ಅರಗಿನ ಅರಮನೆಯಿಂದ ತಪ್ಪಿಸಿಕೊಂಡು ಹೊರಬಿದ್ದ ಪಾಂಡವರು ಏಕಚಕ್ರ ನಗರದಲ್ಲಿ ಆಶ್ರಯ ಪಡೆದಿದ್ದರು. ಒಮ್ಮೆ ಅವರಿಗೆ ಕೆಲವರು ಬ್ರಾಹ್ಮಣರು ಎದುರಾದರು. ʼʼಪಾಂಚಾಲದ ರಾಜ ದ್ರುಪದ ತನ್ನ ಮಗಳಿಗೆ ಸ್ವಯಂವರ ಏರ್ಪಡಿಸಿದ್ದಾನೆ. ಅದಕ್ಕೆ ನಾವು ಹೋಗುತ್ತಿದ್ದೇವೆʼʼ ಎಂದು ಹೇಳಿದರು. ʼʼಅಣ್ಣಾ, ಇನ್ನೆಷ್ಟು ಕಾಲ ಅಡಗಿಕೊಂಡಿರುವುದು, ನಾವೂ ಹೋಗೋಣ, ಸಾಧ್ಯವಾದರೆ ದ್ರೌಪದಿಯನ್ನು ಪಡೆಯೋಣʼʼ ಎಂದು ಅರ್ಜುನ ಅಣ್ಣ ಧರ್ಮರಾಯನನ್ನು ಪುಸಲಾಯಿಸಿದ. ಹಾಗೆ ಐವರು ಪಾಂಡವರು ಮತ್ತು ತಾಯಿ ಕುಂತಿ ಅತ್ತ ಹೊರಟರು. ಪಾಂಚಾಲದಲ್ಲಿ ಒಬ್ಬ ಕುಂಬಾರನ ಮನೆಯಲ್ಲಿ ತಂಗಿದರು.
ಮರುದಿನ ಪಾಂಚಾಲದ ಅರಮನೆಯಲ್ಲಿ ಸ್ವಯಂವರ. ಪಾಂಡವರು ಬ್ರಾಹ್ಮಣರಂತೆ ವೇಷ ಮರೆಸಿ ಅವರ ಜತೆಗೇ ಕುಳಿತಿದ್ದರು. ಮೊದಲು ದ್ರೌಪದಿಯ ಸಹೋದರ ದೃಷ್ಟದ್ಯುಮ್ನ ಆಕೆಯನ್ನು ಕರೆತಂದು ಸಭೆಯ ಎಲ್ಲರಿಗೂ ಪರಿಚಯಿಸಿದ. ನಂತರ ಸಭೆಯ ಮಧ್ಯದಲ್ಲಿ ಕಟ್ಟಿದ ಮತ್ಸ್ಯಯಂತ್ರವನ್ನು ತೋರಿಸಿದ. ಅದನ್ನು ಆಕಾಶಮಧ್ಯದಲ್ಲಿ ತೇಲಿಬಿಡಲಾಗಿತ್ತು. ಅದು ತಿರುಗುತ್ತಿತ್ತು. ಅದೊಂದು ಮೀನಿನ ಚಿತ್ರ. ಅದರ ಕೆಳಗೆ ತೈಲದ ಪಾತ್ರೆ. ತೈಲದಲ್ಲಿ ಪ್ರತಿಬಿಂಬಿಸುವ ಮೀನನ್ನು ನೋಡಿ, ಅಲ್ಲಿಟ್ಟಿದ್ದ ಬಿಲ್ಲಿಗೆ ಬಾಣ ಜೋಡಿಸಿ, ಮೀನಿನ ಕಣ್ಣನ್ನು ಭೇದಿಸುವಂತೆ ಬಾಣ ಪ್ರಯೋಗ ಮಾಡಬೇಕಿತ್ತು.
ಅನೇಕ ಕ್ಷತ್ರಿಯರು ಬಾಣಪ್ರಯೋಗ ಮಾಡಲು ಎದ್ದರು. ಆದರೆ ಬಾಣ ಪ್ರಯೋಗಿಸಲು ವಿಫಲರಾದರು. ಕರ್ಣ ಎದ್ದ. ʼನಾನು ಸೂತನನ್ನು ವರಿಸುವುದಿಲ್ಲʼ ಎಂದು ದ್ರೌಪದಿ ಖಡಕ್ಕಾಗಿ ಹೇಳಿದಳು. ಕರ್ಣ ಹತಾಶೆಯಿಂದ ಕುಳಿತ. ಎಲ್ಲ ಕ್ಷತ್ರಿಯರೂ ಮುಖಭಂಗಿತರಾದ ಬಳಿಕ, ʼಬ್ರಾಹ್ಮಣರಲ್ಲಿ ಯಾರಾದರೂ ಇದ್ದರೆ ಪ್ರಯತ್ನಿಸಿʼ ಎಂದ ದ್ರುಪದ.
ಕೂಡಲೇ ಅರ್ಜುನ ಎದ್ದು ಬಂದ. ಲೀಲಾಜಾಲವಾಗಿ ಬಿಲ್ಲೆತ್ತಿ, ಬಾಣ ಪ್ರಯೋಗಿಸಿ ಮೀನನ್ನು ಕೆಡವಿದ. ದ್ರೌಪದಿ ಲಜ್ಜೆಯಿಂದ ನಡೆದುಬಂದು ಅವನ ಕೊರಳಿಗೆ ಮಾಲೆ ಹಾಕಿದಳು. ಕೂಡಲೇ ಸ್ವಯಂವರ ಮಂಟಪದಲ್ಲಿ ಗುಲ್ಲೆದ್ದಿತು. ಕ್ಷತ್ರಿಯರು ʼನಮಗೆ ಅವಮಾನ ಮಾಡಿದ್ದಾನೆʼ ಎಂದು ಕೋಪಗೊಂಡು ದ್ರುಪದನನ್ನು ಬಡಿಯಲು ಮುಂದಾದರು. ಭೀಮ ಮತ್ತು ಅರ್ಜುನ ಸೇರಿ ಅವರನ್ನೆಲ್ಲ ಬಡಿದೋಡಿಸಿದರು. ನಂತರ ದ್ರೌಪದಿಯನ್ನು ಕರೆದುಕೊಂಡು ಕುಂಬಾರನ ಮನೆಗೆ ತೆರಳಿದರು.
ಕುಂತಿ ಮನೆಯೊಳಗಿದ್ದಳು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ʼಅಮ್ಮಾ, ಭಿಕ್ಷೆ ತಂದಿದ್ದೇವೆʼ ಎನ್ನುತ್ತಾ ಒಳಹೊಕ್ಕರು. ಕುಂತಿ ʼಐವರೂ ಹಂಚಿಕೊಳ್ಳಿʼ ಎಂದುಬಿಟ್ಟಳು. ತಿರುಗಿ ನೋಡಿದಾಗ ದ್ರೌಪದಿ. ಕುಂತಿ ತನ್ನ ಮಾತನ್ನೇನೂ ಹಿಂದೆಗೆದುಕೊಳ್ಳಲಿಲ್ಲ. ಆ ರಾತ್ರಿ ಐವರೂ ದ್ರೌಪದಿಯನ್ನು ಮಧ್ಯದಲ್ಲಿ ಕೂರಿಸಿಕೊಂಡು, ಇಂಥ ಚೆಂದುಳ್ಳಿ ಚೆಲುವೆಯನ್ನು ಏನು ಮಾಡುವುದು ಎಂದು ಯೋಚಿಸಿದರು. ಕುಂತಿಯ ತಲೆಯಲ್ಲಿ ಬೇರೆಯದೇ ರಾಜಕಾರಣದ ಚಿಂತೆಗಳು ಓಡುತ್ತಿದ್ದವು.
ಇದನ್ನೂ ಓದಿ: ಮಕ್ಕಳ ಕಥೆ: ಸಹೋದರರ ಉಗ್ರಾಣದಲ್ಲಿ ಧಾನ್ಯ ಯಾಕೆ ಕಡಿಮೆ ಆಗಲಿಲ್ಲ?
ಲಾಗಾಯ್ತಿನಿಂದ ಕೌರವರು- ಪಾಂಡವರು ವೈರಿಗಳಾಗಿದ್ದಾರೆ. ಕೌರವರು ನೂರು ಮಂದಿ ಇದ್ದಾರೆ. ಪಾಂಡವರು ಐದೇ ಜನ. ಪಾಂಡವರಿಗೆ ಸೈನ್ಯಬಲವಿಲ್ಲ. ಈಗ ರಾಜ್ಯಭ್ರಷ್ಟರಾಗಿದ್ದಾರೆ. ಕೌರವರು ಬಲಿಷ್ಠರು. ಹಸ್ತಿನಾಪುರದಲ್ಲಿ ಬೇರು ಬಿಟ್ಟಿದ್ದಾರೆ. ಪಾಂಡವರಿಗೆ ದ್ರುಪದನಂಥ ಬಲಿಷ್ಠ ಬೀಗರು ಬೇಕು. ಆಗ ಪಾಂಡವರು ಕೌರವರ ಮುಂದೆ ತಲೆಯೆತ್ತಿ ನಿಲ್ಲಬಹುದು. ಆದರೆ ದ್ರೌಪದಿ, ಅರ್ಜುನನೊಬ್ಬನ ಮಡದಿ ಆಗಿಬಿಟ್ಟರೆ ಆಗ ಪಾಂಡವರ ಮಧ್ಯೆಯೇ ಒಡಕು ಉಂಟಾಗಲೂಬಹುದು! ಹಾಗಿದ್ದರೆ, ಪರಿಹಾರವೇನು? ಆಕೆಯನ್ನು ಐವರೂ ಮದುವೆಯಾಗುವಂತೆ ಮಾಡುವುದು!
ಈ ಯೋಜನೆಯ ಹಿಂದಿನ ಉದ್ದೇಶವನ್ನು ಹೇಳದೆ ಕುಂತಿ ಸುಮ್ಮನಿದ್ದಳು. ದ್ರೌಪದಿ ತಮಗೂ ಪತ್ನಿಯಾಗಲಿ ಎಂಬ ಆಸೆ ಐವರ ಮನದಲ್ಲೂ ಇತ್ತು. ಐವರೂ ಕೂತು ಚರ್ಚಿಸಿದರು. ಧರ್ಮರಾಯನೇ ಅಂತಿಮ ನಿರ್ಣಯ ಹೇಳಿದ. ಕುಂತಿ ಅದಕ್ಕೆ ಸಮ್ಮತಿಯ ಮುದ್ರೆ ಒತ್ತಿದಳು. ದ್ರೌಪದಿ ಮೌನ ಸಮ್ಮತಿ ನೀಡಿದಳು.
ಮರುದಿನ ಮದುವೆ ಮಂಟಪದಲ್ಲಿ ಬಾಸಿಂಗ ಧರಿಸಿ ಬಂದ ಐವರನ್ನು ನೋಡಿ ದ್ರುಪದನಿಗೆ ಗಾಬರಿಯಾಯಿತು. ʼʻಇದೇನು ವಿಚಿತ್ರ? ಇಂಥದನ್ನು ನಾನು ಎಲ್ಲೂ ಕಂಡಿಲ್ಲ ಕೇಳಿಲ್ಲ. ಇದು ಧರ್ಮವಿರೋಧ, ಶಾಸ್ತ್ರವಿರೋಧʼʼ ಎಂದ. ʼʼನಾವು ಹುಟ್ಟಿ ಬೆಳೆದದ್ದು ಹಿಮಾಲಯದಲ್ಲಿ. ಅಲ್ಲಿ ಇಂಥ ರೂಢಿ ಸಾಮಾನ್ಯ. ನಮ್ಮ ಅಮ್ಮ ಕುಂತಿಯೇ ಮೂವರು ದೇವತೆಗಳಿಂದ ಮಕ್ಕಳನ್ನು ಪಡೆದವಳು. ಹಸ್ತಿನಾಪುರದ ರಾಜರೂ ನಿಯೋಗದಿಂದಲೇ ಜನಿಸಿದವರುʼʼ ಎಂದು ಧರ್ಮರಾಯ ತಿಳಿಹೇಳಿದ. ದ್ರುಪದ ಒಪ್ಪಲಿಲ್ಲ.
ಅಷ್ಟರಲ್ಲಿ ಅಲ್ಲಿಗೆ ವೇದವ್ಯಾಸರು ಬಂದರು. ದ್ರುಪದ ತನ್ನ ಅನುಮಾನವನ್ನು ಅವರಲ್ಲಿ ತೋಡಿಕೊಂಡ. ವೇದವ್ಯಾಸರು ಆಗಿನ ಕಾಲದ ಬಹುದೊಡ್ಡ ಧರ್ಮಜ್ಞ, ಜ್ಞಾನಿ, ವಿವೇಕಿಯೆಂದು ಹೆಸರಾಗಿದ್ದವರು. ಅವರ ಮಾತಿಗೆ ಎಲ್ಲ ರಾಜರ ನಡುವೆ ಬೆಲೆಯಿತ್ತು. ಅವರು ಹೇಳಿದರು. ʼʼದ್ರೌಪದಿ ಐವರ ಮಡದಿ ಆಗುವುದು ದೈವಸಮ್ಮತ. ಯಾಕೆಂಬುದಕ್ಕೆ ಇವಳ ಪೂರ್ವಜನ್ಮದ ಕತೆಯನ್ನು ಹೇಳುತ್ತೇನೆ ಕೇಳುʼʼ ಎಂದು ಕತೆ ಹೇಳಿದರು.
ಹಿಂದಿನ ಜನ್ಮದಲ್ಲಿ ದ್ರೌಪದಿ, ನಾರಾಯಣಿ ಎಂಬ ಋಷಿಕುಮಾರಿ ಆಗಿದ್ದಳು. ಅವಳಿಗೆ ಮದುವೆಯಾಗಲಿಲ್ಲ. ಮದುವೆ ಮಾಡದೆಯೇ ಆಕೆಯ ತಂದೆ ತೀರಿಕೊಂಡ. ಇವಳು ಹತಾಶಳಾಗಿ, ಶಿವನನ್ನು ಉದ್ದೇಶಿಸಿ ತಪಸ್ಸು ಮಾಡಿದಳು. ಶಿವ ಪ್ರತ್ಯಕ್ಷನಾದ. ಈಕೆ ʼಪತಿಂದೇಹಿʼ (ಪತಿಯನ್ನು ಅನುಗ್ರಹಿಸು) ಎಂದು ಐದು ಬಾರಿ ಹೇಳಿದಳು. ʼʼನೀನು ಐದು ಬಾರಿ ಕೇಳಿರುವುದರಿಂದ ಐವರು ಪತಿಯರನ್ನು ಅನುಗ್ರಹಿಸುತ್ತೇನೆ, ಆದರೆ ಮುಂದಿನ ಜನ್ಮದಲ್ಲಿʼ ಎಂದು ಹೇಳಿ ಶಿವ ಅದೃಶ್ಯನಾದ.
ಆ ನಾರಾಯಣಿಯೇ ಈಗ ದ್ರೌಪದಿಯಾಗಿ ಜನಿಸಿದ್ದಾಳೆ. ಇನ್ನೊಂದು ಗುಟ್ಟು ಹೇಳಲೇ? ಈ ಐವರೂ ಪಾಂಡವರು ಯಮ, ವಾಯು, ಇಂದ್ರ, ಅಶ್ವಿನಿ ದೇವತೆಗಳ ಅಂಶದವರು. ಇವರ ಜನ್ಮದ ಉದ್ದೇಶವನ್ನು ಸಾಧಿಸಲು ಇವರನ್ನು ಜತೆಯಾಗಿಡಲು ಶಚಿದೇವಿಯೇ ದ್ರೌಪದಿಯಾಗಿ ಜನಿಸಿದ್ದಾಳೆ. ಆದ್ದರಿಂದ ಈ ಸಂಬಂಧಕ್ಕೆ ಅಂಜಬೇಡ.
ವ್ಯಾಸರು ಇಷ್ಟು ಹೇಳಿದ ಬಳಿಕ ದ್ರುಪದ ಈ ಮದುವೆಗೆ ಸಮ್ಮತಿಸಿದ. ತನ್ನ ಹಂಚಿಕೆ ಸಫಲವಾದುದಕ್ಕೆ ಕುಂತಿ ಸಂತೋಷಿಸಿದಳು.
ಇದನ್ನೂ ಓದಿ: ಸಂಡೇ ರೀಡ್: ಪ್ರಕೃತಿಯೇ ನಮ್ಮ ಮನೆ ಅನ್ನುವ ರಸ್ಕಿನ್ ಬಾಂಡ್