮೃತಾನಂದಮಯಿ ಅವರ ಅನುಯಾಯಿಯಾಗಿರುವ ವಿಕ್ಟೋರಿಯಾ ಗೌರಿ ಅವರು ಸಮಾಜ ಸೇವೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಹಾಗಾಗಿಯೇ, ಅವರು ಮಾಂಗಯಾರ್ ಮಂಗಳಂ ಎನ್‌ಜಿಒದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಕನ್ಯಾಕುಮಾರಿ ಜಿಲ್ಲೆಯ ಅತ್ಯುತ್ತಮ ಸಮಾಜ ಸೇವಕಿ ಎಂಬ ಪ್ರಶಸ್ತಿಯೂ ಲಭಿಸಿದೆ.
ಬಿಜೆಪಿ ಜತೆಗೆ ನಂಟು, ರಾಜಕೀಯವಾಗಿಯೂ ಏಳಿಗೆ
ಭಾಷಣ, ಪ್ರಖರ ವಾದ ಮಂಡನೆ, ನಂಬಿದ ವಿಚಾರಗಳನ್ನು ಸ್ಫುಟವಾಗಿ ಮಂಡಿಸುವ ವಿಕ್ಟೋರಿಯಾ ಗೌರಿ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಅಲ್ಲದೆ, ತಮ್ಮ ಕೌಶಲಗಳನ್ನೇ ಏಣಿಯಾಗಿ ಮಾಡಿಕೊಂಡ ಅವರು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲ, ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. ತಮಿಳುನಾಡು ಟಿವಿ ಚಾನೆಲ್‌ವೊಂದರಲ್ಲಿ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯು ತಮಿಳುನಾಡು ಜನರಿಗೆ ಏಕೆ ಎಂಬುದನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಜಡ್ಜ್ ಆಗಿ ನೇಮಕಗೊಂಡಿದ್ದಕ್ಕೆ ವಿರೋಧವೇಕೆ?
ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಿಕ್ಟೋರಿಯಾ ಗೌರಿ ಅವರು ಪ್ರಮಾಣವಚನ ಸ್ವೀಕರಿಸುತ್ತಲೇ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿದೆ. “ವಿಕ್ಟೋರಿಯಾ ಗೌರಿ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಅವರು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ಹಾಗೂ ಲೇಖನಗಳನ್ನು ಬರೆದಿದ್ದಾರೆ. ಕ್ರಿಶ್ಚಿಯನ್ನರದ್ದು ‘ಬಿಳಿ ಭಯೋತ್ಪಾದನೆ’ ಎಂದು ಕರೆದಿದ್ದಾರೆ. ಹಾಗಾಗಿ, ಅವರ ನೇಮಕವನ್ನು ರದ್ದುಗೊಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ವಕೀಲರ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಎಂಡಿಎಂಕೆ ಪಕ್ಷವೂ ನೇಮಕಕ್ಕೆ ತಡೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ: ಅದಾನಿ ಷೇರು ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್ ಸ್ಥಾಪಕ ನಾಥನ್ ಆ್ಯಂಡರ್ಸನ್ ಯಾರು?
ಸುಪ್ರೀಂ ಕೋರ್ಟ್ ಹೇಳಿದ್ದೇನು?
ವಿಕ್ಟೋರಿಯಾ ಗೌರಿ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ವಿಕ್ಟೋರಿಯಾ ಗೌರಿ ಅವರು ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಅನುಭವ, ವೃತ್ತಿ ಚಾಣಾಕ್ಷತನ ಸೇರಿ ಕೊಲಿಜಿಯಂ ಮಾನದಂಡಗಳನ್ನು ಆಧರಿಸಿ ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ. ‘ಅರ್ಹತೆ’ ಮಾನದಂಡದ ಮೇಲೆ ನೇಮಕವಾದ ಬಳಿಕ ಅವರ ‘ಮಾನ್ಯತೆ’ ಕುರಿತು ತೀರ್ಮಾನಿಸಲು ಆಗುವುದಿಲ್ಲ. ಹಾಗಾಗಿ, ನೇಮಕ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ದೇಶದ ಏಕತೆ ಎತ್ತಿಹಿಡಿಯುವ ಪ್ರತಿಜ್ಞೆ
ವಿಕ್ಟೋರಿಯಾ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ “ದೇಶದ ಏಕತೆಯನ್ನು ಎತ್ತಿಹಿಡಿಯುತ್ತೇನೆ” ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರನ್ನೂ ಸ್ಮರಿಸಿದ ಅವರು, “ಜಡ್ಜ್ ಆಗಿ ನನ್ನ ಮಹೋನ್ನತ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ದೇಶದ ವೈವಿಧ್ಯತೆಯನ್ನು ಎತ್ತಿಹಿಡಿದು, ಏಕತೆಯನ್ನು ಮೆರೆಯುತ್ತೇನೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ. ಮಾನವೀಯತೆಯ ನೆಲೆಗಟ್ಟಿನಲ್ಲಿ, ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯಭಾರ ನಿಭಾಯಿಸುತ್ತೇನೆ” ಎಂದು ಪ್ರತಿಜ್ಞೆಗೈದು ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.