ಹೊಸದಿಲ್ಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರು “ತಾಯಂದಿರ ದಿನ’ವಾದ ಮೇ 8ರಂದು ತಮಿಳುನಾಡಿನ “ಇಡ್ಲಿ ಅಮ್ಮ’ನಿಗೆ ಹೊಸ ಮನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ತಮಿಳುನಾಡಿನ ನಮಕ್ಕಾ ಜಿಲ್ಲೆಯ ವೈದೇವಿಲಂಪಾಲಯನಲ್ಲಿರುವ ಇಡ್ಲಿ ಅಮ್ಮನ ನಿಜವಾದ ಹೆಸರು ಕಮಲದಲ್. ಇಡ್ಲಿ ಅಮ್ಮ ಕಳೆದ 37 ವರ್ಷಗಳಿಂದ ಕೇವಲ 1 ರೂ.ಗೆ ಇಡ್ಲಿ ಮತ್ತು ಸಾಂಬಾರ್, ಚಟ್ನಿಯನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಕೊಡುತ್ತಿದ್ದರು. ಆದ್ದರಿಂದ ಇಡ್ಲಿ ಅಮ್ಮ ಎಂದೇ ಹೆಸರಾಗಿದ್ದರು. ಇದರಿಂದ ಬಡವರಿಗೆ ಬಹಳ ಅನುಕೂಲವಾಗುತ್ತಿದೆ. ಈಗ ಇಡ್ಲಿ ಅಮ್ಮನಿಗೆ 86 ವರ್ಷ ವಯಸ್ಸು.
ಈ ಹಿಂದೆ 2021ರ ಏಪ್ರಿಲ್‌ನಲ್ಲಿ ಆನಂದ್ ಮಹೀಂದ್ರಾ ಅವರು ಮಾಡಿದ ಟ್ವೀಟ್‌ನಲ್ಲಿ ಇಡ್ಲಿ ಅಮ್ಮನಿಗೆ ಶೀಘ್ರದಲ್ಲಿ ಹೊಸ ಮನೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದರು. ನುಡಿದಂತೆ ಇದೀಗ ತಾಯಂದಿರ ದಿನ ಗೃಹ ಪ್ರವೇಶ ನಡೆದಿದೆ.
ಲಾಕ್ ಡೌನ್ ವೇಳೆ ನಷ್ಟವಾಗಿದ್ದರೂ, ಇಡ್ಲಿಯ ದರವನ್ನು ಅವರು ಹೆಚ್ಚಿಸಿಲ್ಲ. ಕೋವಿಡ್ ಬಿಕ್ಕಟ್ಟಿನ ಬಳಿಕ ಸಾಮಾಗ್ರಿಗಳನ್ನು ಹೊಂದಿಸುವುದು ಕಷ್ಟವಾದಾಗ ವಲಸಿಗ ಕಾರ್ಮಿಕರು ಅವರಿಗೆ ಸಹಕರಿಸಿದ್ದರು.
2019ರಲ್ಲಿ ಇಡ್ಲಿ ಅಮ್ಮನ ಸಾಧನೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಗ ಆನಂದ್ ಮಹೀಂದ್ರಾ ಅವರು ತಮ್ಮ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ | ಅಮೇಜಾನ್, ಫ್ಲಿಪ್‌ಕಾರ್ಟ್ ʼಅಂಗಡಿʼ ಬಂದ್ ಮಾಡಲಿದೆಯೇ ONDC?
ಆನಂದ್ ಮಹೀಂದ್ರಾ ಅವರು ಇಡ್ಲಿ ಅಮ್ಮನಿಗೆ ಮನೆ ಕಟ್ಟಿ ಕೊಟ್ಟಿರುವುದಕ್ಕೆ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡ್ಲಿ ಅಮ್ಮನ ನೂತನ ಮನೆಯ ಬಗ್ಗೆ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದು, ಇಡ್ಲಿ ಅಮ್ಮ ತಾಯಿಯ ವಾತ್ಸಲ್ಯ, ಆರೈಕೆ, ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಸಲ್ಲಿಸಿದ್ದಾರೆ. ಅವರನ್ನು ಬೆಂಬಲಿಸಲು ಹೆಮ್ಮೆ ಎನಿಸುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇಡ್ಲಿ ಅಮ್ಮನ ದಿನಚರಿ
ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ಏಳುವ ಇಡ್ಲಿ ಅಮ್ಮ, ಮಗನೊಡನೆ ಇಡ್ಲಿ ತಯಾರಿಸಲು ಸಿದ್ಧತೆ ನಡೆಸುತ್ತಾರೆ. ಸಾಂಪ್ರದಾಯಿಕ ಒಲೆಯನ್ನೇ ಬಳಸುತ್ತಾರೆ. ಬೆಳಗ್ಗೆ 6 ಗಂಟೆಗೆ ಇಡ್ಲಿ ಸಿದ್ಧವಾಗಿರುತ್ತದೆ. ಮಧ್ಯಾಹ್ನದ ತನಕ ಇಡ್ಲಿ ಮಾರಾಟ ನಡೆಯುತ್ತದೆ. ಕಳೆದ ವರ್ಷ ತಮಿಳುನಾಡು ಸರಕಾರ ಇಡ್ಲಿ ಅಮ್ಮನಿಗೆ ಎಲ್ಪಿಜಿ ಸಂಪರ್ಕವನ್ನು ಒದಗಿಸಿತ್ತು.