Site icon Vistara News

ಮೂರು ಪ್ರತ್ಯೇಕ ಕಂಪನಿಗಳಾಗಿ ಮಹೀಂದ್ರಾ ಪುನಾರಚನೆ

ಹೊಸದಿಲ್ಲಿ: ಮಹೀಂದ್ರಾ ಗ್ರೂಪ್‌ ತನ್ನ ಆದಾಯದಲ್ಲಿ ಶೇ.55ರಷ್ಟನ್ನು ನೀಡುವ ಆಟೊಮೊಬೈಲ್‌ ಬಿಸಿನೆಸ್‌ ಅನ್ನು ಮೂರು ವಿಭಾಗಗಳಾಗಿ ಪುನಾರಚಿಸಲು ಪ್ರಕ್ರಿಯೆ ಆರಂಭಿಸಿದೆ.
ಸಮೂಹವು ತನ್ನ ಆಟೊಮೊಬೈಲ್‌ ವ್ಯವಹಾರವನ್ನು ಎಲೆಕ್ಟ್ರಿಕ್‌ ವಾಹನ, ಟ್ರ್ಯಾಕ್ಟರ್‌ ಮತ್ತು ಪ್ರಯಾಣಿಕರ ವಾಹನಗಳ(ಪಿವಿ) ಪ್ರತ್ಯೇಕ ಸ್ವತಂತ್ರ ಕಂಪನಿಗಳನ್ನಾಗಿಸಿ ಪುನಾರಚಿಸುವ ಸಾಧ್ಯತೆ ಇದೆ. ಪ್ರಸ್ತುತ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಮೂಹದಲ್ಲಿ ಪ್ರತ್ಯೇಕ ವಿಭಾಗಗಳಾಗಿ ಇವುಗಳು ಅಸ್ತಿತ್ವದಲ್ಲಿವೆ.
ಪುಣೆಯಲ್ಲಿ ಎಲೆಕ್ಟ್ರಿಕ್‌ ವಾಹನ ಘಟಕ
ಕಂಪನಿಯು ಪುಣೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ಘಟಕವನ್ನು ಹೊಂದಿದ್ದು, ಇಟಲಿ ಮೂಲದ ಆಟೊಮೊಬೈಲ್‌ ಡಿಸೈನ್‌ ಕಂಪನಿಯಾದ ಪಿನಿನ್‌ಫರೀನಾ ಸಹಭಾಗಿತ್ವದಲ್ಲಿ ಪುನಾರಚನೆಯಾಗುವ ನಿರೀಕ್ಷೆ ಇದೆ. ಇ.ವಿ ಕಂಪನಿ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲೂ ಮಹೀಂದ್ರಾ ಮುಂದಾಗಿದೆ. ಈ ಕಂಪನಿಯನ್ನು ಮಹೀಂದ್ರಾ ಗ್ರೂಪ್‌ 2015ರಲ್ಲಿ ಖರೀದಿಸಿತ್ತು.
ಟ್ರ್ಯಾಕ್ಟರ್‌ ಕಂಪನಿ
ಮಹೀಂದ್ರಾ ಸಮೂಹದ ಕೃಷಿ ಉಪಕರಣ ಹಾಗೂ ಟ್ರ್ಯಾಕ್ಟರ್‌ ವಿಭಾಗ ಸ್ವತಂತ್ರ ಕಂಪನಿಯಾಗಲಿದೆ. 2007ರಲ್ಲಿ ಮಹೀಂದ್ರಾ ಸಮೂಹವು ಪಂಜಾಬ್‌ ಟ್ರ್ಯಾಕ್ಟರ್‌ ಅನ್ನು ಖರೀದಿಸಿದ ಬಳಿಕ ಶೇ.43 ಮಾರುಕಟ್ಟೆ ಷೇರು ಪಾಲಿನೊಂದಿಗೆ ಭಾರತದ ಅತಿ ದೊಡ್ಡ ಟ್ರ್ಯಾಕ್ಟರ್‌ ಉತ್ಪಾದಕವಾಗಿತ್ತು. ಮಹೀಂದ್ರಾ ಆಟೊಮೊಬೈಲ್‌ ವಿಭಾಗದಲ್ಲಿ ಅತಿ ಹೆಚ್ಚು ಲಾಭ ಇರುವ ವಿಭಾಗ ಕೂಡ ಇದಾಗಿದೆ.
ಪ್ರಯಾಣಿಕರ ವಾಹನ
ಮಹೀಂದ್ರಾದ ಪ್ರಯಾಣಿಕರ ವಾಹನ ವಿಭಾಗದಲ್ಲಿ ಸ್ಕಾರ್ಪಿಯೊ, ಎಕ್ಸ್‌ ಯುವಿ, ಥಾರ್‌ ಬ್ರ್ಯಾಂಡ್‌ನ ಪ್ರಯಾಣಿಕರ ವಾಹನಗಳನ್ನು ಹೊಂದಿದ್ದು, ಇದೂ ಕೂಡ ಪ್ರತ್ಯೇಕ ಕಂಪನಿಯಾಗಿ ಹೊರಹೊಮ್ಮಲಿದೆ. ಎರಡು ಜಾಗತಿಕ ಮಟ್ಟದ ಕನ್ಸಲ್ಟಿಂಗ್‌ ಮತ್ತು ಹೂಡಿಕೆ ಕುರಿತ ಬ್ಯಾಂಕ್‌ಗಳು ಈ ಕುರಿತ ಕಾರ್ಯತಂತ್ರ ರಚನೆಯಲ್ಲಿ ತೊಡಗಿಸಿಕೊಂಡಿವೆ ಎಂದು ವರದಿಯಾಗಿದೆ.
ಪ್ರತ್ಯೇಕ ಕಂಪನಿ ಏಕೆ?
ಪ್ರತಿಯೊಂದು ವಿಭಾಗದಲ್ಲೂ ಮಾರುಕಟ್ಟೆಯ ಲಾಭ ಗಳಿಸಲು, ವಿಸ್ತರಿಸಲು ಮೂರು ಪ್ರತ್ಯೇಕ ಕಂಪನಿಗಳಾಗಿ ವಿಭಜಿಸಲಾಗುತ್ತಿದೆ ಎಂದು ವರದಿಯಾಗಿದೆ. ಈಗಿನ ಹೂಡಿಕೆದಾರರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಹೊಸ ಹೂಡಿಕೆದಾರರನ್ನೂ ಮಹೀಂದ್ರಾ ಸಮೂಹ ಅನ್ವೇಷಿಸುತ್ತಿದೆ. ಎಲೆಕ್ಟ್ರಿಕ್‌ ವಾಹನಗಳ ವಲಯದಲ್ಲಿ ಮಾರುಕಟ್ಟೆ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಮಹೀಂದ್ರಾ ಸಮೂಹ ಸಜ್ಜಾಗಿದೆ.
ಮಹೀಂದ್ರಾ ಆ್ಯಂಡ್‌ ಮಹೀಂದ್ರಾ 100ಕ್ಕೂ ಹೆಚ್ಚು ದೇಶಗಳಲ್ಲಿ 20 ಉದ್ದಿಮೆ ವಲಯಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ಯುಟಿಲಿಟಿ ವೆಹಿಕಲ್‌ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ನಾಯಕತ್ವವನ್ನು ಕಳೆದುಕೊಂಡ ಬಳಿಕ ಸಮೂಹವು ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಈ ನಿಟ್ಟಿನಲ್ಲಿ ಜಪಾನ್‌ನ ಮಿತ್ಸುಬಿಷಿ ಅಗ್ರಿಕಲ್ಚರ್‌ ಮೆಷಿನರಿ ಮತ್ತು ಫಿನ್ಲೆಂಡ್‌ನ ಸ್ಯಾಂಪೊ ರೋಸೆನ್‌ಲೆವ್‌ ಜತೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಂದಿದೆ. ಯುಟಿಲಿಟಿ ವಾಹನ ಮಾರಾಟದಲ್ಲಿ ಕಳೆದುಕೊಂಡಿದ್ದನ್ನು ಟ್ರ್ಯಾಕ್ಟರ್‌ ಮಾರಾಟದಲ್ಲಿ ಸಮೂಹ ಗಳಿಸಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಹೆಸರು ಬಂದಿದ್ದು ಹೇಗೆ?
ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಹೀಂದ್ರಾ ಗ್ರೂಪ್‌, ಏರೊಸ್ಪೇಸ್‌, ಕೃಷಿ ಉದ್ದಿಮೆ, ಆಟೊಮೊಬೈಲ್‌, ರಕ್ಷಣಾ ಉದ್ದಿಮೆ, ಹಣಕಾಸು. ವಿಮೆ, ಮಾಹಿತಿ ತಂತ್ರಜ್ಞಾನ, ರಿಯಲ್‌ ಎಸ್ಟೇಟ್‌, ರಿಟೇಲ್‌ ಇತ್ಯಾದಿ ವಲಯಗಳಲ್ಲಿ ವಹಿವಾಟು ನಡೆಸುತ್ತಿದೆ. 1945ರಲ್ಲಿ ಮಹಮ್ಮದ್‌ ಆಂಡ್‌ ಮಹೀಂದ್ರಾ ಎಂಬುದಾಗಿ ಸ್ಥಾಪನೆಯಾಗಿತ್ತು. ಪಂಜಾಬ್‌ನ ಲುಧಿಯಾನದಲ್ಲಿ ಸೋದರರಾದ ಜೆ.ಸಿ ಮಹೀಂದ್ರಾ, ಕೆ.ಸಿ ಮಹೀಂದ್ರಾ ಮತ್ತು ಮಲಿಕ್‌ ಗುಲಾಮ್‌ ಮಹಮ್ಮದ್‌ ಕಂಪನಿಯನ್ನು ಸ್ಥಾಪಿಸಿದರು. ಆರಂಭದಲ್ಲಿ ಬ್ರಿಟನ್‌ಗೆ ಉಕ್ಕು ರಫ್ತು ಮಾಡುತ್ತಿತ್ತು. ದೇಶ ವಿಭಜನೆಯ ಬಳಿಕ ಮಹಮ್ಮದ್‌ ಅವರು ದೇಶ ತೊರೆದು ಪಾಕಿಸ್ತಾನಕ್ಕೆ ವಲಸೆಯಾದರು. ಅಲ್ಲಿ ಪಾಕಿಸ್ತಾನದ ಮೊದಲ ಹಣಕಾಸು ಮಂತ್ರಿಯಾಗಿದ್ದರು. ಕೆ.ಸಿ ಮಹೀಂದ್ರಾ ಅವರು ಕಂಪನಿಯ ಹೆಸರನ್ನು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಎಂದು ಬದಲಿಸಿದರು. 1956ರಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಕಂಪನಿ ನೋಂದಣಿಯಾಯಿತು.

ಆನಂದ್‌ ಮಹೀಂದ್ರಾ ಅವರು ಸಮೂಹದ ಈಗಿನ ಅಧ್ಯಕ್ಷರಾಗಿದ್ದಾರೆ. 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಮೂಹ ಒಳಗೊಂಡಿದೆ.
ಮಹೀಂದ್ರಾ ಏರೊಸ್ಪೇಸ್‌, ಟೆಕ್‌ ಮಹೀಂದ್ರಾ, ಮಹೀಂದ್ರಾ ಲೈಫ್‌ ಸ್ಟೈಲ್‌, ಮಹೀಂದ್ರಾ ಸಿಸ್ಟಮ್‌ ಇತ್ಯಾದಿ ಅಧೀನ ಕಂಪನಿಗಳನ್ನು ಒಳಗೊಂಡಿದೆ.

Exit mobile version