15ನೇ ಶತಮಾನದವರೆಗೂ ಬ್ರಿಟನ್‌ನಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಕಾಣಲು ಸಾಧ್ಯವಿರಲಿಲ್ಲ. ಈಗ ಇಡೀ ಬ್ರಿಟನ್‌ನಲ್ಲಿ ಕ್ರಿಶ್ಚಿಯನ್ ನಂತರ ಅತಿ ದೊಡ್ಡ ಮತವೆಂದರೆ ಇಸ್ಲಾಂ. 19ನೇ ಶತಮಾನದ ವೇಳೆಗೆ ಬ್ರಿಟನ್‌ನಲ್ಲಿ ಇಸ್ಲಾಂ ಕುರಿತು ಸಮಾಜದ ಎಲೈಟ್ ವರ್ಗಕ್ಕೆ ಆಸಕ್ತಿ ಮೂಡಲು ಆರಂಭವಾಯಿತು. ಪ್ರಮುಖ ಅಧಿಕಾರಿಗಳು, ಲೇಖಕರು, ಕತೆಗಾರರು ಮತಾಂತರವಾದರು. ಅದರಲ್ಲೂ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರ ಕಾರಣಕ್ಕೆ ಬ್ರಿಟನ್‌ಗೆ ಸಾಕಷ್ಟು ಪ್ರಮಾಣದ ಮುಸ್ಲಿಮರು ತೆರಳಿದರು. ಆಗಿನ ಪೂರ್ಣ ಭಾರತದಿಂದ ತೆರಳಿದ್ದವರು, 1947ರಲ್ಲಿ ದೇಶ ವಿಭಜನೆಯಾದ ನಂತರ ವಾಪಸಾಗಲಿಲ್ಲ, ಅಲ್ಲಿಯೇ ಉಳಿದರು. ಹೀಗಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಬ್ರಿಟನ್‌ನಲ್ಲಿದ್ದಾರೆ. ಬ್ರಿಟನ್‌ನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಯಿತು ಎನ್ನುವುದು ಆಕ್ಷೇಪವಲ್ಲ. ಅದರಲ್ಲಿ ತಪ್ಪೂ ಇಲ್ಲ. ಆದರೆ 2019ರಲ್ಲಿ ಒಂದು ಸಮೀಕ್ಷೆ ಅಲ್ಲಿ ನಡೆದಿತ್ತು. ಹೋಪ್ ನಾಟ್ ಹೇಟ್ ಎಂಬ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ, ದೇಶದ ಮೂರನೇ ಒಂದು ಭಾಗದ ಜನರು, ಬ್ರಿಟನ್ ಸಂಸ್ಕೃತಿಗೆ ಇಸ್ಲಾಂ ಮಾರಕ ಎಂದು ಭಾವಿಸಿದ್ದರು ಎನ್ನುವುದು ಸಮೀಕ್ಷೆಯ ಸಾರಾಂಶ.
2022ರಲ್ಲಿ ಬರ್ಮಿಂಗ್ ಹ್ಯಾಂ ವಿವಿಯ ಸಂಶೋಧಕರು ನಡೆಸಿದ್ದ ಸಮೀಕ್ಷೆಯಲ್ಲಿ, ದೇಶದ ಶೇ.25.9 ಜನರು ಇಸ್ಲಾಂ ಕುರಿತು ನಕಾರಾತ್ಮಕ ಭಾವನೆಯನ್ನು ಹೊಂದಿದ್ದರು. ಈ ಸಮೀಕ್ಷೆಗಳು ಸಂಪೂರ್ಣ ಸತ್ಯ ಎಂದು ಹೇಳುವುದಿಲ್ಲ. ಇಂತಹ ಅನೇಕ ಸಮೀಕ್ಷೆಗಳು ನಡೆದಿವೆ, ನಡೆಯುತ್ತಿರುತ್ತವೆ. ಅವುಗಳ ಅಂಕಿ ಸಂಖ್ಯೆಗಳು ವ್ಯತ್ಯಾಸ ಆಗಬಹುದು. ಆದರೆ ಒಟ್ಟಾರೆಯಾಗಿ ಅಭಿಪ್ರಾಯ ಸಮಾನವಾಗಿದೆ. ಇಸ್ಲಾಂ ಮೂಲಭೂತವಾದಕ್ಕೆ ಅಲ್ಲಿನ ಸರ್ಕಾರಗಳು ಬೆಂಬಲ ನೀಡಿದ್ದರಿಂದ ಇಂದು ಇಡೀ ದೇಶ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಎಂದು ವಿಭಜನೆಯಾಗುವ ಹಂತ ತಲುಪಿದೆ. ಅಲ್ಲಿನ ಜನರಿಗೆ ಇಸ್ಲಾಂ ಕಂಡರೆ ಪ್ರೀತಿ ಹುಟ್ಟುತ್ತಿಲ್ಲ. ಮುಸ್ಲಿಂ ಸಮುದಾಯದ ಆಚರಣೆಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ತಿಳಿಸದೆಯೇ ವೋಟಿನ ಆಸೆಗಾಗಿ ಪೋಷಿಸಿಕೊಂಡು ಬಂದ ಅನೇಕ ದೇಶಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಮುಸ್ಲಿಂ ಮೂಲಭೂತವಾದ ಮಾತ್ರವಲ್ಲ, ಖಲಿಸ್ತಾನಿಗಳನ್ನು ಬೆಂಬಲಿಸುತ್ತ ಬಂದ ಬ್ರಿಟನ್‌ನಲ್ಲಿ ಸಮಸ್ಯೆ ಉಂಟು ಮಾಡಿದೆ. ಕೆನಡಾದಲ್ಲೂ ಇದೇ ಸಮಸ್ಯೆ ಎದುರಾಗಿದೆ.
ಇದೀಗ ವೋಟಿನ ಆಸೆಗೆ ಭಾರತದಲ್ಲಿ ಅನೇಕ ಕಾಂಗ್ರೆಸಿಗರು ಪಿಎಫ್ಐನಂತಹ ಸಂಘಟನೆಗಳನ್ನು ಬೆಂಬಲಿಸುತ್ತಿದ್ದಾರೆ. ವಿದೇಶಿ ಪ್ರಭಾವದ ಶಿಕ್ಷಣ ಪಡೆದ, ನಮ್ಮ ದೇಶದ ಬುದ್ಧಿಜೀವಿಗಳು ಎನಿಸಿಕೊಂಡವರು ಇಸ್ಲಾಮಿಕ್ ಮೂಲಭೂತವಾದವನ್ನು ಚಾಪೆ ಕೆಳಗೆ ಬಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಅದು ತಮ್ಮ ಕಣ್ಣಿಗೆ ಬಿದ್ದೇ ಇಲ್ಲ ಎಂದು ಒಮ್ಮೆ ಹೇಳಿದರೆ, ಹಿಂದುತ್ವದಲ್ಲಿ ದಲಿತರನ್ನು ಶೋಷಣೆ ಮಾಡುತ್ತಿರುವುದಕ್ಕಿಂತಲೂ ಈ ಮೂಲಭೂತವಾದ ಅಪಾಯವಲ್ಲ ಎಂಬ ಸಮಜಾಯಿಶಿ ನೀಡುತ್ತಾರೆ.
ಆದರೆ ನಿಜಕ್ಕೂ ಸಂತೋಷದ ಸಂಗತಿ ಏನೆಂದರೆ ಭಾರತದಲ್ಲಿ ಮುಸ್ಲಿಮರು ಬದಲಾಗುತ್ತಿದ್ದಾರೆ. ಅದಕ್ಕೆ, ಇತ್ತೀಚೆಗೆ ಜುಲೈಯಲ್ಲಿ ಉದಯಪುರದಲ್ಲಿ ಟೇಲರ್ ಹತ್ಯೆ ನಂತರದ ಪ್ರತಿಕ್ರಿಯೆಗಳೇ ಉದಾಹರಣೆ. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ನೀಡಿದ ಹೇಳಿಕೆಯಿಂದ ಕೆರಳಿದ ಕೆಲ ಮುಸ್ಲಿಂ ಮೂಲಭೂತವಾದಿಗಳು, ಆ ಹೇಳಿಕೆಯನ್ನು ಬೆಂಬಲಿಸಿದ್ದ ಉದಯಪುರದ ಟೇಲರ್ ಕನ್ಹಯ್ಯ ಲಾಲ್‌ನನ್ನು ಕತ್ತು ಸೀಳಿ ಹತ್ಯೆ ಮಾಡಿದ್ದರು. ಸಾಮಾನ್ಯವಾಗಿ ಇಂತಹ ಕೃತ್ಯಗಳಾದಾಗ ಭಾರತದ ಮುಸ್ಲಿಂ ಮುಖಂಡರು ಮೌನಕ್ಕೆ ಶರಣಾಗುತ್ತಿದ್ದರು. ಆದರೆ ಉದಯಪುರದ ಟೇಲರ್ ಹತ್ಯೆ ನಂತರ ಬರೇಲಿಯ ಬರೆಲ್ವಿ ಉಲೇಮಾ ಮುಸ್ಲಿಮರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಟೇಲರ್‌ನನ್ನು ಹತ್ಯೆ ಮಾಡಿದವರು ಶರಿಯಾ ನಿಯಮದ ಪ್ರಕಾರ ಕ್ರಿಮಿನಲ್‌ಗಳು ಎಂದು ಜರಿದು, ಈ ಕುರಿತು ಫತ್ವಾವನ್ನೂ ಹೊರಡಿಸಿದರು. ಭಾರತದ ಮೂಲವನ್ನೇ ಹೊಂದಿರುವ ಈ ಸಮುದಾಯದ ಜನರು, ಇಲ್ಲಿನ ಜನರೊಂದಿಗೆ ಸಹಬಾಳ್ವೆಯನ್ನು ನಡೆಸಲು ಬಯಸುತ್ತಾರೆ ಎನ್ನುವಂತೆ ತೋರಿತು ಅವರ ಸಹಸ್ಪಂದನೆ. ಆದರೆ ಇದಕ್ಕೆ ಆ ಸಮುದಾಯದ ಮುಖಂಡರು, ಪ್ರಮುಖವಾಗಿ ತಮ್ಮ ವೋಟಿನ ಆಸೆಗೆ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ರಾಜಕಾರಣಿಗಳು ಅವಕಾಶ ನೀಡಬೇಕು.
ಹಿಂದುತ್ವದಲ್ಲೇ ಅಡಗಿದೆ ಸ್ವಾತಂತ್ರ್ಯ
ಇಡೀ ವಿಶ್ವದಲ್ಲಿ ಹಿಂದುತ್ವ ಎಂದು ಈಗ ಕರೆಯುತ್ತಿರುವ, ಈ ಹೆಸರು ಬರುವುದಕ್ಕೂ ಮುಂಚಿನಿಂದಲೇ ಭಾರತದಲ್ಲಿ ಜೀವಂತವಾಗಿರುವ ಸಂಸ್ಕೃತಿ, ಸನಾತನ ಧರ್ಮ. ಈ ಸನಾತನ ಧರ್ಮ ಎಷ್ಟು ಹಳೆಯದ್ದೋ, ಅಷ್ಟೇ ವಿನೂತನವಾದದ್ದು. ಈ ಧರ್ಮ ತನ್ನ ಆಚಾರ, ವಿಚಾರ, ನಡವಳಿಕೆಗಳಲ್ಲಿ ಮಾಡಿಕೊಂಡಷ್ಟು ಕಾಲಾನುಕೂಲ ಬದಲಾವಣೆಗಳನ್ನು ವಿಶ್ವದ ಇನ್ನಾವ ಮತ ಧರ್ಮ ನಂಬಿಕೆಯೂ ಮಾಡಿಕೊಂಡಿಲ್ಲ. ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಡುವ, ಮುಂದೆ ಅಂತಹದ್ದು ಆಗಬಾರದೆಂದು ಕಾಳಜಿ ವಹಿಸುವ ಧರ್ಮ ಮತ್ತೊಂದಿಲ್ಲ.
ಅನೇಕ ಬಾರಿ ಹೇಳಿರುವ, ಕ್ಲೀಷೆ ಎನಿಸುವ ನುಡಿ ಎಂದರೆ, ಇಡೀ ಹಿಂದು ಧರ್ಮದ ನಂಬಿಕೆಯನ್ನೇ ಪ್ರಶ್ನೆ ಮಾಡುತ್ತಿದ್ದ ಚಾರ್ವಾಕನನ್ನೂ ಮುನಿ, ಋಷಿ ಎಂದು ಕರೆದದ್ದು ಹಿಂದು ಧರ್ಮ. ಇಲ್ಲಿ ಅಭಿಪ್ರಾಯ ಭೇದಗಳಿಗೆ ವಿರೋಧವಿಲ್ಲ. ತನ್ನ ವಿಚಾರವನ್ನು ಕಡುವಾಗಿ ದ್ವೇಷಿಸುವ ವ್ಯಕ್ತಿಯನ್ನೂ, ಆ ವಿಚಾರದ ಹೊರತಾಗಿ ಸ್ನೇಹಿತನನ್ನಾಗಿ ಕಾಣಲಾಗುತ್ತದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶವನ್ನು ಒಡೆಯುವ ಮಾತನಾಡುತ್ತಿರುವವರು ತಿಳಿಯಬೇಕಾಗಿರುವುದು, ಇಲ್ಲಿ ತಾವು ಆಡುತ್ತಿರುವ ಮಾತುಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು 1947ರಲ್ಲಿ ಅಲ್ಲ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಆಚಾರ ವಿಚಾರದ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ ಎನ್ನುವುದು ಭಾರತದ ಮೂಲದಲ್ಲೇ ಇದೆ.
ಭಾರತೀಯ ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರು ಇದೇ ಅಂಶಗಳನ್ನು ಸಂವಿಧಾನದಲ್ಲಿ ಪ್ರಜ್ಞಾಪೂರ್ವಕವಾಗಿ ಸೇರಿಸಿ, ಅದಕ್ಕೆ ಕಾನೂನಿನ ಮಾನ್ಯತೆ ನೀಡಿದರು. ಭಾರತೀಯ ಸಂವಿಧಾನ ಇನ್ನೇನು ರಚನೆಯ ಅಂತಿಮ ಹಂತಲ್ಲಿದ್ದಾಗ, ಇದನ್ನು ಕೇವಲ ಅಕ್ಷರ ರೂಪದಲ್ಲಿ ನೀಡಬೇಕೆ ಅಥವಾ ಇದರಲ್ಲಿ ಭಾರತೀಯ ಸಂಸ್ಕೃತಿಯ ಅಂಶಗಳನ್ನು ಸೇರಿಸಬೇಕೆ ಎಂದು ಚರ್ಚೆ ಮಾಡಲಾಯಿತು. ಅದರಲ್ಲಿ ಬಂಗಾಳದ ಶಾಂತಿನಿಕೇತನದ ಕಲಾವಿದರಾದ ನಂದಲಾಲ್ ಬೋಸ್ ಅವರ ನೇತೃತ್ವದಲ್ಲಿ ರಾಮ, ಕೃಷ್ಣ, ನಟರಾಜ, ಬುದ್ಧ ಸೇರಿ ಎಲ್ಲರ ವಿಚಾರಗಳನ್ನೂ ಚಿತ್ರಿಸಲಾಯಿತು. ಪುರಾಣ ಪುರುಷರ ನಂತರದಲ್ಲಿ ಗಾಂಧೀಜಿ, ಸುಭಾಷ್ಚಂದ್ರ ಬೋಸರನ್ನೂ ಇದರಲ್ಲಿ ಚಿತ್ರಿಸಲಾಗಿದೆ. ಈ ಎಲ್ಲ ಮಹನೀಯರ ಆದರ್ಶಗಳೂ ಸಂವಿಧಾನದಲ್ಲಿ ಅಡಕವಾಗಿವೆ ಎನ್ನುವುದನ್ನು ಈ ಮೂಲಕ ತಿಳಿಸಲಾಯಿತು.
ಪಿಎಫ್ಐನಂತಹ ಸಂಘಟನೆಗಳನ್ನು, ಹಿಂದು ದೇವಾನುದೇವತೆಯರನ್ನು ಹೀಯಾಳಿಸುವ ಕ್ರೈಸ್ತ ಮಿಷನರಿಗಳನ್ನು ಬೆಂಬಲಿಸುವ ರಾಜಕಾರಣಿಗಳಾಗಲಿ, ಬುದ್ಧಿಜೀವಿ ಎನಿಸಿಕೊಂಡವರಾಗಲಿ- ಎಲ್ಲರೂ ಒಂದು ಮಾತನ್ನು ನೆನಪಿಡಲೇಬೇಕು. ಈ ದೇಶದಲ್ಲಿ ಹಿಂದುತ್ವ, ಹಿಂದು ಸಂಸ್ಕೃತಿ ಎಲ್ಲಿಯವರೆಗೂ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಮಾತ್ರವೇ ತಾವು ಈಗ ಕೇಳುತ್ತಿರುವ, ಹೇಳುತ್ತಿರುವ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಜೀವಂತವಾಗಿರುತ್ತದೆ. ಅಗತ್ಯ ಎನಿಸಿದಾಗಲೆಲ್ಲ ಹಿಂದುತ್ವವನ್ನು ವಿಮರ್ಶಿಸುವ ಮೂಲಕ ಅದರಲ್ಲಿನ ದೋಷವನ್ನು ಸರಿಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಹಾಗೆಯೇ, ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು ಕೂಡ ತಮ್ಮ ಧರ್ಮದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಮುಂದಾಗುವ ಛಾತಿ ತೋರಬೇಕು.
‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಅಂದರೆ ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎನ್ನುವುದೇ ಹಿಂದು ಧರ್ಮ. ಒಳಗಿದ್ದು ಟೀಕಿಸಿದವರನ್ನು, ಪ್ರೀತಿಯಿಂದ ಚಾಟಿ ಬೀಸಿದವರನ್ನು, ದೋಷ ಸರಿಪಡಿಸುವ ಚಿಕಿತ್ಸಕ ದೃಷ್ಟಿಯಿಂದ ತೆಗಳಿದವರನ್ನೂ ಈ ಧರ್ಮ, ದೇಶ ಎಂದಿಗೂ ಗೌರವಿಸಿದೆ. ಆದರೆ, ಭೂತಕೋಲ ಹಿಂದುತ್ವಕ್ಕೆ ಸಂಬಂಧಿಸಿದ್ದಲ್ಲ ಎನ್ನುವ ಚೇತನ್ ಅಹಿಂಸಾ ಎಂಬಂತಹ ಹೊಣೆಗೇಡಿಗಳು, ಹಿಂದು ಧರ್ಮದಲ್ಲಿರುವ ಅಸ್ಪೃಶ್ಯತೆಯನ್ನು ಮುಚ್ಚಿಹಾಕಲು 20ನೇ ಶತಮಾನದಲ್ಲಿ ಹಿಂದುತ್ವವನ್ನು ಸೃಜನೆ ಮಾಡಲಾಯಿತು ಎನ್ನುವ ದೆಹಲಿ ಐಐಟಿ ಪ್ರೊಫೆಸರ್ ದಿವ್ಯಾ ದ್ವಿವೇದಿಯಂಥವರು, ಕಮಲ್ ಹಾಸನ್‌ನಂಥ ಪ್ರಬುದ್ಧ ನಟ ಹಾಗೂ ಅಪ್ರಬುದ್ಧ ಇತಿಹಾಸಕಾರರನ್ನು ಒಪ್ಪುವುದಿಲ್ಲ. ಇಂತಹ ʼಭಾರತ ಭಂಜಕರುʼ (Breaking India Forces) ನಮ್ಮನ್ನು ದಾರಿ ತಪ್ಪಿಸದಿರಲಿ. ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ಸರಿತಪ್ಪುಗಳನ್ನು ವಿವೇಚಿಸುವ, ದೇಶದ ಒಳಿತಿಗಾಗಿ ಚಿಂತನೆ ನಡೆಸುವ ಸದ್ಬುದ್ಧಿಯ ಬೆಳಕು ದೇಶದ ಎಲ್ಲ ಜನರಿಗೂ ಲಭಿಸಲಿ ಎಂದು ಎಲ್ಲರೂ ಆಶಿಸೋಣ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಪಿಎಫ್ಐ ಜತೆಗೆ ಆರ್‌ಎಸ್ಎಸ್ ಬ್ಯಾನ್ ಆಗಲಿ ಎನ್ನುವ ಕಾಂಗ್ರೆಸ್ ಈ ಸತ್ಯವನ್ನು ಅರಿಯಲಿ