ಹೊಸದಿಲ್ಲಿ: ಎಲ್‌ಐಸಿಯ ಷೇರುಗಳು ಮೇ 17 ರಂದು ಮುಂಬಯಿ ಷೇರು ವಿನಿಮಯ ಕೇಂದ್ರ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿವೆ. ಆದರೆ ಅದಕ್ಕೂ ಮುನ್ನ ಗ್ರೇ ಮಾರುಕಟ್ಟೆಯಲ್ಲಿ ಶನಿವಾರ ಎಲ್‌ಐಸಿಯ ನೋಂದಣಿಯಾಗದಿರುವ ಷೇರುಗಳ ದರ ಋಣಾತ್ಮಕ ವಲಯದಲ್ಲಿವೆ. ಎಲ್‌ಐಸಿ ಐಪಿಒ ಜಿಎಂಪಿ ( ಗ್ರೇ ಮಾರ್ಕೆಟ್ ಪ್ರೀಮಿಯಂ) 20 ರೂ.ಗಳ ಡಿಸ್ಕೌಂಟ್ ಅನ್ನು ದಾಖಲಿಸಿದೆ. ಅಂದರೆ 929ರೂ.ಗೆ ಇಳಿಕೆಯಾಗಿದೆ. ಎಲ್ ಐಸಿ ಐಪಿಒದಲ್ಲಿ ಬಿಡ್ ದರದ ಶ್ರೇಣಿ 902 ರೂ.ಗಳಿಂದ 949 ರೂ. ತನಕ ನಿಗದಿಯಾಗಿತ್ತು.
ಏನಿದು ಜಿಎಂಪಿ?
ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ) ಎಂದರೆ ಐಪಿಒದಲ್ಲಿ ವಿಕ್ರಯವಾಗಿರುವ ಷೇರುಗಳು ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿ ಆಗುವುದಕ್ಕೆ ಮುನ್ನ ಅನಧಿಕೃತ ಮಾರುಕಟ್ಟೆಯ ವ್ಯವಹಾರದಲ್ಲಿ ಗಳಿಸುವ ದರ. ಈ ಕೊಡು ಕೊಳ್ಳುವಿಕೆಯಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿಯ ಮಧ್ಯಪ್ರವೇಶ ಇರುವುದಿಲ್ಲ. ಷೇರು ವಿನಿಮಯ ಕೇಂದ್ರ, ದಲ್ಲಾಳಿಗಳ ಹಸ್ತಕ್ಷೇಪ ಇರುವುದಿಲ್ಲ.
ಇದನ್ನೂ ಓದಿ: ಗ್ರೇ ಮಾರ್ಕೆಟ್‌ನಲ್ಲಿ LIC IPO ಮೌಲ್ಯ ಹೆಚ್ಚಳ: ₹45-₹80ರ ವರೆಗೆ GMP
ಸರಳವಾಗಿ ಹೇಳುವುದಾದರೆ ಐಪಿಒದಲ್ಲಿ ಖರೀದಿಸಿದ ಷೇರುಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗುವುದಕ್ಕೆ ಮುನ್ನ ಅನಧಿಕೃತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದೇ ಜಿಎಂಪಿಯ ಪರಿಕಲ್ಪನೆ.