ಕಥೆಯನ್ನು ಅನೇಕ ಬಾರಿ ಕೇಳಿರಬಹುದು, ಕೆಲವರು ಕೇಳಿಲ್ಲದೆಯೂ ಇರಬಹುದು. ಆದರೂ ದೇಶದ ಇಂದಿನ ಇಂದಿನ ರಾಜಕೀಯ ಸನ್ನಿವೇಶಕ್ಕೆ ಹಾಗೂ ಕಾಂಗ್ರೆಸ್‌ನ ರಾಹುಲ್ ಗಾಂಧಿ ಮಾಡುತ್ತಿರುವ ಎಡವಟ್ಟನ್ನು ಖಂಡಿಸಲು ಅನಿವಾರ್ಯತೆ ಇರುವುದರಿಂದ ಮತ್ತೊಮ್ಮೆ ಹೇಳುವೆ..
‘ಪಗಡೆ ಆಟದಲ್ಲಿ ಪಾಂಡವರನ್ನು ಸೋಲಿಸಿದ ನಂತರ, ಕೌರವರು ಅವರನ್ನು 12 ವರ್ಷಗಳ ಕಾಲ ಕಾಡಿನಲ್ಲಿ ವನವಾಸಕ್ಕೆ ಮತ್ತು ಹೆಚ್ಚುವರಿ ಒಂದು ವರ್ಷ ಅಜ್ಞಾತವಾಸಕ್ಕೆ ಕಳಿಸಿದರು. ಪಾಂಡವರು ವನವಾಸದಲ್ಲಿದ್ದಾಗ ಕೌರವರು ತಮ್ಮ ಕುಟುಂಬ ಸದಸ್ಯರೊಂದಿಗೆ ಪಾಂಡವರು ವಾಸಿಸುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದರು. ತಾವು ಎಷ್ಟು ಚೆನ್ನಾಗಿದ್ದೆವೆ, ನೀವೆಷ್ಟು ಕೀಳು ಜೀವನ ನಡೆಸುತ್ತಿದ್ದೀರ ಎಂದು ಪಾಂಡವರನ್ನು ಗೇಲಿ ಮಾಡಿದರು. ತನ್ನ ಕುಟುಂಬದ ಸದಸ್ಯರೊಂದಿಗೆ ಒಮ್ಮೆ ದುರ್ಯೋಧನ, ಕಾಡಿನಲ್ಲಿರುವ ಸರೋವರಕ್ಕೆ ತೆರಳಿದ. ಆ ಸಮಯದಲ್ಲಿ ಚಿತ್ರಸೇನ ಎಂಬ ಗಂಧರ್ವ ತನ್ನ ಸಖಿಯರೊಂದಿಗೆ ಜಲ ಕ್ರೀಡೆಗಳನ್ನು ಆನಂದಿಸುತ್ತಿದ್ದ. ದುರ್ಯೋಧನನನ್ನು ಕಂಡ ಗಂಧರ್ವ, ಸರೋವರಕ್ಕೆ ಬರಬೇಡ ಎಂದ. ಈ ಆಕ್ಷೇಪದಿಂದ ದುಶ್ಶಾಸನ ಕೋಪಗೊಂಡ. ಕೋಪದಲ್ಲಿ ಅವನು ಗಂಧರ್ವರಿಗೆ ಯುದ್ಧಕ್ಕೆ ಸವಾಲು ಹಾಕಿದ. ಎರಡು ಪಕ್ಷಗಳ ನಡುವೆ ಘೋರ ಯುದ್ಧ ನಡೆದು ಗಂಧರ್ವರದ್ದೇ ಮೇಲುಗೈ ಆಯಿತು. ಗಂಧರ್ವರು ಕೌರವರನ್ನು ಸೋಲಿಸಿದರು. ಕೌರವರು ಗಂಧರ್ವರ ಮುಂದೆ ಶೋಚನೀಯ ಸ್ಥಿತಿಯಲ್ಲಿದ್ದರು. ತಮ್ಮ ಉಳಿವು ಕಷ್ಟ ಎಂದು ಅರಿತ ಕೌರವರ 4-5 ಸೈನಿಕರು ಹೇಗೋ ತಪ್ಪಿಸಿಕೊಂಡು ಪಾಂಡವರು ಬೀಡುಬಿಟ್ಟಿದ್ದ ಕಾಡನ್ನು ತಲುಪಿದರು. ಅವರು ಯುಧಿಷ್ಠಿರನನ್ನು ಸಂಪರ್ಕಿಸಿದರು. ಅವರ ಕಾಲಿಗೆ ಬಿದ್ದು ಕುರು ಮನೆತನದ ಗೌರವ ಕಾಪಾಡುವಂತೆ ಮನವಿ ಮಾಡಿದರು.
ಇದನ್ನು ಕೇಳಿದ ಭೀಮ “ನಾವು ಈಗ ಏನನ್ನೂ ಮಾಡುವುದಿಲ್ಲ. ಗಂಧರ್ವರ ಕೈಯಲ್ಲಿ ಕೌರವರೆಲ್ಲ ನಾಶವಾಗಲಿ. ಕಂಟಕವಾಗಿರುವ ಕೌರವರು ನಿರ್ಮೂಲನೆಗೆ ಅರ್ಹರು. ನಾವೀಗ ಸುಮ್ಮನಿದ್ದರೆ ಯಾವುದೇ ಪ್ರಯತ್ನವಿಲ್ಲದೆ ಇವರನ್ನು ನಾಶ ಮಾಡಬಹುದು” ಎಂದ. ಆದರೆ ಭೀಮನ ಈ ಅಭಿಪ್ರಾಯ ಯುಧಿಷ್ಠಿರನಿಗೆ ಸಮ್ಮತವಾಗಲಿಲ್ಲ. “ನಾವು ನಮ್ಮೊಳಗೆ ಹೋರಾಡುವಾಗ ನಾವು ಐವರು ಪಾಂಡವರು ಹಾಗೂ ನೂರು ಕೌರವರ ವಿರುದ್ಧ ಹೋರಾಡುವುದು ಸರಿ. ಆದರೆ ಹೊರಗಿನವರ ಜತೆ ಹೋರಾಡುವ ವಿಷಯವಾದಾಗ, ನಾವು ಒಟ್ಟು 105 ಜನರು (ವಯಂ ಪಂಚಾಧಿಕಂ ಶತಂ)” ಎಂದು ಹೇಳುತ್ತಾನೆ. ಆಗ ಎಲ್ಲ ಪಾಂಡವರೂ ಸರೋವರದ ಬಳಿ ತೆರಳಿ ಗಂಧರ್ವರ ವಿರುದ್ಧ ಹೋರಾಡಿ ಕೌರವರನ್ನು ರಕ್ಷಿಸುತ್ತಾರೆ.
ಕೆಲ ತಿಂಗಳ ಹಿಂದಷ್ಟೆ ಅಂದರೆ ಮಾರ್ಚಿಯಲ್ಲಿ ವಿದೇಶಕ್ಕೆ ತೆರಳಿದ್ದ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದರು. ಸಂವಿಧಾನದ ಮೂಲ ಸ್ವರೂಪದ ಮೇಲೆ ದಾಳಿ ಆಗುತ್ತಿದೆ ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ 10 ದಿನಗಳ ಅಮೆರಿಕ ಭೇಟಿ ನಡೆಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಸಂವಾದವೊಂದರಲ್ಲಿ ಮಾತನಾಡುತ್ತ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. “ಮುಸ್ಲಿಮರು ಮಾತ್ರವಲ್ಲ, ಸಿಖ್, ಕ್ರೈಸ್ತ, ದಲಿತ ಹಾಗೂ ಆದಿವಾಸಿಗಳೂ ತಮ್ಮ ಮೇಲೆ ದಾಳಿಯಾಗುತ್ತಿದೆ ಎಂದು ಭಾವಿಸುತ್ತಿದ್ದಾರೆ. 1980ರ ದಶಕದಲ್ಲಿ ಭಾರತದಲ್ಲಿ ದಲಿತರಿಗಿದ್ದ ಸ್ಥಿತಿಯೇ ಇಂದು ಭಾರತದಲ್ಲಿ ಮುಸ್ಲಿಮರದ್ದಾಗಿದೆ” ಎಂದಿದ್ದಾರೆ. ಮಾತು ಎಷ್ಟು ಸತ್ಯ ಎನ್ನುವುದೇ ಮೊದಲನೆಯದಾಗಿ ಪ್ರಶ್ನಾರ್ಥಕ.
ಭಾರತ ದೇಶದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳು ಎಂತಹದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಕೆರೆಯ ನೀರು ಕುಡಿಯಲು ನೀಡಿದ ಕಿರುಕುಳ, ಕೇರಳದಂತಹ ರಾಜ್ಯದಲ್ಲಿ ದಲಿತರ ನೆರಳನ್ನೂ ತುಳಿಯದಷ್ಟು ಅಸಹನೆ, ಕರ್ನಾಟಕದ ಕಂಬಾಲಪಲ್ಲಿ ಸೇರಿ ಅನೇಕ ಕಡೆ ದಲಿತರ ಹತ್ಯೆಗಳು ಎಷ್ಟೆಲ್ಲಾ ನಡೆದವು. ಸ್ವತಃ ಡಾ. ಬಿ.ಆರ್. ಅಂಬೇಡ್ಕರ್ ಅವರು ಬಾಲ್ಯದಲ್ಲಿ ಹಾಗೂ ವಿದ್ಯಾವಂತನಾಗಿ ವಿದೇಶದಿಂದ ವಾಪಸಾದ ನಂತರವೂ ಅನುಭವಿಸಿದ ಕಿರುಕುಳ ಯಾವುದೇ ಮಾನವ ಸಮಾಜಕ್ಕೆ ಅಪಮಾನಕರ. ಈ ವಿಚಾರವನ್ನು ಹಿಂದೂ ಸಮಾಜ ಎಂದಿಗೂ ಮುಚ್ಚಿಟ್ಟಿಲ್ಲ. ಹಿಂದೆ ಆದಂತಹ ತಪ್ಪುಗಳು ಮುಂದೆ ಆಗದಂತೆ ಸುಧಾರಣೆ ಮಾಡಿಕೊಳ್ಳುವತ್ತ ಹಿಂದುಗಳು ಎಂದೂ ಹಿಂದೆ ಬಿದ್ದಿಲ್ಲ. ಆದರೆ ಇಷ್ಟೆಲ್ಲ ಹೀನಕೃತ್ಯಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈಗ ಭಾರತದಲ್ಲಿ ನಡೆಯುತ್ತಿದೆಯೇ? ಉತ್ತರ ಪ್ರದೇಶದ ದಾದ್ರಿಯಲ್ಲಿ ಅಖ್ಲಾಖ್ ಎಂಬ ಮುಸ್ಲಿಮನನ್ನು ಹಿಂದೂಗಳು ಹತ್ಯೆ ಮಾಡಿದರು ಎಂಬ 2015ರ ಘಟನೆಯನ್ನು ಮುಂದಿಟ್ಟುಕೊಂಡು ಉದಾಹರಣೆ ನೀಡಲಾಗುತ್ತಿದೆ. ಹಾಗಾದರೆ ಬಿಜೆಪಿಯ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಎಂಬ ಒಂದೇ ಕಾರಣಕ್ಕೆ ಉದಯಪುರದ ದರ್ಜಿಯ ಕತ್ತು ಕೊಯ್ದದ್ದು ಸತ್ಯವಲ್ಲವೇ? ಎರಡೂ ಕಡೆ ನಡೆಯುವ ಇಂತಹ ಘಟನೆಗಳನ್ನು ಸಹಿಸುವುದು ಅಸಾಧ್ಯ. ಆದರೆ ಇಂತಹ ದುರ್ಘಟನೆಗಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ನಡೆಯುತ್ತವೆಯೇ ವಿನಃ ಇಡೀ ದೇಶದಲ್ಲಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ಹಿಂಸೆ ಮಾಡಲಾಗುತ್ತಿದೆ ಎನ್ನಲು ಯಾವುದಾದರೂ ಪುರಾವೆ ಬೇಕಲ್ಲವೇ? ಹಾಗಾದರೆ ಇದನ್ನು ಪ್ರಶ್ನಿಸಲು ನ್ಯಾಯಾಂಗ ಇಲ್ಲವೇ? ಸಂವಿಧಾನ ಇಲ್ಲವೇ? ಇಡೀ ದೇಶದ ಬೌದ್ಧಿಕ ವರ್ಗ, ಮಾಧ್ಯಮವಷ್ಟೇ ಅಲ್ಲದೆ ನ್ಯಾಯಾಂಗವನ್ನೂ ನಿಯಂತ್ರಣದಲ್ಲಿ ಇರಿಸಿಕೊಳ್ಳುವಷ್ಟು ಈಗಿನ ಸರ್ಕಾರ ಶಕ್ತಿಯುತವಾಗಿದೆಯೇ ಎಂದೂ ಪ್ರಶ್ನಿಸಬೇಕಾಗುತ್ತದೆ. 1975ರಲ್ಲಿ ಇಂದಿರಾ ಗಾಂಧಿ ತುರ್ತು ಸ್ಥಿತಿ ಹೇರಿದಾಗಲೂ ದೇಶವು ಎದೆಗುಂದದೆ ಹೋರಾಡಿ ಗೆದ್ದಿದೆ. ಅಂತಹ ದೇಶವನ್ನು ಒಂದು ಸರ್ಕಾರ ಮಣಿಸಿಬಿಡುತ್ತದೆ ಎಂದು ಸಾರಾಸಗಟಾಗಿ ಹೇಳುವುದು ಇಲ್ಲಿನ 140 ಕೋಟಿ ಜನರಿಗೆ ಮಾಡುವ ಅಪಮಾನ.
ಅಷ್ಟಕ್ಕೂ ಇಂತಹ ಘಟನೆ ನಡೆದಿದೆ ಎಂದರೆ ಎಲ್ಲಿ ಚರ್ಚಿಸಬೇಕು? ಸಂಸತ್ತಿನಲ್ಲಿ ಅಲ್ಲವೇ? ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ನರೇಂದ್ರ ಮೋದಿ ವಿರುದ್ಧ ದಾಳಿ ಮಾಡುವ ಭರದಲ್ಲಿ ‘ಮೋದಿʼ ಎಂಬ ಸರ್ ನೇಮ್ ವಿರುದ್ಧ ನಾಲಗೆ ಹರಿಬಿಟ್ಟವರು ರಾಹುಲ್ ಗಾಂಧಿ. ಒಬ್ಬ ವ್ಯಕ್ತಿಯನ್ನು ತೆಗಳುವ ಭರದಲ್ಲಿ ಒಂದಿಡೀ ಜನಾಂಗವನ್ನೇ ತೆಗಳುವ ಅಸಾಂವಿಧಾನಿಕ ಕೃತ್ಯಕ್ಕೆ ಇದೀಗ ತಮ್ಮ ಸಂಸತ್ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ. ತಮ್ಮನ್ನು ಸಂಸತ್ತಿನಿಂದ ಹೊರಹಾಕಿದ್ದನ್ನೇ ಏನೋ ಘೋರ ಅಪರಾಧ ಎಂಬಂತೆ, ತಾನು ಹುತಾತ್ಮ ಎಂಬಂತೆ ಮಾತನಾಡುವ ರಾಹುಲ್ ಗಾಂಧಿ, ಯಾವ ಕಾರಣಕ್ಕೆ ತಮ್ಮನ್ನು ಹೊರಹಾಕಲಾಯಿತು ಎನ್ನುವುದನ್ನು ಮಾತ್ರ ಎಲ್ಲಿಯೂ ಹೇಳುವುದಿಲ್ಲ. ಸಂಸತ್ತಿನಲ್ಲಿ ಚರ್ಚೆ ನಡೆಸುವ ಬದಲಿಗೆ ಗದ್ದಲ ಎಬ್ಬಿಸಿ ಸಂಸತ್ತಿನ ಕಾರ್ಯಕಲಾಪಕ್ಕೆ ಅಡ್ಡಿಪಡಿಸುವುದನ್ನು ಇಡೀ ದೇಶವೇ ನೋಡಿದೆ. ಈಗ ಸಂಸತ್ತಿನಿಂದ ಹೊರಗಿರುವ ಕಾರಣ, ವಿದೇಶಕ್ಕೆ ತೆರಳಿ ಭಾರತದ ಕುರಿತು ನಕಾರಾತ್ಮಕ ಅಂಶಗಳನ್ನೇ ಬಿಚ್ಚಿಡುತ್ತಿದ್ದಾರೆ.
ನರೇಂದ್ರ ಮೋದಿಯವರೂ ವಿದೇಶಕ್ಕೆ ತೆರಳುತ್ತಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಜನರು ನೀಡಿದ ಅಭೂತಪೂರ್ವ ಬೆಂಬಲವನ್ನು ಇಡೀ ವಿಶ್ವ ನೋಡಿ ಮೆಚ್ಚಿದೆ. ನರೇಂದ್ರ ಮೋದಿ ಯಾವಾಗಲೇ ವಿದೇಶ ಪ್ರವಾಸಕ್ಕೆ ತೆರಳಿದಾಗಲೂ ಭಾರತದ ಹಿರಿಮೆ, ಗರಿಮೆಯನ್ನೇ ಮಾತನಾಡುತ್ತಾರೆ. ಭಾರತೀಯರ ಕೊಡುಗೆ ಏನು? ಸಾಮರ್ಥ್ಯ ಏನು? ಎಂದು ಬೆಳಕು ಚೆಲ್ಲುತ್ತಾರೆ. ಎಲ್ಲಿಯೂ ಒಂದೂ ನಕಾರಾತ್ಮಕ ಅಂಶ ಇಲ್ಲ. ಆದರೆ ಈ ರಾಹುಲ್ ಗಾಂಧಿ ಮಾತ್ರ ಏಕೆ ಹೀಗೆ? ಮಾತೆತ್ತಿದರೆ ತಾನೊಬ್ಬ ಜನಿವಾರ ಧರಿಸುವ ಹಿಂದೂ ಎನ್ನುವ ರಾಹುಲ್ ಗಾಂಧಿಯವರಿಗೆ, ಮೇಲೆ ತಿಳಿಸಿದ ಮಹಾಭಾರತದ ಸಣ್ಣ ಕಥೆ ತಿಳಿದಿಲ್ಲವೇ? ಹಾಗೆ ನೋಡಿದರೆ, ಮುಸ್ಲಿಮರ ಕುರಿತು ಇದು ರಾಹುಲ್ ಗಾಂಧಿಯವರಿಗೆ ಮಾತ್ರವಲ್ಲ, ಕಾಂಗ್ರೆಸ್ ಪಕ್ಷಕ್ಕೇ ಸಮಸ್ಯೆ ಇದೆ.
ಭಾರತ ದೇಶ ಕಂಡ ಚಿಂತಕರಲ್ಲಿ ಸೀತಾರಾಮ್ ಗೋಯೆಲ್ ಅವರು ಪ್ರಮುಖರು. ಭಾರತದ ಇತಿಹಾಸವನ್ನು ತಿಳಿಸುವ ಜತೆಗೆ ಭಾರತದ ಮನೋಧರ್ಮ, ಇಲ್ಲಿನ ಜನರ ಮೇಲೆ ನಡೆದಿರುವ ಆಕ್ರಮಣ, ಅನ್ಯಾಯಗಳನ್ನು ನೆನಪಿಸುವ ಕೆಲಸವನ್ನು ಗೋಯೆಲ್ ಮನೋಜ್ಞವಾಗಿ ಮಾಡಿದವರು. ಅವರು ಪ್ರಕಟಿಸಿದ ವಾಯ್ಸ್ ಆಫ್ ಇಂಡಿಯಾ ಸರಣಿಯು ಭಾರತದ ಕುರಿತು ನಾವೀಗ ಹೊಂದಿರುವ ದೃಷ್ಟಿಕೋನವನ್ನೇ ಬದಲಾಯಿಸುವ ಸತ್ಯಸಂಗತಿಗಳನ್ನು ಹೊಂದಿದೆ.
ಸೀತಾರಾಮ್ ಗೋಯೆಲ್ ಅವರ ಅನೇಕ ಕೃತಿಗಳಲ್ಲಿ ” ಸೆಕ್ಯುಲರಿಸಂ: ರಾಷ್ಟ್ರದ್ರೋಹದ ಹೊಸ ಹೆಸರು” ಎಂಬ ಹಿಂದಿ ಪುಸ್ತಕ ಪ್ರಮುಖವಾದದ್ದು. ಇಲ್ಲಿ ಸೀತಾರಾಮ್ ಗೋಯೆಲ್ ಅವರು ಒಂದು ತಪ್ಪು ಮಾಡಿದ್ದರು. ಅದನ್ನು ಅವರು ಇಂಗ್ಲಿಷ್ ಭಾಷೆಗೆ ಈ ಪುಸ್ತಕ ಅನುವಾದಗೊಂಡಾಗ ಒಪ್ಪಿಕೊಂಡಿದ್ದಾರೆ. ಸೆಕ್ಯುಲರಿಸಂ ಅನ್ನೇ ತೆಗಳುತ್ತಿರುವಂತೆ ಹಿಂದಿ ಪುಸ್ತಕದ ಶೀರ್ಷಿಕೆ ಇತ್ತು. ಆದರೆ ಅವರು ಮೂಲ ಸೆಕ್ಯುಲರಿಸಂನ ವಿರೋಧಿಯಾಗಿರಲಿಲ್ಲ. ಹಾಗಾಗಿ ಇಂಗ್ಲಿಷ್ ಆವೃತ್ತಿಯಲ್ಲಿ ಈ ತಪ್ಪನ್ನು ತಿದ್ದಿಕೊಂಡು ” India’s Secularism” ಅಂದರೆ ಭಾರತದ ಸೆಕ್ಯುಲರಿಸಂ ಎಂದು ಬದಲಾಯಿಸಿದರು.
ಸೆಕ್ಯುಲರಿಸಂ ಹೇಗೆ ಬೆಳೆಯಿತು ಎಂಬುದಕ್ಕೆ ಸೀತಾರಾಂ ಗೋಯೆಲ್‌ರ ವಿವರಣೆಯ ಸಾರಾಂಶ ಹೀಗೆ ಇದೆ:
“ಐರೋಪ್ಯ ದೇಶಗಳಲ್ಲಿ 4ನೇ ಶತಮಾನದ ನಂತರ ಚರ್ಚ್ ಮತ್ತು ರಾಜ್ಯಾಡಳಿತದ ನಡುವೆ ಗಾಢ ಸಂಬಂಧವಿತ್ತು. ರಾಜ್ಯಾಂಗದ ಕೆಲಸ ಕೇವಲ ಜನರ ಭೌತಿಕ ಅವಶ್ಯಕತೆ ಪೂರೈಸುವ, ಮೂಲಸೌಕರ್ಯ ಒದಗಿಸುವುದಲ್ಲ. ಬದಲಿಗೆ ಪರಲೋಕದಲ್ಲಿ ಜನರ ಸಾಲ್ವೇಷನ್ (ಸರಿಯಾದ ಅರ್ಥ ಅಲ್ಲದಿದ್ದರೂ ಹತ್ತಿರದ್ದಾಗಿ ಮುಕ್ತಿ ಎಂದು ಬಳಸಬಹುದು) ಕೆಲಸ ಮಾಡುವುದೂ ಆಗಿತ್ತು. ಸಾಲ್ವೇಷನ್ ಹೊಂದಲು ಅದರ ಬಾಗಿಲಿನ ಕೀಲಿಕೈ ಚರ್ಚ್ ಬಳಿ ಇರುತ್ತಿತ್ತು. ಚರ್ಚ್ ಆಗಿಂದಾಗ್ಗೆ ನಿರೂಪಿಸುವ ಕಾನೂನನ್ನು ಪಾಲನೆ ಮಾಡುವಲ್ಲಿ ಯಾರೇ ವಿಫಲವಾದರೂ ಅವರ ವಿರುದ್ಧ ಚರ್ಚ್ ಕ್ರಮ ಕೈಗೊಳ್ಳುತ್ತಿರಲಿಲ್ಲ. ಬದಲಿಗೆ ಅಂಥವರು ಸ್ವರ್ಗಕ್ಕೆ ಹೋಗುವ ಬಾಗಿಲನ್ನು ತನ್ನ ಕೀಲಿಕೈ ಮೂಲಕ ಬಂದ್ ಮಾಡಿಬಿಡುತ್ತಿತ್ತು. ಮುಂದಿನ ಹಂತದಲ್ಲಿ ರಾಜ್ಯಾಡಳಿತವು ಕೆಲಸ ಮುಂದುವರಿಸುತ್ತಿತ್ತು. ಚರ್ಚ್ ಕೆಂಗಣ್ಣಿಗೆ ಗುರಿಯಾದವರಿಗೆ ಜೈಲು ಶಿಕ್ಷೆಯಿಂದ ಮರಣ ದಂಡನೆವರೆಗೆ ಶಿಕ್ಷೆ ವಿಧಿಸುತ್ತಿತ್ತು. ಅದಕ್ಕಾಗಿ ರಾಜ್ಯಾಡಳಿತವನ್ನು ಚರ್ಚಿನ ʼಸೆಕ್ಯುಲರ್ ಅಂಗʼ ಎಂದು ಕರೆಯಲಾಗುತ್ತಿತ್ತು. ರಾಜ್ಯಾಂಗವೂ ಸಹ, ಚರ್ಚ್ ಸೇವೆ ಮಾಡುವುದೇ ತನ್ನ ಕೆಲಸ ಎಂದು ಒಪ್ಪಿಕೊಂಡಿತ್ತು.
ಐರೋಪ್ಯ ದೇಶಗಳಲ್ಲಿ ಇನ್ನೂ ಕ್ರೈಸ್ತಮತವನ್ನು ಒಪ್ಪಿಕೊಳ್ಳಬೇಕಿರುವ ಇತರೆ ಜನರು ಇರುವವರೆಗೂ ಚರ್ಚ್ ಹಾಗೂ ರಾಜ್ಯಾಂಗದ ನಡುವೆ ಈ ಬಾಂಧವ್ಯ ಮುಂದುವರಿಯಿತು. ರಾಜ್ಯಾಂಗವು ವಿವಿಧ ಪ್ರದೇಶಗಳಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುತ್ತ ಸಾಗಿತು. ಅಲ್ಲೆಲ್ಲ ಚರ್ಚ್ ಕ್ರೈಸ್ತ ಮತವನ್ನು ವಿಸ್ತರಿಸುತ್ತ ಸಾಗಿತು. ಆದರೆ 15ನೇ ಶತಮಾನದ ಅಂತ್ಯಕ್ಕೆ ಇಡೀ ಐರೋಪ್ಯ ಜಗತ್ತು ಕ್ರಿಶ್ಚಿಯನ್ ಆಯಿತು. ಈ ಸಂದರ್ಭದಲ್ಲಿ ರಾಜರಿಗೆ ಚರ್ಚಿನ ಅವಶ್ಯಕತೆ ಬೇಡವಾಯಿತು. ಚರ್ಚ್ ದಿನಬೆಳಗಾದರೆ ನೀಡುವ ಆದೇಶಗಳು ರಾಜರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವು. ಈ ಸಂದರ್ಭದಲ್ಲಿ ರಾಜ್ಯಾಂಗದ ಹಾಗೂ ಚರ್ಚ್ ಬೆಂಬಲಿಗರ ನಡುವೆ ಕಾದಾಗ, ಬಡಿದಾಟ, ರಕ್ತಪಾತಗಳು ನಡೆದವು. ಅಲ್ಲಿನ ಅನೇಕ ಚಿಂತಕರು ಗ್ರೀಕ್ ಸಂಸ್ಕೃತಿ, ಭಾರತೀಯ ಸಂಸ್ಕೃತಿ, ಚೈನಾ ಸಂಸ್ಕೃತಿ ಸೇರಿ ವಿವಿಧ ಮಾನವ ಧರ್ಮಗಳಿಂದ ಪ್ರೇರಿತರಾಗಿ ಕ್ರೈಸ್ತ ಮತದ ವಿರುದ್ಧ ಸೆಟೆದೆದ್ದರು. 18ನೇ ಶತಮಾನದ ಅಂತ್ಯಕ್ಕೆ ಫ್ರೆಂಚ್ ಕ್ರಾಂತಿಯ ಜತೆಜತೆಗೆ ಚರ್ಚ್ ವಿರೋಧಿ ಹೋರಾಟವೂ ಉತ್ತುಂಗಕ್ಕೇರಿತು.
ಈ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಸೆಕ್ಯುಲರಿಸಂ ಉದಯವಾಯಿತು. ರಾಜ್ಯವು ಚರ್ಚಿನ ಕಪಿಮುಷ್ಠಿಯಿಂದ ಬಿಡುಗಡೆಯಾಯಿತು. ಜನರ ಸಾಲ್ವೇಷನ್‌ಗೆ ಕೆಲಸ ಮಾಡುವುದು ರಾಜ್ಯದ ಕೆಲಸ ಅಲ್ಲ ಎಂದು ಹೇಳಲಾಯಿತು. ಯಾವುದೇ ಮತ ಧರ್ಮವನ್ನು ನಂಬುವುದು ಆಯಾ ಜನರ ಇಚ್ಛೆಗೆ ಅನುಗುಣವಾಗಿರತಕ್ಕದ್ದು. ಈ ಪ್ರಪಂಚದಲ್ಲಿ ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುತ್ತೇವೆಯೇ ಹೊರತು, ಪರಲೋಕಕ್ಕೂ ತಮಗೂ ಸಂಬಂಧವಿಲ್ಲ ಎಂದು ಘೋಷಿಸಿದವು. ಇದೇ ಸೆಕ್ಯುಲರಿಸಂ ಉದಯವಾಗಲು ಕಾರಣವಾಯಿತು.
ಇದನ್ನೂ ಓದಿ: ವಿಸ್ತಾರ ಅಂಕಣ: ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುವುದು ತಪ್ಪು ಹೇಳಿಕೆಯಲ್ಲ, ಐತಿಹಾಸಿಕ ಪ್ರಮಾದ…
ಹೀಗೆ, ಐರೋಪ್ಯ ದೇಶಗಳಲ್ಲಿ ಸಕಾರಾತ್ಮಕವಾಗಿ ಉದಯವಾಗಿದ್ದ ಸೆಕ್ಯುಲರಿಸಂ ಅನ್ನು ಭಾರತಕ್ಕೆ ಇಲ್ಲಿನ ಬುದ್ಧಿಜೀವಿಗಳು ಆಮದು ಮಾಡಿದರು. ಸ್ವಾತಂತ್ರ್ಯಾನಂತರ ಯಾವ ರೀತಿಯ ದೇಶ ಇರಬೇಕು ಎನ್ನುವ ಚರ್ಚೆಯ ನಡುವೆ, ಸೆಕ್ಯುಲರ್ ದೇಶ ಎಂದುಬಿಟ್ಟರು. ಅಸಲಿಗೆ ಭಾರತದಲ್ಲಿ ಇಲ್ಲಿನ ಧರ್ಮವಾಗಲಿ, ಧರ್ಮಗುರುಗಳಾಗಲಿ, ಎಂದಿಗೂ ರಾಜ್ಯಾಡಳಿತದಲ್ಲಿ ನೇರವಾಗಿ ಮೂಗು ತೂರಿಸಿದವರೇ ಅಲ್ಲ. ಸ್ವತಃ ರಾಜನೇ ಧರ್ಮ ಗುರುವಿನ ಬಳಿ ಆಗಮಿಸುತ್ತಿದ್ದ. ಧರ್ಮಗುರುಗಳು ತಮ್ಮ ಪಾಡಿಗೆ ಆಶ್ರಮದಲ್ಲಿ ಪಾಠ ಮಾಡಿಕೊಂಡಿರುತ್ತಿದ್ದರು. ಇಸ್ಲಾಂ ಹಾಗೂ ಕ್ರಿಶ್ಚಿಯನ್ ಮತಗಳು ಭಾರತಕ್ಕೆ ಪ್ರವೇಶ ಮಾಡುವವರೆಗೆ ಭಾರತಲ್ಲಿ ಒಂದು ನಂಬಿಕೆಯವರು ಮತ್ತೊಂದರ ವಿರುದ್ಧ ಕತ್ತಿ ಮಸೆದ, ಕೊಲೆ ಮಾಡಿದ ಉದಾಹರಣೆಯೇ ಇರಲಿಲ್ಲ. ಇಂತಹ ಭಾರತಕ್ಕೆ ಅನಗತ್ಯವಾಗಿ ಸೆಕ್ಯುಲರಿಸಂ ಅನ್ನು ಹೇರಲಾಯಿತು. ಈ ಹೇರಿಕೆಗೆ ಬೆಂಬಲವಾಗಿ ನಿಂತದ್ದೇ ಕಾಂಗ್ರೆಸ್.
ಭಾರತದ ಕುರಿತು ಅಪಾರ ಅಧ್ಯಯನ ನಡೆಸಿರುವ ಸಂಶೋಧಕ ಕೋನ್ರಾಡ್ ಎಲ್ಸ್ಟ್ ಅವರು ತಮ್ಮ “Negationism in India” ಎಂಬ ಕೃತಿಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇಸ್ಲಾಂ ಆಕ್ರಮಣಕಾರರು ಭಾರತವೂ ಸೇರಿ ವಿಶ್ವದ ಅನೇಕ ಕಡೆ ನಡೆಸಿದ ಕ್ರೌರ್ಯ ಎಲ್ಲರಿಗೂ ತಿಳಿದಿದೆ. ಆದರೆ ಸೆಕ್ಯುಲರಿಸಂ ಹೆಸರಿನಲ್ಲಿ ಭಾರತದಲ್ಲಿ ಈ ಎಲ್ಲ ಅಂಶಗಳನ್ನೂ ನಿರಾಕರಿಸಲಾಯಿತು. ಇಸ್ಲಾಂ ದಾಳಿ ನಡೆಯುತ್ತದೆ ಎನ್ನುವುದು ಕಪೋಲಕಲ್ಪಿತ ವಿಚಾರ, ಈ ರೀತಿ ಮಾತನಾಡುವವರು ಕೋಮುವಾದಿಗಳು ಎಂಬ ಹಣೆಪಟ್ಟಿ ಕಟ್ಟಲಾಯಿತು. ಮೂಲತಃ, ಎರಡನೇ ವಿಶ್ವಯುದ್ಧದ ಸಮಯದಲ್ಲಿ ಯಹೂದಿಗಳು ಹಾಗೂ ಜಿಪ್ಸಿಗಳ ವಿರುದ್ಧ ನಾಜಿಗಳು ನಡೆಸಿದ ಕ್ರೌರ್ಯವನ್ನು ಮುಚ್ಚಿಹಾಕಲು ಬಳಸಿದ ತಂತ್ರವೇ ನೆಗೋಷನಿಸಂ. ಇದನ್ನು ಭಾರತದಲ್ಲಿ ಬಳಸುತ್ತಲೇ ಬರಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಂತಿದೆ. ಇಸ್ಲಾಂ ಆಕ್ರಮಣ ನಡೆದಿದೆ ಎಂದು ಯಾರಾದರೂ ಹೇಳಿದ ಕೂಡಲೆ ಅದನ್ನು ಇಲ್ಲಿನ ಮುಸ್ಲಿಮರ ಕಡೆಗೆ ತಿರುಗಿಸುವ ಅಪಾಯಕಾರಿ ಪ್ರವೃತ್ತಿಯನ್ನು ಅನುಸರಿಸಲಾಯಿತು.
ಇಂದು ಇಡೀ ವಿಶ್ವದಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು ಇಸ್ಲಾಂ ವಿಚಾರಗಳನ್ನು ಇಟ್ಟುಕೊಂಡ ಮೂಲಭೂತವಾದಿಗಳೇ ತಾನೆ? ಅವರು ಏನೋ ಖುಷಿಗಾಗಿ, ರಾಜ್ಯಕ್ಕಾಗಿ, ಹಣಕ್ಕಾಗಿ ಭಯೋತ್ಪಾದನೆ ಮಾಡುತ್ತಿಲ್ಲ. ತಮ್ಮ ಮತವನ್ನು ಎಲ್ಲೆಡೆ ಪಸರಿಸಬೇಕು ಎಂಬ ಕಾರಣ ಹೊಂದಿದ್ದಾರೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ ಅಲ್ಲವೇ? ಆದರೆ ಈ ವಿಷಯವನ್ನು ಭಾರತದ ಮುಸ್ಲಿಮರು ಹಾಗೂ ಕಾಂಗ್ರೆಸ್ಸಿಗರು ಎಂದಿಗೂ ಹೇಳುವುದೇ ಇಲ್ಲ. ಇಂತಹ ಕೃತ್ಯ ಎಸಗುವವರನ್ನು ಸಾಮಾಜಿಕವಾಗಿ ದೂರವಿಡುವ ಮೂಲಕ ಮುಸ್ಲಿಂ ಸಮುದಾಯದ ಏಳಿಗೆಗೆ ಕಾಂಗ್ರೆಸ್ ಪ್ರಯತ್ನಿಸಲೇ ಇಲ್ಲ.
ಇದನ್ನೂ ಓದಿ : ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?
ಇತ್ತೀಚೆಗೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್, ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪವನ್ನು ಇಟ್ಟಿತು. ಒಂದು ದೇಶಭಕ್ತ ಸಂಘಟನೆಯನ್ನು ನಿಷೇಧಿಸುವುದನ್ನು ಇಡೀ ದೇಶದ ಜನರು ವಿರೋಧಿಸುತ್ತಾರೆ. ಆದರೆ ಬಿಜೆಪಿಯವರು ಈ ವಿಚಾರವನ್ನು ಬಜರಂಗಬಲಿ ಹನುಮಂತನಿಗೇ ಲಿಂಕ್ ಮಾಡಲು ಹೊರಟರು. ಬಜರಂಗ ದಳ ನಿಷೇಧಿಸುವುದು ಸರಿಯಲ್ಲ ಎಂದು ಒಪ್ಪಿದರೂ, ಅದನ್ನು ನಿಷೇಧಿಸುವುದಕ್ಕೂ ಬಜರಂಗಬಲಿಯನ್ನು ಅವಮಾನಿಸುವುದಕ್ಕೂ ಏನು ಸಂಬಂಧ? ಹಾಗಾಗಿ ಕರ್ನಾಟಕದ ಜನರು ಈ ನಡೆಯನ್ನು ಒಪ್ಪಲಿಲ್ಲ. ಮುಸ್ಲಿಂ ಹಾಗೂ ಇಸ್ಲಾಮಿಕ್ ಆಕ್ರಮಣದ ಕುರಿತು ಕಾಂಗ್ರೆಸ್ ಇದೇ ನಡೆಯನ್ನು ಅನುಸರಿಸುತ್ತ ಬಂದಿದೆ. ಮುಸ್ಲಿಮರಲ್ಲಿನ ಮೂಲಭೂತವಾದಿಗಳು ಮಾಡಿದ್ದರ ಕುರಿತು ಜಾಣಕುರುಡು ಪ್ರದರ್ಶಿಸುತ್ತ, ಮುಸ್ಲಿಮರ ಮೇಲೆ ದಾಳಿಯಾಗುತ್ತಿದೆ ಎನ್ನುವುದನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡಿದೆ. ಇಸ್ಲಾಮಿಕ್ ಆಕ್ರಮಣದ ಕುರಿತು ಹೇಳಿದರೆ ಮುಸ್ಲಿಮರ ಕಡೆಗೆ ಏಕೆ ತಿರುಗಿಸಬೇಕು?
ಅದೂ ಸಹ ವಿದೇಶಕ್ಕೆ ತೆರಳಿ ಅಲ್ಲಿ ಯಾವುದೋ ವಿವಿ ತಮ್ಮನ್ನು ಆಹ್ವಾನಿಸಿದೆ ಎನ್ನುವಂತಹ ಸುಳ್ಳನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ವಿಶ್ವವಿದ್ಯಾಲಯವೊಂದರ ಆಡಿಟೋರಿಯಂ ಅನ್ನು ಬಾಡಿಗೆ ಪಡೆದು ತಮ್ಮದೇ ಜನಗಳನ್ನು ಅಲ್ಲಿ ಕೂರಿಸಿಕೊಂಡು ಭಾರತವನ್ನು ಬೈಯುವ ಭಾಷಣ ಮಾಡಲು ಕಾಂಗ್ರೆಸ್ ಮುಂದಾಗಿದೆ. ಅಷ್ಟೇ ಅಲ್ಲದೆ ಜೂನ್ 4ರಂದು ನ್ಯೂಯಾರ್ಕ್‌ನಲ್ಲಿ ನಡೆಯುವ ಸಂವಾದ ಕಾರ್ಯಕ್ರಮವನ್ನು, ಪಾಕಿಸ್ತಾನಿ ಪರ ಮುಸ್ಲಿಂ ಸಂಘಟನೆಗಳು ಆಯೋಜನೆ ಮಾಡುತ್ತಿವೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದನ್ನು ಕಾಂಗ್ರೆಸ್ ನಿರಾಕರಿಸಿದೆಯಾದರೂ ಅನುಮಾನಪಡಲು ಸಾಕಷ್ಟು ಪುರಾವೆಗಳಿವೆ.
ಕಾಂಗ್ರೆಸ್ ಇತಿಹಾಸದುದ್ದಕ್ಕೂ ಇಂತಹದ್ದೇ ವಿಭಜನಕಾರಿ ನಡೆಗಳಿಂದ ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ರಚಿಸಿದ್ದ ಸಾಚಾರ್ ಸಮಿತಿ ತಿಳಿಸಿದೆ. ಆ ಸಮುದಾಯವನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಬೇಕಾದ ಕ್ರಮದ ಕುರಿತು ರಾಹುಲ್ ಗಾಂಧಿ ಆಲೋಚಿಸಲಿ. ಅದನ್ನು ಬಿಟ್ಟು ದೇಶವಿರೋಧಿಯಾಗಿರುವ ಗುಂಪುಗಳ ಮೂಲಕ ಕಾರ್ಯಕ್ರಮ ಆಯೋಜಿಸುವುದು, ವಿದೇಶಕ್ಕೆ ತೆರಳಿ ಭಾರತ ವಿರೋಧಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸೋಣ ಅಲ್ಲವೇ?