Site icon Vistara News

ಜ್ಯೂಸ್‌ ಕುಡಿದರೆ 40% ತೆರಿಗೆ!

ಮುಂಬಯಿ:  ಈಗ ಸೆಖೆಯೋ ಸೆಖೆ. ಎಷ್ಟು ನೀರು ಕುಡಿದರೂ ಸಾಕಾಗಲ್ಲ. ಕೂಲ್‌ಡ್ರಿಂಕ್ಸ್‌ ಕಂಡ್ರೆ ಮನಸು ಹುಚ್ಚೆದ್ದು ಕುಣಿಯುತ್ತದೆ.   ಆದರೆ, ಈ ಕೋಲ್ಡ್‌ಡ್ರಿಂಕ್ಸ್‌ಗೆ ಹಾಕ್ತಾ ಇರುವ ತೆರಿಗೆ ಲೆಕ್ಕಾಚಾರ ನೋಡಿದ್ರೆ ಕೋಲ್ಡ್‌ಡ್ರಿಂಕ್‌ಕೂಡಾ ಗಂಟಲಿಗೆ ಇಳಿಯುವಾಗ ಬಿಸಿ ಆಗುತ್ತದೆ.

ನಾವೀಗ ಹೇಳುತ್ತಿರುವುದು ಸಾಮಾನ್ಯ ಕೂಲ್‌ಡ್ರಿಂಕ್ಸ್‌ ಅಲ್ಲ. ಪ್ರುಟ್‌ಜ್ಯೂಸನ್ನು ಕಾರ್ಬೋನೇಟ್‌ ಮಾಡಿರುತ್ತಾರಲ್ಲಾ.. ಅಂಥ  ಫಿಜ್ಜಿ (fizzy) ಮಾದರಿಯ ಪಾನೀಯಗಳು.

ನಾವು ಕುಡಿಯುವ ಹಣ್ಣಿನ ಪಲ್ಪ್‌ಮಾದರಿಯ ಜ್ಯೂಸ್‌ನ ಬಾಟಲಿ ಅಥವಾ ಟೆಟ್ರಾ ಪ್ಯಾಕ್‌ಗೆ ಶೇಕಡಾ 12 ಜಿಎಸ್‌ಟಿ ಹಾಕಲಾಗುತ್ತದೆ.  ಅದೇ  ಹಣ್ಣನ್ನು ಆಧರಿಸಿದ ಕಾರ್ಬೊನೇಟೆಡ್‌ಪಾನೀಯಗಳಿಗೆ ಜಿಎಸ್‌ಟಿಯೇ ಶೇ. 28 ಇದೆ ಮತ್ತು ಹೆಚ್ಚುವರಿಯಾಗಿ ಕಂಪನ್ಸೇಷನ್‌ ಸೆಸ್‌ ಹೆಸರಲ್ಲಿ ಶೇ. 12 ಕಟ್ಟಬೇಕು. ಅಂದರೆ ಒಟ್ಟಾರೆಯಾಗಿ ಶೇಕಡಾ 40 ತೆರಿಗೆ ವಿಧಿಸಲಾಗುತ್ತದೆ. ಕಂಪನ್ಸೇಷನ್‌ ಸೆಸ್‌ ಎನ್ನುವುದು ರಫ್ತು ಮಾಡುವ ಆಯ್ದ ವಸ್ತುಗಳಿಗೆ ವಿಧಿಸಲಾಗುವ ಮೇಲ್ತೆರಿಗೆಯಾಗಿದೆ.

ಈ ರೀತಿ ಅಧಿಕ ತೆರಿಗೆಯನ್ನು ವಿಧಿಸುತ್ತಿರುವುದನ್ನು ಹಲವು ರಾಜ್ಯಗಳು ಆಕ್ಷೇಪಿಸಿದೆ. ಜಿಎಸ್‌ಟಿ ಮಂಡಳಿ ಸಭೆಯಲ್ಲೂ ಚರ್ಚೆಯಾಗಿದೆ. ತಂಪು ಪಾನೀಯ ತಯಾರಿಕೆ ಕಂಪನಿಗಳು ಕೂಡಾ ತಗಾದೆ ಎತ್ತಿವೆ.

2021ರ ಸೆಪ್ಟೆಂಬರ್‌13ರಂದು ಈ ವಿಷಯ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದ ಬಳಿಕ ಮಂಡಳಿಯು ಒಂದು ಸ್ಪಷ್ಟೀಕರಣವನ್ನು ನೀಡಿದೆ. ಅದರಲ್ಲಿ ಹೇಳಿರುವ ಪ್ರಕಾರ, ʻಹಣ್ಣಿನ ರಸಗಳ ಕಾರ್ಬೊನೇಟೆಡ್‌ಪಾನೀಯಗಳು ಮತ್ತು ಹಣ್ಣಿನ ರಸಗಳನ್ನು ಆಧರಿಸಿದ ಕಾರ್ಬೊನೇಟೆಡ್‌ಪಾನೀಯಗಳಿಗೆ ಶೇ. 28 ಜಿಎಸ್‌ಟಿ ಮತ್ತು ಶೇ. 12ರಷ್ಟು ಪರಿಹಾರಾತ್ಮಕ ಮೇಲ್ತೆರಿಗೆ ವಿಧಿಸಲಾಗುತ್ತದೆ . ಇದನ್ನು ಜಿಎಸ್‌ಟಿ ದರ ಪಟ್ಟಿಯಲ್ಲೇ ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ!

ಈ ಗರಿಷ್ಠ ತೆರಿಗೆ ಮತ್ತು ಮೇಲ್ತೆರಿಗೆಯನ್ನು ಪ್ರಶ್ನಿಸಿ ಕೋಲ್ಡ್‌ಡ್ರಿಂಕ್‌ ಕಂಪನಿಯೊಂದು  ದಾವೆಯನ್ನು ಸಲ್ಲಿಸಿತ್ತು. ಅದಕ್ಕೆ ಉತ್ತರಿಸಿರುವ ಜಿಎಸ್‌ಟಿ ಪ್ರಾಧಿಕಾರದ ಗುಜರಾತ್‌ ಪೀಠ, ಆಪಲ್‌ಕೋಲಾ ಫಿಜ್ಜಿ ಮತ್ತು ಮಾಲ್ಟ್‌ಕೋಲಾ ಫಿಜ್ಜಿ ಕಂಪನಿಗಳು ತಯಾರಿಸಿರುವ ಕಾರ್ಬೊನೇಟೆಡ್‌ ಪಾನೀಯಗಳಿಗೆ ಶೇ. 28 ಜಿಎಸ್‌ಟಿ ಮತ್ತು ಶೇ. 12 ಮೇಲ್ತೆರಿಗೆ ಪಾವತಿ  ಕಡ್ಡಾಯ ಎಂದು ಸ್ಪಷ್ಟಪಡಿಸಿತು. ಇದೇ ವಿಷಯದಲ್ಲಿ ತಮಿಳುನಾಡಿನ ಪ್ರಾಧಿಕಾರವೂ ಇದೇ ರೀತಿಯ ನಿಲುವನ್ನು ತಾಳಿದೆ. ಅಲ್ಲಿ ಫಿಜ್ಜಿ ಗ್ರೇಪ್‌ಜ್ಯೂಸ್‌ವಿಚಾರದಲ್ಲಿ ತಗಾದೆ ಎತ್ತಲಾಗಿತ್ತು.

Exit mobile version