Site icon Vistara News

ಜಿಎಸ್‌ಟಿಗೆ ಮುನ್ನವೂ ಆಹಾರ ಧಾನ್ಯಗಳಿಗೆ ತೆರಿಗೆ ಇತ್ತು: ನಿರ್ಮಲಾ ಪ್ರತಿಪಾದನೆ

Forbes Most powerful women list, nirmala sitharaman in 32 place

ನವ ದೆಹಲಿ: ಜಿಎಸ್‌ಟಿ ಜಾರಿಯಾಗುವುದಕ್ಕೆ ಮೊದಲೇ ಹಲವು ರಾಜ್ಯಗಳಲ್ಲಿ ಆಹಾರ ಧಾನ್ಯಗಳ ಚಿಲ್ಲರೆ ಮಾರಾಟದ ಮೇಲೆ (loose sale) ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು. ೫% ಜಿಎಸ್‌ಟಿ ಹೊಸತೇನಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

“ಜಿಎಸ್‌ಟಿ ಜಾರಿಯಾಗುವುದಕ್ಕೆ ಮೊದಲು ಅಕ್ಕಿ, ಗೋಧಿ ಇತರ ಆಹಾರ ಧಾನ್ಯಗಳ ಚಿಲ್ಲರೆ ಮಾರಾಟಕ್ಕೆ ಹಲವು ರಾಜ್ಯಗಳಲ್ಲಿ ತೆರಿಗೆ ಇತ್ತು. ಪಂಜಾಬ್‌ ಒಂದರಲ್ಲಿಯೇ ಈ ಮೂಲಕ ೨,೦೦೦ ಕೋಟಿ ರೂ.ಗೂ ಹೆಚ್ಚು ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು. ಉತ್ತರ ಪ್ರದೇಶದಲ್ಲಿ ೭೦೦ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿತ್ತುʼʼ ಎಂದು ಅವರು ವಿವರಿಸಿದ್ದಾರೆ.

” ಜಿಎಸ್‌ಟಿ ವ್ಯವಸ್ಥೆ ಜಾರಿಯಾದಾಗ ಬ್ರ್ಯಾಂಡ್‌ಗಳ ಆಹಾರ ಧಾನ್ಯ ಮತ್ತು ಹಿಟ್ಟುಗಳಿಗೆ ೫% ಜಿಎಸ್‌ಟಿ ಅನ್ವಯವಾಗುತ್ತಿತ್ತು. ಬಳಿಕ ನೋಂದಾಯಿತ ಬ್ರ್ಯಾಂಡ್‌ಗಳಲ್ಲಿ ಮಾರಾಟವಾಗುವ ಆಹಾರ ಧಾನ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಆದರೆ ಉತ್ಪಾದಕರು ಮತ್ತು ಬ್ರ್ಯಾಂಡ್‌ಗಳ ಮಾಲೀಕರು ಕ್ರಮೇಣ ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ತೊಡಗಿದ್ದರಿಂದ, ಇಂಥ ವಸ್ತುಗಳ ವಿಭಾಗದಿಂದ ಜಿಎಸ್‌ಟಿ ಆದಾಯ ಕುಸಿಯಿತು. ಈ ದುರ್ಬಳಕೆಯ ಬಗ್ಗೆ ಉದ್ಯಮ ವಲಯದ ಸಂಘಟನೆಗಳು ಹಾಗೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಂದ ದೂರುಗಳು ಬಂದಿತ್ತು. ಹಾಗೂ ಈ ದುರ್ಬಳಕೆಯನ್ನು ತಡೆಯಲು ಏಕರೂಪದಲ್ಲಿ ಜಿಎಸ್‌ಟಿಯನ್ನು ವಿಧಿಸಬೇಕು ಎಂಬ ಒತ್ತಾಯ ಹೆಚ್ಚಿತ್ತು. ರಾಜ್ಯಗಳಲ್ಲೂ ತೆರಿಗೆ ಸೋರಿಕೆಯಾಗುತ್ತಿದ್ದುದನ್ನು ಗಮನಿಸಲಾಗಿತ್ತುʼʼ ಎಂದು ನಿರ್ಮಲಾ ಹೇಳಿದ್ದಾರೆ.

“”ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಗುಜರಾತ್‌ ರಾಜ್ಯಗಳ ಅಧಿಕಾರಿಗಳನ್ನು ಒಳಗೊಂಡಿದ್ದ ಸಮಿತಿ ಹಲವು ಸುತ್ತಿನ ಸಭೆ ನಡೆಸಿ ಜಿಎಸ್‌ಟಿ ನಿಯಮಾವಳಿಗಳ ಬದಲಾವಣೆಗೆ ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಮಂಡಳಿಯ ೪೭ನೇ ಸಭೆಯಲ್ಲಿ ೨-೩ ವಸ್ತುಗಳನ್ನು ಹೊರತುಪಡಿಸಿ ಉಳಿದ ಆಹಾರ ವಸ್ತುಗಳಿಗೆ ಜಿಎಸ್‌ಟಿ ವಿಧಿಸಲು ತೀರ್ಮಾನಿಸಿತುʼʼ ಎಂದು ಅವರು ಸಮರ್ಥನೆ ನೀಡಿದ್ದಾರೆ.

“”ಈ ೫% ಜಿಎಸ್‌ಟಿಯು ಮಾರಾಟಕ್ಕೆ ಮೊದಲೇ ಪ್ಯಾಕ್‌ ಮಾಡಿರುವ ಮತ್ತು ಲೇಬಲ್‌ ಹೊಂದಿರುವ ಆಹಾರ ವಸ್ತುಗಳಿಗೆ ( pre-packaged and labelled) ಅನ್ವಯವಾಗುತ್ತದೆ. ತೂಕ ಮತ್ತು ಅಳತೆ ಮಾಪನ ಕಾಯಿದೆಯ ಅಡಿಯಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಯುನಿಟ್‌ ಕಂಟೈನರ್‌ಗಳಲ್ಲಿ ಪ್ಯಾಕ್‌ ಮಾಡಿರುವ ಹಾಗೂ ಲೇಬಲ್‌ ಹೊಂದಿರುವ ಅಕ್ಕಿ, ಗೋಧಿ, ಹಿಟ್ಟು ಇತ್ಯಾದಿ ಆಹಾರ ವಸ್ತುಗಳಿಗೆ ೫% ಜಿಎಸ್‌ಟಿ ಅನ್ವಯವಾಗುತ್ತದೆ. ಆದರೆ ಪ್ಯಾಕ್‌ ಮಾಡದಿರುವ, ಲೇಬಲ್‌ ಹೊಂದಿರದ ಹಾಗೂ ಚಿಲ್ಲರೆಯಾಗಿ ಮಾರಾಟ ಮಾಡುವ ವಸ್ತುಗಳಿಗೆ ಜಿಎಸ್‌ಟಿ ಇರುವುದಿಲ್ಲʼʼ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

“”ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳದ ಸದಸ್ಯರೂ ಒಳಗೊಂಡಿರುವ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಮಿತಿ ಈ ಬದಲಾವಣೆಗಳನ್ನು ಶಿಫಾರಸು ಮಾಡಿದೆ. ತೆರಿಗೆ ಸೋರಿಕೆಯನ್ನು ತಡೆಯಲು ಇದರ ಅಗತ್ಯ ಇತ್ತುʼʼ ಎಂದು ನಿರ್ಮಲಾ ವಿವರಿಸಿದ್ದಾರೆ.

ಅಕ್ಕಿಗೆ ವ್ಯಾಟ್‌ ವಿಧಿಸುತ್ತಿದ್ದ ರಾಜ್ಯಗಳಲ್ಲಿ ಕರ್ನಾಟಕ ಇಲ್ಲ!

ಜಿಎಸ್‌ಟಿ ಪದ್ಧತಿ ಜಾರಿಯಾಗುವುದಕ್ಕೆ ಮೊದಲು ಹಲವು ರಾಜ್ಯಗಳಲ್ಲಿ ಅಕ್ಕಿಯ ಮೇಲೆ ವ್ಯಾಟ್‌ ತೆರಿಗೆ ವಿಧಿಸುತ್ತಿದ್ದ ರಾಜ್ಯಗಳ ಪಟ್ಟಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಿಡುಗಡೆಗೊಳಿಸಿದ್ದಾರೆ. ಆದರೆ ಈ ರಾಜ್ಯಗಳಲ್ಲಿ ಕರ್ನಾಟಕ ಇಲ್ಲ. ಏಕೆಂದರೆ ಜಿಎಸ್‌ಟಿ ಪೂರ್ವದಲ್ಲೂ ಕರ್ನಾಟಕದಲ್ಲಿ ದೀರ್ಘಕಾಲದಿಂದ ಅಕ್ಕಿಯ ಮೇಲೆ ವ್ಯಾಟ್‌ ಇರಲಿಲ್ಲ. ಹೀಗಾಗಿ ಈಗ ಜಾರಿಯಾಗಿರುವ ೫% ಜಿಎಸ್‌ಟಿ ಕರ್ನಾಟಕಕ್ಕೆ ಇತ್ತೀಚಿನ ಅವಧಿಯಲ್ಲಿ ಹೊಸ ತೆರಿಗೆ ಹೊರೆಯಾಗಿದೆ.

Exit mobile version