Site icon Vistara News

ನನ್ನ ದೇಶ, ನನ್ನ ದನಿ ಅಂಕಣ | ಸಮೃದ್ಧ ಕೃಷಿಯ ನಾಡು, ಅಮೆರಿಕಾ ಎಸೆದ ಗೋಧಿಗೆ ಕೈಚಾಚಿತೇ?

paddy

ಐದಾರು ದಶಕಗಳ ಹಿಂದೆ ನಮ್ಮ ದೇಶದಲ್ಲಿ ಎಂತಹ ಭಯಾನಕ ಪರಿಸ್ಥಿತಿ ಇತ್ತು ಎಂದರೆ, ಜನರಿಗೆ ಆಹಾರ ಇರಲಿಲ್ಲ, ಹಾಕಿಕೊಳ್ಳಲು ಕನಿಷ್ಠ ಬಟ್ಟೆಗಳಿಗೂ ತತ್ವಾರ. ಕುಡಿಯುವ ನೀರೇ ಇರಲಿಲ್ಲ ಎಂದರೆ ಆಸ್ಪತ್ರೆಗಳ ವಿಷಯ, ಶಾಲಾ ಕಾಲೇಜುಗಳ ವಿಷಯ ಕೇಳುವುದೇ ಬೇಡ. ಬಡತನ, ನಿರುದ್ಯೋಗಗಳಿಗೆ ಜೊತೆಯಾಗಿ ಕ್ಷಾಮ ಬರಗಳ ಪಿಡುಗು. ಶಾಲೆಗಳಲ್ಲಿ ನಾವು ಓದಿದ ವಿಕೃತ ಇತಿಹಾಸದ ಪುಸ್ತಕಗಳಲ್ಲಿ ಅವರು ದಾಳಿ ಮಾಡಿದರು, ಇವರು ಆಕ್ರಮಣ ಮಾಡಿದರು ಎಂದೆಲ್ಲಾ ಓದುವಾಗ ಈ ದರಿದ್ರ ದೇಶಕ್ಕೆ ಇವರು ದಾಳಿ ಮಾಡಿದ್ದಾದರೂ ಏಕಿರಬಹುದು, ಎಂಬ ಕುತೂಹಲ. ಕೊನೆಗೆ ಅವರು ದೋಚಿದ್ದರಿಂದಲೇ ನಾವೆಲ್ಲಾ ಬಡವರಾದೆವೋ ಏನೋ ಎಂಬ “ಸಮಾಧಾನ”. ಈ ನಡುವೆ ಬ್ರಿಟಿಷರ ಕೈಕಾಲೊತ್ತಿ ಬೂಟು ಒರೆಸಿ ಅವರ ಮರ್ಜಿಯಲ್ಲಿ ಅಧಿಕಾರ ಗಳಿಸಿದವರು ಲೈಸೆನ್ಸು ಪರ್ಮಿಟ್ಟುಗಳನ್ನು ಮಾರಿಕೊಂಡು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದರು.

ಕಳೆದ ಸಹಸ್ರಮಾನವೊಂದರಲ್ಲಿಯೇ ಸಾಮ್ರಾಜ್ಯಶಾಹಿ- ವಸಾಹತುಶಾಹಿ ಮತಗಳ ವಿಧ್ವಂಸಕಾರಿ ಪ್ರವೃತ್ತಿಯು ನಮ್ಮ ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆಗಳನ್ನು ನಾಶಮಾಡಿತ್ತು. ನಳಂದ ವಿಶ್ವವಿದ್ಯಾಲಯವೊಂದರಲ್ಲಿಯೇ ತೊಂಬತ್ತು ಲಕ್ಷ ಗ್ರಂಥಗಳು ಜಿಹಾದಿಗಳಿಂದ ನಾಶವಾಗಿದ್ದವು. ನಮ್ಮ ಮೈಸೂರು ಅರಮನೆಯಲ್ಲಿಯೂ ಅಪೂರ್ವ ಗ್ರಂಥಗಳನ್ನು ಜಿಹಾದಿಗಳು ತಮ್ಮ ಕುದುರೆಗಳಿಗೆ ಹುರುಳಿ ಬೇಯಿಸಲು ಸುಟ್ಟುಹಾಕಿದ್ದರು. ನಮ್ಮಲ್ಲಿದ್ದ ಪುರಾವೆ, ಸಾಕ್ಷ್ಯಾಧಾರ ಗ್ರಂಥಗಳೇ ನಾಶವಾಗಿ ಹೋಗಿ ವಿಜಯನಗರ ಸಾಮ್ರಾಜ್ಯವೂ ಸೇರಿದಂತೆ, ನಮಗೆ ಅನೇಕ ಸಂಗತಿಗಳು ವಿದೇಶೀ ಪ್ರವಾಸಿಗಳ ದಾಖಲೆಗಳಿಂದಲೇ ತಿಳಿಯಬೇಕಿತ್ತು, ಈಗಲೂ ತಿಳಿಯಬೇಕಾಗಿದೆ.

ನಮ್ಮದು ನಿಜಕ್ಕೂ ಹತ್ತು ಸಾವಿರ ವರ್ಷಗಳ ಸಮೃದ್ಧಿಯ ಇತಿಹಾಸ. ಕೃಷಿ ಸಮೃದ್ಧಿ ಮತ್ತು ಗೋ ಸಂಪತ್ತುಗಳು ನಮ್ಮ ಆರ್ಥಿಕ ವ್ಯವಸ್ಥೆಯ ಜೀವನಾಡಿಗಳಾಗಿದ್ದವು. ಬ್ರಿಟಿಷರು ಅತ್ಯಂತ ನೀಚರು, ವಿಕೃತ ಸ್ವಭಾವದವರು. ನಮ್ಮ ಐಶ್ವರ್ಯವನ್ನು ಲೂಟಿ ಮಾಡಿದುದಷ್ಟೇ ಅಲ್ಲ, ನಮ್ಮ ಕೃಷಿ ಮತ್ತು ಉದ್ಯಮಗಳನ್ನು ಇನ್ನಿಲ್ಲದಂತೆ ನಾಶ ಮಾಡಿದರು. ಆದರೆ, ಬ್ರಿಟಿಷರಿಂದ ಈ ದೇಶವನ್ನೇ “ಬಳುವಳಿ”ಯಾಗಿ ಪಡೆದ ಭಾರತ-ದ್ರೋಹಿಗಳು ಮೆಕಾಲೆವಾದಿಗಳೊಂದಿಗೆ ಸೇರಿ “ಬ್ರಿಟಿಷರಿಂದಲೇ ಜ್ಞಾನದ ಬೆಳಕು ಬಂದಿತು, ಶಾಲಾ ಕಾಲೇಜುಗಳನ್ನು ಭಾರತದಲ್ಲಿ ಪ್ರಾರಂಭಿಸಿದವರೇ ಅವರು. ಅವರಿಂದಲೇ ಕೈಗಾರಿಕೆಗಳು ಹುಟ್ಟಿ ಬೆಳೆದವು” ಎಂಬ ಪ್ರಥೆಯನ್ನೇ ಬೆಳೆಸಿದರು.

ಇದನ್ನೂ ಓದಿ: Emergency 1975 | ನೀವು ಭಾರತೀಯರೋ, ರಾಷ್ಟ್ರೀಯರೋ? ತುರ್ತು ಪರಿಸ್ಥಿತಿಯ ಮೆಲುಕು

ನಮ್ಮ ಕೃಷಿಯ ಔನ್ನತ್ಯ ಕುರಿತಂತೆ, ವಿದೇಶೀ ಪ್ರವಾಸಿಗಳು ಬರೆದ ಅನೇಕ ಬರೆಹಗಳು ದೊರೆಯುತ್ತವೆ. ತೀರ ಇತ್ತೀಚಿನ ಅಂತಹ ದಾಖಲೆಗಳನ್ನು ಗಮನಿಸುವುದಾದರೆ, ಕೇವಲ ಎರಡು ಶತಮಾನಗಳ ಹಿಂದಿನ ವಿವರಗಳು ಅಕ್ಷರಶಃ ದಿಗ್ಭ್ರಮೆಗೊಳಿಸುತ್ತವೆ. ಸ್ಕಾಟ್ಲೆಂಡಿನ ಅಲೆಕ್ಸಾಂಡರ್ ವಾಕರ್ ಪಶ್ಚಿಮ ಭಾರತದ ಕೃಷಿಯನ್ನು ಗಂಭೀರವಾಗಿ ಅಭ್ಯಸಿಸಿ ಉದ್ಯಾನವನಗಳಂತೆ ತೋರುವ ಗುಜರಾತಿನ ಹೊಲಗದ್ದೆಗಳನ್ನು ನೋಡಿ ಪ್ರಭಾವಿತನಾಗಿ ಹೀಗೆ ಹೇಳಿದ್ದಾನೆ: “ಹೊಲಗದ್ದೆಗಳು ಅಚ್ಚುಕಟ್ಟಾಗಿ ಓರಣವಾಗಿ ಸಿಂಗಾರ ಮಾಡಿದಂತೆ ಕಾಣುತ್ತವೆ. ನಡುನಡುವೆ ಗೋಮಾಳಕ್ಕಾಗಿ ದೊಡ್ಡ ದೊಡ್ಡ ಜಾಗಗಳನ್ನು ಬಿಟ್ಟಿದ್ದಾರೆ. ಇಡೀ ಪ್ರಪಂಚದಲ್ಲಿಯೇ ಗುಜರಾತಿನಲ್ಲಿ ಕಾಣುವುದಕ್ಕಿಂತ ಸುಂದರವಾದ ಮತ್ತು ಮೇಲುದರ್ಜೆಯ ಹೊಲಗದ್ದೆಗಳು ಕಾಣುವುದಿಲ್ಲ. ಭೂಮಿ ಹೊರುವಷ್ಟೂ ಪ್ರಮಾಣದ ಧಾನ್ಯಗಳ ಸಮೃದ್ಧ ಬೆಳೆಯನ್ನು ನಾನು ಭಾರತದಲ್ಲಿ ನೋಡಿದೆ, ಎಂದು ಮತ್ತೆ ಮತ್ತೆ ಹೇಳಬಯಸುತ್ತೇನೆ. ಒಂದೇ ಒಂದು ಕಳೆಯೂ ಕಾಣದಂತೆ ಹೊಲಗದ್ದೆಗಳನ್ನು ಓರಣವಾಗಿ, ಅಚ್ಚುಕಟ್ಟಾಗಿ ಇಡಲಾಗಿದೆ. ಕಳೆ ಕೀಳಲು ಉಪಕರಣಗಳನ್ನು ದೇಶೀಯವಾಗಿ ಸ್ಥಳೀಯವಾಗಿಯೇ ಸಿದ್ಧಪಡಿಸಿಕೊಳ್ಳಲಾಗಿದೆ ಮತ್ತು ಬಹಳ ಶ್ರಮದಿಂದ ಈ ಕೃಷಿಕೆಲಸಗಳನ್ನು ನಿರ್ವಹಿಸಲಾಗಿದೆ”.

ಕೇರಳದ ಮಲಬಾರ್ ಪ್ರಾಂತದಲ್ಲಿ ಯಶಸ್ವಿಯಾಗಿ- ಸಮೃದ್ಧವಾಗಿ ಭತ್ತ ಬೆಳೆಯುವುದಕ್ಕೆ ಸಂಬಂಧಿಸಿದಂತೆ ಈ ವಾಕರನ ಟಿಪ್ಪಣಿ ಹೀಗಿದೆ: “ಮಲಬಾರ್ ಪ್ರಾಂತದಲ್ಲಿ ೫೦ಕ್ಕೂ ಹೆಚ್ಚು ವಿಧವಾದ ಭತ್ತಗಳನ್ನು ಬೆಳೆಯುತ್ತಾರೆ. ಪ್ರತಿಯೊಂದಕ್ಕೂ ಬೇರೆಯೇ ಹೆಸರು, ಪ್ರತಿಯೊಂದರದ್ದು ಬೇರೆಯೇ ಗುಣವಿಶೇಷ. ಒಂದೊಂದರ ವಿಶಿಷ್ಟ ಸ್ವರೂಪವನ್ನು ಕಾಪಾಡಿಕೊಂಡುಬರುತ್ತಿರುವ ಬೇರೆಬೇರೆ ವ್ಯವಸಾಯ ಪದ್ಧತಿಗಳಿವೆ. ಉತ್ತರ ಭಾಗಕ್ಕಿಂತಲೂ ದಕ್ಷಿಣ ಮಲಬಾರ್ ಪ್ರಾಂತ ಹೆಚ್ಚು ಫಲವತ್ತಾಗಿದೆ. ವಾರ್ಷಿಕವಾಗಿ ಮೂರು ಮೂರು ಬೆಳೆ ತೆಗೆಯುವುದು ದಕ್ಷಿಣಭಾಗದಲ್ಲಿಯೇ ಹೆಚ್ಚು. ಮಲಬಾರ್ ಪ್ರಾಂತದ ವಿಶೇಷವೆಂದರೆ, ವರ್ಷದ ಯಾವುದೇ ಸಮಯದಲ್ಲಿ ಭತ್ತ ಬೆಳೆಯುವುದನ್ನು ಮತ್ತು ಅದರ ಎಲ್ಲಾ ಹಂತಗಳನ್ನು ಕಾಣಬಹುದು. ಇದಕ್ಕಿಂತ ಮನೋಹರವಾದುದು ಸ್ವಾರಸ್ಯಪೂರ್ಣವಾದುದು ಇನ್ನಾವುದೂ ಇರಲಾರದು”.

ಭಾರತವನ್ನು ವಾಕರ್ ಸ್ವತಃ ನೋಡಿ ಮೆಚ್ಚಿ ದಾಖಲಿಸಿರುವುದು ಹೇಗಿದೆಯೆಂದರೆ, ನಮಗೆ ಭಾರತೀಯರಿಗೇ ನಂಬುವುದು ಕಷ್ಟವಾಗುತ್ತದೆ. ಎಲ್ಲಿಯಾದರೂ ಉಂಟೆ! ನಮ್ಮ ದೇಶದ ವಿಷಯ ಇರಲಾರದು, ಎಂದೆನ್ನಿಸುವುದು ಸಹಜ. ಕೇವಲ ಎರಡು ಶತಮಾನಗಳ ಹಿಂದೆ ಸಹ ನಾವು ಇದ್ದುದೇ ಅಂತಹ ಸಮೃದ್ಧಿಯಿಂದ. ಅಜಂತಾ ಎಲ್ಲೋರಾ ಬೇಲೂರು ಹಳೇಬೀಡುಗಳ ಶಿಲ್ಪಕಲಾ ಸೌಂದರ್ಯದ ವಿಸ್ಮಯಗಳನ್ನು ನಿರ್ಮಿಸಿದ ಸಹಸ್ರಾರು ವರ್ಷಗಳ ಸಶಕ್ತ ಆರ್ಥಿಕ ವ್ಯವಸ್ಥೆಯನ್ನು ಪ್ರಸ್ತುತ ಕಾಲಘಟ್ಟದ ದಾರಿದ್ರ್ಯವು ಮರೆಸಿಬಿಟ್ಟಿದೆ.

ಇದನ್ನೂ ಓದಿ: ಧೀಮಹಿ ಅಂಕಣ: ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ ಇದು! ಅಂದಿನ ಆಡಳಿತ ಹೀಗಿತ್ತು

ಹತ್ತು ವರ್ಷಗಳ ಹಿಂದೆ ನಾನು ತುಂಬಾ ಮೆಚ್ಚುವ ಲೇಖಕರೊಬ್ಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ನಾನು ವೃತ್ತಿಯಿಂದ ಬ್ಯಾಂಕ್ ಮ್ಯಾನೇಜರ್ ಆಗಿದ್ದೆ. ನಮ್ಮ ಬ್ಯಾಂಕಿನ ಕನ್ನಡ ಸಂಘದಿಂದ ಅವರನ್ನು ಸನ್ಮಾನಿಸಲಾಯಿತು. ಆ ಕಾರ್ಯಕ್ರಮಕ್ಕೆ (ನಾನು ನಿವೃತ್ತನಾಗಿದ್ದರೂ) ನನ್ನನ್ನೂ ನನ್ನ ಗೆಳೆಯರು ಪ್ರೀತಿಯಿಂದ ಕರೆದಿದ್ದರು. ವಿಶೇಷವೆಂದರೆ, ಸದರಿ ಲೇಖಕರು ಸಹಾ ವೃತ್ತಿಯಿಂದ ಬ್ಯಾಂಕೊಂದರ ಹಿರಿಯ ಅಧಿಕಾರಿಯಾಗಿದ್ದವರು. ಹಾಗಾಗಿ ಶಿಕ್ಷಣಕ್ಷೇತ್ರ ಮೂಲದ ಲೇಖಕರಿಗಿಂತ ಹೆಚ್ಚಿನ ಆಯಾಮಗಳನ್ನು ಅವರ ಬರೆವಣಿಗೆಯಲ್ಲಿ ಕಾಣಬಹುದಿತ್ತು. ಅವರು ಅಭಿನಂದನೆಗೆ, ಸನ್ಮಾನಕ್ಕೆ ಉತ್ತರವಾಗಿ ಮಾತು ಆರಂಭಿಸಿದ್ದೇ “ಬ್ರಿಟಿಷರು ನಮ್ಮ ದೇಶಕ್ಕೆ ಬರದಿದ್ದರೆ, ನಾವು ಇನ್ನೂ ಅಂಧಕಾರದಲ್ಲಿ ಇರುತ್ತಿದ್ದೆವು” ಎಂಬ ಸಾಲುಗಳಿಂದ. ಅಂದು ಆದ ಆಘಾತದಿಂದ ನಾನು ಇನ್ನೂ ಚೇತರಿಸಿಕೊಂಡಿಲ್ಲ. ಎಂತಹ ದೇಶ, ಎಂತಹ ಸಂಸ್ಕೃತಿ, ಎಂತಹ ಸಮೃದ್ಧ ಕೃಷಿ ನಮ್ಮದು. ಸಹಸ್ರಾರು ವರ್ಷಗಳ ಕಾಲ ನಮ್ಮ ತಕ್ಷಶಿಲೆ, ನಳಂದ ಇತ್ಯಾದಿ ವಿಶ್ವವಿದ್ಯಾಲಯಗಳಲ್ಲಿ ಕಲಿಯಲು ಇಲ್ಲಿಗೆ ಅನೇಕ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಎಲ್ಲರೂ ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದರು. ಅಂತಹ ದೇಶವು ಬ್ರಿಟಿಷರಿಗೆ- ಅವರ ದಲ್ಲಾಳಿಗಳಿಗೆ ಸಿಕ್ಕಿ ಭಿಕಾರಿಗಳ ದೇಶವಾಗಿಹೋಗಿತ್ತು. ಶತ್ರುಗಳ ಬಗೆಗೆ, ಆಕ್ರಮಣಕಾರಿಗಳ ಬಗೆಗೆ ಸರಿಯಾದ ತಿಳಿವಳಿಕೆಯಿಲ್ಲದೆ, ಅವರ ಸಾಮ್ರಾಜ್ಯಶಾಹಿ ವಸಾಹತುಶಾಹಿ ರಿಲಿಜನ್ನುಗಳ ಸ್ವರೂಪವನ್ನೇ ಅರ್ಥಮಾಡಿಕೊಳ್ಳದೇ ಯಾವ ಸ್ಥಿತಿಯನ್ನು ತಲುಪಿದ್ದೆವು ಎಂಬುದು ವ್ಯಥೆ ತರುತ್ತದೆ. ಅಂತಹ ಶೋಷಕರನ್ನು, ವಿಧ್ವಂಸಕರನ್ನು ನಮ್ಮ ಉದ್ಧಾರಕರೆಂದು ಮೆಚ್ಚುವ ಆರಾಧಿಸುವ, ಗುಣಗಾನ ಮಾಡುವ ದುಸ್ಥಿತಿ ನಮ್ಮ ಮೇಲೆ ಎರಗಿತು.

ನಿಜ. ನಾವೆಲ್ಲಾ ನೋಡಿದ ಅನುಭವಿಸಿದ ಭಾರತ ಹೇಗಿತ್ತೆಂದರೆ, ಅರವತ್ತರ ದಶಕದಲ್ಲಿ ಎಂತಹ ಬಡತನ ದಾರಿದ್ರ್ಯಗಳಿದ್ದವೆಂದರೆ, ಅಮೆರಿಕಾ ದೇಶವು “ಎಸೆಯುವ ಗುಣಮಟ್ಟದ” ಗೋಧಿಯನ್ನು ಭಿಕ್ಷೆ ಎಂಬಂತೆ ನಮಗೆ ಕಳುಹಿಸಿತ್ತು. ಅದು ಸಹ ಲಕ್ಷಾಂತರ ಶಾಲಾ ಮಕ್ಕಳ ಪ್ರಾಣ ಉಳಿಸಿತ್ತು, ಎನ್ನುವುದು ನನ್ನ ಸಮಕಾಲೀನ ವಯೋಮಾನದವರಿಗೆ ಚೆನ್ನಾಗಿಯೇ ನೆನಪಿರಬಹುದು. ಇಂದು ಪರಿಸ್ಥಿತಿ ಬದಲಾಗಿದೆ. ಭಾರತವೇ ಮಿತ್ರರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚುತ್ತಿದೆ. ಮುಖ್ಯವಾಗಿ ನಾವೆಲ್ಲಾ ಶಾಲಾ ಕಾಲೇಜುಗಳಲ್ಲಿ ಕಲಿತ ಇತಿಹಾಸವು ವಿಕೃತವಾದುದು, ಸತ್ಯದೂರವಾದುದು ಎಂಬ ಅರಿವು ಮೂಡುತ್ತಿದೆ. ಒಳ್ಳೆಯ ಕಾಲ ಬಂದಿದೆ.

ಅಂಕಣಕಾರರ ಪರಿಚಯ: ಅಜ್ಜಂಪುರ ಮಂಜುನಾಥ್‌ ಹಿರಿಯ ಲೇಖಕರು, ಅಂಕಣಕಾರರು ಹಾಗೂ ನವದೆಹಲಿ ಮೂಲದ ಪ್ರಕಾಶನ ಸಂಸ್ಥೆ ʼವಾಯ್ಸ್‌ ಆಫ್‌ ಇಂಡಿಯಾʼ ಸರಣಿಯ ಗೌರವ ಸಂಪಾದಕರು. ಇವರು ರಾಷ್ಟ್ರೀಯತೆ, ಇತಿಹಾಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅಪಾರ ಅಧ್ಯಯನ ನಡೆಸಿದ್ದು, ಈ ಬಗ್ಗೆ ಪ್ರಖರ ವಿಚಾರ ಮಂಡನೆ ಮಾಡುವಲ್ಲಿ ಸಿದ್ಧಹಸ್ತರು. ಈ ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವೈಯಕ್ತಿಕ.

Exit mobile version